೧೯೮೭ರಿಂದ ೨೦೦೭ರವರೆಗೆ ಹತ್ತಿರವಿದ್ದೂ ದೂರ ನಿಂತ ಕಟು ಅನುಭವ. ೨೦೦೭ರಿಂದ ನಿನ್ನೆವರೆಗೆ ಮಧುರ ನೆನಪುಗಳ ಸಾಲು. ಇಂಥ ಕಟುಮಧುರ ಸಹವಾಸದ ಭಾಗ್ಯವನ್ನು ಕೊಟ್ಟ ಶ್ರೀ ಮೈ ಚ ಜಯದೇವರು ಇನ್ನಿಲ್ಲ.

ಮೂವತ್ತು ವರ್ಷಗಳ ಹಿಂದೆ (೧೯೮೭ ಜುಲೈ) ಒಂದು ದಿನ ರಾಷ್ಟ್ರೋತ್ಥಾನ ಸಂಶೋಧನಾ ವೇದಿಯಲ್ಲಿ ಪತ್ರಿಕಾ ತುಣುಕುಗಳನ್ನು ಕತ್ತರಿಸಿ ವರ್ಗೀಕರಿಸಿ ಇಡುವ, ಗ್ರಂಥಾಲಯವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಿ ಕೆಲಸ ಕೊಟ್ಟವರು ಜಯದೇವ್‌. ಬದುಕು ಮೂರಾಬಟ್ಟೆಯಾಗಿ, ಉಣ್ಣಲು ಮೂರು ಕಾಸೂ ಇರದಿದ್ದ ಆ ದಿನಗಳಲ್ಲಿ ತಿಂಗಳಿಗೆ ೫೦೦ ರೂ. ಸಂಬಳ; ಓಡಾಡಲು ಬೈಸಿಕಲ್; ಮೂರು ಹೊತ್ತು ಊಟ, ತಿಂಡಿ; ಮಲಗಲು ಜಾಗ – ಇದೆಲ್ಲ ಸಿಕ್ಕಿದ್ದೇ ದೊಡ್ಡ ಭಾಗ್ಯ ಅನ್ನಿಸಿಬಿಟ್ಟಿತ್ತು. ಐದನೆಯ ಮಹಡಿಯಲ್ಲಿ ಒಬ್ಬನೇ ಕೂತು ಸಾವಿರಾರು ಪತ್ರಿಕಾ ತುಣುಕುಗಳನ್ನು ನನ್ನ ಮನಸ್ಸಿಗೆ ಬಂದಂತೆ ಆಯ್ದು ಕತ್ತರಿಸಿ, ಖಾಕಿ ಕಾಗದಕ್ಕೆ ಅಂಟಿಸಿ ವರ್ಗೀಕರಿಸಿ ಇಡತೊಡಗಿದೆ. ಜೊತೆಗೇ ಉತ್ಥಾನದ ಸಂಪಾದಕರು ವಹಿಸಿಕೊಟ್ಟ ವಿಜ್ಞಾನ ಲೇಖನಗಳನ್ನು ಬರೆಯತೊಡಗಿದೆ.

ಇದಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ದಿನಾಲೂ ಐದೂವರೆಗೆ ಪ್ರಾತಸ್ಮರಣೆಗೆ ಸಿದ್ಧವಾಗಬೇಕು ಎಂಬ ಕಠೋರ ನಿಯಮವನ್ನು ಪಾಲಿಸುವುದು ಕಷ್ಟವಾಗತೊಡಗಿತು. ಸೈಕಲ್‌ ಇದ್ದರೂ ಸಿನೆಮಾ ನೋಡಲು ಬಿಡದಿರುವುದು ಅಸಹನೆ ಹುಟ್ಟಿಸತೊಡಗಿತು. ೨೨ರ ಹರೆಯದ ಎಲ್ಲ ಸಿಟ್ಟು ಸೆಡವುಗಳು ನನ್ನೊಳಗೆ ಹೆಡೆಯಾಡುತ್ತಿದ್ದವು. ಸರಿ, ನೇರವಾಗಿ ಕೇಳಿಯೇ ಬಿಡೋಣ ಎಂದು ಅವರಲ್ಲಿಗೆ ಹೋದೆ. `ಪ್ರೆಸ್‌ ಕ್ಲಿಪಿಂಗ್‌ ಮಾಡೋದು ಮುಗಿದಿದೆಯಾ? ಅದನ್ನು ಮುಗಿಸದೇ ಸಿನೆಮಾಗೆ ಹೋದರೆ ಹೇಗೆ?’ ಎಂದು ಜಯದೇವ್‌ ಪ್ರಶ್ನಿಸಿದರು. `ಈ ಪ್ರೆಸ್‌ ಕ್ಲಿಪಿಂಗ್‌ ಮುಗಿಯೋದೇ ಇಲ್ಲ. ಹಾಗಂತ ನಾನು ಸಿನೆಮಾ ನೋಡದೇ ಇರಕ್ಕಾಗಲ್ಲ’ ಎಂದು ವಾದಿಸಿದೆ. ಬೆಳಗ್ಗೆ ಎದ್ದು ಬರಲಾಗುವುದಿಲ್ಲ ಎಂದು ಅವರಿಗೆ ಶಾಕ್‌ ಆಗುವಂತೆಯೇ ಘೋಷಿಸಿದೆ. ಅವರು ಮತ್ತೇನೂ ಹೇಳಲಿಲ್ಲ.

ನಾನು ರೆಬೆಲ್‌ ಮಾದರಿಯಲ್ಲಿ ಇರತೊಡಗಿದೆ. ಬೆಳಗ್ಗೆ ಏಳು ಗಂಟೆಗೆ ಎದ್ದು ಆರಾಮಾಗಿ ಬಿಸಿನೀರು ಸ್ನಾನ ಮಾಡಿ ನಂಜುಂಡಯ್ಯ ಮಾಡಿದ ತಿಂಡಿ ಕತ್ತರಿಸುವುದು. ಎಂಟೂವರೆಗೆಲ್ಲ ಕೆಲಸಕ್ಕೆ ಹಾಜರು. ಸಂಜೆ ಹಾಗೇ ಸೈಕಲ್ಲಿನಲ್ಲಿ ಎಬಿವಿಪಿ ಆಫೀಸಿಗೋ, ಸಿನೆಮಾಗೋ ( ನನಗಿದ್ದಿದ್ದು ಅವೆರಡೇ ಆಯ್ಕೆಗಳು!) ಹೊರಡುವುದು. ರಾತ್ರಿ ಎಲ್ಲಾದರೂ ಚಿತ್ರಾನ್ನ ತಿಂದು ಬಂದು ಮಲಗುವುದು..

