ಥ್ರಿಲ್ಲರ್‌ಗಳನ್ನು ನೋಡುವಾ ಅಂತ ಇತ್ತೀಚೆಗೆ ಹುಡುಕಿದಾಗ ಸಿಕ್ಕಿದ ‘ಟ್ರಾನ್ಸ್‌ಸೈಬೀರಿಯನ್’ ಎಂಬ ಸಿನೆಮಾ ನೋಡಿ ನಾನು ತತ್ತರಿಸಿದೆ. ಬ್ರಾಡ್ ಆಂಡರ್‌ಸನ್ ನಿರ್ದೇಶನದ ಈ ಸಿನೆಮಾ ಅಪ್ಪಟ ಶಾಸ್ತ್ರೀಯ ಸಸ್ಪೆನ್ಸ್, ಆಕ್ಷನ್, ಥ್ರಿಲ್ಲರ್‌ಗಳ ಸಾಲಿಗೆ ಸೇರುತ್ತೆ. ಇನ್ನೇನು ಕೆಲವೇ ವಾರಗಳಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಪ್ರೇಮಿಗಳ ಮೇಲೆ ದಾಳಿ ಮಾಡಲಿರೋ ‘ವ್ಯಾನಿಶಿಂಗ್ ಆನ್ ದಿ ಸೆವೆನ್ಥ್ ಸ್ಟ್ರೀಟ್’ ಸಿನೆಮಾದ ನಿರ್ದೇಶಕನೂ ಆಗಿರುವ ಬ್ರಾಡ್ ಆಂಡರ್‌ಸನ್ ಬಹುಶಃ ಈ ಕಾಲದ ಅತ್ಯುತ್ತಮ ಥ್ರಿಲ್ಲರ್ ಸಿನೆಮಾ ನಿರೂಪಕ. ಬರೀ ‘ಟ್ರಾನ್ಸ್‌ಸೈಬೀರಿಯನ್’ (೨೦೦೮) ನೋಡಿ ಈ ಮಾತು ಹೇಳುತ್ತಿಲ್ಲ. ‘ಸೆಶನ್ ೯’ ಮತ್ತು ‘ದಿ ಮೆಶಿನಿಸ್ಟ್’ ಎಂಬ ಈತನ ಇನ್ನೆರಡು  ಸಿನೆಮಾಗಳನ್ನೂ ನೋಡಿ ಸುಸ್ತಾಗಿ ಹೀಗೆ ಬರೆಯುತ್ತಿರುವೆ.

ಬೀಜಿಂಗ್‌ನಿಂದ ಮಾಸ್ಕೋಗೆ ಸೈಬೀರಿಯಾ ಹಾದುಹೋಗುವ ರೈಲು ಹತ್ತಿದ ಅಮೆರಿಕನ್ ಪ್ರವಾಸಿ ದಂಪತಿ – ರಾಯ್ ಮತ್ತು ಜೆಸ್ಸೀ-  ಇವರಿಬ್ಬರ ಸುತ್ತ ನಡೆಯುವ ಈ ಥ್ರಿಲ್ಲರ್ ಕೊನೆವರೆಗೂ ಸೈಬೀರಿಯಾದ ಚಳಿಯಂತೆ ತಣ್ಣಗೆ ಕೊರೆಯುತ್ತೆ. ಸಾಕಷ್ಟು ಸಹಜವಾಗೇ ಹರಿಯುವ ಈ ಕಥೆಯಲ್ಲಿ ಬೆನ್ ಕಿಂಗ್ ಸ್ಲೇ ಕೂಡಾ ಮಾದಕದ್ರವ್ಯ ಪತ್ತೇದಾರಿಯ ಪಾತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಕ್ಯಾಬಿನ್‌ನಲ್ಲೇ ಪಯಣಿಸುತ್ತಿದ್ದ ಕಾರ್ಲೋಸ್ ಮತ್ತು ಆತನ ಸ್ನೇಹಿತೆ ಅಬ್ಬಿಯ ಜೊತೆ ನಿಧಾನವಾಗಿ ಬೆಳೆಯುವ ಸ್ನೇಹ, ಕಾರ್ಲೋಸ್ ತೋರಿಸುವ ಮಾಟ್ರಿಯೋಶ್ಕಾ ಗೊಂಬೆಗಳು, ರಾಯ್‌ನ ತುಂಟಾಟದಿಂದಾಗಿ ಆತರೈಲು ಮಿಸ್ ಮಾಡ್ಕೊಳ್ಳೋದು – ಈ ಮಧ್ಯೆ ಕಾರ್ಲೋಸ್‌ನ ನಿಜ ಸ್ವರೂಪ ಪತ್ತೆಯಾಗೋದು – ಎಲ್ಲವೂ ರೈಲಿನ ಚುಕುಬುಕು ಸದ್ದಿನಲ್ಲಿ ಅನಾವರಣಗೊಳ್ಳುತ್ತ ನೀವು ಕಥೆಯೇ ಇಲ್ಲಿ ಹೀರೋ ಎಂಬ ನಿರ್ಧಾರಕ್ಕೆ ಬರುತ್ತೀರಿ.

