ಎದೆಗಪ್ಪಳಿಸೋ ದೃಶ್ಯಗಳು, ಬರಡು ಬದುಕಿನ ಕಥೆಗಳು
ಎಲ್ಲೆಲ್ಲೂ ನೀರಿಲ್ಲ; ನೀರಿದ್ದವರೇ ಸಿರಿವಂತರು – ಉಳ್ಳವರು. ಕಣ್ಣು ಹಾಯಿಸಿದಷ್ಟೂ ಕೆಂಪು ಮಣ್ಣು; ಹಸಿರನ್ನೇ ಕಾಣದ ಅಕರಾಳ ವಿಕರಾಳ ಗುಡ್ಡಬೆಟ್ಟಗಳು, ಎದ್ದರೆ ಧೂಳಿನದೇ ತ್ಸುನಾಮಿ. ಬಿದ್ದರೆ ಅದೇ ವಿಷಪೂರಿತ ಜವುಗು ನೆಲ. ಇಂಥ ಪ್ರಪಂಚದಲ್ಲಿ ಚಲಿಸಲು ಇರುವ ಏಕೈಕ ವಿಧಾನ – ಅಳಿದುಳಿದ ಪೆಟ್ರೋಲ್ ಕಬಳಿಸುವ ವಾಹನಗಳು. ಕ್ಷಣಕ್ಷಣವೂ ರೋಮಾಂಚನ ಉಂಟುಮಾಡುವ ದೃಶ್ಯಗಳ `ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್’ ನೋಡುವಾಗ ಕಥೆಗೂ ಗಮನ ಹರಿಸಿದರೆ ಇದೆಂಥ ಕಾಲ್ಪನಿಕ ಜಗತ್ತು ಎಂಬ ಅಚ್ಚರಿಗೆ ನೀವು ಬಿದ್ದರೆ, ಕ್ಷಮಿಸಿ. ಇದು ವಾಸ್ತವಕ್ಕೆ ತೀರ ಹತ್ತಿರವಾದ ಕಥೆ-ವ್ಯಥೆ.
`ಹವಾಗುಣ ವೈಪರೀತ್ಯ’ ಎಂಬ ಪದವೇ ಹೆಚ್ಚಾಗಿ ಚಾಲ್ತಿಯಲ್ಲಿರದ ಎಂಬತ್ತರ ದಶಕದಲ್ಲೇ ಮ್ಯಾಕ್ಸ್ ಎಂಬ ಹೀರೋ ಉದಯಿಸಿದ್ದ; ಅದಾಗಲೇ ಟ್ರಕ್ಕುಗಳಿಂದ ಪೆಟ್ರೋಲು ಕದಿಯುವ ಪುಂಡರ ಪಡೆ ಸದಾ ಬೈಕ್‌ಗಳಲ್ಲಿ ಸಂಚರಿಸುತ್ತಿತ್ತು. ಪ್ರಪಂಚವು ಪೆಟ್ರೋಲ್ ಕೊರತೆಯಿಂದ ತತ್ತರಿಸಿತ್ತು. ಇಂಥ ಸನ್ನಿವೇಶದ ಫಲವಾಗಿ ಮ್ಯಾಡ್ ಆದ ಮ್ಯಾಕ್ಸ್‌ನನ್ನು ರೂಪಿಸಿದ ಜಾರ್ಜ್ ಮಿಲ್ಲರ್ ಈಗ `ಫ್ಯೂರಿ ರೋಡ್’ ಎಂಬ ಸರಣಿಯ ಹೊಸ ಚಿತ್ರವನ್ನು ನಿರ್ಮಿಸಿದ್ದಾರೆ; ಇಲ್ಲೂ ಅದೇ ರವರವ ಬರದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಸೆಕೆಂಡಿಗೂ ಬದಲಾಗುವಂಥ ದಾಖಲೆ ಸಂಖ್ಯೆಯ ದೃಶ್ಯಸರಣಿಗಳನ್ನು ಎಲ್ಲೂ ತೊಡಕಾಗದಂತೆ ಪೋಣಿಸಿದ ಮಿಲ್ಲರ್ ನಮ್ಮ ಕಾಲದ ಹವಾಗುಣ ಆಧಾರಿತ ಪ್ರಳಯದ ಚಂದಮಾಮ ಕಥೆಗಳನ್ನು ಹೆಣೆದ ಮಹಾ ಕನಸುಗಾರ. ಮೂರು ದಶಕಗಳಿಂದ ನನ್ನನ್ನು ಬಿಡದೆ ಕಾಡುತ್ತ ಮ್ಯಾಕ್ಸ್ ಎಂಬ ಹೀರೋನ ಮೂಲಕ ಬರುವ ದಿನಗಳ ದುರಂತವನ್ನು ಈಗಲೇ ಕಟ್ಟಿಕೊಡುವ ಆಸ್ಟ್ರೇಲಿಯನ್ ಸಿನೆಮಾ ರಂಗದ ಹರಿಕಾರ.