ಈ ಮಧ್ಯೆ ಎರಡು ತಿಂಗಳುಗಳ ಕಾಲ ಶ್ರೀ ಹೊ ವೆ ಶೇಷಾದ್ರಿಯವರೂ ಐದನೇ ಮಹಡಿಯ ಒಂದು ವಿಶಾಲ ಕೊಠಡಿಗೆ ಬಂದು ಇರಬೇಕೆ? `ಎ ವಿಜನ್‌ ಇನ್‌ ಆಕ್ಷನ್‌’ ಪುಸ್ತಕವನ್ನು ಬರೆಯಲು ಅವರು ಅಲ್ಲಿಗೆ ಬಂದಿದ್ದರು. ಮೊದಲೇನೋ ನಾನೇ ಅವರನ್ನು ನೋಡಿಕೊಳ್ಳಬೇಕೆಂದು ಹೇಳಲಾಗಿತ್ತು. ಆದರೆ ಒಂದು ವಾರದ ನಂತರ ಶೇಷಾದ್ರಿಯವರೇ ನನ್ನನ್ನು ನೋಡಿಕೊಳ್ಳತೊಡಗಿದರು. ನನಗೆ ಎಚ್ಚರವಾಗದಂತೆ ಮುಂಜಾನೆ ನಾಲ್ಕಕ್ಕೆಲ್ಲ ಎದ್ದು ಸ್ನಾನ ಮುಗಿಸಿ, ಶಾಲು ಹೊದ್ದು ಶಾಖೆಗೆ ಸಿದ್ಧರಾಗಿ , ಹಾದಿಗೆ ಅಡ್ಡಲಾಗಿ ಹಾಯಾಗಿ ಮಲಗಿದ್ದ ನನ್ನನ್ನು ಹಾರಿಕೊಂಡು ಹೋಗುತ್ತಿದ್ದರು. ಎಂದೂ ಅವರು ನನ್ನನ್ನು ಎಬ್ಬಿಸಲಿಲ್ಲ. ನಾನೇ ಅವರ ಸೇವೆಗೆ ಮುಂದಾದರೆ ಬೇಡ ಎನ್ನಲೂ ಇಲ್ಲ. (ಅದಾಗಿ ಎಷ್ಟೋ ವರ್ಷಗಳ ನಂತರ ಅವರು ಕೇಶವಕೃಪಾ ಬಾಗಿಲಿನಲ್ಲಿ ನಿಂತು ಯಾದವರಾವ್‌ಜಿ ಮತ್ತು ವಿ ಸತೀಶ್‌ ಜೊತೆಗೆ ನಿಂತಿದ್ದ ನನ್ನನ್ನು ನೋಡಿ `ಸುದರ್ಶನ! ಚೌಕಟ್ಟಿಲ್ಲದ ಮನುಷ್ಯ’ ಎಂದು ಉದ್ಗರಿಸಿದ್ದು ಇನ್ನೂ ನೆನಪಿದೆ.)

ಅದೇ ದಿನಗಳಲ್ಲಿ ನನ್ನ ಮಿತ್ರ, ಈಗಿನ ಖ್ಯಾತ ಕಲಾವಿದ ಬಿ ದೇವರಾಜ್‌ ಆರ್ಟೆಕ್‌ ಸ್ಕ್ರೀನ್‌ ಪ್ರಿಂಟಿಂಗ್‌ (ಈಗಿನ ಗಾಯತ್ರಿ ಟಿಫಿನ್‌ ರೂಮಿನ ಪಕ್ಕದಲ್ಲಿ) ಕಚೇರಿಯಲ್ಲಿದ್ದ. ಮಧ್ಯಾಹ್ನವಾದ ಕೂಡಲೇ ಅವನೊಂದಿಗೆ ಟೀ ಕುಡಿಯುವುದೂ  ದಿನಚರಿಯ ಭಾಗವಾಗಿತ್ತು. ಜಯದೇವ್‌ ಎಂಥ ಕಠೋರ ಬಾಸ್‌ ಎಂದು ಅವನಿಗೆ ವಿವರಿಸುವುದೇ  ನನ್ನ ಮುಖ್ಯ ಕಾರ್ಯಸೂಚಿಯಾಗಿತ್ತು.

ಕೊನೆಗೂ ನಾನು ನನ್ನ ಹಟ ಸಾಧನೆಯನ್ನು ಹೆಚ್ಚಿಸುತ್ತಲೇ ಹೋದೆ. ಕೆಲವೊಮ್ಮೆ ದಿನವಿಡೀ ಮಲಗಿರುತ್ತಿದ್ದೆ. ಮೊದಲ ಸಲ ಭಗ್ನಪ್ರೇಮಿಯಾಗಿದ್ದೂ ಅಲ್ಲೇ. ಆಗ ಐದನೇ ಮಹಡಿಯಲ್ಲಿ ಒಂದು ಭರ್ಜರಿ ಶ್ಯಾಂಡೆಲಿಯೇ ಇತ್ತು. ಪ್ರಜ್ವಲಿಸುತ್ತಿದ್ದ ಆ ದೀಪಸಾಲಿನ  ಕೆಳಗೇ ಹಾಸಿಗೆ ಹಾಸಿ ಮಲಗಿ ನನ್ನ ದುಃಖವನ್ನು ಮರೆಯಲು ಯತ್ನಿಸಿದ್ದೆ! ಅದಾಗಿ ಕೆಲ ದಿನಗಳ ನಂತರ ನನಗೆ ಇನ್ನು ಇರಲಾಗುವುದಿಲ್ಲ ಅನ್ನಿಸಿತು. ಜಯದೇವರಿಗೆ ಒಂದು ಖಾರವಾದ ಪತ್ರವನ್ನು ಬರೆದು ಲೆಕ್ಕದ ಪ್ರಕಾರ `ಬಾಕಿ ಇರುವ ೫೦೦ ರೂ.ಗಳನ್ನು ಮರಳಿಸುವೆ’  ಎಂದು ತಿಳಿಸಿದೆ. ಅದಕ್ಕೆ ಅವರೂ ಒಂದು ಪತ್ರ ಬರೆದು ಶುಭಾಶಯ ತಿಳಿಸಿ, ಹಣ ಕೊಡುವುದು ಬೇಡ ಎಂದು ತಿಳಿಸಿದರು. ಅಲ್ಲಿಗೆ ನನ್ನ – ಜಯದೇವರ ಸಖ್ಯ ಮುಗಿದುಹೋಯಿತು.

