ಈ ಜುಲೈ ೧೪ಕ್ಕೆ (೨೦೧೫) ನನಗೆ ೫೦ ವರ್ಷಗಳಾದವು. ದಶಮಾಂಶ ಪದ್ಧತಿಯಲ್ಲಿ ಇದು ಹಾಫ್‌ ಸೆಂಚುರಿ! ಹೊರತು ೫೦ಕ್ಕೆ ಅಂಥ ವಿಶೇಷ ಏನೂ ಇಲ್ಲ. ಅದು ಪ್ರೈಮ್‌ ನಂಬರ್‌ ಕೂಡಾ ಅಲ್ಲ. ಹಾಗೆ ನೋಡಿದರೆ ೪೭ ಮತ್ತು ೫೩ – ಈ ಪ್ರೈಮ್‌ ಸಂಖ್ಯೆಗಳ ನಡುವೆ ಸರಿಯಾಗಿ ಮಧ್ಯದಲ್ಲಿ ೫೦ ಸಿಕ್ಕಿಕೊಂಡಿದೆ, ಅಷ್ಟೆ!ನನಗೆ ೫೦ ವರ್ಷಗಳಾದ ಈ ಹೊತ್ತಿನಲ್ಲಿ ನಾನು ಹರ್‍ಯಾನಾ ರಾಜ್ಯದ ಯಾವುದೋ ರಸ್ತೆಯಲ್ಲಿ ಓಡಾಡುತ್ತಿದ್ದೇನೆ. ನನ್ನ ಮಗ ಹೆಚ್ಚಿನ/(ಹುಚ್ಚಿನ!) ಓದಿಗಾಗಿ ಸೋನಿಪತ್‌ಗೆ ಬಂದಿದ್ದಾನೆ. ಅವನೊಂದಿಗೆ ಹೀಗೇ ಬಂದಿದ್ದೇನೆ.

ಈ ಐವತ್ತು ವರ್ಷಗಳು ಮುಖ್ಯ ಎಂದುಕೊಂಡರೂ, ನಾನು ದುಡಿಮೆಯ ಹೊರತಾಗಿ ಸಾಧಿಸಿದ್ದು ಅಂಥದ್ದೇನಿಲ್ಲ. ಕೆಲವು ಪುಸ್ತಕಗಳನ್ನು ಬರೆದಿದ್ದೂ, ಒಂದೆರಡು ಪ್ರಶಸ್ತಿಗಳು ಬಂದಿದ್ದೂ ನಿಜವೇ. ಅವನ್ನೆಲ್ಲ ಸಾಧನೆ ಎನ್ನುವುದರಲ್ಲಿ ಅರ್ಥವಿಲ್ಲ. ಸಾಧಿಸುವುದು ಎಂದರೆ ನನಗೆ ಖುಷಿಯಾಗುವುದಲ್ಲ; ಇನ್ನೊಬ್ಬರಿಗೆ ಸಮಾಧಾನ ಆಗುವುದು ಎಂಬ ನಂಬಿಕೆ ನನ್ನದು. ಹಾಗೆ ಮಾಡುವ ಹಲವು ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ವಿಶ್ವಾಸದಿಂದ ಹೇಳಬಲ್ಲೆ.

ನಾನು ಹುಟ್ಟಿ ಬೆಳೆದಿದ್ದು ಹವ್ಯಕ ಬ್ರಾಹ್ಮಣರ ಮನೆಯಲ್ಲಿ; ಆದರೆ ಈ ಮನೆಯು ಮಠದಿಂದ ಬಹಿಷ್ಕಾರಕ್ಕೆ ಒಳಪಟ್ಟಿದೆ ಎಂದು ನನಗೆ ಗೊತ್ತಾಗಿದ್ದೇ ತಡವಾಗಿ! ಆ ಕಾಲದಲ್ಲೇ ಪ್ರಗತಿಪರ ಚಿಂತನೆಗಳಿಂದ ಪ್ರಭಾವಿತನಾಗಿ ಅವನ್ನೆಲ್ಲ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿದ್ದ ನನ್ನ ಅಜ್ಜ (ತಾಯಿಯ ತಂದೆ) ವೆಂಕಟರಮಣ ಭಟ್‌ ವಿಧುರರಾಗಿದ್ದವರು. ಬಾಲವಿಧವೆಯಾಗಿದ್ದ ನನ್ನ ಅಜ್ಜಿ ಪಾರ್ವತಿಯನ್ನು ಅವರು ಶಿರಸಿಯ ಅಕದಾಸ ಗಣಪತಿ ಭಟ್‌ ಮತ್ತು ಮಂಕಾಳಮ್ಮ ಎಂಬ ಕ್ರಾಂತಿಕಾರಿ ದಂಪತಿಯ ಸಮ್ಮುಖದಲ್ಲಿ ವಿವಾಹವಾದರು. ಬಾಲ ವಿಧವೆಯರಿಗೆ ಬಾಳು ಕೊಡುವ ಆ ಕಾಲದ ಅಗತ್ಯ ಈಗ ಇಲ್ಲದಿರಬಹುದು. ಆದ್ದರಿಂದಲೇ ವಿಧವಾ ವಿವಾಹಕ್ಕೆ ಈಗ ಹೆಚ್ಚು ಸಾಮಾಜಿಕ ಮಹತ್ವ ಕೊಡಬೇಕಿಲ್ಲ. ವಿಧವಾ ವಿವಾಹದಿಂದಾಗಿ ನನ್ನ ಅಜ್ಜ-ಅಜ್ಜಿಯರನ್ನು ಮಠದಿಂದ / ಬ್ರಾಹ್ಮಣ ಸಮುದಾಯದಿಂದ ಬಹಿಷ್ಕರಿಸಲಾಯಿತು. ಈಗಲೂ ಈ ಬಹಿಷ್ಕಾರ ಚಾಲ್ತಿಯಲ್ಲಿದೆ. ಅದರಿಂದ ನನಗೆ ಯಾವ ನಷ್ಟವೂ ಆಗಿಲ್ಲ. ಆದರೆ ನಮ್ಮ ಕುಟುಂಬದ ಹಾಗೆ ಸಾವಿರಾರು ಕುಟುಂಬಗಳು ಇಂಥ ಅವೈಜ್ಞಾನಿಕ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ ಎಂಬುದನ್ನು ಬಲ್ಲೆ. ನಾನಾದರೋ ನಗರದ ಬದುಕಿನಲ್ಲಿ ನನ್ನದೇ ಐಡೆಂಟಿಟಿ ಹೊಂದಿದ್ದೇನೆ. ಆದರೆ ಹವ್ಯಕ ಸಮಾಜದ ನಡುವೆಯೇ ಬದುಕಬೇಕಿರುವ ಈ ಬಹಿಷ್ಕೃತ ಹವ್ಯಕರ ಯಾತನೆ ಹೇಳತೀರದು.

