ಶಿರಸಿ ಕುಮಟಾ ರಸ್ತೆ ಅಗಲೀಕರಣ ಯೋಜನೆ ಈಗಾಗಲೇ ಪ್ರಕಟವಾಗಿದೆ. ಹೆದ್ದಾರಿಗಳು ಹಾಳಾಗಿವೆ. ರಸ್ತೆ ಪುನರ್ ನಿರ್‍ಮಾಣವಾಗಬೇಕು ಎಂಬುದು ಜನತೆಯ ಬೇಡಿಕೆ. ಇದು ಆಗಬೇಕಾದ ಕೆಲಸ. ಆದರೆ ಹೆದ್ದಾರಿಯನ್ನು ಅಗಲೀಕರಣ ಮಾಡುವ ಯೋಜನೆಯ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು. ಪಶ್ಚಿಮಘಟ್ಟದ ನದೀ ಕಣಿವೆಗಳ ಮಧ್ಯೆ ಹಾದು ಹೋಗಿರುವ ಶಿರಸಿ-ಕುಮಟಾ ರಸ್ತೆ ಅಗಲೀಕರಣದಿಂದ ಹಲವು ಗಂಭೀರ ಪರಿಸರ ದುಷ್ಪರಿಣಾಮಗಳಾಗಲಿವೆ.. ವೃಕ್ಷಲಕ್ಷ ಆಂದೋಲನ ತಜ್ಞರ ತಂಡ ಶಿರಸಿ-ಕುಮಟಾ ರಸ್ತೆ ಅಗಲೀಕರಣ ಯೋಜನೆ ಬಗ್ಗೆ ಪರಿಸರ ವಿಶ್ಲೇಷಣಾ ವರದಿ ತಯಾರಿಸಿದೆ. ಸರ್ಕಾರದ, ಜನಪ್ರತಿನಿಧಿಗಳ, ಸಾರ್ವಜನಿಕರ ಗಮನ ಸೆಳೆದಿದೆ.
೧) ಭೂಕುಸಿತ: ಶಿರಸಿ-ಕುಮಟಾವರೆಗೆ ೬೦ ಕಿ.ಮೀ ಉದ್ದದ ರಸ್ತೆಯ ಇಕ್ಕೆಲಗಳಲ್ಲಿರುವ ಕಣಿವೆಗಳನ್ನು ಕಡಿದು ಅಗಲೀಕರಣ ಮಾಡಬೇಕಾಗುತ್ತದೆ. ಇದು ಘಟ್ಟದಲ್ಲಿ ಭೂಕುಸಿತಗಳ ಸರಮಾಲೆ ಉಂಟು ಮಾಡಲಿದೆ. ಕೊಡಗಿನ ಪರಿಸರ ಅವಘಡಗಳ ಹಿನ್ನೆಲೆಯಲ್ಲಿ ದೇವಿಮನೆ ಘಟ್ಟದ ರಸ್ತೆ ಅಗಲೀಕರಣ ಅಂಥದೇ ದುರಂತಗಳಿಗೆ ಕಾರಣವಾಗಲಿದೆ ಎಂದು ಪರಿಸರ ತಜ್ಞರು ಅಭಿಪ್ರಾಯ ನೀಡಿದ್ದಾರೆ.
೨) ಜಾಗತಿಕ ಮಹತ್ವ ಪಡೆದ ದೇವಿಮನೆ ಘಟ್ಟ: ಶಿರಸಿ-ಕುಮಟಾ ರಸ್ತೆಯ ಇಕ್ಕೆಲಗಳಲ್ಲಿ ಇರುವ ಅನನ್ಯ ಜೀವವೈವಿಧ್ಯತೆ ಅಗಲೀಕರಣ ಕಾಮಗಾರಿಗಳಿಂದ ಧ್ವಂಸವಾಗಲಿದೆ. ದೇವಿಮನೆ ಕಣಿವೆಯನ್ನು ಔಷಧೀ ಮೂಲಿಕೆಗಳ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಇಲ್ಲಿ ವಿನಾಶದ ಅಂಚಿನ ಹಲವು ಸಸ್ಯ-ವನ್ಯಜೀವಿ ಪ್ರಭೇಧಗಳಿವೆ ಎಂಬ ವರದಿಯನ್ನು ರಾಷ್ಟ್ರೀಯ ಔಷಧೀಮೂಲಿಕೆಗಳ ಸಂರಕ್ಷಣ ಸಂಸ್ಥೆ ವಿಜ್ಞಾನಿಗಳು ((FRLHT)) ೨೦ ವರ್ಷ ಹಿಂದೇ ನೀಡಿದ್ದಾರೆ ಎಂಬ ಸಂಗತಿ ಪರಿಗಣಿಸಬೇಕು.
