ಮನುಷ್ಯನು ಯಂತ್ರಗಳ ದಾಸನಾಗಿದ್ದಾನೆಯೆ?

ಒಂದು ಕಾಲದಲ್ಲಿ ಕಾಗದದಲ್ಲಿ ಬರೆಯುವುದೇ ದಿನಚರಿಯಾಗಿದ್ದ ನನಗೀಗ ಗಣಕಯಂತ್ರವಿಲ್ಲದೆ ಬರೆಯುವುದೇ ಕಷ್ಟವಾಗಿ ಪರಿಣಮಿಸಿದೆ. ನಾನೀಗ ಸಂಚಾರಿ ದೂರವಾಣಿ (ಮೊಬೈಲ್), ಮಿಂಚಂಚೆ (ಈ-ಮೈಲ್), ದೂರದರ್ಶನ (ಟೆಲಿವಿಜನ್), ರೇಡಿಯೋ ಇಲ್ಲದೆ ಸಂಪರ್ಕವನ್ನು ಸಾಧಿಸುವುದೇ ಕಷ್ಟ ಎಂದೆನ್ನಿಸಿದೆ. ಸಹಸ್ರಾರು ವರ್ಷಗಳ ಹಿಂದೆ ಕೊಳೆತು ದ್ರವ್ಯವಾದ ಪೆಟ್ರೋಲನ್ನು ಇಂಧನವಾಗಿ ಬಳಸುವ ವಾಹನವಿಲ್ಲದೆ ನಾನು ನಗರದಲ್ಲಿ ಸಂಚರಿಸಲಾರೆ; ಊರೂರು ಸುತ್ತಲಾರೆ. ಯಂತ್ರಗಳು ಶುದ್ಧೀಕರಿಸಿದ ದಿನಸಿ ವಸ್ತುಗಳನ್ನು ಕೊಂಡು, ಗಣಕದಲ್ಲೇ ಬಿಲ್ ಪಡೆದು, ಕಾರ್ಡಿನ ಮೂಲಕವೇ ಪಾವತಿ ಮಾಡುವುದು ಈ ಜಗತ್ತಿನ ಹಲವರ ಸಹಜ ಕೃತ್ಯವಾಗಿದೆ.

ಈ ಯಂತ್ರಗಳು ಮುಂದಿನ ದಿನಗಳಲ್ಲಿ ನಿರಂತರ ಚಲಿಸಲು, ಮನುಷ್ಯನ ದಿನಚರ್ಯೆಯು ಚಕಚಕನೆ ನಡೆಯುವಂತಾಗಲು ದೇಶ-ಭಾಷೆ-ಗಡಿ ಮೀರಿದ ಒಂದು ಅಘೋಷಿತ ಒಕ್ಕೂಟವು ಅವಿರತವಾಗಿ ಕಾರ್ಯನಿರತವಾಗಿದೆ. ಅದಕ್ಕಾಗಿ ಇಡೀ ಭೂಮಿಯನ್ನೇ ಯೋಜಿತವಾಗಿ ಶೋಷಿಸುವ ಜಾಗತಿಕ ಯೋಜನೆ ಸಿದ್ಧವಾಗಿದೆ. ವಸುಂಧರೆಯ ಸೆರಗಿನಲ್ಲಿ, ಒಡಲಿನಲ್ಲಿ, ಜಡೆಯಲ್ಲಿ, ಮುಡಿಯಲ್ಲಿ ಇರುವ ಎಲ್ಲ ಸಂಪನ್ಮೂಲಗಳ ನಕಾಶೆ ಈಗ ಸಿದ್ಧವಾಗಿದೆ. ಈ ಸಂಪತ್ತನ್ನು ಯಾವ ಕಾಲದಲ್ಲಿ ಎಷ್ಟೆಷ್ಟು ದೋಚಬೇಕೆಂಬ ನೀಲನಕಾಶೆಯನ್ನು ಯಾವ ಸರ್ಕಾರವೂ ವಿರೋಧಿಸುತ್ತಿಲ್ಲ.

ಮನುಷ್ಯನ ಈ `ಚಕಚಕನೆ ಮುನ್ನಡೆಯುವ ಅಗತ್ಯ’ದಿಂದ ಇಂಧನದ ಬೇಡಿಕೆ ಹೆಚ್ಚಿದೆ. ತೈಲಸಮರಗಳು ಸಾಮಾನ್ಯವಾಗಿವೆ. ಕಲ್ಲಿದ್ದಲಿನ ಬಳಕೆ ಇನ್ನಿಲ್ಲದ ವೇಗದಲ್ಲಿ ಹೆಚ್ಚಳ ಕಂಡಿದೆ. ಈಗಿರುವ ಪೆಟ್ರೋಲಿಯಂ ಮೂಲಗಳು ಒಣಗುವ ಭೀತಿಯಲ್ಲಿ ಮುಂದಿನ ಶತಮಾನಗಳಿಗೆ ಬೇಕಾಗುವ ಪೆಟ್ರೋಲಿಯಂಗಾಗಿ ಈಗಲೇ  ಗಣಿಗಳ ಸರ್ವೇಕ್ಷಣೆ ನಡೆದಿದೆ. ನೈಸರ್ಗಿಕ ಅನಿಲದ ಕೊಳವೆಗಳು ಭೂಮಿಯಾದ್ಯಂತ ಹರಿದಿವೆ.

ಇಂಧನದ ಅತಿಬಳಕೆ : ಬದುಕಿಗೆ ಅನಗತ್ಯ ಸಂಕೀರ್ಣತೆ

ಇಂಧನಮೂಲಗಳ ದಹನದಿಂದ ಮಾಲಿನ್ಯವಾಗುತ್ತಿದೆ. ಪರಮಾಣು ಸ್ಥಾವರಗಳ ಸ್ಥಾಪನೆಯಾದಾಗಿನಿಂದ ಈವರೆಗೂ ಹೊರಬಿದ್ದ ವಿಕಿರಣ ಕಸವನ್ನು ಎಲ್ಲೂ ಹೂತಿಡಲಾಗದೆ ಬಲಾಢ್ಯವೆಂದು ನಂಬಿದ ಕೊಳವೆಗಳಲ್ಲಿ ಅವುಗಳ ದಾಸ್ತಾನು ಮಾಡಲಾಗಿದೆ. ಸರ್ಕಾರಗಳು ಹೀಗೆ ಇಂಧನ ಕಸವನ್ನು ಪೇರಿಸುತ್ತಿದ್ದರೆ, ಜನ ವಿಷಪೂರಿತ ಪ್ಲಾಸ್ಟಿಕ್ ಕಸದ ಬೆಟ್ಟವನ್ನೇ ನಿರ್ಮಿಸುತ್ತಿದ್ದಾರೆ. ಕಾರ್ಖಾನೆಗಳು ಎಡಬಿಡದೆ ಹೊಗೆ, ವಿಷಜಲ, ಎಲ್ಲವನ್ನೂ ಕಾರುತ್ತ ಕುಡಿಯುವ ನೀರನ್ನೇ ಮಲಿನಗೊಳಿಸಿವೆ. ಅವುಗಳಿಂದ ತಯಾರಾದ ಘೋರ ವಿಷದ ರಾಸಾಯನಿಕಗಳನ್ನು ನಮ್ಮ ಹೊಲಗಳಲ್ಲಿ ಬಳಸಿ ನೆಲವೆಲ್ಲ ಕಟುವಿಷದ ಬಟ್ಟಲಾಗಿದೆ. ನಾವು ಉಡುವ ಬಟ್ಟೆಗಳಲ್ಲಿ, ನಾವು ಬಳಸುವ ಮಾರ್ಜಕಗಳಲ್ಲಿ, ಕುಡಿಯುವ ಔಷಧಿಗಳಲ್ಲಿ, ಅಡುಗೆ ಪದಾರ್ಥಗಳಲ್ಲಿ, ಸಾಧನ ಸಲಕರಣೆಗಳಲ್ಲಿ ಏನೆಲ್ಲ ಕಂಟಕಪ್ರಾಯ ವಸ್ತುಗಳು ಬೆರೆತಿವೆ ಎಂಬ ಪಟ್ಟಿಯನ್ನು ಮಾಡಲೂ ನಮಗೆ ಸಾಧ್ಯವಾಗುತ್ತಿಲ್ಲ.

ಹೇಗೆ ಬೇಕಾದರೂ ಇಂಧನವನ್ನು ಪಡೆಯಬಹುದೆಂಬ ಧಿಮಾಕಿನಿಂದಾಗಿಯೇ ನಾಗರಿಕತೆಯು ಇನ್ನಿಲ್ಲದ ವೇಗವನ್ನು ಪಡೆದುಕೊಂಡಿದೆ. ಈ ವೇಗ ಮತ್ತು ನಿಯಂತ್ರಣವೇ ಇಲ್ಲದ ಸಂಪನ್ಮೂಲಗಳ ಬಳಕೆಯಿಂದ ಬದುಕಿನ ಚಹರೆ ಬದಲಾಗಿದೆ. ಸುಮಾರು ಇನ್ನೂರು ವರ್ಷಗಳಿಂದ ನಡೆಯುತ್ತಿರುವ ಔದ್ಯಮೀಕರಣವು ಮನುಷ್ಯನ ವಿಷಯಾಸಕ್ತ ಲೋಲುಪ ಬದುಕಿಗೆ ಕಾರಣವಾಗಿದೆ.

ಯೂರೋಪಿನ ದೇಶಗಳು ಪೂರ್ವದ ದೇಶಗಳನ್ನು ವಸಾಹತುಗಳನ್ನಾಗಿ ಮಾಡಿಕೊಂಡಿದ್ದೇ ಸಂಪನ್ಮೂಲಗಳನ್ನು ದೋಚಲು ಎಂಬುದೀಗ ಎಲ್ಲರಿಗೂ ಗೊತ್ತಿರುವ ರಹಸ್ಯವಾಗಿದೆ. ಆಗ ಭೌತಿಕವಾಗಿ ದೇಶಗಳನ್ನು ಆಕ್ರಮಿಸಿದ ದೇಶಗಳು ಕೊಳ್ಳುಬಾಕ ಸಂಸ್ಕೃತಿಯನ್ನು ಬಿತ್ತಿದವು. ಹೀಗಾಗಿ ಭಾರತದಿಂದಲೇ ಆರಂಭವಾಗುವ (ಇದು ನನ್ನ ಅಭಿಮತವಷ್ಟೆ!) ಪೂರ್ವದೇಶಗಳಲ್ಲೂ ಬದುಕಿನ ಅರ್ಥವೇ ಬದಲಾಯಿತು. ವಸಾಹತುಶಾಹಿ ಮತ್ತು ದೊರೆತನದ ಆಳ್ವಿಕೆಗಳು  ಕೊನೆಗೊಂಡಂತೆಯೇ ಕಮ್ಯುನಿಸಂ ಮತ್ತು ಪ್ರಜಾತಂತ್ರ ಆಧಾರಿತ ದೇಶಗಳು ತಲೆಯೆತ್ತಿದವು. ಮನುಷ್ಯನ ಮುಕ್ತ ಅಭಿವ್ಯಕ್ತಿ ಮತ್ತು ಉದಾರ ಚಿಂತನೆಗಿಂತ ಸಮುದಾಯದ ಏಳಿಗೆಯೇ ಮುಖ್ಯ ಎಂಬ ತಾಜಾ ವಾದದೊಂದಿಗೆ ತಳವೂರಿದ ಕಮ್ಯುನಿಸಂನ ದೇಶಗಳಲ್ಲಿ ಸಾಮುದಾಯಿಕ ಕೃಷಿ ಮತ್ತು ಉದ್ಯಮಗಳು ಬೆಳೆದವು. ಭಾರತದಂಥ ಸಮಾಜವಾದಿ ದೇಶಗಳು ಕಮ್ಯುನಿಸಂನ ಈ ತತ್ವಗಳನ್ನು ಎರವಲು ಪಡೆದವು. ಪಶ್ಚಿಮ ಯೂರೋಪ್ ಮತ್ತು ಉತ್ತರ ಅಮೆರಿಕಾ ಖಂಡಗಳಲ್ಲಿ ಪ್ರಜಾತಂತ್ರವು ಬಂಡವಾಳಶಾಹಿ ವ್ಯವಸ್ಥೆಯೇ ಬಲವಾಯಿತು. ಈ ಎರಡು ಬಣಗಳ ನಡುವಣ ಶೀತಲ ಸಮರದಿಂದಾಗಿ ಅಣ್ವಸ್ತ್ರ ಕೋಠಿ ಬೆಳೆಯಿತು.

ಈಗ ? ಬಂಡವಾಳವನ್ನೇ ನೆಚ್ಚಿಕೊಂಡ ಅಮೆರಿಕಾ ಇಂಧನಕ್ಕಾಗಿ ಸಮರಗಳ ಸರಣಿಯನ್ನೇ ಆರಂಭಿಸಿದೆ. ಮೊದಲು ಇರಾಖ್. ಈಗ ಇರಾನ್. ಮುಂದೆ? ಪರಮಾಣು ತಲೆಸಿಡಿಗಳ ಜಾಗತಿಕ ಪಾರಮ್ಯದ ಉತ್ತರ ಕೊರಿಯಾ ಮತ್ತು ಅಪಾರ ತೈಲನಿಕ್ಷೇಪ ಇರುವ ವೆನೆಝುಲಾ ಇರಬಹುದು. ಯುರೋಪ್ ಖಂಡದಲ್ಲಿ ಕಮ್ಯುನಿಸಂ ಕುಸಿದು ಇಡೀ ಖಂಡವೇ ಒಂದು ಸಮುದಾಯವಾಗಿದೆ. ಅಂದಿನ ಸೋವಿಯೆತ್ ಒಕ್ಕೂಟವು ವಿದಳನಗೊಂಡು ಹೊಸ, ಅರೆ-ಪ್ರಜಾತಾಂತ್ರಿಕ ದೇಶಗಳು ಹುಟ್ಟಿವೆ.

ಸಿದ್ಧಾಂತಗಳನ್ನು ಮೀರಿದ ಜಾಗತಿಕ ಬದುಕು

ಚೀನಾವೊಂದೇ ಕಮ್ಯುನಿಸಂನ ಪ್ರಾತಿನಿಧಿಕ ದೇಶವಾಗಿದ್ದರೂ, ಅಲ್ಲಿಯೂ ಬಂಡವಾಳಶಾಹಿ ನೀತಿ ಜಾರಿಯಾಗಿದೆ. ಚೀನಾದೆಲ್ಲಡೆ ಹರಡಿದ ಲಾಗೋಯ್‌ಗಳಲ್ಲಿ (ಬಲವಂತದ ಕಾರ್ಮಿಕ ಶಿಬಿರಗಳು) ವಿಶ್ವ ಮಾರುಕಟ್ಟೆಗೆ ಬೇಕಾದ ಎಲ್ಲ ಉತ್ಪನ್ನಗಳು ಅತಿ ಕಡಿಮೆ ಬೆಲೆಯಲ್ಲಿ ತಯಾರಾಗುತ್ತಿವೆ.  ಕಮ್ಯುನಿಸಂ ಹೆಸರಿನಲ್ಲಿ ಉತ್ತರ ಕೊರಿಯಾವು ಹಸಿವಿನಿಂದ ಕಂಗೆಟ್ಟ ಜನರನ್ನು ಎಡಬಿಡದೆ ಶೋಷಿಸುವ ಪರಮ ಸರ್ವಾಧಿಕಾರದ ದೇಶವಾಗಿದೆ. ಅಮೆರಿಕಾದ ಪ್ರಭಾವಕ್ಕೆ ಒಳಗಾದ ದಕ್ಷಿಣ ಕೊರಿಯಾ – ಜಪಾನ್‌ಗಳು ಒಮ್ಮೆ ಏರುತ್ತ, ಇನ್ನೊಮ್ಮೆ ಕುಸಿಯುತ್ತ ಹೇಗೋ ನಡೆದಿವೆ.

ಹಲವು ಅರಬ್ ದೇಶಗಳು ಪೆಟ್ರೋ ಉತ್ಪನ್ನಗಳಿಂದ ಸಿರಿವಂತವಾದವು; ಅಮೆರಿಕಾದೊಂದಿಗೆ ಸಖ್ಯ ಬೆಳೆಸಿಕೊಂಡವು; ಅಮೆರಿಕಾವನ್ನು ವಿರೋಧಿಸುವ ದೇಶಗಳಲ್ಲಿ ಒಂದೋ ಸಮರ ನಡೆಂ       iತ್ತಿದೆ (ಆಫಘಾನಿಸ್ತಾನ, ಇರಾಖ್); ಇಲ್ಲವೇ ಉದ್ವಿಗ್ನತೆ ಮನೆಮಾಡಿದೆ (ಇರಾನ್). ಭಾರತದಿಂದ ಪ್ರತ್ಯೇಕವಾದ ಪಾಕಿಸ್ತಾನವೀಗ ಅರಾಜಕತೆಯ ಗೂಡಾಗಿದೆ. ಪ್ರಜಾತಂತ್ರವೂ ಇಲ್ಲ; ಶಾಂತಿಯೂ ಇಲ್ಲ.

ಭಾರತ? ಪ್ರಜಾಪ್ರಭುತ್ವವಿರುವ ಅತಿದೊಡ್ಡ ದೇಶವೆಂಬ ಭಾರತದಲ್ಲಿ ಸೇನಾಡಳಿತ ಬಂದಿಲ್ಲ ಎಂಬುದು ಎಷ್ಟು ಸಂತೋಷದ ವಿಷಯವೋ, ದೇಶವು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿದೆ, ಭ್ರಷ್ಟ ಆಡಳಿತವನ್ನು ಹೊಂದಿದೆ, ಬಡವ-ಧನಿಕರ ಕಂದರವಾಗಿದೆ ಎಂಬುದೂ ಅಷ್ಟೇ ಕಳವಳಕಾರಿ ಸಂಗತಿ. ಭಾರತದಲ್ಲೀಗ ಸೋವಿಯೆತ್ ಒಕ್ಕೂಟದಿಂದ ಎರವಲು ಪಡೆದು ಜಾರಿ ಪಂಚವಾರ್ಷಿಕ ಯೋಜನೆಗಳು ಒಂದು ವ್ಯವಸ್ಥೆಯಾಗಿದೆ. ದೇಶದ ಶೇ. ೭೭ರಷ್ಟು ಜನರ ಸರಾಸರಿ ವರಮಾನ ದಿನಕ್ಕೆ ಕೇವಲ ೨೦ ರೂ. ಎಂದು ಅರ್ಜುನ್ ಸೇನ್‌ಗುಪ್ತಾ ವರದಿ ಹೇಳುತ್ತದೆ. ೮೮ ಅಭಿವೃದ್ಧಿಶೀಲ ದೇಶಗಳಲ್ಲಿ ಭಾರತವು ೬೭ನೇ ಸ್ಥಾನದಲ್ಲಿದೆ.

ಸಂಪನ್ಮೂಲಗಳು ವಿಪರೀತ ಪ್ರಮಾಣದಲ್ಲಿ ಸೋರಿಕೆಯಾಗಿ ದೇಶದ ಅಭ್ಯುದಯವು ಅತಿ ನಿಧಾನಗತಿಯಲ್ಲಿದೆ. ಅಭಿವೃದ್ಧಿ ಸೂಚ್ಯಂಕಗಳ ಆಧಾರದಲ್ಲಿ ಭಾರತ ಮತ್ತು ಚೀನಾ ದೇಶಗಳು ಜಾಗತಿಕ ಭೂಪಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳು ಎಂಬುದೇನೋ ನಿಜ.  ಆದರೆ ಭಾರತವು ಅನಾರೋಗ್ಯಕರ ಪ್ರಜಾತಂತ್ರ ಮತ್ತು ಶಿಕ್ಷಣ – ಸಾಕ್ಷರತೆಯ ಕೊರತೆಯನ್ನು ನಿರ್ಲಕ್ಷಿಸಿದೆ; ಚೀನಾವು ಮಾನವ ಹಕ್ಕುಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅಭಿವೃದ್ಧಿಯನ್ನೇ ಈ ದೇಶಗಳ ಸಮುದಾಯದ ಅಭ್ಯುದಯ ಎಂದು ಭ್ರಮಿಸಿಕೊಂಡಿದ್ದೇವಷ್ಟೆ!

ಇದು ದೇಶಗಳ ವಿಷಯ. ಈ ಎಲ್ಲ ದೇಶಗಳ ಆಡಳಿತ ತತ್ವಗಳನ್ನು ಹೊರತುಪಡಿಸಿ ನೋಡಿದರೆ ಎಲ್ಲೂ ಸಂಘರ್ಷ ಇದೆ ಎಂದು ಅನ್ನಿಸುವುದಿಲ್ಲ. ಬಹುತೇಕ ದೇಶಗಳು ಅಂತಾರಾಷ್ಟ್ರೀಯ ವ್ಯಾಪರ – ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿವೆ. ವಿಶ್ವವ್ಯಾಪಾರ ಒಪ್ಪಂದದಿಂದ ಎಲ್ಲ ದೇಶಗಳ ಮಾರುಕಟ್ಟೆಗಳು ಪರಸ್ಪರ ಮುಕ್ತವಾಗಿದೆ. ಎಲ್ಲ ದೇಶಗಳಲ್ಲೂ ಬಳಸುವ ಯಂತ್ರ ಸಾಧನಗಳು ಏಕರೂಪತೆಯನ್ನು ಹೊಂದಿವೆ. ಎಲ್ಲರ ಬದುಕೂ ಬಹುತೇಕ ಒಂದೇ ಬಗೆಯದು. ಅಂತಾರಾಷ್ಟ್ರೀಯ ಸಂಸ್ಥೆಗಳ ಬದಲಿಗೆ ಬಹುರಾಷ್ಟ್ರೀಯ ಸಂಸ್ಥೆಗಳು ಬೃಹದಾಕಾರವಾಗಿ ಬೆಳೆದಿವೆ. ಹಲವು ಪುಟ್ಟ ದೇಶಗಳ ಆಂತರಿಕ ಉತ್ಪನ್ನದ ಬಹುಪಟ್ಟು ಹೆಚ್ಚಿನ ಸಂಪತ್ತನ್ನು ಹೊಂದಿರುವ ಸಂಸ್ಥೆಗಳಿಗೆ ಲೆಕ್ಕವಿಲ್ಲ. ಈ ಸಂಸ್ಥೆಗಳ ಉತ್ಪನ್ನಗಳಿಗೆ ಚೀನಾ ದೇಶವೂ ಹೆಗಲು ಕೊಡುತ್ತದೆ. ಇದೆಲ್ಲದರ ಫಲವಾಗಿ ಇಡೀ ಮನುಷ್ಯಕುಲವೇ ಏಕರೂಪ ಬದುಕಿನತ್ತ ಮುಖಮಾಡಿದೆ.

ಅಭ್ಯುದಯ ಬೇರೆ – ಅಭಿವೃದ್ಧಿ ಬೇರೆ: ಗೊಂದಲ ಬೇಡ

ಹಾಗಾದರೆ ಅಭ್ಯುದಯ ಎಂದರೇನು? ಅಭಿವೃದ್ಧಿ ಎಂದರೇನು? ಮನುಷ್ಯನ ಬದುಕು ಹೇಗಿರಬೇಕು? ಈಗ ಪ್ರಪಂಚವು ಸಾಗುತ್ತಿರುವ ಹಾದಿಯೇಕೆ ಸರಿಯಲ್ಲ? ಎಲ್ಲರ ಬಳಿಯೂ ಹಣ ಸಂಚಯವಾಗುತ್ತಿಲ್ಲವೆ? ಜನ ಹಬ್ಬಗಳಂದು ಪಟಾಕಿ ಹಚ್ಚುವರಲ್ಲವೆ? ಜಾತ್ರೆಗಳು ನಡೆಯುತ್ತಿಲ್ಲವೆ? ಥಿಯೇಟರುಗಳಲ್ಲಿ ಜನ ತುಂಬಿಲ್ಲವೆ? ಸಂಗೀತ – ನೃತ್ಯ ಕಲೆಗಳು ಬೆಳೆದಿಲ್ಲವೆ? ತಲಾ ವರಮಾನ ಹೆಚ್ಚಿಲ್ಲವೆ? ಸಾಕ್ಷರತೆ ಏರುತ್ತಿಲ್ಲವೆ? ಉದ್ಯಮೀಕರಣದಿಂದ ಸಮೃದ್ಧಿ ಉಂಟಾಗಿಲ್ಲವೆ? ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ಸಂಪನ್ಮೂಲಗಳ ಬಳಕೆ ಆಗಬೇಡವೆ? – ನೂರಾರು ಪ್ರಶ್ನೆಗಳು ಎದುರಾಗುತ್ತವೆ.

ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಕಾಳಿ ಜಲವಿದ್ಯುತ್ ಯೋಜನೆಯಲ್ಲಿ ಉತ್ಪಾದನೆಯಾಗುವ ವಿದ್ಯುತ್ತು, ಆ ಯೋಜನೆಯ ಬುಡದಲ್ಲಿರುವ ಹಳ್ಳಿಗಳಿಗೇ ಸಿಕ್ಕಿಲ್ಲ. ವಿದ್ಯುತ್ ಉತ್ಪಾದನೆ ಹೆಚ್ಚಲು ಕಾರಣವಾದ ಯೋಜನೆಯು ನಗರಗಳಿಗೆ ವರದಾನವಾಗಿರಬಹುದು; ಆದರೆ ಯೋಜನಾಸ್ಥಳದಲ್ಲಿ ಸಂತ್ರಸ್ತಾರದ ಕುಟುಂಬಗಳಿಗೆ ಅದು ಶಾಪವಾಗಿದೆ. ಹೀಗೆ ದೂರದೂರದ ಯೋಜನೆಗಳ ಫಲವೆಲ್ಲವೂ ನಗರಗಳಿಗೇ ಹೋಗುತ್ತದೆ, ಬೆಂಗಳೂರು ಮಹಾನಗರಕ್ಕೆ ಕಾವೇರಿಯಿಂದ ನೀರು ಸರಬರಾಜಾಗುವ ಹಾಗೆ (ಕಾವೇರಿ ಕುಡಿಯುವ ನೀರಿನ ಯೋಜನೆಯಿಂದ ಬರುವ ನೀರನ್ನೇ ಬೆಂಗಳೂರಿನ ಸಾವಿರಾರು ಸಿರಿವಂತರು ತಮ್ಮ ಕಾರು ತೊಳೆಯಲು, ಶೌಚಾಲಯದಲ್ಲಿ ಬಳಸುತ್ತಾರೆ ಎಂಬುದನ್ನು ಗಮನಿಸಿ. `ಕಾವೇರಿ ಜಲವಿವಾದ’ ಇರಬೇಕಾದ್ದೇ ಅಂತಾರಾಜ್ಯ ಗಡಿಯಲ್ಲಲ್ಲ, ಬೆಂಗಳೂರಿನಲ್ಲಿ ಅನ್ನಿಸುವುದಿಲ್ಲವೆ?). ಯೋಜನೆಗಳಿಂದ ಸಾಮಾಜಿಕ ಅಸಮತೋಲನವಾಗದೆ, ನಿಸರ್ಗಕ್ಕೆ ಧಕ್ಕೆಯಾಗದೆ, ಇಡೀ ಸಮುದಾಯದ ಬದುಕು ಹಸನಾದರೆ ಅದು ಅಭ್ಯುದಯ; ನಗರಕ್ಕೆ ವಿದ್ಯುತ್ತು, ನೀರು ಕೊಡುವುದು ಅಭಿವೃದ್ಧಿ ಯೋಜನೆಯಷ್ಟೆ.

ಈ ಜಗತ್ತಿನಲ್ಲಿ ಅಪಾರ ಪ್ರಮಾಣದ ಸಿಮೆಂಟು, ಕಬ್ಬಿಣವನ್ನು ಬಳಸಿ, ದೈತ್ಯಾಕಾರದ ಯಂತ್ರಗಳಿಂದ ನಡೆಯುವ ಕಾಮಗಾರಿಗಳೆಲ್ಲವೂ ನಾಗರಿಕತೆಯ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳೇ ಹೊರತು ಅಭ್ಯುದಯದ ಯೋಜನೆಗಳಲ್ಲ. ಬಸ್ ನಿಲ್ದಾಣಗಳ ನವೀಕರಣದಿಂದ ಹೊರನೋಟವಷ್ಟೇ ಸುಂದರವಾಗುತ್ತದೆ. ಸಕಾಲದಲ್ಲಿ, ಬೇಕಾದ ಊರಿಗೆ ಬಸ್ ಬರದಿದ್ದರೆ ಆ ಬಸ್ ನಿಲ್ದಾಣ ಇರುವುದಾದರೂ ಯಾಕೆ? ಬಸ್ ನಿಲ್ದಾಣ ಕಟ್ಟುವುದು ಅಭಿವೃದ್ಧಿ ಕಾಮಗಾರಿ; ಬಸ್ಸುಗಳು ಬಂದು, ಎಲ್ಲರೂ ಹೆಚ್ಚು ಕಾಯದೆ ತಮ್ಮ ಗಮ್ಯಕ್ಕೆ ತೆರಳುವ ಸನ್ನಿವೇಶ ಸೃಷ್ಟಿಯಾದರೆ ಮಾತ್ರ ಅದು ಅಭ್ಯುದಯ.

ಹಸಿರು ಕ್ರಾಂತಿಯ ಭ್ರಾಂತಿ ಮತ್ತು ಅಪಾಯ

ಇನ್ನೂ ವಿಸ್ತೃತವಾದ ಉದಾಹರಣೆಯನ್ನು ತೆಗೆದುಕೊಳ್ಳೋಣ. `ವಿಶ್ವದ ಮೊದಲ ಹಸಿರು ಕ್ರಾಂತಿ’ ಭಾರತದ ಪಂಜಾಬಿನಲ್ಲಿ ಅರವತ್ತರ ದಶಕದಲ್ಲಿ ನಡೆಯಿತು. ನಾರ್ಮನ್ ಬೋರ್ಲಾಗ್ ಎಂಬ ವಿಜ್ಞಾನಿಯ ಚಿಂತನೆಗಳಿಂದಾಗಿ ಬಹುಬೇಗ ಫಸಲು ನೀಡುವ ಭತ್ತ, ಗೋಧಿ ತಳಿಗಳು ಕೃಷಿಕರಿಗೆ ಬಂದವು. ಇವುಗಳನ್ನು ಅಧಿಕ ಇಳುವರಿ ತಳಿಗಳೆಂದೂ ಪ್ರಚಾರ ಮಾಡಲಾಯಿತು. ವಾಸ್ತವವಾಗಿ ಇವೆಲ್ಲವೂ ನಿಸರ್ಗದತ್ತ ತಳಿಗಳಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಮತ್ತು ಅತ್ಯಧಿಕ ಪ್ರಮಾಣದಲ್ಲಿ ಕೀಟನಾಶಕ, ರಾಸಾಯನಿಕ ಗೊಬ್ಬರಗಳನ್ನು ಬೇಡುವ ತಳಿಗಳಾಗಿದ್ದವು. ಅಧಿಕ ನೀರು, ಅಧಿಕ ರಾಸಾಯನಿಕ, ಅಧಿಕ ವಿಷಪೂರಿತ ಕೀಟನಾಶಕಗಳಿಂದ ಈ `ಅಧಿಕ’ ಇಳುವರಿ ಬಂತು. ಸರ್ಕಾರಗಳು, ವಿಜ್ಞಾನಿಗಳು, ಸಂಶೋಧಕರು ಅಧಿಕ ಇಳುವರಿಗಷ್ಟೇ ಪ್ರಚಾರ ಕೊಟ್ಟರು; ಅಧಿಕ ನೀರು, ವಿಷದ ಬಳಕೆಯನ್ನು ಮುಚ್ಚಿಟ್ಟರು.

ಈಗ? ಪಂಜಾಬಿನ ಕೃಷಿ ಉತ್ಪನ್ನ ಕುಸಿದಿದೆ. ಪಂಜಾಬಿನ ಮೇಲೆ (೨೦೧೦ರ ಅಕ್ಟೋಬರಿನಲ್ಲಿ ಇದ್ದಂತೆ) ೬೭ ಸಾವಿರ ಕೋಟಿ ರೂ.ಗಳ ಸಾರ್ವಜನಿಕ ಋಣಭಾರವಿದೆ. ಹಸಿರುಕ್ರಾಂತಿಯಲ್ಲಿ ಬಳಸಿದ ಕೀಟನಾಶಕಗಳಿಂದಾಗಿ ಪಂಜಾಬಿನಲ್ಲಿ ಕ್ಯಾನ್ಸರ್ ಮತ್ತಿತರ ಮಾರಕ ರೋಗಗಳು ಹೆಚ್ಚಿವೆ; ಒಂದು ಕಾಲದಲ್ಲಿ ಪಂಜಾಬ್ ಉಗ್ರವಾದಿಗಳ ಕೇಂದ್ರವೂ ಆಗಿದ್ದು ನಮಗೆ ಗೊತ್ತೇ ಇದೆ. ಭಾರತವೀಗ ಗೋಧಿಯನ್ನು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ನಲವತ್ತೇ ವರ್ಷಗಳಲ್ಲಿ ಹಸಿರು ಕ್ರಾಂತಿಯು ಸಂಪೂರ್ಣವಾಗಿ ಕುಸಿದು ಹೊಸಬಗೆಯ ಕೃಷಿಯ ಘನಘೋರ ಅಪಾಯಗಳನ್ನು ತೆರೆದಿಟ್ಟಿದೆ.

ಉದಾರೀಕರಣ ಪಠಿಸುವ ಪ್ರಜಾಪ್ರಭುತ್ವ, ಬಂಡವಾಳಶಾಹಿ ವ್ಯವಸ್ಥೆ, ಸಮುದಾಯವನ್ನು ನಿರ್ಲಕ್ಷಿಸಿ ಬಂಡವಾಳಶಾಹಿ ಮಾರುಕಟ್ಟೆಯ ಪೂರೈಕೆದಾರ ಕಮ್ಯುನಿಸ್ಟ್ ದೇಶಗಳು ಮತ್ತು ಜನರ ನಿರಂತರ ಲೌಕಿಕ ಅಗತ್ಯಗಳಿಂದ ಒಂದು ವಿಚಿತ್ರ, ಸಂಕೀರ್ಣ ವ್ಯವಸ್ಥೆಯೊಂದು ಏರ್ಪಟ್ಟಿದೆ. ನೂರಾರು ದೇಶಗಳ ಆಸ್ತಿಪಾಸ್ತಿಗಳನ್ನು ಮೀರಿಸುವ ಬಹುರಾಷ್ಟ್ರೀಯ ಸಂಸ್ಥೆಗಳು ಭೂಮಿಯ ಬಹ್ವಂಶ ನೈಸರ್ಗಿಕ ಸಂಪನ್ಮೂಲಗಳ ಹತೋಟಿ ಪಡೆದಿವೆ; ಪಡೆಯುತ್ತಿವೆ. ಭಾರತದಂಥ ಆರ್ಥಿಕ ಸುದೃಢ ದೇಶದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ ಶಿಕ್ಷಣ, ಆರೋಗ್ಯ, ಇಂಧನ, ಸಾಮಾಜಿಕ ಸೇವೆಗಳು, ಕೃಷಿ ಮುಂತಾದ ಸಾರ್ವಜನಿಕ ಯೋಜನೆಗಳನ್ನು ಹೆಚ್ಚೆಚ್ಚು ಖಾಸಗೀಕರಣಗೊಳಿಸುತ್ತಿವೆ.

ಉಳ್ಳವರನ್ನು ಬಾಧಿಸುತ್ತಿರುವ ಆಫ್ಲುಯೆಂಜಾ ರೋಗ

ಉಳ್ಳವರು ಯಾವುದೇ ಸಮಾಧಾನದಿಂದಲೂ ದಿನ ಕಳೆಯಲಾಗದ ಸ್ಥಿತಿಯನ್ನೇ ಅಫ್ಲುಯೆಂಜಾ ಎಂದಿ ಕರೆಯುತ್ತಾರೆ. ಬಂಡವಾಳಶಾಹಿ ವ್ಯವಸ್ಥೆ ಮತ್ತು ಅತಿ ಕೊಳ್ಳುಬಾಕತನದ ಪರಿಣಾಮವೇ ಈ ರೋಗ.

ಒಮ್ಮೆ ಸಿರಿವಂತಿಕೆ ಬಂದಮೇಲೆ ಮತ್ತಷ್ಟು ಸಿರಿವಂತರಾಗಬೇಕೆಂಬ ಬಯಕೆಯಾಗುತ್ತದೆ. ಅದು ಮತ್ತಷ್ಟು ವಸ್ತುಗಳ ಖರೀದಿಗೆ ಕಾರಣವಾಗುತ್ತದೆ. ಹೀಗೇ ಬೇಡಿಕೆಯೂ ಹೆಚ್ಚುತ್ತದೆ; ಸಿರಿವಂತಿಕೆಯೂ ಹೆಚ್ಚುತ್ತದೆ. ಜೊತೆಗೇ ಅಸಂತೃಪ್ತಿಯೂ ಹೆಚ್ಚುತ್ತದೆ. ಸಾಮಾನ್ಯವಾಗಿ ಸಿರಿವಂತರ ಮಕ್ಕಳಿಗೆ ಈ ಬಗೆಯ ರೋಗ ಅಂಟಿಕೊಳ್ಳುತ್ತದೆ ಎನ್ನಲಾಗಿದೆ. ಉದಾಹರಣೆಗೆ ಯೂರೋಪಿನ ಇಂಗ್ಲಿಶ್ ಭಾಷಾ ದೇಶಗಳಲ್ಲಿನ ಜನರ ಅನಾರೋಗ್ಯದ ಪ್ರಮಾಣ (ಶೇ. ೨೩), ಇಂಗ್ಲಿಶೇತರ ದೇಶಗಳ ಜನರ ಅನಾರೋಗ್ಯದ ಪ್ರಮಾಣಕ್ಕಿಂತ (ಶೇ. ೧೧.೫) ಎರಡು ಪಟ್ಟು ಹೆಚ್ಚು. ಹಣ, ಆಸ್ತಿ, ಭೌತಿಕ ಚಹರೆಯ ಮೋಹ, ಪ್ರಸಿದ್ಧಿಯ ಚಪಲ – ಇವೇ ಅಫ್ಲುಯೆಂಜಾದ ಮೂಲಕಾರಣಗಳು.

