ನಾನೇನೂ ಸಂಗೀತಗಾರನೂ ಅಲ್ಲ, ವಿಧೇಯ ಸಂಗೀತಾರ್ಥಿಯೂ ಅಲ್ಲ. ಆದರೆ ಆರು ವರ್ಷಗಳ ಹಿಂದೆ ಆರಂಭಿಸಿದ, ಎರಡು ವರ್ಷಗಳಿಂದ ತಡವರಿಸಿಕೊಂಡು ಬಂದ ಸಂಗೀತ ಕ್ಲಾಸಿನ ನಂತರದ ಕ್ಷಣಗಳಲ್ಲಿ ನನ್ನ ಜೊತೆಗೆ ಇದ್ದ, ಇರುವವರ ಬಗ್ಗೆ ಬರೆಯಬೇಕು ಅಂತ ಈ ಬೆಳಗ್ಗೆ ಅನ್ನಿಸಿ…… ನಿಮ್ಮೆದುರು ಆ ನೆನಪು ಹಂಚಿಕೊಳ್ಳಲು ಕೂತಿದ್ದೇನೆ.

ಬೆಳಗ್ಗೆ ಏಳೂವರೆ, ಎಂಟು, ಎಂಟೂವರೆ ಸುಮಾರಿಗೆ ಬಸವೇಶ್ವರ ನಗರದಿಂದ ಶ್ರೀನಗರದ ಮ್ಯೂಸಿಕ್ ಹೌಸ್ ತಲುಪುವುದು; ಗುರುಗಳ ಹತ್ತಿರ `ತಡ ಆಯ್ತಲ್ರೋ’ ಅಂತ ಬೈಯಿಸಿಕೊಂಡು ಕ್ಲಾಸಿಗೆ ಕೂರುವುದು…. ಆಮೇಲೆ ಹತ್ತು, ಹತ್ತೂವರೆಗೆಲ್ಲ ಎದ್ದು ಹೊರಟರೆ, ಇವತ್ತು ಯಾರ ಜೊತೆಗೆ ಚಾ ಕುಡಿಯುವುದು ಅಂತ ಯೋಚಿಸುವುದು.

ಮ್ಯೂಸಿಕ್ ಹೌಸಿನಲ್ಲೇ ಇರಲಿ, ಈಗಿನ ಹುಳಿಮಾವಿನ ಮನೆಯಲ್ಲೇ ಇರಲಿ, ಗುರುಗಳು, ಗುರುಪತ್ನಿಯವರು ನನಗೆ ಬಿಸಿ ಬಿಸಿ ಚಾ ಕೊಟ್ಟಿದ್ದಾರೆ. ಸಾಹಿತ್ಯ, ಸಂಗೀತದ ಬಗ್ಗೆ ತಾಸುಗಟ್ಟಳೆ ಮಾತನಾಡಿದ್ದೂ ಇದೆ. ನನ್ನ ಗುರುಗಳ ಸಾಹಿತ್ಯಪ್ರೀತಿ ಮತ್ತು ವಸ್ತುನಿಷ್ಠ, ನೇರ ವಿಮರ್ಶೆಗೆ ನಾನು ಮಾರುಹೋಗಿದ್ದೇನೆ. ಅವರೂ ಕಿರಂ ಥರ ಬರೆಯದ ವಿಮರ್ಶಕರು ಅನ್ನಿಸಿದೆ. ಎಷ್ಟೋ ಚಳಿಗಾಲ, ಮಳೆಗಾಲದಲ್ಲಿ ಅವರು ಕೊಟ್ಟ ಚಾದಿಂದ ನಾನು  ಚೇತರಿಸಿಕೊಂಡು ನನ್ನ ಕೆಲಸಕ್ಕೆ ತೆರಳಿದ್ದೇನೆ.