ಇಂಥ ಬಹಿಷ್ಕೃತ ಕುಟುಂಬದ ಮಗಳನ್ನು ಮದುವೆಯಾದ ನನ್ನ ತಂದೆ ಮಂಜಪ್ಪನವರನ್ನೂ ನಾನು ಅಭಿನಂದಿಸಲೇಬೇಕು. ಆ ಕಾಲದಲ್ಲಿ ಊರಿನ ಪಟೇಲರಾಗಿದ್ದ ಅವರು ಇಂಥ ಮದುವೆಗೆ ಮುಂದಾಗಿದ್ದು ತುಂಬಾ ಧೈರ್ಯದ ನಡೆಯೇ.

ಕಾಲಪ್ರವಾಹದಲ್ಲಿ ಊರು ಬಿಡಬೇಕಾಗಿ ಬಂದ ನನ್ನ ಅಪ್ಪ ಕರ್ನಾಟಕದ ಹಲವೆಡೆ ನೆಲೆನಿಲ್ಲಲು ಯತ್ನಿಸಿದರು. ಅದರಿಂದಾಗಿ ನಾವೆಲ್ಲರೂ ಮಕ್ಕಳು ಊರೂರು ತಿರುಗುವ, ವರ್ಷಕ್ಕೊಂದು ಎರಡು ಶಾಲೆ / ಮನೆಗಳಲ್ಲಿ ಓದುವ ಸುವರ್ಣಾವಕಾಶ ಒದಗಿತು. ಕಡು ಬಡತನವು ದಟ್ಟ ಅನುಭವಗಳನ್ನು ಒದಗಿಸುತ್ತದೆ!

ನಾನು ಓದಿದ ಶಾಲೆಗಳ, ಬೆಳೆದ ಊರುಗಳ ಪಟ್ಟಿ ನೋಡಿ: ಪ್ರಿನರ್ಸರಿ – ಹೊರನಾಡು; ನರ್ಸರಿ – ಕಳಸ; ಒಂದು-ಹೊರಬೈಲು ಪ್ರಾಥಮಿಕ ಶಾಲೆ; ಎರಡು: ಸಿದ್ಧೇಶ್ವರ ಶಾಲೆ, ವಿನೋಬ ನಗರ, ಸಾಗರ; ಮೂರು – ನಗರ (ಬಿದನೂರು); ನಾಲ್ಕು – ತೀರ್ಥಹಳ್ಳಿ; ಐದು- ಸುಬ್ರಹ್ಮಣ್ಯ; ಆರು,ಆರೂವರೆ- ಸಾಗರ ವಿನೋಬನಗರ ಶಾಲೆ; ಏಳರ ಇನ್ನರ್ಧ- ಕೆ ಬಿ ಬಡಾವಣೆ ಶಾಲೆ, ದಾವಣಗೆರೆ; ಎಂಟು,ಎಂಟೂವರೆ – ಪ್ರೌಢಶಾಲೆ, ದಾವಣಗೆರೆ; ಒಂಬತ್ತರ ಇನ್ನರ್ಧ – ಸಾಗರ; ಹತ್ತು (ಎಸೆಸೆಲ್ಸಿ) – ಪೊನ್ನಂಪೇಟೆ ಜ್ಯೂನಿಯರ್‌ ಕಾಲೇಜು; ಹನ್ನೊಂದು- ಹೂವಿನ ಹಡಗಲಿ (ಜಿಬಿಆರ್‌); ಹನ್ನೆರಡು – ಎಸ್‌ಡಿಎಂ, ಉಜಿರೆ (ಮನೆ ಇದ್ದಿದ್ದು ಹರಪನಹಳ್ಳಿಯಲ್ಲಿ); ಬಿಎಸ್ಸಿ ಮೂರು ತಿಂಗಳು – ಡಿ ಆರ್‌ ಎಂ, ದಾವಣಗೆರೆ; ಇಂಜಿನಿಯರಿಂಗ್‌ ಮೂರು ಸೆಮಿಸ್ಟರ್‌ – ಬಿಐಇಟಿ, ದಾವಣಗೆರೆ. ದೂರಶಿಕ್ಷಣದಲ್ಲಿ ಗಣಿತ ಬಿಎಸ್‌ಸಿ – ಮದ್ರಾಸು ವಿಶ್ವವಿದ್ಯಾಲಯ..

ಅಲ್ಲಿಗೆ ಮುಕ್ತಾಯ! ಎಲ್ಲೂ ಫೇಲ್‌ ಆಗಲಿಲ್ಲ ಅನ್ನೋದೊಂದೇ ಸಮಾಧಾನ.

ಇದಿಷ್ಟಾದ ಮೇಲೆ ವಿದ್ಯಾರ್ಥಿ ಪರಿಷತ್ತಿನಲ್ಲಿ ಎರಡು ವರ್ಷ ವಿಸ್ತಾರಕನಾಗಿ ವಿದ್ಯಾರ್ಥಿ ಪಥ ಎಂಬ ಮಾಸಪತ್ರಿಕೆಯನ್ನು ಅಂತೂ ಇಂತೂ ನಡೆಸಿದೆ. ಅದಕ್ಕಾಗಿ ಜೆ ಪಿನಗರಕ್ಕೆ ಬೈಸಿಕಲ್‌ನಲ್ಲಿ ಹೋಗಿ ಬರುತ್ತಿದ್ದ ನೆನಪು ಗಾಢವಾಗಿದೆ. ಈ ಎರಡು ವರ್ಷಗಳಲ್ಲೇ ನಾನು ಬರೆದೂ ಬದುಕಬಹುದು ಎಂಬ ವಿಶ್ವಾಸ ಮೂಡಿತು. ನನ್ನ ಮೊದಲ ನುಡಿಚಿತ್ರ `ಪಾಲಿಟೆಕ್ನಿಕ್‌ಗಳ ಕಥೆ – ವ್ಯಥೆ’ ಮುಖುಪುಟದಲ್ಲಿ ಸುಧಾ ಪತ್ರಿಕೆಯಲ್ಲಿ ಪ್ರಕಟವಾಯಿತು. ಆಗ ಸಂಪಾದಕರಾಗಿದ್ದ ಶ್ರೀ ಎಂ ಬಿ ಸಿಂಗ್‌, ಇನ್ನಾವುದೋ ಕವರ್‌ಪೇಜ್‌ನ್ನು ಬದಿಗೆ ಸರಿಸಿ ಇದನ್ನು ತೆಗೆದುಕೊಂಡರು ಎಂದು ಅಲ್ಲಿದ್ದವರು ನನಗೆ ತಿಳಿಸಿದ್ದರು.

