ಸುಮಾರು ಹದಿನೈದು ವರ್ಷಗಳಿಂದ ಸಹಕಾರ ರಂಗವನ್ನು ಹತ್ತಿರದಿಂದ ನೋಡಿ ಈಗ ಈ ರಂಗದ ಪರಿಧಿಯಂಚಿಗೆ ನಿಂತಿರುವ ನಾನು ಸಹಕಾರಿ ರಂಗದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ತಜ್ಞನೂ ಅಲ್ಲ; ಸಹಕಾರ ರಂಗದೊಳಗೆ ಇರುವ ಸಹಕಾರಿ ಕಾರ್ಯಕರ್ತನೂ ಅಲ್ಲ. ಆದರೆ ಈ ರಂಗವನ್ನು ನಿಕಟವಾಗಿ ನಿರುಕಿಸುತ್ತ ಬಂದಿರುವ ಹವ್ಯಾಸಿ ಪತ್ರಕರ್ತ. ಈಗಲೂ ನನಗೆ ಹಲವು ಸಹಕಾರಿ ಮಿತ್ರರಿದ್ದಾರೆ. ಅವರಲ್ಲಿ ಇಂದಿನ ಕಾರ್ಯಕ್ರಮದ ಸ್ಫೂರ್ತಿಯಾಗಿರುವ ದಿ|| ಕೆ ಎಚ್ ಪಾಟೀಲರ ಪುತ್ರ ಶ್ರೀ ಎಚ್ ಕೆ ಪಾಟೀಲರೂ ಒಬ್ಬರು. ಬಹುಶಃ ಸಹಕಾರಿ ರಂಗದ ಒಳಹೊಕ್ಕು ಹೊರಬಂದ ಮೇಲೂ ನನ್ನ ಗೌರವ, ಪ್ರೀತಿ ಕಡಿಮೆಯಾಗಿಲ್ಲ ಎಂದರೆ, ಅದು ಅವರ ಬಗ್ಗೆ ಮಾತ್ರ; ವಿಚಿತ್ರವೆಂದರೆ, ಅವರನ್ನು ನನಗೆ ಪರಿಚಯಿಸಿದ ವ್ಯಕ್ತಿಯೂ ಸಹಕಾರ ರಂಗಕ್ಕೆ ಅಪಾಯಕಾರಿ ಎಂದು ನಾನು ಈ ಪ್ರಚಾರ ಮಾಡುತ್ತಿರುವೆ!
ಇದಕ್ಕೆ ಕಾರಣವಾಗಿ ಎರಡು ವರ್ಷಗಳ ಹಿಂದಿನ ಒಂದು ಟನಾವಳಿಗಳ ಸರಣಿಯನ್ನು ನಿಮಗೆ ಹೇಳಲೇಬೇಕು.
2008ರ ಸೆಪ್ಟೆಂಬರ್ ತಿಂಗಳ ಒಂದು ದಿನ. ರಾಜ್ಯಮಟ್ಟದ ಶಾಸನಬದ್ಧ ಸಹಕಾರಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ನಿರ್ದೇಶಕರಿಂದ ಕರೆ. ನಮ್ಮ ಅಧ್ಯಕ್ಷರಿಂದ ಏನೇನೋ ಅಕ್ರಮ ಹಣ ಬಳಕೆಯಾಗಿದೆ ಎಂಬ ಅನುಮಾನ ಇದೆ. ನೀವು ಏನಾದರೂ ತನಿಖೆ ಮಾಡುತ್ತೀರಾ ಎಂಬ ಪ್ರಶ್ನೆ. ಸರಿ ಎಂದು ತನಿಖೆಗೆ ಇಳಿದರೆ ಕಂಡಿದ್ದು 80 ಲಕ್ಷ ರೂ.ಗಳ ಅಕ್ರಮ ವಿನಿಯೋಜನೆ. ಅದನ್ನೇ ಮುಂದೆ ಮಾಡಿಕೊಂಡ ಆ ನಿರ್ದೇಶಕರು ಮತ್ತು ಅವರ ಸಹಕಾರಿಗಳು ನನ್ನನ್ನು ಚೆನ್ನಾಗಿ ಬಳಸಿಕೊಂಡರು. ಮುಖ್ಯಮಂತ್ರಿಯವರೆಗೂ ನನ್ನನ್ನು ಕಳಿಸಿ ಆ ಅಧ್ಯಕ್ಷನ ವಿರುದ್ಧ ದೂರು ಕಳಿಸಿಕೊಟ್ಟರು. ಆಮೇಲೆ ಅವಧಿಯ ಮಧ್ಯದಲ್ಲೇ ಆ ಅಧ್ಯಕ್ಷನನ್ನು ಪದಚ್ಯುತಗೊಳಿಸಲಾಯಿತು. ಆದರೂ ಆ ಅಧ್ಯಕ್ಷ ಬಿಡಬೇಕಲ್ಲ, ಚುನಾವಣೆಗೆ ನಿಂತು ಸೋತರು.
2011ರ ಫೆಬ್ರುವರಿಯಲ್ಲಿ ಬೆಳಗಾವಿ, ಹುಬ್ಬಳ್ಳಿಯಲ್ಲಿ ನೋಡಿದರೆ, ಅದೇ ಮಾಜಿ ಅಧ್ಯಕ್ಷ, ಅವರನ್ನು ಪದಚ್ಯುತಗೊಳಿಸಿ ಅಧ್ಯಕ್ಷರಾದವರು, ಅವರನ್ನೇ ದೂರಿ ಉಪಾಧ್ಯಕ್ಷರಾಗಿ ಈಗ ಅಧ್ಯಕ್ಷರಾದವರು ಗ ಮೂವರೂ ಜಂಟಿ ಪ್ರವಾಸ ಮಾಡುತ್ತಿದ್ದರು! ಹಾಗಾದರೆ ಎರಡೇ ವರ್ಷಗಳ ಹಿಂದಿನ ದೂರು ದುಮ್ಮಾನಗಳು ಏನಾದವು? ಎಲ್ಲವೂ ಸರಿಹೋಯಿತೆ? ಇಲ್ಲ. 80 ಲಕ್ಷ ರೂ.ಗಳ ಅಕ್ರಮ ವಿನಿಯೋಗದ ಕಥೆ ಹಾಗೇ ಇದೆ.
ಸಹಕಾರ ರಂಗದಲ್ಲಿ ಈಗಿರುವ ಸಹಕಾರದ ಸನ್ನಿವೇಶ ಇದು! ಈಗ ಬಂದ ಸುದ್ದಿಯಂತೆ ಈ ಮೂವರಲ್ಲಿ ಇಬ್ಬರನ್ನು ಈ ಗುಂಪು ಕೈಬಿಟ್ಟಿತಂತೆ. ಅದೇನೂ ಭಾರೀ ಒಳ್ಳೆಯ ಸಮಾಚಾರವೇನಲ್ಲ; ಯಾಕೆಂದರೆ ಅವರ ಹಿಂಬಾಲಕರೇ ಅವರ ಸ್ಥಾನದಲ್ಲಿ ಅಭ್ಯಗಳಾಗಿರುತ್ತಾರೆ!
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಆದರ್ಶ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಕಥೆ ಯಾರಿಗೆ ಗೊತ್ತಿಲ್ಲ? ಅಲ್ಲೂ ಇಂಥದ್ದೇ ಇನ್ನೊಂದು ಕಥೆ. ಸೊಸೈಟಿಯ ಉದ್ದೇಶಗಳೇ ಬೇರೆ. ಅದನ್ನು ಬಳಸಿಕೊಂಡವರೇ ಬೇರೆ. ಈಗ ಅದನ್ನು ಯಾಕೆ ಕೆಡವಬಾರದು ಎಂದು ಕೇಂದ್ರ ಪರಿಸರ ಇಲಾಖೆ ನೋಟೀಸು ನೀಡಿದೆ. ಮುಂದೇನಾಗುತ್ತೆ ಅನ್ನೋದು ಗೊತ್ತಿಲ್ಲ. ಆದರೆ ಈವರೆಗೂ ನಡೆದದ್ದು ಮಾತ್ರ ಅವ್ಯವಹಾರ ಎಂಬುದು ವಾಸ್ತವ. ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವಾಣ್ ರಾಜೀನಾಮೆಗೆ ಕಾರಣವಾಗಿದ್ದು ಇದೇ ಹಗರಣ. ನಮ್ಮ ದೇಶದಲ್ಲಿ ಸಹಕಾರ ರಂಗವನ್ನು ದುರುಪಯೋಗ ಮಾಡಿಕೊಳ್ಳಲು ರಕ್ಷಣಾ ಪಡೆಯ ನಿವೃತ್ತ ಅಧಿಕಾರಿಗಳೂ ಮುಂದಾಗಿದ್ದಾರೆ ಎನ್ನುವುದು ಅತ್ಯಂತ ವಿಷಾದನೀಯ ಸಂಗತಿ. ಅಲ್ಲದೆ ಕೇಂದ್ರ ಪರಿಸರ ನೀತಿಯನ್ನೇ ಉಲ್ಲಂಿಸಿ ಕಟ್ಟಡ ಕಟ್ಟಿದ್ದು ಇನ್ನೊಂದು ಭಾರೀ ಲೋಪ.
ಪುಣೆಯಲ್ಲಿ ಎರಡು ವರ್ಷಗಳ ಹಿಂದೆ ನಡೆದ 38 ಕೋಟಿ ರೂ. ಹಗರಣದಲ್ಲಿ ಅಜಿತ್ ಕೋ ಆಪರೇಟಿವ್ ಬ್ಯಾಂಕ್ನ ನಿರ್ದೇಶಕರೂ ಸೇರಿದಂತೆ 20 ಜನರ ಮೇಲೆ ಆಕ ಅಪರಾಧಗಳ ವಿಭಾಗವು ಆರೋಪಪಟ್ಟಿ ಸಲ್ಲಿಸಿದೆ. ಸ್ವಜನ ಪಕ್ಷಪಾತ ಮತ್ತು ಹಣಕಾಸಿನ ದುರ್ಬಳಕೆಯೇ ಈ ಹಗರಣದ ಮೂಲ. ಇಲ್ಲಿ ಕೇಂದ್ರ ಸಚಿವರ ನಿಕಟವರ್ತಿಯೊಬ್ಬರು ಪ್ರಮುಖ ಆರೋಪಿ.
ಎಂಟು ವರ್ಷಗಳ ಹಿಂದೆ `ಅಪ್ನಾ ರ್ ಬನಾವೋ’ ಯೋಜನೆಯಲ್ಲಿ ಸೆಹೋರ್ ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕಿನಲ್ಲಿ ಅಕ್ರಮ ಎಸಗಿದ ಮಾಜಿ ಶಾಸಕ ಮತ್ತು ನಾಲ್ವರಿಗೆ ಮಧ್ಯಪ್ರದೇಶದ ನ್ಯಾಯಾಲಯವು ಎರಡು ವರ್ಷಗಳ ಸೆರೆವಾಸ ವಿಧಿಸಿದೆ.
ಹೀಗೆ ಇಂಥ ಅನೇಕ ಉದಾಹರಣೆಗಳನ್ನು ನೀಡಬಹುದು.
ಅತಿಯಾದ ರಾಜಕೀಯವು ಸಹಕಾರ ರಂಗವನ್ನು ಕಬಳಿಸಿದೆ ಎನ್ನುವುದಕ್ಕೆ ಇವೆರಡು ಚಿಕ್ಕ ನಿದರ್ಶನಗಳು ಮಾತ್ರ. ಇಂಥ ಹತ್ತಾರು ಉದಾಹರಣೆಗಳನ್ನು ಕೊಡುತ್ತಲೇ ಹೋಗಬಹುದು. 2003ರಿಂದ 2005ರವರೆಗೆ ದೇಶದ ಹಲವು ಅರ್ಬನ್ ಬ್ಯಾಂಕುಗಳು ದಿವಾಳಿಯಾಗಿದ್ದೂ ಇಂಥ ಹಣಕಾಸಿನ ದುರ್ಬಳಕೆಯಿಂದಲೇ. ಇಲ್ಲೆಲ್ಲ ರಾಜಕಾರಣಿಗಳ, ಅವರ ಆಪ್ತರ ಪಾತ್ರ ಎದ್ದು ಕಾಣುತ್ತಿತ್ತು. ಆ ದಿನಗಳಲ್ಲಿ ಸಹಕಾರ ರಂಗದಲ್ಲೇ ಪೂರ್ಣಾವಧಿ ಮಾಧ್ಯಮ ಸಲಹೆಗಾರನಾಗಿದ್ದ ನನಗೆ ಇದೆಲ್ಲ ಆಾತ ತಂದವು.
ಆಧುನಿಕತೆ, ಮಾಹಿತಿ ತಂತ್ರಜ್ಞಾನ, ಇಪ್ಪತ್ತೊಂದನೇ ಶತಮಾನ, ಜಾಗತೀಕರಣ ಎಂದೆಲ್ಲ ಗಳಹುತ್ತ ಎಷ್ಟೋ ಬರೆಯಬಹುದು. ಆದರೆ ಇಂಥ ಅಕ್ರಮಗಳ ಗೂಡಾಗಿರುವ ಸಹಕಾರ ರಂಗವನ್ನು ಕಟುವಾಗಿ ವಿಮರ್ಶಿಸದೇ ಹೋದರೆ ಮುಂದಿನ ದಿನಗಳಲ್ಲಿ ಸಹಕಾರ ರಂಗವು ಇನ್ನಷ್ಟು ದೊಡ್ಡ ಸ್ವಾಹಾಕಾರ ಚಳವಳಿಯಾಗುವುದರಲ್ಲಿ ಸಂಶಯವಿಲ್ಲ. ಹೇಳಿ ಕೇಳಿ ಈ ಲೇಖನದ ಮೊದಲೇ ಕೊಟ್ಟ ಉದಾಹರಣೆಯು ಟಿಸಿದ್ದೇ ನವಯುಗದ (ನ್ಯೂ ಏಜ್) ಸಹಕಾರ ಕಾಯ್ದೆಯಡಿ ಸ್ಥಾಪನೆಯಾದ ಸಂಸ್ಥೆಯಲ್ಲಿ! ಈ ಸಂಸ್ಥೆಯಿಂದ ಈಗಷ್ಟೇ ಹಳೆ ಸಹಕಾರ ಕಾಯ್ದೆಯನ್ನು ರದ್ದು ಮಾಡಿಬಿಡಿ ಎಂಬ ಕೂಗೂ ಕೇಳಿ ಬಂದಿದೆ.