ಫ್ಯೂರಿ ರೋಡ್‌ನಲ್ಲಿ ಏನಿದೆ, ಏನಿಲ್ಲ? ಈ ಸಿನೆಮಾಗೆಂದೇ ೧೫೦ ಕಾರುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಯಿತು. ೧೩೮ ದಿನಗಳ ಕಾಲ ಆಸ್ಟ್ರೇಲಿಯಾದ ಮರುಭೂಮಿಯಲ್ಲಿ ಸತತವಾಗಿ ಚಿತ್ರೀಕರಣ ನಡೆಯಿತು. ಈ ಚಿತ್ರದ ಮುಖ್ಯ ವಾಹನ ವ೮ ರೇಸಿಂಗ್ ಟ್ರಕ್ಕಿನ ಮೇಲೆ ವಿಶೇಷ ಕ್ಯಾಮೆರಾ ಹೂಡಿ ೨೦ ಅಡಿ ದೂರದಿಂದಲೂ ಚಿತ್ರೀಕರಣ ಮಾಡಲಾಯ್ತು; ೩೬೦ ಡಿಗ್ರಿಗಳಲ್ಲೂ ದೃಶ್ಯಗಳು ದಾಖಲಾದವು. ಚಿತ್ರದ ರಕ್ಕಸಗಾತ್ರದ ಟ್ರಕ್ ಎರಡು ಕಲ್ಲುಬಂಡೆಗಳ ನಡುವೆ ಹಾದುಹೋಗುವ ದೃಶ್ಯವನ್ನು ಕೇವಲ ಒಂದೇ ಟೇಕ್‌ನಲ್ಲಿ ಚಿತ್ರೀಕರಿಸಲಾಯ್ತು; ಚಿತ್ರೀಕರಣದ ಪ್ರತಿ ಕ್ಷಣದಲ್ಲೂ ಸರಾಸರಿ ೧೦೦೦ ಜನರಂತೆ ಒಟ್ಟು ೧೭೦೦ ಜನರು ಕೆಲಸ ಮಾಡಿದರು. ಇಡೀ ಸಿನೆಮಾವೇ ಒಂದೇ ಒಂದು ದೃಶ್ಯದ ಚಿತ್ರೀಕರಣದಂತೆ ಭಾಸವಾಗಲು ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಾಯಿತು. ಸಿನೆಮಾದಲ್ಲಿ ಒಟ್ಟು ೨೭೦೦ ತುಂಡುಗಳಿವೆ; ಅಂದರೆ ನಿಮಿಷಕ್ಕೆ ೨೨.೫ ತುಂಡು ದೃಶ್ಯಗಳು; ಸರಾಸರಿ ಮೂರು ಸೆಕೆಂಡಿಗೆ ಒಂದು ದೃಶ್ಯ! (ಇದು ಈ ಹಿಂದೆ ಬಂದ ತುಂಡುಗಳಿದ್ದ ದ ರೋಡ್ ವಾರಿಯರ್ಸ್‌ನ ನಿಮಿಷಕ್ಕೆ ೧೩.೩೩ ತುಂಡುಗಳ ದಾಖಲೆಯನ್ನು ಮುರಿದಿದೆ). ಇದಕ್ಕಾಗಿ ಮಿಲ್ಲರ್ ಬರೆಸಿದ್ದು ೩೫೦೦ ಸ್ಟೋರಿಬೋರ್ಡ್‌ಗಳನ್ನು! (ಸಾಮಾನ್ಯವಾಗಿ ಇಂಥ ಸಿನೆಮಾ ನಿರ್ಮಾಣದಲ್ಲಿ ಪ್ರತಿಯೊಂದೂ ಫ್ರೇಮನ್ನು ಸರಿಯಾಗಿ ಕಲ್ಪಿಸಿಕೊಳ್ಳಲು ಒಂದೊಂದು ಚಿತ್ರಫಲಕವನ್ನು ಬರೆಸುತ್ತಾರೆ). ಹಲವು ದೃಶ್ಯಗಳಲ್ಲಿ ಸೆಕೆಂಡಿಗೆ ೨೪ಕ್ಕಿಂತ ಕಡಿಮೆ ಫ್ರೇಮ್‌ಗಳನ್ನು ಬಳಸಲಾಯಿತು. ಇಂಥ ಪ್ರತಿಯೊಂದೂ ನಿರ್ಧಾರವನ್ನೂ ನಿರ್ದೇಶಕ ಜಾರ್ಜ್ ಮಿಲ್ಲರ್ ಸ್ವತಃ ಎಲ್ಲ ದೃಶ್ಯಗಳನ್ನೂ ನೋಡಿ ತೆಗೆದುಕೊಂಡರು. ರಾತ್ರಿಯ ದೃಶ್ಯಗಳನ್ನು ಕಡುಬಿಸಿಲಿನಲ್ಲೇ ತೆಗೆದು ವಿಶೇಷ ಸಂಸ್ಕರಣೆ ಮಾಡಲಾಯಿತು. ಟ್ರಕ್ಕಿಗೆ ಪ್ರಾಣಿಯಂಥ ಗುಣವನ್ನು ತುಂಬಲು ತಿಮಿಂಗಿಲದ ಕರೆಗಳನ್ನೂ ಬೆರೆಸಲಾಯಿತು.
