ಬೇಲೂರಿನ ಪೂರ್ಣಪ್ರಜ್ಞ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು.
ಬೇಡ ಬೇಡವೆಂದರೂ ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆದು ತಂದಿರುವುದರಿಂದ ನಾನು ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲೇಬೇಕಿದೆ. ಭಾಷಣವೆಂದರೆ ಭಯಪಡುವ ನಾನು ಎಲ್ಲಿಯಾದರೂ ತಪ್ಪಾಗಿ ಮಾತನಾಡಿದರೆ ಆಮೇಲೆ ತಿಳಿಸಿ! ನನ್ನ ಭಾಷಣವು ಹೆಚ್ಚಾಗಿ ಹೈಸ್ಕೂಲು ಮಕ್ಕಳನ್ನೇ ಉದ್ದೇಶಿಸಿದೆ. ಒಂದು ಕಾಲದಲ್ಲಿ ಕಾಗದದಲ್ಲಿ ಬರೆಯುವುದೇ ದಿನಚರಿಯಾಗಿದ್ದ ನನಗೀಗ ಗಣಕಯಂತ್ರವಿಲ್ಲದೆ ಬರೆಯುವುದೇ ಕಷ್ಟವಾಗಿ ಪರಿಣಮಿಸಿದೆ. ನಾನೀಗ ಸಂಚಾರಿ ದೂರವಾಣಿ (ಮೊಬೈಲ್), ಮಿಂಚಂಚೆ (ಈ-ಮೈಲ್), ದೂರದರ್ಶನ (ಟೆಲಿವಿಜನ್), ರೇಡಿಯೋ ಇಲ್ಲದೆ ಸಂಪರ್ಕವನ್ನು ಸಾಧಿಸುವುದೇ ಕಷ್ಟ ಎಂದೆನ್ನಿಸಿದೆ. ಸಹಸ್ರಾರು ವರ್ಷಗಳ ಹಿಂದೆ ಕೊಳೆತು ದ್ರವ್ಯವಾದ ಪೆಟ್ರೋಲನ್ನು ಇಂಧನವಾಗಿ ಬಳಸುವ ವಾಹನವಿಲ್ಲದೆ ನಾನು ನಗರದಲ್ಲಿ ಸಂಚರಿಸಲಾರೆ; ಊರೂರು ಸುತ್ತಲಾರೆ. ಯಂತ್ರಗಳು ಶುದ್ಧೀಕರಿಸಿದ ದಿನಸಿ ವಸ್ತುಗಳನ್ನು ಕೊಂಡು, ಗಣಕದಲ್ಲೇ ಬಿಲ್ ಪಡೆದು, ಕಾರ್ಡಿನ ಮೂಲಕವೇ ಪಾವತಿ ಮಾಡುವುದು ಈ ಜಗತ್ತಿನ ಹಲವರ ಸಹಜ ಕೃತ್ಯವಾಗಿದೆ. ಮನುಷ್ಯನ ಈ ‘ಚಕಚಕನೆ ನಡೆಯುವ ಅಗತ್ಯದಿಂದ ಇಂಧನದ ಬೇಡಿಕೆ ಹೆಚ್ಚಿದೆ. ತೈಲಸಮರಗಳು ಸಾಮಾನ್ಯವಾಗಿವೆ. ಕಲ್ಲಿದ್ದಲಿನ ಬಳಕೆ ಇನ್ನಿಲ್ಲದ ವೇಗದಲ್ಲಿ ಹೆಚ್ಚಳ ಕಂಡಿದೆ. ಈಗಿರುವ ಪೆಟ್ರೋಲಿಯಂ ಮೂಲಗಳು ಒಣಗುವ ಭೀತಿಯಲ್ಲಿ ಮುಂದಿನ ಶತಮಾನಗಳಿಗೆ ಬೇಕಾಗುವ ಪೆಟ್ರೋಲಿಯಂಗಾಗಿ ಈಗಲೇ ಗಣಿಗಳ ಸರ್ವೇಕ್ಷಣೆ ನಡೆದಿದೆ. ನೈಸರ್ಗಿಕ ಅನಿಲದ ಕೊಳವೆಗಳು ಭೂಮಿಯಾದ್ಯಂತ ಹರಿದಿವೆ.
ಆದರೂ ನಾನು ತುಂಬಾ ಆಸೆವಾದಿ ಮತ್ತು ಆಶಾವಾದಿ. ಆದ್ದರಿಂದ ಇವತ್ತು ನಿಮಗೆ ನನ್ನ ಐದು ಆಸೆಗಳನ್ನು ತಿಳಿಸುವ ಮನಸ್ಸಾಗಿದೆ.
ದೂರದ ಊರುಗಳಿಂದ ಬರುವ ಆಹಾರವನ್ನು ಪ್ಯಾಕ್ ಮಾಡಲೇಬೇಕು. ಅದಕ್ಕಾಗಿ ಸಾಕಷ್ಟು ಸಂಪನ್ಮೂಲ ಖರ್ಚಾಗುತ್ತದೆ. ಉದಾಹರಣೆಗೆ ಒಂದು ಹಣ್ಣಿನ ರಸದ ಪ್ಯಾಕೆಟ್ ನೋಡೋಣ. ಆರು ಪದರಗಳ ಟೆಟ್ರಾಪ್ಯಾಕ್ ಪೊಟ್ಟಣದಲ್ಲೇ ಹಣ್ಣಿನ ರಸ ಇರುತ್ತದೆ. ಆ ಹಣ್ಣಿನ ರಸವು ತಿಂಗಳುಗಟ್ಟಲೆ ಹಾಳಾಗದಂತೆ ಹಲವಾರು ಪ್ರಿಸರ್ವೇಟಿವ್‌ಗಳನ್ನು ಹಾಕಿರುತ್ತಾರೆ. ಈ ಹಣ್ಣು ಅಮೆರಿಕಾದಲ್ಲೋ, ಇನ್ನೆಲ್ಲೋ ಬೆಳೆದಿರುತ್ತದೆ. ಕೇವಲ ಒಂದು ಎ೪ ಕಾಗದ ತಯಾರಿಗೆ ೨೪ ಲೀಟರ್ ನೀರು ಬೇಕು. ಅಂದಮೇಲೆ ಆರು ಪದರಗಳ ಪ್ಯಾಕೆಟ್‌ನ್ನು ಮಾಡಲು ಎಷ್ಟು ಲೀಟರ್ ನೀರು ಖರ್ಚು ಮಾಡಿರಬಹುದು ಎಂದು ಯೋಚಿಸಿ. ಆದರೆ ಅದರ ಒಳಗೆ ಇರುವುದು ೨೦೦ ಮಿಲಿ ಲೀಟರ್ ಕೃತಕ ಹಣ್ಣಿನ ರಸ!
ಆರು ಪದರದ ಪ್ಯಾಕ್‌ನಿಂದ ಇನ್ನೂ ಹಲವು ಅಪಾಯಗಳು ಆಗುತ್ತಿವೆ. ಸಾವಿರಾರು ಮೈಲುಗಳ ದೂರದಿಂದ ಹಡಗುಗಳಲ್ಲೋ, ವಿಮಾನಗಳಲ್ಲೋ ಭಾರತಕ್ಕೆ ಬಂದು ನಂತರ ಟ್ರಕ್ಕುಗಳಲ್ಲಿ ಬೇಲೂರಿಗೆ ಬರುವ ಈ ಪ್ಯಾಕುಗಳಿಗೆ ಸಾಗಾಣಿಕೆಯ ಖರ್ಚೂ ಸೇರಿಕೊಳ್ಳುತ್ತದೆ. ಸಾಗಾಣಿಕೆ ಎಂದಮೇಲೆ ಅದಕ್ಕೆ ಇಂಧನ ಖರ್ಚಾಗುತ್ತದೆ. ಹಡಗು, ವಿಮಾನಗಳಿಗೆ ಬಳಸುವ ಇಂಧನದಿಂದ ವಾಯುಮಾಲಿನ್ಯ ಆಗುತ್ತದೆ. ಗಾಳಿ ಕಲುಷಿತವಾಗುವುದು ಹೆಚ್ಚಿದರೆ ಏನಾಗುತ್ತದೆ? ಇದನ್ನೇ ಹವಾಗುಣ ವೈಪರೀತ್ಯ ಎಂದು ಕರೆಯುತ್ತಾರೆ.