ನಮಗೆ ಸಹಕಾರಿ ನೀತಿಯ ನೆನಪಿರಲಿ
ಸಹಕಾರ ರಂಗವು ಬಡವರಿಗೆ, ಅನಕ್ಷರಸ್ಥರಿಗೆ ಮತ್ತು ಕೌಶಲ್ಯರಹಿತರಿಗೆ ಸಹಕಾರಿಯಾಗುತ್ತದೆ; ಪರಸ್ಪರ ಸಹಕಾರ ಮತ್ತು ಹಂಚಿಕೆಯೇ ಇಲ್ಲಿನ ಧ್ಯೇಯ; ಸಹಕಾರ ರಂಗವು ವರ್ಗ ಸಂರ್ಷವನ್ನು ಕಡಿಮೆ ಮಾಡಿ ಸಾಮಾಜಿಕ ಕಂದರಗಳನ್ನು ಮುಚ್ಚುತ್ತದೆ; ಅದು ರಾಜಕೀಯ ಗುಂಪುಗಾರಿಕೆಯನ್ನು ಕಡಿಮೆ ಮಾಡಿ ಅಧಿಕಾರಿ ಶಕ್ತಿಗಳನ್ನು ನಿಯಂತ್ರಣದಲ್ಲಿ ಇಡುತ್ತದೆ; ಅದು ಕೃಷಿ ಅಭಿವೃದ್ಧಿಯಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ; ಅದು ಸಣ್ಣ ಮತ್ತು ಗೃಹ ಉದ್ದಿಮೆಗಳಿಗೆ ಸೂಕ್ತವಾದ ವಾತಾವರಣವನ್ನು ಮೂಡಿಸುತ್ತದೆ ಗ ಇವೆಲ್ಲವೂ ಸಹಕಾರ ರಂಗದ ಬಗ್ಗೆ ಇರುವ ಭರವಸೆಗಳು. ಈ ಭರವಸೆಗಳು ಎಷ್ಟೆಲ್ಲ ನಿಜವಾಗಿವೆ, ಎಷ್ಟೆಲ್ಲ ಹುಸಿಯಾಗಿವೆ ಎಂಬುದನ್ನು ಓದುಗರೇ ನಿರ್ಧರಿಸಬೇಕಷ್ಟೆ.
ನಮಗೆ ಗೊತ್ತಿರುವಂತೆ ಸಹಕಾರ ರಂಗವು ದೇಶದ ಎಲ್ಲಾ ಹಳ್ಳಿಗಳಲ್ಲೂ ಇದೆ. ದೇಶದ ಶೇ. 46ರಷ್ಟು ಕೃಷಿ ಸಾಲ, ಶೇ. 36ರಷ್ಟು ರಸಗೊಬ್ಬರ ವಿತರಣೆ, ಶೇ. 27ರಷ್ಟು ರಸಗೊಬ್ಬರ ಉತ್ಪಾದನೆ,, ಶೇ. 59ರಷ್ಟು ಸಕ್ಕರೆ ಉತ್ಪಾದನೆ, ಶೇ. 31ರಷ್ಟು ಗೋಧಿ ಸಂಗ್ರಹ, ಶೇ. 50ರಷ್ಟು ಪಶು ಆಹಾರ ಉತ್ಪಾದನೆ, ಶೇ. 22ರಷ್ಟು ನ್ಯಾಯಬೆಲೆ ಅಂಗಡಿಗಳು ಗ ಇವೆಲ್ಲವೂ ಸಹಕಾರ ರಂಗದ ಪಾಲು ಎಂಂಬುದು ಎಲ್ಲ ಪ್ರಬಂಧಗಳಲ್ಲೂ ಸಿಗುವ ಒಂದು ಲೆಕ್ಕಾಚಾರ. ಅಷ್ಟೇ ಏಕೆ, ಶೇ. 50ರಷ್ಟು ಐಸ್ ಕ್ರೀಮ್ ಉತ್ಪಾದನೆ, ಶೇ. 50ರಷ್ಟು ಖಾದ್ಯ ತೈಲ ಉತ್ಪಾದನೆ, ಶೇ. 55ರಷ್ಟು ಕೈಮಗ್ಗದ ಬಟ್ಟೆಗಳು, ಶೇ. 95ರಷ್ಟು ರಬ್ಬರ್ ಸಂಸ್ಕರಣೆ, ಶೇ. 50ರಷ್ಟು ಅಡಕೆ ಸಂಸ್ಕರಣೆ ಮತ್ತು ಮಾರಾಟ, – ಇವೂ ಸಹಕಾರ ರಂಗದ್ದೇ.
ಸಹಕಾರ ರಂಗದ ವೈಫಲ್ಯಕ್ಕೆ ಈಗ ಎಲ್ಲರೂ ಕೊಡುವ ಕಾರಣಗಳೂ ಹೀಗಿವೆ: ಸರ್ಕಾರದ ಅತಿಯಾದ ಹಸ್ತಕ್ಷೇಪ, ದುರಾಡಳಿತ, ಜನಜಾಗೃತಿಯ ಕೊರತೆ, ಸಹಕಾರ ಸಂಗಳ ವ್ಯಾಪ್ತಿಯ ಸೀಮಿತತೆ ಮತ್ತು ಕಾರ್ಯನಿರ್ವಹಣೆಯ ವೈಫಲ್ಯಗಳು. ಇವನ್ನೆಲ್ಲ ನಾನು ಬಣ್ಣಿಸಲಾರೆ; ಉಲ್ಲೇಖಿಸಲಾರೆ.
ಕೀನ್ಯಾದ ಉದಾಹರಣೆಯಲ್ಲೂ ಅದೇ ಕಥೆ
ಕೀನ್ಯಾ ದೇಶದಲ್ಲಿ ಉದಾರೀಕರಣವಾಗಿ ದಶಕವೇ ಕಳೆದಿದೆ. ಅಲ್ಲಿ ವಾಣಿಜ್ಯಕವಾದ, ಸ್ವಾಯತ್ತ, ಸದಸ್ಯ ಆಧಾರಿತ, ಪ್ರಜಾತಾಂತ್ರಿಕವಾಗಿ ನಿರ್ವಹಿಸಲ್ಪಟ್ಟ ಮತ್ತು ಸ್ವಾವಲಂಬಿ ವ್ಯವಹಾರ ಮಾಡುವ ಸಹಕಾರಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಉದಾರೀಕರಣದ ಸವಾಲನ್ನೂ ಎದುರಿಸಿ ಇಲ್ಲಿ ಸಹಕಾರ ಸಂಸ್ಥೆಗಳು ಬೆಳೆದಿವೆ. ಹಲವಾರು ಸಹಕಾರಿ ಸಂಗಳು ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ. ಸರಿಯಾಗಿ ಹೊಂದಾಣಿಕೆ ಮಾಡಿಕೊಂಡ ಸಹಕಾರಿ ಸಂಸ್ಥೆಗಳು ಹಿಂದಿಗಿಂತಲೂ ಹೆಚ್ಚು ಒಳ್ಳೆಯ ಪರಿಣಾಮವನ್ನು ತೋರಿವೆ. ಕೀನ್ಯಾದಲ್ಲಿ 1997ರಲ್ಲಿ ಸಹಕಾರ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು. ಹೊಸ ನೀತಿ ಜಾರಿಗೆ ಬಂತು. ಮೂರು ಕೋಟಿ ಜನಸಂಖ್ಯೆ ಇರುವ ಕೀನ್ಯಾದಲ್ಲಿ ಶೇಕಡಾ 63ರಷ್ಟು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಸಹಕಾರ ರಂಗದಲ್ಲಿ ಭಾಗಿಯಾಗಿದ್ದಾರೆ (2008). ಶೇಕಡಾ 80ರಷ್ಟು ಜನರು ಸಹಕಾರ ರಂಗದಿಂದ ನೇರವಾಗಿ / ಪರೋಕ್ಷವಾಗಿ ವರಮಾನವನ್ನು ಗಳಿಸುತ್ತಿದ್ದಾರೆ ಎಂಬುದೂ ಉಲ್ಲೇಖನೀಯ.
ಆದರೆ ಅಲ್ಲೂ ಸ್ಥಿತ್ಯಂತರಗಳಾಗಿವೆ. ಈ ಹಿಂದೆ ಅಲ್ಲಿನ ಕಾಫಿ ಬೆಳೆಯ ಶೇ. 72ರಷ್ಟನ್ನು, ಹತ್ತಿ ಮಾರಾಟದ ಶೇ. 95ರಷ್ಟನ್ನು, ಹೈನು ಉತ್ಪನ್ನದ ಶೇ. 76ರಷ್ಟನ್ನು ಸಹಕಾರ ರಂಗವೇ ನಿಭಾಯಿಸುತ್ತಿತ್ತು. ಈಗ, 2008ರಲ್ಲಿ ಕೃಷಿ ಮಾರಾಟದ ಪಾಳು ಶೇ. 40ಕ್ಕೆ ಕುಸಿದಿದೆ. ಹತ್ತಿ ಸಹಕಾರ ಸಂಗಳಲ್ಲಿ ಈ ಪಾಲು ಶೇ. 2ಕ್ಕೆ ಕುಗ್ಗಿದೆ.
ಕೀನ್ಯಾದ ಸಹಕಾರ ಸಂಗಳ ವೈಫಲ್ಯಕ್ಕೆ ಅಧಿಕಾರಿಗಳ ದುರಾಡಳಿತ, ಸಹಕಾರ ಸಂಪನ್ಮೂಲಗಳ ಕಳ್ಳತನ, ದೊಡ್ಡ ಸಹಕಾರ ಸಂಗಳು ಚಿಕ್ಕ ಸಂಟನೆಗಳಾಗಿ ಒಡೆದಿರುವುದು, ಸದಸ್ಯರ ಠೇವಣಿಯನ್ನು ಹಿಂದಿರುಗಿಸದೇ ಇರುವುದು, ಚುನಾವಣೆಗಳನ್ನು ಸಕಾಲಕ್ಕೆ ನಡೆಸದೇ ಇರುವುದು, ಸಿಬ್ಬಂದಿ ನೇಮಕದಲ್ಲಿ ಸ್ವಜನ ಪಕ್ಷಪಾತ ಮತ್ತು ವಜಾಗೊಳಿಸುವಿಕೆ, ಸಹಕಾರಿ ಅಧಿಕಾರಿಗಳ ನಡುವೆ ಇರುವ ಭಿನ್ನಾಭಿಪ್ರಾಯಗಳು. ಕೊನೆಯಿಲ್ಲದ ವಿವಾದ ಗ ದಾವೆಗಳು, ಅನಧಿಕೃತ ಸಹಕಾರಿ ಹೂಡಿಕೆಗಳು, ವ್ಯವಸ್ಥಾಪಕ ಮಂಡಳಿಗೆ ಕಾನೂನುಬಾಹಿರ ಪಾವತಿಗಳು ಗ ಇವೇ ಕಾರಣ ಎಂದೂ ಕೀನ್ಯಾ ಸಹಕಾರ ರಂಗದ ಮೇಲಿನ ಇತ್ತೀಚೆಗಿನ ವರದಿ ಹೇಳಿದೆ.
ಇದೆಲ್ಲವೂ ಭಾರತಕ್ಕೂ ಆನ್ವಯಿಸುವುದಿಲ್ಲವೆ? ಕೀನ್ಯಾದಂಥ ಬಡ ದೇಶಕ್ಕೂ, ಭಾರತದಂಥ ವಿಶ್ವದ ಅತಿದೊಡ್ಡ ಪ್ರಜಾತಾಂತ್ರಿಕ ದೇಶಕ್ಕೂ ಇಂಥ ವಿಷಯಗಳಲ್ಲಿ ಸಾಮ್ಯ ಇದೆಯೆಂದಾದರೆ ನಮಗೆ ಅವಮಾನವಲ್ಲವೆ?
ಆದರೆ ಸಹಕಾರ ಕಾಯ್ದೆ ಬದಲಾದರೆ ಈ ಬಗೆಯ ಎಲ್ಲ ಅದಕ್ಷತೆಗಳೂ ಇಲ್ಲವಾಗುತ್ತವೆ ಎಂಬ ಘೋಷಣೆಯನ್ನು ಹೊತ್ತುಕೊಂಡೇ ಬಂದ ಹೊಸ ಕಾಯ್ದೆಗಳೂ ಮಾನವ ಲೋಪಗಳಿಂದ ಹೊರತಾಗಿಲ್ಲ ಎನ್ನುವುದು ವಿಷಾದದ ಮತ್ತು ಆಘಾತಕರ ಬೆಳವಣಿಗೆ. ಮನುಷ್ಯರ ಸ್ವಭಾವಗಳಲ್ಲಿ ಬದಲಾವಣೆಯಾಗದ ಹೊರತು ಹೊಸ ಕಾಯ್ದೆಗಳು ಏನೂ ಮೌಲಿಕ ಬದಲಾವಣೆ ತರಲಾರವು ಎಂಬುದಕ್ಕೆ ಕರ್ನಾಟಕ ರಾಜ್ಯವೇ ಒಂದು ಉದಾಹರಣೆ.