ಅದಾದ ಮೇಲೆ ಹಾಗೆ ನಾನು ಕ್ಲಾಸ್ ನಂತರ ಅತಿ ಹೆಚ್ಚು ಚಾ ಕುಡಿದಿದ್ದು ನನ್ನ ಪತ್ರಕರ್ತ ಮಿತ್ರ, ಉನ್ನತ ಸ್ತರದ ಪತ್ರಕರ್ತ (ಈಗ ಅವನು ಹನ್ನೆರಡನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ!) ನಾರಾಯಣ ಅಮ್ಮಚ್ಚಿ ಜೊತೆಗೆ. ಅವನ ಅವಿವಾಹಿತ ಜೀವನದ ರಸಗಳಿಗೆಯಲ್ಲಿ ದಢಕ್ಕನೆ ಮಧ್ಯ ಪ್ರವೇಶಿಸಿ ಬಿಡುತ್ತಿದ್ದೆ. ಬನಶಂಕರಿ ಮೊದಲನೇ ಸ್ಟೇಜಿನ ನಾಲ್ಕನೇ ಕ್ರಾಸಿನಲ್ಲಿ ಅವನ ಮನೆ. ಅಲ್ಲೊಂದು ದೊಡ್ಡ ಟಿವಿ. ಹರಿದು ಹಂಚಿಹೋದ ನೂರಾರು ಇಂಗ್ಲಿಶ್ ದಿನಪತ್ರಿಕೆಗಳು. ಒಂದು ರೂಮಿನಲ್ಲಿ ಧ್ಯಾನ. ಇನ್ನೊಂದರಲ್ಲಿ ಅಡುಗೆ ಮನೆ.

ಹೋದಕೂಡಲೇ ಅವತ್ತಿನ ಪತ್ರಿಕೋದ್ಯಮ ವಿಚಾರಗಳು, ರೂಮರ್‌ಗಳು, ಗಾಸಿಪ್‌ಗಳು – ಎಲ್ಲದರ ಚರ್ಚೆ. ಯಾವ ಪತ್ರಿಕೆಯಲ್ಲಿ ಯಾವ ಬಡ್ಡಿಮಗ ಛಲೋ ಬರೆದಿದಾನೆ ಎಂಬ ವಿಮರ್ಶೆ. ತನ್ನ ಯಾವ ಸ್ಟೋರಿ ಸಮಾಜದಲ್ಲಿ ಎಂಥ ಭೀಕರ ಪರಿಣಾಮ ಉಂಟು ಮಾಡಿತು ಅಂತ ಅಮ್ಮಚ್ಚಿಯಿಂದ ಕ್ಪಿಪಿಂಗ್‌ಗಳ ಪ್ರದರ್ಶನ. ಅದಾಗಲೇ ಕನ್ನಡದಿಂದ ಇಂಗ್ಲಿಶ್ ಪತ್ರಕರ್ತನಾಗಿ ರೂಪಾಂತರಗೊಂಡಿದ್ದ ಅಮ್ಮಚ್ಚಿಯಲ್ಲಿ ಬದುಕಿನ ಬಗ್ಗೆ ಇನ್ನಿಲ್ಲದ ಉತ್ಸಾಹ. ಮ್ಯಾನ್ ಬೂಕರ್ ಗೆ ಶಾರ್ಟ್‌ಲಿಸ್ಟ್ ಆಗುವಂಥ ಕಾದಂಬರಿಯನ್ನೆ ಬರೆಯಬಲ್ಲೆನೆಂಬ ಎದೆಗಾರಿಕೆ. ಆದರೆ ಅದಕ್ಕೊಂದು ಕಂಪ್ಯೂಟರ್ ಬೇಕು, ನೀನೇ ಕೊಡಿಸು, ನಿನಗೆ ಕಂಪ್ಯೂಟರ್ ಬಗ್ಗೆ ಗೊತ್ತು ಎಂಬ ನಿತ್ಯಬೇಡಿಕೆ.