ನಾವು ಕಾರು – ಬೈಕುಗಳನ್ನು ವೈಯಕ್ತಿಕವಾಗಿ ಹೆಚ್ಚೆಚ್ಚು ಬಳಸಿದಷ್ಟೂ ಇಂಧನಬಾಕರಾಗುತ್ತೇವೆ. ಈ ಇಂಧನ ಎಷ್ಟುದಿನ ಉಳಿಯುತ್ತದೆ? ‘ಖಯಾಮತ್ ಸೇ ಖಯಾಮತ್ ತಕ್ ಸಿನೆಮಾದ ಚಿತ್ರಕಥೆ ಬರೆದ ಮನ್ಸೂರ್ ಖಾನ್ ಎಂಬುವವರು ‘ದ ಥರ್ಡ್ ಕರ್ವ್’ ಎಂಬ ಸಂಶೋಧನಾ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಅವರು ಜಲವಿದ್ಯುತ್, ಪರಮಾಣು ವಿದ್ಯುತ್, ಜೈವಿಕ ಇಂಧನ, ಸೌರಶಕ್ತಿ, ಪಳೆಯುಳಿಕೆ ಇಂಧನ – ಈ ಐದು ಶಕ್ತಿಮೂಲಗಳನ್ನು ಎಷ್ಟೇ ಬಳಸಿದರೂ ಮನುಕುಲವು ಕೆಲವೇ ದಶಕಗಳಲ್ಲಿ ಇಂಧನ ಬಿಕ್ಕಟ್ಟು ಎದುರಿಸುತ್ತದೆ ಎಂದು ತಿಳಿಸಿದ್ದಾರೆ.
ಇಂಧನಮೂಲಗಳ ದಹನದಿಂದ ಮಾಲಿನ್ಯವಾಗುತ್ತಿದೆ. ಪರಮಾಣು ಸ್ಥಾವರಗಳ ಸ್ಥಾಪನೆಯಾದಾಗಿನಿಂದ ಈವರೆಗೂ ಹೊರಬಿದ್ದ ವಿಕಿರಣ ಕಸವನ್ನು ಎಲ್ಲೂ ಹೂತಿಡಲಾಗದೆ ಬಲಾಢ್ಯವೆಂದು ನಂಬಿದ ಕೊಳವೆಗಳಲ್ಲಿ ಅವುಗಳ ದಾಸ್ತಾನು ಮಾಡಲಾಗಿದೆ. ಸರ್ಕಾರಗಳು ಹೀಗೆ ಇಂಧನ ಕಸವನ್ನು ಪೇರಿಸುತ್ತಿದ್ದರೆ, ಜನ ವಿಷಪೂರಿತ ಪ್ಲಾಸ್ಟಿಕ್ ಕಸದ ಬೆಟ್ಟವನ್ನೇ ನಿರ್ಮಿಸುತ್ತಿದ್ದಾರೆ. ಕಾರ್ಖಾನೆಗಳು ಎಡಬಿಡದೆ ಹೊಗೆ, ವಿಷಜಲ, ಎಲ್ಲವನ್ನೂ ಕಾರುತ್ತ ಕುಡಿಯುವ ನೀರನ್ನೇ ಮಲಿನಗೊಳಿಸಿವೆ. ಅವುಗಳಿಂದ ತಯಾರಾದ ಘೋರ ವಿಷದ ರಾಸಾಯನಿಕಗಳನ್ನು ನಮ್ಮ ಹೊಲಗಳಲ್ಲಿ ಬಳಸಿ ನೆಲವೆಲ್ಲ ಕಟುವಿಷದ ಬಟ್ಟಲಾಗಿದೆ. ನಾವು ಉಡುವ ಬಟ್ಟೆಗಳಲ್ಲಿ, ನಾವು ಬಳಸುವ ಮಾರ್ಜಕಗಳಲ್ಲಿ, ಕುಡಿಯುವ ಔಷಧಿಗಳಲ್ಲಿ, ಅಡುಗೆ ಪದಾರ್ಥಗಳಲ್ಲಿ, ಸಾಧನ ಸಲಕರಣೆಗಳಲ್ಲಿ ಏನೆಲ್ಲ ಕಂಟಕಪ್ರಾಯ ವಸ್ತುಗಳು ಬೆರೆತಿವೆ ಎಂಬ ಪಟ್ಟಿಯನ್ನು ಮಾಡಲೂ ನಮಗೆ ಸಾಧ್ಯವಾಗುತ್ತಿಲ್ಲ.
ಹೇಗೆ ಬೇಕಾದರೂ ಇಂಧನವನ್ನು ಪಡೆಯಬಹುದೆಂಬ ಧಿಮಾಕಿನಿಂದಾಗಿಯೇ ನಾಗರಿಕತೆಯು ಇನ್ನಿಲ್ಲದ ವೇಗವನ್ನು ಪಡೆದುಕೊಂಡಿದೆ. ಈ ವೇಗ ಮತ್ತು ನಿಯಂತ್ರಣವೇ ಇಲ್ಲದ ಸಂಪನ್ಮೂಲಗಳ ಬಳಕೆಯಿಂದ ಬದುಕಿನ ಚಹರೆ ಬದಲಾಗಿದೆ. ಸುಮಾರು ಇನ್ನೂರು ವರ್ಷಗಳಿಂದ ನಡೆಯುತ್ತಿರುವ ಔದ್ಯಮೀಕರಣವು ಮನುಷ್ಯನ ವಿಷಯಾಸಕ್ತ ಲೋಲುಪ ಬದುಕಿಗೆ ಕಾರಣವಾಗಿದೆ.
ನಿಮ್ಮ ಮನೆಯಲ್ಲಿ ಬಳಸುವ ವಾಹನದ ಪೆಟ್ರೋಲು, ಡೀಸೆಲ್ಲು ಅರಬ್ ದೇಶಗಳಿಂದಲೇ ಬರುತ್ತದೆ. ಇದರಿಂದಾಗಿ ಲಕ್ಟಗಟ್ಟಲೆ ಕೋಟಿ ರೂ.ಗಳು ವಿದೇಶಿ ವಿನಿಮಯದಲ್ಲಿ ಭಾರತದಿಂದ ಹೊರಗೆ ಹೋಗುತ್ತಿದೆ. ನಾವು ಜೈವಿಕ ಇಂಧನ, ಸೌರಶಕ್ತಿ ಬಳಸಿ ಇಂಧನದ ಮೇಲೆ ಸ್ವಾವಲಂಬನೆ ಸಾಧಿಸುವುದು ಒಂದು ಅಗತ್ಯ. ಹಾಗೆಯೇ ಇಂಧನದ ಬಳಕೆಯನ್ನೇ ಕಡಿಮೆ ಮಾಡುವುದನ್ನೂ ಕಲಿಯಬೇಕು. ಸಾರ್ವಜನಿಕ ಸಾರಿಗೆಯಾದ ಬಸ್ಸು, ರೈಲುಗಳನ್ನೇ ಹೆಚ್ಚು ಬಳಸಬೇಕು.
- ೨೦೦೯ರಲ್ಲಿ ಯಾನ್ ಆರ್ಥಸ್ ಬರ್ಟ್‌ರಂಡ್ ನಿರ್ಮಿಸಿದ ‘ಹೋಮ್ ಎಂಬ ಸಾಕ್ಷ್ಯಚಿತ್ರವನ್ನು ನೋಡಿ. ಅದರಲ್ಲಿ ಇರುವ ನೂರಾರು ಪುಟ್ಟ ವಾಕ್ಯಗಳಲ್ಲಿ ಭೂಮಿಯ ಕಥೆಯಿದೆ; ವ್ಯಥೆಯಿದೆ; ಆಶಾಕಿರಣವೂ ಇದೆ.
