ವಿಜ್ಞಾನಕ್ಕೆ ಆರೆಸೆಸ್‌ ಧರ್ಮವನ್ನು ಬೆರೆಸಲಿದೆಯೆ? ಹಾಗೆಂದು ವದಂತಿ ಹಬ್ಬಿಸುತ್ತಿರುವ ಕ್ಯಾಚ್‌ನ್ಯೂಸ್‌‌ ಎಂಬ ವೆಬ್‌ಸೈಟಿನ ಸುದ್ದಿ  ಓದಿದ್ದರೆ ಈ ಮಾಹಿತಿಯನ್ನೂ ಓದಿ. ದಾರಿ ತಪ್ಪಿಸುವ ಮತ್ತು ತಪ್ಪು ವರದಿಗಳ ಬಗ್ಗೆ ಎಚ್ಚರಿಕೆಯಿಂದಿರಿ!!

`ವಿಜ್ಞಾನ ಭಾರತಿಎಂಬ ಸಂಘ ಪರಿವಾರದ ಸಂಘಟನೆಯು ಆರಂಭಿಸಿದ ಸೈನ್ಸ್‌ ಇಂಡಿಯಾ ಪೋರ್ಟಲ್‌ (http://www.scienceindia.in) ಎಂಬ ಜಾಲತಾಣದಲ್ಲಿ ವಿಜ್ಞಾನ ಮತ್ತು ಧರ್ಮ ಮಿಶ್ರಿತ ಲೇಖನಗಳಿವೆ ಎಂಬ ಈ ಸುದ್ದಿಯನ್ನು ಓದಿ ಕುತೂಹಲದಿಂದ ಅಲ್ಲಿಗೆ ಹೋಗಿ ನೋಡಿದೆ. ಕಂಡಿದ್ದು ಮೂರ್ನಾಲ್ಕು ಮಾದರಿ (ಸ್ಯಾಂಪಲ್‌) ಲೇಖನಗಳು. ಮೂಲತಃ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಆರಂಭವಾಗಿರುವ ಈ ವೆಬ್‌ಸೈಟ್‌ನ `ನಮ್ಮ ಬಗ್ಗೆಪುಟದಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಬೇಕೆಂಬ ಭಾರತ ಸಂವಿಧಾನದ ಘೋಷಣೆಯನ್ನು ಉಲ್ಲೇಖಿಸಲಾಗಿದೆ.

Science India, through the mobilization of vast scientific contingent of India intends to promote Indian achievements in science and technology and develop curiosity and innovative ideas to address the challenges facing the globe. The Constitution of India in Article 51A on Fundamental Duties says:”It shall be the duty of every citizen of India…To develop the scientific temper, humanism and the spirit of enquiry and reform”

ಈ ವೆಬ್‌ಸೈಟ್‌ಗೆ ಭಾರತ ಸರ್ಕಾರದ ಸಂಸ್ಥೆಗಳ ಬೆಂಬಲ ಇರುವುದು ನಿಜವೇ. ಅಷ್ಟೇಕೆ, ಭಾರತದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳ ಮುಖ್ಯಸ್ಥರು ಈ ವೆಬ್‌ಸೈಟಿನ ಸಲಹೆಗಾರರೂ, ಕಾರ್ಯಕಾರಿ ತಂಡದ ಸದಸ್ಯರೂ ಆಗಿದ್ದಾರೆ.

