ಬೇವಿನ ಮಹತ್ವ ಯಾರಿಗೆ ತಿಳಿದಿಲ್ಲ? ಅನೇಕರು ಪ್ರತಿದಿನ ಬೆಳಿಗ್ಗೆ ಬೇವಿನ ದಂಟು ಮುರಿದು ಹಲ್ಲುಜ್ಜಿಕೊಳ್ಳುತ್ತಾರೆ. ಇನ್ನು ಕಣ್ಣಿನ ನಾನಾ ಬಗೆಯ ರೋಗಗಳಿಗೆ, ಚರ್ಮದ ಅನೇಕ ಕಾಯಿಲೆಗಳಿಗೆ, ಮೂತ್ರಕೋಶ – ಮೂತ್ರಪಿಂಡಗಳ ತೊಂದರೆಗಳ ನಿವಾರಣೆಗೆ ಬೇವಿನ ಮರದ ಔಷಧಯುಕ್ತ ಅಂಶಗಳು ಸದಾ ಬಳಸ್ಪಡುತ್ತವೆ. ಮನೆಯಲ್ಲಿ ಮರದ ಕೆಲಸಗಳಿಗೆ ಬೇವನ್ನೇ ಪ್ರಥಮ ಪ್ರಾಶಸ್ತ್ಯದ ಮರವನ್ನಾಗಿ ಆರಿಸುತ್ತಾರೆ. ಯಾಕೆಂದರೆ ಬೇವಿಗೆ ಗೆದ್ದಲು ಹಿಡಿಯಲಾರದು; ಬಹಳಕಾಲ ಅದರ ಭೀಮ ಸಾಮರ್ಥ್ಯ ಕುಗ್ಗುವುದೇ ಇಲ್ಲ.

ಇತ್ತೀಚಿನ ವರ್ಷಗಳ ನಾನಾಬಗೆಯ ಸಂಶೋಧನೆಗಳು ‘ಬೇವು’ ಒಂದು ಅತ್ಯುತ್ತಮ ‘ಕೀಟನಾಶಕ’ವೆಂದೂ, ಆರೋಗ್ಯಕರ ‘ರಸಗೊಬ್ಬರ’ವೆಂದೂ ಸಿದ್ಧಮಾಡಿತೋರಿಸಿದೆ. ಪಾಶ್ಚಾತ್ಯ ಜಗತ್ತಿಗೆ ವಿಸ್ಮಯವಾಗಿಯೇ ಉಳಿದಿರುವ ಬೇವಿನ ಮಹತ್ವವನ್ನು ಈಗ ಎಲ್ಲ ದೇಶಗಳ ತಜ್ಞರೂ ಮನವರಿಕೆ ಮಾಡಿಕೊಳ್ಳಲಾರಂಭಿಸಿದ್ದಾರೆ. ಹೀಗಾಗಿ ನಾವು ತಿಳಿಯಬೇಕಾದ್ದು ಅಗತ್ಯ.

ಅಜ್ಞಾತವಾಸ

ಬೇವಿನ ಸಸ್ಯ ಕುಟುಂಬ ‘ವೊಹೊಗನಿ’. ದಕ್ಷಿಣ ಏಶಿಯಾದಲ್ಲಿ ಮೊದಲು ಕಾಣಿಸಿಕೊಂಡ ಬೇವು ದಕ್ಷಿಣ – ಪೂರ್ವ ಏಶಿಯಾ ಮತ್ತು ಆಫ್ರೀಕಾಗಳಲ್ಲೂ ಕಂಡುಬಂದ ಸಸ್ಯ, ಅನಂತರ ಫ್ಲೋರಿಡಾ, ಮಧ್ಯ ಅಮೆರಿಕಾ, ಫಲಿಪೈನ್ಸ್, ನ್ಯೂಗಿನಿ ಮುಂತಾದ ದೇಶಗಳಿಗೂ ಹಾರಿದ ಬೇವಿನ ಮರಗಳು ಈಗ ಸಮೃದ್ಧವಾಗಿ ಫಲ ಕೊಡುತ್ತಿದೆ.

