ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಜಾತಂತ್ರ ರಕ್ಷಣೆಗಾಗಿ ಹೋರಾಡುತ್ತಿದ್ದ ಸಂದರ್ಭದಲ್ಲೇ ನನಗೂ ಬದುಕಿನ ಪಾಠ ಆರಂಭಿಸಿತು. ಆಗ ನಾನು ಐದನೇ ಕ್ಲಾಸು (೧೯೭೫) ! ಅಂದಿನಿಂದ ಇಂದಿನವರೆಗೂ ನಾನು ಸಂಘವನ್ನು ಒಳಗಿನಿಂದಲೂ, ಹೊರಗಿನಿಂದಲೂ ಗಮನಿಸಿದ್ದೇನೆ. ವ್ಯಕ್ತಿಗಳ ಇಷ್ಟಾನಿಷ್ಟಗಳನ್ನು ಮೀರಿ ನಿಲ್ಲುವ ಬಗೆಯನ್ನು ಸಂಘವು ಮೊದಲಿನಿಂದಲೂ ಆವಿಷ್ಕರಿಸುತ್ತ, ಸುಧಾರಿಸುತ್ತ ಬಂದಿದೆ. ದೇಶದ ಮೂಲಾಧಾರವಾದ ಪ್ರಜಾಪ್ರಭುತ್ವವೇ   ತುರ್ತುಸ್ಥಿತಿಯ ಅಂಧಕಾರದಲ್ಲಿ, ಒಬ್ಬ ವ್ಯಕ್ತಿಯ ಸರ್ವಾಧಿಕಾರದಲ್ಲಿ ಅಡ್ಡ ಮಲಗಿದ್ದಾಗ, ಪುರಾತನ ಕಾಲದಿಂದಲೂ ಬಾಯಲ್ಲಿ ಸಮಾಜವಾದ ಉದ್ಗರಿಸುತ್ತ , ವರ್ತನೆಯಲ್ಲಿ ಬಂಡವಾಳಶಾಹಿಗಳನ್ನು, ಸರ್ವಾಧಿಕಾರಿಗಳನ್ನು ಓಲೈಸುತ್ತ ಬಂದಿರುವ ಈಗಿನ ಬುಜೀಗಳು ಹೊದ್ದು ಮಲಗಿದ್ದಾಗ ದೇಶದಲ್ಲಿ ಹೊಸ ಚೈತನ್ಯ ತಂದು ಪ್ರಜಾತಂತ್ರವನ್ನು ಜನತೆಗೆ ಮರಳಿಸಿ ಕೊಟ್ಟು ತನ್ನ ಪಾಡಿಗೆ ಶಾಖೆ ನಡೆಸುತ್ತ ಬದಿಗೆ ಸರಿದ ಸಂಘವನ್ನು ದೂಷಿಸುವವರು ದಯಮಾಡಿ ಒಮ್ಮೆ ಸಂಘದ ಪ್ರಚಾರಕರೊಂದಿಗೆ, ಅವರನ್ನು ಮನೆಗೇ ಕರೆದು ಸಂವಾದ ನಡೆಸಿ.

ರಾ.ಸ್ವ. ಸಂಘದ ಸ್ವಯಂಸೇವಕನಾಗಿಯೂ ಸಮಾಜದ ಹಲವು ಬೆಳವಣಿಗೆಗಳು, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇವುಗಳ ಬಗ್ಗೆ ನಾನು ಪ್ರತಿಭಟನೆಯ ಧ್ವನಿ ಎತ್ತಿದಾಗ ಸಂಘದ ಪ್ರಚಾರಕರು, ಅಧಿಕಾರಿಗಳು ನನ್ನ ಮಾತುಗಳನ್ನೂ ಮುಕ್ತವಾಗಿ ಆಲಿಸಿದ್ದಾರೆ, ಗಮನ ಕೊಟ್ಟಿದ್ದಾರೆ; ನಾನು ತಿಳಿಸಿದ್ದನ್ನು ಪರಾಮರ್ಶಿಸಿ ಹಲವು ಕ್ರಮಗಳನ್ನು ಸಂಘದ ನಿರ್ಣಯ ಪ್ರಕ್ರಿಯೆಯ ಮೂಲಕವೇ ಜಾರಿಗೊಳಿಸಿದ್ದಾರೆ. ಆದ್ದರಿಂದಲೇ ಸಂಘವನ್ನು ವೈಯಕ್ತಿಕವಾಗಿ ಗೌರವಿಸುತ್ತೇನೆ. ಇದರ ಹೊರತಾಗಿಯೂ, ಸಂಘದಿಂದಲೇ ಕಲಿತ `ಜಗಜ್ಜನನಿ ಭಾರತಮಾತೆ’ ಎಂಬುದು ಒಣಹೇಳಿಕೆಯಲ್ಲ, ಐತಿಹಾಸಿಕ ಸತ್ಯ ಎಂಬುದನ್ನು ನನ್ನದೇ ಅಧ್ಯಯನದಿಂದ ಮನಗಂಡು ನಂಬಿದ್ದೇನೆ.