 

ಅಂದಮೇಲೆ ನಿರ್ದೇಶಕ ಗೆದ್ದ ಹಾಗೆಯೇ. ಎಲ್ಲಿ ಎಂಥೆಂಥ ನಟರೂ ಕಥೆಯ ಪಾತ್ರಗಳಾಗಿ ಕರಗಿಹೋಗ್ತಾರೋ, ಅದೇ ಒಳ್ಳೇ ಸಿನೆಮಾ ತಾನೆ? ಅದಕ್ಕೇ ಬ್ರಾಡ್ ಆಂಡರ್‌ಸನ್ ನನಗೆ ಇಷ್ಟವಾದ. ಸಹಜವೇ ಎನ್ನಿಸಬಹುದಾದ ಸರಳ ಕಥೆಯನ್ನು ಇಷ್ಟು ಚೆನ್ನಾಗಿ ಹೆಣೆಯಬಹುದು; ಅದಕ್ಕೊಂದು ರೈಲಿನ ಲೊಕೇಶನ್ ಕೊಟ್ಟು, ಸೈಬೀರಿಯಾದಲ್ಲಿ ಅದನ್ನು ಹಾಯಿಸಿ ಪ್ರೇಕ್ಷಕರಿಗೆ ಭಯದ ಚಳಿ ಹಿಡಿಸಬಹುದು ಎಂದು ಆಂಡರ್‌ಸನ್ ಯೋಚಿಸಿದ್ದೆಲ್ಲ ಯಶ ಕಾಣುತ್ತೆ.

ಸೈಬೀರಿಯಾದಲ್ಲಿ ಈ ಥ್ರಿಲ್ಲರ್ ನಿರ್ಮಿಸೋ ಮೊದಲು ಒಬ್ಬ ಸೀರಿಯಲ್ ಕಿಲ್ಲರ್ ಪಾತ್ರ ಇರಬೇಕು ಎಂದು ಆಂಡರ್‌ಸನ್ ಯೋಚಿಸಿದ್ದ. ಆಮೇಲೆ ಸಹ-ಚಿತ್ರಕಥೆಗಾರ ವಿಲ್ ಕಾನ್‌ರಾಯ್ ಜತೆ ಚರ್ಚಿಸಿದ ಮೇಲೆ ಸೀರಿಯಲ್ ಕಿಲ್ಲರ್‌ಗಿಂತ ಹೆಚ್ಚು ವಿಶ್ವಾಸಾರ್ಹವಾದ ಪಾತ್ರ ರೂಪಿಸೋಣ ಅಂತ ನಿರ್ಧರಿಸಿದ. ಕಾಲೇಜು ಮುಗಿಸಿದ ನಂತರ ರೈಲಿನಲ್ಲಿ ಪ್ರವಾ ಮಾಡಿದ್ದ  ಆಂಡರ್‌ಸನ್‌ಗೆ ಲೊಕೇಶನ್ ಬಗ್ಗೆ ಗೊಂದಲವೇ ಇರಲಿಲ್ಲ. ಈ ಸಿನೆಮಾದಲ್ಲಿ ಜೆಸ್ಸೀಯೇ ಕಾರ್ಲೋಸ್‌ನನ್ನು ಸಾಯಿಸಿದ್ದಕ್ಕೂ ಆಂಡರ್‌ಸನ್ ಕಾರಣ ಕೊಡ್ತಾನೆ: `ಇದೊಂಥರ ದೋಸ್ತೋವ್‌ಸ್ಕಿ ಕಾದಂಬರಿಗಳ ಹಾಗೆ. ಪಾತ್ರಗಳು ಅಪರಾಧಪ್ರಜ್ಞೆಯಿಂದ ನರಳುತ್ತವೆ.’