ಕರ್ನಾಟಕ : ಹೊಸ ಸಹಕಾರ ಕಾಯ್ದೆಯೂ ವಿಫಲ
ಕರ್ನಾಟಕದಲ್ಲಿ ಎರಡು ಸಹಕಾರಿ ಕಾಯ್ದೆಗಳಿವೆ. ಒಂದು: ಕರ್ನಾಟಕ ಸಹಕಾರ ಸಂಗಳ ಕಾಯ್ದೆ 1956. ಇನ್ನೊಂದು ಕರ್ನಾಟಕ ಸೌಹಾರ್ದ ಸಹಕಾರ ಕಾಯ್ದೆ. ಸೌಹಾರ್ದ ಕಾಯ್ದೆಯ ಹುಟ್ಟು ಮತ್ತು ಅದರಿಂದ ಜನ್ಮ ತಾಳಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಲ್ಲಿ ಅನುಭವ ಹೊಂದಿದ ನಾನು ಕಂಡುಕೊಂಡಿದ್ದು ಇಷ್ಟೆ: ಹಳೆ ಕಾಯ್ದೆಯು ಅಧಿಕಾರಶಾಹಿಯಲ್ಲಿ ನಲುಗುತ್ತಿದ್ದರೆ ಹೊಸ ಕಾಯ್ದೆಯು ಕೆಲವೇ ಹಿತಾಸಕ್ತ ವ್ಯಕ್ತಿಗಳ ನಿಯಂತ್ರಣಕ್ಕೆ ಸಿಲುಕಿಕೊಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಸೌಹಾರ್ದ ಸಹಕಾರ ಕಾಯ್ದೆಗೆ ಹಳೆಯ ಕಾಯ್ದೆಯಿಂದ ವಲಸೆಯಾದ ಸಂಗಳ ಪ್ರಮಾಣ ಉತ್ಸಾಹ ಕಡಿಮೆಯೇ. ಈಗ ಹಳೆ ಕಾಯ್ದೆಯನ್ನು ರದ್ದು ಮಾಡಬೇಕೆಂಬ ಒತ್ತಾಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಬಂದಿದೆ.
ಆದರೆ ನೋಡಿ: 1666 ಸೌಹಾರ್ದ ಸಹಕಾರಿ ಸಂಸ್ಥೆಗಳ ಪೈಕಿ 996 ಸಂಸ್ಥೆಗಳು ಈಗ ನಡೆಯಲಿರುವ (ಮಾರ್ಚ್ 2011) ಸಂಯುಕ್ತ ಸಹಕಾರಿ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಭಾಗವಹಿಸಲು ಅರ್ಹವಾಗಿವೆ. ಇನ್ನುಳಿದ 990 ಸಂಸ್ಥೆಗಳ ಡಿಫಾಲ್ಟ್ ಆಗಿವೆ. ಕ್ರಾಂತಿಕಾರಿ ಕಾಯ್ದೆ, ಸ್ವ ನಿಯಂತ್ರಣದ ಹೊಸ ಹೆಜ್ಜೆ ಎಂದೆಲ್ಲ ಬಣ್ಣಿತವಾದ ಸೌಹಾರ್ದ ಕಾಯ್ದೆಯ ಎರಡು ಸಾವಿರಕ್ಕೂ ಕಡಿಮೆ ಸಂಸ್ಥೆಗಳಲ್ಲಿ ಅರ್ಧಕ್ಕರ್ಧ ಡಿಫಾಲ್ಟ್ ಆಗಿರುವುದಾದರೆ, ಹಳೆ ಕಾಯ್ದೆಯಿಂದ ಸಹಸ್ರಾರು ಸಂಘಗಳು ಸೌಹಾರ್ದ ಕಾಯ್ದೆಗೆ ಬಂದರೆ ಗತಿ? ಖಂಡಿತವಾಗಿಯೂ ಈ ಬಗ್ಗೆ ಸರ್ಕಾರಗಳು ಪಕ್ಷ ರಾಜಕೀಯ ಬಿಟ್ಟು ಯೋಚಿಸಬೇಕು.
ಸಹಕಾರ ರಂಗ ಮತ್ತು ಮಾಹಿತಿ ಪಡೆಯುವ ಹಕ್ಕು
ಕರ್ನಾಟಕದ ದತ್ತಪ್ರಸಾದ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯ ನಿಲುವನ್ನು ಎತ್ತಿಹಿಡಿದು ಸಹಕಾರಿ ಸಂಗಳು ಮಾಹಿತಿ ಪಡೆಯುವ ಹಕ್ಕು ಕಾಯ್ದೆಯಡಿ ಬರುವುದಿಲ್ಲ ಎಂದು ರಾಜ್ಯದ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಈ ತೀರ್ಪು ದುರದೃಷ್ಟಕರ ಎಂದೇ ಹೇಳಬೇಕು. ಕೊನೇ ಪಕ್ಷ ಸಹಕಾರ ಸಂಗಳು ಮೂರನೇ ಸಂಸ್ಥೆಯಾಗಿ (ಥರ್ಡ್ ಪಾರ್ಟಿ) ಮಾಹಿತಿ ಪಡೆಯುವ ಹಕ್ಕಿನ ಕಾಯ್ದೆಯಡಿ ಬರಬೇಕಲ್ಲವೆ ಎಂಬುದು ನನ್ನ ಪ್ರಶ್ನೆ. ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಕೂಡಾ ಮಾಹಿತಿ ಪಡೆಯುವ ಹಕ್ಕಿನಡಿ ಥರ್ಡ್ ಪಾರ್ಟಿಯಾಗುತ್ತಾರೆ. ಆರ್ ಟಿ ಐ ಮೂಲಕ ಸಲ್ಲಿಸುವ ಯಾವುದೇ ಅರ್ಜಿಯನ್ನು ಈ ಸಂಸ್ಥೆಗಳು ಪರಿಶೀಲಿಸಿ ತಿರಸ್ಕರಿಸಬಹುದು ಅಥವಾ ಪುರಸ್ಕರಿಸಬಹುದು.
ಸಹಕಾರ ರಂಗದ ತತ್ವಗಳ ಹಿನ್ನೆಲೆಯಲ್ಲಿ ಮಾಹಿತಿ ಪಡೆಯುವ ಹಕ್ಕಿನ ಕಾಯ್ದೆಯಡಿ ಸಹಕಾರ ಸಂಸ್ಥೆಗಳು ಬರುತ್ತವೆಯೋ ಇಲ್ಲವೋ ಎಂಬ ಪ್ರಶ್ನೆಯೇ ಅಪ್ರಸ್ತುತವಾಗಬೇಕಿತ್ತು. ಯಾಕೆಂದರೆ ಹೇಳಿಕೇಳಿ ಸಹಕಾರ ಸಂಗಳು ಸಾರ್ವಜನಿಕ ಸದಸ್ಯತ್ವದಿಂದ ರೂಪಗೊಂಡಿರುವ ಸಾವಿರಾರು ಜನರು ಬಳಸುವ ಸಂಸ್ಥೆಗಳು. ಅಲ್ಲಿ ಇರುವ ಹಕ್ಕುಗಳಿಂದಾಗಿಯೇ ಈ ಸಹಕಾರಿ ರಂಗಗಳು ಪಾರದರ್ಶಕವಾಗಿರಬೇಕಾಗಿತ್ತು. ಸದಸ್ಯರ ಪ್ರಶ್ನೆಗಳನ್ನೇ ನಿರ್ಲಕ್ಷಿಸಿದ ನೂರಾರು ಸಹಕಾರ ಸಂಗಳನ್ನು ನಾವು ನಮ್ಮ ಸುತ್ತಮುತ್ತ ನೋಡಬಹುದು. ಅದಕ್ಕೇ ಸರ್ವಸಾಮಾನ್ಯ ಸಭೆಗಳಲ್ಲಿ ಜಗಳಗಳು, ಹೊಡೆದಾಟಗಳು ನಡೆಯುವುದೂ ಸರ್ವಸಾಮಾನ್ಯ ಆಗತೊಡಗಿದೆ. ಪಕ್ಷ ರಾಜಕೀಯದ ಅಮಲೂ ಇಲ್ಲಿ ಸೇರಿಕೊಂಡರೆ ಸಹಕಾರ ರಂಗಗಳಲ್ಲಿ ಮುಕ್ತ ವಾತಾವರಣವನ್ನು ನಿರೀಕ್ಷಿಸುವುದಾದರೂ ಹೇಗೆ?
ಜೈವಿಕ ಇಂಧನ, ಸಾವಯವ ಕೃಷಿ ಮತ್ತು ಕಂಪೆನಿಗಳ ಆರಂಭ : ಸಹಕಾರ ಚಳವಳಿಗಾದ ಅಗೌರವವಲ್ಲವೆ?
ಸಹಕಾರ ರಂಗವು ಕಾರ್ಪೋರೇಟ್ ಹಿತಾಸಕ್ತಿಗಳಿಗೆ ಬಲಿಯಾಗುತ್ತಿದೆ ಎಂಬುದಕ್ಕೆ ಹಲವು ಸಂಕೇತಗಳು ನಮಗೆ ಸಿಕ್ಕಿವೆ. ಅವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇತ್ತೀಚೆಗೆ ಮೈಸೂರು ಆಕಾಶವಾಣಿ ಶ್ರೋತೃಗಳಾಗಿರುವ ನೂರಾರು ರೈತರು ಸೇರಿಕೊಂಡು ಒಂದು ಜೈವಿಕ ಇಂಧನ ಉತ್ಪನ್ನಗಳಿಗಾಗಿ ಕಂಪೆನಿಯನ್ನು ಹುಟ್ಟುಹಾಕಿದ್ದಾರೆ. ಈ ಕಂಪೆನಿಯಲ್ಲಿ ಒಂದು ಸಾವಿರ ರೂ.ಗಳ ಶೇರು ಖರೀದಿ ಮಾಡಿ ಯಾರಾದರೂ ಸದಸ್ಯರಾಗಬಹುದು. ಇಂಥ ಒಂದು ಸಾವಿರ ಶೇರುದಾರರನ್ನು ಈಗ ಕಲೆಹಾಕುವ ಕೆಲಸ ಬಹುತೇಕ ಮುಗಿದಿದೆ. ಅದೇ ಮೈಸೂರಿನಲ್ಲಿ ಸಆವಯವ ಕೃಷಿಕರೆಲ್ಲ ಸೇರಿಕೊಂಡು ಒಂದು ಕಂಪೆನಿಯನ್ನು ಆರಂಭಿಸಿದ್ದಾರೆ. ಬೆಂಗಳೂರಿನಲ್ಲೂ ಸಾವಯವ ಕೃಷಿಕರ ಪ್ರೈವೇಟ್ ಲಿಮಿಟೆಡ್ ಕಂಪೆನಿಯೊಂದು ಆರಂಭವಾಗಿದೆ. ಎಲ್ಲವೂ ಇಂದಿನ ನಗರದ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡ ರೈತರ ಉದ್ಯಮಶೀಲತೆಯ ಯತ್ನಗಳು ಎಂದು ಹೆಮ್ಮೆ ಪಡಬಹುದು. ಹಾಗೆ ಕಂಪೆನಿಯನ್ನು ಹುಟ್ಟುಹಾಕುವುದು ಅವರ ಸ್ವಾತಂತ್ರ್ಯ ಕೂಡಾ. ಆದರೆ ಒಮ್ಮೆ ನೋಡಿ: ಈ ಕಂಪೆನಿಗಳ ಬದಲಿಗೆ ಒಂದು ಸಹಕಾರ ಸಂವೇ ಆರಂಭವಾಗಿದ್ದರೆ ಸಂದ ಲಾಭವು ಎಲ್ಲರಿಗೂ ಹಂಚಿಕೆಯಾಗುತ್ತಿದ್ದಿಲ್ಲವೆ? ಸಹಕಾರ ರಂಗದಲ್ಲಿ ಅಂಥ ಊನ ಏನಿದೆ? ಸಾಣೆಕಟ್ಟಾ ಉಪ್ಪು ಸಹಕಾರ ಸಂವು ಎಷ್ಟೋ ದಶಕಗಳಿಂದ ಸಹಕಾರಿ ತತ್ವದಲ್ಲೇ ನಡೆಯುತ್ತಿರಬೇಕಾದರೆ, ಸಾವಯವ ಉತ್ಪನ್ನಗಳಿಗೆ, ಜೈವಿಕ ಇಂಧನದಂತ ಸಮಕಾಲೀನ ಉತ್ಪನಗಳಿಗಾಗಿ ಸಾವಿರಾರು ರೈತರು ಸೇರಿಕೊಂಡು ಖಾಸಗಿ ಸಂಸ್ಥೆಯಡಿ ಕೆಲಸ ಮಾಡಬೇಕೆ? ನನ್ನ ಮಟ್ಟಿಗೆ ಇದು ಸಹಕಾರ ರಂಗಕ್ಕೆ ಆಗಿರುವ ಅವಮಾನ; ಮತ್ತು ಈ ರಂಗಕ್ಕೆ ಜನರೇ ನೀಡುತ್ತಿರುವ ಎಚ್ಚರಿಕೆಯ ಗಂಟೆ. ತದಡಿಯ ಚಿಪ್ಪು ಉದ್ಯಮವು ಖಾಸಗೀಕರಣದಲ್ಲಿ ನಲುಗುತ್ತಿದ್ದರೆ ಅದಕ್ಕೂ ಸಹಕಾರ ರಂಗದ ವೈಫಲ್ಯವೇ ಕಾರಣ.
ಮಾಹಿತಿ ತಂತ್ರಜ್ಞಾನದ ಬಳಕೆಯಲ್ಲಿ ಬಹುತೇಕ ವಿಫಲ
ಸಹಕಾರ ರಂಗವೆಂದರೆ ಅತಿ ಕಡಿಮೆ ವೆಚ್ಚದಲ್ಲಿ ಅತ್ಯಂತ ಸರಳವಾದ ಕಚೇರಿಯನ್ನು ಹೊಂದಿಕೊಂಡಿರಬೇಕು ಎಂಬುದೇನೋ ಒಳ್ಳೆಯ ನೀತಿ ಇರಬಹುದು. ಆದರೆ ಸಹಕಾರ ರಂಗದಲ್ಲಿ ಕೆಲಸ ಮಾಡುತ್ತಿರುವವರು ಇವತ್ತಿನ ನಾಗರಿಕತೆ, ಇಂದಿನ ಯುವ ಜನಾಂಗವು ನಿರೀಕ್ಷಿಸುವ ಹಲವು ಅಗತ್ಯಗಳನ್ನು ಪೂರೈಸದೇ ಹೋದರೆ ಕೆಲವೇ ವರ್ಷಗಳಲ್ಲಿ ವಯಸ್ಕರ ಸಂಟನೆಯೋ, ಪಡ್ಡೆ ಹುಡುಗರು ರಾಜಕೀಯದ ಲಾಭಕ್ಕಾಗಿ ಬಳಸುವ ದಾಳಗಳೋ ಆಗಿ ಪರಿವರ್ತನೆಯಾಗುವುದರಲ್ಲಿ ಸಂಶಯವಿಲ್ಲ.