ಕ್ಯಾಚ್‌ ನ್ಯೂಸ್‌ ಸಂಸ್ಥೆಯು `ವಿಜ್ಞಾನ ಭಾರತಿಯ ಪ್ರಧಾನ ಕಾರ್ಯದರ್ಶಿ ಜಯಕುಮಾರ್‌ ಎಂಬುವವರು ವೇದಕಾಲೀನ ವಿಜ್ಞಾನ, ಆಯುರ್ವೇದ, ಸಿದ್ಧ ವೈದ್ಯಕೀಯ ಪದ್ಧತಿಗಳ ಬಗೆಗೂ ಗಮನ ಕೊಡಲಾಗುವುದು ಎಂದಿದ್ದಾರೆಎಂದು ವರದಿ ಮಾಡಿದೆ. ವಿಜ್ಞಾನದ ಅಧ್ಯಯನಕ್ಕೆ, ವೈಜ್ಞಾನಿಕ ಮನೋಭಾವಕ್ಕೆ ಬೇಕಾದ ವಾತಾವರಣ ಇಲ್ಲದಿದ್ದರೆ ಭಾರತವು ಉತ್ತಮ ವಿಜ್ಞಾನಿಗಳನ್ನು ಹೊಂದಲಾಗದು ಎಂದೂ ಜಯಕುಮಾರ್‌ ಹೇಳಿದ್ದಾರೆ.

ಇಷ್ಟೆಲ್ಲ ವರದಿ ಮಾಡಿದ ಕ್ಯಾಚ್‌ನ್ಯೂಸ್‌ ಆಮೇಲೆ ಮೋದಿಯವರು ಕರ್ಣ, ಗಣೇಶನ ಹುಟ್ಟನ್ನು ಜೆನೆಟಿಕ್‌ ಸೈನ್ಸ್‌, ಪ್ಲಾಸ್ಟಿಕ್‌ ಸರ್ಜರಿಗೆ ಹೋಲಿಸಿದ್ದನ್ನು, ಸಚಿವ ರಾಧಾ ಮೋಹನ್‌ಸಿಂಗ್‌ರವರು ಯೋಗಿಕ್‌ ಫಾರ್ಮಿಂಗ್‌ ಬಗ್ಗೆ ಹೇಳಿದ್ದನ್ನು ಈ ಸುದ್ದಿಯ ಮಧ್ಯೆ ತೂರಿಸಿ ಇವೂ ವಿಜ್ಞಾನ ಭಾರತಿಯ ಅಜೆಂಡಾ ಎಂಬಂತೆ ಬಿಂಬಿಸಿದೆ. ಕ್ಯಾಚ್‌ನ್ಯೂಸ್‌ ಬರೆದ An explosive compound: RSS’s latest plan to mix science and religion ಎಂಬ ಶೀರ್ಷಿಕೆಗೂ ವಿಜ್ಞಾನ ಭಾರತಿಗೂ ಯಾವುದೇ ಚಿಕ್ಕ ಸಂಬಂಧವೂ ಇಲ್ಲ.

ವಿಜ್ಞಾನ ಭಾರತಿಯ ವೆಬ್‌ಸೈಟಿನಲ್ಲಿ ಇರುವ ಪ್ರಚಾರ ವಿಡಿಯೋದಲ್ಲೂ ಮೋದಿ ಇದ್ದಾರೆ; ಆದರೆ ಅಲ್ಲೂ ಕರ್ಣಗಣೇಶ ಬಗ್ಗೆ ಹೇಳಿದ್ದನ್ನು ಕಾಣಲಿಲ್ಲ; ಬದಲಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂಬ ಕರೆ ಕೊಟ್ಟಿದ್ದನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ.