ಕಾಟನ್‌ಪೇಟೆಯ ಎಬಿವಿಪಿ ಕಚೇರಿಯಲ್ಲಿ ಇರುವಾಗಲೇ ದೊಡ್ಡಬಳ್ಳಾಪುರದ ಆಸ್ಪಿರಿನ್‌ ಘಟಕದಲ್ಲಿ, ಬೆಂಗಳೂರಿನ ಬಿನ್ನಿ ಮಿಲ್‌ನಲ್ಲಿ ಎಫ್ಲುಯೆಂಟ್‌ ಟ್ರೀಟ್‌ಮೆಂಟ್‌ ಆಪರೇಟರ್‌ ಆಗಿ (ಅಂದರೆ ಕಾರ್ಖಾನೆಯಿಂದ ಹೊರಬರುವ ಕೊಳೆ ನೀರನ್ನು ವಿವಿಧ ರಾಸಾಯನಿಕ ಮತ್ತು ಭೌತಿಕ ಕ್ರಿಯೆಗಳ ಮೂಲಕ ಶುದ್ಧೀಕರಿಸುವ ಕೆಲಸ) ಕೆಲಸ ಮಾಡಿದೆ. ಗಾಂಧಿ ಬಜಾರಿನಲ್ಲಿ ಟಿ ವಿ ಸೇಲ್ಸ್‌ಬಾಯ್‌ ಆದೆ. ಆ ಕಾಲದ ಎಲ್ಲ ಟಿವಿ ಮಾಡೆಲ್‌ಗಳ ಸ್ಪೆಸಿಫಿಕೇಶನ್‌ಗಳು ನನಗೆ ಬಾಯಿಪಾಠವಾಗಿದ್ದವು.

ವಿದ್ಯಾರ್ಥಿ ಪರಿಷತ್ತಿನಲ್ಲಿ ಇರುವಾಗಲೇ, ಈಗಿನ ‘ಉತ್ಥಾನ’ದ ಉಸ್ತುವಾರಿ ಹೊಂದಿದ್ದ, (ಈಗ ಅದರ ಸಂಪಾದಕರು) ಶ್ರೀ ಕೇಶವ ಭಟ್‌ ಜೊತೆಗೆ `ಪೆನ್‌ಫ್ರೆಂಡ್‌’ ಎಂಬ ಯುವ ಪತ್ರಕರ್ತರ ವೇದಿಕೆ ರಚಿಸಿದೆ. ಅದರಲ್ಲಿ ಇದ್ದ ಹಲವು ಈಗ ಉನ್ನತ ಹುದ್ದೆಗಳಲ್ಲಿದ್ದಾರೆ. ದಿಲ್ಲಿಯಿಂದ ಅದಕ್ಕೆ ಬೆಂಬಲ ನೀಡುತ್ತಿದ್ದ ಶ್ರೀ ಬದರಿನಾಥ್‌ ಈಗ ದೇಶದ ಮುಂಚೂಣಿ ಪತ್ರಕರ್ತರು, ಯೂರಿಯಾ ಹಗರಣವನ್ನು ಬಯಲಿಗೆಳೆದ ಸಾಹಸಿ.

ಅಲ್ಲಿಂದ ಶಿರಸಿ; ಮದುವೆ; ಗ್ರಾಮೀಣ ಪತ್ರಿಕೋದ್ಯಮ; ಒಂದೂವರೆ ವರ್ಷ ಗಾಣದ ಎತ್ತಿನಂತೆ ದುಡಿದು ಮಂಗಳೂರಿಗೆ – ಹೊಸದಿಗಂತದ ಸುದ್ದಿ ಸಂಪಾದಕನಾದೆ. ದೊಡ್ಡಪುಟಗಳ ಪತ್ರಿಕೆ ಸೇರಿದಾಗ ಮಗನಿಗೆ ಒಂದೂಕಾಲು ವರ್ಷ. ಅವನನ್ನು ಆಡಿಸಬೇಕು, ಮಲಗಿಸಬೇಕು; ರಾತ್ರಿ ಪಾಳಿಯಲ್ಲಿ ದುಡಿಯಬೇಕು. ಎರಡು ವರ್ಷ ಹೊರಜಗತ್ತಿನ ಸಂಪರ್ಕವೇ ಇಲ್ಲದೆ ಜಗತ್ತಿನ ಎಲ್ಲ ಸುದ್ದಿಗಳನ್ನೂ ಮುಖಪುಟದಲ್ಲಿ ರೂಪಿಸುವ ಕೆಲಸ ಮಾಡಿದೆ. ಆ ಕಾಲದಲ್ಲಿ ನನಗಿಂತ ಮುಂಚೆಯೇ ಇದ್ದ ಶ್ರೀ ದಿನಕರ ಇಂದಾಜೆ (ಈಗ ಪತ್ರಿಕೆಯ ಸಂಪಾದಕರು) ಡೆಸ್ಕಿನಲ್ಲಿ ನನಗೆ ತುಂಬಾ ನೆರವಾದರು. ಪಿಟಿಐ ಅನುವಾದದ ಸೂತ್ರಗಳನ್ನು ತಿಳಿಸಿದರು. ಅಲ್ಲೇ ನಾನು ಪಿಟಿಐ ಕರಕರ ಕೇಳುತ್ತ, ಬಳ್ಳಕ್ಕ (ಪ್ರಜಾವಾಣಿಯಲ್ಲಿ ಎಂ ಜಿ ಬಾಲಕೃಷ್ಣ ಆಗಿದ್ದಾರೆ!)ನ ನಗೆಯ ಮೇಲೆ ಹಾಯಿಕುಗಳನ್ನು ಎಸೆಯುತ್ತ, ಕದ್ರಿ ಪಾರ್ಕಿನಲ್ಲಿ ಮಗನೊಂದಿಗೆ ಭೇಲ್‌ಪುರಿ ಸವಿಯುತ್ತ ಕಾಲ ಕಳೆದೆ! ಆ ಕಾಲದಲ್ಲಿ ಮಂಗಳೂರಿನ ಸಿಟಿ ಬಸ್‌ನಲ್ಲಿ ಸ್ಟೇಟ್‌ ಬ್ಯಾಂಕಿಗೆ ಹೋಗಿ ಮಗನಿಗೆ ಐಡಿಯಲ್‌ ಐಸ್‌ ಕ್ರೀಮ್‌ ಕೊಡಿಸಿದ್ದೇ ದೊಡ್ಡ ಸಾಧನೆ.

