ನಿಶ್ಶಬ್ದಕ್ಕೂ ಕೊಳಲು
೭-೧೧-೯೪
ಮಂಗಳೂರು
ಎಡಹೊಳ್ಳೆಯಲ್ಲಿ ಅಡ್ಡ ಕೊಳಲು
ಇನ್ನೊಂದರಲ್ಲಿ ಉದ್ದ ಕೊಳಲು
ಬಾಯಲ್ಲಿ ಏಕತಾನದ ಪುಂಗಿ ಮತ್ತು ಪೀಪಿ.
ಗುಂಡಿ-ಗುದುಕಲು ಹಾರಿ ಮೇಲೆದ್ದು ಬಸ್ಸೊಳಗೆ
ಚಕ್ಕಲಮಟ್ಟ ಕೂತ ಅಜ್ಜ ಬಾರಿಸಿದ್ದೇ
ರಾಗ. ಮೇಳಯಿಸಿದ್ದೇ ವೈವಿಧ್ಯ ಸಂಗೀತ.
ಬೆಕ್ಕಿನ ಕಣ್ಣಿನಿಂದಲೇ ಗೌರವಸ್ಥರಿಗೆ ನಮಸ್ಕಾರ
ಬ್ಯಾಡೋ ಎಂದವರ ತಿರಸ್ಕಾರ
ಉಸಿರು ಮುಚ್ಚಲೂ ಕೊಳಲು
ಉಸಿರು ಬಿಡಲೂ ಕೊಳಲು
ಗಾಳಿವಾದ್ಯಗಳ ಜೋಳಿಗೆ ತೊನೆಯುತ್ತೆ.
ಅಜ್ಜಿ ಕಾಡುತ್ತಾಳೆ ಇಕಾ ಕಾಸು ಕೊಟ್ಟವ್ರೆ
ಅಜ್ಜ ಬೇಡುತ್ತಾನೆ ತಕಾ ಇನ್ನೊಂದು ಪದ
ಡ್ರೈವರ್ ಕಣ್ಣುಕೀಳದೆ ಕಿವಿ ಹರಡುತ್ತಾನೆ
ಮಗು ಕೂಡಾ ಮೆದುನಗೆ ಬೀರುತ್ತೆ.
ಟಿಕೆಟ್ ಕೇಳುತ್ತ ಕಂಡಕ್ಟರ್ ತಾಳ ಕಟ್ಟುತ್ತಾನೆ
ಎದೆಯಿದ್ದವರ ಮುಖ ಅರಳುತ್ತೆ.
ಆಕಾಶ ಮಾತ್ರ ಮೋಡಗಳ ಮರೆಯಲ್ಲಿ
ರಾಗ ಕೇಳಿಸದೆ ನರಳುತ್ತದೆ.
ಬಾರಿಸಲಿಕ್ಕೂ ಕೊಳಲು
ಬಾರಿಸದಿರಲೂ ಕೊಳಲು ಬಳಸುವ
ಅಜ್ಜ ಕೂತಲ್ಲೇ ಹಾಡಿನರಮನೆ.
ನಾನು ಬರೀ ಉಸಿರಾಡುತ್ತ ನೋಡುತ್ತೇನೆ
ಅರೆ, ಶಬ್ದಕ್ಕೂ ಒಂದು ಕೊಳಲು
ನಿಶ್ಶಬ್ದಕ್ಕೂ ಒಂದು ಕೊಳಲು.
ಎರಡಿರುವುದೂ ಮೂಗಿನಲ್ಲಿ
ಪುಂಗಿ, ಪೀಪಿ ಬಾಯಿಯಲ್ಲಿ ಅಂತಾದರೆ
ಅಜ್ಜ ಉಸಿರಾಡೋದೆಲ್ಲಿ?