ಅಮ್ಮಚ್ಚಿ ಮಾಡಿದ ಚಾ ಕುಡಿಯುತ್ತ, ಅವನ ನೆಚ್ಚಿನ, ಮೆಚ್ಚಿನ ಬಿಬಿಸಿ ಚಾನೆಲನ್ನೇ ಅನಿವಾರ್ಯವಾಗಿ ವೀಕ್ಷಿಸುತ್ತ ಒಂದು ತಾಸು ಕೂರುತ್ತಿದ್ದೆ. ಒಂದೆರಡು ಸಲ, ಕಲಿಕೆಯ ಮೊದಲ ದಿನಗಳಲ್ಲಿ ನೋಡು ಅಂತ ಅವನೆದುರು ಕೊಳಲು ಊದಿ ಹೆದರಿಸಿದ್ದೂ ಇದೆ. ಆದರೂ ಅಮ್ಮಚ್ಚಿ ರೂಮಿನಿಂದ ಹೊರಗೆ ಹಾರದೆ ಧೈರ್ಯವಾಗಿ ಕೂತು ಸಹಕರಿಸಿದ್ದ. ಆ ರಾಗ ಅವನಿಗೆಷ್ಟು ಅರ್ಥವಾಯ್ತೋ ಇಲ್ಲವೋ ಗೊತ್ತಿಲ್ಲ, ನನಗಂತೂ ನನ್ನ ಬಾಲಿಶತನದ ಅರಿವಾಯ್ತು.

ಚಾ ಮಾಡಲು ಬೇಜಾರಾದರೆ ನಾವು ಮುಖ್ಯರಸ್ತೆಯ ಹಿಟ್ಟಿನ ಗಿರಣಿಯ ಪಕ್ಕದಲ್ಲಿದ್ದ ಚಾ ದುಕಾನಿಗೆ ಹೋಗಿ ಅಲ್ಲಿರೋ ತಾಯಿಗೆ ಚಾ ಮಾಡಲು ಹೇಳಿ  ಫುಟ್ಪಾತಿನಲ್ಲಿ ನಿಂತು ಕಾಯುತ್ತಿದ್ದೆವು. ಆ ತಾಯಿ ಮಾಡಿಕೊಟ್ಟ ಸೊಗಸಾದ ಚಾದ ಮುಂದೆ ನನ್ನ ಕೊಳಲು ಕಲಿಕೆ ಏನೂ ಅಲ್ಲ ಅಂತ ನನಗೆ ಎಷ್ಟೋ ಸಲ ಅನ್ನಿಸಿದೆ. ಆದರೆ ಅದನ್ನು ಬಾಯಿಬಿಟ್ಟು ಹೇಳಿಲ್ಲ. ತುಂಡು ಮಾನ ಉಳಿಯಬೇಕಲ್ಲ!

ಏನೇ ಇರಲಿ, ಈ ನಾರಾಯಣ ಅಮ್ಮಚ್ಚಿಯ ಬಗ್ಗೆ ಇನ್ನೂ ಎರಡು ಮಾತು ಹೇಳಬೇಕಿದೆ. ನನ್ನ ಬದುಕಿನಲ್ಲಿ ಎರಡು ಮುಖ್ಯ ಕೆಲಸಗಳನ್ನು ಕೊಡಿಸಿದ ಹೀರೋ ಈ ಅಮ್ಮಚ್ಚಿ. ಒಂದು: ಈ ದಕ್ಷಿಣ್ ಎಂಬ ಕಂಪೆನಿಯಿಂದ ಇಂಟರ್‌ವ್ಯೂ ಇದೆ ಎಂದು ಹೇಳಿ, ನನ್ನನ್ನೂ ಕಳಿಸಿದ; ತಾನೇ ನನಗಿಂತ ಕೊನೆಯವನಾದ ಫೇಲ್ ಆದ. `ನೀನು ಸೇರಿದರೆ ನಾನೇ ಸೇರಿದಂತೆ’ ಎಂದು ಹೇಳಿ ಬೆನ್ನು ತಟ್ಟಿ ಕಳಿಸಿದ. ಆನ್‌ಲೈನ್ ಜರ್ನಲಿಸಂನಲ್ಲಿ ಕನ್ನಡದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಪತ್ರಕರ್ತನಾಗಿ ನಾನು ದಾಖಲೆ ಸ್ಥಾಪಿಸಿದ್ದರೆ ಅದಕ್ಕೆ ಅಮ್ಮಚ್ಚಿಯೇ ಕಾರಣ. ಅವನಿಗೆ ಒಂದು ಪಾರ್ಟಿಯನ್ನೂ ಕೊಟ್ಟಿಲ್ಲವಲ್ಲ ಎಂದು ಈಗ, ಸುಮಾರು ಎಂಟು ವರ್ಷಗಳಾದ ಮೇಲೆ ನೆನಪಾಗುತ್ತಿದೆ!