ಭಾರತದ ಆಯುರ್ವೇದ ವೈದ್ಯಪದ್ಧತಿಯಲ್ಲಿ ಅಪೂರ್ವ ಸ್ಥಾನ ಪಡೆದಿದ್ದ ಬೇವನ್ನು ಇತ್ತೀಚಿನವರೆಗೂ ನಿರ್ಲಕ್ಷಿಸಲಾಗಿತ್ತು. ಪ್ರಾಚೀನ ಕಾಲದಿಂದಲೂ ಹೊಲಗದ್ದೆಗಳ ಕೃಷಿಯಲ್ಲೂ ಬಳಸುತ್ತಿದ್ದ ಬೇವಿನ ಅಪೂರ್ವ ಪ್ರಭಾವಗಳನ್ನು ಎಲ್ಲರೂ ‘ಹಳೆಯ ಪದ್ದತಿ’ ಎಂದು ಹೀಗಳೆಯುತ್ತಿದ್ದರು. ಆದರೆ ಕ್ರಮೇಣ ಭಾರತದಲ್ಲಿ ಬೇವಿನ ಉಪಯೋಗಗಳ ಬಗ್ಗೆ ತೀವೃವಾದ ಸಂಶೋಧನೆಗಳು ಆರಂಭವಾದವು. ೧೯೩೭ ರ ಸಮಯದಲ್ಲೇ ಬೇವಿನಿಂದ ಸಂಸ್ಕರಣಗೊಂಡ ರಸವನ್ನು ದವಸಧಾನ್ಯಗಳ, ಗಿಡಗಳ ಮೇಲೆ ಪಸರಿಸುವುದರಿಂದ ಮಿಡತೆಗಳ ಕಾಟ ತಪ್ಪುತ್ತದೆಂದು ಭಾರತದಲ್ಲಿಯೇ ಕಂಡುಹಿಡಿಯಲಾಗಿತ್ತು. ೧೯೬೦ರ ನಂತರ ಈ ನಿಟ್ಟಿನಲ್ಲಿ ಬಹಳ ಮಹತ್ವದ ಸಂಶೋಧನೆಗಳಾದವು. ಅಷ್ಟು ಹೊತ್ತಿಗೆ ಕೃತಕ ರಾಸಾಯನಿಕ ಕೀಟನಾಶಕಗಳು ಬಳಕೆಗೆ ಬಂದು, ಧಾನ್ಯರಕ್ಷಣೆಯಲ್ಲಿ ಯಶಸ್ವಿಯಾಗಿ ಉತ್ಪಾದನೆಯನ್ನು ಜಾಸ್ತಿ ಮಾಡುವ ಆಸೆಗೆ ಬಲಿಯಾಗಿ ವಾತಾವರಣವನ್ನು ತೀವ್ರ ರೂಪದಲ್ಲಿ ಕಲುಷಿತಗೊಳಿಸಿ ಪ್ರಾಕೃತಿಕ ಸಮತೋಲನವನ್ನೇ ತಲೆಕೆಳಗೆ ಮಾಡಲಾರಂಭಿಸಿದ್ದವು. ಈ ದುರಂತದ ಪ್ರಮಾಣ ಎಷ್ಟಿತ್ತೆಂದರೆ ಮಲೇಶಿಯಾದ ಏಳೂವರೆ ಲಕ್ಷ ಜನರು ಪ್ರತಿವರ್ಷವೂ ಏ ರಾಸಾಯನಿಕಗಳ ವಿಷಕ್ಕೆ ತುತ್ತಾಗುತ್ತಿದ್ದರು. ಅವರಲ್ಲಿ ಹದಿನಾಲ್ಕು ಸಾವಿ ಜನ ಸಾವನ್ನಪ್ಪುತ್ತಿದ್ದರು. ಪೆನಾಂಗ್ ನಲ್ಲಿರುವ ‘ಅಂತಾರಾಷ್ಟ್ರೀಯ ಕೀಟನಾಶಕಕ್ರಿಯಾ ಸಂಯೋಜನೆ’ ಎಂಬ ಸಂಸ್ಥೆ ಏ ಅಂಕಿ ಅಂಶಗಳನ್ನು ಸಂಗ್ರಹಿಸಿದೆ. ನೆಲದಲ್ಲಿ ಆಳಿದುಳಿದ ಈ ವಿಷಯುಕ್ತ ರಾಸಾಯನಿಕಗಳು ನೀರಿನ ಮೂಲಕ ಹಿರಿದು ಧಾನ್ಯಗಳು – ನೀರಿನಲ್ಲಿರುವ ಮೀನುಗಳು – ಎಲ್ಲವನ್ನೂ ಸೇರಿಬಿಡುತ್ತಿದ್ದವು.