ಸೈಬೀರಿಯಾದ ಮರಗಟ್ಟಿಸೋ ಚಳಿಯಲ್ಲಿ ಇಡೀ ಸಿನೆಮಾವನ್ನ ಶೂಟ್ ಮಾಡಿದ್ದಾದ್ರೂ ಹ್ಯಾಗೆ? ಮೊದಲು ರೈಲಿನ ಒಳಗೆ ನಡೆಯುವ ಕಥೆಯನ್ನು ಚಿತ್ರೀಕರಣ ಮಾಡಿ ಮುಗಿಸಿದ ಆಂಡರ್‌ಸನ್ ಆಮೇ ಹೊರಗೆ ಬಂದರೆ ಚಳಿಯೇ ಇರಲಿಲ್ಲ; ಹಿಮವೂ ತೀರಾ ಕಡಿಮೆ ಇತ್ತು. ಜನವರಿವರೆಗೂ ಕಾದ ಆಂಡರ್‌ಸನ್ ಮೈನಸ್ ೩೦ ಡಿಗ್ರಿ ತಾಪಮಾನದ ಚಳಿಯಲ್ಲೇ ಚಿತ್ರೀಕರಣ ಆರಂಭಿಸಿದ. ಕ್ಯಾಮೆರಾ ಹಲವು ಬಾರಿ ಕೈಕೊಟ್ಟಿತು. ರೈಲು ಸಹಾ ಕೈ ಕೊಡ್ತು. ರೈಲಿನ ಬೋಗಿಯೊಳಗೆ ಎರಡು ಕ್ಯಾಮೆರಾ ಇಟ್ಟು ಶೂಟ್ ಮಾಡಿದ್ದೂ ತುಂಬಾ ಕಷ್ಟಾನೇ ಆಯ್ತು ಎಂದು ಆಂಡರ್‌ಸನ್ ನೆನಪಿಸಿಕೊಳ್ತಾನೆ.

ತನ್ನ ಮೇಲೆ ಕುಬ್ರಿಕ್, ಹಿಚ್‌ಕಾಕ್ ಮತ್ತು ರೋಮಾನ್ ಪೋಲಾನ್ಸ್ಕಿ ಪ್ರಭಾವ ಬೀರಿದ್ದಾರೆ ಎಂದು ಮುಚ್ಚುಮರೆಯಿಲ್ಲದೆ ಆಂಡರ್‌ಸನ್ ಒಪ್ಪಿಕೊಳ್ತಾನೆ.

