೨೦೧೯ರ ಅಕ್ಟೋಬರ್‌ ಕೊನೆಯ ವಾರ ನನ್ನನ್ನು ಆಗಿನ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.‌ ಯಡಿಯೂರಪ್ಪನವರು ಇ – ಆಡಳಿತ ಸಲಹೆಗಾರ ಎಂದು ನೇಮಿಸಿದರು. ನಾನು ವಸ್ತುಶಃ ಅಕ್ಟೋಬರ್‌ ೩೧ / ನವೆಂಬರ್‌ ೧ರಿಂದ ನನ್ನ ಕೆಲಸ ಆರಂಭಿಸಿದೆ. ಅಂದಿನಿಂದ ಲೆಕ್ಕ ಹಿಡಿದರೆ ಕೊರೋನಾ ಪೂರ್ವ ನಾಲ್ಕು ತಿಂಗಳುಗಳು, ಲಾಕ್‌ಡೌನ್‌ನ ಮೂರು ತಿಂಗಳುಗಳು, ಅನ್‌ಲಾಕ್‌ ಕಾಲದ ಐದು ತಿಂಗಳುಗಳು – ಹೀಗೆ ವಿಂಗಡಿಸಬಹುದು. ಕೊನೆಯ ಭಾಗದಲ್ಲಿ ನನ್ನ ಸ್ವಯಂ ಗೃಹನಿರ್ಬಂಧದ ಎರಡು ವಾರಗಳೂ ಸೇರಿವೆ. ೨೦೨೧ ರಲ್ಲಿ ಕೊರೋನಾ ಮಾದರಿಯ ಅನಾರೋಗ್ಯದಿಂದ (ಲಾಕ್‌ಡೌನ್‌ ಅವಧಿಯಲ್ಲಿಯೇ) ಒಂದೂವರೆ ತಿಂಗಳು ಕೆಲಸ ಮಾಡಲಾಗಲಿಲ್ಲ. ಈ ವರ್ಷವೂ ಕೊರೋನಾದಿಂದಾಗಿ ಸಾಕಷ್ಟು ದಿನಗಳಲ್ಲಿ ಸೂಕ್ತ ಕಾರ್ಯನಿರ್ವಹಣೆ ಸಾಧ್ಯವಾಗಲಿಲ್ಲ ಎಂಬುದು ವಾಸ್ತವ.

ನನ್ನ ನೇಮಕಾತಿಯಿಂದ ೨೦೨೧ ರ ಜುಲೈ ೨೬ವರೆಗಿನ ಅವಧಿಯಲ್ಲಿ ಮಾಡಿದ ಒಟ್ಟು ಕೆಲಸಗಳ ಸಂಕ್ಷಿಪ್ತ ನೋಟವನ್ನು ಸಾರ್ವಜನಿಕರ ಮುಂದೆ ಇಡುತ್ತಿದ್ದೇನೆ. ನನ್ನದು ಅಪ್ಪಟ ರಾಜಕೀಯ ನೇಮಕಾತಿ ! ಆದ್ದರಿಂದ ನಾನು ಕೇವಲ ಸಲಹೆಗಳನ್ನು ನೀಡಬಹುದೇ ಹೊರತು ಹೆಚ್ಚಿನ ಎಕ್ಸಿಕ್ಯುಟಿವ್‌ ಕೆಲಸಗಳನ್ನು ಮಾಡಲಾಗದು; ಆದೇಶ ನೀಡಲಾಗದು ಎಂಬುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಈ ಮಿತಿಯ ಒಳಗೇ ನಾನು ಇಷ್ಟು ಕೆಲಸಗಳನ್ನು ಮಾಡಿರುತ್ತೇನೆ.

ಇ – ಆಡಳಿತದ ಕೆಲಸಗಳು

  • ಕರ್ನಾಟಕ ಸರ್ಕಾರವು ರೂಪಿಸಿದ ಎಲ್ಲ ಆಪ್‌ಗಳನ್ನು ವ್ಯವಸ್ಥಿತವಾಗಿ ಪರಿಚಯಿಸುವ ದೃಷ್ಟಿಯಿಂದ ಕರ್ನಾಟಕ ಆಪ್‌ ತಾಣವನ್ನು ರೂಪಿಸಲಾಗಿದೆ. ಇದರಿಂದಾಗಿ ಅಧಿಕೃತ ಆಪ್‌ಗಳ ಮಾಹಿತಿಯನ್ನು ಪಡೆಯುವುದು ಸುಲಭವಾಗಿದೆ. (apps.karnataka.gov.in)
  • ರಾಜ್ಯದ ದತ್ತಾಂಶ ಸಂರಕ್ಷಣೆ ಕುರಿತು ಡಾಟಾ ಸಂರಕ್ಷಣಾ ನೀತಿಸೂತ್ರಗಳನ್ನು ಸರ್ಕಾರವು ಪ್ರಕಟಿಸಿದೆ. ಸೈಬರ್‌ ಸೆಕ್ಯುರಿಟಿ ಕುರಿತ ಇನ್ನೊಂದು ದಾಖಲೆಯ ಪರಾಮರ್ಶೆ ಮಾಡಿದ್ದೇನೆ.