ಆ ಪತ್ರ ನನ್ನ ಅಟ್ಟದಲ್ಲಿ ಈಗಲೂ ಭದ್ರವಾಗಿದೆ:

—————————————————–

೧೬ ಜೂನ್‌ ೧೯೮೮

ಆತ್ಮೀಯರಾದ ಶ್ರೀ ಸುದರ್ಶನ್‌ ಅವರಿಗೆ

ಆದರದ ವಂದನೆಗಳು.

ಇಲ್ಲಿನ ವಿದ್ಯಮಾನಗಳಿಂದ ನಿಮಗೆ ಬೇಸರ ಆಗಿರುವ ವಿಷಯ ತಿಳಿದು ವಿಷಾದ ಎನಿಸಿತು.

ನಿಮ್ಮಲ್ಲಿರುವ ಸುಪ್ತ ಪ್ರತಿಭೆಗಳು ನಿರಾತಂಕವಾಗಿ ಅರಳುತ್ತಿರಲಿ ಎಂಬುದೇ ಪರಮಾತ್ಮನಲ್ಲಿ ನನ್ನ ಪ್ರಾರ್ಥನೆ.

ನಿಮ್ಮ ಲೆಕ್ಕದಲ್ಲಿ ಇರುವ ರೂ. ೫೦೦/-ಅನ್ನು ಕಳೆದ ವರ್ಷ ಮತ್ತು ಈ ವರ್ಷ ನೀವು ನಮ್ಮಲ್ಲಿದ್ದ ಅವಧಿಯ `ಬೋನಸ್‌ ಕೊಡುಗೆ’ಯಾಗಿ ಜಮಾ ಮಾಡಿಕೊಳ್ಳುತ್ತೇವೆ.  ಅದರ ಚಿಂತೆ ನಿಮಗೆ ಬೇಡ.

ನೀವೊಮ್ಮೆ ಇಲ್ಲಿಗೆ ಬಂದು ನಿಮ್ಮ ಅಂಕೆಯಲ್ಲಿರುವ ಎಲ್ಲವನ್ನೂ ಯಾರಾದರೊಬ್ಬರಿಗೆ ತಿಳಿಸಿ, ವಹಿಸಿಕೊಟ್ಟು ಹೋಗಬೇಕಾಗಿ ವಿನಂತಿ. ಎಂದು ಬರುವಿರೆಂಬುದನ್ನು ತಿಳಿಸಿ ಬನ್ನಿ.

ಪರಸ್ಪರ ಸ್ನೇಹ ವಿಶ್ವಾಸ ವೃದ್ಧಿಗತವಾಗಲೆಂದು ಆಶಿಸುತ್ತೇನೆ. ದೇವರು ನಿಮಗೆ ಸಕಲ ಸನ್ಮಂಗಳವನ್ನುಂಟು ಮಾಡಲಿ.

ಇತಿ ನಿಮ್ಮ ವಿಶ್ವಾಸಿ

ಮೈ ಚ ಜಯದೇವ್‌

—————————————————–

ಅನಂತರದ ಇಪ್ಪತ್ತು ವರ್ಷಗಳ ಕಾಲ ನನ್ನ – ಅವರ ನಡುವೆ ಅಂಥ ಸಂವಹನ ಇರಲಿಲ್ಲ. ಮತ್ತೆ ನಾನು ಅವರನ್ನು ಸಹಜವಾಗಿ ಭೇಟಿ ಮಾಡಿದ್ದು – ೨೦೦೮ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ. ಚುನಾವಣೆಯ ನಂತರ ನಾನು ಮತ್ತೆ ನಿರುದ್ಯೋಗಿಯಾದೆ.  ಆಗ ಸಾವಯವ ಕೃಷಿ, ಇಂಧನ ನೀತಿ ಇತ್ಯಾದಿ ವಿಷಯಗಳನ್ನು ಅರಿಯಬೇಕು ಎಂಬ ಉಮೇದಿಗೆ ಬಿದ್ದು ಕೆಲಸ ಮಾಡದಿರಲು ನಿರ್ಧರಿಸಿದೆ. ಸುಮಾರು ಒಂದೂವರೆ ವರ್ಷ ನಾನು ಬೆಂಗಳೂರಿನಲ್ಲಿ ಯಾವುದೇ ಉಳಿತಾಯವೂ ಇಲ್ಲದೆ, ನಿರುದ್ಯೋಗಿಯಾಗಿ ಕಾಲ ಕಳೆದೆ! ಆಗ ನನ್ನ ಮತ್ತು ಜಯದೇವರ ನಡುವಣ ಸಂಬಂಧ ನಿಕಟವಾಯಿತು.