೩) ಕಾಯಿದೆ ಉಲ್ಲಂಘನೆ: ಅರಣ್ಯ, ಕಾಯಿದೆ ಪರಿಸರ ಕಾಯಿದೆ, ವನ್ಯಜೀವಿ ಕಾಯಿದೆಗಳ ಉಲ್ಲಂಘನೆ ರಸ್ತೆ ಅಗಲೀಕರಣ ಯೋಜನೆಯಿಂದ ಆಗಲಿದೆ. ಪರಿಸರ ಪರಿಣಾಮ ವರದಿ ತಯಾರಿಸಬೇಕು. ಸಾರ್ವಜನಿಕ ಅಹವಾಲು ಸಭೆ ಕರೆಯಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಲಾಗಿದೆ.
೪) ಧಾರಣಾ ಸಾಮರ್ಥ್ಯ ವರದಿ: ಅಘನಾಶಿನಿ-ದೇವಿಮನೆ ಕಣಿವೆ ಕೊಚ್ಚಿ ಹಾಕುವ ರಸ್ತೆ ಅಗಲೀಕರಣ ಯೋಜನೆ ಬಗ್ಗೆ ವಿಜ್ಞಾನಿಗಳು ವಿರೋಧ ವ್ಯಕ್ತ ಮಾಡಿದ್ದಾರೆ. ಉ.ಕ ಜಿಲ್ಲೆಯ ಅಘನಾಶಿನಿ ಕಣಿವೆ ಬಹು ಅಪರೂಪದ ಸೂಕ್ಷ್ಮ ಪರಿಸರ ಪ್ರದೇಶ. ಇಲ್ಲಿ ಅರಣ್ಯ ನಾಶೀ ಯೋಜನೆಗಳು ಅಸಾಧು ಎಂದು ಭಾರತೀಯ ವಿಜ್ಞಾನ ಸಂಸ್ಥೆ. ಉ.ಕ ಜಿಲ್ಲಾ ಪರಿಸರಧಾರಣಾಸಾಮರ್ಥ್ಯ ಅಧ್ಯಯನ ವರದಿಯಲ್ಲಿ ತಿಳಿಸಿದೆ.
೫) ಘಟ್ಟದ ಬುಡದಹಳ್ಳಿಗಳ ಪಾಡೇನು?: ಕುಮಟಾ ತಾಲೂಕು ಅಂತ್ರವಳ್ಳಿ, ಕತಗಾಲ, ಬೂದಿಹೊಳೆ, ಆನೆಗುಂಡಿ, ಮಾಸ್ತಿಕಟ್ಟೆ, ಯಾಣದ ಹೊಳೆ, ಶಿರಸಿ ತಾಲೂಕಿನ ರಾಗಿಹೊಸಳ್ಳಿ, ಬೆಣ್ಣೆ ಹೊಳೆ, ಬಂಡಲ, ಮೊಸಳೆಗುಂಡಿ, ಮಂಜುಗುಣಿ, ಚಿಕಡಿ, ರೇವಣಕಟ್ಟಾ ಹೊಳೆ, ಜಾನ್ಮನೆ, ಸಂಪಖಂಡ, ಕೊಳಗಿಬೀಸ್, ಹಾರೂಗಾರ, ವರೆಗೆ ಇರುವ ಹೊಳೆ ಹಳ್ಳ, ಕಣಿವೆಗಳನ್ನು ಶಿರಸಿ ಕುಮಟಾ ರಸ್ತೆ ಅಗಲೀಕರಣ ಕಾಮಗಾರಿ ಕೊಚ್ಚಿ ಹಾಕಲಿದೆ. ರಸ್ತೆ ಅಗಲೀಕರಣದಿಂದ ಈ ಮೇಲಿನ ಹಳ್ಳಿಗಳಲ್ಲಿ ಭೂಕುಸಿತ, ನೆರೆಹಾವಳಿ, ಮನೆ , ತೋಟ ನಾಶವಾಗುವ ಪರಿಸ್ಥಿತಿ ಉಂಟಾಗಬಹುದು ಎಂಬ ಎಚ್ಚರಿಕೆಯನ್ನು ಪರಿಸರ ತಜ್ಞರು ನೀಡಿದ್ದಾರೆ.
