ನಾನು ಮೈಸೂರಿನಲ್ಲಿ ಇದ್ದ ನಾಲ್ಕು ವರ್ಷಗಳ ಕಾಲ ಹತ್ತಾರು ಬಾರಿ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ಬಸ್ಸು ಅಥವಾ ರೈಲಿನಲ್ಲಿ ರಾಮನಗರವನ್ನು ಹಾದುಹೋಗುವಾಗ ಅಂಥಾದ್ದೇನೂ ಮಹತ್ವ ಅನ್ನಿಸುತ್ತಿರಲಿಲ್ಲ.
ರಾಮನಗರದ ಪತ್ರಕರ್ತ ಮತ್ತು ಜನಪದ ಸಂಶೋಧನಾ ವಿದ್ಯಾರ್ಥಿ ಶ್ರೀ ರುದ್ರೇಶ್ವರ ಅವರ ಅಜ್ಜ ಅಜ್ಜಿ ಸ್ಮರಣಾರ್ಥ ಪ್ರಗತಿ ವಿದ್ಯಾಸಂಸ್ಥೆಗೆ ಬ್ಯಾಂಡ್‌ಸೆಟ್ ವಿತರಣಾ ಕಾರ್ಯಕ್ರಮಕ್ಕೆ ಫೆ. 23 ರಂದು ಹೋಗಿದ್ದೆ. ಈ ಕಾರ್ಯಕ್ರಮದಲ್ಲಿ ಹಲವು ನಾಗರಿಕರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಮೂಲಕ ನಾನು ರಾಮನಗರದ ಹೃದಯವನ್ನೇ ನೋಡಿದಷ್ಟು ಸಂತಸವಾಯಿತು.
ಈ ಬಗ್ಗೆ ಪೋಸ್ಟ್ ಹಾಕುವುದಾದರೆ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ನಾಗರಿಕರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನೂ ಹಾಕಲೇಬೇಕು ಎಂದು ನಿರ್ಧರಿಸಿದ್ದೆ. ಸನ್ಮಾನಿತರ ಕಿರು ಪರಿಚಯ ಇಲ್ಲಿದೆ.
ರಂಗಭೂಮಿ ರತ್ನ ಎನ್. ಶಾಂತಮ್ಮ
ಕನ್ನಡದ ರಂಗಭೂಮಿ ಕ್ಷೇತ್ರಕ್ಕೆ ನೀವು ನೀಡಿರುವ ಕೊಡಗೆ ಅನನ್ಯವಾಗಿದೆ. ಬಾಲನಟಿಯಾಗಿ ಅಭಿನಯಿಸಲು ಪ್ರಾರಂಭಿಸಿದ ಅವರು ಗುಬ್ಬಿ ಕಂಪನಿಯ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವಿವಿಧ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿದ್ದಾರೆ. ಕರ್ನಾಟಕ ರಾಜ್ಯದ ವಿವಿಧೆಡೆ ಸಾವಿರಾರು ಪ್ರದರ್ಶನಗಳನ್ನು ನೀಡಿ, ಕನ್ನಡ ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಮಾಧ್ಯಮ ರತ್ನ ತ್ಯಾಗರಾಜ
ಶ್ರೀ ತ್ಯಾಗರಾಜ ಅವರು ರಾಮನಗರ ತಾಲ್ಲೂಕಿನ ಪೇಟೆ ಕುರುಬರಹಳ್ಳಿ ಗ್ರಾಮದವರು. ಇವರ ತಂದೆ ಡಿ. ಪುಟ್ಟಸ್ವಾಮಿಗೌಡ, ತಾಯಿ ಪುಟ್ಟತಾಯಮ್ಮ. ಇವರಿಗೆ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ತ್ಯಾಗರಾಜ ಅವರು ಕೆಜಿಐಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಮುಖ್ಯ ಮತ್ತು ಆಸಕ್ತಿಯ ಕ್ಷೇತ್ರ ಪತ್ರಿಕೋದ್ಯಮ. ಇವರು 33 ವರ್ಷಗಳ ಕಾಲ ನಿರಂತರವಾಗಿ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ನ್ಯಾಯನಿಷ್ಠ, ಸತ್ಯನಿಷ್ಠ, ನಿಷ್ಪಕ್ಷಪಾತ, ನಿಷ್ಪ್ರಹ ವರದಿಗಳು ಎಂತವರನ್ನು ತಮ್ಮತ್ತ ಆಕರ್ಷಿಸುತ್ತವೆ. ಇವರದೇ ಆದ ಓದುವ ವರ್ಗವಿದೆ. ಇವರ ನಿರ್ಭೀತ ಲೇಖನಗಳು ‘ಲೇಖನಿ ಖಡ್ಗಕ್ಕಿಂತ ಹರಿತ’ ಎಂಬುದನ್ನು ಸಾಬೀತುಪಡಿಸಿವೆ. ತ್ಯಾಗರಾಜ ಅವರು ಶ್ರೀರಾಮ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ, ಅಮೇರಿಕಾದ ಕೆಆರ್ ಎಸ್ ಫೌಂಡೇಷನ್ ಸಂಸ್ಥೆಯ ಖಜಾಂಚಿಯಾಗಿ, ನಾಗರಿಕ ವೇದಿಕೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 30 ವರ್ಷಗಳಿಂದ ನಿರಂತರವಾಗಿ ‘ಆಭರಣ’ ಮಾಸ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ರಾಮನಗರ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಇರುಳಿಗ ಸಮುದಾಯದ ಪ್ರತಿಭೆ ಆರ್. ಚೇತನ್ ಕುಮಾರ್
ಆರ್. ಚೇತನ್ ಕುಮಾರ್ ಇರುಳಿಗ ಸಮುದಾಯದ ಪ್ರತಿಭೆ. ಇವರ ತಂದೆ ರಾಮಚಂದ್ರಯ್ಯ, ತಾಯಿ ರತ್ನಮ್ಮ. ದಿನಾಂಕ 14/4/1995ರಲ್ಲಿ ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಯರೇಹಳ್ಳಿ ಗ್ರಾಮದಲ್ಲಿ ಜನಿಸಿದರು. ರಾಮನಗರದ ಎಂ.ಎಚ್. ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಇವರು ಇರುಳಿಗ ಸಮುದಾಯದ ಪ್ರತಿಭೆಯಾಗಿದ್ದಾರೆ. ವಕೀಲನಾಗಿ ಹೈಕೋರ್ಟ್ ಹಾಗೂ ಕನಕಪುರ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೇವಾ ಚಟುವಟಿಕೆ ಹಾಗೂ ರಾಷ್ಟ್ರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಹಸನ್ಮುಖಿಯಾಗಿದ್ದಾರೆ. ಸಮಾಜದಿಂದ ನಿರ್ಲಕ್ಷಿಸಲ್ಪಟ್ಟಿದ್ದ ಇರುಳಿಗ ಬುಡಕಟ್ಟು ಸಮುದಾಯದಿಂದ ಆರ್. ಚೇತನ್ ಕುಮಾರ್ ವಕೀಲ ಪದವಿ ಪಡೆದಿದ್ದಾರೆ.
ಉದಯೋನ್ಮುಖ ಕಲಾವಿದೆ ಚಿತ್ರಾರಾವ್
ಚಿತ್ರರಾವ್ ಪ್ರತಿಭಾನ್ವಿತ ಕಲಾವಿದೆ. ತಂದೆ ನಾಗೇಂದ್ರರಾವ್, ತಾಯಿ ಕವಿತಾರಾವ್, ಭರತ ನಾಟ್ಯ ಪ್ರವೀಣೆ ಕಾವ್ಯ ಇವರ ಸಹೋದರಿ. ತನ್ನ ಬಾಲ್ಯದಲ್ಲಿಯೇ ಭರತ ನಾಟ್ಯ ಹಾಗೂ ಗಾಯನದಲ್ಲಿ ಆಸಕ್ತಿ ಬೆಳೆಸಿಕೊಂಡ ಚಿತ್ರಾರಾವ್ ಅವರು ಈವರೆಗೆ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ. ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಇವರು ಓದಿನ ಜೊತೆಗೆ ಮಕ್ಕಳಿಗೆ ಭರತನಾಟ್ಯವನ್ನು ಹೇಳಿಕೊಡುತ್ತಿದ್ದಾರೆ. ಇದರಿಂದ ಬರುವ ಹಣದಲ್ಲಿ ರಾಮನಗರ ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸುತ್ತಿದ್ದಾರೆ. ತನ್ನ ತಾಯಿ ಕವಿತಾರಾವ್ ಅವರು ನಡೆಸುತ್ತಿರುವ ‘ದಾರಿದೀಪ’ ವೃದ್ಧಾಶ್ರಮಕ್ಕೆ ಸಂಪೂರ್ಣ ಸಹಕಾರ ನೀಡುವ ಜೊತೆಗೆ ಇತರೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಂಸ್ಕøತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.