  • ನಾವು ಯಾವಾಗಲೂ ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುತ್ತೇವೆ: ನಾವು ಎಷ್ಟು ಸಂಪಾದಿಸುತ್ತಿದ್ದೇವೆ, ನಮ್ಮ ಮನೆ ಎಷ್ಟು ದೊಡ್ಡದು, ನಮ್ಮ ಕಾರಿನ ಬೆಲೆ ಎಷ್ಟು, ನಮ್ಮ ಸಾಮಾಜಿಕ ಬದುಕಿನ ವ್ಯಾಪ್ತಿ ಎಷ್ಟು, ನಮ್ಮ ಚಹರೆ, ಹೀಗೆ.
  • ಆರ್ಥಿಕ, ವಸ್ತುಕೇಂದ್ರಿತ ಬಾಹ್ಯ ಅಂಶಗಳೇ ಮಾನದಂಡಗಳೆಂದು ನಮಗೆ ನಮ್ಮ ಪಾಲಕರು ಹೇಳಿಕೊಟ್ಟಿದ್ದಾರೆ. ಹೀಗೆ ಪರಸ್ಪರ ಹೋಲಿಸಿಕೊಳ್ಳುವುದರಿಂದ ನಮ್ಮ ಬದುಕಿನ ಖುಷಿಯು ಕರಗಿಹೋಗುತ್ತದೆ. ನಾವೆಂದೂ ಬದುಕಿನಲ್ಲಿ ಜಯ ಸಾಧಿಸಲಾರೆವು.
  • ಬದಲಿಗೆ, ನಮ್ಮ ಸಂತೋಷ ಕೊಡುವ ವಿಷಯಗಳತ್ತ ಗಮನ ಕೊಡುವುದು ಒಳ್ಳೆಯದು. ನಮ್ಮ ನಿರ್ಧಾರಗಳಿಗೆ ನಮ್ಮ ಬದುಕಿನ ಅಗತ್ಯಗಳೇ ಆಧಾರವಾಗಬೇಕೇ ಹೊರತು, ಬೇರೆಯವರ ಬದುಕಿನ ಲೌಕಿಕ ಸಂಗತಿಗಳಲ್ಲ.
  • ನಾವು ಯಾವಾಗಲೂ ನಮ್ಮ ವರ್ತನೆಯನ್ನು ವಿಶ್ವಾಸದಿಂದ ಖಿನ್ನತೆಯೆಡೆಗೆ, ಆಶಾವಾದದಿಂದ ನಿರಾಶಾವಾದದ ಕಡೆಗೆ ತೊನೆಯಲು ಬಿಡುತ್ತೇವೆ. ಕಾಲವು ಕ್ರಮೇಣ ಸರಿದಂತೆ ನಮ್ಮ ಬದುಕೂ ವಿಸ್ತಾರವಾಗುತ್ತದೆ ಎಂಬ ವರ್ತನೆಯನ್ನು ನಾವು ಬೆಳೆಸಿಕೊಳ್ಳಬೇಕು.

—————————————————————–

ಜೀವ-ಜೀವನಗಳನ್ನು ಬಲಿಕೊಟ್ಟಾದರೂ ಉದ್ಯಮಗಳು ಉಳಿಯಬೇಕೆ? ಯಾರಿಗಾಗಿ?

ಇತ್ತೀಚೆಗೆ ಮೂಡುಬಿದಿರೆಯಲ್ಲಿ ನಡೆದ ನುಡಿಸಿರಿ ಸಮಾವೇಶದ ಅಧ್ಯಕ್ಷೆಯಾಗಿ ಖ್ಯಾತ ಲೇಖಕಿ ವೈದೇಹಿಯವರೂ ಈ ಪ್ರಶ್ನೆಗಳನ್ನು ಎತ್ತಿದರು. `ಜೀವ-ಜೀವನಗಳನ್ನು ಬಲಿಕೊಟ್ಟಾದರೂ ಉದ್ಯಮಗಳು ಉಳಿಯಬೇಕೆ? ಯಾರಿಗಾಗಿ? ಜನಪರ ಕಾಳಜಿ ಇದೇ ಎನುವ ಯಾವುದೇ ಸರಕಾರದೆದುರು ಇಂದು ಜನಮನ ಗೆಲ್ಲುವ ಒಂದು ಅಪೂರ್ವ ಅವಕಾಶವಿದೆ. ಅವಿವೇಕಕ್ಕೆ, ಹುಚ್ಚು ಅಮಲಿಗೆ ಬಲಿಯಾಗದೆ ಫಲವತ್ತಾದ ನೆಲಗದ್ದೆ ತೋಟ ಚರಾಚರ ಜೀವಿಗಳ ಬದುಕುವ ಹಕ್ಕಿಗೆ ಸ್ಪಂದಿಸುವ (ಭೂಮಿಯನ್ನು ಗುಡಿಸಿ ಗುಂಡಾಡಿಸಲೆಂದೇ ಇರುವ ಕಡಿಮೆಸಂಖ್ಯೆಯ ಲಾಭಕೋರರ ಮಾತನ್ನು ಧಿಕ್ಕರಿಸಿ) ಜನಮತಕ್ಕೆ ಸ್ಪಂದಿಸುವ ಸುವರ್ಣ ಅವಕಾಶವಿದು. ನೋವಿಗೆ ಬದುಕಿಗೆ ಸ್ಪಂದಿಸುವ ಸರಕಾರಗಳಿಗೆ ಯಾವತ್ತೂ ಸೋಲಿಲ್ಲವೆಂಬುದನ್ನು ಮನಗಂಡು ತಕ್ಷಣವೇ ಅದು ಕಾರ್ಯೋನ್ಮುಖವಾಗಬೇಕು’ ಎಂದು ಸರ್ಕಾರಕ್ಕೆ ಕರೆ ನೀಡುವ ವೈದೇಹಿಯವರು ನಮ್ಮ ಮುಂದೆ ಬದುಕಿನ ಪ್ರಶ್ನೆಗಳನ್ನು ಇಡುತ್ತಾರೆ:

  • ಬದುಕಿನ ಮೌಲ್ಯವನ್ನು ಹೇಗೆ ನಿರ್ಧರಿಸುವಿರಿ? ಭಂಗಿ, ಅಂಗಿ, ಬಣ್ಣಗಳಿಂದಲೆ, ನಡತೆ ಧೋರಣೆಗಳಿಂದಲೆ, ಖರೀದಿಯ ಅಥವಾ ಆಳುವ ಸಾಮರ್ಥ್ಯದಿಂದಲೆ? ನಮ್ಮ ಪೂರ್ವಿಕರೆಲ್ಲ ಕಳಪೆ ಬದುಕನ್ನು ಬದುಕಿದರು ಎನ್ನುವಿರ?
  • ಜಗತ್ತನ್ನೇ ಗೆಲ್ಲ ಹೋದವರ ಇತಿಹಾಸ ಓದಿಕೊಂಡಿರುವಿರಷ್ಟೆ? ಮುಗಲ್ ಸಾಮ್ರಾಟ ಮತ್ತು ಸಂಗೀತ ಸಾಮ್ರಾಟರಲ್ಲಿ ವ್ಯತ್ಯಾಸ ಕಾಣಲಾರದೆ ಹೋದೆವೆ ನಾವು?
  • ನೆನಸಿಕೊಳ್ಳಿ. ಒಂದೇ ಮನೆಯ ಒಂದು ಕೋಣೆಯಲ್ಲಿ ಹಸಿವು ರೋಗ ರುಜಿನ ಕಾಯಿಲೆ ಬದುಕು ಸಾವಿನ ಹೋರಾಟ, ಇನ್ನೊಂದು ಕೋಣೆಯಲ್ಲಿ ನಡೆಯುತ್ತಿರುವ ರಿಯಾಲಿಟಿ ಶೋ.
  • ಕಲ್ಪಿಸಿಕೊಳ್ಳಿ. ಒಂದು ಕೋಣೆಯಲ್ಲಿ ಕೊಲೆ, ಹೆಮ್ಮಕ್ಕಳ ಮಾನಹಾನಿ, ಇನ್ನೊಂದೆಡೆ ಮನೆಯ ಜವಾಬ್ದಾರಿ ಹೊತ್ತವರು ರೆಸಾರ್ಟ್‌ಗೆ ಹೋಗಿದ್ದಾರೆ. ದಿನಗಟ್ಟಲೆ ಆಯ್ತು, ಬಂದಿಲ್ಲ.
  • ಒಂದು ಕೋಣೆಯಲ್ಲಿ ಆತ್ಮಹತ್ಯೆಗಳು ಸಾಲುಸಾಲಾಗಿ ನೇಣಿನಲ್ಲಿ ನೇತಾಡುತ್ತಿವೆ, ಇನ್ನೊಂದರಲ್ಲಿ ಮೋಜು ಮೇಜವಾನಿ ನಡೆಯುತ್ತಿದೆ.
  • ಒಂದೆಡೆ ವರದಕ್ಷಿಣೆ ಉರಿ ವಧುವನ್ನು ಸುಡುತ್ತಿದೆ, ಇನ್ನೊಂದು ಕೋಣೆಯಲ್ಲಿ ಒಲೆಉರಿಯ ಮೇಲೆ ಅಂದಿನ ತಿಂಡಿ ಅಡುಗೆ ತಯಾರಿ ನಡೆಯುತ್ತಿದೆ.
  • ಒಂದು ಕೋಣೆಯಲ್ಲಿ ಅನಾಚಾರ, ಭ್ರಷ್ಟತೆ, ವಂಚನೆ, ಜಗಲಿಯಲ್ಲಿ ಅಂದಿನ ಪೇಪರು ಓದುತ್ತ ಹರಟೆ ಪಟ್ಟಾಂಗ ಮುಗಿದಿಲ್ಲದಂತೆ ನಡೆಯುತ್ತಿದೆ.

`ಕುಸುಮಾ, ಮೇಧಾ, ಸುಂದರಲಾಲ ಬಹುಗುಣ, ಕಮಲಾದೇವಿ, ಮುಂತಾದವರು ಇಂದು ಮಾದರಿಯಲ್ಲ. ಅಕ್ಕ ಮಹಾದೇವಿಯ ಆತ್ಮಸ್ಥೈರ್ಯವೂ ಅಲ್ಲ’ ಎಂದು ವ್ಯಥಿಸುವ ವೈದೇಹಿ `ಸೌಂದರ್ಯ ಸ್ಪರ್ಧೆ ಮತ್ತು ಅಂತಹ ಅಬದ್ಧಗಳಾಗಲೀ, ಅಸಂಗತಗಳಾಗಲೀ ಒಯ್ಯುವುದು `ಅಂತರಂಗ’ಕ್ಕೆ ಏನನ್ನೂ ಕೊಡಲಾಗದ ಪೊಳ್ಳು `ಬಹಿರಂಗ’ಕ್ಕೆ’ ಎನ್ನುತ್ತಾರೆ. ಹೀಗೆ ವಾಸ್ತವವನ್ನು ಬಿಟ್ಟು ರಿಯಾಲಿಟಿ ಶೋಗಳಲ್ಲಿ ಕರಗಿಹೋಗುತ್ತಿರುವ ಯುವಜಗತ್ತು ಒಂದೆಡೆ, ವಾಸ್ತವವನ್ನು ಅರಗಿಸಿಕೊಳ್ಳಲಾರದೆ  ತಪ್ಪಿ ಓಡುವ, ಕಹಿಗೊಳ್ಳುವ, ಕಂಡದ್ದನ್ನು ಕಂಡ ಹಾಗೆ ನಂಬುವ ಅಮಾಯಕವಾಗಿ ಬಲಿಯಾಗುವವರು ಇನ್ನೊಂದೆಡೆ ಎಂದು ವೈದೇಹಿ ದುಃಖಿಸುತ್ತಾರೆ.

—————————————————————–

ಭೂತಾನದ ಗ್ರಾಸ್ ನ್ಯಾಶನಲ್ ಹ್ಯಾಪಿನೆಸ್ ಸೂಚ್ಯಂಕ : ನಮ್ಮೆದುರಿನ ಮಾದರಿ

ವಿಶ್ವದ ಅರ್ಥಶಾಸ್ತ್ರಜ್ಞರು ಒಂದು ದೇಶದ ಅಭಿವೃದ್ಧಿಯನ್ನು ಅಳೆಯಲು ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಜಿಡಿಪಿ) ಎಂಬ ಆರ್ಥಿಕ ಮಾನದಂಡವನ್ನು ಬಳಸುತ್ತಾರೆ. ಇವತ್ತು ಅಭಿವೃದ್ಧ – ಅಭಿವೃದ್ಧಿಶೀಲ ದೇಶಗಳೆಂಬ ಹಣೆಪಟ್ಟಿ ಬಂದಿರುವುದೇ ಈ ಮಾನದಂಡದಿಂದ. ಆದರೆ ಈ ಮಾನದಂಡದಲ್ಲಿ ಹಲವು ಲೋಪಗಳಿವೆ ಎಂದು ಅರ್ಥಶಾಸ್ತ್ರಜ್ಞರೇ ಒಪ್ಪಿಕೊಳ್ಳುತ್ತಾರೆ.

೧೯೭೨ರಲ್ಲಿ ಭೂತಾನ್ ದೇಶದ ಹಿಂದಿನ ದೊರೆ ಜಿಂಗ್ಮೆ ಸಿಂಗ್ಯೆ ವಾಂಗ್‌ಚುಕ್ ಚಾಲ್ತಿಗೆ ತಂದ `ಗ್ರಾಸ್ ನ್ಯಾಶನಲ್ ಹ್ಯಾಪಿನೆಸ್ (ಜಿ ಎನ್ ಎಚ್)’ ಎಂಬ ಸೂಚ್ಯಂಕವು ಒಂದು ಸಮುದಾಯದ ಬದುಕಿನ ಗುಣಮಟ್ಟವನ್ನು ಹೆಚ್ಚಿನ ಸಮಚಿತ್ತ ಮತ್ತು ಸರ್ವಗ್ರಾಹಿಯಾಗಿ ನೋಡುವ ಮಾನದಂಡವೆಂದು ಹೆಸರಾಗಿದೆ. ಸುಖದ ಸೂಚ್ಯಂಕವನ್ನು ಯಾವ ದೇಶವೂ ಕಡೆಗಣಿಸುವಂತಿಲ್ಲ ಎಂಬ ಹೊಸ ಅರಿವು ಈಗ ಮೂಡುತ್ತಿದೆ. ಪುಟ್ಟ ದೇಶವಾದ ಭೂತಾನ್ ಇಡೀ ಜಗತ್ತಿಗೇ ಹೊಸ ನೋಟವೊಂದನ್ನು ನೀಡಿದೆ.

ಮಾನಸಿಕ ಸ್ವಾಸ್ಥ, ಆರೋಗ್ಯ, ಕಾಲದ ಸಮರ್ಥ ಬಳಕೆ, ಸಾಮುದಾಯಿಕ ಚಟುವಟಿಕೆಗಳು, ಶಿಕ್ಷಣ, ಸಂಸ್ಕೃತಿ, ಪರಿಸರ, ಆಡಳಿತ, ಬದುಕಿನ ಮಟ್ಟ – ಇವು ಸುಖಸೂಚ್ಯಂಕದ ಒಂಬತ್ತು ಮಾನದಂಡಗಳು. ಬೌದ್ಧ ಮತದ ಆಧ್ಯಾತ್ಮಿಕ ಮೌಲ್ಯಗಳಿಂದ ರೂಪುಗೊಂಡ ಈ ಮಾನದಂಡವನ್ನು ಅತ್ಯಂತ ವೈಜ್ಞಾನಿಕವಾಗಿ ರೂಪಿಸಲಾಗಿದೆ. ಆರ್ಥಿಕ ಸ್ವಾಸ್ಥ್ಯ, ಪಾರಿಸರಿಕ ಸ್ವಾಸ್ಥ್ಯ, ಭೌತಿಕ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯ, ಕಚೇರಿ ಸ್ವಾಸ್ಥ್ಯ, ಸಾಮಾಜಿಕ ಸ್ವಾಸ್ಥ್ಯ, ರಾಜಕೀಯ ಸ್ವಾಸ್ಥ್ಯ – ಈ ಏಳು ಮಾನದಂಡಗಳ ಮೂಲಕ ಸುಖಸೂಚ್ಯಂಕವನ್ನು ಲೆಕ್ಕ ಮಾಡುತ್ತಾರೆ.

ಸುಖೀ ಗ್ರಹ ಸೂಚ್ಯಂಕ (ಹ್ಯಾಪಿ ಪ್ಲಾನೆಟ್ ಇಂಡೆಕ್ಸ್ ಎಚ್ ಪಿ ಐ) ಎಂಬ ಇನ್ನೊಂದು ಹೊಸ ಸೂಚ್ಯಂಕವಿದೆ. ಇದರ ಪ್ರಕಾರ ಭೂತಾನವು ೧೭ನೇ ಅತ್ಯಂತ ಸುಖೀ ದೇಶ. ಭಾರತಕ್ಕೆ ಇಲ್ಲಿ ೩೫ನೇ ಸ್ಥಾನ. ಈ ಪಟ್ಟಿಯಲ್ಲಿ ಅಮೆರಿಕಾಗೆ ೧೧೪ನೇ ಸ್ಥಾನ. ವಿಷಯಾಸಕ್ತ ಬದುಕೇ ಸುಖಕ್ಕೆ ಕಾರಣವಲ್ಲ ಎಂಬುದು ಈ ಮಾನದಂಡದ ಸಂದೇಶ.

ಭೂತಾನದಲ್ಲಿ ದೂರದರ್ಶನಕ್ಕೆ ಪ್ರವೇಶ ಸಿಕ್ಕಿದ್ದೇ ೧೯೯೯ರಲ್ಲಿ. ಈಗಲೂ ಅಲ್ಲಿನ ಜನ ೧೪ನೇ ಶತಮಾನದ ಸಾಂಪ್ರದಾಯಿಕ ಉಡುಗೆಗಳನ್ನೇ ತೊಡುತ್ತಾರೆ. ಇಡೀ ದೇಶದಲ್ಲಿ ಎಲ್ಲೂ ಸಂಚಾರ ಸಂಕೇತದೀಪಗಳ ವ್ಯವಸ್ಥೆ ಇಲ್ಲ.

ವಿಷಯಾಸಕ್ತ ಬದುಕಿನ ಪ್ರಭಾವವನ್ನು ಬುದ್ಧನ ಮಾತುಗಳಿಂದ ನಿಯಂತ್ರಿಸಬಹುದು ಎಂಬುದಕ್ಕೆ ಭೂತಾನವೇ ಸ್ಪಷ್ಟ ನಿದರ್ಶನ. ಈ ಮಟ್ಟಿಗೆ ಭೂತಾನವು ಜಗತ್ತಿಗೇ ಮಾದರಿ ಎನ್ನಬಹುದು.

ಈ ಮಧ್ಯೆ ಭೂಮಿಯ ತಾಪಮಾನ ಹೆಚ್ಚುತ್ತಿದೆ ಎಂಬ ಸಂದೇಶವನ್ನು ಜಗತ್ತಿಗೆ ತಲುಪಿಸಲು ಕಳೆದ ವರ್ಷ (೨೦೦೯)ಮಾಲ್ಡೀವ್ಸ್ ದ್ವೀಪದೇಶದ ಸರ್ಕಾರವು ಸಮುದ್ರತಳದಲ್ಲಿ ಸಂಪುಟ ಸಭೆ ನಡೆಸಿದರೆ, ಈ ವರ್ಷ (೨೦೧೦)ರಲ್ಲಿ ಮಂಗೋಲಿಯಾ ದೇಶದ ಸರ್ಕಾರವು ಗೋಬಿ ಮರುಭೂಮಿಯಲ್ಲಿ ಸಂಪುಟ ಸಭೆ ನಡೆಸಿ ವಿಶ್ವಜಾಗೃತಿಗೆ ಯತ್ನಿಸಿತು. ಬಹುಶಃ ಇವೆರಡೂ ಯತ್ನಗಳು ಪ್ರಚಾರದ ತಂತ್ರವೆಂದಾದರೂ ಸರಿಯೆ, ಎಲ್ಲೋ ಒಂದು ಒಳ್ಳೆಯ ಸಂದೇಶವನ್ನು ಬೀರುವಲ್ಲಿ ಯಶ ಪಡೆದವು.