ಇಂಧನ ನೀತಿ ಕುರಿತು ಏನಾದರೂ ಮಾಡಬೇಕೆಂದು ವಿದ್ಯುತ್‌ ರಂಗದ ವಿಶ್ಲೇಷಕ ಶ್ರೀ ಶಂಕರ ಶರ್ಮ ನನ್ನನ್ನು ಬಹುವಾಗಿ ಕಾಡುತ್ತಿದ್ದರು. ಅವರ ಕಾಟ ತಡೆಯಲಾರದೆ ನಾನು ಜಯದೇವರಲ್ಲಿ ವಿಷಯ ತಿಳಿಸಿದೆ. ಅವರಿಗೂ ಆಸಕ್ತಿ ಬೆಳೆಯಿತು. ಮೊದಲು ಅವರು ಶಂಕರ ಶರ್ಮರನ್ನು ಕೇಶವಕೃಪಾಗೇ ಕರೆದು ಉಳಿಸಿಕೊಂಡರು; ಸುಮಾರು ಮೂರು ಗಂಟೆಗಳ ಕಾಲ ವಿದ್ಯುತ್‌ ರಂಗದಲ್ಲಿ ಆಗಬೇಕಾದ ಸಂಗತಿಗಳ ಬಗ್ಗೆ ಮಾಹಿತಿ ಪಡೆದರು.  ಅನಂತರದ ಮೂರು ತಿಂಗಳುಗಳಲ್ಲಿ ಎರಡು ಸಭೆಗಳನ್ನು ನಡೆಸಿ ಇಂಧನ ನೀತಿಯ ಬಗ್ಗೆ ಆಮೂಲಾಗ್ರ ಪರಾಮರ್ಶೆ ನಡೆಸಿದರು. ಅದಾದ ಮೇಲೆ ನಾವು ಆಗಿನ ಮುಖ್ಯಮಂತ್ರಿ ಶ್ರೀ ಯೆಡ್ಯೂರಪ್ಪನವರಿಗೆ ಬಹಿರಂಗ ಪತ್ರ ಬರೆದು ಇಂಧನ ನೀತಿಗಾಗಿ ಆಗ್ರಹಿಸಿದೆವು. ಈ ಪತ್ರಕ್ಕೆ ಡಾ|| ಜಿ ಎಸ್‌ ಎಸ್‌, ಪಂಡಿತ ರಾಜೀವ ತಾರಾನಾಥ, ಟಿ ಯೆಲ್ಲಪ್ಪ ರೆಡ್ಡಿ, ಚಂದ್ರಶೇಖರ ಕಂಬಾರ ಮುಂತಾದವರು ಸಹಿ ಹಾಕಿದ್ದರು. ಈ ಪತ್ರದ ಪ್ರತಿಗಳನ್ನು ಜಯದೇವರು ತರಿಸಿ ಇಟ್ಟುಕೊಂಡಿದ್ದರು.

ಅದೇ ಸಂದರ್ಭದಲ್ಲಿ  ತದಡಿಯಲ್ಲಿ ಕಟ್ಟಲು ಹೊರಟಿದ್ದ ಬೃಹತ್‌ ಕಲ್ಲಿದ್ದಲು ಶಾಖೋತ್ಪನ್ನ  ವಿದ್ಯುತ್‌ ಸ್ಥಾವರವನ್ನು ವಿರೋಧಿಸಿ ನಾನು ಒಂದು ಚಿಕ್ಕ ಪುಸ್ತಕವನ್ನು ಸಿದ್ಧಪಡಿಸಿ ಕೆಲವರಿಗೆ ಹಂಚಿದ್ದೆ. ಅದನ್ನು ಓದಿದ ಜಯದೇವರು ನನ್ನಲ್ಲಿ ಒಂದು ಪ್ರಸ್ತಾಪವನ್ನು ಮುಂದಿಟ್ಟರು. `ನೀನು ಹಲವು ವಿಷಯಗಳ ಬಗ್ಗೆ ಅಧ್ಯಯನ ಮಾಡ್ತೀಯ. ಅವುಗಳನ್ನೆಲ್ಲ ಹಾಗೇ ಕಂಪ್ಯೂಟರಿನಲ್ಲಿ ಇಟ್ಟುಕೊಳ್ಳೋ ಬದಲಿಗೆ ಚಿಕ್ಕ ಚಿಕ್ಕ ಪುಸ್ತಿಕೆಗಳನ್ನು ಯಾಕೆ ಪ್ರಕಟಿಸಬಾರ್ದು? ಅದಕ್ಕೆ ನಾನು ಹಣಕಾಸು ವ್ಯವಸ್ಥೆ ಮಾಡ್ತೇನೆ’ ಎಂದು ತಿಳಿಸಿದರು. ಬರೆಯುವ ವಿಷಯದಲ್ಲಿ ನನ್ನಂಥ ಸೋಮಾರಿ ಇನ್ನೊಬ್ಬನಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಇನ್ನು ಇವರ ಹತ್ರ ಸಿಕ್ಕಿಕೊಂಡರೆ ತಡಮಾಡಿ ಬೈಸಿಕೊಳ್ಳಬೇಕು ಎಂಬ ಎಚ್ಚರಿಕೆ ಮನಸ್ಸಿನೊಳಗೆ ಮೂಡಿ, ಹಾಗೇ ಜಾರಿಕೊಂಡೆ!