- ೪೦೦ ಕೋಟಿ ವರ್ಷಗಳ ಹಿಂದೆ ಮೂಡಿದ ಈ ಭೂಮಿಯ ಮೇಲೆ ಮನುಷ್ಯ ಹುಟ್ಟಿ ಬರೀ ಎರಡು ಲಕ್ಷ ವರ್ಷಗಳಾದವು. ಆದರೆ ಇಡೀ ಭೂಮಿಯ ಚಹರೆಯನ್ನೇ ಮನುಷ್ಯ ಬದಲಿಸಿದ್ದಾನೆ. ಕೆಲವೇ ಸಾವಿರ ವರ್ಷಗಳ ಹಿಂದೆ ಆರಂಭವಾದ ಕೃಷಿಜೀವನದಲ್ಲಿ ಇಂದು ಜಗತ್ತಿನ ಅರ್ಧಕ್ಕರ್ಧ ಪಾಲು ಜನ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಮುಕ್ಕಾಲು ಪಾಲು ಜನ ತಮ್ಮ ಕೈಗಳಿಂದಲೇ ಬಿತ್ತಿ ಬೆಳೆಯುತ್ತಿದ್ದಾರೆ. ಕೃಷಿಭೂಮಿಯೀಗ ಹಾಳಾಗಿ ಮನುಷ್ಯ ಅಭಿವೃದ್ಧಿಪಡಿಸಿದ್ದ ತಳಿಗಳ ಪೈಕಿ ಮುಕ್ಕಾಲು ಪಾಲು ನಾಶವಾಗಿದೆ.
- ಚೀನಾದ ಶಾಂಘೈ ಒಂದರಲ್ಲೇ ಕಳೆದ ೨೦ ವರ್ಷಗಳಲ್ಲಿ ೩೦೦೦ ಗಗನಚುಂಬಿ ಕಟ್ಟಡಗಳು ಮೇಲೆದ್ದವು. ಇಂದು ಮುನ್ನೂರೈವತ್ತು ಕೋಟಿ ಜನ ನಗರಗಳಲ್ಲೇ ಬದುಕುತ್ತಿದ್ದಾರೆ. ಲಾಸ್ ಏಂಜಲಿಸ್‌ನಲ್ಲಿ ಪ್ರತಿಯೊಬ್ಬರಿಗೂ ಒಂದು ಕಾರು. ದುಬೈ ಕೂಡಾ ಈ ಪಟ್ಟಿಯಲ್ಲಿದೆ. ಇಲ್ಲಿಯೂ ಸಾವಿರಾರು ಗಗನಚುಂಬಿಗಳು. ಎಲ್ಲೂ ಸೌರಶಕ್ತಿಯ ಬಳಕೆಯಿಲ್ಲ.
- ಒಂದು ಕಿಲೋಗ್ರಾಂ ಆಲೂಗೆಡ್ಡೆ ಬೆಳೆಯಲು ೧೦೦ ಲೀಟರ್ ನೀರು ಬೇಕು; ಒಂದು ಕಿಲೋಗ್ರಾಂ ಅಕ್ಕಿ ಬೆಳೆಯಲು ೪೦೦೦ ಲೀಟರ್ ನೀರು ಬೇಕು; ಒಂದು ಕಿಲೋಗ್ರಾಂ ಮಾಂಸ ಸಿದ್ಧಪಡಿಸಲು ೧೩ ಸಾವಿರ ಲೀಟರ್ ನೀರು ಬೇಕು; ಅವನ್ನೆಲ್ಲ ಉತ್ಪಾದಿಸಿ ರವಾನಿಸಲು ಬೇಕಾದ ಇಂಧನದ ಲೆಕ್ಕ ಬೇರೆ.
- ವಿಶ್ವದ ಶೇ. ೮೦ರಷ್ಟು ಇಂಧನ ಸಂಪನ್ಮೂಲವನ್ನು ಕೇವಲ ಶೇ. ೨೦ರಷ್ಟು ಜನ ಕಬಳಿಸುತ್ತಾರೆ.
ಆದ್ದರಿಂದ ನೀವು, ನಿಮ್ಮ ಪಾಲಕರು ಇಂಧನಬಾಕತನ ಬೆಳೆಸಿಕೊಳ್ಳಬಾರದು, ಇಂಧನ ಸ್ನೇಹಿ ನಾಗರಿಕರಾಗಬೇಕು ಎಂಬುದು ನನ್ನ ಮೊದಲನೇ ಆಸೆ. ಅದಕ್ಕಾಗಿ ನೀವು ಇನ್ನೊಂದು ಅಭ್ಯಾಸವನ್ನೂ ಬಿಡಬೇಕು. ಅದೆಂದರೆ ಕೊಳ್ಳುಬಾಕತನ. ಏನಿದು ಕೊಳ್ಳುಬಾಕತನ?
ನೀವು ಒಂದು ಪೆನ್ನು ಖರೀದಿಸುತ್ತೀರಿ. ಅದರ ಇಂಕ್ ಖಾಲಿಯಾದ ಕೂಡಲೇ ರಿಫಿಲ್ ಖರೀದಿಸಲೂ ಕಾಯದೆ ಇನ್ನೊಂದು ಪೆನ್ ಖರೀದಿಸುತ್ತೀರಿ. ಅಥವಾ ಒಂದು ನೋಟ್‌ಪುಸ್ತಕದ ಪುಟಗಳು ಖಾಲಿ ಇದ್ದರೂ ಹೊಸ ಪುಸ್ತಕವನ್ನೇ ಖರೀದಿಸುತ್ತೀರಿ. ಬೆಂಗಳೂರಿನ ಹಲವು ಮನೆಗಳಲ್ಲಿ ಶೂಗಳದ್ದೇ ಒಂದು ಕೋಣೆ ಇರುವುದನ್ನೂ ನಾನು ನೋಡಿದ್ದೇನೆ. ಮಾಲ್‌ಗಳಿಗೆ ಖರೀದಿಸಲು ಹೋದರೆ ಸಿಬ್ಬಂದಿವರ್ಗದವರು ಒಂದು ಟ್ರಾಲಿಯನ್ನೇ ಕೊಡಲು ಮುಂದಾಗುತ್ತಾರೆ. ಅಥವಾ ಒಂದು ಬ್ಯಾಸ್ಕೆಟ್ ಅಂತೂ ಇರುತ್ತದೆ. ನಿಮಗೆ ಯಾವುದನ್ನು ಖರೀದಿಸಬೇಕು ಎನ್ನುವುದೇ ಮರೆತುಹೋಗುವಷ್ಟು ವಸ್ತುಗಳು ಅಲ್ಲಿ ಕಾಣುತ್ತವೆ. ಒಂದಕ್ಕಿಂತ ಒಂದು ಹೊಸ ಬ್ರಾಂಡಿನ ವಸ್ತುಗಳು ಅಲ್ಲಿರುತ್ತವೆ. ನಿಮ್ಮ ತಂದೆ ತಾಯಂದಿರು ಇಲ್ಲಿಗೆ ಬಂದಿರಬಹುದು. ಅವರು ಅಂಗಡಿಗೆ ಹೋಗುವಾಗ ಚೀಟಿ ಬರೆದುಕೊಂಡು ಹೋಗುತ್ತಾರೋ ಅಥವಾ ಹಾಗೇ ಹೋಗುತ್ತಾರೋ ಎಂಬುದು ನನಗೆ ಗೊತ್ತಿಲ್ಲ. ನಾನಂತೂ ಮಾಲ್‌ಗಳಿಗೆ ಹೋಗುವ ಸಂದರ್ಭ ಬಂದಾಗ ಆದಷ್ಟೂ ಬಟ್ಟೆ ಚೀಲವನ್ನೇ ಒಯ್ಯುತ್ತೇನೆ. ಆದಷ್ಟೂ ಚೀಟಿ ಬರೆದುಕೊಂಡಿರುತ್ತೇನೆ. ಇದು ನಮ್ಮ ಕೊಳ್ಳುಬಾಕತನವನ್ನು ನಿಯಂತ್ರಿಸುತ್ತದೆ.