ತೊಂಬತ್ತರ ದಶಕದಲ್ಲಿ ಇಂಥ ಆಧುನಿಕ ಚಿಂತನೆಗಳನ್ನು ಇಟ್ಟುಕೊಂಡ ಹಲವು ಸಹಕಾರಿಗಳು ಕರ್ನಾಟಕದಲ್ಲಿ ಮೂಡಿದ್ದೇನೋ ನಿಜ. ಗ್ರಾಹಕರನ್ನು ಸೆಳೆಯುವಂಥ ಒಳಾಲಂಕಾರ, ಕಂಪ್ಯೂಟರೀಕರಣ, ಆಧುನಿಕ ಬಗೆಯ ಪ್ರಚಾರ. 2004ರಲ್ಲಿ ನಾನು ಒಂದು ಬ್ಯಾಂಕಿಗೆ ಚಿತ್ರನಟಿಯನ್ನು ಬ್ರಾಂಡ್ ಅಂಬಾಸಡರ್ ಎಂದು ಹುಡುಕಿ ಒಂದು ವರ್ಷ ಆಕೆಯನ್ನು ವಿವಿಧ ಸಭೆಗಳಿಗೆ ಕರೆದುಕೊಂಡು ಹೋಗಿದ್ದೂ ಇದೆ. ಹಾಗೆಯೇ ದಶವಾರ್ಷಿಕೋತ್ಸವದ ಹೊಸಿಲಿಗೆ ಬಂದ ಇನ್ನೊಂದು ಬ್ಯಾಂಕಿಗೆ ತಿಂಗಳಿಗೊಬ್ಬರಂತೆ ಹನ್ನೆರಡು ತಿಂಗಳುಗಳ ಕಾಲ ಗಣ್ಯ ವ್ಯಕ್ತಿಗಳನ್ನು ಹುಡುಕಿಕೊಟ್ಟಿದ್ದೂ ಇದೆ. ಈ ಬ್ಯಾಂಕಿನಲ್ಲಿ ತಿಂಗಳಿಗೊಂದು ಹೊಸ ಗ್ರಾಹಕ ಸ್ನೇಹಿ, ಸಮುದಾಯ ಸ್ನೇಹಿ ಯೋಜನೆಗಳನ್ನು ಪ್ರಕಟಿಸಿತು ಎಂಬುದೂ ನಿಜ. ಆದರೆ ಥಳಕು ಬಳುಕಿನ ಬ್ರಾಂಡಿಂಗ್ ಇದ್ದ ಮಾತ್ರಕ್ಕೆ ಅಲ್ಲಿ ಪಾರದರ್ಶಕತೆ ಇದೆ ಎಂದಾಗಲೀ, ಸ್ವಜನ ಪಕ್ಷಪಾತ ನಡೆಯುವುದಿಲ್ಲ ಎಂದಾಗಲೀ ನಂಬುವುದಕ್ಕೆ ಸಾಧ್ಯವಿಲ್ಲ. ಆಧುನಿಕ ಚಿಂತನೆಗಳನ್ನು ಇಟ್ಟುಕೊಂಡವರೂ ಹೇಗೆ ಭ್ರಷ್ಟ ಸ್ಕೀಮುಗಳನ್ನು ಹಾಕಿಕೊಳ್ಳಬಹುದು ಎಂಬುದಕ್ಕೆ ನಾನು ಈ ಲೇಖನದ ಮೊದಲೇ ಉದಾಹರಣೆ ಕೊಟ್ಟಿದ್ದೇನೆ.
ಇನ್ನೊಂದು ಕಡೆ ಸಾಂಪ್ರದಾಯಿಕವೂ ಅಲ್ಲದ, ಅತಿ ಆಧುನಿಕವೂ ಅಲ್ಲದ ಪ್ರಯತ್ನಗಳನ್ನು ಕಾಣಬಹುದು. ಇಲ್ಲಿ ಹಳೆಯ ತಲೆಗಳೇ ಇರುತ್ತವೆ. ಆದರೆ ಹೊಸ ವಾತಾವರಣಕ್ಕೆ, ಹೊಸ ಯೋಜನೆಗಳಿಗೆ ಒಲವು ತೋರುವ ಹಿರಿಯರೂ ಇರುತ್ತಾರೆ. ಇಲ್ಲಿನ ಸಮಸ್ಯೆ ಎಂದರೆ ಆಧುನೀಕರಣದ, ಹೊಸ ತಂತ್ರಜ್ಞಾನದ ಅರಿವಿಲ್ಲದೆಯೇ ಮಾಹಿತಿ ತಂತ್ರಜ್ಞಾನದ ವಿಷಯದಲ್ಲಿ ಹಿಡಿತ ಇಲ್ಲದೆಯೇ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಆಮೇಲೆ ಏನೂ ಉಪಯೋಗ ಪಡೆಯದೆಯೇ ಕೈ ಹಿಸುಕಿಕೊಳ್ಳುವುದು! ಸಹಕಾರ ರಂಗದಲ್ಲಿ, ಅದರಲ್ಲೂ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗಳು, ಅರ್ಬನ್ ಬ್ಯಾಂಕುಗಳು ಹೀಗೆ ಹಣಕಾಸು ನಿರ್ವಹಣೆ, ಗ್ರಾಹಕ ನಿರ್ವಹಣೆಯ ಹತ್ತಾರು ಸಾಫ್ಟ್ವೇರ್ಗಳನ್ನು ಖರೀದಿಸಿ ಅವುಗಳನ್ನು ಒಮ್ಮೆಯೂ ಬಳಸದೆ ಸಾಂಸ್ಥಿಕ ಹಣವನ್ನು ಪೋಲು ಮಾಡಿದ ಉದಾಹರಣೆಗಳಿಗೆ ಲೆಕ್ಕವಿಲ್ಲ. ಹೀಗೆ ಸಹಕಾರ ಸಂಗಳ ತಲೆ ಮೇಲೆ ಕೈ ಇಡುವ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಆಗಾಗ ತಂತ್ರಜ್ಞಾನದ ಬಗ್ಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತವೆ. ಭಾರೀ ರಂಗುರಂಗಿನ ಪರಿಚಯ ಪತ್ರಗಳು, ಗಂಟೆಗೊಂದು ಸ್ಲೈಡ್ ಶೋಗಳು, ಮಧ್ಯೆ ಭರ್ಜರಿ ಊಟ ಗ ಆಮೇಲೆ ಸಹಕಾರಿ ರಂಗದ ಅಧಿಕಾರಿಯೊಬ್ಬರಿಂದ ಆಧುನಿಕತೆಯ ಬಗ್ಗೆ ಪಾಠ. ಇವೆಲ್ಲವೂ ಮುಗಿದ ಮೇಲೆ ಆಗಿದ್ದೇನು? ಇಷ್ಟು ವರ್ಷ ನಡೆದ ಇಂಥ ನೂರಾರು ಸೆಮಿನಾರುಗಳು, ಕಾರ್ಯಾಗಾರಗಳು ಕೂಡಾ ಖಾಸಗಿ ಸಾಫ್ಟ್ವೇರ್ ಸಂಸ್ಥೆಗಳಿಗೆ ಗ್ರಾಹಕರೆಂಬ ಮಿಕಗಳನ್ನು ಹುಡುಕಿಕೊಡುವ ಸಾಧನಗಳಾಗಿವೆಯೇ ಹೊರತು ಎಲ್ಲೂ ಮೌಲಿಕವಾದ ಆಧುನೀಕರಣದ ಯತ್ನ ನಡೆದಿಲ್ಲ ಎಂದು ವಿಷಾದದಿಂದ ಹೇಳಬೇಕಿದೆ.
ಈ ಸಾಫ್ಟ್ವೇರ್ ಕಂಪೆನಿಗಳ ಜೊತೆ ಶಾಮೀಲಾದ ಕೆಲವು ಜಾಣ ಸಹಕಾರಿ ನಾಯಕರು ಉಳಿದ ಸಹಕಾರಿ ಸಂಸ್ಥೆಗಳಿಗೆ ಈ ಸಾಫ್ಟ್ವೇರ್ ತುಂಬಾ ಚೆನ್ನಾಗಿದೆ ಎಂದು ಶಿಫಾರಸು ಮಾಡಿ ಕಿಕ್ಬ್ಯಾಕ್ ಪಡೆದಿದ್ದನ್ನೂ ನಾನು ನೋಡಿದ್ದೇನೆ.
ಸಹಕಾರ ರಂಗದಲ್ಲಿ ಈಗ ಹತ್ತಾರು ಸಾಫ್ಟ್ವೇರ್ಗಳು ಬಳಕೆಯಾಗುತ್ತಿವೆ. ಅವುಗಳಲ್ಲಿ ಬಹ್ವಂಶ ಕಾಲಬಾಹಿರವಾದ ತಂತ್ರಜ್ಞಾನವನ್ನು ಹೊಂದಿವೆ. ಒಂಟಿ ದ್ವೀಪಗಳ ಹಾಗೆ, ಹಲವು ಸಹಕಾರ ಸಂಸ್ಥೆಗಳಲ್ಲಿ ಬಳಕೆಯಾಗುತ್ತಿರುವ ಸಾಫ್ಟ್ವೇರ್ಗಳನ್ನು ಇನ್ನೊಂದೆಡೆ ಬಳಸಲೂ ಆಗುವುದಿಲ್ಲ; ಅಥವಾ ಅದರಲ್ಲಿನ ದತ್ತಾಂಶಗಳನ್ನು ಹೊರಸೆಳೆದು ಇನ್ನೊಂದು ತಂತ್ರಾಂಶಕ್ಕೆ ಅಡಕ ಮಾಡುವುದೂ ಕಷ್ಟ. ಮಾಹಿತಿ ತಂತ್ರಜ್ಞಾನದಲ್ಲಿ ಮುಕ್ತ ತಂತ್ರಾಂಶಗಳ ಯುಗ ಆರಂಭವಾಗಿಯೇ ಒಂದು ದಶಕವಾಯಿತು. ಆದರೆ ನಮ್ಮ ದೇಶದ ಸಹಕಾರಿ ರಂಗವು ಈಗಲೂ ಖಾಸಗಿ ತಂತ್ರಾಂಶಗಳನ್ನೇ ಬಳಸುತ್ತಿರುವುದು ವಿಚಿತ್ರ ಮತ್ತು ದೌರ್ಭಾಗ್ಯ. ತಂತ್ರಾಂಶ ರಂಗದಲ್ಲಿ ಮುಕ್ತ ತಂತ್ರಾಂಶ ಚಳವಳಿಯು ನಡೆಯುತ್ತಿರುವುದೇ ಜನರ ಸಹಭಾಗಿತ್ವದಿಂದ; ಒಂಧರ್ಥದಲ್ಲಿ ಜಾಗತಿಕವಾಗಿ ತಂತ್ರಜ್ಞರಿಂದ ನಡೆದ ಸಹಕಾರ ಚಳವಳಿಯಿಂದಲೇ ಮುಕ್ತ ತಂತ್ರಾಂಶಗಳು ಇಂದು ಖಾಸಗಿ ಸಂಸ್ಥೆಗಳನ್ನು ಬೆಚ್ಚಿ ಬೀಳಿಸಿವೆ. ಆದರೆ ಇಂಥ ಸಾರ್ವಜನಿಕ ಉತ್ಪನ್ನಗಳನ್ನು ನಮ್ಮ ಸಹಕಾರಿ ರಂಗವು ಒಂದಿನಿತೂ ಗಮನಿಸಿಲ್ಲ.
ಉದಾಹರಣೆಗೆ ಕೋರ್ ಬ್ಯಾಂಕಿಂಗ್ ತಂತ್ರಾಂಶ ಮೈಬ್ಯಾಂಕೋ ಎನ್ನುವುದು ಮುಕ್ತವಾಗಿ ಲಭ್ಯವಿದೆ ಎಂಬುದು ನಮ್ಮ ಎಷ್ಟು ಸಹಕಾರಿ ಬ್ಯಾಂಕುಗಳಿಗೆ ಗೊತ್ತಿದೆ? ಗ್ನುಕ್ಯಾಶ್ ಎಂಬ ಮುಕ್ತ ಹಣಕಾಸು ತಂತ್ರಾಂಶ (ಭಾರತದ ಟ್ಯಾಲಿ ತಂತ್ರಾಂಶಕ್ಕೆ ಹೋಲಿಸಬಹುದಾದದ್ದು) ಎಷ್ಟೋ ವರ್ಷಗಳಿಂದ ಬಳಕೆಯಲ್ಲಿದೆ ಎಂದು ಎಷ್ಟು ಸಹಕಾರಿ ಕಾರ್ಯಕರ್ತರಿಗೆ ಗೊತ್ತಿದೆ? ಮೈಕ್ರೋನಾನ್ಸ್ ರಂಗಕ್ಕಾಗಿ ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್ ಚಳವಳಿಯಿಂದ ಮೈಫೋಸ್ ಎಂಬ ಮುಕ್ತ ತಂತ್ರಾಂಶ ಬಿಡುಗಡೆಯಾಗಿದೆ. ಆಹಾರ ಉತ್ಪನ್ನಗಳ ಸಹಕಾರಿ ಸಂಸ್ಥೆಗಳು ಅಮೆರಿಕಾದ ಲೋಕಲ್ಫುಡ್ಕೋಆಪ್ ಜಾಲತಾಣದಿಂದ ತಮಗೆ ಬೇಕಾದ ತಂತ್ರಾಂಶವನ್ನು ಪಡೆದುಕೊಳ್ಳಬಹುದು.