ಕೀಟಕುಲ ನಿರೋಧಕ

ಕೃತಕ ರಾಸಾಯನಿಕಗಳ ಗಂಭೀರ ಪರಿಣಾಮಗಳೆಂದರೆ

೧) ಜೀವಾಣುಲೋಕದ ಸಮತೋಲನ ತಪ್ಪಿಸುವುದು

೨)ಕೀಟಗಳನ್ನು ನಿರ್ದಾಕ್ಷಿಣ್ಯವಾಗಿ ಸಾಯಿಸುವುದು.

ಇದರಿಂದಾಗಿ ಸಸ್ಯಗಳ ನೈಸರ್ಗಿಕ ಮಿತ್ರಕೀಟಗಳೂ ನಾಶವಾಗಿಬಿಡುತ್ತಿದ್ದವು. ಇದರಿಂದಾಗಿಯೇ ಈ ಕೀಟನಾಶಕಗಳೊಗೆ ಬದಲೀ ವ್ಯವಸ್ಥೆ ಮಾಡಲು ತಜ್ಞರು ಆಲೋಚಿಸತೊಡಗಿದ್ದು. ಹೀಗಾಗಿ ಬೇವಿನ ಮಹತ್ವವನ್ನು ವಿಜ್ಞಾನಿಗಳು ಮತ್ತೊಮ್ಮೆ ಶ್ರುತಪಡಿಸಿಕೊಂಡು ನಿರಪಾಯಕಾರಿ ಕೀಟನಾಶಕವನ್ನು ತರುವಂತಹ ಫಲಪ್ರದ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಎಲ್ಲ ಗಿಡಗಳೂ ಸಾವಯವ ರಾಸಾಯನಿಕಗಳನ್ನು ಧಾರಾಳವಾಗಿ ಹೊಂದಿರುತ್ತವೆ. ಬೇವಿನ ಮರವೂ ಅದರಲ್ಲೊಂದು. ಬೇವು ಆಝಾಡಿರಾಚಿನ್ (C35H44O16) ಎಂಬ ಟರ್ಪಿನಾಯಿಡ್ ಅಂಶವನ್ನು ಧರಿಸಿಕೊಂಡ ಗಿಡ. ಈ ಅಂಶ ಕ್ಸೈಲಮ್ ಮತ್ತು ಫ್ಲೋಯಮ್ ನಾಳಗಳ ಮೂಲಕ ಗಿಡದೆಲ್ಲೆಡೆ ಹರಡಿಕೊಂಡಿರುತ್ತದೆ. ಆ ಆಝಾಡಿರಾಚಿನ್ ತುಂಬ ಕಟುವಾದ, ಕೀಟಸಂತತಿ ನಿಯಂತ್ರಿಸಬಲ್ಲ ರಾಸಾಯನಿಕ. ಆದರೆ ಇದನ್ನು ಕೀಟಕುಲ ನಿರೋಧಕವಾಗಿ ಹೆಚ್ಚಾಗಿ ಬಳಸಲು ಆಗದಿರಲು ಹಲವಾರು ಕಾರಣಗಳಿವೆ. ಮೊದಲನೆಯದಾಗಿ ಇದನ್ನು ಇಲ್ಲಿಯವರೆಗೆ ವಾಣಿಜ್ಯಮಟ್ಟದಲ್ಲಿ ಉತ್ಪಾದಿಸಲು ಆಗುತ್ತಿರಲಿಲ್ಲ. ಈ ರಾಸಾಯನಿಕ ಉಳಿದೆಲ್ಲಾ ಕೀಟಗಳ ಮೇಲೆ ಮಾಡುವ ಪರಿಣಾಮಗಳನ್ನು ಆಳವಾಗಿ ಅಭ್ಯಸಿಸಿರಲಿಲ್ಲ. ಪ್ರಯೋಗಾಲಯದಲ್ಲಿ ಈ ರಾಸಾಯನಿಕದ ಕೃತಕ ಉತ್ಪಾದನೆ ಕೂಡ ಇನ್ನೂ ಸಾಧ್ಯವಾಗಿಲ್ಲ.