೬) ಹಸಿರು ನಾಶ: ಕುಮಟಾ-ಶಿರಸಿ ರಸ್ತೆ ಸುಮಾರು ೬ ಮೀ ಅಗಲವಿದೆ. ಇನ್ನೂ ೬ ಮೀ (ರಸ್ತೆಯ ಇಕ್ಕೆಲಗಳಲ್ಲಿ ೩+೩=೬) ಅಗಲ ರಸ್ತೆ ಅಗಲೀಕರಣ ಆಗಲಿದೆ. ೬೦ ಕಿ.ಮೀ ಉದ್ದವಿರುವ ರಸ್ತೆ ಅಗಲೀಕರಣಕ್ಕೆ ಸುಮಾರು ೧೦೦೦೦ ದೊಡ್ಡಮರಗಳು, ೧ ಲಕ್ಷ ಚಿಕ್ಕ ಗಿಡಗಳು ನಾಶವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಸರ್ಕಾರಿ ಲೆಕ್ಕದಲ್ಲಿ ದೊಡ್ಡಮರಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಪಾರ ಜೀವವೈವಿಧ್ಯತೆಯ ಪಾರಿಸಾರಿಕ ಮೌಲ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ಪರಿಸರ ಕಾರ್ಯಕರ್ತರು ಅಹವಾಲು ಸಲ್ಲಿಸಿದ್ದಾರೆ. ೧೦೦ ಎಕರೆ ಅರಣ್ಯ ಭೂಮಿ ನಾಶವಾಗಲಿದೆ.
೭) ವನ್ಯಜೀವಿಗಳು ಅತಂತ್ರ: ಅಘನಾಶಿನಿ ಕಣಿವೆಯ ಸಂರಕ್ಷಣೆಗಾಗಿ ವನ್ಯಜೀವಿ ಕಾಯಿದೆ ಅಡಿಯಲ್ಲಿ ಸಂರಕ್ಷಿತ ಪ್ರದೇಶ ಎಂದು ೨೦೧೧-೧೨ ರಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಸಂಗತಿಯನ್ನು ಪರಿಗಣಿಸಬೇಕಾಗುತ್ತದೆ.
ಶರಾವತಿ ಅಭಯಾರಣ್ಯ, ಅಘನಾಶಿನಿ-ಬೇಡ್ತಿ ಸಂರಕ್ಷಿತ ಪ್ರದೇಶ, ದಾಂಡೇಲಿ ಅಭಯಾರಣ್ಯಗಳ ವನ್ಯ ಜೀವಿಗಳ ಕಾರಿಡಾರ್‌ಗಳು, ದಾಟು ಸಾಲುಗಳು ಇಲ್ಲೇ ಇವೆ. ಶಿರಸಿ-ಕುಮಟಾ ರಸ್ತೆ ಅಗಲೀಕರಣದಿಂದ ವನ್ಯ ಜೀವಿಗಳ ಸ್ವತಂತ್ರ ಓಡಾಟಕ್ಕೆ ತೀವೃ ಧಕ್ಕೆ ಬರಲಿದೆ. ವನ್ಯ ಜೀವಿಗಳು ವಾಹನಗಳಿಗೆ ಡಿಕ್ಕಿ ಹೊಡೆದು ಸಾಯುವ ಪ್ರಮಾಣ ಹೆಚ್ಚಾಗುತ್ತದೆ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ.