ಉಳ್ಳವರನ್ನು ಬಾಧಿಸುತ್ತಿರುವ ಆಫ್ಲುಯೆಂಜಾ ರೋಗ
ಉಳ್ಳವರು ಯಾವುದೇ ಸಮಾಧಾನದಿಂದಲೂ ದಿನ ಕಳೆಯಲಾಗದ ಸ್ಥಿತಿಯನ್ನೇ ಅಫ್ಲುಯೆಂಜಾ ಎಂದಿ ಕರೆಯುತ್ತಾರೆ. ಬಂಡವಾಳಶಾಹಿ ವ್ಯವಸ್ಥೆ ಮತ್ತು ಅತಿ ಕೊಳ್ಳುಬಾಕತನದ ಪರಿಣಾಮವೇ ಈ ರೋಗ.
ಒಮ್ಮೆ ಸಿರಿವಂತಿಕೆ ಬಂದಮೇಲೆ ಮತ್ತಷ್ಟು ಸಿರಿವಂತರಾಗಬೇಕೆಂಬ ಬಯಕೆಯಾಗುತ್ತದೆ. ಅದು ಮತ್ತಷ್ಟು ವಸ್ತುಗಳ ಖರೀದಿಗೆ ಕಾರಣವಾಗುತ್ತದೆ. ಹೀಗೇ ಬೇಡಿಕೆಯೂ ಹೆಚ್ಚುತ್ತದೆ; ಸಿರಿವಂತಿಕೆಯೂ ಹೆಚ್ಚುತ್ತದೆ. ಜೊತೆಗೇ ಅಸಂತೃಪ್ತಿಯೂ ಹೆಚ್ಚುತ್ತದೆ. ಸಾಮಾನ್ಯವಾಗಿ ಸಿರಿವಂತರ ಮಕ್ಕಳಿಗೆ ಈ ಬಗೆಯ ರೋಗ ಅಂಟಿಕೊಳ್ಳುತ್ತದೆ ಎನ್ನಲಾಗಿದೆ. ಹಣ, ಆಸ್ತಿ, ಭೌತಿಕ ಚಹರೆಯ ಮೋಹ, ಪ್ರಸಿದ್ಧಿಯ ಚಪಲ – ಇವೇ ಅಫ್ಲುಯೆಂಜಾದ ಮೂಲಕಾರಣಗಳು.
- ನಾವು ಯಾವಾಗಲೂ ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುತ್ತೇವೆ: ನಾವು ಎಷ್ಟು ಸಂಪಾದಿಸುತ್ತಿದ್ದೇವೆ, ನಮ್ಮ ಮನೆ ಎಷ್ಟು ದೊಡ್ಡದು, ನಮ್ಮ ಕಾರಿನ ಬೆಲೆ ಎಷ್ಟು, ನಮ್ಮ ಸಾಮಾಜಿಕ ಬದುಕಿನ ವ್ಯಾಪ್ತಿ ಎಷ್ಟು, ನಮ್ಮ ಚಹರೆ, ಹೀಗೆ.
- ಆರ್ಥಿಕ, ವಸ್ತುಕೇಂದ್ರಿತ ಬಾಹ್ಯ ಅಂಶಗಳೇ ಮಾನದಂಡಗಳೆಂದು ನಮಗೆ ನಮ್ಮ ಪಾಲಕರು ಹೇಳಿಕೊಟ್ಟಿದ್ದಾರೆ. ಹೀಗೆ ಪರಸ್ಪರ ಹೋಲಿಸಿಕೊಳ್ಳುವುದರಿಂದ ನಮ್ಮ ಬದುಕಿನ ಖುಷಿಯು ಕರಗಿಹೋಗುತ್ತದೆ. ನಾವೆಂದೂ ಬದುಕಿನಲ್ಲಿ ಜಯ ಸಾಧಿಸಲಾರೆವು.
- ಬದಲಿಗೆ, ನಮ್ಮ ಸಂತೋಷ ಕೊಡುವ ವಿಷಯಗಳತ್ತ ಗಮನ ಕೊಡುವುದು ಒಳ್ಳೆಯದು. ನಮ್ಮ ನಿರ್ಧಾರಗಳಿಗೆ ನಮ್ಮ ಬದುಕಿನ ಅಗತ್ಯಗಳೇ ಆಧಾರವಾಗಬೇಕೇ ಹೊರತು, ಬೇರೆಯವರ ಬದುಕಿನ ಲೌಕಿಕ ಸಂಗತಿಗಳಲ್ಲ.
- ನಾವು ಯಾವಾಗಲೂ ನಮ್ಮ ವರ್ತನೆಯನ್ನು ವಿಶ್ವಾಸದಿಂದ ಖಿನ್ನತೆಯೆಡೆಗೆ, ಆಶಾವಾದದಿಂದ ನಿರಾಶಾವಾದದ ಕಡೆಗೆ ತೊನೆಯಲು ಬಿಡುತ್ತೇವೆ. ಕಾಲವು ಕ್ರಮೇಣ ಸರಿದಂತೆ ನಮ್ಮ ಬದುಕೂ ವಿಸ್ತಾರವಾಗುತ್ತದೆ ಎಂಬ ವರ್ತನೆಯನ್ನು ನಾವು ಬೆಳೆಸಿಕೊಳ್ಳಬೇಕು.
ಆಹಾರದ ಕೊಳ್ಳುಬಾಕತನ ತುಂಬಾ ಅಪಾಯಕಾರಿ. ಈಗಲೇ ಜಗತ್ತಿನಲ್ಲಿ ಉತ್ಪಾದನೆಯಾಗುವ ಆಹಾರದಲ್ಲಿ ಮೂರರಲ್ಲಿ ಒಂದು ಪಾಲು ವ್ಯರ್ಥವಾಗುತ್ತಿದೆ. ೨೦೫೦ರ ಹೊತ್ತಿಗೆ ನಮ್ಮ ಆಹಾರದ ಉತ್ಪಾದನೆಯು ಇಮ್ಮಡಿಯಾಗಲೇಬೇಕಿದೆ. ಆದರೆ ಇರುವ ಭೂಮಿಯ ಪ್ರಮಾಣ, ಕೃಷಿಗೆ ಬಳಸಬಹುದಾದ ಪ್ರದೇಶದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯೇ ಕ್ಷೀಣ. ಈಗಲೇ ಜಗತ್ತಿನಲ್ಲಿ ಒಂದು ಕೋಟಿ ಜನ ತೀವ್ರ ಹಸಿವೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಇವತ್ತು ನಾವು ತಿನ್ನುತ್ತಿರುವುದೇನು, ನಾಳೆ ನಾವು ತಿನ್ನಬೇಕಾಗಿರುವುದೇನು ? ಎಲ್ಲವನ್ನೂ ಮರುವಿಮರ್ಶೆ ಮಾಡಲೇಬೇಕಿದೆ ಎಂದು ನೆದರ್‌ಲ್ಯಾಂಡ್ ತಜ್ಞರ ಒಂದು ವರದಿ ಹೇಳಿದೆ. ಮಾಂಸಾಹಾರಿಗಳು ಮುಂದಿನ ದಿನಗಳಲ್ಲಿ ಕೀಟಖಾದ್ಯಗಳನ್ನೇ ಬಳಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ನಾವು ಸಸ್ಯಾಹಾರಿಗಳೇ ಇರಲಿ, ಮಾಂಸಾಹಾರಿಗಳೇ ಇರಲಿ, ಇವತ್ತು ನಮ್ಮ ಮನುಕುಲದ ಉಳಿವಿಗೆ ಮಾಡಬೇಕಾದ ಬದಲಾವಣೆಗಳನ್ನು ಒಪ್ಪಿಕೊಳ್ಳಲೇಬೇಕು. ಬರೀ ಅಕ್ಕಿಯನ್ನು ತಿನ್ನುವ ಬದಲು ಸಿರಿಧಾನ್ಯಗಳನ್ನು ಬಳಸಬೇಕೆಂಬ ಪ್ರಚಾರವನ್ನು ನೀವು ಗಮನಿಸಿರಬಹುದು. ರಾಗಿ ಅಲ್ಲದೆ ಸಜ್ಜೆ, ಹಾರಕ, ಊದಲು, ಬರಗು, ಸಾಮೆ, ನವಣೆ, – ಎಲ್ಲವನ್ನೂ ಬಳಸುವುದಕ್ಕೆ ಆರಂಭಿಸಬೇಕು. ದೂರದ ಊರಿನ ಗೋಧಿಗಿಂತ ನಮ್ಮ ರಾಜ್ಯದ ಈ ಸಿರಿಧಾನ್ಯಗಳು ಎಷ್ಟೋ ಮೇಲು.