ಹೆಚ್ಚಿನ ಸಂಶೋಧನೆ

ಆದರೆ ಇತ್ತೀಚಿನ ಹಲವಾರು ಸಂಶೋಧನೆಗಳು ಬೇವಿನ ಸಾಮರ್ಥ್ಯವನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುವ ನಿಟ್ಟಿನಲ್ಲಿ ಯಶಸ್ಸನ್ನು ಪಡೆದಿದೆಯೆಂದೆ ಹೇಳಬೇಕು. ೧೯೭೮ರಲ್ಲಿ ಪಶ್ಚಿಮ ಜರ್ಮನಿಯ ವಿಜ್ಞಾನಿಗಳು ಬೇವಿನ ‘ಕೀಟಕುಲ ನಿರೋಧಕ’ ಗುಣವನ್ನುಸಮರ್ಥ ದಾಖಲೆಗಳೊಂದಿಗೆ ಸಿದ್ಧಮಾಡಿ ತೋರಿಸಿದರು. ಆಝಾಡಿರಾಚಿನ್ ಕೀಟಗಳ ಚರ್ಮವನ್ನು ಸುಲಿಯುವುದರ ಜೊತೆಗೆ ಅಸಮತೋಲನ ಕಳೆದು ಅಷ್ಟಾವಕ್ರತೆಯನ್ನೂ ಉಂಟು ಮಾಡುವಷ್ಟು ಪ್ರಭಾವಶಾಲಿ ಎಂಬುದು ಪಶ್ಚಿಮಜರ್ಮನಿಯ ವಿಜ್ಞಾನಿಗಳು ತೋರಿಸಿ ಕೊಟ್ಟ ಸತ್ಯ. ಆಝಾಡಿರಾಚಿನ್ ಕೀಟಗಳ ಗರ್ಭ ಸಾಮಾರ್ಥ್ಯವನ್ನೇ ಕುಗ್ಗಿಸುತ್ತದೆ ಸಾವಿರಾರು ಮೊಟ್ಟೆಗಳನ್ನಿಡಬೇಕಾದ ಕೀಟ ಕೆಲವೇ – ಅವೂ ಫಂಗಸ್ ಗಳ ಆಕ್ರಮಣಕ್ಕೊಳಗಾಗುತ್ತವೆ, ಮೊಟ್ಟೆಗಳನ್ನು ಇಡಲೂ ವಿಫಲವಾಗುತ್ತದೆ. ಹೀಗೆ ಮಿಡತೆ ಮತ್ತಿತ್ತರ ಸಣ್ಣಪುಟ್ಟ ಕೀಟಗಳ ಮರುಸಂತತಿಯನ್ನು ಶೇ. ೯೫ರಷ್ಟು ಕಡಿಮೆ ಮಾಡುತ್ತದೆ ಈ ಬೇವುರಸ! (ಸಾವಿರನೇ ಒಂದು ಗ್ರಾಮ್ ಆಝಾಡಿರಾಚಿನ್ ರಸದಿಂದ ಈ ಪರಿಣಾಮ ಸಾಧ್ಯವೆಂದು ೧೯೭೦ರಲ್ಲಿಯೇ ಬ್ರಿಟನ್ ನ ಸಂಶೋಧಕರು ತಕ್ಕಮಟ್ಟಿಗೆ ಅರಿತಿದ್ದರು.)