ಈ ಥ್ರಿಲ್ಲರ್ ವಿಷಯ ಹಾಗಿರಲಿ, ‘ದಿ ಮೆಶಿನಿಸ್ಟ್’ (೨೦೦೪) ಅನ್ನೋ ಇನ್ನೊಂದು ಸೈಕೋ ಥ್ರಿಲ್ಲರ್‌ನ್ನು ನೀವು ನೋಡಲೇಬೇಕು. ಅದರಲ್ಲಿ ಹೀರೋ ಸಹಾ ಇದಾನೆ. ಈ ಹೀರೋ ಪಾತ್ರಧಾರಿ ಇನ್ನಾರೂ ಅಲ್ಲ, ‘ಬ್ಯಾಟ್‌ಮನ್ ರಿಟರ್ನ್ಸ್’ ಅನ್ನೋ ಕಾಮಿಕ್ ಆಧಾರಿತ ಥ್ರಿಲ್ಲರ್‌ನ ಹೀರೋ ಪಾತ್ರಧಾರಿ – ಕ್ರಿಶ್ಚಿಯನ್ ಬೇಲ್. ‘ಸೆಶನ್ ೯’ನಲ್ಲಿ ಅವನೇ ಕ್ರಿಶ್ಚಿಯನ್ ಬೇಲ್ ಎಂದು ನೀವು ಟೈಟಲ್ ಕಾರ್ಡ್ ನೋಡಿಯೇ ತಿಳ್ಕೋಬೇಕಷ್ಟೆ! ಯಾಕೆ ಗೊತ್ತ? ಈ ಸಿನೆಮಾದ ಪಾತ್ರ ತುಂಬಾ ತೆಳ್ಳಗಿರೋ ವ್ಯಕ್ತಿಯದು. ಆದ್ದರಿಂದ ಕ್ರಿಶ್ಚಿಯನ್ ಬೇಲ್ ಸತತ ನಾಲ್ಕು ತಿಂಗಳುಗಳ ಕಾಲ ಹಸಿವಿನಿಂದ ತನ್ನ ದೇಹವನ್ನು ತಾನೇ ದಂಡಿಸಿಕೊಂಡ; ದಿನಾ ಒಂದು ಲೋಟ ಕಾಫಿ ಮತ್ತು ಒಂದು ಸೇಬುಹಣ್ಣು (ಅಥವಾ ಒಂದು ಕ್ಯಾನ್ ಟ್ಯುನಾ) ಸೇವಿಸುತ್ತ ಕಾಲ ಕಳೆದ. ಇದರ ಒಟ್ಟು ಕ್ಯಾಲೋರಿ ಮೊತ್ತ : ೨೭೫ ಕ್ಯಾಲೋರಿಗಳು ಮಾತ್ರ.  ಇಷ್ಟು ದಿನಗಳ ನಂತರ ಅವನು ಕಳಕೊಂಡಿದ್ದು ಬರೋಬ್ಬರಿ ೨೮ ಕಿಲೋಗಳು. ಶೂಟಿಂಗ್‌ಗೆ ರೆಡಿಯಾದ ಕ್ರಿಶ್ಚಿಯನ್ ಬೇಲ್‌ನ ತೂಕ ೫೪ ಕಿಲೋಗೆ ಇಳಿದಿದ್ದು ನೋಡಿ ವೈದ್ಯರು ಹೌಹಾರಿದರು. ‘ನೀನು ಮತ್ತಷ್ಟು ತೆಳ್ಳಗಾಗೋದು ಬೇಡ ಮಾರಾಯನೆ’ ಎಂದು ಅವನನ್ನು ವಿನಂತಿಸಿದರು. ‘ದಿ ಮೆಶಿನಿಸ್ಟ್’  ನಂತರ ಕ್ರಿಶ್ಚಿಯನ್ ಬೇಲ್ ಸರಿಯಾಗಿ ತಿಂದು ಉಂಡು ಮತ್ತೆ ದೇಹದಾರ್ಢ್ಯ ಬೆಳೆಸಿಕೊಂಡ. ಅದಾದ ಮೇಲೇ ‘ಬ್ಯಾಟ್‌ಮನ್ ರಿಟರ್ನ್ಸ್’  ಶೂಟಿಂಗ್ ಶುರುವಾಗಿದ್ದು!

ಸಿನೆಮಾದ ಪಾತ್ರಕ್ಕಾಗಿ ಒಬ್ಬ ಹೀರೋ ಹೀಗೆ ೨೮ ಕಿಲೋ ತೂಕ ಇಳಿಸಿಕೊಂಡಿದ್ದು ಬಹುಶಃ ಒಂದು ದಾಖಲೆ.