ಇನ್ನು ಕಂಪ್ಯೂಟರಿನಲ್ಲಿ ಬೇಕಾಗುವ ಓಪನ್ ಆಫೀಸ್ ಎಂಬ ಅಫೀಸ್ ತಂತ್ರಾಂಶವಂತೂ ಖಾಸಗಿ ಉತ್ಪನ್ನವಾದ ಮೈಕ್ರೋಸಾಫ್ಟ್ ಆಫೀಸ್ಗಿಂತ ಎಷ್ಟೋ ಉತ್ತಮವಾಗಿದೆ ಎಂಬುದು ಬಳಕೆದಾರರ ಅನಿಸಿಕೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಸಹಕಾರಿ ರಂಗಗಳು ಈಗಲೂ `ವೆಂಡರ್ ಲಾಕ್’ ಆಗಿರುವ (ತಂತ್ರಾಂಶ ಸಂಸ್ಥೆಗಳ ಕೈಯಲ್ಲೇ ರೂಪಾಂತರದ, ಬದಲಾವಣೆಯ ನಿಯಂತ್ರಣ ಇರುವ) ತಂತ್ರಾಂಶಗಳನ್ನೇ ದುಬಾರಿ ಬೆಲೆಗೆ ಖರೀದಿ ಮಾಡುತ್ತ, ಬಳಕೆಯನ್ನೂ ಮಾಡದೇ ಇರುವುದು ಸಂಪನ್ಮೂಲದ ದುರ್ಬಳಕೆ ಅಲ್ಲವೆ?
ಸಹಕಾರ ರಂಗದಲ್ಲಿ ವೆಬ್ಸೈಟ್ಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವ ಯತ್ನವು ಒಂದು ದಶಕದಿಂದಲೇ ನಡೆದಿದೆ ಎಂಬುದು ಸ್ವಾಗತಾರ್ಹ. ಆದರೆ ಇಂಥ ಜಾಲತಾಣಗಳು ಸಮಯಕ್ಕೆ ಸರಿಯಾಗಿ ತತ್ಸಾಮಯಿಕವಾಗದೆಯೇ (ಅಪ್ಡೇಟ್) ಇರುತ್ತವೆ ಎಂಬುದೂ ಒಂದು ಹಿನ್ನಡೆ. ಜಾಲತಾಣಗಳನ್ನು ಎಂದೂ ಬದಲಾಯಿಸದ ಹಾಗೆ ಭದ್ರವಾದ ಕೋಟೆ ಕಟ್ಟಿದಂತೆ ಕಟ್ಟುವ ಯುಗ ಮುಗಿದಿದೆ. ಈಗ ಬ್ಯಾಂಕಿನ ಸಿಬ್ಬಂದಿಗಳೇ ಕೊಂಚ ತರಬೇತಿಯೊಂದಿಗೆ ಪ್ರತಿದಿನವೂ ಜಾಲತಾಣದ ಮೂಲಕ ಗ್ರಾಹಕರನ್ನು ತಲುಪುವ ಮುಕ್ತ ಜಾಲತಾಣ ನಿರ್ವಹಣಾ ತಂತ್ರಾಂಶಗಳೂ ಲಭ್ಯವಾಗಿವೆ. ಅಲ್ಲದೆ ಫೇಸ್ಬುಕ್, ಟ್ವಿಟರ್ನಂಥ ಸೋಶಿಯಲ್ ನೆಟ್ವರ್ಕಿಂಗ್ ಜಾಲತಾಣಗಳನ್ನು ಸಹಕಾರ ರಂಗವು ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವುದನ್ನು ನಾನಿನ್ನೂ ಕಾಣಬೇಕಿದೆ. ಜಾಣ ಸಹಕಾರಿ ಸಂಸ್ಥೆಗಳು ಕೇವಲ ಪ್ರಚಾರಕ್ಕಾಗಿ ಮಾತ್ರವಲ್ಲ, ಯುವ ಸಮುದಾಯದ ಜೊತೆಗೆ, ಅವರ ಇಷ್ಟದ ಇಂಟರ್ನೆಟ್ ಮಾಧ್ಯಮದಲ್ಲೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಮುಂದಾಗುತ್ತವೆ. ಅದಿಲ್ಲವಾದರೆ ಈ ದಶಕದ ಕೊನೆಯಲ್ಲಿ ಸಹಕಾರ ರಂಗವು ವಿಪರೀತ ಏಕಾಂಗಿತನಕ್ಕೆ ಬಲಿಯಾಗುತ್ತದೆ.
2012ರ ಅಂತಾರಾಷ್ಟ್ರೀಯ ಸಹಕಾರ ವರ್ಷವನ್ನು ಆಚರಿಸಲು ಮುಂದಾಗಿರುವ ವಿಶ್ವಸಂಸ್ಥೆಯ ಟ್ವಿಟರ್ ಖಾತೆಯಲ್ಲಿ ಕೇವಲ ಏಳು ಟ್ವಿಟರ್ ಸಂದೇಶಗಳಿವೆ ಎಂಬುದೇ ಈ ವರ್ಷದ ಬಗೆಗಿನ ಪ್ರಚಾರ ಎಷ್ಟು ಮಂದಗತಿಯಲ್ಲಿ ಸಾಗಿದೆ ಎಂಬುದಕ್ಕೊಂದು ಕನ್ನಡಿ.
ಅದಿರಲಿ, ಕೇರಳದ ಎರ್ನಾಕುಲಂನಲ್ಲಿ ಓಪನ್ಸೋರ್ಸ್ ಇಂಡಸ್ಟ್ರಿಯಲ್ ಸೊಸೈಟಿ ಲಿಮಿಟೆಡ್ (ಓಎಸ್ಎಸ್ಐಸಿಎಸ್) ಎಂಬ ತಂತ್ರಾಂಶ ಅಭಿವೃದ್ಧಿಯ ಉದ್ಯಮವೊಂದು ಸಹಕಾರಿ ರಂಗದಲ್ಲೇ,1998ರಷ್ಟು ಹಿಂದೆಯೇ ಅರಂಭವಾಗಿದೆ. ಮುಕ್ತ ತಂತ್ರಾಂಶದ ತತ್ವದಲ್ಲಿ (ಮುಕ್ತ ತಂತ್ರಾಂಶ ಎಂದರೆ, ಖಾಸಗಿ ಒಡೆತನದ ಬದಲಿಗೆ ಸಾಮುದಾಯಿಕ ಒಡೆತನ ಮತ್ತು ಹಂಚಿಕೆಯ ಸ್ವಾತಂತ್ರ್ಯವನ್ನು ಹೊಂದಿರುವ ತಂತ್ರಾಂಶಗಳು ಎಂದು ಸಂಕ್ಷಿಪ್ತವಾಗಿ ಹೇಳಬಹುದು) ಹಲವು ತಂತ್ರಾಂಶಗಳನ್ನು ರೂಪಿಸಿದ ಅಗ್ಗಳಿಕೆ ಈ ಸಂಸ್ಥೆಯದು. ಸ್ಮಾರ್ಟ್ ಅಸೆಟ್ (ಸ್ಥಿರ ಆಸ್ತಿ ನಿರ್ವಹಣಾ ವ್ಯವಸ್ಥೆ), ಕಲೆಕ್ಷನ್ ಮ್ಯಾನೇಜರ್ (ಕಲೆಕ್ಷನ್ ಕೌಂಟರ್ ನಿರ್ವಹಣಾ ವ್ಯವಸ್ಥೆ), ಸಂಮಿತ್ರ (ಕೋರ್ ಬ್ಯಾಂಕಿಂಗ್ ವ್ಯವಸ್ಥೆ), ವಿದ್ಯಾಮಿತ್ರ (ಇಂಟರ್ನೆಟ್ ಆಧಾರಿತ ಶಿಕ್ಷಣ ಸಂಸ್ಥೆಗಳು ಬಳಸುವ ನಿರ್ವಹಣಾ ವ್ಯವಸ್ಥೆ), – ಇವೆಲ್ಲವನ್ನೂ ಈ ಸಂಸ್ಥೆಯು ರೂಪಿಸಿದ್ದು ನಿಜಕ್ಕೂ ಗಮನಾರ್ಹವಾದ ಸಾಧನೆ. ಭಾರತೀಯ ಸನ್ನಿವೇಶಗಳಿಗೆ ತಕ್ಕಂತೆ ರೂಪುಗೊಂಡಿರುವ ಈ ತಂತ್ರಾಂಶಗಳನ್ನಾದರೂ ನಮ್ಮ ಸಹಕಾರಿ ರಂಗಗಳು ಬಳಸಿಕೊಂಡರೆ ಒಳ್ಳೆಯದು.
ಸಹಕಾರ ರಂಗದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ದಕ್ಷತೆ ಮೂಡಬೇಕಾದರೆ ಗಣಕೀಕರಣ ಆಗಲೇಬೇಕು. ಆದರೆ ಈಗ ನಡೆಯುತ್ತಿರುವಂಥ ಅರಾಜಕತೆಯ ಗಣಕೀಕರಣ ಖಂಡಿತ ಅಲ್ಲ. ದಿನದಿನವೂ, ಸಹಕಾರಿ ಸಂಸ್ಥೆಯ ಸಿಬ್ಬಂದಿಗಳೂ ಸುರಳೀತವಾಗಿ ಬಳಸುವಂಥ ಮುಕ್ತ ತಂತ್ರಾಂಶಗಳನ್ನು ಸಮರ್ಥವಾಗಿ ಅಳವಡಿಸಿಕೊಳ್ಳುವುದೇ ನಿಜವಾದ ಗಣಕೀಕರಣವಾಗಿದೆ.
ತರಬೇತಿ ಹೆಚ್ಚು ವೈಜ್ಞಾನಿಕವಾಗಲಿ
ಸಹಕಾರ ರಂಗದ ಇನ್ನೊಂದು ಜಾಡ್ಯ ಎಂದರೆ ತರಬೇತಿಗಳಲ್ಲಿನ ತಾಜಾತನದ ಕೊರತೆ. ನಾನು ಹಲವಾರು ಸಹಕಾರಿ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದೇನೆ. ಯಾವುದೇ ಗೋಷ್ಠಿ ಇದ್ದರೂ ಅದರಲ್ಲಿ ಯಾರೋ ಒಬ್ಬಿಬ್ಬರು ಕೆಲವು ಕಾನೂನಿನ, ಹಣಕಾಸು ವ್ಯವಹಾರದ ಪ್ರಶ್ನೆಗಳನ್ನು ಕೇಳುವುದು ಬಿಟ್ಟರೆ ಪ್ರತಿನಿಧಿಗಳ ಭಾಗಿತ್ವ ತೀರಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಅಲ್ಲದೆ ಪ್ರತೀ ಕಾರ್ಯಗಾರದಲ್ಲೂ ತಮ್ಮ ತಮ್ಮ ಸಹಕಾರಿ ಸಂಸ್ಥೆಗಳ ಸಮಸ್ಯೆಗಳನ್ನು ಚರ್ಚಿಸುವುದರಲ್ಲಿಯೇ ಹೆಚ್ಚು ಸಮಯ ಕಳೆದುಹೋಗುತ್ತದೆ. ಸಾಮುದಾಯಿಕ ಕಾರ್ಯಕ್ರಮಗಳಲ್ಲಿ ಸಮುದಾಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಪರಿಹರಿಸಿಕೊಳ್ಳುವ ಯತ್ನ ನಡೆಯಬೇಕು. ಇತ್ತೀಚೆಗೆ ಹಲವು ಕಾರ್ಯಾಗಾರಗಳು ಈ ಬಗ್ಗೆ ಗಮನ ಹರಿಸಿವೆಯಾದರೂ ಆಗಬೇಕಾದ್ದು ಬಹಳಷ್ಟಿದೆ. ಸಹಕಾರ ಸಿಬ್ಬಂದಿಗಳಿಗೆ ರಿಫ್ರೆಶರ್ ಕೋರ್ಸುಗಳು ಕಾಟಾಚಾರಕ್ಕೆ ಎನ್ನುವಂತೆ ನಡೆಯುವುದೇ ಹೆಚ್ಚು. ಸಹಕಾರ ಸಂಸ್ಥೆಗಳು ಶಿಕ್ಷಣ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪದೇ ಪದೇ ಅದೇ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸುವುದರ ಬದಲು, ಹೊಸ ಸಂಪನ್ಮೂಲ ವ್ಯಕ್ತಿಗಳಿಗೆ ಹುಡುಕಾಟ ನಡೆಸಬೇಕು.
ಈ ಎಲ್ಲ ಸಂಗತಿಗಳ ಬಗ್ಗೆ ಸಹಕಾರ ಸಂಸ್ಥೆಗಳು (ಅವು ಬಿಡಿ ಸಹಕಾರಿ ಸಂವಾಗಿರಬಹುದು, ಅಥವಾ ಶಾಸನಬದ್ಧ ಶೃಂಗ ಸಂಸ್ಥೆಯಾಗಿರಬಹುದು) ಸೂಕ್ತ ಗಮನ ಹರಿಸುತ್ತವೆ ಎಂದು ನಾನು ನಂಬಿದ್ದೇನೆ.
ಬೇಕಿದೆ: ಸಹಕಾರ ರಂಗಕ್ಕೊಂದು ಸುಭದ್ರ ಬ್ರಾಂಡಿಂಗ್
ಮಾಧ್ಯಮರಂಗದಲ್ಲೇ ಎರಡು ದಶಕಗಳಿಂದ ಇರುವ ನಾನು ಸಹಕಾರ ರಂಗಗಳ ಆಧುನೀಕರಣ ಮತ್ತು ಬ್ರಾಂಡಿಂಗ್ ಬಗ್ಗೆ ಕೆಲವು ವಿಧಾಯಕ ಕಿವಿಮಾತುಗಳನ್ನು ಹೇಳಬಯಸುತ್ತೇನೆ. ಕೇವಲ ಸಹಕಾರ ರಂಗದ ಹುಳುಕುಗಳನ್ನು ಹೇಳುವ ಜಾಡಿನಿಂದ ದೂರ ಸರಿಯುವ ಯತ್ನವಿದು!