‘ಸಾರ’ ಸಂಗ್ರಾಹಕ

ಫಿಲಿಫೈನ್ಸ್ ‘ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆ’ಯ ಸಂಶೋಧನೆ ಬಹಳ ಕೀಟಗಳನ್ನು ಬೇವುರಸದಿಂದ ನಾಶಮಾಡುವ ಬಗ್ಗೆ ಸಂಶೋಧಿಸಿದ ಜೊತೆಗೇ ಬೇವು ಸಾರಜನಕ ಸಂಗ್ರಹ ಮಾಡುವ ಸಮರ್ಥ ಸಸ್ಯವೆಂದೂ ಈ ಸಂಸ್ಥೆ ಸ್ಥಿರೀಕರಿಸಿತು. ಸಾರಜನಕವನ್ನು ನೆಲ ಕರಗಿಸಿಕೊಳ್ಳಲು ಸಹಕರಿಸುವ ಏಡಿ, ಸಿಗಡಿ ಮುಂತಾದ ಹೊಲವಾಸೀ ಅಷ್ಟಪದಿಗಳ ಸಂತತಿಯನ್ನು ಕಡಿಮೆಮಾಡಿ ಸಾರಜನಕ ನೆಲದಲ್ಲೇ ‘ಸಾರಯುಕ್ತ’ವಾಗಿ ಉಳಿಯುವಂತೆ ಮಾಡುವ ಬೇವಿನೆಣ್ಣೆ ತುಂಬಾ ಉಪಯುಕ್ತವೆಂದು ತಿಳಿಯಲಾಗಿದೆ.

ಬೇವಿನ ಬಗ್ಗೆ ಅಧ್ಯಯನ ನಡೆಸಿದ ‘ಕೇಂದ್ರ ತಂಬಾಕು ಅಧ್ಯಯನ ಸಂಸ್ಥೆ’ಯ ಜಿ.ಬಿ ಜೋಶಿ ಕಂಡುಹಿಡಿದ ಸಂಗತಿಗಳು ಇನ್ನೂ ಕುತೂಹಲದಾಯಕ. ತಂಬಾಕಿನ ಗಿಡದಲ್ಲಿ ಬೆಳೆದ ಸಾವಿರಾರು ಬೀಜಗಳನ್ನು ತಿಂದು ನಾಶಮಾಡುವ ಒಂದು ರೀತಿಯ ಮಿಡತೆಯನ್ನು ಬೇವುಬೀಜದ ತಿರುಳು ಪಡೆದಿದೆ! ಇದರಿಂದಾಗಿ ತಂಬಾಕಿಗೂ ರಕ್ಷಣೆ; ನೆಲಕ್ಕೆ ಹರಡಲ್ಪಟ್ಟ ಈ ತಿರುಳಿನಿಂದ ಇನ್ನಷ್ಟು ಸಾರಜನಕದ ಸಂಗ್ರಹಣೆ. ಇದಲ್ಲದೆ ಬೇವಿನೆಣ್ಣೆಯನ್ನೂ ತಂಬಾಕು ಗಿಡಗಳಿಗೆ ಹಚ್ಚುವುದಕ್ಕೆ ಉಪಯೋಗಿಸುತ್ತಾರೆ. ಈ ಬೇವಿನೆಣ್ಣೆ ವಿಷವಲ್ಲ ಎಂದು ಹಾಲೆಂಡ್‌ನ ಸಂಶೋಧನೆಯೊಂದು ತಿಳಿಸುತ್ತದೆ.

