ಒಂದು ಗೀಗೀ ಪದ
೨೯-೬-೮೮
ಸಿಂಧನೂರು
ಕಾಯುತ್ತಿರುವೆನು ಖಳನಾಯಕಿಗೆ ರಸ್ತೆ ದೀಪಗಳ ಜತೆಯಾಗಿ
ಸುಟ್ಟೆದೆಗಳ ಹಳೆ ಬೂದಿಯೊಡಲಲ್ಲಿ ಅರಳಿದ ಹೂವಾಗಿ
ಬಿರುಗಾಳಿಯ ಬರಿ ಧೂಳಿನಂಗಳದಿ ಹಣತೆ ದೀಪವಾಗಿ
ಅನುಮಾನದ ಅರೆಕ್ಷಣಗಳ ಕಳೆದಿಹ ಸಹನೆ ರೂಪವಾಗಿ
ಕಾಯುತ್ತಿರುವೆನು ಖಳನಾಯಕಿಗೆ ಮುತ್ತಿನುಂಗುರದ ಮಣಿಯಾಗಿ
ನಗೆ-ನಂಬುಗೆಗಳ ಮತ್ತೆ ಹೊರತೆಗದ ಹೊಸ ನಿರೀಕ್ಷೆಗಳ ಗಣಿಯಾಗಿ
ಮಂಜಿನ ಮುಖದಲಿ ಮತ್ತೆ ಹೊಳೆ ಹೊಳೆವ ಸುಳಿಗಳ ಕಣ್ಣಾಗಿ
ಹಣೆಯ ಗೆರೆಯಾದ ಕಾಲದ ನದಿಯಲಿ ಕರಗುವ ಮಣ್ಣಾಗಿ
ಕಾಯುತ್ತಿರುವೆನು ಖಳನಾಯಕಿಗೆ ಉಪ್ಪುನೀರಿನಲಿ ಚಿಗುರಾಗಿ
ಮುತ್ತಿನ ಮಳೆ ಮರೆತಿರೊ ತುಟಿಗೆರೆಗಳ ಗಡಿರಕ್ಷಕನಾಗಿ
ಪವನಪತ್ರಗಳ ತೊಟ್ಟ ಮನಸುಗಳ ಮನಸ್ಸಾಕ್ಷಿಯಾಗಿ
ನಿಶ್ಶಬ್ದದ ಬರಿ ಹೊಸಿಲಿನಂಚಿನಲಿ ರಂಗವಲ್ಲಿಯಾಗಿ
ಕಾಯುತ್ತಿರುವೆನು ಖಳನಾಯಕಿಗೆ ಪ್ರತಿ ನಾಯಕನಾಗಿ
ದೇಹ ಮನಸ್ಸಿನ ಅಣುಕಣಾಂಶದಲಿ ದ್ವೇಷ ದಹನವಾಗಿ