ಆದ್ದರಿಂದ ನೀವು ಕೊಳ್ಳುಬಾಕತನ ಬೆಳೆಸಿಕೊಳ್ಳಬಾರದು ಎಂಬುದು ನನ್ನ ಎರಡನೇ ಆಸೆ. ಈ ಎರಡನೇ ಆಸೆಯನ್ನು ಪೂರೈಸೋದಕ್ಕೆ ನೀವು ನನ್ನಮೂರನೇ ಆಸೆಯನ್ನು ತಿಳಿದುಕೊಳ್ಳಲೇಬೇಕು.
ನೀವೆಲ್ಲರೂ ಬೇಲೂರು ಎಂಬ ವಿಶ್ವಪ್ರಸಿದ್ಧ ಶಿಲ್ಪಕಲಾ ಕೇಂದ್ರದಲ್ಲಿ ಇದ್ದೀರಿ. ಬೇಲೂರಿನ ಚೆನ್ನಕೇಶವ ದೇಗುಲ, ಹಳೇಬೀಡಿನ ಮತ್ತು ಈ ದೇಗುಲಗಳನ್ನು ನೋಡಿದಾಗ ನಮ್ಮ ದೇಶದಲ್ಲಿ ಆಗಿಹೋದ ಹಿರಿಯರ ಜ್ಞಾನ ಎಷ್ಟು ವಿಸ್ತಾರವಾಗಿತ್ತು ಎಂದು ಅಚ್ಚರಿಯಾಗುತ್ತದೆ. ಇಂಥ ಹಲವು ದೇಗುಲಗಳನ್ನು, ವಾಸ್ತುಶಿಲ್ಪದ ಕಟ್ಟಡಗಳನ್ನು ಭಾರತದ ಎಲ್ಲಾ ರಾಜ್ಯಗಳಲ್ಲೂ ಕಾಣಬಹುದು. ಈ ರೀತಿ ಬೇಲೂರು ವಿಶ್ವಪ್ರಸಿದ್ಧವಾಗಿದ್ದರೂ ಅದಕ್ಕೊಂದು ಸ್ಥಳೀಯತೆ ಎಂದಿರುತ್ತದೆ. ಈ ದೇಗುಲವನ್ನು ಕಟ್ಟಿದ ಪ್ರಮುಖರಲ್ಲಿ ಮಲ್ಲಿತಮ್ಮ, ದಾಸೋಜ, ಚವನ – ಎಲ್ಲರೂ ಹತ್ತಿರದ ಅಂದರೆ ಈಗಿನ ಶಿವಮೊಗ್ಗ ಜಿಲ್ಲೆಯಿಂದ ಬಂದವರೇ. ಒಟ್ಟು ೧೦೩ ವರ್ಷಗಳ ಕಾಲ ವಿವಿಧ ಶಿಲ್ಪಿಗಳು ಈ ದೇಗುಲ ಕಟ್ಟಿದರು ಎಂದು ಇತಿಹಾಸ ಹೇಳುತ್ತದೆ. ಇದನ್ನು ನಾನು ಸ್ಥಳೀಯತೆ ಎಂದು ಕರೆಯುತ್ತೇನೆ.
ಈಗ ನೋಡಿ: ಬೇಲೂರಿನ ಸುತ್ತಮುತ್ತ ಬೆಳೆಯುವ ಧಾನ್ಯಗಳು, ಹಣ್ಣು – ತರಕಾರಿಗಳು ಎಲ್ಲವೂ ಇಡೀ ವಿಶ್ವಕ್ಕೇ ಸರಬರಾಜು ಆಗುತ್ತದೆ ಎಂದಿಲ್ಲ. ಬೇಲೂರಿಗೂ ದೇಶದ ಬೇರೆ ಬೇರೆ ಭಾಗಗಳಿಂದ ಹಣ್ಣುಗಳು ಬರುತ್ತವೆ. ಕಾಶ್ಮೀರದಿಂದ ಸೇಬು, ನ್ಯೂಜೀಲ್ಯಾಂಡಿನಿಂದ ಕಿವಿ ಹಣ್ಣು ಕೂಡಾ ಇಲ್ಲಿಗೆ ಬಂದಿರಬಹುದು ಅಲ್ಲವೆ?
ಕರ್ನಾಟಕದಲ್ಲಿ ನಂಜನಗೂಡು ಬಾಳೆಹಣ್ಣು, ಉಡುಪಿ ಮಟ್ಟು ಗುಳ್ಳ ಬದನೆಕಾಯಿ, ಕೊಡಗಿನ ಕಿತ್ತಳೆ, ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ, ಉಡುಪಿ ಮಲ್ಲಿಗೆ, ಹಡಗಲಿ ಮಲ್ಲಿಗೆ, ಕೊಡಗಿನ ಹಸಿರು ಏಲಕ್ಕಿ, ಧಾರವಾಡದ ಫೇಡಾ, ಮಲಬಾರ್ ಅರಏಬಿಕಾ ಕಾಫಿ, ರೋಬಸ್ಟಾ ಕಾಫಿ, ಬ್ಯಾಡಗಿ ಮೆಣಸಿನಕಾಯಿ, ದೇವನಹಳ್ಳಿ ಚಕ್ಕೋತ , ಸಾಗರದ ಅಪ್ಪೆಮಿಡಿ ಮಾವಿನಕಾಯಿ, ಬೆಂಗಳೂರಿನ ನೀಲಿ ದ್ರಾಕ್ಷಿ, ಬೆಂಗಳೂರಿನ ಗುಲಾಬಿ ಈರುಳ್ಳಿ, – ಇವೆಲ್ಲ ಏನು ಗೊತ್ತೆ? ಭಾರತ ಸರ್ಕಾರದಿಂದಲೇ ಭೌಗೋಳಿಕ ವಿಶಿಷ್ಟ ಬೆಳೆಗಳು ಅಥವಾ ಆಹಾರ ಪದಾರ್ಥಗಳು ಎಂದು ಮಾನ್ಯತೆ ಪಡೆದಿವೆ. ಸದ್ಯದಲ್ಲೇ ಇವುಗಳ ಪಟ್ಟಿಗೆ ಕಮಲಾಪುರದ ಕೆಂಪು ಬಾಳೆ ಹಣ್ಣು, ತೋತಾಪುರಿ ಮಾವಿನ ಹಣ್ಣು, ಜಾಣಗೆರೆ ಹಲಸು, – ಹಿಗೆ ಇನ್ನೂ ಹಲವು ಕೃಷಿ ಉತ್ಪನ್ನಗಳು ಸೇರ್ಪಡೆಯಾಗಲಿವೆ. ನಿಮಗೆ ಒಂದು ಕುತೂಹಲದ ವಿಷಯ ಹೇಳ್ತೇನೆ: ಭಾರತದಲ್ಲಿ ಹೀಗೆ ಪಟ್ಟಿಯಾದ ಭೌಗೋಳಿಕ ವಿಶೇಷತೆಯ ಬೆಳೆಗಳ ಪೈಕಿ ಹತ್ತರಲ್ಲಿ ಆರು ಬೆಳೆ ಕರ್ನಾಟಕಕ್ಕೇ ಸೇರಿದ್ದು. ಇದು ನಮ್ಮ ನಾಡಿನ ಜೀವವೈವಿಧ್ಯದ ಒಂದು ಚಿಕ್ಕ ಉದಾಹರಣೆ.