ನೈಜೀರಿಯಾದಲ್ಲಿ ಇನ್ನೊಂದು ಅಂಶವನ್ನು ಗುರುತಿಸಲಾಗಿದೆ. ಬೇವಿನ ಮರದ ಬೇರುಗಳು ಆಳವಾಗಿ ನೆಲಕ್ಕಿಳಿದು ಪೋಷಕಾಂಶಗಳನ್ನು ಹೀರಿ ಮರದ ಎಲೆಗಳಿಗೆ ತಲಪಿಸುತ್ತದೆಯಷ್ಟೇ? ಈ ಎಲೆಗಳು ಉದುರಿ ನೆಲದ ಮೇಲ್ಪದರದಲ್ಲಿ ಹರಡಿ ಗಿಡ್ಡ ಬೇರಿನ ಗಿಡಗಳಿಗೆ ಪೋಷಕಾಂಶಗಳನ್ನು ಸರಬರಾಜು ಮಾಡುತ್ತದೆ.

ಭಾರತವೂ ಬೇವಿನ ಉಪಯೋಗಗಳನ್ನು ಕುರಿತ ಸಂಶೋಧನೆಯಲ್ಲಿ ಹಿಂದೆ ಬಿದ್ದಿಲ್ಲ. ಹೈದರಾಬಾದ್‌ನಲ್ಲಿರುವ ‘ಪ್ರಾಂತೀಯ ಸಂಶೋಧನಾ ಪ್ರಯೋಗಾಲಯ’ದ ನಿರ್ದೇಶಕರಾದ ಡಾ|| ಎ.ವಿ ರಾಮರಾವ್ ಅವರ ಮಾತಿನಲ್ಲೇ ಹೇಳುವುದಾದರೆ, “ಬೇವಿನಿಂದ ಕೀಟಗಳು ಕಾಳು ತಿನ್ನದಂಥೆ ನಿರೋಧಿಸುವ,ವಿಷವಲ್ಲದ, ನಿರಪಾಯಕಾರಿ ಕೀಟನಾಶಕ ಉತ್ಪಾದಿಸಬಹುದು. ಅದು ಕಾಂಡ ಕೊರೆಯುವ ಹುಳು ಹತ್ತಿ ತಿನ್ನುವ ಹುಳು, ವೈರಸ್ ಮತ್ತಿತರ ಸೂಕ್ಮ್ಷಾಣು ಜೀವಿಗಳನ್ನು ವಿರೋಧಿಸುವ ಒಂದು ಪ್ರಬಲ ರಾಸಾಯನಿಕ ಅಸ್ತ್ರ. ಈ ಆರೋಗ್ಯಕರ ಕೀಟನಾಶಕದ ವಾಣಿಜ್ಯ ಉತ್ಪಾದನೆ ೧೯೮೮ರ ಹೊತ್ತಿಗೆ ಪ್ರಾರಂಭವಾಗಬಹುದು. ಕೀಟನಾಶಕದ ಉತ್ಪಾದನೆಯ ಜೊತೆಗೇ ಉಳಿಯುವ ರಸ ವಿಷವಲ್ಲದ ಕಹಿಯಲ್ಲದ ವಾಸನೆಯಿಲ್ಲದ ದ್ರವ. ಅಷ್ಟೇ ಅಲ್ಲ ಬೇವಿನೆಣ್ಣೆಯನ್ನು ಸರಿಯಾಗಿ ಸಂಸ್ಕರಣಗೊಳಿಸಿದ ನಂತರ ಅಡುಗೆಗೂ ಬಳಸಬಹುದು.

