ನಗರಗಳ ಪ್ರಖರ ಬೆಳಕಿನಲ್ಲಿ ಕಾಣಿಸದ ಆಗಸವನ್ನು ಹಳ್ಳಿಮೂಲೆಯ ಬಯಲಿನಲ್ಲಿ ಕೂತು ನೋಡಿದರೆ ಯಾರಿಗಾದರೂ ಪ್ರಶ್ನೆ ಹುಟ್ಟಲೇಬೇಕು: ನಾನು ಯಾರು? ಈ ನಕ್ಷತ್ರಗಳು ಏಕಿವೆ? ಅವು ಹುಟ್ಟಿದ್ದೆಲ್ಲಿ? ಈ ಬ್ರಹ್ಮಾಂಡದ ಅಸ್ತಿತ್ವದ ಮೂಲವೇನು? ಇದು ಹೀಗೆ ಅನಂತದಂತೆ ಆವರಿಸಿಕೊಂಡಿದ್ದಾದರೂ ಯಾವಾಗ? ಕವಿಯಿಂದ ಹಿಡಿದು ಇತಿಹಾಸಕಾರನವರೆಗೆ ಈ ಪ್ರಶ್ನೆಗಳು ಕಾಡುತ್ತವೆ; ಮತ್ತೆ ದಿನನಿತ್ಯದ ಜಂಜಡದಲ್ಲಿ ಎಲ್ಲವನ್ನೂ ಮರೆಯಲಾಗುತ್ತದೆ. 

ವಿಜ್ಞಾನಿ ಹಾಗಲ್ಲ. ವಿಜ್ಞಾನಿಗೆ ಇಂಥ ಆಕಾಶ ಕಂಡರೆ ಹುಚ್ಚೇ ಹಿಡಿಯುತ್ತದೆ. ಆಕಾಶದ ರಹಸ್ಯಗಳನ್ನು ಭೇದಿಸುವವರೆಗೆ ಆತ ಸುಮ್ಮನಿರಲಾರ. ಶತಶತಮಾನಗಳಿಂದ ಹೀಗೆ ವಿಜ್ಞಾನಿಗಳು ಬ್ರಹ್ಮಾಂಡದ ಕುರಿತು ಸಂಶೋಧನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಭಾರತದ ಋಷಿಮುನಿಗಳು, ಇಟೆಲಿಯ ಗಣಿತಜ್ಞರು, ಅಮೆರಿಕಾದ ಭೌತಶಾಸ್ತ್ರಜ್ಞರು – ಎಲ್ಲರೂ ವಿಶ್ವ ಎನ್ನುವ ವಿಸ್ಮಯದ ಬಗ್ಗೆ ತಮ್ಮದೇ ತರ್ಕ, ವಿಚಾರ, ಲೆಕ್ಕ, ಸಿದ್ಧಾಂತ ಮಂಡಿಸುತ್ತಲೇ ಬಂದಿದ್ದಾರೆ.

—————————————

ಲೇಖಕರು: ಶಶಿಧರ ವಿಶ್ವಾಮಿತ್ರ
ಪ್ರಕಾಶನ: ವಸಂತ ಪ್ರಕಾಶನ
ಪುಟಗಳು: ೨೬೬
ಬೆಲೆ: ೧೬೦ ರೂ.