ಆರೆಸೆಸ್‌ ಸ್ಥಾಪಕ ಸರಸಂಘಚಾಲಕರಾದ ಶ್ರೀ ಕೆ ಬಿ ಹೆಡಗೆವಾರ್‌ ವೈದ್ಯ ಶಿಕ್ಷಣ ಪಡೆದು ಡಾಕ್ಟರ್‌ ಆಗಿದ್ದವರು; ಎಂ ಎಸ್‌ ಗೋಳವಲಕರ್‌ ಅವರು ಬಿಎಸ್ಸಿ ಮಾಡಿ ಜೀವಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದವರು; ಶ್ರೀ ರಾಜೇಂದ್ರ ಸಿಂಗ್‌ (ರಜ್ಜು ಭೈಯ್ಯಾ) ಅವರು ಬಿಎಸ್ಸಿ, ಎಂಎಸ್ಸಿ, ಪಿಎಚ್‌ಡಿ ಮಾಡಿದ ಮೇಲೆ ಸ್ಪೆಕ್ಟ್ರೋಸ್ಕೊಪಿ ವಿಷಯದ ಮೇಲೆ ಪಾಠ ಮಾಡಲು ಅಲಹಾಬಾದ್‌ ವಿಶ್ವವಿದ್ಯಾಲಯ ಸೇರಿದವರು; ನೊಬೆಲ್‌ ಪ್ರಶಸ್ತಿ ಪುರಸ್ಕೃತ ಸರ್‌ ಸಿವಿ ರಾಮನ್‌ರಿಂದಲೇ exceptionally brilliant student ಎಂಬ ಶ್ಲಾಘನೆಗೆ ಪಾತ್ರರಾದವರು; ಅಲ್ಲದೆ ಆಗಿನ ಕಾಲದಲ್ಲಿ ಪ್ರಚಲಿತದಲ್ಲೇ ಇರದ ಪರಮಾಣು ಭೌತಶಾಸ್ತ್ರದಲ್ಲಿ (ನ್ಯೂಕ್ಲಿಯರ್‌ ಫಿಸಿಕ್ಸ್‌) ಪರಿಣತರು ಎಂದು ಹೆಸರುವಾಸಿಯಾಗಿದ್ದವರು; ಶ್ರೀ ಕು ಸೀ ಸುದರ್ಶನ್‌ ಟೆಲಿಕಮ್ಯುನಿಕೇಶನ್ಸ್‌ ಇಂಜಿನಿಯರಿಂಗ್ ಪದವಿ ಪಡೆದವರು ; ಈಗಿನ ಸರಸಂಘಚಾಲಕ ಶ್ರೀ ಮೋಹನ ಭಾಗವತರು ಪಶುವೈದ್ಯಕೀಯ ಶಾಸ್ತ್ರದಲ್ಲಿ ಪದವೀಧರರು; (ಇನ್ನುಳಿದ ಸರಸಂಘಚಾಲಕ ಶ್ರೀ ಬಾಳಾಸಾಹೇಬ ದೇವರಸರು ಕಾನೂನು ಓದಿದವರು). ಆ ಕಾಲದ ವಿಜ್ಞಾನದ ಓದು ಎಷ್ಟು ಕಠಿಣ ಮತ್ತು ಶಿಸ್ತಿನದಾಗಿತ್ತು ಎಂಬುದನ್ನು ಯಾರಿಗೂ ತಿಳಿಹೇಳುವ ಅಗತ್ಯ ಇದೆಯೆ?

ಇಷ್ಟಾಗಿಯೂ ಹೆಡಗೆವಾರ್‌ ಹೊರತುಪಡಿಸಿ ಉಳಿದವರೆಲ್ಲರೂ ಹಲವು ವರ್ಷಗಳ ಕಾಲ ಪ್ರಚಾರಕರಾದ ಮೇಲೆಯೇ ಆರೆಸೆಸ್‌ ಮುಖ್ಯಸ್ಥರ ಸ್ಥಾನಕ್ಕೆ ಬಂದರೇ ಹೊರತು ತಮ್ಮ ಡಿಗ್ರಿಗಳಿಂದಲ್ಲ. ಅವರೆಲ್ಲರ ಸಂಘಟನಾ ನಿಷ್ಠೆ, ಸಮಾಜಮುಖೀ ಕಾರ್ಯತತ್ಪರತೆಗಳೇ ಅವರ ಉನ್ನತಿಯ ಮಾನದಂಡಗಳಾಗಿದ್ದವು. ಈಗಲೂ ಆರೆಸೆಸ್‌ನ ಸಾವಿರಾರು ಪ್ರಚಾರಕರಲ್ಲಿ ಇಂಜಿನಿಯರ್‌ಗಳೂ, ಎಂಟೆಕ್‌ಗಳೂ ಇದ್ದಾರೆ ಎಂಬುದೂ ನಿಮಗೆ ಗೊತ್ತಿರಲಿ.