ಕ್ರಿ.ಶ. 2012ರ ವರ್ಷವನ್ನು ಅಂತಾರಾಷ್ಟ್ರೀಯ ಸಹಕಾರಿ ವರ್ಷವೆಂದು ವಿಶ್ವ ಸಂಸ್ಥೆಯು ೋಷಿಸಿದ್ದು ಸಹಕಾರ ರಂಗದ ಬಗ್ಗೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇಂಥ ಸಂದರ್ಭದಲ್ಲಿ ಸಹಕಾರಿಗಳು ವರ್ಚಸ್ಸು ವೃದ್ಧಿಗೆ ತಮ್ಮದೇ ಕ್ರಮಗಳನ್ನು ರೂಪಿಸಿಕೊಳ್ಳುವುದು ಉತ್ತಮ. ನನ್ನ ಅಲ್ಪ ಅನುಭವದಲ್ಲಿ ಕಂಡುಕೊಂಡ ಕೆಲವು ಸಲಹೆಗಳನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ.
- ಪ್ರತಿಯೊಂದೂ ಸಹಕಾರ ಸಂಸ್ಥೆಯು ತನ್ನದೇ ಆದ ಒಂದು ಲಾಂಛನವನ್ನು (ಲೋಗೋ) ಹೊಂದಿರಬೇಕು. ಈ ಲಾಂಛನವು ಆಯಾ ಸಂಸ್ಥೆಯ ಆಶೋತ್ತರಗಳನ್ನು, ಕಾರ್ಯಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು. ಇದಕ್ಕಾಗಿ ಸಂಸ್ಥೆಗಳು ತಮ್ಮ ಊರಿನಲ್ಲಿರುವ, ಹತ್ತಿರದ ಮಹಾನಗರಗಳಲ್ಲಿ ಇರುವ ಹಿರಿಯ ಕಲಾವಿದರ ನೆರವನ್ನು ಪಡೆಯಬಹುದು. ಈ ಲಾಂಛನವು ಬಹುವರ್ಣಗಳಿಂದ ಕೂಡಿದ್ದರೂ, ಏಕವರ್ಣದಲ್ಲೂ (ಮಾನೋಗ್ರಾಂ) ಬಹುಸುಲಭವಾಗಿ ಬಳಸುವಂತಿರಬೇಕು. ಲೆಟರ್ಹೆಡ್, ವಿಸಿಟಿಂಗ್ ಕಾರ್ಡ್, ಆಹ್ವಾನ ಪತ್ರ, ಕವರುಗಳು, ಪೋಸ್ಟರುಗಳು, ಬ್ಯಾನರುಗಳು, ಹೋರ್ಡಿಂಗ್ಗಳು, ವೆಬ್ಸೈಟ್ಗಳು – ಎಲ್ಲದರಲ್ಲೂ ಈ ಲಾಂಛನವನ್ನು ಸುಲಭವಾಗಿ ಬಳಸುವಂತಿರಬೇಕು. ಈ ಲಾಂಛನವನ್ನು ಯಾವುದೇ ಸಂದರ್ಭದಲ್ಲೂ ವಿರೂಪಗೊಳಿಸದೆ, ಯಾವ ಬಣ್ಣವನ್ನೂ ಬದಲಿಸದೇ ಬಳಸಬೇಕು. ಹಾಗಾದಾಗ ಸಹಕಾರಿ ಸಂಸ್ಥೆಗೆ ಒಂದು ಸ್ಪಷ್ಟ ಚಹರೆ ಇದೆ ಎಂಬುದು ಸದಸ್ಯರಿಗೆ ಮತ್ತು ಜನತೆಗೆ ಅನ್ನಿಸುತ್ತದೆ. ಬಳಕೆದಾರರು ಯಾವಾಗಲೂ ಇಂಥ ಲಾಂಛನದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಇದು ಬ್ರಾಂಡ್ ಬಿಲ್ಡಿಂಗ್ನ ಮೊದಲ ಹೆಜ್ಜೆಯಾಗಿದೆ.
- ಸಹಕಾರಿ ಸಂಸ್ಥೆಗಳು ತಮ್ಮ ಲೆಟರ್ಹೆಡ್ಗಳನ್ನು, ಕವರುಗಳನ್ನು, ಎಲ್ಲಾ ಸಂಪರ್ಕ, ಸಂವಹನ ಮಾಧ್ಯಮಗಳಲ್ಲಿನ ಪರಿಕರಗಳನ್ನು ಸಂಸ್ಥೆಯ ಲಾಂಛನ ಹಾಗೂ ಒಂದು ನಿರ್ದಿಷ್ಟವಾದ (ಕಲಾವಿದರಿಂದ ನಿಶ್ಚಿತವಾದ) ವಿನ್ಯಾಸ ಹಾಗೂ ಅಕ್ಷರದಲ್ಲಿ ಇರುವ ಸಂಸ್ಥೆಯ ಹೆಸರನ್ನೇ ಬಳಸಬೇಕು. ಒಂದೊಂದು ಸಲ ಒಂದೊಂದು ಅಕ್ಷರವನ್ನು (ಫಾಂಟ್) ಬಳಸುವುದರಿಂದ ಸಂಸ್ಥೆಯ ಚಹರೆಗೆ ಭಂಗ ಬರುತ್ತದೆ. ಅಲ್ಲದೆ ಸಂಸ್ಥೆಯ ಹೆಸರು ಬರೆಯಲು ಬಳಸುವ ಬಣ್ಣ, ಅಕ್ಷರ ಗಾತ್ರ, ವಿನ್ಯಾಸ ಯಾವುದನ್ನೂ, ಯಾವ ಕಾಲಕ್ಕೂ (ಮುಂದೊಮ್ಮೆ ಬ್ರಾಂಡಿಂಗ್ ವಿನ್ಯಾಸವನ್ನು ಬದಲಿಸುವ ಅಗತ್ಯ ಬರುವವರೆಗೆ) ಬದಲಿಸಬಾರದು.
- ಸಂಸ್ಥೆಯ ಲಾಂಛನವುಳ್ಳ ಲೋಹದ ಪದಕವನ್ನು ಸಂಸ್ಥೆಯ ನಿರ್ದೇಶಕ ಮಂಡಳಿ ಮತ್ತು ಸದಸ್ಯರು ತಾವು ಭಾಗವಹಿಸುವ ವಿವಿಧ ಸಹಕಾರಿ ಕಾರ್ಯಕ್ರಮಗಳಲ್ಲಿ ಬಳಸುವುದರಿಂದ ತಂಡದ ಮನೋಭಾವ ಮೂಡುತ್ತದೆ. ಜೊತೆಗೇ ಸಹಕಾರಿ ಸಂಸ್ಥೆಯ ಸದಸ್ಯರು ಒಂದು ಉಡುಗೆ ಸಂಹಿತೆ (ಡ್ರೆಸ್ಕೋಡ್) ಹೊಂದುವುದೂ ಮುಖ್ಯ. ಭಾರತೀಯ ಸಮಾಜಕ್ಕೆ ಹೊಂದುವ, ಸ್ಥಳೀಯವಾಗಿ ಬಳಸುವ ಉಡುಗೆಯನ್ನೇ ನಿರ್ದಿಷ್ಟ ವರ್ಣ ಸಂಯೋಜನೆಯಿಂದ ಬಳಸುವುದು ಅತಿ ಸುಲಭಸಾಧ್ಯ ಕ್ರಮ. ಇಂಥ ಉಡುಗೆ ಸಂಹಿತೆ ಸಾಧ್ಯವಿಲ್ಲದ ಪಕ್ಷದಲ್ಲಿ ಶುದ್ಧವಾದ, ಇಸ್ತ್ರಿ ಮಾಡಿದ ಸರಳ ಉಡುಗೆಯನ್ನು ಧರಿಸಲು ಸೂಚಿಸಬಹುದು. ಎಲ್ಲ ಸಿಬ್ಬಂದಿಗಳೂ ಪ್ರತಿದಿನವೂ ಕನಿಷ್ಟ ಹಿಕ ಚಹರೆಯ ಶಿಸ್ತನ್ನು (ತಲೆಗೂದಲು, ಮುಖಕ್ಷೌರ, ಪಾದರಕ್ಷೆಗಳು, ಉಗುರು, ದುರ್ವಾಸನೆ ಬೀರದ ಬಾಯಿ – ಹೀಗೆ!) ಮೈಗೂಡಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ವಿಶೇಷವಾಗಿ ಪುರುಷ ಯುವ ಸಿಬ್ಬಂದಿಗಳು ಸಂಸ್ಥೆಯ ಆಶಯಗಳನ್ನು ಬಿಂಬಿಸುವ ಉಡುಗೆ ಧರಿಸಿರಬೇಕೇ ವಿನಃ ಅವರ ಮನಸ್ಸಿಗೆ ಬಂದ ಆಧುನಿಕ ಉಡುಗೆಯನ್ನಲ್ಲ ಎಂಬುದನ್ನು ಸೌಜನ್ಯದಿಂದ ಮನವರಿಕೆ ಮಾಡಿಕೊಡಬೇಕು.
- ಸಂಸ್ಥೆಯ ಎಲ್ಲ ಪತ್ರ ವ್ಯವಹಾರಗಳಲ್ಲೂ ಒಂದು ನಿರ್ದಿಷ್ಟ ವಾಕ್ಯಶೈಲಿ, ವಿನಯಪೂರ್ವಕ ನಿವೇದನೆ ಇರಬೇಕು. ಸಂಸ್ಥೆಯ ಪತ್ರಗಳನ್ನು ಅತ್ಯಂತ ಶಿಸ್ತಿನಿಂದ ಬರೆಯಬೇಕು/ ಟೈಪ್ ಮಾಡಬೇಕು. ಪತ್ರವನ್ನು ಅಂಚೆಗೆ ಹಾಕುವ ಕವರುಗಳಲ್ಲೂ ವಿಳಾಸವನ್ನು ಬರೆಯುವುದರಿಂದ, ವಿಳಾಸದ ಲೇಬಲ್ ಅಂಟಿಸುವುದರಿಂದ ಹಿಡಿದು, ಸಂಸ್ಥೆಯ ರಬ್ಬರ್ ಸ್ಟಾಂಪ್ ಹಾಕುವವರೆಗೆ ಶಿಸ್ತು, ಅಚ್ಚುಕಟ್ಟು ಇದ್ದರೆ, ಅದು ಪ್ರಥಮ ನೋಟದಲ್ಲೇ ಪತ್ರವನ್ನು ಬರೆದವರ ಗಮನ ಸೆಳೆಯುತ್ತದೆ; ಗೌರವ ಮೂಡಿಸಲು ಸಫಲವಾಗುತ್ತದೆ.
- ಸಂಸ್ಥೆಯ ನೀತಿ ಸಂಹಿತೆಯನ್ನು ಸಂಸ್ಥೆಯ ಎಲ್ಲ ಸದಸ್ಯರಿಗೂ ಕೊಡಬೇಕು. ಸಂಸ್ಥೆಯ ಕಚೇರಿಗಳಲ್ಲಿ ಸಹಕಾರ ತತ್ವಗಳ ಮತ್ತು ಸಂಸ್ಥೆಯ ಗ್ರಾಹಕ / ಸದಸ್ಯಸೇವಾ ನೀತಿಯನ್ನು ದೊಡ್ಡ ಅಕ್ಷರಗಳಲ್ಲಿ ಶಿಸ್ತಾಗಿ ಪ್ರಕಟಿಸಬೇಕು. ಕಚೇರಿಯಲ್ಲಿ ಬೇಕಾಬಿಟ್ಟಿ ಪ್ರಕಟಣೆಗಳನ್ನು ಅಂಟಿಸುವ ಬದಲು ಒಂದು ಸೂಚನಾಫಲಕದಲ್ಲಿ ಅಚ್ಚುಕಟ್ಟಾಗಿ ಅಂಟಿಸುವುದು, ಪಿನ್ ಮಾಡುವುದು – ಇವೆಲ್ಲದರಲ್ಲೂ ಸಂಸ್ಥೆಯು ತೋರುವ ಶಿಸ್ತು ಸಂಸ್ಥೆಯ ಆಂತರಿಕ ಗುಣಮಟ್ಟಕ್ಕೆ ಸಾಕ್ಷಿಯಾಗುತ್ತದೆ.
- ಸಂಸ್ಥೆಯ ಸಿಬ್ಬಂದಿಗಳು ಯಾವುದೇ ಕರೆಯನ್ನು ಸ್ವೀಕರಿಸುವಾಗ ಅಥವಾ ಕರೆ ಮಾಡುವಾಗ, ಅತಿಗಳನ್ನು, ಸದಸ್ಯರನ್ನು, ಗ್ರಾಹಕರನ್ನು ಸ್ವಾಗತಿಸುವಾಗ ಮತ್ತು ವಿದಾಯದ ಮಾತುಗಳನ್ನು ಹೇಳುವಾಗ ಯಾವ ರೀತಿ ಮಾತಾಡಬೇಕು ಎಂದು ಮೊದಲೇ ಲಿಖಿತವಾಗಿ ರೂಪಿಸಿಕೊಂಡಿದ್ದರೆ ಒಳ್ಳೆಯದು. ಸಂಸ್ಥೆಯ ಸಿಬ್ಬಂದಿಗಳ ವರ್ತನೆಯಿಂದ ಇಡೀ ಸಂಸ್ಥೆಯ ಸದಾಚಾರದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ. ಹಾಗೆಯೇ ಸಂಸ್ಥೆಯ ನಿರ್ದೇಶಕರೂ ಉಡುಗೆಯ ವಿಷಯದಲ್ಲಿ ಅತ್ಯಂತ ಮುತುವರ್ಜಿಯಿಂದ ನಡೆದುಕೊಳ್ಳಬೇಕು.