ಎಚ್ಚರಿಕೆ! ಅಭಿವೃದ್ಧಿಗೂ ನಿರ್ದಿಷ್ಟ ಕಾಲಮಿತಿಯಿದೆ

ವಿಶ್ವದ ಜನಸಂಖ್ಯೆ, ಔದ್ಯಮೀಕರಣ, ಮಾಲಿನ್ಯ, ಆಹಾರ ಉತ್ಪಾದನೆ ಮತ್ತು ಸಂಪನ್ಮೂಲಗಳ ವಿನಾಶ – ಈ ಐದು ಮಾನದಂಡಗಳ ಮೂಲಕ ವಿಶ್ವದ ಬೆಳವಣಿಗೆಯ ಗತಿ ಮುಂದೇನಾಗಬಹುದು ಎಂದು ಲೆಕ್ಕಾಚಾರ ಮಾಡಿದ ಪುಸ್ತಕವೇ ೧೯೭೨ರಲ್ಲಿ ಪ್ರಕಟವಾದ `ದಿ ಲಿಮಿಟ್ಸ್ ಟು ಗ್ರೋಥ್’. ಜಾಗತಿಕ ಚಿಂತನಾಕೂಟ `ಕ್ಲಬ್ ಆಫ್ ರೋಮ್’ನ ವಿನಂತಿಯಂತೆ ಡೊನೆಲ್ಲಾ ಮೀಡೋಸ್, ಡೆನಿಸ್ ಮೀಡೋಸ್, ಜೋರ್ಗೆನ್ ರ್‍ಯಾಂಡರ್ಸ್ ಮತ್ತು ವಿಲಿಯಂ ಬರ್‌ಹೆನ್ಸ್ ೩ – ಇವರೆಲ್ಲ ಸೇರಿ ಬರೆದ ಈ ಪುಸ್ತಕದಲ್ಲಿ ಹೇಳಿರುವ ಅಂಶಗಳನ್ನು ಮೂವತ್ತು ವರ್ಷಗಳ ನಂತರ, ೨೦೦೪ರಲ್ಲಿ ಪರಾಮರ್ಶೆಗೆ ಒಳಪಡಿಸಲಾಯಿತು. ಔದ್ಯಮೀಕರಣ, ಮಾಲಿನ್ಯ, ಆಹಾರ ಉತ್ಪಾದನೆ- ಈ ಮೂರು ಸಂಗತಿಗಳಲ್ಲಿ ಪುಸ್ತಕವು ಊಹಿಸಿದ ಹಾದಿಯಲ್ಲೇ ಜಗತ್ತು ನಡೆದಿದೆ ಎಂಬ ಅಂಶವನ್ನು ಈ ಅಧ್ಯಯನ ಸ್ಪಷ್ಟಪಡಿಸಿದೆ. ೨೦೦೮ರಲ್ಲಿ ಈ ಕುರಿತು ತನ್ನದೇ ಪ್ರತ್ಯೇಕ ವರದಿಯನ್ನು ಬರೆದ ಆಸ್ಟ್ರೇಲಿಯಾದ ಗ್ರಹಾಂ ಟರ್ನರ್ ಅಂಕಿ ಅಂಶಗಳ ಮೂಲಕ ಈ ವಾಸ್ತವವನ್ನು ದಾಖಲಿಸಿದ್ದಾರೆ. `ದಿ ಲಿಮಿಟ್ಸ್ ಟು ಗ್ರೋಥ್’ ಪುಸ್ತಕದಲ್ಲಿ ೧೯೦೦-೧೯೭೦ರವರೆಗಿನ ಮಾಹಿತಿಗಳನ್ನು ಆಧಾರವಾಗಿ ತೆಗೆದುಕೊಂಡಿದ್ದರೆ, ಗ್ರಹಾಂ ಟರ್ನರ್ ೧೯೭೦-೨೦೦೦ದ ನಡುವಣ ಮಾಹಿತಿಗಳನ್ನು ಬಳಸಿಕೊಂಡಿದ್ದಾರೆ.

೨೧ನೇ ಶತಮಾನದ ಮಧ್ಯಭಾಗದಲ್ಲಿ ಜಾಗತಿಕ ಆರ್ಥಿಕ ಮತ್ತು ಸಾಮಾಜಿಕ ಪತನ ಖಚಿತ ಎಂಬುದು ಈ ಪುಸ್ತಕದ ಒಟ್ಟಾರೆ ಅಭಿಮತ. `೨೧ನೇ ಶತಮಾನದ ಆರಂಭದಿಂದಲೇ ಸಂಪನ್ಮೂಲಗಳ ಕೊರತೆ ಕಾಣಿಸಿಕೊಳ್ಳುತ್ತದೆ; ಮಾಲಿನ್ಯವು ವಿಪರೀತವಾಗಿ ಹೆಚ್ಚುತ್ತದೆ;  ತಲಾವಾರು ಆಹಾರ ಉತ್ಪಾದನೆ, ಸೇವೆಗಳು ಮತ್ತು ಲೌಕಿಕ ಸಿರಿವಂತಿಕೆ ಕಡಿಮೆಯಾಗುತ್ತದೆ’ ಎಂದು ಡೊನೆಲ್ಲಾ ಮೀಡೋಸ್ ಮತ್ತಿತರರು ಹೇಳಿದ್ದರು.

ಈ ಪುಸ್ತಕದ ಸಾಮಾನ್ಯ ವಾದಗಳು ಖಂಡಿತವಾಗಿಯೂ ಆತಂಕ ತರುವಂಥ ವಾಸ್ತವ ಸಂಗತಿಗಳು ಎನ್ನುತ್ತಾರೆ ಪಳೆಯುಳಿಕೆ ಇಂಧನ ಬಳಕೆ ಮುಕ್ತಿಗಾಗಿ ಅಭಿಯಾನ ಮಾಡುತ್ತಿರುವ ರಿಚರ್ಡ್ ಹೀನ್‌ಬರ್ಗ್. ಅವರ ಮಾತುಗಳಲ್ಲೇ ಹೇಳುವುದಾದರೆ ವಿಶ್ವದ ಮುಂದಿನ ಭವಿಷ್ಯ ಹೀಗಿದೆ:

  • ಮರುಬಳಕೆ ಮಾಡಲಾಗದ ತೈಲ, ನೈಸರ್ಗಿಕ ಅನಿಲ, ಕಲ್ಲಿದ್ದಲು, ಆಂಟಿಮನಿ, ಝಿಂಕ್ ಇತ್ಯಾದಿ ಇಂಧನಮೂಲಗಳ ಪ್ರಮಾಣ ಕುಸಿಯುತ್ತಿದೆ.
  • ಪಳೆಯುಳಿಕೆ ಇಂಧನಗಳಿಂದ ತಾಪಮಾನ ಹೆಚ್ಚುತ್ತಿದೆ; ಬರಗಾಲ ಹೆಚ್ಚುತ್ತಿದೆ; ಹಿಮಗಡ್ಡೆಗಳು ಕರಗುತ್ತಿವೆ; ಸಮುದ್ರಮಟ್ಟ ಹೆಚ್ಚುತ್ತಿದೆ.
  • ಜಗತ್ತಿನ ಎಲ್ಲ ದೇಶಗಳೂ ಶುದ್ಧ ಕುಡಿಯುವ ನೀರಿನ ಸಮಸ್ಯೆಗೆ ತುತ್ತಾಗುತ್ತಿವೆ. ಇದಕ್ಕೆ ಪರಿಸರ ಮಾಲಿನ್ಯ, ಉದ್ಯಮಗಳಿಗಾಗಿ ಮತ್ತು ಕೃಷಿಗಾಗಿ ಅಂತರ್ಜಲದ ಅತಿಯಾದ ಬಳಕೆ – ಇವೇ ಮುಖ್ಯ ಕಾರಣ.
  • ವಿಶ್ವದ ತಲಾ ಆಹಾರ ಉತ್ಪಾದನೆ ಕುಸಿಯುತ್ತಿದೆ. ಈಗಿನ ಫಸಲನ್ನೇ ಕಾಯ್ದುಕೊಳ್ಳುವ ಯತ್ನಗಳಿಗೆ ವಾತಾವರಣ ಬದಲಾವಣೆ, ಭೂ ಸವಕಳಿ, ನೀರಿನ ಕೊರತೆ ಮತ್ತು ಅತಿಯಾದ ಇಂಧನ ವೆಚ್ಚಗಳು ಅಡ್ಡಿಯಾಗುತ್ತಿವೆ.
  • ಭೂಮಿಯ ಜೀವಕೋಟಿಗಳೆಲ್ಲ ವಿನಾಶದ ಅಂಚಿಗೆ ಬರುತ್ತಿವೆ. ಈ ಪರಿಸ್ಥಿತಿ ಹಿಂದಿನ ೬ ಕೋಟಿ ವರ್ಷಗಳಲ್ಲಿ ಬಂದಿರಲಿಲ್ಲ.

ಆದ್ದರಿಂದ ವಿಶ್ವದ ನಾಯಕರು ೧) ಪಳೆಯುಳಿಕೆ ಇಂಧನದ ಅವಲಂಬನೆಯನ್ನು ಆದಷ್ಟು ಬೇಗ ತಗ್ಗಿಸುವುದು; ೨) ಆರ್ಥಿಕ ಬೆಳವಣಿಗೆಯನ್ನು ಕೊನೆಗೊಳಿಸಲು ಹೊಂದಾಣಿಕೆ ಮಾಡಿಕೊಳ್ಳುವುದು; ೩) ವಿಶ್ವದ ೭೦೦ ಕೋಟಿ ಜನರಿಗೆ ಸುಸ್ಥಿರ ಬದುಕಿನ ಮಾರ್ಗವನ್ನು ರೂಪಿಸಿಕೊಡುವುದು ಮತ್ತು ೪) ಕಳೆದ ನೂರು ವರ್ಷಗಳಲ್ಲಿ ನಡೆದ ಪಳೆಯುಳಿಕೆ ಇಂಧನ ಆಧಾರಿತ ಪ್ರಗತಿಯ ಪಾರಿಸರಿಕ ದುಷ್ಪರಿಣಾಮಗಳನ್ನು ಸಮರ್ಥವಾಗಿ ನಿರ್ವಹಿಸುವುದು – ಈ ನಾಲ್ಕು ಸಂಗತಿಗಳಿಗೆ ಆದ್ಯತೆ ನೀಡಬೇಕು ಎಂದು ಹೀನ್‌ಬರ್ಗ್ ಹೇಳುತ್ತಾರೆ.

ಒಂದು ಮಟ್ಟ ದಾಟಿದ ಮೇಲೆ ಬೆಳವಣಿಗೆಯು ಅನುಕೂಲಕ್ಕಿಂತ ಸಮಸ್ಯೆಯಾಗುವ ಸಂಭವವೇ ಹೆಚ್ಚು ಎಂದು ಹೀನ್‌ಬರ್ಗ್ ಹೇಳುತ್ತಾರೆ.

ನಾಗರಿಕತೆಗಳ ಪತನದ ಕಾರಣವೇ ನಮಗೆ ಪಾಠವಲ್ಲವೆ?

`ಕೊಲಾಪ್ಸ್: ಹೌ ಸೊಸೈಟೀಸ್ ಚೂಸ್ ಟು ಫೈಲ್ ಆರ್ ಸಕ್ಸೀಡ್’ ಎಂಬ ಬೃಹತ್ ಗ್ರಂಥವನ್ನು ಬರೆದ  ಜಾರೆಡ್ ಡೈಮಂಡ್ ಕೂಡಾ ಪರಿಸರ ನಾಶವೇ ಹಲವು ನಾಗರಿಕತೆಗಳ ಕಣ್ಮರೆಗೆ ಕಾರಣ ಎಂದು ಹಲವಾರು ಉದಾಹರಣೆ, ಇತಿಹಾಸದ ವಾಸ್ತವಾಂಶಗಳ ಮೇಲೆ ವಾದಿಸುತ್ತಾರೆ. ಸಮಕಾಲೀನ ಜಗತ್ತನ್ನೂ ಅವರು ತಮ್ಮ ಹರಿತ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಮಧ್ಯ ಅಮೆರಿಕಾದ ಮಾಯಾ ನಾಗರಿಕತೆ, ಉತ್ತರ ಅಮೆರಿಕಾದ ಅನಾಸಾಝಿ ನಾಗರಿಕತೆ, ಪಿಟ್‌ಕೇರ್ನ್ ದ್ವೀಪದ ಪಾಲಿನೇಶಿಯನ್ ನಾಗರಿಕತೆ, ಈಸ್ಟರ್ ದ್ವೀಪದ ನಾಶ, ಗ್ರೀನ್‌ಲ್ಯಾಂಡ್ ನಾರ್ಸ್‌ನ ಪತನ – ಎಲ್ಲದರಲ್ಲೂ  ಪರಿಸರ ಹಾನಿಯ ಅಂಶವಿದೆ ಎಂದು ಡೈಮಂಡ್ ಪ್ರತಿಪಾದಿಸಿದ್ದಾರೆ. ಹಾಗೇ ಸಮಕಾಲೀನ ಚೀನಾ, ಆಸ್ಟ್ರೇಲಿಯಾ, ಹೈಟಿ, ರ್‍ವಾಂಡಾವನ್ನೂ ಅವರು ತಮ್ಮ ಸಿದ್ಧಾಂತದ ಒರೆಗೆ ಹಚ್ಚಿದ್ದಾರೆ. `ನಾಗರಿಕತೆಗಳ ವಧೆಯಾಗಲಿಲ್ಲ; ಅವು ಆತ್ಮಹತ್ಯೆ ಮಾಡಿಕೊಂಡವು’ ಎಂದು  ಖ್ಯಾತ ಇತಿಹಾಸಕಾರ ಆರ್ನಾಲ್ಡ್ ಟಾಯ್ನಬೀ ಹೇಳಿದ್ದನ್ನು ಡೈಮಂಡ್ ಬೆಂಬಲಿಸುತ್ತಾರೆ.

ಅದಿರಲಿ, ೨೦೪೦ರ ಹೊತ್ತಿಗೆ ಜಾಗತಿಕ ಏರುಪೇರುಗಳಾಗಿ ಪ್ರಳಯ ಸ್ವರೂಪದ ಘಟನೆಗಳು ಜರುಗುತ್ತವೆ ಎಂದು ಹವಾಮಾನ ವಿಜ್ಞಾನಿ ಜೇಮ್ಸ್ ಲವ್‌ಲಾಕ್ ತನ್ನ ಪುಸ್ತಕ `ದಿ ರಿವೆಂಜ್ ಆಫ್ ಗಾಯಾ’ (೨೦೦೬)ದಲ್ಲಿ ಎಚ್ಚರಿಸಿದ್ದಾರೆ. ಇನ್ನು ಮೂವತ್ತು ವರ್ಷಗಳಲ್ಲಿ ಚೀನಾ ದೇಶವು ಮಾನವ ವಸತಿಗೆ ಅಯೋಗ್ಯವಾಗುತ್ತದೆ; ೬೦೦ ಕೋಟಿ ಜನರು ಪ್ರವಾಹ, ಬರಗಾಲಕ್ಕೆ ತುತ್ತಾಗುತ್ತಾರೆ; ಪರಮಾಣು ಸ್ಥಾವರಗಳ ಪರಿಣಾಮ ಪರಿಸರವಾದಿಗಳ ಕಲ್ಪನೆಗಿಂತ ಭೀಕರವಾಗಿರುತ್ತದೆ; ಯೂರೋಪಿನಲ್ಲಿ ಬೆಳೆಗಳೇ ಬೆಳೆಯುವುದಿಲ್ಲ. `ಮನುಕುಲವು ದೇವರೇ ಆಯ್ಕೆ ಮಾಡಿದ ಜೀವ ಸಮುದಾಯ’ ಎಂದು ಭಾವಿಸುವುದು ಅಧಿಕಪ್ರಸಂಗಿತನದ ಪರಮಾವಧಿ ಎಂದು ಲವ್‌ಲಾಕ್ ಹೇಳುತ್ತಾರೆ.

ಭಾರತವು ಸಿಂಧೂ ನಾಗರಿಕತೆಯ ಮೂಸೆಯಲ್ಲಿ ಅರಳಿದ ಮಹಾನ್ ಸಮಾಜ ಎಂಬುದನ್ನು ನಾವು ಗಮನಿಸಿದರೆ, ಸಿಂಧೂ ನಾಗರಿಕತೆಯ ನಾಶವೇಕಾಯಿತು ಎಂಬುದನ್ನೂ ಒಮ್ಮೆ ನೆನಪಿಸಿಕೊಳ್ಳಬೇಕಾಗುತ್ತದೆ. ಸಿಂಧೂ – ಸರಸ್ವತಿ ನದಿಗಳ ತಟದಲ್ಲಿ ಉಚ್ಛ್ರಾಯಕ್ಕೆ ಬಂದ ನಮ್ಮ ನಾಗರಿಕತೆಯು ಅತಿಯಾದ ಕೃಷಿ ಜೀವನ, ಪರಿಸರ ನಾಶ, ನದೀ ಪಾತ್ರಗಳಲ್ಲಿನ ಬದಲಾವಣೆ, – ಇವೆಲ್ಲ ಕಾರಣಗಳಿಂದಾಗಿ ಕುಸಿಯಿತು ಎಂಬ ಮಾಹಿತಿಗಳು ಈಗ ಸಿಕ್ಕಿವೆ.

 ಹೋಮ್ : `ಈ ವಸುಂಧರೆಯೇ ನಮ್ಮ ಮನೆ, ಹಾಳುಗೆಡಹಬೇಡಿ’

೨೦೦೯ರಲ್ಲಿ ಯಾನ್ ಆರ್ಥಸ್ ಬರ್ಟ್‌ರಂಡ್ ನಿರ್ಮಿಸಿದ `ಹೋಮ್’ ಎಂಬ ಸಾಕ್ಷ್ಯಚಿತ್ರವನ್ನು ನೋಡಿ. ಅದರಲ್ಲಿ ಇರುವ ನೂರಾರು ಪುಟ್ಟ ವಾಕ್ಯಗಳಲ್ಲಿ ಭೂಮಿಯ ಕಥೆಯಿದೆ; ವ್ಯಥೆಯಿದೆ; ಆಶಾಕಿರಣವೂ ಇದೆ.

  • ೪೦೦ ಕೋಟಿ ವರ್ಷಗಳ ಹಿಂದೆ ಮೂಡಿದ ಈ ಭೂಮಿಯ ಮೇಲೆ ಮನುಷ್ಯ ಹುಟ್ಟಿ ಬರೀ ಎರಡು ಲಕ್ಷ ವರ್ಷಗಳಾದವು. ಆದರೆ ಇಡೀ ಭೂಮಿಯ ಚಹರೆಯನ್ನೇ ಮನುಷ್ಯ ಬದಲಿಸಿದ್ದಾನೆ. ಕೆಲವೇ ಸಾವಿರ ವರ್ಷಗಳ ಹಿಂದೆ ಆರಂಭವಾದ ಕೃಷಿಜೀವನದಲ್ಲಿ ಇಂದು ಜಗತ್ತಿನ ಅರ್ಧಕ್ಕರ್ಧ ಪಾಲು ಜನ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಮುಕ್ಕಾಲು ಪಾಳು ಜನ ತಮ್ಮ ಕೈಗಳಿಂದಲೇ ಬಿತ್ತಿ ಬೆಳೆಯುತ್ತಿದ್ದಾರೆ. ಕೃಷಿಭೂಮಿಯೀಗ ಹಾಳಾಗಿ ಮನುಷ್ಯ ಅಭಿವೃದ್ಧಿಪಡಿಸಿದ್ದ ತಳಿಗಳ ಪೈಕಿ ಮುಕ್ಕಾಲು ಪಾಲು ನಾಶವಾಗಿದೆ.