 

ಹಾಗಾದ್ರೆ ಈ ಸಿನೆಮಾ ಹ್ಯಾಗಿದೆ? ನರಪೇತಲ ಟ್ರೆವರ್ ರೆಜ್ನಿಕ್ ಒಂದು ಕಾರ್ಖಾನೆಯಲ್ಲಿ ಮೆಶಿನಿಸ್ಟ್. ಅವನ ತೆಳು ದೇಹವನ್ನು ನೋಡಿಯೇ ಉಳಿದ ಸಿಬ್ಬಂದಿಗಳು ಅವನಿಂದ ದೂರ ಇರ್‍ತಾರೆ. ಒಂದು ಸಲ ಮಿಲ್ಲರ್ ಅನ್ನೋ ಸಹಕಾರ್ಮಿಕನ ಕೈ ಯಂತ್ರದಲ್ಲಿ ಸಿಕ್ಕಿಕೊಂಡು ಕತ್ತರಿಸಿಹೋಗಲು ಟ್ರೆವರ್ ಕಾರಣನಾಗ್ತಾನೆ. ಆದರೆ ಐವಾನ್ ಅನ್ನೋ ಇನ್ನೊಬ್ಬ ಕೆಲಸಗಾರ ಟ್ರೆವರ್‌ನ ಪರವಾಗಿ ಅಪರಾಧವನ್ನು ತಾನೇ ಮಾಡಿದೆ ಅಂತ ಒಪ್ಪಿಕೊಳ್ತಾನೆ. ಹೀಗೆ ಟ್ರೆವರ್‌ಗೆ ಪದೇಪದೇ ಕಾಣಿಸಿಕೊಳ್ಳೋ ಐವಾನ್ ಯಾರು? ಅವನು ಕಾರ್ಮಿಕನಾಗಿ ಕಾರ್ಖಾನೆಯ ರಿಜಿಸ್ಟ್ರಿಯಲ್ಲಿ ಇರೋದೇ ಇಲ್ಲ. ಐವಾನ್ ಯಾರು ಎಂದು ಹುಡುಕುತ್ತ ಹೋಗುವ ಟ್ರೆವರ್‌ನ ವರ್ತನೆಗಳು ನಮ್ಮಲ್ಲಿ ಕನಿಕರವನ್ನೂ, ಪ್ರೀತಿಯನ್ನೂ, ಭಯವನ್ನೂ ಒಟ್ಟಿಗೇ ಹುಟ್ಟಿಸುತ್ತವೆ.

 

ಮುಂದೆ ಐವಾನ್ ಕಾರಿಗೆ ಬೇಕಂತ್ಲೇ ಡಿಕ್ಕಿ ಹೊಡೆಸಿಕೊಂಡು (ಅಪರಾಧದ ದೂರು ಇಲ್ದೇ ವಾಹನದ ಮಾಹಿತಿ ಕೊಡಲ್ಲ ಅಂತ ಪೊಲೀಸರು ಹೇಳಿರ್‍ತಾರೆ) ದೂರು ಕೊಟ್ಟ ಟ್ರೆವರ್‌ಗೆ ಇನ್ನೊಂದು ಆಘಾತ: ಆ ಕಾರು ಅವನದ್ದೇ!

ಈ ಸಿನೆಮಾ ಹೀಗೆ ಚಿತ್ರವಿಚಿತ್ರ ವಿದ್ಯಮಾನಗಳಿಂದ ನಮ್ಮ ತಲೆ ತಿನ್ನುತ್ತೆ ಅನ್ನೋದು ನಿಜ. ಆದರೆ ಎಲ್ಲದಕ್ಕೂ ಒಂದು ಥೀಮ್ ಇದೆ. ಮನುಷ್ಯನ ಚಿಂತನಾಪ್ರವಾಹ ಹ್ಯಾಗೆ ಹರಿಯುತ್ತೆ, ಅವನೊಳಗೆ ಕುದೀತಾ ಇರೋ ಭಾವಗಳು ಹೇಗೆ ವಾಸ್ತವದಲ್ಲಿ ಭ್ರಮೆಯಾಗಿಯೂ ನಿಜವೆಂಬಂತೆ ಘಟಿಸುತ್ತವೆ… ಇವನ್ನೆಲ್ಲ ಆಂಡರ್‌ಸನ್ ಸಕತ್ತಾಗಿ ರೂಪಿಸ್ತಾನೆ.