‘ನೀಮ್‌ಕೇಕ್ ‘ ಕ್ರಾಂತಿ

ಹೈದರಾಬಾದ್ ‘ರಾಷ್ಟ್ರೀಯ ಪೋಷಕಾಂಶ ಸಂಸ್ಥೆ’ ‘ನೀಮ್‌ಕೇಕ್’ ಕಂಡುಹಿಡಿದಿದೆ. ಕೆಟ್ಟವಾಸನೆ ಮತ್ತು ಕಹಿತೆಗೆದ ಈ ಕೇಕ್ ಪ್ರಾಣಿಗಳಿಗೆ ಪುಷ್ಟಿಕರವಾದ ಆಹಾರ. ಇದೇ ಕೇಕನ್ನು ಸೋಪು ತಯಾರಿಸಲೂ ಉಪಯೋಗಿಸುತ್ತಾರೆ. ಪೂನಾದ ‘ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ’ ಹೆಚ್ಚು ಸುರಕ್ಷಿತವಾದ,ಸರಳ,ಕೀಟ ನಿಯಂತ್ರಣವನ್ನು ಕಂಡುಹಿಡಿಯುವ ಹಾಡಿಯಲ್ಲಿದ್ದು ‘ನೀಮ್‌ರಿಚ್-೧’ ಮತ್ತು ‘ನೀಮ್‌ರಿಚ್-೨’ ಈಗಾಗಲೇ ತಯಾರಿಕೆಯ ಹಂತದಲ್ಲಿದೆ. ಭಾರತದ ಕೆಲ ವಿಜ್ಞಾನಿಗಳು ಬೇವಿನೆಣ್ಣೆಯನ್ನು ಸ್ತ್ರೀಯರು ಬಳಸಬಹುದಾದ ಜನನ ನಿಯಂತ್ರಣ ರಾಸಾಯನಿಕವಾಗಿಯೂ ಉಪಯೋಗಿಸಬಹುದೇ ಎಂಬ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ದಾರೆ.

ನೆಲಕ್ಕೆ ಸಾರಜನಕಯುಕ್ತ ಯೂರಿಯಾ ಹಾಕಿದಾಗ, ಸಾರಜನಕ ಅರ್ಧಾಂಶ ಬಿಸಿಲು ಮತ್ತು ಮಳೆಯ ಪ್ರಬಾವದಿಂದಾಗಿ ಮಾಯವಾಗುತದೆ. ಕೆಲವೊಮ್ಮೆ ನೀರಿನ ಮೂಲಕ ಸರೋವರಗಳಲ್ಲಿ ಸೇರಿ ಮಾಲಿನ್ಯ ಉಂಟುಮಾಡುತ್ತದೆ. ಅಮೋನಿಯಾ ಅಥವಾ ಸಾರಜನಕದ ಅನಿಲವಾಗಿ ಮಾರ್ಪಡುವುದೂ ಉಂಟು. ಇದಕ್ಕೆ ನೆಲದಲ್ಲಿದ್ದುಕೊಂಡು ಸಾರಜನಕವನ್ನು ಕ್ಷಯಿಸುವಂತೆ ಮಾಡುವ ಸೂಕ್ಷ್ಮಾತಿಸೂಕ್ಷ್ಮ ಬ್ಯಾಕ್ಟೀರಿಯಾಗಳು ಕಾರಣ.ನೀಮ್‌ಕೇಕನ್ನು ಯೂರಿಯಾಗೆ ಸವರಿ ನೆಲಕ್ಕೆ ಹರಡಿದರೆ, ಈ ಸೂಕ್ಷ್ಮಾಣುಗಳ ಬೆಳವಣಿಗೆ ನಿಲ್ಲುತ್ತದೆ.ಇದರಿಂದಾಗಿ ಶೇ.೧೫ ರಿಂದ ೨೦ರಷ್ಟು ಸಾರಜನಕದ ಅಂಶ ೨೦ರಷ್ಟು ಸಾರಜನಕದ ಅಂಶ ಹೆಚ್ಚಾಗಿ ನೆಲದಲಲ್ಲುಳಿಯುತ್ತದೆ ಹೀಗೆ ಗೊಬ್ಬರದ ಸಾಮರ್ಥ್ಯವನ್ನು ಶೇ.೧ರಷ್ಟು ಹೆಚ್ಚಿಸಿದರೂ ಸಾಕು. ಒಂದೂವರೆ ಲಕ್ಷ ಟನ್ ಹೆಚ್ಚು ಆಹಾರ ಉತ್ಪಾದನೆಯಾಗುತ್ತದೆ!