  • ಹಲವು ಕೋವಿಡ್‌ ಡ್ಯಾಶ್‌ಬೋರ್ಡ್‌ ಗಳು ಇದ್ದದ್ದನ್ನು ಒಂದೇ ಡ್ಯಾಶ್‌ಬೋರ್ಡ್‌ ಮಾಡಿಸುವ ಆರಂಭಿಕ ಕಾರ್ಯದಲ್ಲಿ ಮಾನ್ಯ ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ನಾನೂ ಪ್ರಮುಖವಾಗಿ ಭಾಗವಹಿಸಿದ್ದೆ.
  • ರಾಜ್ಯ ಸರ್ಕಾರದ ಹಲವು ಇ – ಆಡಳಿತ ಉಪಕ್ರಮಗಳ ಬಗ್ಗೆ ಮಾಹಿತಿ ಪಡೆಯುವಲ್ಲಿಯೇ ನನ್ನ ಮೊದಲ ಆರು ವಾರಗಳು ಕಳೆದಿದ್ದವು. ಈವರೆಗೆ ಜನಹಿತ, ಮೊಬೈಲ್‌ ಒನ್‌ ಆಪ್‌ಗಳು, ಮಾಹಿತಿ ಕಣಜ, ಪಬ್ಲಿಕ್‌ ಗ್ರೀವಾನ್ಸ್‌ ರಿಡ್ರೆಸಲ್‌ ವ್ಯವಸ್ಥೆ, ಕಾವೇರಿ ತಂತ್ರಾಂಶ, ಇ – ಮಾಪನ ತಂತ್ರಾಂಶ, ಆನ್‌ಲೈನ್‌ ಮಾಹಿತಿ ಹಕ್ಕು ತಾಣ, – ಹೀಗೆ ಹಲವು ತಂತ್ರಾಂಶಗಳ ಸಭೆಗಳಲ್ಲಿ ಭಾಗಿಯಾಗಿ ಜನಬಳಕೆ ಕುರಿತ ಅಂಶಗಳನ್ನು ಗಮನಕ್ಕೆ ತರಲಾಗಿದೆ.
  • ಮಾನ್ಯ ಮುಖ್ಯಮಂತ್ರಿಯವರಿಗೆ ಈ ಕೆಳಕಂಡ ಸಂಗತಿಗಳ ಬಗ್ಗೆ ಪತ್ರ ಬರೆಯಲಾಗಿದೆ:
    1. ೨೦೨೦-೨೧ ರಾಜ್ಯ ಬಜೆಟ್‌ಗೆ ವಿವಿಧ ಇಲಾಖೆಗಳ ಮಾಹಿತಿ ತಂತ್ರಜ್ಞಾನ ಕಾರ್ಯಗಳ ಕುರಿತಾಗಿ ಸಲಹೆಗಳು.
    2. ಕರ್ನಾಟಕ ೨೦೨೦-೨೧ ಆಯವ್ಯಯದಲ್ಲಿ ಇ-ಆಡಳಿತ ಇಲಾಖೆಗೆ ಸಂಬಂಧಿಸಿದಂತೆ ಸಲಹೆಗಳು.
    3. ಕರ್ನಾಟಕ ಹವ್ಯಕ ಭಾಷಾ ಅಕಾಡೆಮಿ ಸ್ಥಾಪಿಸಲು ಕೋರಿಕೆ.
    4. ಸರ್ಕಾರದ ಜಾಲತಾಣ ಸುಧಾರಿಸಿ ರಾಷ್ಟ್ರೀಯ ಮೌಲ್ಯಮಾಪನದಲ್ಲಿ ಹೆಚ್ಚಿನ ಶ್ರೇಯಾಂಕ ಗಳಿಸುವ ಬಗ್ಗೆ ಪತ್ರ
    5. ರಾಜ್ಯ ಸರ್ಕಾರದ ಟೆಂಡರ್‌ಗಳಲ್ಲಿ (ಪಬ್ಲಿಕ್‌ ಪ್ರೊಕ್ಯೂರ್‌ಮೆಂಟ್‌) ಸ್ಟಾರ್ಟಅಪ್‌ ಸಂಸ್ಥೆಗಳಿಗೆ ಬೆಂಬಲ ನೀಡುವ ಕುರಿತು.