ಇರುಳಿಗ ಸಮುದಾಯದ ದೈತ್ಯ ಪ್ರತಿಭೆ ಡಾ.ಕೆ.ವಿ. ಕೃಷ್ಣಮೂರ್ತಿ
ನೂರಾರು ವರ್ಷಗಳ ಕಾಲ ನಾಗರಿಕ ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇರುಳಿಗ ಬುಡಕಟ್ಟು ಸಮುದಾಯದ ಕೆ.ವಿ. ಕೃಷ್ಣಮೂರ್ತಿ ಅವರು ಕರ್ನಾಟಕ ರಾಜ್ಯದಲ್ಲಿಯೇ ಪಿಎಚ್.ಡಿ ಪದವಿ ಪಡೆದ ಮೊದಲಿಗರಾಗಿದ್ದಾರೆ. ಕನಕಪುರ ತಾಲ್ಲೂಕಿನ ಕೊತಗಾನಹಳ್ಳಿ ಗ್ರಾಮದ ಡಾ.ಕೆ.ವಿ. ಕೃಷ್ಣಮೂರ್ತಿ ಅವರು ‘ಇರುಳಿಗರು: ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಸಾಮಾಜಿಕ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಧಾರ್ಮಿಕ ರತ್ನ ಕೆ.ಎಲ್. ಶೇಷಗಿರಿರಾವ್
ಕೆ.ಎಲ್. ಶೇಷಗಿರಿರಾವ್ ಅವರು ರಾಮನಗರ ಜಿಲ್ಲೆಯ ಜನತೆಗೆ ಚಿರಪರಿಚಿತ ಹೆಸರು. ಸದಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಇವರು ತಮ್ಮ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಮನಗರದಲ್ಲಿ ಶಾರದಾಂಬೆ ಪೀಠವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಇವರು ಮಾದರಿ ಜೀವನ ನಡೆಸುತ್ತಿದ್ದಾರೆ. 40 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ.
ಧಾರ್ಮಿಕ ರತ್ನ ಎ.ಎಸ್. ಕೃಷ್ಣಮೂರ್ತಿ
ರಾಮನಗರದಲ್ಲಿ ದೊಡ್ಡ ಗಣೇಶ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ವಿದ್ಯಾ ಗಣಪತಿ ಸೇವಾ ಸಂಘದ ಕಾರ್ಯದರ್ಶಿಯಾಗಿ 40 ವರ್ಷಗಳಿಂದ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿರುವ ಎ.ಎಸ್. ಕೃಷ್ಣಮೂರ್ತಿ ರವರು ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಉದಯೋನ್ಮುಖ ಸಂಘಟಕ ಎ. ಅಮಿತ್ ರಾಜ್ ಶಿವ
ಅಮಿತ್ ರಾಜ್ ಶಿವ. ಎ. ಉದಯೋನ್ಮುಖ ಸಂಘಟಕರು. ಎಲ್ಲೋ ಅಂಡ್ ರಡ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು. ಇವರು ಅಮೇರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಎಂ.ಎಫ್.ಎ. ಪದವಿಯನ್ನು ಪಡೆದಿದ್ದಾರೆ. ಇವರು ರಾಮನಗರ ಮ್ಯಾರಥಾನ್ ಆಯೋಜಕರಲ್ಲಿ ಪ್ರಮುಖರು. ರಾಮನಗರದ ರೋಟರಿ ಸಿಲ್ಕ್ ಸಿಟಿ ಸದಸ್ಯರಾಗಿ ಹಾಗೂ ರೋಟರಿ ಸಿಲ್ಕ್ ಸಿಟಿಯ ಯುವಜನ ಸೇವೆ ವಿಭಾಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿರುತ್ತಾರೆ. ಇವರು ರಾಮನಗರದಅರೆಹಳ್ಳಿಯವರು. ಇವರು ಕ್ರೀಡೆ, ರಸಪ್ರಶ್ನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಬೇಸಿಗೆ ಶಿಬಿರಗಳು ಹೀಗೆ ಹತ್ತು ಹಲವು ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತರೆ ಚಟುವಟಿಕೆಗಳಾದ ಸಮವಸ್ತ್ರ, ಕ್ರೀಡಾಸಲಕರಣೆಗಳು, ಪಾಠೋಪಕರಣಗಳ ಚಟುವಟಿಕೆಗಳ ವಿತರಣೆ ವಿಶೇಷವಾಗಿ ಯುವ ಜನ ಪ್ರೇರಿತ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅನೇಕ ಪರಿಸರ ಸ್ನೇಹಿ ಕಾರ್ಯಕ್ರಮಗಳು, ಸಾಮಾಜಿಕ ಅರಣ್ಯೀಕರಣ, ಸೀಡ್ ಬಾಲ್, ಸಾವಯವ ಕೃಷಿ. ಅಮಿತ್ ರಾಜ್ ಶಿವ ಮಾಡದ ಕೆಲಸವಿಲ್ಲ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಯುವಸಾಧನ ರತ್ನ ಕೆ.ಆರ್. ಸತೀಶ್
ಸತೀಶ್,ಆರ್.ಕೆ. ಕೃಷ್ಣಾಪುರದೊಡ್ಡಿ, ರಾಮನಗರ. ಶ್ರೀಯುತರು ರಾಮನಗರ ಜಿಲ್ಲೆ ಹಾಗೂ ದೇಶದಾದ್ಯಂತ ಚಿರಪರಿಚಿತರು. ಇವರು ತಮ್ಮ ಬಾಲ್ಯದಿಂದಲೆ ದೇಶ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು. ಇವರು ಒಬ್ಬ ಶಿಸ್ತುಬದ್ಧ, ಪ್ರಾಮಾಣಿಕ ಸ್ವಯಂಸೇವಕ, ಒಳ್ಳೆಯ ವಾಗ್ಮಿ ಹಾಗೂ ರಾಷ್ಟ್ರಭಕ್ತ. ಶ್ರೀಯುತರು ಪ್ರಸ್ತುತ ಕರ್ನಾಟಕ ವನವಾಸಿ ಕಲ್ಯಾಣ ರಾಮನಗರ ಜಿಲ್ಲಾ ಘಟಕದ ಖಜಾಂಚಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಮನಗರದ ಸ್ವದೇಶಿ ಚಳುವಳಿಯ ಪ್ರೇರಕರಾದ ಇವರು ರಾಮನಗರದಲ್ಲಿ ಮಾರುತಿ ಸ್ವದೇಶಿ ಭಂಢಾರ ಎಂಬ ಅಂಗಡಿಯನ್ನು ನಡೆಸುತ್ತಿದ್ದಾರೆ. ಇವರ ಅಂಗಡಿಯಲ್ಲಿಕೇವಲ ಸ್ವದೇಶಿ ವಸ್ತುಗಳು ಮಾತ್ರ ಮಾರಾಟವಾಗುತ್ತವೆ. ಇವರು ತಮ್ಮ ಕಾರ್ಯ ಒತ್ತಡದ ನಡುವೆಯು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ರಾಷ್ಟ್ರಭಕ್ತಿ, ಸ್ವಚ್ಚತೆ, ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ತಮ್ಮ ಭಾóಷಣದ ಮೂಲಕ ಮಕ್ಕಳನ್ನು ಯುವಕ ಯುವತಿಯರನ್ನು ಸತತವಾಗಿ ಪ್ರೇರೇಪಿಸುತ್ತಿದ್ದಾರೆ.
ಶಿಕ್ಷಣ ರತ್ನ ಎಚ್. ಕಮಲಮ್ಮ
ಶ್ರೀಮತಿ ಹೆಚ್.ಕಮಲಮ್ಮ ಮೂಲತಃ ಕುರುಬರಹಳ್ಳಿಯ ಹೊನ್ನಯ್ಯ ಹಾಗೂ ಶ್ರೀಮತಿ ವೆಂಕಟಲಕ್ಷಮ್ಮ ಅವರ ಮಗಳು. ಇವರು ಪ್ರಗತಿ ಶಾಲೆಯ ಮುಖ್ಯ ಶಿಕ್ಷಕಿ ಎಂದೇ ಚಿರಪರಿಚಿತರು. ಇವರು ಸತತ 34 ವರ್ಷಗಳಿಂದ ಕಾರ್ಯನಿರ್ವಹಿಸಿರುತ್ತಾರೆ. ಇವರು ಸದಾ ಹಸನ್ಮುಖಿ. ಇವರ ಬಳಿ ಕಲಿತ ಅನೇಕ ವಿದ್ಯಾರ್ಥಿ ವಿದ್ಯಾಥಿನಿಯರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇವರು ಸದಾ ಶಾಲೆ, ಮಕ್ಕಳು ಮತ್ತು ಅವರುಗಳ ಬೆಳವಣಿಗೆ ಬಗ್ಗೆ ಚಿಂತಿಸುತ್ತಿರುತ್ತಾರೆ. ಅವರು ತಮ್ಮ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕಿಯರ ಬಳಗವನ್ನೂ ಜೊತೆಜೊತೆಗೆ ಶಿಕ್ಷಕೇತರ ಸಿಬ್ಬಂಧಿಯನ್ನು ತಮ್ಮ ಕುಟುಂಬದ ಸದಸ್ಯರೆಂಬಂತೆ ನಡೆಸಿಕೊಳ್ಳುತ್ತಿದ್ದಾರೆ.