ಮನುಕುಲ ಕಂಡ ಮೇಧಾವಿ ವಿಜ್ಞಾನಿ (ಇವರೆಗೂ ಅವರ ಬಹ್ವಂಶ ಸಿದ್ಧಾಂತಗಳನ್ನು ಪ್ರಯೋಗಗಳ ಮೂಲಕ ಸಾಬೀತು ಮಾಡಲಾಗಿದೆಯೇ ವಿನಃ ಸುಳ್ಳೆಂದು ದೃಢೀಕರಿಸಿದ್ದು ಕಡಿಮೆಯೇ) ಆಲ್ಬರ್ಟ್‌ ಐನ್‌ಸ್ಟೀನ್‌ ಧರ್ಮ ಮತ್ತು ವಿಜ್ಞಾನದ ಕುರಿತು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ (ಐನ್‌ಸ್ಟೀನ್‌ ಯೆಹೂದಿ ಅಲ್ಲವೆ, ಮೊನ್ನೆ ಮೋದಿ ಇಸ್ರೇಲಿಗೇ ಹೋಗಿದ್ದಲ್ಲವೆ ಇತ್ಯಾದಿ ತರ್ಕ ಇಲ್ಲಿ ಬೇಡ): A person who is religiously enlightened appears to me to be one who has, to the best of his ability, liberated himself from the fetters of his selfish desires and is preoccupied with thoughts, feelings and aspirations to which he clings because of their super-personal value. It seems to me that what is important is the force of this superpersonal content … regardless of whether any attempt is made to unite this content with a Divine Being, for otherwise it would not be possible to count Buddha and Spinoza as religious personalities. Accordingly a religious person is devout in the sense that he has no doubt of the significance of those super-personal objects and goals which neither require nor are capable of rational foundation … In this sense religion is the age-old endeavor of mankind to become clearly and completely conscious of these values and goals and constantly to strengthen and extend their effect. If one conceives of religion and science according to these definitions then a conflict between them appears impossible. For science can only ascertain what is, but not what should be.. (ನೋಡಿ: ವಿಕಿಪೀಡಿಯ: https://en.wikipedia.org/wiki/Religious_and_philosophical_views_of_Albert_Einstein).

ಈ ಪೋಸ್ಟ್‌ನ್ನು ನಾನು ಕೇವಲ ವಿಜ್ಞಾನ ಧರ್ಮ ಚರ್ಚೆಗಾಗಿ ಹಾಕಿದ್ದೇನೆಯೇ ವಿನಃ ಆರೆಸೆಸ್‌ ಬಗೆಗಲ್ಲ; ಆದ್ದರಿಂದ ವಿಜ್ಞಾನ ಮತಧರ್ಮ ಈ ಕುರಿತು ಯಾವುದೇ ಬಗೆಯ ಚರ್ಚೆಯನ್ನೂ ಇಲ್ಲಿ ಮಾಡಬಹುದು. ಹೊರತು ಮತೀಯತೆ, ಕೋಮುವಾದ, ಮತಾಂಧತೆ, ಇವುಗಳ ಚರ್ಚೆ ಇಲ್ಲಿ ನಡೆಸಲಾಗದು. ಅಂಥ ವಿಚಾರಗಳನ್ನು ಅವರವರು ಸ್ವತಂತ್ರವಾಗಿ ತಂತಮ್ಮ ಗೋಡೆಗಳಲ್ಲಿ ಬರೆದುಕೊಳ್ಳಬಹುದು.

ಆರೆಸೆಸ್‌ ಬಗ್ಗೆ ಮೊದಲಿನಿಂದಲೂ ಪೂರ್ವಾಗ್ರಹವನ್ನೇ ಇಟ್ಟುಕೊಂಡ ಪತ್ರಕರ್ತರ ಪೈಕಿ ವಸ್ತುನಿಷ್ಠವಾಗಿ ವರದಿ ಮಾಡುತ್ತಿರುವವರ ಸಂಖ್ಯೆ ಕಡಿಮೆ. ಪೂರ್ವಾಗ್ರಹಪೀಡಿತ ಅನುರಾಗ್‌ ದೇ ಎಂಬುವವರ ವರದಿಯಲ್ಲಿ ರೋಚಕತೆಯೇ ತುಂಬಿದೆ. ವಾಸ್ತವಾಂಶಗಳಿಗೆ ಮೂಲೆ ಜಾಗ! 