೮) ಅವಶ್ಯಕತೆ ಇದೆಯೇ? :ಈಗಾಗಲೇ ಬೆಂಗಳೂರು-ಹೊನ್ನಾವರ ರಸ್ತೆ (ಬಿ. ಹೆಚ್ ರಸ್ತೆ) ರಾಷ್ಟ್ರೀಯ ಹೆದ್ದಾರಿ ಎನಿಸಿಕೊಂಡಿದೆ. ಯಲ್ಲಾಪುರ- ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಆಗಿದೆ. ಹೀಗಿರುವಾಗ ಶಿರಸಿ-ಕುಮಟಾ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಾಡುವ ಅವಶ್ಯಕತೆ ಇದೆಯೇ?
೯) ಪರಿಸರ ಇಲಾಖೆ ಏನು ಮಾಡುತ್ತಿದೆ? : ಕೊಡಗು-ಕೇರಳಗಳ ಪರಿಸರ ಪಾಠದಿಂದ ಈ ಮೇಲೆ ಎತ್ತಲಾದ ಗಂಭೀರ ಪರಿಸರ ಅವಘಡಗಳ ಬಗ್ಗೆ, ಪರಿಸರ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಣ್ಯ-ಪರಿಸರ ಇಲಾಖೆಗಳು, ಗಣಿ ಭೂಗರ್ಭ ಇಲಾಖೆಗಳು ಏನು ಅಭಿಪ್ರಾಯ ನೀಡಿವೆ? ಪೂರ್ವಭಾವಿಯಾಗಿ ಪರಿಸರ ಎಚ್ಚರಿಕೆಗಳನ್ನು ರಸ್ತೆ ಅಗಲೀಕರಣ ಯೋಜನೆಜಾರಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿದ್ದಾರೆಯೇ? ಈ ಕುರಿತು ಪರಿಸರ ಸಂಘಟನೆಗಳು ರಾಜ್ಯ ಕೇಂದ್ರ ಪರಿಸರ ಅರಣ್ಯ ಮಂತ್ರಾಲಯದ ಗಮನ ಸೆಳೆಯಲಿವೆ.
೧೦) ಕರಾವಳಿ ಹೆದ್ದಾರಿ ಭೂಕುಸಿತ: ಕಾರವಾರ ಮಂಗಳೂರು, ರಾಷ್ಟ್ರೀಯ ಹೆದ್ದಾರಿ ಅವಘಡಗಳು ಕಣ್ಮುಂದೆ ಇವೆ. ಇಲ್ಲಿ (ಉ.ಕ.ಜಿಲ್ಲೆ) ಈ ವರ್ಷ ೧೪ ಸ್ಥಳಗಳಲ್ಲಿ ಭಾರಿ ಭೂ ಕುಸಿತ ಉಂಟಾಗಿದೆ. ಸಾವು ನೋವು ಸಂಭವಿಸಿದೆ. ಸಣ್ಣ ಸಣ್ಣ ನೂರಾರು ಕುಸಿತ ಪ್ರಕರಗಳು ವರದಿ ಆಗಿವೆ. ಸಕಲೇಶಪುರ ಸುಬ್ರಹ್ಮಣ್ಯ ಮಧ್ಯೆ ೬೫ ಸ್ಥಳಗಳಲ್ಲಿ ಭೂಕುಸಿತ ಉಂಟಾಗಿವೆ. ಎಂಬುದನ್ನು ಈ ಸಂದರ್ಭದಲ್ಲಿ ಪರಿಸರ ತಜ್ಞರು ನೆನಪಿಸಿದ್ದಾರೆ.
೧೧) ೨ ಉದಾಹರಣೆಗಳು: ರಾಷ್ಟ್ರೀಯ ಹೆದ್ದಾರಿ ಆಗಿದ್ದರೂ ಮಂಗಳೂರಿನಿಂದ ಕಾರವಾರದವರೆಗೆ ಮಾತ್ರ ರಸ್ತೆ ಅಗಲೀಕರಣ ಆಗುತ್ತಿದೆ. ಗೋವಾ ರಾಜ್ಯದಲ್ಲಿ ಅಗಲೀಕರಣ ಮಾಡಿಲ್ಲ! ಅದೇ ರೀತಿ ಬೆಂಗಳೂರು-ಹೊನ್ನಾವರ ರಾಜ್ಯ ಹೆದ್ದಾರಿ ಅಗಲೀಕರಣವಾದಾಗ ಗೇರುಸೊಪ್ಪಾದ ಕಣಿವೆಯಲ್ಲಿ ರಸ್ತೆ ಅಗಲೀಕರಣ ಮಾಡಿರಲಿಲ್ಲ ಎಂಬ ಉದಾಹರಣೆಗಳನ್ನು ಪರಿಸರ ಸಂಘಟನೆಗಳು ಎತ್ತಿ ಹೇಳಿವೆ.