ಅದಾಗಿ, ೧೯೯೫ರ ಏಪ್ರಿಲ್‌ಗೆ ಬೆಂಗಳೂರಿಗೆ, ಹೊಸದಿಗಂತದಿಂದಲೇ ವರ್ಗವಾಗಿ ಬಂದವನು ಇಂದಿನವರೆಗೂ ಇಲ್ಲೇ ವಕ್ಕರಿಸಿದ್ದೇನೆ. ಈ ಇಪ್ಪತ್ತು ವರ್ಷಗಳಲ್ಲಿ ಮಾಡಿದ ಕೆಲಸಗಳ ಪಟ್ಟಿ ಮತ್ತು ಕೆಲಸ ಬಿಟ್ಟ ಕಾರಣಗಳು ಇಲ್ಲಿವೆ:


ಹೀಗೆ, ಕೊಳೆನೀರನ್ನು ಸಂಸ್ಕರಿಸುವ ಶಿಫ್ಟ್‌ ಕೆಲಸದಿಂದ ಹಿಡಿದು ಕೊಳನೀರಿನ ಬಗ್ಗೆ ಜನಜಾಗೃತಿ ಮೂಡಿಸುವವರೆಗೆ ನನ್ನ ಕೆಲಸದ ಹರವು ಇದೆ! ಅಂದು ಬಿನ್ನಿಮಿಲ್‌ನ ಸೆಲ್ಲಾರ್‌ ನಲ್ಲಿ ಹೈಡ್ರೋಕ್ಲೋರಿಕ್‌ ಆಸಿಡ್‌ ಅಳೆದಿದ್ದೆಲ್ಲಿ, ಇಲ್ಲಿ ಈಗ ನನ್ನದೇ ಒಂದು ಪುಟ್ಟ ಕಚೇರಿಯಲ್ಲಿ ಸಂಗೀತ ಕೇಳುತ್ತ ಮನಸ್ಸಿಗೆ ಬಂದಿದ್ದನ್ನೆಲ್ಲ ಬರೆಯುವ ಕ್ಷಣವೆಲ್ಲಿ?

ಹೀಗಿದ್ದೂ, ಇದೇನೂ ದೊಡ್ಡದಲ್ಲ. ನನಗಿಂತ ಹೀನ ಸ್ಥಿತಿಯಲ್ಲಿ ಇದ್ದ ಹಲವರು ಅತ್ಯಂತ ಶ್ರಮವಹಿಸಿ ನನಗಿಂತ ಎಷ್ಟೋ ದೊಡ್ಡ ಸಾಧನೆ ಮಾಡಿದ್ದಾರೆ. ರಸ್ತೆಯ ಹಳದಿ ಕಪ್ಪು ಗುರುತು ಬಣ್ಣ ಬಳಿಯುವ ಕೆಲಸ ಮಾಡಿದವ ಈಗ ತನ್ನದೇ ವಿಲ್ಲಾ ಕಟ್ಟಿಕೊಂಡಿದ್ದಾನೆ; ಉಚಿತ ಹಾಸ್ಟೆಲಿನಲ್ಲಿ ಹೇಗೋ ಬದುಕಿದ್ದ ಕಲಾವಿದ ಈಗ ಇಂಜಿನಿಯರಿಂಗ್‌ ಕಾಲೇಜಿನ ವಿಭಾಗ ಮುಖ್ಯಸ್ಥ; ಶುಲ್ಕ ಕಟ್ಟಲೂ ಹಣವಿಲ್ಲದೆ ಪರದಾಡಿದ್ದ ಗೆಳೆಯನೀಗ ಪ್ರತಿಷ್ಠಿತ ಇಂಜನಿಯರಿಂಗ್‌ ಕಾಲೇಜಿನಲ್ಲಿ ಪ್ರಾಧ್ಯಾಪಕ. ನನ್ನ ಬದುಕಿನ ಸುತ್ತಮುತ್ತಲೇ ಇಂಥ ಶ್ರಮಜೀವಿಗಳು ಇರಬೇಕಾದರೆ ದೂರದ ಉದಾಹರಣೆಯೇ ಬೇಕಿಲ್ಲ! (ರಾಮೇಶ್ವರದ ರೈಲಿನಲ್ಲಿ ಪೇಪರ್‌ ಹಂಚಿದ ಕಲಾಂ ರಾಷ್ಟ್ರಪತಿಯೂ ಆದರು!)

`ಸುದರ್ಶನ ಚಲೋ ಕೆಲಸ ಮಾಡುತ್ತಾನೆ; ಆದರೆ ಬೇಗ ಕೆಲಸ ಬಿಡುತ್ತಾನೆ’ ಎಂದು ಹಲವರು ಎದುರಾ ಎದುರು, ಬೆನ್ನಹಿಂದೆ ಹೇಳಿದ್ದಾರೆ. ಆದ್ದರಿಂದ ಇಷ್ಟು ಬರೆಯಬೇಕಾಯಿತು. ಪ್ರತಿಯೊಂದೂ ಕೆಲಸ ಬಿಡಲು ನಿರ್ದಿಷ್ಟವಾದ, ಲಿಖಿತವಾದ ಕಾರಣ ಇರುವುದರಿಂದ ಮತ್ತು ಈ ಕಾರಣಗಳನ್ನು ಕೆಲಸ ಕೊಟ್ಟವರು ಅಲ್ಲಗಳೆದಿಲ್ಲವಾದ್ದರಿಂದ ಹೆಚ್ಚು ಸಮರ್ಥನೆ ಬೇಕಿಲ್ಲ. ನಾನು ಕೆಲಸ ಬಿಟ್ಟ ಹಲವು ಸಂಸ್ಥೆಗಳು ನನಗೆ ಮತ್ತೆ ಕೆಲಸ ಕೊಟ್ಟಿವೆ; ಆಫರ್‌ ಕೊಟ್ಟಿವೆ. ನನ್ನ ವೃತ್ತಿಪರತೆಗೆ ಅದೇ ಸಾಕ್ಷಿ ಎಂಬ ಹುಂಬ ಸಮರ್ಥನೆ ನನ್ನದು!

ನಾನು ಆರೆಸೆಸ್‌ ಪ್ರಭಾವದಲ್ಲೇ ಬೆಳೆದವನು; ಎಬಿವಿಪಿಯಲ್ಲಿ ಕೆಲಸ ಮಾಡಿದವನು. ಆದರೆ ಈಗಲೂ ನನ್ನ ನೇರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್‍ಯವನ್ನು ಉಳಿಸಿಕೊಂಡಿದ್ದೇನೆ; ಇದಕ್ಕೆ ಸಂಘಟನೆಯಲ್ಲಿ ಇರುವ ಹಿರಿಯರೂ ಕಾರಣ! ಇಂಥ ಅಭಿವ್ಯಕ್ತಿ ಸ್ವಾತಂತ್ರ್‍ಯವು ಇದೆ ಎಂಬುದು ನಾನು ಸಂಘ ಪರಿವಾರವನ್ನು ಮೆಚ್ಚಲು ಇರುವ ಒಂದು ಪ್ರಮುಖ ಕಾರಣ. ಇನ್ನೊಂದು ಕಾರಣ: ಈ ದೇಶವನ್ನು ಸರ್ವಾಂಗೀಣವಾಗಿ ಬೆಳೆಸಬೇಕೆಂದು ಸಾವಿರಾರು ಜನ ಸಂಘ ಪರಿವಾರದಲ್ಲಿ ಕೆಲಸ ಮಾಡುತ್ತಿದ್ದಾರೆ; ಅವರ ಪ್ರಾಮಾಣಿಕತೆ ಪ್ರಶ್ನಾತೀತ.