—————————————

ಶಶಿಧರ ವಿಶ್ವಾಮಿತ್ರ ಬರೆದ `ವಿಶ್ವ ಎನ್ನುವ ವಿಸ್ಮಯ’ ಪುಸ್ತಕವು ವಿಶ್ವದ ಉಗಮ, ಬೆಳವಣಿಗೆಯ ಬಗ್ಗೆ ಮನುಕುಲವು ಕಂಡುಹಿಡಿದ ಈವರೆಗಿನ ಸತ್ಯಗಳನ್ನು ಹಿಡಿದಿಡುವ ಅಚ್ಚಗನ್ನಡದ ಪ್ರಯತ್ನವಾಗಿದೆ. ಬಹುಶಃ ಕನ್ನಡದಲ್ಲಿ ಇಂಥ ಪುಸ್ತಕವೊಂದು ಬಂದಿದೆ ಎಂದರೆ ಅನುವಾದವೇ ಇರಬಹುದು ಎಂಬ ಅನುಮಾನ ಕಾಡಲೂಬಹುದು! ಆದರೆ ಲೇಖಕರು ಖವಿಜ್ಞಾನದ ನೂರಾರು ಪದಗಳನ್ನು ಕನ್ನಡದಲ್ಲೇ ಬರೆದು ಬಳಸಿದ ಮೊದಲ ಕನ್ನಡ ಪುಸ್ತಕ ಇದು ಎಂದೇ ಭಾಸವಾಗುತ್ತದೆ. ಬ್ರಹ್ಮಾಂಡದ ಉಗಮದ ಕಥೆಯೊಂದಿಗೇ ಕನ್ನಡದ ಶಬ್ದಕೋಶವೂ ಶ್ರೀಮಂತವಾಗಿರುವುದು ಒಂದು ಕುತೂಹಲಕಾರಿ ಅಂಶ. ಭಾಷೆಯ ಅವನತಿಯ ಆತಂಕಗಳ ನಡುವೆಯೇ ಇಂಥದ್ದೊಂದು ಕನ್ನಡದ ಪುಸ್ತಕ ಪ್ರಕಟವಾಗಿರುವುದು ಅಚ್ಚರಿ ಹುಟ್ಟಿಸುತ್ತದೆ. ನಿಜಕ್ಕೂ ಇಂಥ ಪುಸ್ತಕವನ್ನು ಓದುವ ಮನಸ್ಸುಗಳಿವೆಯೆ ಎಂಬ ಪ್ರಶ್ನೆಯೂ ಮೂಡುತ್ತದೆ.

ಈ ಪುಸ್ತಕ್ಕೆ ಮುನ್ನುಡಿ ಬರೆದ ಪ್ರೊ|| ಎಚ್.ಆರ್.ರಾಮಕೃಷ್ಣರಾವ್ ಮತ್ತು ಹಿನ್ನುಡಿ ಬರೆದ ವಿಜ್ಞಾನ ಲೇಖಕ ಟಿ.ಆರ್.ಅನಂತರಾಮು ಹೇಳಿರುವಂತೆ ಪುಸ್ತಕವು ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನ ಆಸಕ್ತ ಮನಸ್ಸುಗಳಿಗೆ ಮಾಹಿತಿ ಒದಗಿಸುವ ಯತ್ನ. ಈ ಪುಸ್ತಕದ ವಿಷಯವಸ್ತು ಎಂದಿಗೂ ಮುಗಿಯದ ರೋಚಕ ಕಥೆ; ಆದ್ದರಿಂದ ಈ ಪುಸ್ತಕವನ್ನು ನೀವು ಎಷ್ಟು ವರ್ಷ ಬೇಕಿದ್ದರೂ ಕಾದಿಟ್ಟು ಓದಿಕೊಳ್ಳಬಹುದು; ಮುಂದಿನ ಅಧ್ಯಾಯಗಳನ್ನು ನೀವೇ ಬರೆದುಕೊಳ್ಳಬಹುದು!

`ಮನುಷ್ಯನ ಮನಸ್ಸಿನ ಅದ್ಭುತಗಳು ಮತ್ತು ಪರಿಮಿತಿಗಳು’ ಎಂಬ ಎರಡನೇ ಅಧ್ಯಾಯದೊಂದಿಗೆ ಈ ಪುಸ್ತಕದ ಪಯಣ ಆರಂಭವಾಗುತ್ತದೆ. ಕ್ರಿಸ್ತಪೂರ್ವದ ಕಾಲದಲ್ಲಿ ಯಾವ್ಯಾವ ಚಿಂತಕರು ಏನೇನು ಹೇಳಿದರು ಎಂಬ ಒಂದು ಕಣ್ಣೋಟವನ್ನು ಮೂರನೇ ಅಧ್ಯಾಯದಲ್ಲಿ ಅಚ್ಚುಕಟ್ಟಾಗಿ ನೀಡಿದ ಲೇಖಕರು ಮುಂದೆ ಕ್ರಮೇಣವಾಗಿ ಜಗತ್ತಿನ ಕುರಿತ ಪರಿಕಲ್ಪನೆಗಳ ಸಂಶೋಧನೆಯ ಕಥೆಯನ್ನು ಬಿಚ್ಚುತ್ತ ಹೋಗುತ್ತಾರೆ.