ಈಗ ನೀಮ್‌ಕೇಕನ್ನು ಟೊಮೆಟೋ, ಕೋಸುಗಡ್ಡೆ, ಹೂಕೋಸು ,ಆಲೂಗಡ್ಡೆ , ದ್ರಾಕ್ಷಿಬೆಳೆಗಳಿಗೆ ಉಪಯೋಗಿಸಲಾಗುತ್ತಿದೆ. ಫಿಲಿಫೈನ್ಸ್‌ನ ಮನಿಲಾದ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯ ಪ್ರಕಾರ ನೀಮ್‌ಕೇಕ್‌ನಿಂದಾಗಿ ಭತ್ತದ ಫಸಲಲು ಹೆಕ್ಟೇರಿಗೆ ೧೩ ಟನ್ನಿನಷ್ಟು ಹೆಚ್ಚುತ್ತದೆ. ಆಂಧ್ರಪ್ರದೇಶದಲ್ಲಿ ರೈತ – ಕೃಷಿಕರು ತಮ್ಮ ದನಕರುಗಳಿಗೆ ನೀಮ್‌ಕೇಕನ್ನೇ ಮುಖ್ಯ ಆಹಾರವನ್ನಾಗಿ ಕೊಡುತ್ತಿದ್ದಾರೆ.

ಅನೀಕ ಉದ್ಯಮಗಳಲ್ಲಿ ಬೇವು ಕಚ್ಚಾ ಮಾಲಾಗಿ ಉಪಯೋಗಿಸ್ಪಡುತ್ತಿದೆ. ಸೋಪು, ಟೂತ್‌ಪೇಸ್ಟ್‌ಗಳ ತಯಾರಿಕೆ, ಔಷಧ ಕಾರ್ಖಾನೆಗಳಲ್ಲಿ ಬೇವಿನ ಉಪಯೋಗ ಹೆಚ್ಚಿದೆ. ಔರಂಗಾಬಾದ್‌ನ ಸರ್ಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಬೇವಿನ ಎಲೆಗಳ ರಸ ಇಲಿಗಳ ಜನನಸಾಮರ್ಥ್ಯವನ್ನು ಆರುವಾರುಗಳ ಕಾಲ ಸ್ಥಗಿತಗೊಳಿಸತ್ತದೆಂದು ತೋರುಸಲಾಗಿದೆ. ಬೇವಿನೆಣ್ಣೆ ಮನವ ಸಂತಾನ ನಿಯಂತ್ರಣದಲ್ಲೂ ಕ್ರಾಂತಿಕಾರಿ ಔಷಧವಾಗುವ ಎಲ್ಲಾ ಲಕ್ಷಣಗಳೂ ಇವೆ.

ಭಾರತದಲ್ಲಿ ವರ್ಷಕ್ಕೆ ಕನಿಷ್ಠ ನಾಲ್ಕು ಲಕ್ಷ ಟನ್ನುಗಳಷ್ಟು ಬೇವಿನ ಬೀಜದ ಉತ್ಪಾದನೆಯಾಗುತ್ತದೆ. ಆದರೆ ಅದರ ಒಟ್ಟಾರೆ ಐದನೇ ಒಂದಂಶವನ್ನು ಮಾತ್ರ ಸಂಗ್ರಹಿಸಿ ಸೋಪು- ಎಣ್ಣೆ – ಔಷಧಗಳ ತಯಾರಿಕೆಗೆ ಉಪಯೋಗಿಸಲಾಗುತ್ತಿದೆ. ಭಾರತದಲ್ಲಿ ಸುಮಾರು ಎರಡು ಕೋಟಿ ಬೇವಿನ ಮರಗಳು ಕೇವಲ ರಸ್ತೆ ಬದಿಯಲ್ಲೇ ಬೆಳೆದು ನೆರಳು ಕೊಡುತ್ತಿವೆ. ಕೃಷಿಕ ಸಮೂಹದ ಅನೇಕಾನೇಕ ಅಗತ್ಯಗಳಿಗೆ ಸಮರ್ಥ ಸಹಾಯ ಹಸ್ತ ನೀಡಬಲ್ಲ ಬೇವು ಕೃಷಿಯಕರ ಕಲ್ಪವೃಕ್ಷವೇ ಆದೀತು.

Share.
Leave A Reply Cancel Reply
Exit mobile version