ಇನ್ನೊಂದು: ಈ ದಕ್ಷಿಣ್ ಎಂಬ ಅನರ್ಥಕಾರಿ ಸಂಸ್ಥೆಯನ್ನು ಹಠಾತ್ತನೆ ಬಿಟ್ಟು, ಆ ಕನ್ನಡ ಪೋರ್ಟಲ್‌ನ ತಮಿಳು ನಾಯಗಿಯ ಟೇಬಲ್ ಮೇಲೆ ರೆಸಿಗ್ನೇಶನ್ ಬಿಸಾಕಿದ ನಂತರ ಖಾಲಿ ಕೂತಿದ್ದಾಗ ಮತ್ತೆ ಅಮ್ಮಚ್ಚಿಯೇ ಪ್ಲೇಸ್‌ಮೆಂಟ್ ಕಂಪನಿಯೊಂದಕ್ಕೆ ಕರೆದುಕೊಂಡು ಹೋಗಿದ್ದ; ಸುಮ್ಮನೇ ಮಾತನಾಡುತ್ತ ನನ್ನ ಪ್ರೊಫೈಲ್ ಕೇಳಿದ ಅಲ್ಲಿದ್ದ ಅಧಿಕಾರಿ, ನನಗೆ ಟಿ ಎಂ ಜಿ  ಎಂಬ ಇನ್ನೊಂದು ಟೆಕ್ನಾಲಜಿ ಟೆಲಿವಿಜನ್ ಚಾನೆಲ್‌ನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥನ ಕೆಲಸ ಕೊಡಿಸಿಯೇ ಬಿಟ್ಟರು. ಆಫ್‌ಕೋಸ್, ಇವೆಲ್ಲ ನನ್ನ ಕೊಳಲು ಕಲಿಕೆಯ ಅವಾಂತರಕ್ಕೆ ಮುನ್ನಾ ನಡೆದ ಘಟನೆಗಳು.

ಅದಾದ ಮೇಲೆ ನನಗೆ ಕ್ಲಾಸಿನ ನಂತರ ಬಿಸಿ ಬಿಸಿ ಸ್ಟ್ರಾಂಗ್ ಚಾ ಮತ್ತು ಕಾಫಿಯ ಸಮಾರಾಧನೆ ಮಾಡಿದವರು, ನನ್ನ ಸ್ನೇಹಿತೆ ರೋಹಿಣಿಯ ತಾಯಿ. ಚಾಮರಾಜಪೇಟೆಯ ನಾಲ್ಕನೇ ಮೇನ್‌ರಸ್ತೆಯಲ್ಲಿದ್ದ ಆ ಮನೆಯಲ್ಲಿ ನಾನು ಕುಡಿದ ಚಾಗೆ ಲೆಕ್ಕವಿಲ್ಲ. ಹೋದಕೂಡಲೇ ಕುರ್ಚಿ ಹಾಕಿ ಕೂರಿಸುತ್ತಿದ್ದರು. ಚಾ ಮಾಡಲು ಇಟ್ಟು ಬಂದು ತಾವೂ ಕೂತು ತಮ್ಮೆಲ್ಲ ಎದೆಯಾಳದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದರು. ರೋಹಿಣಿಯ ಅಪ್ಪ ಕೂಡಾ ತಮ್ಮ ಎಂದಿನ ಮೆದುನಗುವಿನ ಮುಖದಿಂದ ನನ್ನನ್ನು ಸ್ವಾಗತಿಸುತ್ತಿದ್ದರು. ಸುಮಾರು ಒಂದೂವರೆ ವರ್ಷ ನಾನು ಆ ತಾಯಿಯ ವಾತ್ಸಲ್ಯ ಮತ್ತು ಅಭಿಮಾನದ ಪ್ರವಾಹದಲ್ಲಿ ಮಿಂದಿದ್ದೇನೆ. ಸರಳತೆ, ಮುಗ್ಧತೆ ಮತ್ತು ಅಪ್ಪಟ ಪ್ರೀತಿಯನ್ನು ಅವರಿಂದ ಕಲಿತಿದ್ದೇನೆ. ಅವರ ಅಚಾನಕ್ ನಿಧನದಿಂದ ನನಗೆ ತುಂಬಾ ಅಳು ಬಂದಿತ್ತು. ಹೇಗೋ ತಡೆದುಕೊಂಡೆ. ರೋಹಿಣಿಯ ಅಣ್ಣ ಪ್ರವೀಣ, ತಂಗಿ, ಎಲ್ಲರೂ ನನ್ನನ್ನು ಮನೆಯ ಸದಸ್ಯನ ಥರಾನೇ ನೋಡಿಕೊಂಡಿದ್ದರು.