ನಾನು ಧಾರವಾಡಕ್ಕೆ, ಕಲಬುರಗಿಗೆ ಹೋದರೆ ಅಲ್ಲಿನ ಜೋಳದ ರೊಟ್ಟಿ, ಶೇಂಗಾ ಹಿಟ್ಟು ತಿನ್ನುತ್ತೇನೆ. ಮಂಗಳೂರಿಗೆ ಹೋದರೆ ಅಲ್ಲಿನ ಪನರ್ಪುಳಿ ಹಣ್ಣಿನ ರಸವನ್ನು ಕುಡಿಯದೆ, ಬಾಳೆಹಣ್ಣಿನ ಬನ್ಸ್ ತಿನ್ನದೆ ಬಿಡುವುದಿಲ್ಲ. ಅಲ್ಲಿ ರಾಮ ಭವನ ಎಂಬ ಹೋಟೆಲಿನಲ್ಲಿ ಎಳೆ ಹಲಸಿನ ಮಂಚೂರಿ, ಅರಶಿನದೆಲೆಯ ಕಡುಬು, ಕೆಸವಿನ ಎಲೆಯ ಪತ್ರೊಡೆ ಇತ್ಯಾದಿ ಮಾಡಿರುತ್ತಾರೆ. ಕೋಲ್ಕತಾಗೆ ಹೋದರೆ ರಸಗುಲ್ಲಾ, ಭುವನೇಶ್ವರಕ್ಕೆ ಹೋದರೆ ಅಲ್ಲಿನ ಊಟ, ಬೆಳಗಾವಿಗೆ ಹೋದರೆ ಕುಂದಾ, ಅಮೀನಘಡಕ್ಕೆ ಹೋದರೆ ಕರದಂಟು, ಶಿರಸಿಗೆ ಹೋದರೆ ತೊಡೆದೇವು, ಮೈಸೂರಿನಲ್ಲಿ ವಿವಿಧ ಸೊಪ್ಪುಗಳು, – ಹೀಗೆ ಒಂದೊಂದು ಊರಿನಲ್ಲೂ ಅದರದ್ದೇ ಆದ ಸ್ಥಳೀಯ ವಿಶೇಷ ಇರುತ್ತದೆ. ಆದರೆ ಈಗ ಎಲ್ಲ ಹಳ್ಳಿಗಳಲ್ಲೂ ನಾರ್ತ್ ಇಂಡಿಯನ್ ಹೋಟೆಲ್‌ಗಳು ಬಂದುಬಿಟ್ಟಿವೆ. ರಾತ್ರಿ ತಿಂದರೆ ಜೀರ್ಣವಾಗದ ಮೈದಾ ಹಿಟ್ಟಿನ ರೊಟ್ಟಿಯನ್ನು ಕಷ್ಟಪಟ್ಟು ಜಗಿದು ತಿನ್ನುತ್ತೇವೆ! ನೀವು ಉತ್ತರ ಭಾರತದಲ್ಲಿ ಅನ್ನವನ್ನು ತಿನ್ನುವ ಬದಲು ಅಲ್ಲಿನವರೇ ತಯಾರಿಸಿದ ರೊಟ್ಟಿಯನ್ನು ತಿಂದರೆ ಇದಕ್ಕಿಂತ ಹತ್ತು ಪಟ್ಟು ರುಚಿಯಾಗಿರುತ್ತದೆ. ಏಕೆ?
ಉದಾಹರಣೆಗೆ ಮಂಗಳೂರಿನ ಬನ್ಸನ್ನೇ ತೆಗೆದುಕೊಳ್ಳಿ. ನಾನು ಅದೇ ಥರ ಬೆಂಗಳೂರಿನಲ್ಲಿ ಬನ್ಸ್ ಮಾಡಲು ಯತ್ನಿಸಿದೆ. ಎಲ್ಲಾ ಸರಿಯಾಗಿ ಕಲಸಿದ್ದರೂ ಬನ್ಸ್‌ನ ರುಚಿ ಮಾತ್ರ ಬೇರೆಯೇ ಆಗಿತ್ತು. ಏಕೆಂದರೆ ಮಂಗಳೂರಿನ ಬನ್ಸ್‌ಗೆ ಮಂಗಳೂರಿನಲ್ಲೇ ಬೆಳೆಯುವ ಬಾಳೆಹಣ್ಣು ಬಳಸುತ್ತಾರೆ. ಅದು ಬೆಂಗಳೂರಿನಲ್ಲಿ ಸಿಗುವುದಿಲ್ಲ. ನಾನು ಮೊನ್ನೆ ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಗೆ ಹೋದಾಗ ಭಾಗಮಂಡಲದಲ್ಲಿ ತಿಂದ ಉಂಡೆ ಕಡುಬು ಮತ್ತು ತೆಂಗಿನ ಕಾಯಿ ಚಟ್ನಿಯ ರುಚಿಯನ್ನು ಪ್ರಪಂಚದ ಬೇರೆ ಎಲ್ಲೂ ಪಡೆಯಲಾರೆ! ಕೊಡಗಿನ ಕಾಡುಗಳ ನಡುವೆ ಇರುವ ಭಾಗಮಂಡಲದಲ್ಲಿ ಚಳಿಗಾಲದ ಮುಂಜಾನೆ ಬಿಸಿಬಿಸಿಯಾದ ಅಕ್ಕಿ ಕಡುಬನ್ನು ಆ ಊರಿನ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯುವುದು ನಮ್ಮ ಜೀವನದ ಒಂದು ಮರೆಯಲಾಗದ ಅನುಭವ ಆಗಬೇಕು. ಅದನ್ನೇ ನಾವು ಜೀವನ ಎಂದು ಕರೆಯುತ್ತೇವೆ. ಯಾವುದೇ ಉತ್ಪನ್ನವು ನಿಮ್ಮ ಊರಿಗೆ ಅಂದಾಜು ಹೆಚ್ಚೆಂದರೆ ೪೦೦ ಕಿಲೋಮೀಟರ್ ದೂರದಿಂದ ಬಂದಿದ್ದಾಗಿದ್ದರೆ ಅದನ್ನು ಸ್ಥಳೀಯ ಆಹಾರ ಎಂದು ಕರೆಯಬಹುದು.
ಬೇಲೂರಿನ ಎಳೆನೀರಿನ ಬೆಲೆ ೩೦ ರೂ ಎಂದುಕೊಂಡರೂ, ನಿಮಗೆ ನಿಮ್ಮೂರಿನಲ್ಲೇ ಬೆಳೆದ ೩೦೦ ಮಿಲಿ ಲೀಟರ್ ಎಳನೀರು ಸಿಗುತ್ತದೆ. ನಾವು ಆದಷ್ಟೂ ನಮ್ಮ ಊರಿನ ಉತ್ಪನ್ನಗಳನ್ನೇ ಬಳಸಬೇಕು. ಆಗ ನಮ್ಮ ರೈತರಿಗೂ ಅನುಕೂಲವಾಗುತ್ತದೆ. ಇದರಿಂದ ಆಗುವ ಲಾಭಗಳೇನು? ನೀವು ಕೊಟ್ಟ ಹಣ ನಿಮ್ಮ ಅಕ್ಕಪಕ್ಕದವರಿಗೇ ಹೋಗುತ್ತದೆ. ನಾವು ನಮ್ಮ ಊರಿನ ಅಥವಾ ಸುತ್ತಮುತ್ತಲಿನ ದವಸ ಧಾನ್ಯ, ಹಣ್ಣು – ತರಕಾರಿಗಳನ್ನೇ ಅವಲಂಬಿಸಿ ಬದುಕಿದರೆ ಅದನ್ನು ಸ್ಥಳೀಯತೆ ಎಂದು ಕರೆಯುತ್ತೇವೆ. ಬೇರೆ ಹಣ್ಣುಗಳ ರುಚಿ ನೋಡಬಾರದು ಎಂದಿಲ್ಲ. ಆದರೆ ಅದೇ ನಮ್ಮ ದಿನನಿತ್ಯದ ಬದುಕಾಗಬಾರದು. ನೀವು ಪೊಟ್ಟಣದ ಹಣ್ಣಿನ ರಸಕ್ಕೆ ಖರ್ಚುಮಾಡಿದ ಹಣ ಯಾವುದೋ ಬಹುರಾಷ್ಟ್ರೀಯ ಕಂಪನಿಗೆ ಹೋಗುತ್ತದೆ. ಈ ಕೃತಕ ಹಣ್ಣಿನ ರಸ ನಮಗೆ ಬೇಲೂರಿನಲ್ಲಿ ಪ್ರತಿದಿನವೂ ಬೇಕೆ? ಯೋಚಿಸಿ.