ನನಗೆ ವಿಜ್ಞಾನದ ಓದು ಮತ್ತು ಆಧ್ಯಾತ್ಮಿಕ ಚಿಂತನೆ ಇವುಗಳ ನಡುವೆ ಏನಂಥ ವ್ಯತ್ಯಾಸವೂ ಕಾಣುತ್ತಿಲ್ಲ. ಜೈನ ಕಾಸ್ಮಾಲಜಿಯ ಒಂದು ಪುಸ್ತಕದಲ್ಲಿ ಪ್ರಕಟವಾದ ಪ್ರಾಚೀನ ವರ್ಣಚಿತ್ರಗಳಿಗೂ, ಸ್ಟೀಫನ್‌ ಹಾಕಿಂಗ್‌ ಬರೆದ ದ ಯೂನಿವರ್ಸ್‌ ಇನ್‌ ಎ ನಟ್‌ಶೆಲ್‌ ಪುಸ್ತಕದಲ್ಲಿ ವಿವರಿಸಿದ ಕೃಷ್ಣ ವಿವರ ಬ್ರಹ್ಮಾಂಡದ ಚಿತ್ರಗಳಿಗೂ ಸಾಮ್ಯವಿರುವುದನ್ನು ಆಕಸ್ಮಿಕವಾಗಿ ಗಮನಿಸಿದ ಮೇಲೆ ನನಗಂತೂ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಾಗಿದೆ; ಆಧ್ಯಾತ್ಮದ ಚಿಂತನೆಗಳ ಬಗ್ಗೆ ಕುತೂಹಲವೂ ಹೆಚ್ಚಿದೆ.

ವಿಜ್ಞಾನವೆಂದರೆ ಆಧ್ಯಾತ್ಮಕ್ಕೆ ವಿರೋಧಿ ಎಂದು ಭಾವಿಸುವವರು ನಮ್ಮ ಪ್ರಾಚೀನ ಗ್ರಂಥಗಳನ್ನು ಒಮ್ಮೆಯಾದರೂ ಓದುವುದು ಒಳಿತು. ಸಿದ್ಧಾಂತಗಳ ವೈವಿಧ್ಯ ಏನೇ ಇರಲಿ, ನಮ್ಮ ನೆಲದ ಪ್ರಾಚೀನತೆ, ವೈಜ್ಞಾನಿಕತೆ, ಪ್ರಮಾಣೀಕರಣದ ಹಂಬಲ, ಬ್ರಹ್ಮಾಂಡದ, ಲೌಕಿಕ ಜಗತ್ತಿನ ಶೋಧದ ಇತಿಹಾಸ ಇವೆಲ್ಲವನ್ನೂ ಅಲ್ಲಗಳೆಯುವುದು ನಮ್ಮ ಇರವನ್ನೇ ಅಲ್ಲಗಳೆಯುವ ಹುಂಬತನ.

ಯಜ್ಞಕುಂಡಗಳಿಗಾಗಿ ರೂಪಿಸಿದ ಶುಲ್ಭ ಸೂತ್ರಗಳು, ನಮ್ಮ ಆದಿವಾಸಿ ಸಮುದಾಯಗಳು ಈಗಲೂ ಬಳಸುವ ಪಾರಂಪರಿಕ ಅರಣ್ಯ / ವೈದ್ಯ/ ದೇಸಿ ಜ್ಞಾನ, ಇಡೀ ಜಗತ್ತೇ ಬೆರಗಾಗುವಂತೆ ಕಟ್ಟಿದ ಹರಪ್ಪಾಮೊಹೆಂಜೋದಾರೋ ರಾಖಿಗಢಿ ನಗರಗಳು, – ಎಲ್ಲವೂ ವಿಜ್ಞಾನವೇ. ಅವರ್ಯಾರೂ ಈಗಿನ ಕಾಲದ ಕ್ಷುದ್ರ ಸೆಕ್ಯುಲರ್‌ ಚಿಂತನೆಯನ್ನು ಹೊಂದಿರಲಿಲ್ಲ. ಶತಮಾನಗಳ ಕಾಲ ವಿಜ್ಞಾನಸಂಪ್ರದಾಯಗಳು ಏಕೀಕರಣಗೊಂಡೇ ಬಾಳಿದ್ದವು.