ಬಿಟಿ ಬದನೆಗೆ  ಸ್ವದೇಶಿ ಜಾಗರಣ ಮಂಚವೇನೋ ವಿರೋಧಿಸಿತ್ತು. ಆದರೆ ಕರ್ನಾಟಕ ಸರ್ಕಾರದ ನಿಲುವು ಇನ್ನೂ ಪ್ರಕಟವಾಗಿರಲಿಲ್ಲ. ಆಗತಾನೇ ಕೇಂದ್ರ ಪರಿಸರ ಸಚಿವ  ಜೈರಾಂ ರಮೇಶ್‌ ಸಾರ್ವಜನಿಕ ಚರ್ಚೆ ಆರಂಭಿಸಿದ್ದರು. ಅವರು ಬೆಂಗಳೂರಿನಲ್ಲಿ ಅಂಥದ್ದೊಂದು ಸಭೆಯನ್ನು ಕರೆದಿದ್ದರು. ಅದಕ್ಕಿಂತ ಮುನ್ನವೇ ಕರ್ನಾಟಕ ಸರ್ಕಾರದ ನಿಲುವು ಪ್ರಕಟವಾಗಬೇಕಾದ ಜರೂರು ಇತ್ತು. ಸ್ವದೇಶಿ ಜಾಗರಣ ಮಂಚ್‌, ಸಹಜ ಸಮೃದ್ಧ, ಕರ್ನಾಟಕ ರಾಜ್ಯ  ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ್‌), ಆಶಾ ಸ್ವಯಂಸೇವಾ ಸಂಸ್ಥೆ, ಇಎಸ್‌ಜಿ, ಮುಂತಾದ ಸಂಘಟನೆಗಳು ಎಡ – ಬಲವೆಂಬ ಗೋಜಿಗೆ ಹೋಗದೆ ಸಭೆ ಸೇರಿ ಕರ್ನಾಟಕ ಸರ್ಕಾರದ ನಿಲುವನ್ನು ಖಚಿತಪಡಿಸುವ ಬಗ್ಗೆ ಚರ್ಚೆ ನಡೆಸಿದವು. ಇಲ್ಲಿ ನಾನು ಯಾವ ಸಂಘಟನೆಗೂ ಸೇರಿರಲಿಲ್ಲ. ಒಬ್ಬ ನಾಗರಿಕ ಕಾರ್ಯಕರ್ತನಾಗಿ ಭಾಗವಹಿಸುತ್ತಿದ್ದೆ. ಆರೆಸೆಸ್‌, ಬಿಜೆಪಿಯಲ್ಲಿ ನನಗೆ ಹೆಚ್ಚಿನ ಅಧಿಕಾರಿಗಳು, ನಾಯಕರು ಪರಿಚಿತರು ಎಂಬುದೇ ನನ್ನ ಹೆಚ್ಚುಗಾರಿಕೆಯಾಗಿತ್ತು. ಬಿಟಿ ಬದನೆಯನ್ನು ವಿರೋಧಿಸುವ ನಿಲುವನ್ನು ರಾಜ್ಯ ಸರ್ಕಾರವು ತಳೆಯಬೇಕು ಎಂದು ನಾನು ಜಯದೇವರಲ್ಲಿ ಮನವಿ ಒಯ್ದೆ. `ಅದೆಲ್ಲ ಸರಿ, ನೀವೆಲ್ಲ ಯಾಕೆ ಒಂದು ನಿಯೋಗವಾಗಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಬಾರದು?’ ಎಂದು ಅವರು ಸೂಚಿಸಿದರು. ನಮಗೂ ಅದು ಸರಿ ಅನ್ನಿಸಿತ್ತು. ದಿಲ್ಲಿಯಿಂದ ಡಾ|| ಪುಷ್ಪ ಭಾರ್ಗವ ಬರುವ ದಿನದಂದೇ ನಿಯೋಗವನ್ನು ಮುಖ್ಯಮಂತ್ರಿಯವರ ಬಳಿಗೆ ಒಯ್ಯುವುದಕ್ಕೆ ನಿರ್ಧರಿಸಿ ಅದರಂತೆ ಮುಂಚಿತ ಸಮಯವನ್ನೂ ಮುಖ್ಯಮಂತ್ರಿಯವರ ಕಚೇರಿಯಿಂದ ಪಡೆದೆವು. ಆ ದಿನ ನಿಯೋಗವನ್ನು ಭೇಟಿ ಮಾಡಿ ಮನವಿಯನ್ನು ಆಲಿಸಿದ ಮುಖ್ಯಮಂತ್ರಿ ಯೆಡ್ಯೂರಪ್ಪನವರು ಕರ್ನಾಟಕದಲ್ಲಿ ಬಿಟಿ ಬದನೆಗೆ ಪ್ರವೇಶವಿಲ್ಲ ಎಂದು ಮಾಧ್ಯಮಗಳ ಎದುರು ಘೋಷಿಸಿದರು. ಅದೇ ಮರುದಿನ ಮುಖ್ಯ ಸುದ್ದಿಯಾಗಿ ಪ್ರಕಟವಾಗಿ ಕರ್ನಾಟಕ ಸರ್ಕಾರವೂ ಬಿಟಿ ಬದನೆ ವಿರುದ್ಧದ ಹೋರಾಟದಲ್ಲಿ ಧ್ವನಿಯೆತ್ತಿದಂತಾಯಿತು. ಈ ನಿಲುವಿನ ಪ್ರಕಟಣೆಯಲ್ಲೂ ಜಯದೇವರ ಪಾತ್ರ ತುಂಬಾ ಇತ್ತು ಎಂದು ಹೇಳುವುದಕ್ಕೆ ಹಿಂಜರಿಕೆಯೇನೂ ಇಲ್ಲ.

ಜಯದೇವರದು ಸರಳ ದಿನಚರಿ. ೧೯೮೭ರ ದಿನಗಳಲ್ಲೇ ನಾನು ನೋಡಿದಂತೆ ರಾತ್ರಿ ಹೆಚ್ಚಾಗಿ ಸೌತೆಕಾಯಿಯನ್ನೇ ತಿಂದು ಚಾಪೆ-ತೆಳು ಹಾಸಿಗೆಯ ಮೇಲೆ ಮಲಗುತ್ತಿದ್ದರು. ಈಗ ಮುದ್ರಣಾಲಯವೇ ಆವರಿಸಿರುವ  ಜಾಗದಲ್ಲಿ ಒಂದು ಚಿಕ್ಕ ಮನೆ ಇತ್ತು. ಅದರಲ್ಲಿ ಅಡುಗೆ ಮನೆಯ ಪಕ್ಕದಲ್ಲೇ ಜಯದೇವರ ಪುಟ್ಟ ಕೊಠಡಿ. ಅಲ್ಲಿ ಒಂದು ಕುರ್ಚಿ – ಮೇಜು, ಕಪಾಟು. ಕೇಶವಕೃಪಾದ ಮೊದಲನೇ ಮಹಡಿಯಲ್ಲಿ ಅವರಿಗೆ ಇದಕ್ಕಿಂತ ದೊಡ್ಡ ಕೊಠಡಿ ಸಿಕ್ಕಿತ್ತು. ಹಿರಿಯ ರಾಜಕಾರಣಿಗಳು ಅವರನ್ನು ಮುಂಚಿತ ಸಮಯ ನಿಗದಿಪಡಿಸದೆ ಭೇಟಿಯಾಗುವುದೇ ಅಸಾಧ್ಯ. ಅಲ್ಲೂ ಅವರು ಭೇಟಿಗೆ  ಸಕಾರಣ  ವಿವರಿಸಬೇಕು. ೨೦೦೮ರ ನಂತರ ನಾನು ಬೆಂಗಳೂರು ಬಿಟ್ಟು ಮೈಸೂರಿಗೆ ಬರುವವರೆಗೂ ಅವರು ನನಗೆ ಎಂದೂ ಭೇಟಿ ನಿರಾಕರಿಸಲಿಲ್ಲ; ಬದಲಿಗೆ ಆದಷ್ಟೂ ಬೇಗ ಭೇಟಿ ನಿಗದಿಪಡಿಸಿಬಿಡುತ್ತಿದ್ದರು. ಎಂದಿನಂತೆ ನಾನು ಬೆಂಗಳೂರು ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡಾಗಲೇ ಅವರಿಂದ `ಎಲ್ಲಿದೀರ? ಇನ್ನೂ ಬರ್ಲಿಲ್ಲ?’ ಎಂಬ ಎಚ್ಚರಿಕೆಯ ಕರೆ ಬರುತ್ತಿತ್ತು. ಒಂದುವೇಳೆ ಅವರ ಸಂಘಟನೆಯ ಕೆಲಸಗಳೇ ತುರ್ತಾಗಿದ್ದರೆ, ಕರೆ ಮಾಡಿ ಭೇಟಿಯ ಸಮಯವನ್ನು ಬದಲಿಸುತ್ತಿದ್ದರು. ಒಮ್ಮೆಯಂತೂ ಕರ್ನಾಟಕ ರಾಜಕೀಯದ ವಿಪರೀತ ಘಟನಾವಳಿಗಳ ಕ್ಷಣದಲ್ಲಿ ನಾನು ಅವರನ್ನು ಭೇಟಿಯಾಗಬಯಸಿದೆ. ಅವರೂ ಕರೆಯದೆ ಬಿಡಲಿಲ್ಲ. ಟಿವಿ ನೋಡುತ್ತಲೇ, ಅವರಿವರಿಗೆ ಸೂಚನೆಗಳನ್ನು ನೀಡುತ್ತಲೇ ನನ್ನನ್ನೂ ಮಾತನಾಡಿಸಿದರು. ಭೇಟಿಗಾಗಿ ಕೋರಿದ ನನ್ನ ಯಾವುದೇ ಎಸ್‌ಎಂಎಸ್‌ಗಳನ್ನೂ ಅವರು ನಿರ್ಲಕ್ಷಿಸಲಿಲ್ಲ.