ಒಟ್ಟು ೪೮೦ ಗಂಟೆಗಳ ಚಿತ್ರೀಕರಣವನ್ನು ಎರಡೇ ಗಂಟೆಗಳಿಗೆ ಇಳಿಸಿ, ಕ್ಷಣಕ್ಷಣವನ್ನೂ ಅದ್ಭುತ ಅನುಭವವಾಗುವಂತೆ ಮಾಡಿದ್ದು ಜಾರ್ಜ್ ಮಿಲ್ಲರ್‌ನ ಪತ್ನಿ ಮಾರ್ಗರೆಟ್ ಸಿಕ್ಸೆಲ್. ಒಲಿಂಪಿಕ್ ಕ್ರೀಡಾಳುಗಳೂ ಸೇರಿದಂತೆ ೧೫೦ ಸ್ಟಂಟ್‌ಗಳು ಈ ಚಿತ್ರೀಕರಣದಲ್ಲಿ ಭಾಗವಹಿಸಿದರು. ಇದರಲ್ಲಿರುವ ಬೈಕ್ ಸಾಹಸಗಳನ್ನು ಮಾಡಿದವರು ನಿಜವಾಗಿಯೂ ಬೈಕ್ ಸರ್ಕಸ್ ಮಾಡುವವರೇ. ಫ್ಯೂರಿ ರೋಡ್‌ನಲ್ಲಿ ಮ್ಯಾಕ್ಸ್‌ಗೆ ಇರುವ ಒಟ್ಟು ಸಂಭಾಷಣೆಗಳು ಕೇವಲ ೬೩ ವಾಕ್ಯಗಳು. ಫ್ಯೂರಿಯೋಸಾಗೆ ಇರೋದು ೮೦. ಸಿನೆಮಾದಲ್ಲಿ ಒಟ್ಟು ಕೇವಲ ೩೯೪೪ ಪದಗಳ ಸಂಭಾಷಣೆ ಇದೆ. ಕಡಿಮೆ ಪದಗಳ ಸಿನೆಮಾದಲ್ಲೂ ಇದೊಂದು ದಾಖಲೆ.
ಸಿನೆಮಾ ಚಿತ್ರೀಕರಣದ ಅದ್ಭುತ ಕಥೆಯನ್ನು ಇಲ್ಲಿ ನೋಡಿ: https://www.youtube.com/watch?v=yKAHGwCyamc (ಕ್ಷಮಿಸಿ, ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಇಬ್ಬರು ಸಾಹಸ ನಟರನ್ನೇ ಸರಿಯಾಗಿ ಜಂಪ್ ಮಾಡಿಸಲಾಗದ ನಾವು ಈ ಸಿನೆಮಾದ ಸ್ಟಂಟ್‌ಗಳನ್ನು ತಿಕ ಮುಚ್ಚಿಕೊಂಡು ನೋಡಬೇಕಷ್ಟೆ… ಕಳೆದುಹೋದ ಆ ಎರಡು ಜೀವಗಳಿಗೆ ನನ್ನ ನಮನಗಳು )
೧೯೯೮ರಲ್ಲೇ ಈ ಕಥೆಯ ಹಕ್ಕುಗಳನ್ನು ಖರೀದಿಸಿದ ಜಾರ್ಜ್ ಮಿಲ್ಲರ್ ೨೦೧೨ರಲ್ಲಿ ಚಿತ್ರೀಕರಣ (ಇದು ಶುರುವಾಗಿದ್ದು ನಮೀಬಿಯಾದಲ್ಲಿ!) ಶುರು ಮಾಡಿ . . . ೨೦೧೫ರ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಿದರು. ಅವತ್ತಿನಿಂದ ಇವತ್ತಿನವರೆಗೂ ನಾನು ಮ್ಯಾಡ್‌ಮ್ಯಾಕ್ಸ್ ಫ್ಯೂರಿಯ ಮಾಟದಲ್ಲೇ ಇದ್ದ ನಾನು ಸುಧಾರಿಸಿಕೊಂಡು ಮಿಲ್ಲರ್‌ರ ಚಿತ್ರದಲ್ಲಿ ಲೋಪಗಳನ್ನೇ ಕಾಣದೆ ಕಕ್ಕಾಬಿಕ್ಕಿಯಾಗಿದ್ದೇನೆ. ಈಗ ಈ ಸಿನೆಮಾ ಕೇಬಲ್ ಟಿವಿಯಲ್ಲೂ ಬಂದಿದೆ.