ಇಲ್ಲಿ ನಕ್ಷತ್ರಪುಂಜಗಳ ಕಥೆ, ಚಂದ್ರ-ಸೂರ್ಯರ ಚಲನೆ, ಬೆಳಕಿನ ವೇಗ, ಕಾಲಗಣನೆ, ದೂರನಿರ್ಣಯ, ದೂರದರ್ಶಕ – ಹೀಗೆ ಭೂಮಿ-ಆಕಾಶ-ನಕ್ಷತ್ರಗಳನ್ನು ಒಳಗೊಳ್ಳುವ ಎಲ್ಲ ಸಂಗತಿಗಳು, ಅವುಗಳ ಬಗ್ಗೆ ಚಿಂತಿಸಿದ, ತರ್ಕಿಸಿದ ಮಹನೀಯರ ಚಿಂತನೆಗಳು – ಎಲ್ಲವೂ ಕಾಲಾನುಕ್ರಮದ ವಿವರಣೆಯಲ್ಲಿ ಬರುತ್ತವೆ. ಇವರೆಲ್ಲ ಮಂಡಿಸಿದ ವಿಚಾರಗಳನ್ನು ಲೇಖಕರು ಯಾವುದೇ ಮಧ್ಯಪ್ರವೇಶ ಮಾಡದೆಯೇ ಮಂಡಿಸಿರುವುದು ಗಮನಾರ್ಹ ಮತ್ತು ಶ್ಲಾಘನೀಯ. ವಿಜ್ಞಾನ ಬರವಣಿಗೆಯ ಶಿಸ್ತಿನ ಸೂತ್ರಗಳಲ್ಲಿ ಇದು ತುಂಬಾ ಮುಖ್ಯ. ಸಮಕಾಲೀನ ಬರವಣಿಗೆಗಳಲ್ಲಿ ಮಾಹಿತಿಗಳ ನಡುವೆಯೇ ಲೇಖಕರ ಅಭಿಪ್ರಾಯಗಳನ್ನು ಸೂಚಿಸುವ, ನೀತಿ ನಿಲುವುಗಳನ್ನು ಬಿಂಬಿಸುವ ವಾಕ್ಯಗಳೂ ನುಸುಳಿರುತ್ತವೆ. ಆದರೆ ಶಶಿಧರ ವಿಶ್ವಾಮಿತ್ರರು ಎಲ್ಲಿಯೂ ಈ ಅಶಿಸ್ತನ್ನು ತೋರಿಲ್ಲ.

ಪುಸ್ತಕದ ಕೊನೆಯವರೆಗೂ ಬ್ರಹ್ಮಾಂಡದ ಉಗಮ ಮತ್ತು ವಿಸ್ತರಣೆಯ, ಮಹಾಬಾಜಣೆಯ, ಕಪ್ಪುಕುಳಿಗಳ, ಬಹುವಿಶ್ವಗಳ (ಮಲ್ಟಿವರ್ಸ್) ತರ್ಕಬದ್ಧ ಸಂಶೋಧನಾ ಸಂಗತಿಗಳು ಹರಿಯುತ್ತವೆ. ಆಲ್‌ಬರ್ಟ್ ಐನ್‌ಸ್ಟೀನ್ ನಂತರದಲ್ಲಿ ಭೌತಶಾಸ್ತ್ರದಲ್ಲಿ ನುರಿತವರೆಂದು ಖ್ಯಾತರಾದ ಸ್ಟೀವನ್ ಹಾಕಿಂಗ್, ವೆನ್ ರೂಬಿನ್‌ರನ್ನೂ ಉಲ್ಲೇಖಿಸುತ್ತ ಕೊನೆಗೆ ಬ್ರಹ್ಮಾಂಡದ ನವೋನವ ಸಿದ್ಧಾಂತಗಳಾದ `ಪರಮರೇಣು’ (ಸೂಪರ್‌ಸ್ಟ್ರಿಂಗ್ಸ್) ಮತ್ತು `ಎಂ-ಸಿದ್ಧಾಂತ’ (ಎಂ ಥಿಯರಿ)ವನ್ನೂ ಪುಸ್ತಕವು ವಿವರಿಸುತ್ತ ಮುಗಿಯುತ್ತದೆ. ಗ್ರಂಥಋಣದಲ್ಲಿ ಉಲ್ಲೇಖಿಸಿರುವ, ಐನ್‌ಸ್ಟೀನ್ ಸಿದ್ಧಾಂತದ ಪರಮ ತಜ್ಞ, ಭೌತಶಾಸ್ತ್ರ ಸಿದ್ಧಾಂತಿಯಾದ ಮಿಶಿಯೋ ಕಾಕು ಬಗ್ಗೆ ಹೆಚ್ಚೇನೂ ಹೇಳಿಲ್ಲ. ಆದರೆ ಲೇಖಕರು ಸಮಕಾಲೀನವಾದ ಎಲ್ಲ ಸಂಗತಿಗಳನ್ನೂ ಈ ಪುಸ್ತಕದಲ್ಲಿ ಸೇರಿಸಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಬ್ರಹ್ಮಾಂಡ ಕುರಿತ ಕನ್ನಡದ ಪುಸ್ತಕ ಇನ್ನೂ ತಾಜಾ ಆಗಿರುವುದು ಖಂಡಿತ ಅಸಾಧ್ಯ! (ಮಿಶಿಯೋ ಕಾಕು ಅವರ ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಎಂ-ಥಿಯರಿಯ ಲೆಕ್ಕಾಚಾರದಲ್ಲಿ ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜಂ ರೂಪಿಸಿದ ಸೂತ್ರಗಳೇ ಆಧಾರವಾಗಿವೆ ಎಂಬ ಅಂಶವನ್ನು ವಿಮರ್ಶಕ ತನ್ನ ಪ್ರತ್ಯೇಕ ಅಧ್ಯಯನದಲ್ಲಿ ಗಮನಿಸಿದ್ದಾನೆ!)