ರೋಹಿಣಿಯ ಅಮ್ಮನ ವಿಶೇಷ ಅಂದ್ರೆ ಎಲ್ಲೂ ಮುಚ್ಚುಮರೆಯಿಲ್ಲ. ಭಾವನೆಗಳಿಗೆ ಕೋಟ್ ಹಾಕುವುದಿಲ್ಲ. ಅವರ ಈ ನಿಷ್ಕಲ್ಮಶ ಮಾತಿನ ಬಗೆಯನ್ನು ನಾನಿನ್ನೂ ಕಲಿಯಬೇಕಿದೆ. ತಮ್ಮ ಎಲ್ಲ ದುಃಖ, ಸುಖವನ್ನೂ ಯಾವ ತಡೆಯೂ ಇಲ್ಲದೆ ಹೇಳುತ್ತಿದ್ದ ಅವರು ನನಗೆ ಸ್ನೇಹಕ್ಕಿಂತ ಸ್ನೇಹಿತರ ಕುಟುಂಬವೇ ದೊಡ್ಡದು ಎಂಬ ಪಾಠವನ್ನು ಕಲಿಸಿದರು.

ಹಾಗೆಯೇ ಈ ಭಾಗದಲ್ಲಿ ಮನೆ ಮಾಡಿದ ಕೋಟಿಬೆಟ್ಟು ರಾಜಲಕ್ಷ್ಮಿ ಮನೆಗೂ ನಾನು ಕೆಲವು ಬಾರಿ ಎಡತಾಕಿದ್ದೇನೆ. ಅವರ ಮಗಳ ಮುನಿಸು, ಹರ್ಷದ ಕ್ಷಣಗಳ ನಡುವೆ ಚಾ ಕುಡಿಯುತ್ತ ಕನ್ನಡ ಪತ್ರಿಕೋದ್ಯಮದ ಭವಿಷ್ಯದ ಬಗ್ಗೆ, ಸಾಹಿತ್ಯದ ಬೆಳವಣಿಗೆಯ ಗತಿಯ ಬಗ್ಗೆ ಗಂಭೀರ ಚರ್ಚೆ ನಡೆಸಿ ಆಮೇಲೆ ನಮಗೆ ಇದರಿಂದ ಏನೂ ಪ್ರಯೋಜನವಿಲ್ಲ ಅಂತ ಕೈಚೆಲ್ಲಿದ ಕ್ಷಣಗಳು ಹಲವು! ಸಾಹಿತ್ಯದ ಚರ್ಚೆ ಮಾಡುವುದರಿಂದ ಈರುಳ್ಳಿ ಬೆಲೆ ಇಳಿಯುವುದಿಲ್ಲ ಅಂತ ನನಗೆ ಗೊತ್ತಾಗಿದ್ದೇ ಆಗ. ಅದಿರಲಿ, ರಾಜಲಕ್ಷ್ಮಿ ಮಾಡುವ ಮಂಗಳೂರು ಶೈಲಿಯ ಚಾ ಗಮ್ಮತ್ತೇ ಬೇರೆ ಮಾರಾಯ್ರೆ!