ಆದ್ದರಿಂದ ಮಕ್ಕಳೇ, ಆದಷ್ಟೂ ಸ್ಥಳೀಯ ಆಹಾರವನ್ನೇ ಬಳಸಿ. ಬೇರೆ ಊರಿಗೆ ಹೋದಾಗ ಆ ಸ್ಥಳದ ಆಹಾರವನ್ನೇ ಬಳಸಿ. ಆದಷ್ಟೂ ನಮ್ಮ ದೇಶದಲ್ಲೇ ಬೆಳೆದ ಹಣ್ಣು – ತರಕಾರಿಗಳನ್ನು ಸೇವಿಸಿ. ಆಯಾ ಊರಿನಲ್ಲಿ ಬೆಳೆಯುವ ಆಹಾರವೇ ಅತ್ಯಂತ ಶ್ರೇಷ್ಠ.
ಹೀಗೆ ನೀವೆಲ್ಲರೂ ಸ್ಥಳೀಯ ಪರಂಪರೆಯನ್ನು ಗೌರವಿಸಿ ಅದರಲ್ಲೇ ಹೊಸ ಸಂಗತಿಗಳನ್ನು ಹುಡುಕಬೇಕು, ಸ್ಥಳೀಯತೆಯನ್ನು ಅನುಸರಿಸಬೇಕು ಎಂಬುದೇ ನನ್ನ ಮೂರನೆಯ ಆಸೆ. ನನ್ನ ಈ ಮೂರನೆಯ ಆಸೆಯನ್ನು ಪೂರೈಸಲು ನೀವು ನನ್ನ ನಾಲ್ಕನೆಯ ಆಸೆಯನ್ನು ತಿಳಿದುಕೊಳ್ಳಲೇಬೇಕು!
ನಾನೀಗ ಹೇಳಿದ ಹಾಗೆ ನಮ್ಮ ನಾಡು ಜೀವವೈವಿಧ್ಯದ ಬೀಡು. ಈ ಜೀವವೈವಿಧ್ಯವನ್ನು ನಮ್ಮ ಹಿರೀಕರು ಹಲವು ಪದಗಳಲ್ಲಿ ದಾಖಲಿಸಿದ್ದಾರೆ. ಇಲ್ಲಿನ ಕನ್ನಡದ ಶೈಲಿಯಲ್ಲೇ ನೂರಾರು ಮಾಹಿತಿಗಳನ್ನು ನಮ್ಮ ಹಿರಿಯರು ಕೂಡಿಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜನಪದ ಹಾಡುಗಳ ಸಂಗ್ರಹಕಾರ ಎಲ್ ಆರ್ ಹೆಗಡೆಯವರು ಎಂಬತಕ್ಕೂ ಹೆಚ್ಚು ಜಾನಪದ ಹಾಡುಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ. ಆದರೆ ಕೆಲವು ತಿಂಗಳುಗಳ ಹಿಂದೆ ಅವರ ಮಗಳು ನನಗೆ ಕರೆ ಮಾಡಿದ್ದರು. ಎಲ್ ಆರ್ ಹೆಗಡೆಯವರು ಸಂಗ್ರಹಿಸಿದರೂ, ಅರ್ಧ ಕ್ವಿಂಟಲ್ ತೂಗುವಷ್ಟು ಜಾನಪದ ಹಾಡು – ಕಥೆಗಳ ಸಂಗ್ರಹ ಇನ್ನೂ ಪ್ರಕಟವಾಗದೇ ಇದೆ ಎಂದು ಅವರು ತಿಳಿಸಿದರು. ಹಾಲಕ್ಕಿಗಳು, ಸಿದ್ಧಿಗಳು, ಈಡಿಗರು – ಹೀಗೆ ಹಲವು ಸಮುದಾಯಗಳಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಸಂಗ್ರಹಿಸಿದ ಜಾನಪದ ಸಂಗ್ರಹವೇ ಇಷ್ಟು ಇರಬೇಕಾದರೆ, ಉಳಿದ ಪ್ರದೇಶಗಳಲ್ಲಿ ಎಷ್ಟು ಹಾಡುಗಳು ಇನ್ನೂ ಸಂಗ್ರಹವಾಗದೇ ಉಳಿದಿರಬಹುದು ಎಂದು ಯೋಚಿಸಿ. ನಿಮ್ಮ ತಾಲೂಕಿನಲ್ಲೇ ನಿಮಗೆ ಕನಿಷ್ಟ ಒಂದು ಸಾವಿರ ಜನಪದ ಹಾಡು ಸಿಗಬಹುದು ಎಂದು ನನಗೆ ಅನ್ನಿಸಿದೆ. ಈ ಹಾಡುಗಳಲ್ಲಿ ನಿಮಗೆ, ನಮಗೆ, ಭಾಷಾ ವಿಜ್ಞಾನಿಗಳಿಗೇ ಗೊತ್ತಿರದ ಪದಗಳೂ ಇರಬಹುದು. ಮರ-ಗಿಡಗಳ ಹೆಸರೂ ಇರಬಹುದು. ಇವನ್ನೆಲ್ಲ ದಾಖಲಿಸಿದರೆ ನಮಗೆ ಹಾಡುಗಳ ಜೊತೆಗೆ ಈ ಪ್ರದೇಶದ ಹೊಸ ಪದಗಳ ಪಟ್ಟಿಯೇ ಸಿಗುತ್ತದೆ. ಇದನ್ನೇ ಭಾಷಾ ವೈವಿಧ್ಯ ಎಂದು ಕರೆಯುತ್ತಾರೆ.
ನಾನು ಈ ವಿಷಯವನ್ನು ಹೇಳಿದ್ದಕ್ಕೆ ಒಂದು ಕಾರಣವಿದೆ. ಭಾರತದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಇರುವ ಚಿಕ್ಕ ಚಿಕ್ಕ ಭಾಷೆಗಳ ಸಮುದಾಯಗಳ ಜನವಸತಿ ಎಲ್ಲಿ ಹೆಚ್ಚಾಗಿದೆ ಗೊತ್ತೆ? ಎಲ್ಲಿ ಜೀವವೈವಿಧ್ಯ ಹೆಚ್ಚಾಗಿದೆಯೋ, ಎಲ್ಲಿ ಮರಗಿಡಗಳ, ಪ್ರಾಣಿ ಪಕ್ಷಿಗಳ, ಕೀಟಗಳ ಸಂಕುಲ ಹೆಚ್ಚಾಗಿದೆಯೋ, ವೈವಿಧ್ಯಮಯವಾಗಿದೆಯೋ ಅಲ್ಲೇ ಈ ಚಿಕ್ಕ ಚಿಕ್ಕ ಸಮುದಾಯಗಳು ವಾಸವಾಗಿವೆ. ಜೀವವೈವಿಧ್ಯ ಅತಿಹೆಚ್ಚಾಗಿರುವ ಪ್ರದೇಶಗಳಲ್ಲೇ ಶೇಕಡಾ ೭೦ರಷ್ಟು ಭಾಷೆಗಳಿವೆ. ನಾನು ಕೆಲಸ ಮಾಡುತ್ತಿರುವ ಭಾರತವಾಣಿ ಯೋಜನೆಯ ೧೨೧ ಭಾಷೆಗಳಲ್ಲಿ ೬೨ ಭಾಷೆಗಳು ಪೂರ್ವಾಂಚಲ ರಾಜ್ಯಗಳಲ್ಲಿ ಇವೆ. ೩೦ ಭಾಷೆಗಳು ಪೂರ್ವ ಭಾರತದಲ್ಲಿವೆ. ಕರ್ನಾಟಕದಲ್ಲೇ ಗಮನಿಸಿದರೆ, ಕೊಂಕಣಿಗರು, ತುಳುವರು, ಕೊಡವರು, ಬ್ಯಾರಿಗಳು, ಅರಭಾಷೆ, ಸೋಲಿಗರು, ಸಿದ್ದಿಗಳು, ಹವ್ಯಕರು, ಹಾಲಕ್ಕಿ ಒಕ್ಕಲಿಗರು, ಗೌಳಿಗಳು, ಗೊಂಡರು, ಸಂಕೇತಿಗಳು – ಹೀಗೆ ಹಲವು ಭಾಷೆ ಮತ್ತು ಸಮುದಾಯಗಳನ್ನು ನೋಡಬಹುದು. ಇವೆಲ್ಲವೂ ಒಂದೋ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿವೆ; ಅಥವಾ ಅದರ ಆಸುಪಾಸಿನಲ್ಲೇ ಇವೆ. ಅಂದರೆ ಒಂದು ಪುಟ್ಟ ಭಾಷೆಯೊಂದು ಸತ್ತುಹೋದರೆ ಅದರೊಂದಿಗೆ ಹಲವು ಸಸ್ಯಗಳ ಪದಗಳು, ಪರಿಸರದ ಮಾಹಿತಿಗಳು, ಔಷಧೀಯ ಮಾಹಿತಿಗಳು, ಪರಂಪರೆಯ ಸಂಗತಿಗಳು – ಎಲ್ಲವೂ ಕಳೆದುಹೋಗುತ್ತವೆ.