    6. ಕನ್ನಡ ಲಿಪಿಯ ವೆಬ್ ವಿಳಾಸ ಮತ್ತು ಕನ್ನಡ ಲಿಪಿಯ ಇಮೈಲ್‌ ಸೇವೆ ಆರಂಭಿಸಲು ಕೋರಿಕೆ
    7. ಮಾದರಿ ವಿನ್ಯಾಸ ಅಳವಡಿಸುವ ಪ್ರಕ್ರಿಯೆ ವಿಳಂಬವನ್ನು ನಿವಾರಿಸುವ ಕುರಿತು ಪ್ರಸ್ತಾವನೆ
    8. ದಸರಾ ವಸ್ತುಪ್ರದರ್ಶನದಲ್ಲಿ ಚೀನೀ ವಸ್ತುಗಳ ಮಾರಾಟ ನಿಷೇಧಿಸಿರುವ ದಿಟ್ಟಕ್ರಮಕ್ಕೆ ಅಭಿನಂದನೆ ಮತ್ತು ದಸರಾ ಕುರಿತು ಕೆಲವು ಸಲಹೆಗಳು.
    9. ಯುನಿಕೋಡ್ ಕನ್ಸೊರ್ಟಿಯಮ್ ನ ಎನ್ ಕೋಡಿಂಗ್‌ ನಕಾಶೆಯಲ್ಲಿ ತುಳು ಲಿಪಿಯನ್ನು ಪಟ್ಟೀಕರಣ ಮಾಡುವ ಬಗ್ಗೆ
    10. ಕರ್ನಾಟಕ ಸರ್ಕಾರಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ನಿರ್ವಹಿಸುವ ಎರಡು ಮುಖ್ಯ ಪ್ರಸ್ತಾವನೆಗಳಾದ KiGLiMS ಮತ್ತು AGOMS ತಂತ್ರಾಂಶಗಳನ್ನು ರೂಪಿಸಿ ಕಾನೂನು ಪ್ರಕರಣಗಳ ನಿರ್ವಹಣಾ ಕಾರ್ಯದಕ್ಷತೆ ಹೆಚ್ಚಿಸುವ ಬಗ್ಗೆ
    11. ಕರ್ನಾಟಕ ಸರ್ಕಾರದ ಇ – ಆಡಳಿತ ಮತ್ತು ಇತರೆ ಎಲ್ಲಾ ಇಲಾಖೆ, ಸಂಸ್ಥೆಗಳಲ್ಲಿ ರೂಪುಗೊಳ್ಳುತ್ತಿರುವ ವಿವಿಧ ಆಪ್‌ಗಳು ಮತ್ತು ತಂತ್ರಾಂಶಗಳ ಕ್ರೋಡೀಕೃತ ಪಟ್ಟಿಯನ್ನು (IT TOOL INVENTORY) ಹೊಂದುವ ಮತ್ತು ಸಂಬಂಧಿತ ತಾಂತ್ರಿಕ ಅಗತ್ಯಗಳ ಬಗ್ಗೆ
    12. ಕರ್ನಾಟಕ ಸರ್ಕಾರದ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶದ ಮತ್ತು ಸಂಬಂಧಿತ ಸಂಗತಿಗಳ ಸುಧಾರಣೆ ಕುರಿತು ಮನವಿ
    13. ಕರ್ನಾಟಕ ೨೦೨೧-೨೨ ರ ಆಯವ್ಯಯದಲ್ಲಿ ಇ – ಆಡಳಿತ ಇಲಾಖೆಯ ಮತ್ತು ವಿವಿಧ ಇಲಾಖೆಗಳ ತಂತ್ರಜ್ಞಾನ ಸಂಬಂಧೀ ಕಾರ್ಯಯೋಜನೆಗಳಿಗೆ ಸಂಬಂಧಿಸಿದಂತೆ ಸಲಹೆಗಳು
    14. ಇ – ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನಕ್ಕಾಗಿ ಸಮಗ್ರ ಚಲನಶೀಲ ದೇಸೀಕರಣ ತಂತ್ರಾಂಶ ಸ್ಥಾಪನೆ (Integrated Dynamic Localisation Software) ಪ್ರಸ್ತಾವನೆ
    15. ಕರ್ನಾಟಕ ಸರ್ಕಾರದ ತಂತ್ರಾಂಶಗಳು ಮತ್ತು ಆಪ್‌ಗಳಲ್ಲಿ ಇರುವ ಆಕ್ಸೆಸಿಬಿಲಿಟಿ ಅವಶ್ಯಕತೆಗಳನ್ನು ಪೂರೈಸುವ ಕುರಿತು ಮನವಿ
  • ಕರ್ನಾಟಕ ಸರ್ಕಾರದ ಎಲ್ಲ ಜಾಲತಾಣಗಳೂ ಕಡ್ಡಾಯವಾಗಿ ಸರ್ಕಾರದ ಮಾದರಿ ಜಾಲತಾಣ ವಿನ್ಯಾಸವನ್ನೇ ಅಳವಡಿಸುವುದನ್ನು ಕಡ್ಡಾಯ ಮಾಡುವ ಆದೇಶ ಈಗ ಪ್ರಕಟವಾಗಿದೆ.