 

‘ಸೆಶನ್ ೯’ ಅನ್ನೋದು ಆಂಡರ್‌ಸನ್‌ನ ಹಳೆಯ (೨೦೦೪ರ) ಚಿತ್ರ. ಇದನ್ನು ನೀವು ಆಂಡರ್‌ಸನ್ ಹ್ಯಾಗೆ ಸಸ್ಪೆನ್ಸ್ ಥ್ರಿಲ್ಲರ್ ಮಾಡುತ್ತ ಬೆಳೆದ ಅಂತ ತಿಳಿಯೋದಕ್ಕೆ ನೋಡಬೇಕು. ಸ್ಟೀವನ್ ಸ್ಪಿಲ್‌ಬರ್ಗ್ ಕೂಡಾ ತನ್ನ ಮೊದಲ ದಿನಗಳಲ್ಲಿ ಸಾಮಾನ್ಯವಾದ, ಆದರೆ ಆ ಕಾಲದಲ್ಲಿ ವಿಭಿನ್ನವಾದ ಸಿನೆಮಾ ಮಾಡಿದ್ದು ಗೊತ್ತೇ ಇದೆ.  ಅದನ್ನೇ ಆಂಡರ್‌ಸನ್‌ನ ‘ಸೆಶನ್ ೯’ಗೂ ಅನ್ವಯಿಸಬಹುದು. ೧೯೮೫ರಲ್ಲೇ ಮುಚ್ಚಿಹೋದ ಡಾನ್‌ವರ್ಸ್ ಸ್ಟೇಟ್ ಆಸ್ಪತ್ರೆಯನ್ನು ನವೀಕರಣ ಮಾಡಲು ಬಂದ ಗೋರ್ಡೊನ್ ಫ್ಲೆಮಿಂಗ್ ಎಂಬ ವಯಸ್ಕನ ಮಾನಸಿಕತೆಯನ್ನು ಬಿಂಬಿಸುವ ಸಿನೆಮಾ ಇದು. ಈ ಸಿನೆಮಾವನ್ನು ಈ ದಶಕದ ೨೦ ಹಾರರ್ ಸಿನೆಮಾಗಳಲ್ಲಿ ಒಂದು ಎಂದು ಬ್ಲಡಿ ಡಿಸ್‌ಗಸ್ಟಿಂಗ್ ವೆಬ್‌ಸೈಟ್ ಕರೆದಿದೆ. ಕೆಟ್ಟ ಸಿನೆಮಾ ಎಂಬ ವಿಮರ್ಶೆಯೂ ಬಂದಿದೆ ಎನ್ನಿ.

೪೭ರ ಹರೆಯದಲ್ಲಿರೋ ಬ್ರಾಡ್ ಆಂಡರ್‌ಸನ್ ಮುಂದಿನ ದಿನಗಳಲ್ಲಿ ನಮ್ಮನ್ನೆಲ್ಲ ಮತ್ತಷ್ಟು  ಹೆದರಿಸೋದ್ರಲ್ಲಿ ನನಗಂತೂ ಸಂಶಯವಿಲ್ಲ. ಸದ್ಯ ‘ವ್ಯಾನಿಶಿಂಗ್ ಆನ್ ೭ತ್ ಸ್ಟ್ರೀಟ್’ ಸಿನೆಮಾದ ನಿರೀಕ್ಷೆಯಲ್ಲಿದ್ದೇನೆ. ಡೂಮ್ಸ್‌ಡೇ ಸಿನೆಮಾ ಕಲ್ಟ್‌ಗೆ ಸೇರಿದ ಈ ಸಿನೆಮಾದ ಕಥೆ ಹೀಗಿದೆಯಂತೆ: ಒಂದಿನ ಡೆಟ್ರಾಯಿಟ್ ನಗರದಲ್ಲಿ ಕೆಲವರು ಬೆಳಗ್ಗೆ ಎದ್ದು ನೋಡಿದರೆ ಉಳಿದವರೆಲ್ಲರೂ ಅಲ್ಲಲ್ಲೇ, ಉಟ್ಟ ಉಡುಗೆಯನ್ನೂ ಬಿಟ್ಟು ಮಂಗಮಾಯವಾಗಿರುತ್ತಾರೆ. ಈ ಕಥೆ ಮುಂದೆ ಹೇಗೆ ಬೆಳೆಯುತ್ತೆ ಅಂತ ಗೊತ್ತಾಗಿಲ್ಲ. ಕಾಯೋಣ!

 

Share.
Leave A Reply Cancel Reply
Exit mobile version