- ಸಂಸ್ಥೆಯ ಆಡಳಿತ ಮಂಡಳಿ ಸಭೆಯನ್ನು ಅತ್ಯಂತ ಸಮಯಬದ್ಧವಾಗಿ, ಶಿಸ್ತಿನಿಂದ ನಡೆಸಿ ಸಿಬ್ಬಂದಿಗಳ ಗೌರವಕ್ಕೆ ಪಾತ್ರವಾಗಬೇಕೇ ಹೊರತು ಬೇಕಾದ ಸಮಯಕ್ಕೆ ಬಂದು ಹೋದರೆ, ಸಿಬ್ಬಂದಿಗಳಲ್ಲೂ ಆಶಿಸ್ತು ಮೂಡುತ್ತದೆ ಎಂಬುದನ್ನು ಮರೆಯಬಾರದು. ಇಂಥ ಶಿಸ್ತಿನ ವರ್ತನೆಗಳು ಆಂತರಿಕ ಬ್ರಾಂಡ್ ಬಿಲ್ಡಿಂಗ್ ವಿಷಯಗಳಾದರೂ ನಿಧಾನವಾಗಿ ಸಿಬ್ಬಂದಿಗಳಿಂದ ಸಾರ್ವಜನಿಕರಿಗೂ ತಿಳಿದು ಅವರಿಗೆ ನಿರ್ದೇಶಕರ ಬಗ್ಗೆ ಗೌರವ ಹೆಚ್ಚಾಗುತ್ತದೆ.
- ಸಂಸ್ಥೆಯ ಸಿಬ್ಬಂದಿಗಳು ಸಂಸ್ಥೆಯ ಹೊರಗೂ, ದಿನದ 24 ಗಂಟೆಗಳ ಕಾಲವೂ (ಆಗ ಕಚೇರಿಯಲ್ಲಿ ಇರುವುದಿಲ್ಲ ಎನ್ನುವುದನ್ನು ಬಿಟ್ಟರೆ) ಸಂಸ್ಥೆಯ ಪ್ರತಿನಿಧಿಗಳೇ.ಆದ್ದರಿಂದ ಅವರು ಸಾರ್ವಜನಿಕ ಜೀವನದಲ್ಲಿ ಹೇಗೆ ಇರುತ್ತಾರೆ ಎನ್ನುವುದೂ ಬ್ರಾಂಡ್ ಬಿಲ್ಡಿಂಗ್ನ ಮುಖ್ಯವಾದ ಸಂಗತಿ. ಒಬ್ಬ ಸಿಬ್ಬಂದಿಯು ಸರಿಯಿಲ್ಲ ಎಂದಾದರೂ ಸಾಕು, ಸಂಸ್ಥೆಯ ಮೇಲಿನ ವಿಶ್ವಾಸಾರ್ಹತೆ ಸಾಕಷ್ಟು ಪ್ರಮಾಣದಲ್ಲಿ ಕುಗ್ಗುತ್ತದೆ. ಇದೇ ಮಾತು ನಿರ್ದೇಶಕ ಮಂಡಳಿಯ ಸದಸ್ಯರಿಗೂ ಅನ್ವಯಿಸುತ್ತದೆ.
- ಸಂಸ್ಥೆಯ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮಾಧ್ಯಮದ ಪ್ರತಿನಿಧಿಗಳನ್ನು ಕರೆದು, ವರದಿ ಮಾಡುವಂತೆ ವಿನಂತಿಸಬೇಕು. ಸಂಸ್ಥೆಯ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ವೃತ್ತಿಪರ ಛಾಯಾಗ್ರಾಹಕರಿಂದ ತೆಗೆಸಿ (ಸಿಬ್ಬಂದಿಗಳಿಗೆ ಈ ಕೆಲಸ ಕೊಡಬೇಡಿ) ಮಾಧ್ಯಮಗಳಿಗೆ ರವಾನಿಸಬಹುದು. ಹೀಗೆ ಮಾಧ್ಯಮ ಪ್ರತಿನಿಧಿಗಳನ್ನು ನಿರ್ವಹಿಸಲೆಂದೇ ನಿರ್ದೇಶಕರು ಮತ್ತು ಸಿಬ್ಬಂದಿಗಳಿರುವ ಚಿಕ್ಕ ತಂಡವನ್ನು ರಚಿಸಿಕೊಳ್ಳುವುದರಿಂದ ಸಂಸ್ಥೆಯ ವರ್ಚಸ್ಸು ವೃದ್ಧಿಯ ಕೆಲಸ ಸುಲಭವಾಗುತ್ತದೆ.
- ಸಹಕಾರಿ ಸಂಸ್ಥೆಗಳು ಇಂದಿನ ಯುವ ಜನಾಂಗದ ಜೊತೆಗೆ ಗುರುತಿಸಿಕೊಳ್ಳಲು ತಮ್ಮದೇ ಆದ ವೆಬ್ಸೈಟನ್ನು ಹೊಂದಿರುವುದು ಅತ್ಯಗತ್ಯ ಎಂಬುದನ್ನು ಮೊದಲೇ ತಿಳಿಸಿದ್ದೇನೆ. ಅಲ್ಲದೆ ಈಮೈಲ್ ವ್ಯವಹಾರ ಮಾಡಲು ತಮ್ಮ ಸಂಸ್ಥೆಯ ಹೆಸರಿನ ಈ ಮೈಲ್ ಗಳನ್ನೇ ಬಳಸುವುದು ಅತ್ಯಂತ ಸೂಕ್ತ. (ಈಗ ವೆಬ್ಸೈಟ್ ಹೊಂದಿರುವ ಸಂಸ್ಥೆಗಳೂ ತಮ್ಮ ಸಂಸ್ಥೆಯ ಹೆಸರಿನ ಈಮೈಲ್ ಬಳಸುತ್ತಿಲ್ಲ ಎಂಬುದು ಗಮನಾರ್ಹ.) ಇಂಥ ವೆಬ್ಸೈಟ್ಗಳನ್ನು ವೃತ್ತಿಪರರಿಂದಲೇ ರೂಪಿಸಬೇಕು. ಇದಕ್ಕಾಗಿ ಕೂಡಾ ಮಾಧ್ಯಮ ನಿರ್ವಹಣಾ ತಂಡವನ್ನು ಬಳಸಿಕೊಳ್ಳಬಹುದು. ಈಮೈಲ್ ಬರೆಯುವಾಗಲೂ ಒಂದು ಶಿಸ್ತನ್ನು ರೂಢಿಸಿಕೊಳ್ಳಬೇಕು. ಸಂಕ್ಷಿಪ್ತ ಪದಗಳನ್ನು ಬಳಸದೇ ಸಂಪೂರ್ಣ, ವ್ಯಾಕರಣ ಶುದ್ಧ ವಾಕ್ಯಗಳನ್ನು ಬರೆಯುವುದು ಅತಿಮುಖ್ಯ. ಪ್ರತೀ ಪತ್ರದಲ್ಲೂ ಪತ್ರವನ್ನು ಬರೆದವರ ಹೆಸರು, ಹುದ್ದೆ, ದೂರವಾಣಿ ಸಂಖ್ಯೆಯನ್ನು ನಮೂದಿಸಿರಬೇಕು.
- ಸಹಕಾರಿ ಸಂಸ್ಥೆಗಳು ರಾಜ್ಯ, ರಾಷ್ಟ್ರಮಟ್ಟದ ಸಮಾರಂಭ, ಸಂಕಿರಣ, ಕಾರ್ಯಕ್ರಮ, ಚುನಾವಣೆಗಳಲ್ಲಿ ತಪ್ಪದೆ ಭಾಗವಹಿಸುವುದರಿಂದ ಸಹಕಾರ ರಂಗದಲ್ಲಿ ಸಂಸ್ಥೆಯ ಬ್ರಾಂಡಿಂಗ್ ಆಗುತ್ತದೆ. ಸಹಕಾರ ರಂಗದಲ್ಲಿ ಇರುವ ವಿಶಿಷ್ಟ ಪ್ರಶಸ್ತಿಗಳನ್ನು ಪಡೆಯುವುದಕ್ಕೆ ಸಂಸ್ಥೆಗಳು ಸ್ಪರ್ಧಿಸಬೇಕು.
- ಬ್ರಾಂಡಿಂಗ್ ಬೆಳೆಸಲು ತಮ್ಮ ಸೇವೆಗಳ ಗುಣಮಟ್ಟವನ್ನು ವೃದ್ಧಿಸಿಕೊಳ್ಳುವುದು ಅತ್ಯಂತ ಮುಖ್ಯ. ಇದಕ್ಕಾಗಿ ಸಂಸ್ಥೆಯ ನಿರ್ದೇಶಕ ಮಂಡಳಿಯು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಕಾಲಕ್ಕೆ ತಕ್ಕಂತೆ ತನ್ನ ಉತ್ಪನ್ನಗಳ ಮಾದರಿಯನ್ನು ನವೀಕರಿಸಬಹುದು.
- ಪ್ರತೀ ವರ್ಷವೂ ಸಹಕಾರಿ ಸಂಸ್ಥೆಗಳು ತಮ್ಮ ಬ್ರಾಂಡ್ ಬಿಲ್ಡಿಂಗ್ಗೆ ಸೂಕ್ತವಾದ ಹಣವನ್ನು ಮೀಸಲಿಡಬೇಕು. ಈ ಮೊತ್ತದ ಚೌಕಟ್ಟಿನಲ್ಲಿಯೇ ಬ್ರಾಂಡ್ ಬಿಲ್ಡಿಂಗ್ ಮಾಡಬೇಕಾಗುತ್ತದೆ.
- ವರ್ಷಕ್ಕೊಮ್ಮೆ ಗ್ರಾಹಕರ ಸಂತೃಪ್ತಿ ಸಮೀಕ್ಷೆಯನ್ನೂ ಕೈಗೊಳ್ಳುವುದು ಸೂಕ್ತ. ಇಂಥ ಸಮೀಕ್ಷೆಗಳನ್ನು ವೃತ್ತಿಪರ ಸಂಸ್ಥೆಗಳ ನೆರವಿನಿಂದಲೇ ನಡೆಸುವುದು ಸೂಕ್ತ. ಅದಿಲ್ಲದೇ ಸಿಬ್ಬಂದಿಗಳಿಂದಲೇ ಸಮೀಕ್ಷೆ ನಡೆಸಿದರೆ ನಿಷ್ಪಕ್ಷಪಾತ ವರದಿಯನ್ನು ನಿರೀಕ್ಷಿಸಲಾಗದು.
ಸಹಕಾರಿ ಸಂಸ್ಥೆಗಳು ಸಾರ್ವಜನಿಕ ಬಂಡವಾಳದೊಂದಿಗೆ ನಡೆಯುತ್ತಿರುವ ದೇಶದ ಪ್ರಮುಖ ಆಕ ಚಟುವಟಿಕೆಯ ಕೇಂದ್ರಗಳು. ಇಂಥ ಸಂಸ್ಥೆಗಳು ಬ್ರಾಂಡ್ ಬಿಲ್ಡಿಂಗ್ನಿಂದ ಇನ್ನಷ್ಟು ಜವಾಬ್ದಾರಿ ಬೆಳೆಸಿಕೊಳ್ಳಬೇಕು; ಮತ್ತಷ್ಟು ಜನಪರ ಮತ್ತು ಜನಪ್ರಿಯ ಸಂಟನೆಗಳಾಗಬೇಕು.
ವೈದ್ಯನಾಥನ್ ಸಮಿತಿ ಶಿಫಾರಸುಗಳು : ಹತ್ತರಲ್ಲೊಂದು ಆಗಬೇಕೆ?
ಸಹಕಾರ ಸಂಗಳ ವ್ಯಾಪ್ತಿಯನ್ನು ವಿಸ್ತರಿಸಬೇಕು ಮತ್ತು ವೈವಿಧ್ಯಗೊಳಿಸಬೇಕು; ಬಹು ಉದ್ದೇಶಿತ ಸಹಕಾರ ಸಂಗಳನ್ನು ಪ್ರೋತ್ಸಾಹಿಸಬೇಕು; ವೈಜ್ಞಾನಿಕವಾದ ನೀತಿಗಳ ಆಧಾರದ ಮೇಲೆ ಸಹಕಾರಿ ಸಂಗಳ ಗಾತ್ರವನ್ನು ನಿರ್ಧರಿಸಬೇಕು – ಹೀಗೆಲ್ಲ ತಜ್ಞರು ಸಲಹೆಗಳನ್ನು ಕೊಡುತ್ತಿದ್ದಾರೆ. ಈಗ ಬಹು ಚರ್ಚೆಯಲ್ಲಿರುವ ವೈದ್ಯನಾಥನ್ ಸಮಿತಿ ಶಿಫಾರಸುಗಳು ಕೇವಲ ಧನ ಸಹಾಯದ ಪ್ರೋತ್ಸಾಹಕವನ್ನಷ್ಟೇ ಹೇಳುತ್ತಿಲ್ಲ. ಪ್ರತಿಯೊಂದೂ ಸಹಕಾರಿ ಸಂವು ಆಧುನೀಕರಣಗೊಳ್ಳಬೇಕು ಎಂಬ ಷರತ್ತನ್ನೂ ಹಾಕಿದೆ. ಈ ಹಿನ್ನೆಲೆಯಲ್ಲಿ 2005ರ ವೈದ್ಯನಾಥನ್ ವರದಿಯನ್ನು ಗಮನಿಸಬೇಕು. ಇಲ್ಲಿರುವ ಹಣಕಾಸು ಬೆಂಬಲದ ಪ್ಯಾಕೇಜಿನಿಂದ ಹಿಡಿದು ಎಲ್ಲ ಸಲಹೆಗಳೂ ಗಮನಾರ್ಹವೇ. ಈ ಸಮಿತಿಯಾದ ಮೇಲೆ 2009ರಲ್ಲಿ ಎಸ್ ಜಿ ಪಾಟೀಲ್ ನೇತೃತ್ವದ ಸಮಿತಿಯು ನೂರಾಮೂರು ಪುಟಗಳ ಇನ್ನೊಂದು ವರದಿಯನ್ನು ಕೊಟ್ಟು ಸಹಕಾರ ರಂಗದ ಬೆಳವಣಿಗೆಗೆ ಶಿಫಾರಸುಗಳನ್ನು ನೀಡಿದೆ. ಈ ವರದಿಯ ಅನುಬಂಧದಲ್ಲಿ 1914ರಿಂದ ಹಿಡಿದು ಈವರೆಗೆ ಬಂದ ಸುಮಾರು 36 ವಿವಿಧ ಸಮಿತಿಗಳು ಸಹಕಾರ ರಂಗದ ಬಗ್ಗೆ ನೀಡಿದ ಸಲಹೆಗಳನ್ನೂ ಪಟ್ಟಿ ಮಾಡಲಾಗಿದೆ. ಆದ್ದರಿಂದ ಸಹಕಾರ ರಂಗದ ಬಗ್ಗೆ ಸಲಹೆಗಳನ್ನು ಕೊಡುವುದಕ್ಕೆ ಅನುಭವಕ್ಕಿಂತ ಈಗ ಸಂಚಯಿತಗೊಂಡ ಮಾಹಿತಿಯನ್ನು ವಿಶ್ಲೇಷಿಸುವುದೇ ಮುಖ್ಯ ಎನ್ನುವುದು ನನ್ನ ಅನಿಸಿಕೆ.