  • ಇ – ಕನ್ನಡ ಎಂಬ ಪೋರ್ಟಲ್‌ ಆರಂಭಿಸಿ ಈಗ ಪ್ರಯೋಗಾರ್ಥ ಬಳಕೆಯಲ್ಲಿದೆ : ekannada.karnataka.gov.in)
  • ಅದರಲ್ಲಿ ಇರುವ ಪದಕಣಜ ಜಾಲತಾಣದಲ್ಲಿ ( padakanaja.karnataka.gov.in) ೨೦೦ಕ್ಕೂ ಹೆಚ್ಚು ನಿಘಂಟು – ಪದಕೋಶಗಳನ್ನು ಪ್ರಕಟಿಸುವ ಕೆಲಸ ಆರಂಭವಾಗಿದೆ. ಈಗಾಗಲೇ ೯೦ಕ್ಕೂ ಹೆಚ್ಚು ನಿಘಂಟುಗಳ ಪ್ರಕಟಣೆಗೆ ಬೇಕಾದ ಹಕ್ಕು ಸ್ವಾಮ್ಯ ಸಿಕ್ಕಿದ್ದು ೫೦ಕ್ಕೂ ಹೆಚ್ಚು ನಿಘಂಟು – ಪದಕೋಶಗಳು ಪ್ರಕಟವಾಗಿವೆ. ಕನ್ನಡಕ್ಕೆ ಸಂಬಂಧಿಸಿದ ಎಲ್ಲ ಜ್ಞಾನ – ತಂತ್ರಜ್ಞಾನಗಳ ಮಾಹಿತಿಗಳನ್ನು ಒಂದೆಡೆ ನೀಡುವುದೇ ಇ – ಕನ್ನಡ ಪೋರ್ಟಲ್‌ನ ಉದ್ದೇಶವಾಗಿದೆ. ಈ ಮಾಹಿತಿಯನ್ನು ಆಪ್‌ ಮೂಲಕ ನೀಡುವ ಪ್ರಕ್ರಿಯೆ ಆರಂಭವಾಗಿದೆ.
  • ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ ಎಂಬ ಸರ್ಕಾರದ್ದೇ ಸಾಫ್ಟ್‌ವೇರ್‌ ತಯಾರಿಕಾ ಸಂಸ್ಥೆ ಇರುವುದೇ ಹಲವು ಇಲಾಖೆಗಳಿಗೆ ಗೊತ್ತಿರಲಿಲ್ಲ! ಕೆಲವು ಇಲಾಖೆಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.
  • ತುಳು, ಕೊಡವ,ಕೊಂಕಣಿ, ಅರೆಭಾಷೆ ಮತ್ತು ಬ್ಯಾರಿ ಭಾಷಾ ಅಕಾಡೆಮಿಗಳು ಆಯಾ ಭಾಷೆಗಳಲ್ಲೂ ಮಾಹಿತಿ ಕೊಡಬೇಕೆಂಬ ದೃಷ್ಟಿಯಿಂದ ಕನ್ನಡ – ಇಂಗ್ಲಿಶ್‌ ಜೊತೆಗೆ ಇನ್ನೊಂದು ಭಾಷೆಯ ಅವಕಾಶ ಇರುವ ಜಾಲತಾಣಗಳನ್ನು ರೂಪಿಸಲು ಸಲಹೆ ನೀಡಿದ್ದೇನೆ .