ಶಿಕ್ಷಣ ರತ್ನ ವಿ. ವೀರೇಶಮೂರ್ತಿ
ಶಿಕ್ಷಣ ರತ್ನ ವಿ. ವೀರೇಶಮೂರ್ತಿ ಅವರ ತಂದೆ ಡಿ.ವಿ.ವೀರಣ್ಣ, ತಾಯಿ ಡಿ.ವಿ. ಗಂಗಮ್ಮ, ಪತ್ನಿ ಎಂ.ಎನ್. ಚಂದ್ರಕಲಾ, ಮಗಳು ಡಿ.ವಿ. ಪರಿಣಿತಮೂರ್ತಿಯವರೊಂದಿಗೆ ದೊಡ್ಡಗಂಗವಾಡಿಯಲ್ಲಿ ತುಂಬು ಜೀವನವನ್ನು ನಡೆಸುತ್ತಿದ್ದಾರೆ. ಶಿಕ್ಷಕ ವೃತ್ತಿಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಾಗೂ ತಮ್ಮ ಮಗಳನ್ನು ಸರ್ಕಾರಿ ಶಾಲೆಯಲ್ಲಿಯೇ ಓದಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಉದಯೋನ್ಮುಖ ಕವಿ ಮಂಜುನಾಥ್ ದುಡ್ನಳ್ಳಿ
ಉದಯೋನ್ಮುಖ ಕವಿ ದುಡ್ನಳ್ಳಿ ಮಂಜುನಾಥ್ ಅವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ದುಡ್ನಳ್ಳಿಯವರು. ಇವರು ಹದಿನಾರು ವರ್ಷಗಳಿಂದ ಕನಕಪುರದಲ್ಲಿ ಶಿಕ್ಷಕರಾಗಿ ಸೇವೆ ಸಲಿಸುತ್ತಿದ್ದಾರೆ. ಇವರು ಸಂಪನ್ಮೂಲ ವ್ಯಕ್ತಿಯಾಗಿಯೂ ಕೆಲಸ ಮಾಡಿರುತ್ತಾರೆ. ಇವರ ಹನಿಗವನ ‘ಕವಿತೆಯೆ ಹೀಗೆ ಹುಡುಗಿಯ ಹಾಗೆ’, ಕವನ ಸಂಕಲನ ಚೆಡ್ಡಿ, ಸಣ್ಣಸಾಲ ಎಂಬ ಕಥೆಗೆ ಪ್ರಜಾವಾಣಿ ಹಾಗೂ ಇತರ ಪತ್ರಿಕೆಗಳ ಬಹುಮಾನಗಳು ಸಿಕ್ಕಿವೆ. ಇವರು ಉತ್ತಮ ಶಿಕ್ಷಕರಾಗಿದ್ದಾರೆ. ಕಾವ್ಯ ರಚನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.
ಕೊನೆಯ ಮಾತು:
ನಮ್ಮ ನಾಡಿನ ಒಂದೊಂದು ಊರಿನಲ್ಲೂ ಇಂತಹ ನಿಸ್ಪೃಹ ಸೇವಾನಿರತ ನಾಗರಿಕರು ಇದ್ದೇ ಇರುತ್ತಾರೆ. ಶ್ರೀ ರುದ್ರೇಶ್ವರ ಅವರಂತಹ ಹೊಣೆಯರಿತ ಪತ್ರಕರ್ತರು ಇರುವಲ್ಲಿ ಅಂತಹವರ ಬಗ್ಗೆ ಕೊಂಚವಾದರೂ ಗುರುತಿಸುವ ಯತ್ನ ನಡೆಯುತ್ತದೆ. ಎಲ್ಲ ಊರುಗಳಲ್ಲೂ ಈ ಯತ್ನ ನಡೆದರೆ ಎಷ್ಟು ಚೆನ್ನಾಗಿರುತ್ತೆ ಎಂದು ಅನ್ನಿಸುತ್ತದೆ.