೧೨) ಕೇಂದ್ರ ಪರಿಸರ ಇಲಾಖೆ ಅನುಮತಿ ಬೇಕು: ರಸ್ತೆ ಅಗಲೀಕರಣಕ್ಕೆ ಶಿರಸಿ, ಹೊನ್ನಾವರ, ಕಾರವಾರ ಅರಣ್ಯ ವಿಭಾಗಗಳಲ್ಲಿ ಎಷ್ಟು ಅರಣ್ಯ ನಾಶವಾಗಲಿದೆ ಎಂಬ ನಿಖರ ಮಾಹಿತಿಯನ್ನು ರಾಜ್ಯ ಅರಣ್ಯ ಇಲಾಖೆ ನೀಡಿಲ್ಲ. ರಾಜ್ಯ ಅರಣ್ಯ ಇಲಾಖೆ ಅರಣ್ಯ ಪರವಾನಿಗೆ ಇನ್ನೂ ನೀಡಿಲ್ಲ. ೧೦೦ ಎಕರೆಗಿಂತ ಹೆಚ್ಚು ಅರಣ್ಯ ಭೂಮಿ ಈ ರಸ್ತೆ ಅಗಲೀಕರಣ ಯೋಜನೆಗೆ ಬೇಕಾಗುವದರಿಂದ ಕೇಂದ್ರ ಅರಣ್ಯ ಮಂತ್ರಾಲಯದ ಅನುಮತಿ ಪಡೆಯಬೇಕು ಎಂದು ಪರಿಸರ ತಜ್ಞರು, ಮುಖಂಡರು ಒತ್ತಾಯ ಮಾಡಿದ್ದಾರೆ.
೧೩) ಪುನರ್ ಪರಿಶೀಲನೆ ಮಾಡಿ: ಈ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ಅಪರೂಪದ ಅಘನಾಶಿನಿ ನದೀ ಕಣಿವೆ ಧ್ವಂಸಕ್ಕೆ ಕಾರಣವಾಗಬಹುದಾದ ರಸ್ತೆ ಅಗಲೀಕರಣ ಬೇಕೆ? ಬೇಡವೆ? ಎಂಬ ಬಗ್ಗೆ ಸರ್ಕಾರ ಪುನರ್ ವಿಮರ್ಶೆ ಮಾಡಬೇಕು, ಪರಿಸರ-ಅರಣ್ಯ ತಜ್ಞರ ಸಭೆ ಏರ್ಪಡಿಸಿ ಸಮಾಲೋಚನೆ ನಡೆಸಬೇಕು ಎಂದು ಪರಿಸರ ಸಂಘಟನೆಗಳು ಆಗ್ರಹ ಮಾಡಿವೆ.
೧೪) ಸರ್ಕಾರಕ್ಕೆ ಮನವಿ: ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಕಾರವಾರ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಜಿಲ್ಲಾ ಅರಣ್ಯ ಅಧಿಕಾರಿಗಳ ಭೇಟಿ ಮಾಡಲಾಗಿದೆ. ರಾಜ್ಯ ಕಂದಾಯ, ಪರಿಸರ ಇಲಾಖಾ\ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. ಜನಪ್ರತಿನಿಧಿಗಳಿಗೆ ತಜ್ಞರ ಅಭಿಪ್ರಾಯ ತಿಳಿಸಲಾಗಿದೆ.
೧೫) ಅಹವಾಲು ಸಭೆ ನಡೆಸಿ : ಶಿರಸಿ-ಕುಮಟಾ ರಸ್ತೆ ಅಗಲೀಕರಣ ಯೋಜನೆ ಬಗ್ಗೆ ಜಿಲ್ಲಾಪಂಚಾಯತ, ತಾಲೂಕ ಪಂಚಯತ, ಗ್ರಾಮ ಪಂಚಾಯತಗಳು, ಸಾಮಾಜಿಕ ಪರಿಸರ ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆದಿಲ್ಲ. ಅಂಥ ಜನಾಭಿಪ್ರಾಯ ಸಂಗ್ರಹ ಸಭೆ ನಡೆಸಬೇಕು ಎಂದು ಕಾರವಾರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ.