ಪುಸ್ತಕದಲ್ಲಿ ಕನ್ನಡವನ್ನು ಬಳಸಿರುವುದು ಒಂದು ಹೆಚ್ಚುಗಾರಿಕೆಯಾದರೂ, ಕೆಲವೊಮ್ಮೆ ಅದೇ ತೊಡಕೇನೋ ಎಂದು ಸಾಮಾನ್ಯ ಓದುಗರಿಗೆ ಅನ್ನಿಸಲೂಬಹುದು. ಮುನ್ನುಡಿಯಲ್ಲಿ ಹೇಳಿದಂತೆ ಈ ಪುಸ್ತಕದಲ್ಲಿ ಬಳಸಿದ ಶಬ್ದಗಳ ಪಟ್ಟಿಯನ್ನು ಅಕಾರಾದಿಯಾಗಿ ಕೊಟ್ಟಿದ್ದರೆ ಚೆನ್ನಾಗಿತ್ತು.  ಕನ್ನಡವನ್ನೇ ಮರೆಯುತ್ತಿರುವ ಕರ್ನಾಟಕದ ಮಹಾನಗರಗಳು, ಕನ್ನಡದ ಶಿಸ್ತುಬದ್ಧ ಕಲಿಕೆಯಿಲ್ಲದೆ ಬಳಲುತ್ತಿರುವ ಗ್ರಾಮಾಂತರ ಪ್ರದೇಶ – ಈ ಸನ್ನಿವೇಶದಲ್ಲಿ ಇಂಥ ಅಚ್ಚಗನ್ನಡದ ಪುಸ್ತಕವು ಮಾರುಕಟ್ಟೆಗೆ ಬಂದಿರುವುದು ಅಚ್ಚರಿ ಹುಟ್ಟಿಸುತ್ತದೆ. ಆಲ್‌ಬರ್ಟ್ ಐನ್‌ಸ್ಟೀನರೂ ಒಮ್ಮೆ ಫ್ರೆಡ್ ಹಾಯ್‌ಲ್ ರೂಪಿಸಿದ ಏಕಸಮ (ಸ್ಟೆಡಿ ಸ್ಟೇಟ್) ಸಿದ್ಧಾಂತವನ್ನೂ ಒಪ್ಪಲು ಮುಂದಾಗಿ ಪ್ರಬಂಧವನ್ನೇ ಬರೆದಿದ್ದರು ಎಂಬ ಸುದ್ದಿ ಈಗಷ್ಟೇ ಪ್ರಕಟವಾಗಿದೆ (ಮಾರ್ಚ್ ೨೦೧೪). ಈ ಹಿನ್ನೆಲೆಯಲ್ಲಿ ನೋಡಿದಾಗ, ಶಶಿಧರ ವಿಶ್ವಾಮಿತ್ರರ ಈ ಕೃತಿ ಎಷ್ಟೆಲ್ಲ ಮಾಹಿತಿಯುಕ್ತವಾಗಿದೆ ಎಂದು ಸಮಾಧಾನವಾಗುತ್ತದೆ.  `ವಿಶ್ವ ಎನ್ನುವ ವಿಸ್ಮಯ’ – ಇಂಥ ಪುಸ್ತಕಗಳಿಂದ ನಮ್ಮ ವಿಜ್ಞಾನದ ಮಾಹಿತಿ ಭಂಡಾರವೂ ಬೆಳೆಯುತ್ತದೆ; ಕನ್ನಡ ಮನಸ್ಸಿನ ಚಿಂತನೆಗಳೂ ಗಟ್ಟಿಯಾಗುತ್ತವೆ.

Share.
Leave A Reply Cancel Reply
Exit mobile version