ಇಷ್ಟಾಗಿ ನಾನು ಹಾದಿ ತಪ್ಪಲಿಲ್ಲವೇ ಎಂದು ಕೇಳಿದವರಿಗೆ: ನಾನು ಸಿಗರೇಟ್‌ ಸೇದಿ ಬಿಟ್ಟಿದ್ದೇನೆ; ಗುಂಡು ಹಾಕಿ ಮರೆತಿದ್ದೇನೆ. ನನ್ನ ವೈಯಕ್ತಿಕ ಮಟ್ಟದಲ್ಲಿ ಸಂಯಮ ಕಳೆದುಕೊಂಡ ಕ್ಷಣಗಳೂ ಇವೆ. ಅವನ್ನೆಲ್ಲ ಇಲ್ಲಿ ಕಾರಿಕೊಂಡು ವಿಷಾದ ವ್ಯಕ್ತಪಡಿಸುವುದಕ್ಕಿಂತ, ಅವುಗಳನ್ನು ಮೀರಿ ಬೆಳೆಯುವ ನಿರ್ಧಾರ ಮಾಡಿದ್ದೇನೆ. ಆಫ್‌ ಕೋರ್ಸ್‌, ಕಳೆದ ಮೂರು ವರ್ಷಗಳಿಂದ ನನ್ನ ಈ ಬದಲಾವಣೆಯ ಪರ್ವ ಆರಂಭವಾಗಿದೆ (೪೭ರ ಪ್ರೈಮ್‌ ವಯಸ್ಸಿನಿಂದ ಎನ್ನಿ!).

ನನ್ನ ಕಲಿಕೆ

ಈ ದಿನಗಳಲ್ಲಿ ನಾನು ಏನೇನು ಕೆಲಸ/ಕಸುಬು ಕಲಿತಿದ್ದೇನೆ ಎಂದು ಲೆಕ್ಕ ಹಾಕಿದರೆ

  1. ಡಿಟಿಪಿ ; ಆಗಿನ ಕಾಲದ ಆಫ್‌ಸೆಟ್‌ ಪ್ರಿಂಟಿಂಗ್‌ನ ಪ್ಲೇಟ್‌ಮೇಕಿಂಗ್‌; ನೆಗಟಿವ್‌ ಪಾಸಿಟಿವ್‌ ಫಿಲ್ಮ್‌ ತಯಾರಿ; ೪ ಬಣ್ಣಗಳ ಪೇಸ್ಟಪ್‌; ಪೇಜಿನೇಶನ್‌
  2. ಪತ್ರಿಕೋದ್ಯಮದಲ್ಲಿ ಗೊತ್ತೇ ಇರುವಂತೆ ಬರವಣಿಗೆಯ ವಿವಿಧ ಶೈಲಿಗಳು: ಕಥೆ, ಕವನ, ಫೀಚರ್‌, ಸುದ್ದಿ, ಸಂದರ್ಶನ, ಅನುವಾದ, ಪುಸ್ತಕ ಪ್ರಕಾಶನ, ಪತ್ರಿಕೋದ್ಯಮ ತರಬೇತಿ
  3. ಪುಟವಿನ್ಯಾಸ: ಮೊದಲು ಪೇಜ್‌ಮೇಕರ್‌, ಈಗ ಇನ್‌ಡಿಸೈನ್‌ನಲ್ಲಿ ಪುಟವಿನ್ಯಾಸ
  4. ಮಾಹಿತಿ ತಂತ್ರಜ್ಞಾನ: ಕಂಪ್ಯೂಟರ್‌, ವೈರಸ್‌ ನಿರ್ವಹಣೆ, ಎಲ್ಲಾ ಅಪ್ಲಿಕೇಶನ್‌ ಸಾಫ್ಟ್‌ವೇರ್‌ಗಳ ಮಾಹಿತಿ; ಕನ್ನಡ ತಂತ್ರಾಂಶ ಅಭಿವೃದ್ಧಿಯಿಂದ ಹಿಡಿದು ಹಲವು ತಾಂತ್ರಿಕ ವಿಷಯಗಳ ಬಗ್ಗೆ ಅಧ್ಯಯನ ಮತ್ತು ಮಾಹಿತಿ ಸಂಗ್ರಹ (ನನ್ನ ಡಿಜಿಟಲ್‌ ದಿನಚರಿಯ ಬಗ್ಗೆ ಪ್ರತ್ಯೇಕ ಬ್ಲಾಗ್‌ ಬರೆಯುವೆ. ಅದು ನಿಮಗೆ ಹೆಚ್ಚು ಉಪಯೋಗ ಆಗಬಹುದು.)
  5. ಸಾಮಾಜಿಕ ಚಟುವಟಿಕೆ: ಮಿತ್ರಮಾಧ್ಯಮ ಟ್ರಸ್ಟ್‌ನಿಂದ ಹಲವು ಬಗೆಯ ಚಟುವಟಿಕೆಗಳು; ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ; ಎಂಡೋಸಲ್ಫಾನ್‌, ಅಕ್ಕು – ಲೀಲಾ ಪ್ರಸಂಗದಿಂದ ಹಿಡಿದು ಬಿಟಿ ಬದನೆವರೆಗೆ, ಇಂಧನ ನೀತಿವರೆಗೆ ಹಲವು ಹೋರಾಟಗಳಿಗೆ ಬೆಂಬಲ, ಭಾಗಿತ್ವ ಮತ್ತು ಸರ್ಕಾರದೊಂದಿಗೆ ಸಮನ್ವಯದ ಪ್ರಯತ್ನ.
  6. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ (ಕೊಳಲು) ಕಲಿಕೆ (ಇದು ಕೇವಲ ಕಲಿಕೆಗಾಗಿ ಹೊರತು ಇನ್ನೇನೂ ಕಾರಣವಿಲ್ಲ). ರಾಗ, ಶ್ರುತಿಯ ಗಂಧ ಗಾಳಿಯಿಲ್ಲದ ನನಗೆ ಹೇಗೋ ಮಾಡಿ ಸಂಗೀತದ ಸೂತ್ರಗಳನ್ನು ಕಲಿಸುತ್ತಿರುವ ನನ್ನ ಗುರುಗಳಾದ ಶ್ರೀ ಪ್ರಕಾಶ್‌ ಚಕ್ರವರ್ತಿಯವರನ್ನು ಎಷ್ಟು ವಂದಿಸಿದರೂ ಕಡಿಮೆಯೇ. ಅವರ ಅಕಾಲಿಕ ನಿಧನ (೨೦೧೬) ನನ್ನನ್ನು ಇನ್ನಿಲ್ಲದಂತೆ ಗಾಸಿಗೊಳಿಸಿದೆ.