ಸಮಾಜದಲ್ಲಿ ಇರುವ ಸಾಮರಸ್ಯದ ಕೊರತೆಯನ್ನು ಹೋಗಲಾಡಿಸಲೆಂದೇ ಸಂಘವು ಪರಮ ಪೂಜ್ಯ ಡಾ|| ಕೆ.ಬಿ. ಹೆಡಗೇವಾರರ  ಜನ್ಮಶತಾಬ್ದಿಯ ವರ್ಷದಿಂದಲೂ ವಿಶೇಷ ಪ್ರಯತ್ನಗಳನ್ನು ಮಾಡುತ್ತ ಬಂದಿರುವುದನ್ನು ಕಣ್ಣಾರೆ ಕಂಡಿದ್ದೇನೆ. `ಸಾಮರಸ್ಯ’  ಎಂಬ ಅರೆ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಿ ಅದರ ಮೂಲಕ ಜಾತಿ ವೈಷಮ್ಯದ ಒಳಹೊರಗನ್ನು ಅರಿತು ಪರಿಹರಿಸುವ ಯತ್ನಕ್ಕೆ ಪ್ರಾಮಾಣಿಕವಾಗಿ ಮುಂದಾಗಿರುವುದನ್ನು ಖುದ್ದು ಗಮನಿಸಿದ್ದೇನೆ. ವಿಷಮತೆಯನ್ನು ಉಗುಳುತ್ತಿರುವವರು ಸಂಘದವರಲ್ಲ. ವಿಷಮತೆಯ ಘಟನೆ ನಡೆದಾಗ ಹಿಂದೆ ಮುಂದೆ ವಿಚಾರ ಮಾಡದೇ ಇದಕ್ಕೆ ಸಂಘವೇ ಹೊಣೆ ಎಂದು ತೀರ್ಪು ಕೊಡುವ ಕ್ರೇಜಿವಾಲ್‌, ರಾವುಲ್, ಮುಂತಾದ ನೈಜ ಅರೆಬೆಂದ ಪುಢಾರಿಗಳೇ ನಮ್ಮ ದೇಶದ ಸಮಸ್ಯೆಗಳಿಗೆ ಮೂಲ. ಅವರ ಪರಿವರ್ತನೆಗೂ ಸಂಘವು ಪ್ರಯತ್ನಿಸುತ್ತದೆ ಎಂಬ ನಿರೀಕ್ಷೆ ನನ್ನದು!

ನಿಜ ವಿಷಯವೆಂದರೆ ಈ `ಪ್ರಚಾರಕ’ರೆಲ್ಲರೂ ಪ್ರಚಾರ ಬಯಸದವರು! ಇವರು ದೇಶದ ಹಿರಿಮೆ – ಗರಿಮೆಯ ವಿಷಯ ಪ್ರಚಾರಕರೇ ಹೊರತು, ಸಮಾಜವನ್ನು ಹದಗೆಡಿಸುವ ವಿಷ ಪ್ರಚಾರಕರಲ್ಲ.