ಅನಂತರ ಅವರು ರಾಷ್ಟ್ರೋತ್ಥಾನ ಪರಿಷತ್ತಿನ ಕೊಠಡಿಗೆ ಹೋದಾಗಲೂ ಅಷ್ಟೆ; ಅದೇ ಪ್ರೀತಿ. ಆಗ `ಉತ್ಥಾನ’ ಪತ್ರಿಕೆಯ ಮರುವಿನ್ಯಾಸ ಚರ್ಚೆ ನಡೆಯುತ್ತಿತ್ತು. ಮೊದಲ ಸಭೆಯಲ್ಲಿ ಅವರು ತಮಗೆ ಬೇಕಾದ ಹೆಚ್ಚುವರಿ ಮಾಹಿತಿಗಳ ಪಟ್ಟಿಯನ್ನು ಕೊಟ್ಟರು. ಉತ್ಥಾನದಂತೆಯೇ ಇರುವ ಇತರೆ ಮಾಸಪತ್ರಿಕೆಗಳ ಪ್ರಸರಣ, ವಿಷಯ ಹೂರಣದ ಬಗ್ಗೆ ಖಚಿತ ಮಾಹಿತಿಗಳನ್ನು ನೀಡಿದ ಮೇಲೆ ಹಲವು ಗಂಟೆಗಳ ಕಾಲ ಉತ್ಥಾನದ ಮರುವಿನ್ಯಾಸದ ಬಗ್ಗೆ ಚರ್ಚಿಸಿದರು. ನಮ್ಮ ಎಲ್ಲ ಟೀಕೆಗಳನ್ನೂ ಸಮಾಧಾನದಿಂದ ಕೇಳಿದರು. ತಮಗೆ ಬಂದ ಎಲ್ಲ ಅನುಮಾನಗಳನ್ನೂ ಅವರು ಪಟ್ಟಿ ಮಾಡಿಕೊಂಡೇ ಕೂತಿದ್ದರು. ಹೀಗಾಗಿ ಉತ್ಥಾನ ಪತ್ರಿಕೆಯ ಬಗ್ಗೆ ಸಾಕಷ್ಟು ಗಂಭೀರವಾದ ಮಥನ ನಡೆಯಿತು ಎನ್ನಬೇಕು. ಈಗ ಉತ್ಥಾನವು ಹೊಸ ರೂಪದಲ್ಲಿ ನಿಮ್ಮ ಮುಂದಿದ್ದರೆ, ಅದರಲ್ಲಿ ಜಯದೇವರ ಪಾತ್ರವೇ ಮುಖ್ಯ. ಉತ್ಥಾನದ ಮರುವಿನ್ಯಾಸದ ಮುನ್ನ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಅವರು ಉತ್ಥಾನದ ಬಗ್ಗೆ ಹಲವು ಮಾಹಿತಿಗಳನ್ನು ತಿಳಿಸಿ ಪ್ರಸರಣ ಹೆಚ್ಚಿಸಲು ಹುರಿದುಂಬಿಸಿದರು.

ಅವರೊಂದಿಗೆ ಈ ಆರೇಳು ವರ್ಷಗಳಲ್ಲಿ ಯಾವಾಗಲೂ ಸಾರ್ವಜನಿಕ ವಿಷಯಗಳ ಬಗ್ಗೆಯೇ ಮಾತನಾಡುತ್ತಿದ್ದ ನಾನು ಒಮ್ಮೆ ವೈಯಕ್ತಿಕ ಶಿಫಾರಸು ಮಾಡಲು ಹೋಗಿ ಚೆನ್ನಾಗಿ ಪಾಠ ಕಲಿತೆ. ಒಬ್ಬ ಭ್ರಷ್ಟ ಅಧಿಕಾರಿಯ ಬಗ್ಗೆ ನನ್ನ ಸ್ನೇಹಿತನೆಂದುಕೊಂಡಿದ್ದ ಒಬ್ಬಾತ ಒಳ್ಳೆಯ ವರದಿ ಕೊಟ್ಟು,  ಅವರ ವಿರುದ್ಧ ಸಂಚು ನಡೆಯುತ್ತಿದೆ ಎಂದು ಆರೋಪಿಸಿ, ಜಯದೇವರ ಮೂಲಕ ಆ ವ್ಯಕ್ತಿಯ ಶೋಷಣೆ ನಿಲ್ಲಿಸಬೇಕು ಎಂದು ವಿನಂತಿಸಿದ. ನಾನೂ ಕೂಡ ಜಯದೇವರ ಮೇಲೆ ಪ್ರಭಾವ ಬೀರಬಹುದು ಎಂದೆಣಿಸಿ ಅವರಿಗೆ ಮನವಿಯನ್ನು ವರ್ಗಾಯಿಸಿದೆ. ಒಂದೇ ದಿನದಲ್ಲಿ ಜಯದೇವರು ಕರೆ ಮಾಡಿ `ನೋಡು ಸುದರ್ಶನ, ಅವನೊಬ್ಬ ಮಹಾನ್‌ ಭ್ರಷ್ಟ. ಅವನ ಸ್ನೇಹಿತ ನಿನ್ನನ್ನು ಯಾಮಾರಿಸಿದ್ದಾನೆ. ಅವರಂಥವರ ಸುದ್ದಿಗೆ ಹೋಗಬೇಡ. ಇದರಲ್ಲಿ ನಿನ್ನ ತಪ್ಪಿಲ್ಲ. ಆದರೆ ವ್ಯಕ್ತಿಗಳ ಬಗ್ಗೆ ಶಿಫಾರಸು ಮಾಡುವಾಗ ಎಚ್ಚರಿಕೆ ಇರಲಿ. ಇಂಥ ನೂರಾರು ಪ್ರಕರಣಗಳನ್ನು ನಾನು ನೋಡಿದ್ದೇನೆ’ ಎಂದು ಕಿವಿಮಾತು ಹೇಳಿದರು. ನಾನು ಬೆವರಿದೆ ಎಂದು ಹೇಳಬೇಕಿಲ್ಲ ತಾನೆ!