  • ಚೀನಾದ ಶಾಂಘೈ ಒಂದರಲ್ಲೇ ಕಳೆದ ೨೦ ವರ್ಷಗಳಲ್ಲಿ ೩೦೦೦ ಗಗನಚುಂಬಿ ಕಟ್ಟಡಗಳು ಮೇಲೆದ್ದವು. ಇಂದು ಮುನ್ನೂರೈವತ್ತು ಕೋಟಿ ಜನ ನಗರಗಳಲ್ಲೇ ಬದುಕುತ್ತಿದ್ದಾರೆ. ಬರೀ ನ್ಯೂಯಾಕ್ ನಗರವೊಂದೇ ಜಗತ್ತಿನ ಆರನೇ ಅತಿ ದೊಡ್ಡ ಆರ್ಥಿಕತೆಯಾಗಿದೆ.  ಎಲ್ಲೆಲ್ಲೂ ಯಂತ್ರಗಳ ಭರಾಟೆ.  ಲಾಸ್ ಏಂಜಲಿಸ್‌ನಲ್ಲಿ ಪ್ರತಿಯೊಬ್ಬರಿಗೂ ಒಂದು ಕಾರು.
  • ಬಹುಪ್ರಸಿದ್ಧವಾದ ದುಬೈ ಕೂಡಾ ಈ ಪಟ್ಟಿಯಲ್ಲಿದೆ. ಇಲ್ಲಿಯೂ ಸಾವಿರಾರು ಗಗನಚುಂಬಿಗಳು. ಎಲ್ಲೂ ಸೌರಶಕ್ತಿಯ ಬಳಕೆಯಿಲ್ಲ.
  • ಒಂದು ಕಿಲೋಗ್ರಾಂ ಆಲೂಗೆಡ್ಡೆ ಬೆಳೆಯಲು ೧೦೦ ಲೀಟರ್ ನೀರು ಬೇಕು; ಒಂದು ಕಿಲೋಗ್ರಾಂ ಅಕ್ಕಿ ಬೆಳೆಯಲು ೪೦೦೦ ಲೀಟರ್ ನೀರು ಬೇಕು; ಒಂದು ಕಿಲೋಗ್ರಾಂ ಮಾಂಸ ಸಿದ್ಧಪಡಿಸಲು ೧೩ ಸಾವಿರ ಲೀಟರ್ ನೀರು ಬೇಕು; ಅವನ್ನೆಲ್ಲ ಉತ್ಪಾದಿಸಿ ರವಾನಿಸಲು ಬೇಕಾದ ಇಂಧನದ ಲೆಕ್ಕ ಬೇರೆ.
  • ವಿಶ್ವದ ಶೇ. ೮೦ರಷ್ಟು ಇಂಧನ ಸಂಪನ್ಮೂಲವನ್ನು ಕೇವಲ ಶೇ. ೨೦ರಷ್ಟು ಜನ ಕಬಳಿಸುತ್ತಾರೆ. ೧೯೫೦ರಿಂದ ಈವರೆಗೆ ವಿಶ್ವದ ವ್ಯಾಪಾರವು ೨೦ ಪಟ್ಟು ಹೆಚ್ಚಿದೆ.
  • ಒಂದು ಕಾಲದಲ್ಲಿ ನೀರಿನ ವ್ಯವಸ್ಥೆಗೆ ಹೆಸರಾಗಿದ್ದ ಉದಯಪುರ ಇರುವ ಭಾರತವು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಭಾರೀ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈಗ ಭಾರತದಲ್ಲಿ ಎರಡು ಕೋಟಿ ಬಾವಿಗಳಿವೆ.

`ಹೋಮ್’ ಹೇಳಿದ ಭರವಸೆಯ ಸಂಗತಿಗಳು

ಲೆಸೋಥೋ ಎಂಬ ಪುಟ್ಟ ಬಡದೇಶವು ಶಿಕ್ಷಣಕ್ಕೆ ಮೀಸಲಿಟ್ಟ ಸಂಪನ್ಮೂಲ ಜಗತ್ತಿನಲ್ಲೇ ಗರಿಷ್ಠ. ಹಾಗೇ ಸಿರಿವಂತ ದೇಶವಾದ ಖತಾರ್ ಕೂಡಾ ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ. ಬಾಂಗ್ಲಾ ದೇಶದ ಮೈಕ್ರೋಬ್ಯಾಂಕಿಂಗ್ ಕ್ರಾಂತಿಯು ಬಡವರಿಗೆ ನೆರವಾಗಿದೆ. ಆಂಟಾರ್ಕಟಿಕಾ ಖಂಡವನ್ನು ಶಾಂತಿ ಮತ್ತು ವಿಜ್ಞಾನಕ್ಕೆಂದೇ ಮೀಸಲಿಡಲಾಗಿದೆ. ದಕ್ಷಿಣ ಕೊರಿಯಾದಲ್ಲಿ ಕಾಡಿನ ಪ್ರಮಾಣ ಒಟ್ಟು ಭೂಪ್ರಮಾಣದ ಶೇ. ೬೫ಕ್ಕೆ ಏರಿದೆ. ಅಲ್ಲೀಗ ಶೇ. ೭೫ರಷ್ಟು ಕಾಗದವು ಮರುಬಳಕೆಯಾದದ್ದು. ಕೋಸ್ಟಾರಿಕಾ ದೇಶದಲ್ಲಿ ಸೇನೆಯೇ ಇಲ್ಲ; ಬದಲಿಗೆ ಭೂಮಿಯ ರಕ್ಷಣೆಗೇ ಹೆಚ್ಚು ಮಹತ್ವ. ಗಾಬೋನ್ ದೇಶದಲ್ಲಿ ಹೆಕ್ಟೇರಿಗೆ ಕೇವಲ ಒಂದು ಮರವನ್ನು ಕಡಿಯುವ ಮಿತಿ ಹಾಕಲಾಗಿದೆ. ಜರ್ಮನಿಯ ಫ್ರೀಬರ್ಗ್ ಜಿಲ್ಲೆಯಲ್ಲಿ ಐದು ಸಾವಿರ ಜನರ ಮನೆಗಳಿಗೆ ಬೇಕಾದ ಇಂಧನ ಅವರ ಮನೆಗಳಲ್ಲೇ ಉತ್ಪಾದನೆಯಾಗುತ್ತದೆ. ನ್ಯೂಝೀಲ್ಯಾಂಡ್, ಐಸ್‌ಲ್ಯಾಂಡ್, ಆಸ್ಟ್ರಿಯಾ, ಸ್ವೀಡನ್ ದೇಶಗಳಲ್ಲಿ ಮರುಬಳಕೆಯ ಇಂಧನ ಯೋಜನೆಗಳಿಗೇ ಹೆಚ್ಚಿನ ಆದ್ಯತೆ ದೊರೆತಿದೆ.

ಇಂಥ ಹತ್ತು ಹಲವು ಉದಾಹರಣೆಗಳೊಂದಿಗೆ ಮುಗಿಯುವ ಈ ಸಾಕ್ಷ್ಯಚಿತ್ರವು ಒಬ್ಬ ಸಹೃದಯ, ಸೂಕ್ಷ್ಮ ಮನುಷ್ಯನ ಎದೆಯಾಳದಲ್ಲಿ ಆತಂಕದ ಕಥೆಯನ್ನು ಹೇಳುತ್ತಲೇ ವಿಶ್ವಾಸದ ಬಿಂದುಗಳನ್ನೂ ಮೂಡಿಸುತ್ತದೆ.

ಎಣ್ಣೆಬಾಕ ಮನುಕುಲಕ್ಕೆ ಕ್ಯೂಬಿಕ್ ಮೈಲ್ ಆಫ್ ಆಯಿಲ್

 ಒಂದು ಘನ ಮೈಲು (ಒಂದು ಮೈಲು ಉದ್ದ, ಅಗಲ ಮತ್ತು ಎತ್ತರದ ಒಂದು ಘನಪ್ರದೇಶ) ಪ್ರಮಾಣದಲ್ಲಿ ಹಿಡಿಸುವಷ್ಟು ತೈಲವನ್ನು ಸುಟ್ಟರೆ ಸಿಗುವ ಇಂಧನವನ್ನು ‘ಕ್ಯೂಬಿಕ್ ಮೈಲ್ ಆಫ್ ಆಯಿಲ್’ ಎಂದು ಕರೆದವನು ಸ್ಟಾನ್‌ಫರ್ಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಹ್ಯೂ ಕ್ರೇನ್ ಎಂಬ ವಿಜ್ಞಾನಿ. ಈ ಪರಿಕಲ್ಪನೆಯು ಇಂಧನವನ್ನು ಅಳೆಯು ಹಲವಾರು ಮಾನದಂಡಗಳ ಗೊಂದಲವನ್ನು ತಪ್ಪಿಸಿದ್ದಷ್ಟೇ ಅಲ್ಲ, ಜಗತ್ತಿನ ಭವಿಷ್ಯದ ಇಂಧನ ಬೇಡಿಕೆಯ ಲೆಕ್ಕಾಚಾರವನ್ನೂ ಸರಳಗೊಳಿಸಿತು. ೨೦೦೬ ಹೊತ್ತಿಗೆ ಜಗತ್ತು ಮೂರು ಕ್ಯೂಬಿಕ್ ಮೈಲ್ ತೈಲ (ಸಿಎಂಓ)ವನ್ನು ಕಬಳಿಸುತ್ತಿತ್ತು ಎಂಬ ಲೆಕ್ಕ ಸಿಕ್ಕಿದೆ. ಈಗಿನ ಲೆಕ್ಕದಂತೆ ವಸುಂಧರೆಯ ಒಡಲಲ್ಲಿ ೪೨ ಸಿಎಂಓ ನೈಸರ್ಗಿಕ ಅನಿಲವಿದೆ; ೧೨೧ ಸಿಎಂಓಗಳಷ್ಟು ಕಲ್ಲಿದ್ದಲಿನ ನಿಕ್ಷೇಪವಿದೆ. ಇತರೆ ಅಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳ ಲೆಕ್ಕ ಸಿಕ್ಕಿಲ್ಲ. ಅದೇನೇ ಇರಲಿ, ಈಗಿನ ಲೆಕ್ಕಾಚಾರದಂತೆ ಇನ್ನು ೪೦ ವರ್ಷಗಳಲ್ಲಿ ತೈಲನಿಕ್ಷೇಪಗಳು ಖಾಲಿಯಾಗುತ್ತವೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಬಗ್ಗೆ ಉಪನ್ಯಾಸ ನೀಡಿದ `ಕ್ಯೂಬಿಕ್ ಮೈಲ್ ಆಫ್ ಆಯಿಲ್’ ಪುಸ್ತಕದ ಲೇಖಕ, ವಿಜ್ಞಾನಿ ಋತುದಮನ ಮಲ್ಹೋತ್ರಾ ಪ್ರಕಾರ ಸೌರ ವಿದ್ಯುತ್ ಫಲಕಗಳೂ ದುಬಾರಿಯೇ.

(ನಿಮಗೆ ಈ ಸಿಎಂಓದ ಲೆಕ್ಕ ಸಿಗಬೇಕಾದರೆ ಇನ್ನೂ ಕೆಲವು ಹೋಲಿಕೆಗಳನ್ನು ಗಮನಿಸಬೇಕು: ವರ್ಷಕ್ಕೆ ೪ ಅಣೆಕಟ್ಟುಗಳು ಅಥವಾ ೫೨ ಪರಮಾಣು ಸ್ಥಾವರಗಳು, ಅಥವಾ ೧೦೪ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಅಥವಾ ೩೨,೮೦೦ ಗಾಳಿ ಆಧಾರಿತ ಸ್ಥಾವರಗಳು, ಅಥವಾ ಒಂಭತ್ತು ಕೋಟಿ ಛಾವಣಿಗಳಲ್ಲಿ ಸೋಲಾರ್ ಫೋಟೋವೋಲ್ಟಾಯಿಕ್ ಫಲಕಗಳು! ಇವುಗಳಲ್ಲಿ ಯಾವುದಾದರೊಂದನ್ನು ನಿರಂತರ ೫೦ ವರ್ಷಗಳ ಕಾಲ ಸ್ಥಾಪಿಸಿದರೆ, ಅದು ಒಂದು ಕ್ಯೂಬಿಕ್ ಮೈಲ್ ಆಯಿಲ್‌ಗೆ ಸಮ! ೨೦೦೮ರ ಲೆಕ್ಕದಂತೆ ಒಂದು ಸಿಎಂಓ ತೈಲದ ಬೆಲೆ ೩ ಲಕ್ಷ ಕೋಟಿ ಡಾಲರ್‌ಗಳು)

ಏಕಾತ್ಮ ಮಾನವತೆಯ ಒಂದಂಶ ಇಲ್ಲಿದೆ

ಭಾರತೀಯ ಜನಸಂಘದ ಅಧ್ಯಕ್ಷರಾಗಿದ್ದ ಚಿಂತಕ ಪಂಡಿತ ದೀನದಯಾಳ್ ಉಪಾಧ್ಯಾಯರ `ಏಕಾತ್ಮ ಮಾನವತೆ’ಯು ನನ್ನ ಮಟ್ಟಿಗೆ ಒಂದು ಉತ್ಕೃಷ್ಟ ಚಿಂತನೆಯ ದಾಖಲೆ. ಅದರಲ್ಲಿ ದೀನದಯಾಳರು ಇಂಧನ ಬಳಕೆ ಕುರಿತಂತೆ ಹೀಗೆ ಹೇಳಿದ್ದಾರೆ:

`ಯಂತ್ರಗಳು ಸವೆದಾಗ, ಅದಕ್ಕೆ ಸವಕಳಿ ಬೆಲೆಯನ್ನು ಲೆಕ್ಕ ಹಾಕುತ್ತೇವೆ. ಅಂದಮೇಲೆ ನಾವು ಪ್ರಕೃತಿಯನ್ನು ನಾಶಮಾಡಿದಾಗ ಅದಕ್ಕೆ ಸವಕಳಿ ಮೌಲ್ಯವನ್ನು ಕಟ್ಟಬೇಕಲ್ಲವೆ? ನಮ್ಮ ಆರ್ಥಿಕ ವ್ಯವಸ್ಥೆಯು ಈಗಿರುವ ಸಂಪನ್ಮೂಲವನ್ನು ಸ್ವೇಚ್ಛೆಯಿಂದ ಬಳಸಬಾರದು; ಬದಲಿಗೆ ಸಂಪನ್ಮೂಲದ ನಿಯಂತ್ರಿತ ಬಳಕೆಯಾಗಬೇಕು. ಅರ್ಥಪೂರ್ಣ, ಸುಖೀ ಮತ್ತು ಪ್ರಗತಿಪರ ಬದುಕಿಗಾಗಿ ಬೇಕಾಗುವ ಭೌತಿಕ ವಸ್ತುಗಳನ್ನು ಪಡೆಯಬೇಕೆಂಬುದೇನೋ ನಿಜ. ಅದಕ್ಕಾಗಿ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಹಾಗಂತ ನಾವು `ಮನುಷ್ಯನ ಹುಟ್ಟಿನ ಪರಮ ಮತ್ತು ಏಕೈಕ ಉದ್ದೇಶವೇ ಬಳಕೆ ಮಾಡುವುದು’ ಎಂಬಂತೆ ಉತ್ಪಾದನೆ ಮತ್ತು ಬಳಕೆಯ ಇಲಿಪಂದ್ಯಾಟಕ್ಕೆ ಮುಂದಾಗುವುದು ಸರಿಯಲ್ಲ. ಯಂತ್ರವೊಂದಕ್ಕೆ ಕಲ್ಲಿದ್ದಲು ಬೇಕು, ನಿಜ. ಆದರೆ ಅದು ಕೇವಲ ಕಲ್ಲಿದ್ದಲನ್ನು ಕಬಳಿಸೋದಕ್ಕಷ್ಟೇ ರೂಪುಗೊಂಡಿಲ್ಲ. ಕನಿಷ್ಟ ಇಂಧನದ ಬಳಕೆಯಿಂದ ಗರಿಷ್ಟ ವೇಗವನ್ನು ಪಡೆಯುವುದೇ ನಾಗರಿಕತೆ. ಹಾಲು ಕರೆಯುವ ಕೃತ್ಯದಲ್ಲಿ ಇರುವ ಸಂಯಮವನ್ನು ನಾವು ಹೊಂದಬೇಕೇ ವಿನಃ, ಶೋಷಣೆಯ ಮಾನಸಿಕತೆಯನ್ನಲ್ಲ.

ಧರಂಪಾಲ್ ಕಂಡ `ಒಂದು ಸುಂದರ ವೃಕ್ಷ’

ಭಾರತವು ಎಂದೂ ಹಿಂದುಳಿದ ದೇಶವಾಗಿರಲಿಲ್ಲ, ಬದಲಿಗೆ ಅತ್ಯಂತ ಮುಂದುವರಿದ ದೇಶವಾಗಿತ್ತು ಎಂದು ಖ್ಯಾತ ಇತಿಹಾಸ ಸಂಶೋಧಕ ಧರಂಪಾಲ್ ಹೇಳುತ್ತಾರೆ. ೨೦೦೬ರಲ್ಲಿ, ತಮ್ಮ ೮೪ರ ವಯಸ್ಸಿನಲ್ಲಿ ವಾರ್ಧಾದ ಸೇವಾಗ್ರಾಮದಲ್ಲಿ ಕೊನೆಯುಸಿರೆಳೆದ ಧರಂಪಾಲ್ ಇಪ್ಪತ್ತನೇ ಶತಮಾನದ ಭಾರತೀಯ ಸಂಶೋಧಕ.