ದಾದ್ರಿ, ದಲಿತ ಮಕ್ಕಳ ದಹನ – ಎಲ್ಲವೂ ನಿಜವೇ; ಘೋರವೇ. ಸಂಘ ಪ್ರೇರಿತ ಪಕ್ಷವು ಅಧಿಕಾರದಲ್ಲಿ ಇದ್ದಾಗಲೇ ಈ ಘೋರತ್ವದ ಅರಿವಾಗಿರುವುದು ಮಾತ್ರ ಹುಚ್ಚುತನ! ಇಂಥ ಹೃದಯ ವಿದ್ರಾವಕ ಘಟನೆಗಳು ನಡೆಯುವುದಕ್ಕೆ ೬೦ ವರ್ಷಗಳ ಕಾಲ ಸಮಾಜದಲ್ಲಿ ಜಾತೀಯ ರಾಜಕಾರಣವನ್ನು ಹಬ್ಬಿಸಿ, ಭ್ರಷ್ಟಾಚಾರದ ಪೆಡಂಭೂತಗಳನ್ನು ಸೃಷ್ಟಿಸಿ, ಸಮಾಜದ ದಮನಿತ ವರ್ಗಗಳಿಗೆ ಸವಲತ್ತುಗಳನ್ನು ಕೊಡುವಲ್ಲಿ ಅಸೀಮ ನಿರ್ಲಕ್ಷ ವಹಿಸಿದ ಅಧಿಕಾರಶಾಹಿಯನ್ನು ಬೆಳೆಸಿದ ಅಪಕೀರ್ತಿ ಕಾಂಗ್ರೆಸಿಗಲ್ಲದೆ ಇನ್ನಾರಿಗೆ ದಕ್ಕಬೇಕು? ಈ ದೇಶದ ಸಮಸ್ಯೆಗಳಿಗೆ ದಶಕಗಳ ಕಾಲದ ಮೈಮರೆತ ಕುಟುಂಬಕೇಂದ್ರಿತ ರಾಜಕೀಯ ಕಾರಣವೋ? ಒಂದು ವರ್ಷದ ಹಿಂದೆ ಬಂದ ಮೋದಿ ಸರ್ಕಾರವೇ ಹೊಣೆಯೋ? ಹತ್ತು ವರ್ಷಗಳ ಮೌನಾಡಳಿತವು ಕೇಂದ್ರ ಸರ್ಕಾರದ ಎಲ್ಲ ಕೀಲುಗಳನ್ನೂ ಹೇಗೆ ಮುರಿದಿದೆ ಎಂಬುದನ್ನು ನೀಡಿದವರಿಗೇ ಗೊತ್ತು, ಮೋದಿ ಏನು ಮಾಡುತ್ತಿದ್ದಾರೆ ಎಂಬುದು..

ಮೈಗವ್‌ ಎಂಬ ಜನಸಂವಾದ ಕೇಂದ್ರವನ್ನೇ ತೆಗೆದುಕೊಳ್ಳಿ. ೧೩ ಲಕ್ಷ ಸದಸ್ಯರನ್ನು ಹೊಂದಿರುವ ಈ ವೇದಿಕೆಯೊಂದೇ ಸಾಕು, ಮೋದಿಯವರು ಹೇಗೆ ಜನರೊಂದಿಗೆ ಸಂವಾದ ಬೆಳೆಸಲು ಬಯಸಿದ್ದಾರೆ ಎಂಬುದು ಗೊತ್ತಾಗುತ್ತದೆ. ನಾನು ಮೈಗವ್‌ಗೆ ನಿನ್ನೆ ಬರೆದ ಒಂದು ಪತ್ರಕ್ಕೆ ಎರಡೇ ನಿಮಿಷಗಳಲ್ಲಿ ಉತ್ತರ ಬಂತು! ಅದರಲ್ಲಿ ಸಹಾಯಕ್ಕಾಗಿ ಲ್ಯಾಂಡ್‌ಲೈನ್‌ ಅಲ್ಲದೆ ಮೊಬೈಲ್‌ ಸಂಖ್ಯೆಯೂ ಇತ್ತು. ನೋಡೋಣ ಎಂದು ಕರೆ ಮಾಡಿದೆ; ತಕ್ಷಣವೇ ಕರೆಯನ್ನು ಸ್ವೀಕರಿಸಿ ಮತ್ತಷ್ಟು ಸಹಾಯ ನೀಡಿದರು. ಡಿಜಿಟಲ್‌ ಇಂಡಿಯಾ ಎಂದರೆ ರಾಜೀವ್‌ ಗಾಂಧಿಯ ಯತ್ನದ ಮುಂದುವರಿಕೆ ಎಂದು ಸ್ಯಾಮ್‌ ಪಿತ್ರೋಡ ಹೇಳಿದ್ದಾರೆಂದು ಓದಿದೆ. ಆದರೆ ಆ ಕಾಲದ ಡಿಜಿಟಲ್‌ ಇಂಡಿಯಾವನ್ನು ಕೊಂದು ಹೂತವರೂ ರಾಜೀವ್‌ ನಂತರದ ಕಾಂಗ್ರೆಸ್‌ ಸರ್ಕಾರಗಳೇ!