ಹಾಗಂತ ಅವರು ಅದೇ ವಿಷಯವನ್ನು ಮುಂದಿಟ್ಟುಕೊಂಡು ನನ್ನನ್ನು ದೂರ ಇಡಲೂ ಇಲ್ಲ. ನಾನು ಬಯಸಿದಾಗೆಲ್ಲ ಭೇಟಿಗೆ ಅವಕಾಶ ಕೊಟ್ಟು, ಹತ್ತಿರದಲ್ಲೇ ಕುರ್ಚಿ ಎಳೆದು ಕೂರುವಂತೆ ಹೇಳಿ ನನ್ನೆಲ್ಲ ಅಹವಾಲುಗಳನ್ನು ಕೇಳುತ್ತಿದ್ದರು. ನಾನು ಮೈಸೂರಿಗೆ ಬರುವಾಗಲೂ ಅವರ ಆಶೀರ್ವಾದವನ್ನು ಪಡೆಯಲು ಹೋಗಿದ್ದೆ. ಭಾರತವಾಣಿ ಯೋಜನೆಯ ಬಗ್ಗೆ ವಿವರವಾಗಿ ತಿಳಿದ ಅವರು ನನಗೆ ಶುಭ ಹಾರೈಸಿದ್ದರು.

ಮೈ ಚ ಜಯದೇವರ ಬಗ್ಗೆ ನಾನು ಟೀಕೆಯನ್ನೂ ಮಾಡಿದ್ದೇನೆ ಎಂಬುದನ್ನು ಅವರ ಗಮನಕ್ಕೂ ತಂದಿದ್ದೆ. ರಾಜಕೀಯ ನಾಯಕರು ಕೇಶವಕೃಪಾದ ಮುಖ್ಯ ಬಾಗಿಲಿನ ಹೊಸ್ತಿಲಿನಲ್ಲಿ ನಿಂತು ಬೈಟ್‌ ಕೊಡುವುದು ನನಗೆ ಸರಿ ಅನ್ನಿಸಿರಲಿಲ್ಲ. `ನೀವು ಬಿಜೆಪಿ ನಾಯಕರೊಂದಿಗೆ ಕೇಶವಕೃಪಾದಲ್ಲಿ ಚರ್ಚೆ ಮಾಡಿದರೆ ಅದನ್ನು ಸಾರ್ವಜನಿಕರಿಗೆ ತಿಳಿಸಿ; ಅದಿಲ್ಲವಾದರೆ ಗೌಪ್ಯವಾಗೇ ಭೇಟಿ ಮಾಡಿ’ ಎಂದು ಸಿಟ್ಟು ಮಾಡಿಕೊಂಡು ಬರೆದಿದ್ದೆ. ಅದನ್ನು ಅವರಿಗೆ ಕೊಟ್ಟಿದ್ದೆ ಕೂಡ. ಆದರೆ ನಾನೆಂದೂ ಅವರು ಭಾಗವಹಿಸಿದರು ಎನ್ನಲಾದ ರಾಜಕೀಯ ಚಟುವಟಿಕೆಗಳ ಬಗ್ಗೆ ಕೇಳಹೋಗಲಿಲ್ಲ. ಅದು ನನ್ನ ಮಿತಿಯ ವಿಷಯವೂ ಆಗಿರಲಿಲ್ಲ.

ಸಂಘಟನೆಯಲ್ಲಿ ಒಂದೂ ಜವಾಬ್ದಾರಿಯನ್ನು ಹೊಂದಿರದೆ, ಬೇಜವಾಬ್ದಾರಿ ಮನುಷ್ಯ (ನನ್ನ ಇನಿಶಿಯಲ್‌ ಬೇ.ಮ. ಅನ್ನು ಬೇಜವಾಬ್ದಾರಿ ಮನುಷ್ಯ ಎಂದು ಹಲವು ಎಬಿವಿಪಿ ಕಾರ್ಯಕರ್ತರು ತಮಾಶೆ ಮಾಡಿಕೊಳ್ಳುತ್ತಾರೆ, ಈಗಲೂ!)ನಾಗಿದ್ದರೂ, ನನಗೂ ಜಯದೇವರಂಥ ಅತಿಹಿರಿಯ ಪ್ರಚಾರಕರೆದುರು ಮಾತನಾಡಲು, ಟೀಕೆ ಮಾಡಲು, ಆಕ್ರೋಶ ವ್ಯಕ್ತಪಡಿಸಲು ಸಾಧ್ಯವಾಗಿದ್ದರೆ, ಅದಕ್ಕೆ ಅವರ ಪ್ರಚಾರಕ ಗುಣವೇ ಕಾರಣ. ಈ ಗುಣವನ್ನು ನಾನು ನ ಕೃಷ್ಣಪ್ಪನವರಲ್ಲೂ ಕಂಡಿದ್ದೇನೆ.