೧೯೩೧ರಲ್ಲಿ ಗಾಂಧೀಜಿಯವರು ಒಂದು ವಾದವನ್ನು ಮಂಡಿಸಿದ್ದರು: ನೂರು ವರ್ಷಗಳ ಹಿಂದಿನ ಭಾರತೀಯ ಶಿಕ್ಷಣ ವ್ಯವಸ್ಥೆ ಇಂದಿನ (ಗಾಂಧೀಜಿ ಕಾಲದ) ಬ್ರಿಟಿಶ್ ಶಿಕ್ಷಣಕ್ಕಿಂತ ಉತ್ತಮವಾಗಿತ್ತು ಎನ್ನುವುದೇ ಈ ಪ್ರತಿಪಾದನೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಈ ವಿಷಯವು ಧರಂಪಾಲರನ್ನು ತುಂಬಾ ಕಾಡಿತ್ತು. ೬೦ರ ದಶಕದಿಂದ ಅರಂಭಿಸಿ ಧರಂಪಾಲ್ ಭಾರತದ ಇತಿಹಾಸ ಕುರಿತ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಈಸ್ಟ್ ಇಂಡಿಯಾ ಕಂಪನಿಯ ದಾಖಲೆಗಳನ್ನು, ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಸಿಕ್ಕ ದಾಖಲೆಗಳನ್ನು ಆಳವಾಗಿ ಆಭ್ಯಸಿಸಿದರು. ಇದರ ಫಲವಾಗಿ ೧೯೭೧ರಲ್ಲಿ ಬಂದ ಪುಸ್ತಕವೇ:  ೧೮ನೇ ಶತಮಾನದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ. ಭಾರತೀಯ ಖಗೋಳಶಾಸ್ತ್ರ, ವೈದ್ಯಕೀಯ ವಿಜ್ಞಾನ, ಕಬ್ಬಿಣ ಮತ್ತು ಉಕ್ಕು ತಯಾರಿಕೆ, ಮಂಜುಗಡ್ಡೆ ತಯಾರಿಕೆ, ಕೃಷಿ ಸಲಕರಣೆಗಳು, – ಮುಂತಾದ ಕ್ಷೇತ್ರಗಳಲ್ಲಿ ಭಾರತೀಯರ ಸಕ್ಷಮತೆ ಇತ್ತೆಂದು ಸಾಬೀತುಪಡಿಸಿದ ಈ ಪುಸ್ತಕವು ಆಗ ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

೧೯೮೩ರಲ್ಲಿ ವರು ಬರೆದ ಗ್ರಂಥ: `ದಿ ಬ್ಯೂಟಿಫುಲ್ ಟ್ರೀ’ ಅವರ ಅತ್ಯಂತ ಆಳ ಅಧ್ಯಯನದ ಫಲ. ೪೩೬ ಪುಟಗಳ ಈ ಪುಸ್ತಕದಲ್ಲಿ ಅವರು ೧೮ನೇ ಶತಮಾನದ ಭಾರತದ ಶಿಕ್ಷಣ ವ್ಯವಸ್ಥೆ ಎಷ್ಟು ಗಟ್ಟಿಯಾಗಿತ್ತು, ಆಮೇಲೆ ಬ್ರಿಟಿಶರು ಹೇಗೆ ಅದನ್ನು ಶಿಥಿಲಗೊಳಿಸಿದರು ಎಂಬುದನ್ನು ಅಂಕಿ ಅಂಶಗಳ ಸಹಿತ ವಿವರಿಸಿದ್ದಾರೆ. ಕಾರ್ಲ್ ಮಾರ್ಕ್ಸ್‌ನಿಂದ ಹಿಡಿದು ಅಂದಿನ ಪ್ರಮುಖ ಚಿಂತಕರು ಭಾರತವನ್ನು ಪಾಶ್ಚಾತ್ಯೀಕರಣಗೊಳಿಸಲು ಹೊರಟ ಸಂಗತಿಯೇ ಹೇಗೆ ನಮ್ಮ ಪಾರಂಪರಿಕ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿತು ಎಂದು ಅವರು ವಿವರಿಸಿದ್ದಾರೆ. ಅದನ್ನೆಲ್ಲ ಅವರು ಬ್ರಿಟಿಶ್ ದಾಖಲೆಗಳನ್ನು ಬಳಸಿಯೇ ನಿರೂಪಿಸಿದ್ದಾರೆ ಎಂಬುದು ಗಮನಾರ್ಹ.

ಪ್ರತಿಯೊಂದು ಹಳ್ಳಿಯಲ್ಲೂ ಒಂದು ಶಾಲೆ ಇತ್ತು; ೧೮೩೦ರ ಹೊತ್ತಿನಲ್ಲಿ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಒಂದು ಲಕ್ಷ ಶಾಲೆಗಳಿದ್ದವು. ಮುಂಬಯಿ ಪ್ರೆಸಿಡಿನ್ಸಿಯಲ್ಲಿ ಶಾಲೆ ಇಲ್ಲದ ಒಂದು ಹಳ್ಳಿಯೂ ಇರಲಿಲ್ಲ; ಶಾಲೆಗಳಲ್ಲಿ ಬ್ರಾಹ್ಮಣೇತರರೂ ಶಿಕ್ಷಣ ಪಡೆಯುತ್ತಿದ್ದರು; ಉನ್ನತ ಶಿಕ್ಷಣದಲ್ಲಿ ಮಾತ್ರ ಬ್ರಾಹ್ಮಣರೇ ಹೆಚ್ಚಾಗಿದ್ದರು – ಇವೇ ಮುಂತಾದ ಅಂಶಗಳನ್ನು ಧರಂಪಾಲ್ ದಾಖಲಿಸಿದ್ದಾರೆ. ಇಂಥ ಸುಂದರ ವೃಕ್ಷ ಹೇಗೆ ಶಿಥಿಲವಾಯಿತು? ರಾಜಾರಾಮ್ ಮೋಹನ್‌ರಾಯ್ ಆಹ್ವಾನದ ಮೇರೆಗೆ ಬ್ರಿಟಿಶರು ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆದರು. ಇಂಥ ಶಾಲೆಗಳಿಗೆ ಸರ್ಕಾರದ ಮಾನ್ಯತೆ ನೀಡಲಾರಂಭಿಸಿದರು. ಆದ್ದರಿಂದ ದೇಶಿ ಶಿಕ್ಷಣ ವ್ಯವಸ್ಥೆಯು ಮಾನ್ಯತೆಯ ಕೊರತೆಯಿಂದ ತನ್ನಷ್ಟಕ್ಕೆ ತಾನೇ ಕುಸಿಯಿತು ಎಂಬ ವಾದವಿದೆ.

ಭಾರತೀಯ ವಿಜ್ಞಾನದ ಗರಿಮೆ

ಧರಂಪಾಲ್ ನಮಗೆ ಬಿಟ್ಟುಹೋಗಿರುವ ಇನ್ನೊಂದು ಪ್ರಮುಖ ದಾಖಲೆ ಎಂದರೆ ಭಾರತೀಯ ವಿಜ್ಞಾನ, ತಂತ್ರಜ್ಞಾನವು ಹೇಗೆ ಪಾಶ್ಚಾತ್ಯರಿಗಿಂತ ಉನ್ನತ ಮಟ್ಟದ್ದಾಗಿತ್ತು; ಅದನ್ನು ಬ್ರಿಟಿಶರು ಹೇಗೆ ದಮನಿಸಿದರು ಎಂಬ ಮಾಹಿತಿಗಳ ಪ್ರಬಂಧಗಳು. ಈ ಪ್ರಬಂಧಗಳನ್ನು ಓದುವುದೇ ಒಂದು ಥ್ರಿಲ್ಲರ್ ಓದಿದ ಅನುಭವ ಕೊಡುತ್ತದೆ.

೧೬೭೮-೯೩ರ ಅವಧಿಯಲ್ಲಿ ಯೂರೋಪಿನಲ್ಲಿ ಹಾರ್ಟಸ್ ಮಲಬಾರಿಕಸ್ ಎಂಬ ೭೫೦ ಭಾರತೀಯ ಸಸ್ಯಪ್ರಬೇಧಗಳ ೧೨ ಸಂಪುಟಗಳ ಚಿತ್ರಸಹಿತ ಗ್ರಂಥ ಪ್ರಕಟವಾಗುತ್ತದೆ. ಇದರಲ್ಲಿ ಕೇರಳ ಮತ್ತು ಕೊಂಕಣ ಪ್ರದೇಶದ ಪಂಡಿತರು ಈ ಪುಸ್ತಕವು ಸರಿಯಾಗಿದೆ ಎಂದು ಪ್ರಮಾಣಪತ್ರ ಕೊಟ್ಟಿದ್ದಾರೆ! ಭಾರತೀಯ ಕೃಷಿ ಸಲಕರಣೆಗಳು ೧೮ನೇ ಶತಮಾನದ ಬ್ರಿಟಿಶ್ ಕೃಷಿಗೆ ಭಾರೀ ಪ್ರಮಾಣದಲ್ಲಿ ನೆರವಾದವು. ಸಿಡುಬಿಗೆ ಭಾರತದಲ್ಲಿ ನೀಡುತ್ತಿದ್ದ ಲಸಿಕೆಯ ವಿಧಾನ; ಅಲಾಹಾಬಾದ್ – ವಾರಾಣಸಿಯಲ್ಲಿ ಮಂಜುಗಡ್ಡೆ ಮಾಡುತ್ತಿದ್ದ ವಿಧಾನ, ಕಟ್ಟಡ ನಿರ್ಮಾಣದ ವಿವಿಧ ಯಾಂತ್ರಿಕ ಹಾಗೂ ರಾಸಾಯನಿಕ ಮಾಹಿತಿಗಳು, ಭಾರತೀಯ ಉಕ್ಕು – ಕಬ್ಬಿಣ ತಯಾರಿಕೆ ವಿಧಾನಗಳು, ಶಸ್ತ್ರಚಿಕಿತ್ಸೆ, ಶಾಲೆಗಳಲ್ಲಿನ ಬೋಧನಾ ಕ್ರಮಗಳು – ಇವೆಲ್ಲವನ್ನೂ ಬ್ರಿಟಿಶರು ತಿಳಿದುಕೊಂಡರು. ಅದಿರಲಿ, ೧೭೯೭ರಲ್ಲೇ ಬರ್ಮಾದಲ್ಲಿ ಸುಮಾರು ೫೨೦ ಪೆಟ್ರೋಲಿಯಂ ಬಾವಿಗಳಿದ್ದವು ಎಂಬುದನ್ನೂ ಧರಂಪಾಲ್ ದಾಖಲಿಸುತ್ತಾರೆ. ಆ ಕಾಲದಲ್ಲಿ ಅವುಗಳಿಂದ ಒಂದು ಲಕ್ಷ ಟನ್ ತೈಲವನ್ನು ಎತ್ತಿ ೧೦ ಲಕ್ಷ ಭಾರತೀಯ ರೂಪಾಯಿಯ ವರಮಾನ ಪಡೆಯಲಾಗುತ್ತಿತ್ತು! (ಈ ರೂಪಾಯಿ ಈಗಿನದಲ್ಲ, ಸುಮಾರು ೨೧೦ ವರ್ಷ ಹಳೆಯದು ಎಂಬುದನ್ನು ನೆನಪಿಡಿ). ಈ ತೈಲವನ್ನು ದೀಪ ಬೆಳಗಿಸಲು, ಮರಗಳಿಗೆ ಬಳಿಯಲು, ದೋಣಿ – ಹಡಗುಗಳ ಬುಡಕ್ಕೆ ಸವರಲು, ವೈದ್ಯಕೀಯ ಅಗತ್ಯಗಳಿಗಾಗಿ ಬಳಸಲಾಗುತ್ತಿತ್ತು.

೧೮೧೬ರಲ್ಲಿ ಆಧುನಿಕ ಬ್ರಿಟಿಶ್ ಶಸ್ತ್ರಚಿಕಿತ್ಸೆಯ ಸ್ಥಾಪಕ ಎಂದೇ ಮಾನ್ಯರಾದ ಜೆ ಸಿ ಕಾರ್ಪ್  ದಾಖಲಿಸಿದ  ಭಾರತೀಯ ಪ್ಲಾಸ್ಟಿಕ್ ಸರ್ಜರಿಯ ವಿವರಗಳನ್ನು ಧರಂಪಾಲ್ ಕೊಡುತ್ತಾರೆ.

ಸರಳ ಬದುಕಿನ ಸರಳ ಸೂತ್ರಗಳು

ಸರಳ ಜೀವನವೇ ಇದಕ್ಕೆ ಪರಿಹಾರ ಎಂದು ಒಂದೇ ಮಾತಿನಲ್ಲಿ ಹೇಳಬಹುದು. ಸರಳ ಜೀವನ ಎಂದರೇನು ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟ.

ಸುಸ್ಥಿರ ಬದುಕಿಗೆ ಬೇಕಾದ ವಸ್ತುಗಳನ್ನಷ್ಟೇ ಬಳಸಿಕೊಂಡು ಬದುಕುವುದನ್ನೇ ಸರಳ ಜೀವನ ಎಂದು ಕರೆಯಬಹುದು. ಇಂಥ ಬದುಕಿನಲ್ಲೂ ವೈವಿಧ್ಯವಿದೆ. ಆಧ್ಯಾತ್ಮಿಕ ಸಂಗತಿಗಳಲ್ಲಿ ಆಸಕ್ತಿ ಇರುವವರು ಅದೇ ರಂಗದಲ್ಲಿ ಸರಳ ಜೀವನ ಸಾಗಿಸಬಹುದು. ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಬದುಕುವುದೇ ಸರಳ ಜೀವನದ ಸೂತ್ರವಾಗಲೂಬಹುದು. ಅಥವಾ ಪಾರಿಸರಿಕ ದುಷ್‌ಪ್ರಭಾವ ಬೀರದೆಯೇ ಬದುಕುವುದು, ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು, ಗ್ರಾಹಕ ಕೊಳ್ಳುಬಾಕತನದಿಂದ ದೂರ ಇರುವುದು, ಸಾಮಾಜಿಕ ನ್ಯಾಯಕ್ಕಾಗಿ ಹಂಬಲಿಸುವುದು, ಸುಸ್ಥಿರ ಅಭ್ಯುದಯಕ್ಕಾಗಿ ಹೋರಾಡುವುದು, ವೈವಿಧ್ಯಮಯ ಸಮಾಜಕ್ಕಾಗಿ ತುಡಿಯುವುದು – ಇವೆಲ್ಲವೂ ಸರಳ ಬದುಕಿನ ಭಾಗವಾಗಬಹುದು.

ಭಾರತದಲ್ಲಿ ಹುಟ್ಟಿ ಇಡೀ ಮನುಕುಲಕ್ಕೇ ಸ್ವಾತಂತ್ರ್ಯದ ಭಾಷ್ಯ ಬರೆದ ಮಹಾತ್ಮಾ ಗಾಂಧಿ, ಕನ್ನಡದಲ್ಲಿ ಅತ್ಯುತ್ತಮ ಗ್ರಂಥಗಳನ್ನು, ಕಾವ್ಯವನ್ನು ಬರೆದ ಡಿ ವಿ ಗುಂಡಪ್ಪ, ಭಗವಾನ್ ಬುದ್ಧ, ಸಂತ ಕಬೀರ, ಸಂತ ಶಿಶುನಾಳ ಶರೀಫ, ಮೀರಾಬಾಯಿ, ಪುರಂಧರದಾಸ, ಕನಕದಾಸ, – ಹೀಗೆ ಸರಳ ಬದುಕು ಮತ್ತು ಸಮಷ್ಟಿಯ ಹಿತವನ್ನು ಬಯಸಿದ ಹಲವರನ್ನು ಇಲ್ಲಿ ಉದಾಹರಿಸಬಹುದು.

ಯಂತ್ರಗಳನ್ನು ಕಳಚುವ ಬಗೆ

ಹೀಗೆ ಇಂಧನ ಆಧಾರಿತ ನಾಗರಿಕತೆಯ ಆಧುನಿಕ ಮುಖಗಳನ್ನು ಪರಿಚಯಿಸುವ ಕೃತಿಯೊಂದು ಕನ್ನಡದಲ್ಲಿ ಬಂದಿದೆ. ನಾಟಕಕಾರ ಪ್ರಸನ್ನ ಬರೆದ `ಯಂತ್ರಗಳನ್ನು ಕಳಚೋಣ ಬನ್ನಿ’ ಪುಸ್ತಕದಲ್ಲಿ ಮಾನವನ ಯಂತ್ರ ಆಧಾರಿತ ಬದುಕಿನ ಚಿತ್ರಣ ಮತ್ತು ಅದರಿಂದ ಹೊರಬರಬೇಕಾದ ಅನಿವಾರ್ಯತೆಯ ಪ್ರತಿಪಾದನೆಯಿದೆ. ಇಂದಿನ ನೂರಾರು ಉದಾಹರಣೆಗಳನ್ನು ಕೊಡುತ್ತಲೇ, ಸಮಾಜವಾದ ಮತ್ತು ಇತರೆ ಸಿದ್ಧಾಂತಗಳನ್ನು ಛೇದಿಸುತ್ತಲೇ ಪ್ರಸನ್ನರು ಯಂತ್ರಗಳ ಬಗೆಗೆ ಒಂದು ರೋಚಕ ಮಾಹಿತಿಗಳನ್ನು ನೀಡುತ್ತಾರೆ. ಯಾವುದೇ ಸಮಾಜದಲ್ಲಿ ಮನುಷ್ಯ ಮುಖ್ಯನಾಗಬೇಕೇ ಹೊರತು ಯಂತ್ರಗಳಲ್ಲ ಎಂಬ ಗಾಂಧಿಯವರ ಮಾತನ್ನು ಉದಾಹರಿಸುವ ಪ್ರಸನ್ನ ಕೈಮಗ್ಗ ಪರಂಪರೆಯಿಂದ ಹಿಡಿದು ನಮ್ಮ ನಡುವೆ ಇರುವ ಎಲ್ಲ ಬಗೆಯ ಮನುಷ್ಯಭಾಗಿತ್ವದ ಚಟುವಟಿಕೆಗಳನ್ನು ನಿರೂಪಿಸುತ್ತಾರೆ.

ಇಂದಿನ ಗ್ರಾಹಕವಾದಿ ಒತ್ತಡದಲ್ಲಿ ನಾವು ಕೊಳ್ಳುವುದನ್ನೇ ನಿಲ್ಲಿಸಬೇಕು ಎನ್ನುವ ಪ್ರಸನ್ನ ದುಡ್ಡಿನ ಮೇಲಿನ ನಮ್ಮ ಅವಲಂಬನೆಯು ಕಡಿಮೆಯಾಗಬೇಕು ಎನ್ನುತ್ತಾರೆ. ಊಟ, ಬಟ್ಟೆ, ಪುಸ್ತಕಗಳನ್ನು ಹಂಚಿಕೊಂಡು ಬಳಸಬೇಕು, ವ್ಯರ್ಥ ಓಡಾಟ ಕಡಿಮೆ ಮಾಡಬೇಕು, ಕಡಿಮೆ ಬೆಲೆಯ ಒರಟು ಧಾನ್ಯಗಳನ್ನು ಬಳಸಬೇಕು, ಸ್ಥಳೀಯವಾದ ಮತ್ತು ಆಯಾ ಋತುವಿನ ಹಣ್ಣು ತರಕಾರಿ ಬಳಸಬೇಕು, ಪರಸ್ಪರರಿಗೆ ಸಹಾಯ, ಅರ್ಥಾತ್ ಮೈಗೂಲಿ ಮಾಡಬೇಕು, ಬಡತನದಲ್ಲಿ ಸುಖ ಕಾಣಬೇಕು – ಇದು ಪ್ರಸನ್ನರ ಬದುಕಿನ ನೋಟ.

ಭಾರತವು ಹಿಂದುಳಿದ ದೇಶವಾಗಿತ್ತು, ಪಾಶ್ಚಾತ್ಯ ಚಿಂತನೆಗಳನ್ನು ಅನುಸರಿಸಿದ ಕೂಡಲೇ ಮುಂದುವರಿಯಿತೆ? ಎಂದು ವ್ಯಂಗ್ಯವಾಡುವ ಪ್ರಸನ್ನರೂ ಧರಂಪಾಲರಂತೆ ಭಾರತವು ಎಂದೋ ಸಮೃದ್ಧ ಮತ್ತು ಸಂತುಲಿತ ಸಮಾಜವಾಗಿತ್ತು ಎನ್ನುವುದನ್ನು ಒಪ್ಪಿಕೊಂಡಂತೆ ಕಾಣಿಸುತ್ತದೆ.