ಸಹಕಾರ ರಂಗದಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದು ಒಂದೆಡೆ ತೀವ್ರ ಬೇಡಿಕೆ ಬರುತ್ತೆ. ಅದೇ ಉಸಿರಿನಲ್ಲಿ ವೈದ್ಯನಾಥನ್ ನಾನ್ಸ್ ಪ್ಯಾಕೇಜು ಬೇಕು ಎಂಬ ಆಸೆಯೂ ಸಹಕಾರ ರಂಗಕ್ಕಿದೆ. ಸಹಕಾರ ರಂಗವು ಎಂಥ ಅಸಹಾಯಕ ಸ್ಥಿತಿಯಲ್ಲಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?
ಹಸಿರುಕ್ರಾಂತಿ ವಿಫಲವಾಯ್ತು : ಸಹಕಾರ ರಂಗದತ್ತ ಆಸೆಯ ಕಣ್ಣು
ಪಂಜಾಬಿನಲ್ಲಿ ಶೇಕಡಾ 22ರಷ್ಟು ರೈತರು ಕೃಷಿಯನ್ನೇ ಬಿಟ್ಟಿ ನಗರಗಳಿಗೆ ವಲಸೆಯಾಗಿದ್ದಾರೆ; ಇನ್ನೂ ಶೇಕಡಾ 37ರಷ್ಟು ಕೃಷಿಕರು ನಗರಗಳಿಗೆ ವಲಸೆ ಹೋಗುವ ತಯಾರಿಯಲ್ಲಿ ಇದ್ದಾರೆ ಎಂದು ಇದೇ ಮಾರ್ಚ್ 12ರಂದು ಪಾಟಿಯಾಲಾದಲ್ಲಿ ನಡೆದ ಕೃಷಿಕರ ಸಮಸ್ಯೆ ಮತ್ತು ಸಹಕಾರ ಚಳವಳಿ ಕುರಿತ ಸಂಕಿರಣದಲ್ಲಿ ಪಂಜಾಬ್ ಕೃಷಿ ಆಯೋಗದ ಅಧ್ಯಕ್ಷ ಗುರುಚರಣ್ ಸಿಂಗ್ ಕಲ್ಕಟ್ ಹೇಳಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡದೇ ಈ ಕುಟುಂಬಗಳು ಶಿಲವಾಗಿವೆ ಎಂಬುದು ಅವರ ಅಭಿಮತ. ಹೆಚ್ಚಿದ ಕೃಷಿ ವೆಚ್ಚ, ಕಡಿಮೆಯಾದ ಆದಾಯವೇ ಇದಕ್ಕೆ ಕಾರಣವಂತೆ. ಹಸಿರು ಕ್ರಾಂತಿಯ ಭ್ರಮೆಯಲ್ಲಿ ಮೂರು ದಶಕಗಳ ಕಾಲ ದೇಶಕ್ಕೇ ಮಾದರಿ ಎಂಬ ಖ್ಯಾತಿ ಪಡೆದಿದ್ದ ಪಂಜಾಬಿನ ಗತಿಯನ್ನೆ ಗಮನಿಸಿದರೆ ಈ ದೇಶ ಎತ್ತ ಸಾಗುತ್ತಿದೆ ಎಂಬ ಅರಿವು ಮೂಡುತ್ತದೆ. ದೇಶದಲ್ಲಿ ಹತ್ತೆಕರೆಗಿಂತ ಕಡಿಮೆ ಹೂಡುವಳಿ ಹೊಂದಿರುವ ರೈತರ ಪ್ರಮಾಣ ಶೇಕಡಾ 63. ಅವರಿಗಾಗಿ ಸಹಕಾರ ರಂಗವೇ ಏನಾದರೂ ಮಾಡಬೇಕು ಎಂಬುದು ಗುರುಚರಣ್ರ ವಾದ.
ಕಳೆದ ತಿಂಗಳು ಸಹಕಾರ ರಂಗದ ಒಂದು ಭಾನಗಡಿಯ ಬಗ್ಗೆ ಚರ್ಚಿಸಲೆಂದು ಸಹಕಾರ ನಿಬಂಧಕರ ಕಚೇರಿಗೆ ಹೋಗಿ ರಾಜ್ಯ ಸ್ತರದ ಅಧಿಕಾರಿಯೊಬ್ಬರೊಂದಿಗೆ ಮಾತಿಗೆ ಕುಳಿತಿದ್ದೆ. ಆಗ ಉತ್ತರ ಕರ್ನಾಟಕದ ಯಾವುದೋ ಭಾಗದ ಇಬ್ಬರು ಹಿರಿಯರು ಬಂದು ಕುಳಿತರು. ಅವರ ಸಮಸ್ಯೆ ವಿಚಿತ್ರವಾಗಿತ್ತು.
ಮೊಲದು ಇವರಿಬ್ಬರನ್ನೂ ರಾಜ್ಯ ಮಟ್ಟದ ಸಹಕಾರ ಮಂಡಳಿಯೊಂದರ ನಿರ್ದೇಶಕ ಮಂಡಳಿಯಿಂದಲೇ ಅನರ್ಹಗೊಳಿಸಲಾಗಿತ್ತು. ಆಮೇಲೆ ಇವರಿಬ್ಬರೂ ಹೇಗೋ ಅಧಿಕಾರರೂಢ ಸರ್ಕಾರದ ಬಲಾಢ್ಯರ ನೆರವಿನಿಂದ ತಮ್ಮ ಅರ್ಹತೆಯನ್ನು ಸಂಪಾದಿಸಿಕೊಂಡು ಬಂದರು. ಅಷ್ಟು ಹೊತ್ತಿಗೆ ಅದಾಗಲೇ ಆಯ್ಕೆಯಾಗಿದ್ದ ನಿರ್ದೇಶಕ ಮಂಡಳಿಯ ಇಬ್ಬರು ಸದಸ್ಯರು ನಿಧನರಾಗಿದ್ದರು. ಈಗ ಸಮಸ್ಯೆ ಏನೆಂದರೆ, ನಿರ್ದೇಶಕ ಮಂಡಳಿ ಸಭೆಗೆ ಕೋರಂ ಇರಲಿಲ್ಲ. ಕೋರಂ ಇಲ್ಲದೆ ಸಭೆ ಹೇಗೆ ನಡೆಸುತ್ತೀರಿ ಎಂದು ನನ್ನ ಮಿತ್ರ ಅಧಿಕಾರಿ ಕೇಳಿದರು.
`ಅಲ್ರೀ, ನಾವು ಇಬ್ಬರನ್ನು ಕೋ ಆಪ್ಟ್ ಮಾಡಿಕೋಬಿಡ್ತೀವಿ. ಆಮೇಲೆ ಸಭೆ ಮುಂದುವರಿಸ್ತೀವಿ’ ಎಂದು ಅವರಲ್ಲೊಬ್ಬರು ವಿಶ್ವಾಸದಿಂದ ಹೇಳಿದರು. `ಕೋರಂ ಇಲ್ದೆ ಸಭೆ ನಡೆಸೋದಕ್ಕೂ ಬರಲ್ಲ ಅಂದಮೇಲೆ ಕೋ ಆಪ್ಟ್ ಮಾಡಿಕೊಳ್ಳೋದೂ ಅಸಾಧ್ಯ’ ಎಂಬ ನನ್ನ ಮಿತ್ರರ ಮಾತು ಅವರಿಗೆ ಅರಿವಾಗುವುದಕ್ಕೆ ಹತ್ತು ನಿಮಿಷ ಹಿಡಿಯಿತು.
ರಾಜಕೀಯ ಪ್ರಭಾವದಿಂದ ಸ್ಥಾನ ಉಳಿಸಿಕೊಂಡರೂ, ಸಹಕಾರಿ ಅಧಿಕಾರಿಯ ಕಾನೂನಿನ ಪಾಠದಿಂದ ಅವರು ತಪ್ಪಿಸಿಕೊಳ್ಳಲಾಗಲಿಲ್ಲ. ಅರೆ, ಒಂಬತ್ತು ವರ್ಷಗಳ ನಂತರವೂ ಇದೇ ರಾಜಕೀಯ ಪ್ರಭಾವ ಇನ್ನೂ ಅಷ್ಟೇ ಶಕ್ತಿಯುತವಾಗಿದೆಯಲ್ಲ ಎಂದು ನಾನು ಅಚ್ಚರಿಪಟ್ಟೆ.
ಇದು ಸಹಕಾರ ರಂಗವು ಇಂದು ಹೇಗೆ ಸ್ವಯಂಕೃತಾಪರಾಧಗಳಿಂದಲೇ ನರಳುತ್ತಿದೆ ಎನ್ನುವುದಕ್ಕೆ ಪುಟ್ಟ ನಿದರ್ಶನ.
ಯುಥ್: ದಿ ಫ್ಯೂಚರ್ ಆಫ್ ಕೋ ಆಪರೇಟಿವ್ ಎಂಟರ್ಪ್ರೈಸ್ ಎನ್ನುವುದು 2011ರ ಸಹಕಾರ ದಿನದ ಪ್ರಮುಖ ೋಷಣೆ. ಅದರ ಅರ್ಥವೂ ಇಷ್ಟೆ: ಯುವಜನಾಂಗಕ್ಕೆ ಸಹಕಾರರಂಗದ ಮೌಲ್ಯಗಳನ್ನು ತಲುಪಿಸದೇ ಇದ್ದರೆ ಅಪಾಯ ತಪ್ಪಿದ್ದಲ್ಲ.
ಶತಮಾನ ಕಳೆದರೂ ಮುಂದುವರಿದುಕೊಂಡು ಬಂದಿರುವ ಸಹಕಾರ ಚಳವಳಿಯು ಸರ್ಕಾರದ ನಿಯಂತ್ರಣದಲ್ಲಿ ಇದೆ ಎಂಬುದಕ್ಕಿಂತ ಹೆಚ್ಚಾಗಿ ಜನರ ಪ್ರಾಮಾಣಿಕ ಭಾಗಿತ್ವಕ್ಕೆ ಪಕ್ಕಾಗಿಲ್ಲ ಎನ್ನುವುದು ಮುಖ್ಯ ಸಮಸ್ಯೆ. ಭಾರತದ ಬಹುದೊಡ್ಡ ಸಹಕಾರ ಯಶೋಗಾಥೆ ಎಂದೇ ಬಣ್ಣನೆಗೊಳಗಾದ ಅಮುಲ್ ಹಾಲಿನ ಕ್ರಾಂತಿಯೇನೂ ರಾಜಕೀಯದಿಂದ ಮುಕ್ತವಾಗಿಲ್ಲ.
ಇಷ್ಟಾಗಿಯೂ, ಎಲ್ಲ ಲಾಭ – ನಷ್ಟಗಳನ್ನು ಲೆಕ್ಕ ಹಾಕಿದ ಮೇಲೆ, ಎಲ್ಲ ಸಿದ್ಧಾಂತಗಳನ್ನು ಅಳೆದು ತೂಗಿದ ಮೇಲೆ ಸಹಕಾರ ರಂಗವೇ ನಿಜವಾದ ಸಾಮಾಜಿಕ ಉನ್ನತಿಯ ದಾರಿ ಎಂಬುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಕಮ್ಯುನಿಸಂನ ಸರ್ವಾಧಿಕಾರ, ಬಂಡವಾಳಶಾಹಿಯ ಶೋಷಣೆ, ಪ್ರಜಾತಂತ್ರದ ಭ್ರಷ್ಟಾಚಾರ… ಎಲ್ಲವುಗಳನ್ನೂ ಮೀರಿದ, ಜನಸಹಭಾಗಿತ್ವದ ಆಕ, ಸಾಮಾಜಿಕ ಚಳವಳಿಯೆಂದರೆ ಅದು ಸಹಕಾರ ಚಳವಳಿ ಮಾತ್ರ.
ಆದ್ದರಿಂದಲೇ ಈಗಲೂ ಈ ಚಳವಳಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದೆಯೂ ನಡೆಯುತ್ತದೆ. ಎಲ್ಲ ಹಿನ್ನಡೆಗಳನ್ನೂ ಬಗೆಹರಿಸಿಕೊಂಡರೆ ಸಹಕಾರ ಚಳವಳಿಯು ಮತ್ತೆ ನಮ್ಮ ಮನುಕುಲದ ಏಳಿಗೆಯ ಹಾದಿಯ ಸಮರ್ಥ ಸಾಧನ ಆಗುವುದರಲ್ಲಿ ಸಂಶಯವಿಲ್ಲ.
ವಂದನೆಗಳು.
ಅನುಬಂಧ:
ಸಹಕಾರ ರಂಗಕ್ಕೆ ಉಪಯುಕ್ತವಾಗುವ ತಂತ್ರಾಂಶಗಳುಳ್ಳ ಜಾಲತಾಣಗಳ ಪಟ್ಟಿ
- http://www.ossics.com
- http://mybanco.org/download.html
- http://www.software.coop/
- http://www.localfoodcoop.org/choose-software.php
- http://sourceforge.net/projects/gnucash/
- http://mifos.org/
- http://en.wikipedia.org/wiki/List_of_free_and_open_source_software_packages
(Talk delivered at Kuvempu University on 16.3.2011, in a National Seminar organised by K H Patil Chair )