ಜಯದೇವರು ಕಟ್ಟಿದ ಸಂಸ್ಥೆಗಳು, ಆರಂಭಿಸಿದ ಕಾರ್ಯಕ್ರಮಗಳು, – ಇವೆಲ್ಲದರ ಬಗ್ಗೆ ನಿಮಗೆ ಎಲ್ಲಿಂದಲಾದರೂ ಮಾಹಿತಿ ಸಿಗುತ್ತದೆ. ಆದರೆ ಅವರು ನಮ್ಮಂಥ ಸಾವಿರಾರು ಜನರ ಅಂತರಂಗದಲ್ಲಿ `ಯಾವ ವಿಷಯವನ್ನಾದರೂ ಸಹನೆಯಿಂದ ಕೇಳುವ ವ್ಯಕ್ತಿಗಳೂ ಇದ್ದಾರೆ’ ಎಂಬ ಭಾವವನ್ನು ಕಡೆದಿದ್ದಾರೆ ಎಂಬುದು ಗೊತ್ತಾಗಲಿ ಎಂದು ಈ ಬ್ಲಾಗ್‌ ಬರೆದೆ.

ಇನ್ನೊಂದು ವಿಷಯ ನೆನಪಾಗುತ್ತಿದೆ:  ಮಾಧ್ಯಮದವರಿಗೆ, ಎಡಪಂಥೀಯರಿಗೆ ಹೇಗುಹೇಗೋ ಕಾಣಿಸುವ ಆರೆಸೆಸ್‌ನಲ್ಲಿ ಎಲ್ಲ ಪ್ರಚಾರಕರೂ ಹೆಚ್ಚಾಗಿ ಕನ್ನಡದ ಇನಿಶಿಯಲ್‌ಗಳನ್ನೇ ಹೊಂದಿದ್ದಾರೆ ಎಂಬುದನ್ನೂ ಗಮನಿಸಿ.  ಮೈ ಚ ಜ(ಯದೇವ), ನ ಕೃ(ಷ್ಣಪ್ಪ), ಸು  ರಾ(ಮಣ್ಣ), ಕೃ ಸೂ (ರ್ಯನಾರಾಯಣರಾವ್‌), ಕಾಶ್ರೀನಾ(ಗರಾಜ್‌), ಬೆಸುನಾ ಮ(ಲ್ಯ), ಬರಾಶಂ(ಕರಾನಂದ), ದಾ ಮ ರ(ವೀಂದ್ರ). ಈ ದೇಸಿತನವನ್ನು ಕನ್ನಡದ ಕೆಲವು ಸಾಹಿತಿಗಳಲ್ಲದೆ ಬೇರೆಡೆ ಕಾಣುವುದು ಕಷ್ಟ. `ಮೈಚಜ’ ಇಂಥ ಗಟ್ಟಿ, ದೇಸಿ ಇನಿಶಿಯಲ್‌.  ಸಂಘದ ಹಲವಾರು ಪ್ರಚಾರಕರ  ಕೈಬರಹವಂತೂ ಅಚ್ಚಗನ್ನಡದ ಸವಿಜೇನು.

ಸರಿಯಾಗಿ ಶಾಖೆಗೂ ಹೋಗದ, ಪರಿವಾರದ ಯಾವುದೇ ಸಂಘಟನೆಯಲ್ಲೂ ಜವಾಬ್ದಾರಿಯನ್ನು ವಹಿಸಿಕೊಳ್ಳದ, ಹಲವಾರು ಸಲ ಪರಿವಾರದ ವ್ಯಕ್ತಿಗಳ ನಡೆಯನ್ನೇ ಟೀಕಿಸಿದ, ವೈಯಕ್ತಿಕವಾಗಿ ಖುದ್ದು ಅವರನ್ನೇ ಬೈದ ನನ್ನಂಥ ಕಡುಸಾಮಾನ್ಯ ವ್ಯಕ್ತಿಯನ್ನೂ ಕರೆದು ಕೂರಿಸಿ ಆಪ್ತವಾಗಿ ನನ್ನೆಲ್ಲ ಮಾತುಗಳನ್ನು ಕೇಳಿ, ತನಗೆ – ಮುಖ್ಯವಾಗಿ ಸಂಘಟನೆಯ ದೃಷ್ಟಿಕೋನದಲ್ಲಿ –  ಸರಿ ಅನ್ನಿಸಿದ್ದನ್ನು ಮುಕ್ತವಾಗಿ ತಿಳಿಸಿ, ಎಲ್ಲ ನಿರ್ಣಯಗಳೂ ಸ್ವತಂತ್ರವಾಗಿ – ಸಂಘಟಿತವಾಗಿ ರೂಪುಗೊಳ್ಳುವಂತೆ ನೋಡಿಕೊಂಡ ಕಟುಮಧುರ – ವಜ್ರಕಾಯ ಇನ್ನಿಲ್ಲ. ಮೈಸೂರಿನಲ್ಲಿ ಅವರ ಕಾಯ ಮಣ್ಣಾಗುವವರೆಗೆ ಅವರನ್ನೇ ನೋಡುತ್ತ ನೋಡುತ್ತ ಅವರು ಅಂದ ಮಾತುಗಳೆಲ್ಲವೂ ನೆನಪಾದವು.

`ಮೈ ಚ ಜ ‘ ಹೆಸರಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಅವರು ಸಿಗುವುದಿಲ್ಲ. ನನಗಿರುವ ಕೆಲವು ಸಮಯದಲ್ಲಾದರೂ ಅವರಂತೆ ಒಂದಷ್ಟು ದಿನ ಶಿಸ್ತಿನ ಬದುಕು ರೂಢಿಸಿಕೊಳ್ಳಬಹುದೇ? ನನಗೆ ಗೊತ್ತಿಲ್ಲ.

ಜಯದೇವರೆ, ನಿಮಗೆ ನನ್ನ ನಮಸ್ಕಾರಗಳು. ನಮ್ಮೆಲ್ಲರೊಳಗೆ ನಿಮ್ಮ ನೆನಪು ಶಾಶ್ವತ.

(ಇದು ಕೇವಲ ನನ್ನ ವೈಯಕ್ತಿಕ ಬ್ಲಾಗ್‌ ಆಗಿದ್ದು ಇಲ್ಲಿರುವ ನನ್ನ ಅಭಿಪ್ರಾಯಗಳು ನನ್ನ ವೈಯಕ್ತಿಕದ್ದು) 

Share.
Leave A Reply Cancel Reply
Exit mobile version