ಸರಳ ಜೀವನದ ಇನ್ನೊಂದು ಮುಖ್ಯ ಭೂಮಿಕೆ ಸ್ಥಳೀಯತೆಯನ್ನು ಬೆಂಬಲಿಸುವುದು. ಇದಕ್ಕೆ ಪ್ರಸನ್ನರು ಗ್ರಾಮದ ಮತ್ತು ಬೃಹತ್ ಕೈಗಾರಿಕೆಗಳನ್ನು ಹೋಲಿಸಿದ್ದಾರೆ. ಗ್ರಾಮ ಕೈಗಾರಿಕೆಯು ಚದುರಿದಂತಿರುತ್ತದೆ; ಬೃಹತ್ ಕೈಗಾರಿಕೆಯು ಕೇಂದ್ರೀಕೃತವಾಗಿರುತ್ತದೆ. ಗ್ರಾಮ ಕೈಗಾರಿಕೆಯು ಸಾಮಾಜಿಕ ಬಂಡವಾಳ ಬೇಡಿದರೆ, ಬೃಹತ್ ಕೈಗಾರಿಕೆಯು ದುಡ್ಡು ಬೇಡುತ್ತದೆ. ಗ್ರಾಮ ಕೈಗಾರಿಕೆಗೆ ನಗರಗಳೇ ಬೇಡ. ಅದು ನಿಧಾನಗತಿಯಲ್ಲಿ ಚಲಿಸುತ್ತದೆ. ಬೃಹತ್ ಕೈಗಾರಿಕೆಗೆ ವೇಗವೇ ಮೂಲಗುಣ. ಗ್ರಾಮ ಕೈಗಾರಿಕೆಯು ಮಾನವ ದುಡಿಮೆ ಅಥವಾ ಹೆಚ್ಚೆಂದರೆ ಸಾಕು ಪ್ರಾಣಿಗಳ ದುಡಿಮೆಯನ್ನು ಬಳಸುತ್ತದೆ. ಆದರೆ ಬೃಹತ್ ಕೈಗಾರಿಕೆಯು ಬೃಹತ್ ಪ್ರಮಾಣದ ವಿದ್ಯುತ್, ಖನಿಜ, ಅರಣ್ಯ, ನದಿ, ಅಣುವಿದ್ಯುತ್, ಬಂಡವಾಳ ಇತ್ಯಾದಿಗಳನ್ನು ನಿರೀಕ್ಷಿಸುತ್ತದೆ.

ಸರಳ ಬದುಕಿನ ನೀಲನಕಾಶೆಗೆ ಇಲ್ಲಿದೆ ಮುನ್ನುಡಿ

ಇಂಧನ ಆಧಾರಿತ ನಾಗರಿಕತೆಯ ಅಪಾಯಗಳು, ಭಾರತೀಯ ಬದುಕಿನ ಕೆಲವು ನೋಟಗಳನ್ನು ನೋಡಿದ ಮೇಲೆ, ಸರಳ ಮತ್ತು ಯಂತ್ರಗಳಿಂದ ಮುಕ್ತ ಬದುಕನ್ನು ಸಾಧಿಸುವುದು ಹೇಗೆ ಎಂಬುದನ್ನು ಸೂತ್ರ ರೂಪದಲ್ಲಿ ಹೀಗೆ ಹೇಳಬಹುದೇನೋ:

  • ನೀವು ಹಳ್ಳಿಯಲ್ಲಿದ್ದರೆ, ಅಭಿನಂದನೆಗಳು! ನೀವೀಗಾಗಲೇ ಸರಳ ಬದುಕಿನ ಯಾವುದೋ ಘಟ್ಟದಲ್ಲಿ ಇದ್ದೇ ಇದ್ದೀರಿ. ದಯವಿಟ್ಟು ನಗರಕ್ಕೆ ಬರುವ ಯಾವುದೇ ಯೋಚನೆಯನ್ನೂ ಮಾಡಬೇಡಿ. ಸರಳ ಬದುಕಿಗೆ ಹಳ್ಳಿಯೇ ಮೊದಲ ಘಟ್ಟ.
  • ನಿಮ್ಮ ಹಳ್ಳಿಯಲ್ಲಿ ಇರುವ ಸಣ್ಣಪುಟ್ಟ ಜಗಳಗಳನ್ನು ಪರಿಹರಿಸಿಕೊಳ್ಳಲು ಪ್ರಾಮಾಣಿಕ ಯತ್ನ ನಡೆಸಿ. ಭಾರತೀಯ ಜನಸಂಘದ ಹಿರಿಯ ನಾಯಕ, ಮುಂದೆ ಜನತಾಪಾರ್ಟಿಯ ಸ್ಥಾಪನೆಯಲ್ಲಿ ಬಹುಮುಖ್ಯ ಭೂಮಿಕೆ ವಹಿಸಿದ ನಾನಾಜಿ ದೇಶಮುಖರು ತಮ್ಮ ಸಾಮಾಜಿಕ ಸೇವಾಕ್ಷೇತ್ರದಲ್ಲಿ ಇಂಥ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ.  ಎಲ್ಲ ರಾಜಕಾರಣಿಗಳೂ ೬೦ ವರ್ಷ ವಯಸ್ಸಾದ ತಕ್ಷಣ ರಾಜಕೀಯ ಬಿಟ್ಟು ಸಮಾಜಸೇವೆ ಮಾಡಬೇಕು ಎಂಬುದು ಅವರ ನೀತಿಯಾಗಿತ್ತು; ದೃಢನಂಬುಗೆಯಾಗಿತ್ತು. ಅದರಂತೆ ದಿಲ್ಲಿಯಲ್ಲೂ ಇರದೆ, ಮಧ್ಯಪ್ರದೇಶ – ಉತ್ತರಪ್ರದೇಶ ಗಡಿಭಾಗದ ಚಿತ್ರಕೂಟ – ಗೊಂಡಾ ಪ್ರದೇಶಕ್ಕೆ ಹೋಗಿ ನೆಲೆಸಿದರು. ಅಲ್ಲಿ ಐನೂರು ಹಳ್ಳಿಗಳಲ್ಲಿ ಸಾಮಾಜಿಕ ಕಾರ್ಯ ಮಾಡುವುದಕ್ಕೆ ಆರಂಭಿಸಿದರು. ಜನಸಂಘದ ನೇತಾರ ಪಂಡಿತ ದೀನದಯಾಳರ ಹೆಸರಿನ ಪ್ರತಿಷ್ಠಾನದಲ್ಲಿ ಅಲ್ಲಿ ಕೆಲಸ ಆರಂಭವಾಯಿತು. ಈಗ ಅಲ್ಲಿ ಏನೇನು ಪ್ರಗತಿಯಾಗಿದೆ ಎಂದು ನೀವು ನೋಡಬೇಕೆಂದರೆ ಅಲ್ಲಿಗೇ ಹೋಗಬಹುದು. ಒಂದೇ ಚಿಕ್ಕ ಉದಾಹರಣೆ ಕೊಡಬೇಕೆಂದರೆ, ಆ ಪ್ರದೇಶದ ೮೦ ಹಳ್ಳಿಗಳ ಜನ ಈಗ ಕೋರ್ಟು ಕಚೇರಿ ಎಂದು ಅಲೆಯುವುದೇ ಇಲ್ಲ. ಎಲ್ಲರೂ ಒಟ್ಟಾಗಿ ಕುಳಿತು ಪರಿಹಾರ ಕಂಡುಕೊಳ್ಳುತ್ತಾರಂತೆ. ದೇಶದ ಪ್ರಪ್ರಥಮ ಗ್ರಾಮೀಣ ವಿಶ್ವವಿದ್ಯಾಲಯ ಇರುವುದೂ ಇಲ್ಲಿಯೇ!
  • ನಿಮ್ಮ ಹಳ್ಳಿಯ ಇಂಧನದ ಬೇಡಿಕೆಯನ್ನು ಸಾಮೂಹಿಕವಾಗಿ ಪರಿಹರಿಸಲು ಯತ್ನಿಸಿ. ಇದಕ್ಕಾಗಿ ತಜ್ಞರ ನೆರವು ಪಡೆಯಿರಿ. ಸೌರವಿದ್ಯುತ್ ಫಲಕಗಳಿಂದ ಹಿಡಿದು ಛಾವಣಿ ಮಳೆ ನೀರು ಸಂಗ್ರಹದವರೆಗೆ, ಅಂಗಳದಲ್ಲೇ ತರಕಾರಿ ಬೆಳೆಯುವುದರಿಂದ ಹಿಡಿದು, ಸಾವಯವ ಆಹಾರ ಪದ್ಧತಿಯನ್ನು ಅನುಸರಿಸುವವರೆಗೆ ಹಲವು ಪ್ರಯೋಗಗಳನ್ನು ನೀವು ಹೆಚ್ಚಿನ ಹಣ ಖರ್ಚು ಮಾಡದೇ (ಸೌರ ವಿದ್ಯುತ್ ಸಾಧನಗಳಿಗೆ ಇರುವ ಸರ್ಕಾರಿ ಸಬ್ಸಿಡಿಯನ್ನು ಬಳಸುವುದರಲ್ಲಿ ತಪ್ಪಿಲ್ಲ) ಮಾಡಬಹುದು.
  • ಸಾವಯವ ಮತ್ತು ನಿಸರ್ಗ ಕೃಷಿಯ  ಉತ್ಪನ್ನಗಳು ಈಗ ದೊಡ್ಡ ಮಾರುಕಟ್ಟೆಯಾಗಿ ಬೆಳೆದಿವೆ. ಅವನ್ನು ನೀವು ಸ್ಥಳೀಯವಾಗೇ ಖರೀದಿಸಿದರೆ ಬೆಲೆಯೂ ಕಡಿಮೆ; ಸ್ವಾವಲಂಬನೆಯೂ ಹೆಚ್ಚು; ಆರೋಗ್ಯವೂ ಸುಧಾರಿಸುತ್ತದೆ. ಹೊಳಪಿಲ್ಲದ, ಸೊಟ್ಟಂಬಟ್ಟ ತರಕಾರಿಗಳೇ ಹೆಚ್ಚು ಶಕ್ತಿಯುತ ಎಂದು ನಿಸರ್ಗಕೃಷಿಯ ಹರಿಕಾರ ಮಸನೋಬು ಫುಕುವೋಕಾ ಹೇಳಿದ್ದನ್ನು ನೆನಪಿಡಿ. ಹಾಗೆಯೇ ಆಹಾರ ಬಿಳಿಯಾದಷ್ಟೂ ಪೌಷ್ಟಿಕತೆ ಕಡಿಮೆ. ಆದ್ದರಿಂದ ಬಿಳಿ ಅಕ್ಕಿಯ ನಿರಂತರ ಬಳಕೆ ಬೇಡ. ನಿಮ್ಮಲ್ಲೇ ಸಿಗುವ ಎಲ್ಲ ಧಾನ್ಯಗಳನ್ನು ಸರಣಿಯಂತೆ ಬಳಸಿ. ಅಕ್ಕಿಗಿಂತ ನವಣೆಯು ಮೂರು ಪಟ್ಟು ಪೌಷ್ಟಿಕ ಎಂಬುದು ಇಲ್ಲಿ ಕೊಡಬಹುದಾದ ಒಂದೇ ಒಂದು ಉದಾಹರಣೆ.
  • ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕೆಂದು ನಗರಗಳಿಗೆ ಕಳಿಸುವ ಒತ್ತಡಕ್ಕೆ ಬೀಳಬೇಡಿ. ಹತ್ತಿರದ ಊರಿನಲ್ಲೂ ಒಳ್ಳೆಯ ಶಿಕ್ಷಕರು, ಒಳ್ಳೆಯ ಕಾಲೇಜು ಇದ್ದೇ ಇರುತ್ತದೆ. ಹೆಚ್ಚು ಮಕ್ಕಳಿರುವ ಶಾಲೆಗಿಂತ ಕಡಿಮೆ ಮಕ್ಕಳಿರುವ ಶಾಲೆಯಲ್ಲಿ ನಿಮ್ಮ ಮಕ್ಕಳನ್ನು ಶಿಕ್ಷಕರು ಹೆಚ್ಚು ಮಉತುವರ್ಜಿಯಿಂದ ನೋಡಿಕೊಳ್ಳುವ ಸಂದರ್ಭ ಹೆಚ್ಚು.
  • ನಿಮ್ಮ ಮನೆಯನ್ನು ವಾಸ್ತುವಿಗೆ ತಕ್ಕಂತೆ ರೂಪಿಸುವಾಗ ಗಾಳಿ, ಬೆಳಕು ಹರಿಯುವಂತೆಯೂ ನೋಡಿಕೊಳ್ಳಿ. ನಿಸರ್ಗದ ಕೊಡುಗೆಯಾದ ಗಾಳಿ ಮತ್ತು ಬೆಳಕಿನಿಂದ ನಿಮ್ಮ ಸರಳ ಬದುಕಿನ ಬೆಲೆ ಹೆಚ್ಚುತ್ತದೆ.
  • ರಾಸಾಯನಿಕ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಿ. ಸಸ್ಯಜನ್ಯ (ಆಯುರ್ವೇದಿಕ್) ಔಷಧಗಳನ್ನು ಬಳಸಿ. ಇಂದು ಎಲ್ಲ ಫಾರ್ಮಾಸೂಟಿಕಲ್ ಸಂಸ್ಥೆಗಳು, ಸೌಂದರ್ಯವರ್ಧಕ ಕಂಪೆನಿಗಳು ಮಾಡುತ್ತಿರುವುದೂ ಆಯುರ್ವೇದದ ಸರಕೀಕರಣವೇ. ಅತಿ ರಾಸಾಯನಿಕ ತುಂಬಿದ ಸರಕುಗಳು ಭಾರತದಲ್ಲಿ ಬಿಕರಿಯಾಗುವುದಿಲ್ಲ ಎಂದು ಅವು ಅರಿತುಕೊಂಡಿವೆ. ನೇರವಾಗಿ ಬಳಸಬಹುದಾದ ಆಲೋವೇರಾ ನಿಮ್ಮ ಮನೆಯಲ್ಲೇ ಬೆಳೆಯುವುದಾದರೆ, ಅದಕ್ಕೆ ಯಾಕೆ ಸುಮ್ಮನೇ ಹೆಚ್ಚು ಹಣ ಕೊಡಬೇಕು?
  • ಹಳ್ಳಿಗಳಲ್ಲಿ ಇರುವ ಪರಂಪರೆ, ಸಂಸ್ಕೃತಿ, ಜಾನಪದ, – ಎಲ್ಲದರಲ್ಲೂ ಆಸಕ್ತಿ ತೋರಿಸಿ.
  • ಯಾವುದೇ ವಸ್ತುವು ಕೊಂಚ ಹಾಳಾದರೂ ಪೂರ್ತಿ ಎಸೆಯಬೇಕಾಗಿಲ್ಲ. ಹಾಗೆ `ಯೂಸ್ ಎಂಡ್ ಥ್ರೋ’ ಮಾಡುವುದು ಅಪ್ಪಟ ಕೊಳ್ಳುಬಾಕತನದ ವಿಚಾರ. ಅದನ್ನು ತಿರಸ್ಕರಿಸಿ. ಸಾಕಷ್ಟು ವಸ್ತುಗಳನ್ನು ರಿಪೇರಿ ಮಾಡಿ ಬಳಸುವುದರಿಂದ ಸಂಪನ್ಮೂಲಗಳ ಸದ್ಬಳಕೆ ಆದಂತೆಯೇ. `ಬಳಸಿರಿ, ಎಸೆಯಿರಿ, ಬದಲಿಸಿರಿ, ಬಳಸಿರಿ, ಎಸೆಯಿರಿ’ ಎಂಬ ಚಿಂತನೆಗಿಂತ `ಬಳಕೆಯನ್ನು ಕಡಿಮೆ ಮಾಡಿರಿ, ಮರುಬಳಕೆ ಮಾಡಿರಿ, ದುರಸ್ತಿ ಮಾಡಿ ಬಳಸಿರಿ, ಪರ್ಯಾಯ ಬಳಕೆಯ ಬಗ್ಗೆ ಯೋಚಿಸಿ’ ಎಂಬ ಚಿಂತನೆಯನ್ನು ರೂಪಿಸಿಕೊಳ್ಳಿ.
  • ನಗರವನ್ನು ಬೃಹದಾಕಾರವಾಗಿ ಬೆಳೆಸುವುದರಲ್ಲಿ ನಿಮ್ಮ ಪಾತ್ರ ಇರದಂತೆ ನೋಡಿಕೊಳ್ಳಿ.
  • ನಗರಗಳಿಂದ ಹಳ್ಳಿಗಳಿಗೆ ವಲಸೆ ಹೋಗುವುದು ಹೇಗೆ ಎಂದು ಪ್ರತಿದಿನವೂ ಚಿಂತಿಸಿ. ಬೆಂಗಳೂರಿನಿಂದ ತುಸು ದೂರದಲ್ಲಿ ಮನೆ ಮಾಡಿ ಸರಳ ಬದುಕಿಗೆ ಹೊಂದಿಕೊಂಡಿರುವ ಪತ್ರಕರ್ತ, ವಿಶ್ವ ಚಿಂತಕ ನಾಗೇಶ ಹೆಗಡೆಯವರು, ತೀರ್ಥಹಳ್ಳಿಯಾಚೆ ತಮ್ಮದೇ ಬದುಕಿನಲ್ಲಿ ಸಂತೃಪ್ತಿ ಕಂಡಿರುವ ನಾಗರಾಜರಾಯರು, ದೇಶದ ಇಂಧನ ನೀತಿಯು ಸುಸ್ಥಿರ ಚಿಂತನೆಯನ್ನು ರೂಢಿಸಿಕೊಳ್ಳಬೇಕು ಎಂದು ಶ್ರಮಿಸುತ್ತಿರುವ ಶಂಕರ ಶರ್ಮರು, ನಿಸರ್ಗ ಕೃಷಿಯ ಬಿಡುವಿನ ಸಮಯದಲ್ಲಿ ಏಕತಾರಿ ಹಿಡಿದು ತಾನೇ ಬರೆದ ತತ್ವಪದಗಳನ್ನು ಹಾಡುತ್ತ ಬೆಂಗಳೂರಿಗೂ ಬರುವ, ಬಸ್ಸುಗಳಲ್ಲಿ ಪುಸ್ತಕ ಮಾರುವ ಕೃಷ್ಣಮೂರ್ತಿ ಬಿಳಿಗೆರೆ  – ಇವರೆಲ್ಲ ಇಲ್ಲಿ ಉದಾಹರಿಸಬಹುದಾದ ಕೆಲವೇ ವ್ಯಕ್ತಿತ್ವಗಳು.
  • ನೀವು ಬಾಡಿಗೆ ಮನೆಯಲ್ಲಿದ್ದರೆ ತಾರಸಿಯನ್ನು ಸದ್ಬಳಕೆ ಮಾಡಿಕೊಳ್ಳಿ. ತಾರಸಿಯ ಆವರಣದಲ್ಲೇ ತೋಟಗಾರಿಕೆಯನ್ನೋ, ಜೇನುಕೃಷಿಯನ್ನೋ ಮಾಡಬಹುದು. ಅಷ್ಟರಮಟ್ಟಿಗೆ ಹಳ್ಳಿಯ ಅವಲಂಬನೆಯನ್ನು ತಪ್ಪಿಸಬಹುದು. ಸ್ವಂತ ಮನೆ ಇದ್ದವರಂತೂ ಸುತ್ತಮುತ್ತಲಿನ ಜಾಗದಲ್ಲಿ ಕೈತೋಟ ಮಾಡಿಕೊಳ್ಳಬಹುದು.
  • ಪದೇ ಪದೇ ಮಾಲ್‌ಗಳಿಗೆ ಹೋಗಬೇಡಿ. ಮಾಲ್‌ಗಳಲ್ಲಿ ಖರೀದಿ ಮಾಡುವುದಕ್ಕಿಂತ ಹತ್ತಿರದ ಅಂಗಡಿಯೇ ಲೇಸು. ಖರೀದಿಗೆ ಮುನ್ನ ಖರೀದಿಸಬೇಕಾದ ವಸ್ತುಗಳ ಪಟ್ಟಿ ಮಾಡಿಕೊಂಡು, ಅವುಗಳನ್ನು ಮಾತ್ರವೇ ಖರೀದಿಸಿ. ಇದು ತುಂಬಾ ಮುಖ್ಯ.
  • ನಿಮ್ಮ ಮಕ್ಕಳಿಗೆ ಕನಿಷ್ಟ ಪ್ರಮಾಣದ ಕನ್ನಡ / ನಿಮ್ಮ ಮಾತೃಭಾಷೆ ಕಲಿಸಿ. ಭಾಷೆ ಉಳಿದರೇ ನಮ್ಮ ಪರಂಪರೆ ಉಳಿಯುತ್ತದೆ.