ಆಗ ರಾಜಲಕ್ಷ್ಮಿ ತಾವು ಬರೆದ ಕಥೆಗಳನ್ನು ತೋರಿಸಿದ್ದರು. ಕಳೆದ ವಾರ ಅವರ `ಒಂದು ಮುಷ್ಟಿ ನಕ್ಷತ್ರ’ ಬಿಡುಗಡೆಯಾಗಿದೆ. ಮುಂದಿನ ವಾರ ಅವರ ಕಥಾಸಂಕಲನದ ವಿಮರ್ಶೆಯನ್ನು (ಟೈಮಿದ್ದರೆ) ಮಾಡುತ್ತೇನೆ. ನಿರೀಕ್ಷಿಸಿ.

ಕೆಲವು ದಿನಗಳ ಕಾಲ ಶ್ರೀನಗರದ ಹತ್ತಿರದಲ್ಲೇ ಮನೆ ಮಾಡಿದ್ದ ಅಶ್ವಿನಿ – ಶ್ರೀಪಾದರ ಮನೆಗೆ ಕೆಲವೊಮ್ಮೆ ಹೋಗಿ ಚಾ ಕುಡಿಯುತ್ತ ಅಲ್ಲೂ ಕನ್ನಡ ಸಾಹಿತ್ಯದ ಬೆಳವಣಿಗೆಗಾಗಿ ಏನೆಲ್ಲ ಚರ್ಚೆ ನಡೆಸಿದೆವು…. ಶ್ರೀಪಾದ್ ಒಬ್ಬ ಪ್ರಬುದ್ಧ ಸಂಗೀತದ ಲಿಸನರ್. ಅವರಿಂದ ಕಲಿಯುವುದು ಬಹಳಷ್ಟಿದೆ ಅನ್ನಿಸಿತು. ನಾನು ಮ್ಯೂಸಿಕ್ ಹೌಸ್ ಸ್ಕೂಲ್‌ಡೇನಲ್ಲಿ ನರ್ಸರಿ ವಿದ್ಯಾರ್ಥಿಯಾಗಿ ಬೃಂದಾವನಿ ಸಾರಂಗ್ ನುಡಿಸುವ ಯತ್ನದಲ್ಲಿದ್ದಾಗ ನನಗೆ ವೆಂಕಟೇಶಕುಮಾರ್ ಹಾಡಿದ ಬೃಂದಾವನಿ ಸಾರಂಗ್ ಕ್ಯಾಸೆಟ್ಟನ್ನು ಕೊಟ್ಟು ಸಹಕರಿಸಿದ್ದನ್ನು ಹೇಗೆ ಮರೆಯಲಿ!

ಕ್ಲಾಸ್ ಮುಗಿದ ಕೂಡಲೇ ನಾನು ಆ ದಿನ ಸಿಗುತ್ತಿದ್ದ ಸಹಪಾಠಿಗಳಾದ ಶಿವಕುಮಾರ್, ಮಹಾಬಲೇಶ್ವರ, – ಈ ಪತ್ರಕರ್ತ ಮಹಾಶಯರ ಜೊತೆಗೂ ಚಾ ಕುಡಿದಿದ್ದು ನೆನಪಾಗುತ್ತಿದೆ.