ಕನ್ನಡ ಮತ್ತು ತಂತ್ರಜ್ಞಾನ

  1. ಕನ್ನಡ ಭಾಷಾ ತಂತ್ರಜ್ಞಾನ ಕುರಿತ ಹತ್ತು ವಿಸ್ತೃತ ಯೋಜನಾ ವರದಿಗಳ ಬಗ್ಗೆ ಎರಡು ದಿನಗಳ ಕಾರ್ಯಾಗಾರ ನಡೆಸಿ, ಸಮುದಾಯದಲ್ಲಿರುವ ತಜ್ಞರಿಗೇ ಈ ಬಗ್ಗೆ ಕಡತ ರೂಪಿಸಲು ಕೋರಿದ್ದು, ಅವುಗಳನ್ನು ಸಂಗ್ರಹಿಸಲಾಗಿದೆ. ಈ ವರದಿಗಳನ್ನು ಸರ್ಕಾರದಿಂದ ಪರಿಶೀಲಿಸಿ ಅನುಮೋದಿಸಲು ಸಮಿತಿಯೊಂದನ್ನು ರಚಿಸಿದ ಆದೇಶವು (ಜುಲೈ 20, 2021) ಹೊರಬಿದ್ದಿದೆ.
  2. ಕನ್ನಡ ಭಾಷಾ ತಂತ್ರಜ್ಞಾನ ಕುರಿತಂತೆ ಸಮುದಾಯದಲ್ಲಿರುವ ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ. “ಸಮಿತಿಯಲ್ಲ, ಸಮುದಾಯ” ಎಂಬ ನಿಲುವನ್ನು ಆದಷ್ಟೂ ಪಾಲಿಸಿಕೊಂಡು ಬರಲಾಗುತ್ತಿದೆ.
  3. ಕನ್ನಡ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನಾಲ್ಕು ಸರ್ಕಾರಿ ಆದೇಶಗಳು ಜಾರಿಯಾಗಿವೆ:
  4. ಕನ್ನಡ ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಗಳ ಸ್ಥೂಲ ಮಾನದಂಡಗಳು
  5. ಇ-ಕನ್ನಡ ಕಲಿಕಾ ಅಕಾಡೆಮಿ ಹಿನ್ನೆಲೆಯಲ್ಲಿ ಪೋರ್ಟಲ್‌ ನಿರ್ವಹಣೆ ಮಾಡಲು ಸರ್ಕಾರ ಮತ್ತು ಸಮುದಾಯಗಳ ಪ್ರತಿನಿಧಿಗಳಿರುವ ಸಮಿತಿ ರಚನೆ
  6. ಕನ್ನಡ ಪದಕಣಜ – ದೇಸೀಕರಣದ ಕೆಲಸಕ್ಕಾಗಿ ತಜ್ಞರ ಸಮಿತಿ ರಚನೆ
  7. ಇ-ಆಡಳಿತದಲ್ಲಿ ಕನ್ನಡ ಪದಗಳಿಗಾಗಿ ತಜ್ಞರ ಸಮಿತಿ ರಚನೆ
  8. ರಾಜ್ಯ ಸರ್ಕಾರವು ಕನ್ನಡದ ವೆಬ್‌ ವಿಳಾಸವನ್ನು (ಕರ್ನಾಟಕ.ಸರ್ಕಾರ.ಭಾರತ) ನೋಂದಾಯಿಸಿದ್ದು ಅದೀಗ ಚಾಲ್ತಿಯಲ್ಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸೇರಿದಂತೆ ಹಲವು ಸರ್ಕಾರಿ ಜಾಲತಾಣಗಳ ಕನ್ನಡ ವೆಬ್‌ ವಿಳಾಸಗಳು ಈಗ ನೋಂದಣಿಯಾಗಿವೆ. ಕನ್ನಡ ಅಥವಾ ಈಗಾಗಲೇ ಬಳಕೆಯಲ್ಲಿದ್ದ ಇಂಗ್ಲಿಶ್‌ – ಈ ಎರಡೂ ವೆಬ್‌ ವಿಳಾಸಗಳಲ್ಲಿ ಯಾವುದನ್ನು ಬಳಸಿದರೂ ಅದೇ ಜಾಲತಾಣಕ್ಕೆ ಹೋಗುವುದರಿಂದ ಕನ್ನಡೇತರರಿಗೆ ಇದ್ದ ಭಾಷಾ ಸಮಸ್ಯೆಯೂ ನಿವಾರಣೆಯಾಗಿದೆ.
