ಪರಿಚಯ
೨೯-೧-೮೭ 
ಬೆಂಗಳೂರು

ನನ್ನ ಪರಿಚಯವ ಕೇಳುತ್ತೀರಾ?
ಹೇಳೇ ಬಿಡ್ತೀನ್ನೋಡಿ
ಆಮೇಲೆಲ್ಲಾ ಅಣಗಿಸಬೇಡಿ
ಜಾಹೀರಾತಿನ ಗಾಡಿ!

ಹೀರೋ ಪೆನ್ನಿನ ನೀರೋ ನಾನು
ಚೆಲ್ಪಾರ್ಕಿನಂತೆ ಚೇಲಾ
ಗೋದ್ರೆಜ್ ಬೀಗದ ಭದ್ರತೆ ನನಗಿದೆ
ಏಷ್ಯನ್ ಪೆಂಟೇ ಎಲ್ಲಾ

ಕೋರಸ್ ಕಾರ್ಬನ್ ಕವನದ ಹುಚ್ಚು
ಲಿಮ್ಕಾ ಕಿಚ್ಚಿದೆ ನನಗೆ
ರ್‍ಯಾಲಿಫ್ಯಾನಿದೆ ಜೋಮು ನಿದ್ದೆಗೆ
ಓಡೋಮಸ್ಸಿನ ಜತೆಗೆ

ನನ್ನ ಕೈಯಲ್ಲಿ ಈಗಲ್ ಡೈಲಿ
ಕಾಲಿಗೆ ಟ್ರಾಟ್‌ನ ರಕ್ಷೆ
ತಲೆಗೆ ಕೆಯೆಂಪಿ ಕೊಬ್ರಿಯೆಣ್ಣೆ
ಕಾಲ್ಗೇಟ್ ದಂತ ಸುರಕ್ಷೆ

ಡೆಟ್ಟಾಲ್ ನನ್ನಯ ಫ್ರೆಶ್‌ನೆಸ್ ಸೋಪು
ನಾ ಪಾಪಿನ್ಸ್ ತಿನ್ನುವ ಪಾಪು
ಕಿವಿಗೆ ಕೆಲವೊಮ್ಮೆ ಜಾನ್ಸನ್ ಬಡ್ಡು
ಹಾಗೇ ಸ್ವಸ್ತಿಕ್ ಶಾಂಪೂ

ಬಟ್ಟೆಗಳೊಗೆಯಲು ನಿರ್ಮಾ ಕೇಕು
ಹೊಟ್ಟೆಗೆ ಆರ್ಕೇ ದೋಸೆ
ಲೇಸರ್ ಬ್ಲೇಡೇ ಉಗುರಿಗೆ ಬೇಕು
ಈಸಿ ಟೀವಿಯ ಆಸೆ

ಹೇಳ್ತಾ ಇದ್ರೆ ಮುಗಿಯೋಗಿಲ್ಲ
ನನ್ನ ಪರಿಚಯದ ಹಾಡು
ಕೇಳ್ತಾ ಇದ್ರೆ ನಿಮಗಾಗುತ್ತೆ
ಜಾಹೀರಾತಿನ ಪಾಡು.

Share.
Leave A Reply Cancel Reply
Exit mobile version