ನನ್ನ ಈ ಎಲ್ಲ ಸಾಹಸಗಳನ್ನು, ತಪ್ಪು-ಒಪ್ಪುಗಳನ್ನು ಹತ್ತಿರದಿಂದ ಗಮನಿಸಿದವರು ಇಬ್ಬರೇ: ನನ್ನ ಹೆಂಡತಿ ಮತ್ತು ನನ್ನ ಮಗ. ಹುಟ್ಟಾ ಶ್ರವಣಶಕ್ತಿ ಕಳೆದುಕೊಂಡಿದ್ದರೂ ಬದುಕಿನ ಬಗ್ಗೆ ಅಪಾರ ಉತ್ಸಾಹ ಹೊಂದಿರುವ ನನ್ನ ಹೆಂಡತಿ ವಿಮಲಾ ನನ್ನೆಲ್ಲ ಭಾನಗಡಿಗಳನ್ನು ಸಹಿಸಿಕೊಂಡಿದ್ದಾಳೆ. ನನ್ನ ಅತಿ ಸರಳ ಆರ್ಥಿಕ ನೀತಿಯನ್ನು (ನಾನೆಂದೂ ಭ್ರಷ್ಟತೆಯಿಂದ ಹಣ ಗಳಿಸಿಲ್ಲ)  ನನ್ನ ಮಗನೂ ಗಮನಿಸಿ ಹೊಂದಿಕೊಡಿದ್ದಾನೆ. ದಿನೇ ದಿನೇ ಸಂಬಂಧಗಳ ಘೋಟಾಳೆಗಳಲ್ಲಿ ಕಳೆದೇ ಹೋಗುತ್ತಿರುವ ಬೆಂಗಳೂರಿನಲ್ಲಿ ಇದಕ್ಕಿಂತ ಹೆಚ್ಚು ಬೇಕೆ?!

ನನ್ನ ರಾಜಕೀಯ ನಿಲುವು

ದಕ್ಷ ಆಡಳಿತ ಕೊಡುವ ಯಾವುದೇ ರಾಜಕಾರಣಿ, ಪ್ರಾಮಾಣಿಕವಾಗಿ ಅಧಿಕಾರ ಚಲಾಯಿಸುವ ಯಾವುದೇ ಅಧಿಕಾರಿ – ಇವರನ್ನು ಗೌರವಿಸಬೇಕು ಮತ್ತು ಅವರೊಂದಿಗೆ ಸಾರ್ವಜನಿಕ ಕೆಲಸಗಳಿಗಾಗಿ ಸಹಕರಿಸಬೇಕು ಎಂಬುದು ನನ್ನ ನಿಲುವು. ಇದಕ್ಕೆ ಯಾವುದೇ ಪಕ್ಷ-ಜಾತಿಯ ಚೌಕಟ್ಟು ಇಲ್ಲ. ನಾನು ಜಾತಿ ಆಧಾರದಲ್ಲಿ  ಯಾರನ್ನೂ ನಿರ್ಲಕ್ಷಿಸಿಲ್ಲ.

ಐವತ್ತು ವರ್ಷಕ್ಕೊಮ್ಮೆ ಬರೆಯಬಹುದಾದ ಅಂಕಣ ಇದು. ಇದರ ಮುಂದಿನ ಕಂತನ್ನು ಇನ್ನು ಕೇವಲ ಐವತ್ತು ವರ್ಷಗಳಲ್ಲಿ ಪ್ರಕಟಿಸಲಾಗುವುದು.

ನಾನು ಈಗ ಹೇಳುವ ಬದುಕಿನ ಸೂತ್ರಗಳು ಇಲ್ಲಿವೆ:

  1. ದುಡ್ಡು  ಸ್ಥಾನಮಾನ ಕೊಡುತ್ತದೆ ;  ಘನತೆಯನ್ನು ನಾವೇ ಸಂಪಾದಿಸಬೇಕು; ಅದಕ್ಕಾಗಿ ನಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. 
  2. ಕಲಿವ ತವಕ ಇಲ್ಲದಿದ್ದರೆ ನೀವು ಎಂಥ ದೊಡ್ಡ ಕೆಲಸ ಮಾಡುತ್ತಿದ್ದರೂ ನಿಷ್ಪ್ರಯೋಜಕ.
  3. ಬದುಕಿನಲ್ಲಿ ವರಮಾನದ ಹೊರತಾಗಿ ಸಮಾಜಕ್ಕಾಗಿ ಮಾಡುವ ಕೆಲಸ ಏನು, ಬರೆಯುವ ವಿಷಯ ಏನು (ವಿಶೇಷವಾಗಿ ಲೇಖಕ / ಪತ್ರಕರ್ತರಿಗೆ) ಎಂಬುದನ್ನು ಪಟ್ಟಿ ಮಾಡಲು ನಮಗೆ ಸಾಧ್ಯವಿಲ್ಲದಿದ್ದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ.
  4. ನಿಮಗೆ ಯಾರದೋ ಮಿತ್ರತ್ವ ಬೇಡವೆಂದರೆ ಕೂಡಲೇ ನಿರ್ಧರಿಸಿ; ಕೃತ್ರಿಮ ಸಂಬಂಧಗಳನ್ನು ಮುಂದುವರಿಸಬೇಡಿ. ನಾನು ಬದುಕಿನಲ್ಲಿ ಹಲವರನ್ನು ಹೀಗೆ ಡಿಲೀಟ್‌ ಮಾಡಿದ್ದೇನೆ; ಹಾಗೇ ಸೇರಿಸಿಕೊಂಡಿದ್ದೇನೆ. ಸ್ನೇಹ ಸಂಬಂಧಗಳಲ್ಲಿ ವ್ಯಾವಹಾರಿಕತೆ ಎಷ್ಟು, ನೈಜ ಕಾಳಜಿ ಎಷ್ಟು ಎಂಬುದನ್ನು ಗಮನಿಸುತ್ತಿರಿ.
  5. ಬೆನ್ನ ಹಿಂದೆ ಮಾತನಾಡುವ, ಗೇಲಿ ಮಾಡುವಂಥ ರಣಹೇಡಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ತಾರ್ಕಿಕವಾಗಿ ಹೇಳುವುದಾದರೆ, ಅವರು ಹೇಳಿದ್ದೆಲ್ಲ ನಿಮಗೆ ಕೇಳಿಸಿಯೇ ಇರುವುದಿಲ್ಲ! 
  6. ನಿಮ್ಮ ನೀತಿ ನಿಲುವಿಗೆ, ಸಿದ್ಧಾಂತಕ್ಕೆ ಅಂಟಿಕೊಂಡು ಅರ್ಧ ಬದುಕು ದಾಟಿದ ಮೇಲೆ  ಕಾಂಪ್ರಮೈಸ್‌ ಆಗುವುದರಲ್ಲಿ ಅರ್ಥವಿಲ್ಲ. ಏಕೆಂದರೆ ನದಿಯನ್ನು ಅರ್ಧ ಈಜಿದ ಮೇಲೆ ವಾಪಸು ಬರುವುದಕ್ಕೂ, ಆಚೆ ದಡ ಸೇರುವುದಕ್ಕೂ ಒಂದೇ ಪ್ರಮಾಣದ ಶ್ರಮ ಬೇಕು; ವಾಪಸಾದರೆ ವಿಫಲತೆ; ದಡ ಸೇರಿದರೆ ಹೇಗೋ ಮುಗಿಸಿದೆವಲ್ಲ ಎಂಬ ಸಮಾಧಾನ! ಹಾಗಂತ ನೀವು ಮಾಹಿತಿಗಳ ಆಧಾರದಲ್ಲಿ ನಿಲುವುಗಳನ್ನು ಬದಲಿಸಿಕೊಳ್ಳಬಾರದು ಎಂದೇನಿಲ್ಲ. ಗಾಳಿ ಬಂದ ಕಡೆ ತೂರಿಕೊಳ್ಳಬೇಡಿ ಎಂಬುದೇ ನನ್ನ ಇರಾದೆ. 
  7. ಕೆಲಸ ಬಿಟ್ಟರೆ ವರಿ ಮಾಡ್ಕೋಬೇಡಿ; ಇನ್ನೊಂದು ಕೆಲಸ ಸಿಗೋವರೆಗೆ ಸಿನೆಮಾ-ಸಂಗೀತದಲ್ಲಿ ಮುಳುಗಿ. ಯಾಕಂದ್ರೆ ಕೆಲಸ ಮಾಡೋರಿಗೆ ಕೆಲಸ ಇದ್ದೇ ಇರುತ್ತೆ!
  8. ಭಯಂಕರ ಖುಷಿಯಿಂದ, ಕೊಂಚ ಹೊಣೆಗಾರಿಕೆಯಿಂದ, ಅಷ್ಟಿಷ್ಟು  ಉಡಾಫೆಯಿಂದ ಬದುಕುವುದೇ ಸೆಕ್ಯುರಿಟಿ. ಬಿಟ್ಟರೆ ಬದುಕಿನಲ್ಲಿ ಭದ್ರತೆ ಎನ್ನುವುದು ದಾಸರು ಹೇಳಿದಂತೆ ಲೊಳಲೊಟ್ಟೆ. 
  9. ವರ್ತಮಾನದ ಬಿಸಿಲಿನಲ್ಲೇ ಮೈಯನ್ನು ಬೆಚ್ಚಗಿಟ್ಟುಕೊಳ್ಳಿ. ಭೂತಕಾಲದ ಸಂಗತಿಗಳನ್ನು ಕುತೂಹಲದಿಂದ  ನಿರುಕಿಸಿ; ಭವಿಷ್ಯದ ಆತಂಕಗಳನ್ನು ಭಾವತೀವ್ರತೆಯಿಂದ ಎದುರಿಸಿ.
  10. ಬದುಕು ಟ್ಯಾಬ್ಲೆಟ್‌ನ ಮಾಯಾಪರದೆ ಇದ್ದಂತೆ. ನಾಜೂಕಿನಿಂದ, ಮೆದುವಾಗಿ ತೀಡಿದರೆ ಬೇಕಾದ ಆಪ್‌ಗಳು ತೆರೆದುಕೊಳ್ಳುತ್ತವೆ. ಇಲ್ಲವಾದರೆ ಹ್ಯಾಂಗ್‌!