ಅತ್ಯುತ್ತಮ ಪೋಷಾಕು, ಅತ್ಯುತ್ತಮ ನಿರ್ಮಾಣ ವಿನ್ಯಾಸ, ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಧ್ವನಿಸಂಕಲನ, ಅತ್ಯುತ್ತಮ ಧ್ವನಿಮಿಶ್ರಣ – ಹೀಗೆ ೨೦೧೬ರ ಆಸ್ಕರ್‌ನಲ್ಲಿ ಆರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಸಿನೆಮಾದ ಕಥೆಯಾದರೂ ಏನು? ತುಂಬಾ ಸರಳ. ನೀರನ್ನೇ ನಿಯಂತ್ರಿಸಿದ ಖಳನ ಹಲವು ಅಂತಃಪುರದ ಐವರು ಬಂಧಿತ ಪತ್ನಿಯರನ್ನು ತನ್ನ ನೆನಪಿನಲ್ಲೇ ಇರುವ ಊರಿಗೆ ಕರೆದೊಯ್ಯು ಫ್ಯೂರಿಯೋಸಾ ಎಂಬ ವನಿತೆಯ ಧೀರ ಕಥೆ ಇಲ್ಲಿದೆ. ಇಲ್ಲಿನ ಖಳನಾಯಕ ಇಮ್ಮೋರ್ಟನ್ ಜೋ ತನ್ನ ಮಕ್ಕಳನ್ನೇ ಸೈನಿಕರನ್ನಾಗಿ ಮಾಡಿ ಯುದ್ಧರಂಗಕ್ಕೆ ಕಳಿಸುವಾತ; ಸತ್ತರೆ ವೀರಸ್ವರ್ಗ ಎಂದು ನಂಬಿಸುವಾತ. ಈ ಚಿತ್ರದ ಹೀರೋ ಎನ್ನಬಹುದಾದ ಟಾಮ್ ಹಾರ್ಡಿಯನ್ನೂ ಮೀರಿಸಿದ ನಟನೆಯನ್ನು ತೋರಿದ ಫ್ಯೂರಿಯೋಸಾ ಪಾತ್ರದ ಶಾರ್ಲೀಸ್ ಥೆರಾನ್‌ರನ್ನು ಎಷ್ಟು ಅಭಿನಂದಿಸಿದರೂ ಕಡಿಮೆಯೇ.