ಅಂಥ ಇತಿಹಾಸವನ್ನೂ ಕಲಕಿ ವಿಜ್ಞಾನವೇ ಬೇರೆ ಜ್ಞಾನಪ್ರವಾಹ ಎಂಬ ಕಲಬೆರಕೆ ಸಿದ್ಧಾಂತ ನಮಗೆ ಬೇಡ. ಇಂದಿನ ಕಾರ್ಪೋರೇಟ್‌ ಅಡಿಯಾಳು ವಿಜ್ಞಾನಿಗಳು ಮಾಡಿದ ಸಂಶೋಧನೆಗಳು ಹೇಗೆ ನಮ್ಮ ನಾಗರಿಕತೆಯನ್ನೇ ಉಸಿರುಗಟ್ಟಿಸಿ ಸಾಯಿಸುತ್ತಿವೆ; ಹೇಗೆ ನಮ್ಮನ್ನು ಪ್ಲಾಸ್ಟಿಕ್‌ ಗುಲಾಮಿಗಳನ್ನಾಗಿ ಮಾಡಿವೆ, ಹೇಗೆ ನಮ್ಮ ರೈತರ ಬಿತ್ತನೆ ಬೀಜಗಳನ್ನೇ ಅಪಹರಿಸಿ ಮಾರುತ್ತಿವೆ, ಹೇಗೆ ನಮ್ಮ ದೇಸಿ ಜ್ಞಾನವನ್ನೆಲ್ಲ ಪೇಟೆಂಟ್‌ ಹೆಸರಿನಲ್ಲಿ ಕಬಳಿಸುತ್ತಿವೆ, ಹೇಗೆ ನಮ್ಮ ನೆಲಜಲಗಾಳಿಯನ್ನು ಮಲಿನಗೊಳಿಸುತ್ತಿವೆ ಎಲ್ಲವನ್ನೂ ನೋಡಿಬಿಟ್ಟರೆ, ಈ ವಿಜ್ಞಾನಿಗಳ ಸಹವಾಸವೇ ಸಾಕು ಅನ್ನಿಸುತ್ತಿದೆ! ರಾಸಾಯನಿಕ ಕೀಟನಾಶಕಗಳು ಬರುವ ಮುನ್ನ ಇದ್ದ ಕೀಟ ಸಂಬಂಧಿ ಬೆಳೆನಷ್ಟದ ಪ್ರಮಾಣವು 25 ಸಾವಿರ ಕೀಟನಾಶಕ ಬ್ರಾಂಡ್‌ಗಳ ನಂತರ ಹೆಚ್ಚಾಗಿದೆ ಎಂದರೆ ನೀವೇ ಯೋಚಿಸಿ. ಪರಮಾಣು ವಿಜ್ಞಾನದ ಭೀಕರ ಪರಿಣಾಮಗಳಿಗೆ ಯಾರು ಹೊಣೆ? ಮತಧರ್ಮಗಳೆ, ಅಥವಾ ರಾಜಕಾರಣಿಗಳ ಆಟದ ಗೊಂಬೆಗಳಾದ ವಿಜ್ಞಾನಿಗಳೆ?

ವಿಜ್ಞಾನವು ನಮ್ಮ ಬದುಕನ್ನು ಕತ್ತರಿಸಬಾರದು ಎಂದರೆ ಅದರಲ್ಲಿ ಆಧ್ಯಾತ್ಮದ ಹೊಳಹು ಇರಲೇಬೇಕು ಎಂಬುದು ನನ್ನ ನಮ್ರ ಅನಿಸಿಕೆ.

Share.
Leave A Reply Cancel Reply
Exit mobile version