  9. ಕನ್ನಡ ಲಿಪಿಯ ಇ – ಅಂಚೆ ಸೇವೆಯನ್ನು ಪ್ರಯೋಗಾರ್ಥ ಬಳಸಿದ್ದು, ಈಗ ಸಾರ್ವಜನಿಕರಿಗೆ ಇದನ್ನು ಒದಗಿಸುವ ಪ್ರಕ್ರಿಯೆ ಆರಂಭವಾಗಿದೆ.
  10. ಕಣಜ ಅಂತರಜಾಲ ಕನ್ನಡ ಜ್ಞಾನಕೋಶದಲ್ಲಿ ಇರುವ ಲೋಪದೋಷಗಳನ್ನು (ಪ್ರತ್ಯೇಕವಾದ ಪ್ರತಿಯಲ್ಲಿ) ಸರಿಪಡಿಸಲಾಗಿದ್ದು ಅದನ್ನು ಸರ್ಕಾರದ ವೆಬ್‌ವಿಳಾಸಕ್ಕೆ ವರ್ಗಾಯಿಸಲಾಗಿದೆ.
  11. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲ ಅಧೀನ ಸಂಸ್ಥೆಗಳ ಜ್ಞಾನಸಂಗ್ರಹವನ್ನು ಕಣಜ ಜಾಲತಾಣಕ್ಕೇ ನೀಡಿ ಅಲ್ಲಿ ಪ್ರಕಟಿಸುವ ಬಗ್ಗೆ ಸಚಿವರಾಗಿದ್ದ ಶ್ರೀ ಅರವಿಂದ ಲಿಂಬಾವಳಿ ಆದೇಶ ನೀಡಿದ್ದಾರೆ.
  12. ಕನ್ನಡ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ತರಲು ಬೇಕಾದ ಡಿಟಿಪಿ ಕೆಲಸಗಳ ಮತ್ತು ಕರಡು ತಿದ್ದುವ ಕೆಲಸಗಳ ದರಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಹೊಸ ಕಾಲದ ಯುನಿಕೋಡ್‌ / ಆನ್‌ಲೈನ್‌ ಕಾರ್ಯಗಳಿಗೆ ತಕ್ಕಂತೆ ಈ ದರಗಳನ್ನು ಹೆಚ್ಚಿಸಲಾಗಿದೆ.
  13. ಕಣಜ ಜಾಲತಾಣದಲ್ಲಿದ್ದ ೮೦೦ಕ್ಕೂ ಹೆಚ್ಚು ಪಿಡಿಎಫ್‌ ಕೃತಿಗಳನ್ನು ಓಸಿಆರ್‌ ಮೂಲಕ ಪಠ್ಯವಾಗಿ (ವೈಯಕ್ತಿಕ ಪ್ರಯತ್ನದಿಂದ) ಪರಿವರ್ತಿಸಿದ್ದು, ಇದರ ಡಿಟಿಪಿ ಮೌಲ್ಯವು (ಸಮಯ ಉಳಿದಿದ್ದನ್ನು ಹೊರತುಪಡಿಸಿ) ಸುಮಾರು ೫೦ ಲಕ್ಷ ರೂ.ಗಳಾಗಿವೆ.
  14. ಜಾಲತಾಣಗಳಲ್ಲಿ ಕನ್ನಡದ ಅನುಷ್ಠಾನ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜೊತೆಗೆ 25 ಇಲಾಖೆಗಳ ಜಾಲತಾಣಗಳ ಪರಿವೀಕ್ಷಣೆ ನಡೆದಿದೆ. ಇವನ್ನೆಲ್ಲ ಆಯಾ ಇಲಾಖೆಗಳ ಅಧಿಕಾರಿಗಳೇ ಸರಿಪಡಿಸಬೇಕೆಂದು ಸೂಚಿಸಲಾಗಿದೆಯಲ್ಲದೆ ಅವರಿಗೆ ಅನುವಾದ ಮುಂತಾದ ಕೆಲಸಗಳಿಗೆ ಬೇಕಾಗುವ ಮಾಹಿತಿ ನೆರವನ್ನೂ ನೀಡಲಾಗುವುದು ಎಂದು ತಿಳಿಸಲಾಗಿದೆ.