ದ ಡೇ ಆಫ್ಟರ್ ಟುಮಾರೋ, ಟ ಲೊರಾಕ್ಸ್, ಇಂಟರ್‌ಸ್ಟೆಲ್ಲಾರ್ – ಹೀಗೆ ಹವಾಗುಣ ವೈಪರೀತ್ಯದ ಸುತ್ತ ಕಥೆ ಹೆಣೆದಿರುವ ಇತರೆ ಸಿನೆಮಾಗಳೂ ಬಂದಿವೆ. ಆದರೆ ಇಷ್ಟು ಮನರಂಜನಾತ್ಮಕವಾಗಿ, ಇಷ್ಟು ರೋಚಕವಾಗಿ, ಇಷ್ಟು ಪ್ರಭಾವಿಯಾಗಿ, ಇಷ್ಟು ರಮ್ಯವಾಗಿ ಬೇರಾರು ಸಿನೆಮಾ ಮಾಡಿಲ್ಲ. ಮುಂದಿನ ದಿನಗಳಲ್ಲಿ ಹವಾಗುಣ ವೈಪರೀತ್ಯದ ಬಗ್ಗೆ ಇನ್ನಷ್ಟು ಸಿನೆಮಾಗಳು ಬರಲಿವೆ; ಆಗ ಬಹುಶಃ ನೈಜ ತಾಣಗಳಲ್ಲೇ ಶೂಟಿಂಗ್ ನಡೆಯಬಹುದು! `ನಾನು ತೋರಿಸಿದ ದೃಶ್ಯಗಳ ಬಗ್ಗೆ ಮನವರಿಕೆ ಮಾಡೋದೇ ಬೇಕಿಲ್ಲ. ವೀಕ್ಷಕರು ಅಲ್ಲಲ್ಲಿ ಇದನ್ನೆಲ್ಲಾ ನೋಡಿಯೇ ಇದ್ದಾರೆ’ ಎಂದು ಮಿಲ್ಲರ್ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಫ್ಯೂರಿ ರೋಡ್ ಎಂದರೆ `ಸಿಟ್ಟಿಗೆದ್ದ ರಸ್ತೆ’ ಎಂದೇ ಹೇಳಬಹುದೇನೋ. ಮುಂದೊಂದು ದಿನ ನಮ್ಮ ಮನುಕುಲದ ಹಾದಿ ಹೀಗೆಯೇ ಫ್ಯೂರಿ ರೋಡ್ ಆಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿರೋ ಈ ಹೊತ್ತಿನಲ್ಲಿ ಜಾರ್ಜ್ ಮಿಲ್ಲರ್ ತಂದ ಈ ಸಿನೆಮಾ, ದೈತ್ಯ ಪರದೆಯ ಅಚ್ಚರಿ, ದೇಹದ ಅಂಗಾಂಗಗಳೆಲ್ಲವೂ ನಡುಗುವಂತೆ ಮಾಡುವ ಧ್ವನಿ, ಚಿಕ್ಕಪುಟ್ಟ ಪಾತ್ರಗಳಿಂದ ಹಿಡಿದು ಎಲ್ಲರೂ ವ್ಹಾ ವ್ಹಾ ಎನ್ನುವಂತೆ ನಟಿಸಿದ ಪರಿ – ಎಲ್ಲವನ್ನೂ ಆನಂದಿಸುತ್ತಲೇ ಅದರ ಹಿಂದಿನ ಕರಾಳ ಭವಿಷ್ಯವನ್ನೂ ಅರಿತರೆ ಒಂದಷ್ಟು ಒಳ್ಳೆಯದು.
ಇಲ್ಲವಾದರೆ ಫ್ಯೂರಿಯೋಸಾಳ ಬಾಲ್ಯದ ಊರೇ ನಾಶವಾಗಿ ಅಳಿದುಳಿದ ಸಾಹಸಿ ಅಜ್ಜಿಯರ ಜೋಳಿಗೆಯಲ್ಲಿ ಇರುವಷ್ಟು ಸಸ್ಯಬೀಜಗಳೂ ಉಳಿಯುತ್ತದೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ.
ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್ – ಇದು ಹದಿಹರೆಯದ ಮಕ್ಕಳಿಗೂ ತೋರಿಸಲೇಬೇಕಾದ ಸಿನೆಮಾ. (ಸಿನೆಮಾವು ಪಿಜಿ-೧೩ ಮತ್ತು ಆರ್ ವರ್ಗ – ಹೀಗೆ ಎರಡು ಆವೃತ್ತಿಗಳಲ್ಲಿ ಬಿಡುಗಡೆಯಾಗಿದೆಯಂತೆ). ಮನರಂಜನೆಯ ಜೊತೆಗೇ ಮನುಕುಲಕ್ಕೆ ತುರ್ತಾಗಿ ತಲುಪಿಸಬೇಕಾದ ಗಂಭೀರ ಸಂದೇಶವನ್ನೂ ಹೊಂದಿರುವ ಈ ಸಿನೆಮಾ, ನನ್ನ ಮಟ್ಟಿಗೆ ಜೀವಮಾನದಲ್ಲಿ ನೋಡಿದ ಕೆಲವೇ ಅತ್ಯುತ್ತಮ, ಪ್ರಭಾವಶಾಲಿ ಸಿನೆಮಾಗಳಲ್ಲಿ ಒಂದು.
- ಈ ಸಿನೆಮಾವು ಯಾವುದೇ ಸ್ಪೆಶಲ್ ಎಫೆಕ್ಟ್ ಇಲ್ಲದೆಯೂ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ ಎನ್ನುವುದಕ್ಕೆ ಈ ವಿಡಿಯೋ ನೋಡಿ: https://www.youtube.com/watch?v=ent02yItm60