೧೬) ಅಹವಾಲು ಸಲ್ಲಿಸಿರುವ ಸಂಘಟನೆಗಳು: ನೀಡಿರುವ ಉತ್ತರ ಕನ್ನಡ ಜಿಲ್ಲಾ ಪರಿಸರ ಸಮೀತಿ, ಪರಿಸರ ಕಾನೂನು ಅಧ್ಯಯನ ಕೇಂದ್ರ ನವದೆಹಲಿ, ವೃಕ್ಷಲಕ್ಷ ಆಂದೋಲನ, ಉ.ಕ ಜಿಲ್ಲಾ ಗ್ರಾಮ ಅರಣ್ಯ ಸಮೀತಿಗಳ ಒಕ್ಕೂಟ, ಪಶ್ಚಿಮ ಘಟ್ಟ ಉಳಿಸಿ ಆಂದೋಲನ, ಸಮಗ್ರ ವಿಕಾಸ ಬೆಂಗಳೂರು, ಭದ್ರಾಪರಿಸರ ಸಮೀತಿ ಬಾಳೆಹೊಳೆ, ಪರಿಸರ ವೇದಿಕೆ ಶಿವಮೊಗ್ಗಾ ಕುಮಾರಧಾರಾ ಪರಿಸರ ಸಂರಕ್ಷಣ ಸಮೀತಿ ಮೊದಲಾದ ಪಶ್ಚಿಮ ಘಟ್ಟದ ಪರಿಸರ ಸಂಘಟನೆಗಳು ಅಘನಾಶಿನಿ ದೇವಿಮನೆ ಕಣಿವೆ ಉಳಿಸಿ ಎಂಬ ಧ್ವನಿ ಎತ್ತಿವೆ.
೧೭) ರಾಜ್ಯ, ಕೇಂದ್ರ ಸರ್ಕಾರಗಳಿಗೆ ಪರಿಸರ ಗಣ್ಯರ ಮನವಿ: ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಶ್ರೀ ಅನಂತ ಹೆಗಡೆ ಅಶೀಸರ, ವಿಜ್ಞಾನಿ ಡಾ|| ಟಿ. ವಿ ರಾಮಚಂದ್ರ, ಪರಿಸರ ತಜ್ಞರಾದ ಪ್ರೊ|| ಬಿ. ಎಂ. ಕುಮಾರಸ್ವಾಮಿ, ಶ್ರೀ ವೈಬಿ ರಾಮಕೃಷ್ಣ, ಸಸ್ಯ ಶಾಸ್ತ್ರಜ್ಞರಾದ ಡಾ|| ಕೇಶವ ಕೊರ್ಸೆ, ಡಾ|| ಎಂ. ಡಿ. ಸುಬಾಸ್‌ಚಂದ್ರನ್, ವನ್ಯ ಜೀವಿ ಅಧ್ಯಯನಕಾರ ಶ್ರೀ ಬಾಲಚಂದ್ರ ಸಾಯಿಮನೆ, ಪರಿಸರ ಕಾನೂನು ಅಧ್ಯಯನ ಕೇಂದ್ರದ ತಜ್ಞ ಡಾ|| ಮಹಾಬಲೇಶ್ವರ್, ಪರಿಸರವಾದಿಗಳಾದ ಶ್ರೀ ಎಂ. ಆರ್. ಹೊಲನಗದ್ದೆ , ಶ್ರೀಮತಿ ವಾಸಂತಿ ಹೆಗಡೆ, ಶ್ರೀ ರವೀಂದ್ರಪವಾರ್ ಇವರು ರಾಜ್ಯ ಮುಖ್ಯ ಮಂತ್ರಿಗಳಿಗೆ ಹಾಗೂ ಕೇಂದ್ರ ಪರಿಸರ ಸಚಿವರಿಗೆ ದೇವಿಮನೆ ಘಟ್ಟ ಉಳಿಸಿ ಎಂದು ಒತ್ತಾಯ ಮಾಡಿದ್ದಾರೆ.