ಹಾಗೇ ನನ್ನನ್ನು ಈ ಕ್ಲಾಸಿಗೆ ದೂಡಿ ಮಜಾ ನೋಡಿದ ಅರವಿಂದ ನಾವಡರ ಮನೆ ಇಲ್ಲೇ ಇದ್ದಾಗ ಅವರ ಮನೆಗೂ ಹೋಗಿ ಚಾ ಕಾಫಿ ಕತ್ತರಿಸಿದ್ದು ನೆನಪಾಗುತ್ತಿದೆ. ಅವರ ಜೊತೆಗೆ ಕ್ಯಾಸೆಟ್ಟುಗಳ ಬಗ್ಗೆ, ಸಂಗೀತಗಾರರ ಬಗ್ಗೆ ಸಾಕಷ್ಟು ಹರಟಿದ್ದೇನೆ. ಅವರ ತಂದೆ ಒಬ್ಬ ಪ್ರಖ್ಯಾತ ಹರಿಕಥಾ ವಿದ್ವಾಂಸರು. ಈಗ ಮೈಸೂರಿನಲ್ಲಿದ್ದರೂ ನಾವಡರ ಅ`ಕ್ಕರೆ’ಗೆ ಮೋಸವಿಲ್ಲ. ಈ ವಾರ ಮತ್ತೆ ಅವರ ಮನೆಯ ಚಾ ಕುಡಿಯುವ  ಚಾನ್ಸ್ ಸಿಕ್ಕರೂ ಸಿಗಬಹುದು.

ನೋಡಿ, ಕ್ಲಾಸ್‌ನಲ್ಲಿ ಕಲಿತಿದ್ದೇನು ಎಂಬುದನ್ನು ಬೇಕಾದಷ್ಟು ಮರೆತುಬಿಟ್ಟಿದ್ದೇನೆ, ಆಮೇಲೆ ಕುಡಿದ ಚಾವೇ ಈಗ ನೆನಪಿನಲ್ಲಿ ಉಳಿದಿದೆ. ಪ್ರೀತಿ, ಸ್ನೇಹಭರಿತ ಚಾ ಕುಡಿದ ಕ್ಷಣಗಳನ್ನು ಈ ಬೆಳಗ್ಗೆ ಸುಮ್ಮನೆ ನೆನಪಿಸಿಕೊಂಡಿದ್ದೇನೆ. ಈ ನೆಪದಲ್ಲಾದರೂ ನನ್ನ ಸಂಗೀತದ ಅಭ್ಯಾಸಕ್ಕೆ ಚುರುಕು ಮುಟ್ಟೀತೆ…… ಎಂದಾದರೂ ನಾನು ನುಡಿಸುವ ಹೊತ್ತಿನಲ್ಲಿ ನರಮಾನವರು ಬಚಾವಾಗಲು ದಾರಿ ಹುಡುಕದೇ ಕುಳಿತಾರೆಯೇ, ಚಪ್ಪಾಳೆ ಇರಲಿ, ಕೊನೇ ಪಕ್ಷ ಪರವಾಗಿಲ್ಲ ಮಾರಾಯ, ಸೌಂಡ್ ಬರುತ್ತೆ ಅಂತ ಹೇಳುತ್ತಾರೆಯೆ……

ಗೊತ್ತಿಲ್ಲ. ಬದುಕಿನ ಈ ಗಳಿಗೆಯಲ್ಲಿ ನನಗೆ ಕಲಿಕೆಯೆಂಬುದು ಒಂದು ಫೋಬಿಯಾ ಇರಬಹುದೆ ಎನ್ನಿಸಿದೆ. ಕಲಿಕೆಯ ಹಳವಂಡದಲ್ಲಿ ಸಿಲುಕಿ ಸಂಗೀತಕ್ಕೆ ಅವಮಾನ ಮಾಡುತ್ತಿದ್ದೇನೆಯೇ ಎಂದೂ ಅನ್ನಿಸುತ್ತಿದೆ.
ಮೊನ್ನೆ ಅಸದ್ ಆಲಿ ಖಾನ್‌ರ ರುದ್ರವೀಣೆಯನ್ನು ಮೂರು ತಾಸು ಕೇಳಿದ ನನ್ನ ಮನಸ್ಸಿನ ಒಂದು ಮೂಲೆಯಲ್ಲಿ ಹತಾಶೆ, ಇನ್ನೊಂದು ಮೂಲೆಯಲ್ಲಿ ರುದ್ರ ಮೌನ ಕುಳಿತಿವೆ.

 

 

Share.
Exit mobile version