ಸ್ವಯಂಸೇವಾ ಕಾರ್ಯಗಳು

  1. ಕರ್ನಾಟಕ ತುಳು ಅಕಾಡೆಮಿಯು ಅಂಗೀಕರಿಸಿದ ತುಳು ಲಿಪಿಗೆ ಮನ್ನಣೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಅದನ್ನು ಭಾರತೀಯ ಭಾಷಾ ಸಂಸ್ಥಾನವು ತಜ್ಞ ಸಮಿತಿಯ ಮೂಲಕ ಪರಿಶೀಲಿಸಿ ಅನುಮೋದಿಸಿದ ಮೇಲೆ ಸಚಿವರಾಗಿದ್ದ ಶ್ರೀ ಅರವಿಂದ ಲಿಂಬಾವಳಿಯವರ ಸೂಚನೆಯಂತೆ, ಯುನಿಕೋಡ್‌ ನಕಾಶೆ ಪಟ್ಟಿಯಲ್ಲಿ ಸೇರಿಸಲು ತುಳು ಅಕಾಡೆಮಿಗೆ ಸೂಚನೆ ನೀಡಲಾಗಿದೆ.
  2. ಅರೆಭಾಷೆಗೆ ಐಎಸ್‌ಓ ಕೋಡ್‌ ನಿಗದಿಪಡಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದು ಕೆಲಸ ಆರಂಭವಾಗಿದೆ.
  3. ಕೊರೋನಾ ಕುರಿತಂತೆ ಕೇಂದ್ರ ಸರ್ಕಾರದ ಮಾಹಿತಿಗಳನ್ನು ಸ್ವಯಂಸೇವಾ ಕಾರ್ಯಕರ್ತರ ಮೂಲಕ ಕನ್ನಡಕ್ಕೆ ಅನುವಾದಿಸಿ ವಿನ್ಯಾಸ ಮಾಡಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗಿದೆ.
  4. ಕೊರೋನಾ ಕುರಿತಂತೆ ೨೦ಕ್ಕೂ ಹೆಚ್ಚು ಜಾಗೃತಿ ವಿಡಿಯೋಗಳನ್ನು ಸ್ವಯಂಸೇವಾ ಕಾರ್ಯಕರ್ತರ ಮೂಲಕ ನಿರ್ಮಿಸಿ ವ್ಯಾಪಕವಾಗಿ ಹಂಚಲಾಗಿದೆ.
  5. ಮಿತ್ರಮಾಧ್ಯಮ ಟ್ರಸ್ಟ್‌ನಿಂದ ಡಾ. ಎಲ್‌ ಆರ್‌ ಹೆಗಡೆಯವರು ಸಂಗ್ರಹಿಸಿದ ಆರು ಜಾನಪದ ಸಂಗ್ರಹಗಳ ಡಿಜಿಟಲ್‌ ಪ್ರತಿಗಳನ್ನು ತಯಾರಿಸಿ (ಇದಕ್ಕೂ ಸಮಾಜತಾಣದ ಸ್ವಯಂಸೇವಾ ಕಾರ್ಯಕರ್ತರು ನೆರವು ನೀಡಿದ್ದರು) ಕಣಜ ಮತ್ತು ಭಾರತವಾಣಿ ಅಂತರಜಾಲಕ್ಕೆ ನೀಡಲಾಗಿದೆ. ಈಗ ಇನ್ನೂ ಆರು ಪುಸ್ತಕಗಳು ತಯಾರಿ ಹಂತದಲ್ಲಿವೆ.
  6. ವೈಯಕ್ತಿಕವಾಗಿ ಕೊರೋನಾ ಪಿಡುಗಿನ ಸಂಕಷ್ಟಕ್ಕೆ ಸಿಲುಕಿದವರಿಗೆ ಕೈಲಾದ ಆರ್ಥಿಕ ನೆರವನ್ನು ನೀಡಲಾಗಿದೆ. ಕೆಲವರಿಗೆ ಕೆಲಸ ಕೊಡಿಸಲು ಯತ್ನಿಸಲಾಗಿದೆ.
  7. ಮೈಸೂರು ದಸರಾ ಮಹೋತ್ಸವದಲ್ಲಿ ಚೀನಾದ ಉತ್ಪನ್ನಗಳ ಬದಲಿಗೆ ದೇಸಿ ಉತ್ಪನ್ನಗಳನ್ನು ಹೇಗೆ ಮಾರುಕಟ್ಟೆ ಮಾಡಬಹುದೆಂದು ಮಾನ್ಯ ಮುಖ್ಯಮಂತ್ರಿಯವರಿಗೆ ಹಲವು ಸಲಹೆಗಳನ್ನು ಸಲ್ಲಿಸಿದ್ದೇನೆ.
  8. ಸ್ಟಾರ್ಟಪ್‌ (ನವೋದ್ಯಮ) ಸಂಸ್ಥೆಗಳಿಗೆ ಸರ್ಕಾರಿ ಪ್ರೊಕ್ಯೂರ್‌ಮೆಂಟ್‌ ಪ್ರಕ್ರಿಯೆಯಲ್ಲಿ ವಿನಾಯ್ತಿಗಳನ್ನು ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದ್ದು ಇದಾಗಲೇ ಜಾರಿಯಾಗಿದೆ.