ಇವೆಲ್ಲವೂ ನನ್ನ ಬದುಕಿನಲ್ಲೇ ಕಂಡುಕೊಂಡ ಅಂಶಗಳಾದ್ದರಿಂದ ಉಪದೇಶದ ರೂಪದಲ್ಲಿ ಬರೆದಿದ್ದೇನೆ. ಈಗ್ಲಾದ್ರೂ ವಯಸ್ಸಾಯ್ತು ಅಂತ ಗೊತ್ತಾಯ್ತಲ್ಲ!

ನನ್ನ ಜೀವನದ ಮೇಲೆ ಒಳ್ಳೆಯ ಪರಿಣಾಮ ಬೀರಿದ ಕೆಲವು  ವ್ಯಕ್ತಿತ್ವಗಳು  / ಅಥವಾ ನನ್ನಲ್ಲಿ ಇದೆ ಎಂದು ನಂಬಿದ ಅಷ್ಟ್‌ಇಷ್ಟು ಒಳ್ಳೆಯ ಅಂಶಗಳಿಗೆ ಕಾರಣರಾಗಿರುವವರು!! (ಈ ಪಟ್ಟಿ ಅಪೂರ್ಣ) (ದುಷ್ಪರಿಣಾಮ ಬೀರಿದವರನ್ನು ಹೆಸರಿಸುವುದಿಲ್ಲ. ಅವರು ಆರಾಮಾಗಿರಲಿ!)

  1. ಶ್ರೀ ಬಾಬೂರಾವ್‌ ದೇಸಾಯಿ, ವಿಶ್ವ ಹಿಂದು ಪರಿಷತ್‌
  2. ಶ್ರೀ ನ ಕೃಷ್ಣಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘ
  3. ಶ್ರೀ ಮೈ ಚ ಜಯದೇವ,  ರಾಷ್ಟ್ರೀಯ ಸ್ವಯಂಸೇವಕ ಸಂಘ
  4. ಶ್ರೀ ದತ್ತಾತ್ರೇಯ ಹೊಸಬಾಳೆ, ರಾಷ್ಟ್ರೀಯ ಸ್ವಯಂಸೇವಕ ಸಂಘ
  5. ಶ್ರೀ ದಿನೇಶ್‌ ಕಾಮತ್‌, ಸಂಸ್ಕೃತ ಭಾರತಿ
  6. ಶ್ರೀ ಜಿ ಆರ್‌ ಜಗದೀಶ, ವಿದ್ಯಾಭಾರತಿ
  7. ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ಸ್ವರ್ಣವಲ್ಲೀ ಮಠ
  8. ಶ್ರೀ ಚಿ ಶ್ರೀನಿವಾಸರಾಜು, ಮೇಸ್ಟ್ರು
  9. ಶ್ರೀ ಜಾಣಗೆರೆ ವೆಂಕಟರಾಮಯ್ಯ, ಪತ್ರಕರ್ತರು
  10. ಶ್ರೀ ದ ಮ ರವೀಂದ್ರ, ರಾಸ್ವಸಂಘ
  11. ಶ್ರೀ ಎಂ ಪಿ ಕುಮಾರ್‌, ಗ್ಲೋಬಲ್‌ ಎಜ್‌ ಸಾಫ್ಟ್‌
  12. ಶ್ರೀ ಶಂಕರ ಶರ್ಮ, ಇಂಧನ/ವಿದ್ಯುತ್‌ ತಜ್ಞರು, ಮೈಸೂರು
  13. ಶ್ರೀ ಕೆವಿಆರ್‌ ಸೋಮಯಾಜಿ, ಗಣಿತ ಸಾಮಾಜಿಕ ಕಾರ್ಯಕರ್ತರು, ಬೆಂಗಳೂರು
  14. ಶ್ರೀ ಕಣಜನಹಳ್ಳಿ ನಾಗರಾ‌ಜ್‌, ಕಣಜನಹಳ್ಳಿ, ಹಿರಿಯೂರು ತಾಲೂಕು
  15. ಶ್ರೀ ಕೆ ಎ ಬದರಿನಾಥ್‌, ಹಿರಿಯ ಪತ್ರಕರ್ತರು, ಹೊಸದಿಲ್ಲಿ
  16. ಶ್ರೀ ಕೆ ಎನ್‌ ಗೋವಿಂದಾಚಾರ್ಯ (ಮಾಜಿ ಬಿಜೆಪಿ)
  17. ಶ್ರೀ ಸತೀಶ್‌ಜಿ, (ಆಗ ಎಬಿವಿಪಿ, ಈಗ ಬಿಜೆಪಿ)
  18. ದಿ|| ಶ್ರೀ ಅರಾಸೇ, ಭರಮಸಾಗರ
  19. ದಿ|| ಶ್ರೀ ಶಿವರಾಮು `ಆತ್ಮಾಹುತಿ’ ಲೇಖಕರು
  20. ಸ್ವಾಮಿ ವಿಷ್ಣುಮಯಾನಂದಜಿ, ರಾಮಕೃಷ್ಣ ಆಶ್ರಮ, ಶಿವನಹಳ್ಳಿ.