 ಸರಳ ಬದುಕಿನ ಉಳಿದೆಲ್ಲ ಸೂತ್ರಗಳನ್ನು ತಾವೇ ಬೇಕಾದಂತೆ ರೂಪಿಸಿ ಅಳವಡಿಸಿಕೊಳ್ಳಲು ಎಲ್ಲರೂ ಸ್ವತಂತ್ರರು. ಬದುಕನ್ನು ಸ್ವತಂತ್ರವಾಗಿಯೂ, ಸುಖಮಯವಾಗಿಯೂ ಸಾಗಿಸುವ ಹಕ್ಕು ಎಲ್ಲರಿಗೂ ಇದೆ. ಸರ್ಕಾರ ಯಾವುದೇ ಇರಲಿ, ಅದು ನಮ್ಮ ಮೇಲೆ ಯಾವುದೇಪರಿಣಾಮ ಬೀರದಂತೆ ನೋಡಿಕೊಳ್ಳುವುದು ಮುಖ್ಯ.

ಇಂಧನದ ಬಳಕೆ ಪ್ರಮಾಣವನ್ನು ತಗ್ಗಿಸುವುದು ಸರಳ ಬದುಕಿನ ಅತಿ ಮುಖ್ಯ ಸೂತ್ರ. ನಾಗರಿಕತೆಯ ಸೂಚ್ಯಂಕಗಳು ಬದಲಾಗುವುದೇ ಇಂಧನಗಳ ಅತಿ ಬಳಕೆಯಿಂದ. ಇದನ್ನು ನಾವೆಲ್ಲ ವೈಯಕ್ತಿಕವಾಗಿಯೂ, ಸಾಮುದಾಯಿಕವಾಗಿಯೂ, ಒಂದು ದೇಶವಾಗಿಯೂ, ಕೊನೆಗೆ ಒಂದು ವಿಶ್ವ ಸಮುದಾಯವಾಗಿಯೂ ಸಾಧಿಸಬಹುದು. ಅದಕ್ಕೆ ಬೇಕಾದ ರಾಜಕೀಯ ದೃಢತೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಷ್ಟೆ.

ಇತ್ತೀಚೆಗೆ ಒರಿಸ್ಸಾದ ನಿಯಮಗಿರಿಯಲ್ಲಿ ಸ್ಥಾಪನೆಯಾಗಬೇಕಾಗಿದ್ದ ಒಂದು ಖನಿಜಗಣಿಯನ್ನು ಕೇಂದ್ರ ಸರ್ಕಾರವು ರದ್ದು ಮಾಡಿತು. ಆ ಪ್ರದೇಶದಲ್ಲಿ ಸಾವಿರಾರು ಜನ ಕಾಡನ್ನೇ ಆಧರಿಸಿ ಬದುಕುತ್ತಿದ್ದಾರೆ, ಅವರ ಜೀವನವನ್ನು ಅಸ್ತವ್ಯಸ್ತಗೊಳಿಸುವುದು ಬೇಡ ಎಂಬ ತಜ್ಞರ ವರದಿಯನ್ನು ಸರ್ಕಾರ ಗೌರವಿಸಿತು. ಇಂಥ ಉದಾಹರಣೆಗಳು ಅಪರೂಪದ್ದೇ ಆದರೂ ಸ್ವಾಗತಾರ್ಹ ಅಲ್ಲವೆ?

`ಡ್ರೀಮ್ಸ್’ : ಅಜ್ಜನ ಮಾತುಗಳನ್ನು ಕೇಳೋಣ

ಮನುಕುಲ ಕಂಡ ಅತ್ಯುತ್ತಮ ಸಿನೆಮಾ ನಿರ್ದೇಶಕ ಜಪಾನಿನ ಅಕಿರಾ ಕುರೋಸಾವಾನ ಬಹುಚರ್ಚಿತ ಚಲನಚಿತ್ರ `ಡ್ರೀಮ್ಸ್’ನ ಕೊನೆಯ ಭಾಗದಲ್ಲಿ ಹಳ್ಳಿಯ ಚಿತ್ರಣವೊಂದಿದೆ. ಅಲ್ಲಿ ಹೊಳೆಯ ಬದಿಯಲ್ಲಿ ಗಾಳಿ ಗಿರಣಿಯನ್ನು ದುರಸ್ತಿ ಮಾಡುತ್ತಿರುವ ಮಾಡುತ್ತಿರುವ ಅಜ್ಜನ ಜೊತೆ ಅಲ್ಲಿಗೆ ಬಂದ ಯುವಕನೊಬ್ಬ ನಡೆಸುವ ಸಂಭಾಷಣೆ ಹೀಗಿದೆ:

ಯುವಕ: `ಈ ಹಳ್ಳಿಯ ಹೆಸರೇನು?’

ಅಜ್ಜ: `ಹಳ್ಳಿಗೆ ಹೆಸರೇ ಇಲ್ಲ. ಇದನ್ನು ಬರೀ ಹಳ್ಳಿ ಅಂತ ಕರೀತೇವೆ.’ ಕೆಲವರು ಇದನ್ನು ನೀರಿನ ಗಿರಣಿ ಹಳ್ಳಿ ಅಂತ ಕರೀತಾರೆ.

ಯುವಕ: `ಎಲ್ಲರೂ ಇಲ್ಲೇ ವಾಸ ಮಾಡಿದೀರ?’

ಅಜ್ಜ: `ಇಲ್ಲ. ಎಲ್ಲರೂ ಅವರವರ ಜಾಗದಲ್ಲೇ ಇದ್ದಾರೆ.’

ಯುವಕ: `ಇಲ್ಲಿ ವಿದ್ಯುಚ್ಛಕ್ತಿ ಇಲ್ಲವೆ?’

ಅಜ್ಜ: `ಅದರ ಅಗತ್ಯವೇ ಇಲ್ಲ. ಜನರಿಗೆ ಅನುಕೂಲವೇ ಮುಖ್ಯ.’

ಯುವಕ: `ಮತ್ತೆ? ಬೆಳಕಿಗೆ ಏನು ಮಾಡ್ತೀರ?’

ಅಜ್ಜ: `ನಮ್ಮ ಹತ್ರ ಬೀಜದ ಎಣ್ಣೆ ದೀಪಗಳಿವೆ. ಮೋಂಬತ್ತಿಗಳಿವೆ.’

ಯುವಕ: `ಆದ್ರೆ ರಾತ್ರಿ ತುಂಬಾ ಕತ್ತಲು ಇರುತ್ತಲ್ಲ?’

ಅಜ್ಜ: `ಹೌದು. ರಾತ್ರಿ ಅಂದ್ರೆ  ರಾತ್ರಿ ಥರಾನೇ ಇರಬೇಕಲ್ಲ?’ ರಾತ್ರಿಯೂ ಯಾಕೆ ಹಗಲಿನ ಥರ ಪ್ರಖರವಾಗಿರ್‍ಬೇಕು? ಹಾಗೆ ರಾತ್ರಿಯೂ ಬೆಳಕಿನಿಂದ ಕೂಡಿದ್ರೆ ನಿನಗೆ ನಕ್ಷತ್ರಗಳನ್ನು ನೋಡೋದಕ್ಕೇ ಆಗಲ್ಲ.’

ಯುವಕ: `ನಿಮ್ಮಲ್ಲಿ ಭತ್ತೆ ಬೆಳಿತೀರಿ. ಅದರ ಉಳುಮೆಗೆ ಟ್ರಾಕ್ಟರ್ ಇಲ್ಲವಲ್ಲ?’

ಅಜ್ಜ: `ನಮಗೆ ಟ್ರಾಕ್ಟರ್ ಬೇಡವೇ ಬೇಡ. ನಮ್ಮ ಬಳಿ ದನಗಳಿವೆ, ಕುದುರೆಗಳಿವೆ’

ಯುವಕ: `ನೀವು ಇಂಧನಕ್ಕಾಗಿ ಏನು ಮಾಡ್ತೀರಿ ಮತ್ತೆ?’

ಅಜ್ಜ: `ಸಾಮಾನ್ಯವಾಗಿ ಉರುವಲು ಸುಡ್ತೀವಿ. ಮರ ಕಡಿಯಬೇಕು ಅಂತ ನಮಗೆ ಅನ್ನಿಸಿಲ್ಲ. ಆದರೆ ತಾನಾಗೇ ಬಿದ್ದ ಮರಗಳು ನಮಗೆ ಸಾಕು. ನಾವು ಅದನ್ನೇ ಕತ್ತರಿಸಿ ಉರುವಲಾಗಿ ಬಳಸ್ತೇವೆ. ನೀನು ಸೌದೆಯನ್ನು ಇದ್ದಿಲಾಗಿ ಮಾಡಿದರೆ ಇಡೀ ಕಾಡು ಕೊಡೋ ಶಕ್ತಿಯನ್ನು ಒಂದೇ ಮರದಿಂದ ಪಡೆಯಬಹುದು. ಹೌದು, ಸೆಗಣಿಯೂ ಒಳ್ಳೇ ಇಂಧನವೇ. ನಾವು ಮನುಷ್ಯನ ಹಾಗೆ ಬದುಕೋದಕ್ಕೆ ಪ್ರಯತ್ನಿಸ್ತೇವೆ.

`ನಾವು ಪ್ರಕೃತಿಯ ಭಾಗ ಅನ್ನೋದನ್ನ ಜನ ಮರೆತಿದಾರೆ. ಪ್ರಕೃತೀನ ನಾಶ ಮಾಡ್ತಾ ಇದಾರೆ. ಈ ಪ್ರಕೃತಿ ಮೇಲೇ ಅವರ ಬದುಕು ನಿಂತಿದೆ. ಅದರಲ್ಲೂ ವಿಜ್ಞಾನಿಗಳು ತಾವೇನೋ ವಿಶೇಷವಾದದ್ದನ್ನೇ ಮಾಡ್ತಿದೀವಿ ಅಂತ ಹೇಳ್ತಾರೆ. ಅವರೇನೋ ಜಾಣರಿರಬಹುದು. ಆದರೆ ಅವರಲ್ಲಿ ಬಹಳಷ್ಟು ಜನರಿಗೆ ಪ್ರಕೃತಿಯ ಹೃದಯವೇ ಅರ್ಥ ಆಗೋದಿಲ್ಲ. ಜನರಿಗೆ ಅಸಂತೋಷ ಆಗೋ ವಸ್ತುಗಳನ್ನೇ ಯಾವಾಗ್ಲೂ ಸಂಶೋಧಿಸ್ತಾರೆ. ಅಂಥವರನ್ನು ಕೆಲವರು ಆರಾಧಿಸ್ತಾರೆ. ಆದ್ರೆ ಅದರಿಂದ ಪರಿಸರ ನಾಶವಾಗ್ತಿದೆ. ಶುದ್ಧ ಗಾಳಿ ಮತ್ತು ಶುದ್ಧ ನೀರನ್ನು ಕೊಡೋದು ಈ ಮರಗಳು, ಈ ಹುಲ್ಲುಗಳು…. ಆದರೆ ಈಗ ಎಲ್ಲವೂ ಕಲುಷಿತವಾಗಿ ಮನುಷ್ಯರ ಹೃದಯಗಳೂ ಕಲುಷಿತವಾಗಿವೆ.

ಯುವಕ: `ಮಕ್ಕಳು ಹೊಳೆಗೆ ಹೂವು ಹಾಕ್ತಾ ಇದಾರಲ್ಲ….. ಇವತ್ತೇನು ಏನೋ ಸಂಭ್ರಮಾಚರಣೆ ಇದ್ದಂತಿದೆ?’

ಅಜ್ಜ: `ಇಲ್ಲ, ಇವತ್ತು ಶವಸಂಸ್ಕಾರ ನಡೀತಿದೆ. ಖುಷಿಯಿಂದ ನಡೀತಿರೋ ಕಾಯ್ರಕ್ರಮ. ಚೆನ್ನಾಗಿ ಕೆಲಸ ಮಾಡಿ, ದೀರ್ಘಕಾಲ ಬದುಕಿ ಆಮೇಲೆ ವಂದನೆ ಸ್ವೀಕರಿಸೋದು ಒಳ್ಳೇದೇ. ಇಲ್ಲಿ ದೇಗುಲವೂ ಇಲ್ಲ, ಅರ್ಚಕರೂ `ಇಲ್ಲ. ನಾವೆಲ್ಲಾ ಸೇರಿ ಮೃತ ಹಿರಿಯರನ್ನು ಗುಡ್ಡದ ಮೇಲೆ ಒಯ್ಯುತ್ತೇವೆ. ಇವತ್ತು ಒಬ್ಬ ಮಹಿಳೆಯ ಅಂತ್ಯಸಂಸ್ಕಾರ ನಡೀತಿದೆ.

`ನೀನು ನನ್ನ ಕ್ಷಮಿಸಬೇಕು. ನಾನೂ ಆ ಮೆರವಣಿಗೆಯಲ್ಲಿ ಸೇರ್‍ಕೋಬೇಕು. ನಿಜ ಹೇಳ್ಬೇಕಂದ್ರೆ…. ಅವಳು ನನ್ನ ಮೊದಲ ಪ್ರೇಯಸಿ. ನನ್ನ ಹೃದಯವನ್ನು ಚೂರು ಮಾಡಿ ಬೇರೊಬ್ಬನನ್ನು ಮದುವೆಯಾದಳು.’

ಯುವಕ: `ಅಂದಹಾಗೆ, ನಿನ್ನ ವಯಸ್ಸೆಷ್ಟು?’

ಅಜ್ಜ: `ನೂರಕ್ಕೆ ಮೂರು ಸೇರಿಸು. ಬದುಕಿಗೆ ಪೂರ್ಣವಿರಾಮ ಕೊಡೋ ಹೊತ್ತು. ಜೀವನ ಕಷ್ಟ ಅಂತ ಕೆಲವರು ಹೇಳ್ತಾರೆ. ಅದೆಲ್ಲ ಬರೀ ಮಾತು. ಸಜೀವವಾಗಿರೋದು ನಿಜಕ್ಕೂ ಒಳ್ಳೇದು. ಹಾಗಿರೋದೇ ಅತ್ಯಂತ ಕುತೂಹಲಕರ.’

ಅಜ್ಜನ ಉತ್ತರಗಳಲ್ಲಿ ನಮ್ಮ ಬದುಕಿನ ಅರ್ಥ ಅಡಗಿದೆಯಲ್ಲವೆ?

—————————————————————–

ಜೆರೋನ್ ಲೇನಿಯೆರ್ : ಎಲೆ ಮಾನವಾ, ನೀನೊಂದು ಯಂತ್ರಸಾಧನವಲ್ಲ!

ಸಮಕಾಲೀನ ಸಾಮಾಜಿಕ ಚಿಂತಕರಲ್ಲಿ ಜೆರೋನ್ ಲೇನಿಯೆರ್ ಒಬ್ಬ ಯುವಕನೇ. ಇನ್ನೂ ಐವತ್ತರ ಹರೆಯದಲ್ಲಿರುವ ಜೆರೋಮ್ ಮಾಹಿತಿ ತಂತ್ರಜ್ಞಾನದಲ್ಲಿ ಬಳಸುವ `ವಚಯಲ್ ರಿಯಾಲಿಟಿ’ (ಭ್ರಮಾ ವಾಸ್ತವ) ಪರಿಕಲ್ಪನೆಯ ರೂವಾರಿ. ಯಾವ ಔಪಚಾರಿಕ ಶಿಕ್ಷಣವೂ ಇಲ್ಲದೆ ಕಂಪ್ಯೂಟರ್ ತಜ್ಞನಾದ ಲೇನಿಯೆರ್ ಮುಂದೆ ಒಬ್ಬ ಸಂಗೀತಕಾರನಾಗಿಯೂ ಪ್ರಸಿದ್ಧರಾದವರು. ಅವರ ಬಳಿ ನೂರಾರು ಸಂಗೀತ ಪರಿಕರಗಳಿವೆ; ಅವೆಲ್ಲವನ್ನೂ ಅವರು ಕಲಿತಿದ್ದಾರೆ, ಸುಶ್ರಾವ್ಯವಾಗಿ ನುಡಿಸುತ್ತಾರೆ.

೨೦೧೦ರಲ್ಲಿ ಅವರು `ಯೂ ಆರ್ ನಾಟ್ ಎ ಗ್ಯಾಜೆಟ್’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಹಲವು ವರ್ಷಗಳಿಂದ ಅವರು ಗಂಟು ಜಡೆ ಬಿಟ್ಟುಕೊಂಡು ಹೇಳುತ್ತಿದ್ದ ಪ್ರತಿಪಾದನೆಗಳೇ ಈ ಪುಸ್ತಕದಲ್ಲಿ ಅಚ್ಚುಕಟ್ಟಾಗಿ ಮೂಡಿವೆ. ಮಾಹಿತಿ ತಂತ್ರಜ್ಞಾನದ ಯುಗದಲ್ಲಿರುವ ಯುವ ಪೀಳಿಗೆಗೆ ಅವರು ನೀಡುವ ಸರಳ ಬದುಕಿನ ಸಲಹೆಗಳಿವು:

  • ನೀವು ನಿಜಕ್ಕೂ ಅಪಾಯದಲ್ಲಿ ಸಿಕ್ಕಿಕೊಂಡಿಲ್ಲ ಎನ್ನುವ ಸನ್ನಿವೇಶ ಇರುವವರೆಗೆ ಎಂದೂ ಅನಾಮಿಕವಾಗಿ ಇಂಟರ್‌ನೆಟ್‌ನಲ್ಲಿ ಬರೆಯಬೇಡಿ.
  • ನೀವು ಆನ್‌ಲೈನ್ ವಿಶ್ವಕೋಶವಾದ `ವಿಕಿಪೀಡಿಯಾ’ ಗೆ ಲೇಖನಗಳನ್ನು ಬರೆದರೂ, ಅದರಿಂದ ಹೊರಗೆ, ನಿಮ್ಮದೇ ಧ್ವನಿ ಮತ್ತು ಅಭಿವ್ಯಕ್ತಿಯ ಮೂಲಕ ಜನರನ್ನು ತಲುಪಿ.
  • ನೀವು ಯಾರು ಎಂಬುದನ್ನು ಬಿಂಬಿಸುವ ಮತ್ತು ಸೋಶಿಯಲ್ ನೆಟ್‌ವರ್ಕಿಂಗ್ ಜಾಲತಾಣಗಳಲ್ಲಿ ದಾಖಲಿಸಲಾಗದ ಸಂಗತಿಗಳನ್ನು ತಿಳಿಸಲು ಒಂದು ಸ್ವಂತ ಜಾಲತಾಣವನ್ನು ಹೊಂದಿ.
  • ಒಂದು ವಿಡಿಯೋವನ್ನು ನೀವು ನೋಡುವ ಸಮಯಕ್ಕಿಂತ ನೂರುಪಟ್ಟು ಹೆಚ್ಚು ಕಾಲಾವಧಿಯಲ್ಲಿ ನಿರ್ಮಿಸಿದ್ದರೆ, ಅಂಥ ವಿಡಿಯೋಗಳನ್ನು ಮಾತ್ರ ಪ್ರಕಟಿಸಿ.
  • ನಿಮ್ಮ ಅಂತರಾಳವು ಸೂಚಿಸಿದ ಕ್ಷಣಗಳಲ್ಲಿ ಮಾತ್ರವೇ ಬ್ಲಾಗಿಂಗ್ ಮಾಡಿರಿ.

—————————————————————–

Share.
Leave A Reply Cancel Reply
Exit mobile version