ಧರಂಪಾಲ್ ಕಂಡ ‘ಒಂದು ಸುಂದರ ವೃಕ್ಷ
- ಭಾರತವು ಎಂದೂ ಹಿಂದುಳಿದ ದೇಶವಾಗಿರಲಿಲ್ಲ, ಬದಲಿಗೆ ಅತ್ಯಂತ ಮುಂದುವರಿದ ದೇಶವಾಗಿತ್ತು ಎಂದು ಖ್ಯಾತ ಇತಿಹಾಸ ಸಂಶೋಧಕ ಧರಂಪಾಲ್ ಹೇಳುತ್ತಾರೆ.
- ೧೯೩೧ರಲ್ಲಿ ಗಾಂಧೀಜಿಯವರು ಒಂದು ವಾದವನ್ನು ಮಂಡಿಸಿದ್ದರು: ನೂರು ವರ್ಷಗಳ ಹಿಂದಿನ ಭಾರತೀಯ ಶಿಕ್ಷಣ ವ್ಯವಸ್ಥೆ ಇಂದಿನ (ಗಾಂಧೀಜಿ ಕಾಲದ) ಬ್ರಿಟಿಶ್ ಶಿಕ್ಷಣಕ್ಕಿಂತ ಉತ್ತಮವಾಗಿತ್ತು ಎನ್ನುವುದೇ ಈ ಪ್ರತಿಪಾದನೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಈ ವಿಷಯವು ಧರಂಪಾಲರನ್ನು ತುಂಬಾ ಕಾಡಿತ್ತು. ೬೦ರ ದಶಕದಿಂದ ಅರಂಭಿಸಿ ಧರಂಪಾಲ್ ಭಾರತದ ಇತಿಹಾಸ ಕುರಿತ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಈಸ್ಟ್ ಇಂಡಿಯಾ ಕಂಪನಿಯ ದಾಖಲೆಗಳನ್ನು, ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಸಿಕ್ಕ ದಾಖಲೆಗಳನ್ನು ಆಳವಾಗಿ ಆಭ್ಯಸಿಸಿದರು. ಇದರ ಫಲವಾಗಿ ೧೯೭೧ರಲ್ಲಿ ಬಂದ ಪುಸ್ತಕವೇ: ೧೮ನೇ ಶತಮಾನದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ. ಭಾರತೀಯ ಖಗೋಳಶಾಸ್ತ್ರ, ವೈದ್ಯಕೀಯ ವಿಜ್ಞಾನ, ಕಬ್ಬಿಣ ಮತ್ತು ಉಕ್ಕು ತಯಾರಿಕೆ, ಮಂಜುಗಡ್ಡೆ ತಯಾರಿಕೆ, ಕೃಷಿ ಸಲಕರಣೆಗಳು, – ಮುಂತಾದ ಕ್ಷೇತ್ರಗಳಲ್ಲಿ ಭಾರತೀಯರ ಸಕ್ಷಮತೆ ಇತ್ತೆಂದು ಸಾಬೀತುಪಡಿಸಿದ ಈ ಪುಸ್ತಕವು ಆಗ ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.
- ೧೯೮೩ರಲ್ಲಿ ವರು ಬರೆದ ಗ್ರಂಥ: ‘ದಿ ಬ್ಯೂಟಿಫುಲ್ ಟ್ರೀ’ ಅವರ ಅತ್ಯಂತ ಆಳ ಅಧ್ಯಯನದ ಫಲ. ೪೩೬ ಪುಟಗಳ ಈ ಪುಸ್ತಕದಲ್ಲಿ ಅವರು ೧೮ನೇ ಶತಮಾನದ ಭಾರತದ ಶಿಕ್ಷಣ ವ್ಯವಸ್ಥೆ ಎಷ್ಟು ಗಟ್ಟಿಯಾಗಿತ್ತು, ಆಮೇಲೆ ಬ್ರಿಟಿಶರು ಹೇಗೆ ಅದನ್ನು ಶಿಥಿಲಗೊಳಿಸಿದರು ಎಂಬುದನ್ನು ಅಂಕಿ ಅಂಶಗಳ ಸಹಿತ ವಿವರಿಸಿದ್ದಾರೆ. ಕಾರ್ಲ್ ಮಾರ್ಕ್ಸ್‌ನಿಂದ ಹಿಡಿದು ಅಂದಿನ ಪ್ರಮುಖ ಚಿಂತಕರು ಭಾರತವನ್ನು ಪಾಶ್ಚಾತ್ಯೀಕರಣಗೊಳಿಸಲು ಹೊರಟ ಸಂಗತಿಯೇ ಹೇಗೆ ನಮ್ಮ ಪಾರಂಪರಿಕ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿತು ಎಂದು ಅವರು ವಿವರಿಸಿದ್ದಾರೆ. ಅದನ್ನೆಲ್ಲ ಅವರು ಬ್ರಿಟಿಶ್ ದಾಖಲೆಗಳನ್ನು ಬಳಸಿಯೇ ನಿರೂಪಿಸಿದ್ದಾರೆ ಎಂಬುದು ಗಮನಾರ್ಹ.
- ಪ್ರತಿಯೊಂದು ಹಳ್ಳಿಯಲ್ಲೂ ಒಂದು ಶಾಲೆ ಇತ್ತು; ೧೮೩೦ರ ಹೊತ್ತಿನಲ್ಲಿ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಒಂದು ಲಕ್ಷ ಶಾಲೆಗಳಿದ್ದವು. ಮುಂಬಯಿ ಪ್ರೆಸಿಡಿನ್ಸಿಯಲ್ಲಿ ಶಾಲೆ ಇಲ್ಲದ ಒಂದು ಹಳ್ಳಿಯೂ ಇರಲಿಲ್ಲ; ಶಾಲೆಗಳಲ್ಲಿ ಬ್ರಾಹ್ಮಣೇತರರೂ ಶಿಕ್ಷಣ ಪಡೆಯುತ್ತಿದ್ದರು; ಉನ್ನತ ಶಿಕ್ಷಣದಲ್ಲಿ ಮಾತ್ರ ಬ್ರಾಹ್ಮಣರೇ ಹೆಚ್ಚಾಗಿದ್ದರು – ಇವೇ ಮುಂತಾದ ಅಂಶಗಳನ್ನು ಧರಂಪಾಲ್ ದಾಖಲಿಸಿದ್ದಾರೆ. ಇಂಥ ಸುಂದರ ವೃಕ್ಷ ಹೇಗೆ ಶಿಥಿಲವಾಯಿತು? ರಾಜಾರಾಮ್ ಮೋಹನ್‌ರಾಯ್ ಆಹ್ವಾನದ ಮೇರೆಗೆ ಬ್ರಿಟಿಶರು ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆದರು. ಇಂಥ ಶಾಲೆಗಳಿಗೆ ಸರ್ಕಾರದ ಮಾನ್ಯತೆ ನೀಡಲಾರಂಭಿಸಿದರು. ಆದ್ದರಿಂದ ದೇಶಿ ಶಿಕ್ಷಣ ವ್ಯವಸ್ಥೆಯು ಮಾನ್ಯತೆಯ ಕೊರತೆಯಿಂದ ತನ್ನಷ್ಟಕ್ಕೆ ತಾನೇ ಕುಸಿಯಿತು ಎಂಬ ವಾದವಿದೆ.