ರಾ.ಸ್ವ.ಸಂಘವು  ಅವಕಾಶವಾದಿ ಸಂಘಟನೆಯಲ್ಲ; ಬಿಡಿ ಘಟನೆಗಳನ್ನು ಮಾತ್ರವೇ ನೋಡಿ  ತೀರ್ಮಾನಿಸುವ ತರಾತುರಿ ಅದಕ್ಕಿಲ್ಲ. ಮನಸ್ಸಿನ ಬದಲಾವಣೆಯೇ ಅದರ ಮೂಲ ಕಾರ್ಯತಂತ್ರ; ವ್ಯಕ್ತಿತ್ವಗಳನ್ನು ರೂಪಿಸುವುದೇ ಅದರ ಮೂಲಮಂತ್ರ. ಇಷ್ಟಾಗಿಯೂ ಸಂಘದ ಹೆಸರು ಹೇಳಿಕೊಂಡು ವೈಯಕ್ತಿಕವಾಗಿ ದುರ್ನಡತೆ ತೋರುವವರನ್ನೂ ಗಮನಿಸಿ ಸೂಕ್ತ ಕಾಲದಲ್ಲಿ ಸೂಕ್ತಕ ಕ್ರಮವನ್ನು ತೆಗೆದುಕೊಳ್ಳುವ ಹೊಣೆಗಾರಿಕೆಯ ಅರಿವೂ ಸಂಘಕ್ಕಿದೆ. ಹಾಗೆಂದು ಸಂಘದ ಹಿರಿಯ ಪ್ರಚಾರಕರೊಬ್ಬರು ಅರೆ ಸಾರ್ವಜನಿಕ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಭಾರತದಂತಹ ವಿಶಾಲ ಸಮಾಜದಲ್ಲಿ ಸಾಮರಸ್ಯವನ್ನು ತರುವುದು ಸುಲಭದ ಕೆಲಸವಲ್ಲ. ಅದರಲ್ಲೂ ಸಾಮರಸ್ಯ ತರುವ ತುಟುತುದಿಯ ಮಾತುಗಾರರು ಪ್ರಶಸ್ತಿಗಳನ್ನು ಹಿಂದಿರುಗಿಸುವುದೇ ಸಮಾಜದಲ್ಲಿ ಬದಲಾವಣೆ ತರುತ್ತದೆ ಎಂಬ ಮೂಢನಂಬಿಕೆಯನ್ನು ಪೋಷಿಸುತ್ತಿರುವಾಗ! ಹಿಂದುಳಿದ ಸಮಾಜದಲ್ಲಿ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಉದ್ಯೋಗಕ್ಕಾಗಿ ಯತ್ನಿಸುವುದೇ ನೈಜ ಬದಲಾವಣೆ. ಇಂಥ ಸದ್ಬುದ್ಧಿಯನ್ನು ಆ ದುರ್ಗೆಯು ಆಯುಧಪೂಜೆಯ ಈ ದಿನ ಎಲ್ಲರಿಗೂ ಕೊಡಲಿ ಎಂದು ಹಾರೈಸುತ್ತ ನನ್ನ ಈ ಇನ್‌ಸ್ಟಂಟ್‌ ಬ್ಲಾಗನ್ನು ಕೊನೆಗೊಳಿಸುತ್ತೇನೆ.

Share.
Leave A Reply Cancel Reply
Exit mobile version