ನಾನು ಮರೆಯಲಾಗದ ನನ್ನ ಕೆಲವು ಶಿಕ್ಷಕರು  (ಈ ಪಟ್ಟಿ ಅಪೂರ್ಣ)

  • ಶ್ರೀ ಹನುಮಯ್ಯ ಮಾಸ್ತರ್‌ (೩ನೇ ತರಗತಿ, ನಗರ)
  • ಶ್ರೀ ವೆಂಕಣ್ಣ ಮಾಸ್ತರ್‌, (ವಿನೋಬಾನಗರ ಶಾಲೆ ೧೯೭೭)
  • ಶ್ರೀ ಗುಡಿಗಾರ ಮಾಸ್ತರ್‌ (ವಿನೋಬಾನಗರ ಶಾಲೆ ೧೯೭೭)
  • ಶ್ರೀಮತಿ ಜಯಲಕ್ಷ್ಮಿ ಮೇಡಂ (ಗಣಿತ, ಪೊನ್ನಂಪೇಟೆ)
  • ಶ್ರೀ ಎಚ್‌ಆರ್‌ಆರ್‌ (ಹೈಸ್ಕೂಲು, ದಾವಣಗೆರೆ)
  • ಸಂಗೀತ ಗುರು ಶ್ರೀ ಪ್ರಕಾಶ್‌ ಚಕ್ರವರ್ತಿ

ನನ್ನ ಬದುಕಿನ ದುರ್ಭರ ಕ್ಷಣಗಳಲ್ಲಿ ನನ್ನನ್ನು ಎತ್ತಿಹಿಡಿದ ಮಿತ್ರರು, ಮಿತ್ರೆಯರನ್ನು ಹೇಗೆ ಮರೆಯಲಿ? ಅವರ ಪಟ್ಟಿಗೆ ಇಲ್ಲಿ ಜಾಗ ಸಾಕಾಗುವುದಿಲ್ಲ. ಹಾಗೆಯೇ ನನ್ನನ್ನು ಸಾಮಾಜಿಕ ಭ್ರಷ್ಟತೆಯಿಂದ ದೂರ ಇಡಲು ಕಾರಣರಾದ ನನ್ನ ಪ್ರಿಯ ಮಿತ್ರರೊಬ್ಬರನ್ನು ವಿಶೇಷವಾಗಿ ನೆನಪಿಸಿಕೊಳ್ಳಬೇಕು. ಭಾರತ ಕಂಡ ಅತ್ಯಂತ ವೃತ್ತಿನಿಷ್ಠ, ಪ್ರಾಮಾಣಿಕ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಅವರು ನನ್ನ ಆದರ್ಶ ಸಾರ್ವಜನಿಕ ಸೇವಾವ್ಯಕ್ತಿ.

ಪ್ರಿಯರೆ, ನನ್ನ ಈ ಬ್ಲಾಗನ್ನು ಇಲ್ಲೀವರೆಗೆ ಓದಿದ ನೀವು ನಿಜಕ್ಕೂ ಒಳ್ಳೆಯವರೇ! ನಿಮ್ಮಲ್ಲೂ ಹತ್ತು ಹಲವು ಒಳ್ಳೆಯ ಅಂಶಗಳಿರುತ್ತವೆ. ಅವನ್ನೆಲ್ಲ ನಾನು ಅತ್ಯಂತ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ. ಅದಕ್ಕೇ ನಾನು ಮಾಹಿತಿ ಹಂಚಿಕೊಳ್ಳುವುದೇ ನನ್ನ ಘೋಷವಾಕ್ಯ ಮಾಡಿಕೊಂಡಿದ್ದೇನೆ. ನೀವೂ ಕೂಡಾ ನಿಮ್ಮ ಜೀವನದಲ್ಲಿ ಯಶಸ್ಸು ಪಡೆಯಲೆಂದು ಹಾರೈಸುತ್ತೇನೆ.

ಮುಂದೆ?

ನನ್ನ ಮುಂದಿನ ದಿನಗಳ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. 

ವಂದನೆಗಳು.

ಬೇಳೂರು ಸುದರ್ಶನ

೧೪ ಜುಲೈ ೨೦೧೫

Share.

2 Comments

  1. Amazing! Don’t have words to admire you! You are the best! A very open and an honest person! I appreciate that you have that identity which is difficult to have in this self centered world. Hats off. You remain as an inspiration to me always and ever!
    Manasa

  2. ಕುಮಾರ ರೈತ on

    ನಿಮ್ಮ ಜೀವನ ಪಯಣದ ಹಾದಿ ಆಸಕ್ತಿಕರ. ನಾನು ನಿಮ್ಮ ಸಹದ್ಯೋಗಿಯಾಗಿದ್ದೆ ಎಂಬುದು ಹೆಮ್ಮೆಯ ವಿಷಯ. ಈ ಸಂದರ್ಭದಲ್ಲಿ ನಿಮ್ಮ ಪ್ರಾಮಾಣಿಕ ವ್ಯಕ್ತಿತ್ವ – ಸಿದ್ಧಾಂತಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ, ಸೂಕ್ತ ಅಭಿಪ್ರಾಯವನ್ನು ಹಿಂಜರಿಯದೇ ಹೇಳುವ ಮನೋಭಾವ ನನ್ನ ಅರಿವಿಗೆ ಬಂದಿದೆ. ನಿಮ್ಮ ಮುಂದಿನ ಬದುಕು ಸುಗಮವಾಗಿರಲಿ ಎಂದು ಹಾರೈಸುತ್ತೇನೆ.

Leave A Reply Cancel Reply
Exit mobile version