  9. ವಿಶಿಷ್ಟ ಚೇತನರ ರಂಗದ ಪದಕೋಶ ರಚಿಸಲು ಇದ್ದ ಪ್ರಸ್ತಾವನೆಯಲ್ಲಿ ಭಾಗಿಯಾಗಿ ಅದನ್ನು ರೂಪಿಸಲು ತಯಾರಿ ನಡೆದಿದೆ.
  10. ರಾಷ್ಟ್ರೀಯ ಹಸ್ತಪ್ರತಿ ಅಭಿಯಾನದ ರಾಷ್ಟ್ರೀಯ ಉನ್ನತಾಧಿಕಾರದ ಸಮಿತಿಯ ಸದಸ್ಯನಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನನ್ನ ಮಿತಿಯಲ್ಲಿ ಕೆಲಸ ಮಾಡಲು ತಜ್ಞರ ಜೊತೆ ಸೇರಿ ಒಂದು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ಈ ಹಿಂದೆ ತಾಳೆಯೋಲೆ ಕೃತಿಗಳ ಸಂರಕ್ಷಣೆಗಾಗಿ ಒಂದು ದಿನದ ಚಿಂತನಾ ಕಾರ್ಯಾಗಾರ ನಡೆಸಿದ್ದೇನೆ. ಈ ಕುರಿತು ಕೆಲಸ ಪ್ರಗತಿಯಲ್ಲಿದೆ.

ನನ್ನ ಕೆಲಸಗಳನ್ನು ಅಂಕಿ ಅಂಶಗಳ ಹಿನ್ನೆಲೆಯಲ್ಲಿ ನೋಡಬಯಸುವವರಿಗೆ, ಸಿಬ್ಬಂದಿ ಮಾಹಿತಿ ಪಡೆಯುವವರಿಗೆ ಕೆಲವು ಅಂಶಗಳನ್ನು ಇಲ್ಲಿ ಕೊಡಬಯಸುತ್ತೇನೆ. ಕೊಂಡಿ: https://bit.ly/2HAy2dw

ನನಗೆ ಒಟ್ಟು ೫೧೩ ಪತ್ರಗಳು ಬಂದಿದ್ದು, ನಾನು ೧೬೬ ಪತ್ರಗಳನ್ನು ಬರೆದಿದ್ದೇನೆ. ಒಟ್ಟು ೨೫೧ ಸಂದರ್ಶಕರನ್ನು ಭೇಟಿ ಮಾಡಿದ್ದೇನೆ. ಕ ಅ ಪ್ರಾಧಿಕಾರ ನಡೆಸಿದ ೨೫ ಜಾಲತಾಣ ಪರಾಮರ್ಶನಾ ಸಭೆಗಳಲ್ಲಿ ಭಾಗವಹಿಸಿದ್ದೇನೆ. ೫೭ ವಿಡಿಯೋ ಸಭೆಗಳು ನಡೆದಿವೆ. ನಾಲ್ಕು ಸಲ ಬೆಂಗಳೂರಿನಿಂದ ಹೊರಗೆ ಅಧಿಕೃತ ಪ್ರವಾಸ ಮಾಡಿದ್ದೇನೆ. ಕಣಜ ಜಾಲತಾಣಕ್ಕಾಗಿ ಹಲವು ಸಲ ಸಭೆ ನಡೆಸಿದ್ದೇನೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತಂತ್ರಜ್ಞಾನ, ಆನ್‌ಲೈನ್‌ ಕನ್ನಡ ಕಲಿಕೆ ಮುಂತಾದ ಸಭೆಗಳಲ್ಲೂ ಭಾಗವಹಿಸಿದ್ದೇನೆ.

ನಾನು ಮುಖ್ಯಮಂತ್ರಿಯವರಿಗೆ ನೀಡಿದ ಕೆಲವು ಸಲಹಾತ್ಮಕ ಪತ್ರಗಳನ್ನು ಮಾಹಿತಿಗಾಗಿ ಈ ಕೊಂಡಿಯಲ್ಲಿ ಕೊಟ್ಟಿದ್ದೇನೆ.

ಕೊಂಡಿ: https://drive.google.com/drive/folders/1t02Zzxw_KyHecld_giiEbMgmvrZ_EwCh?usp=sharing

ನನ್ನನ್ನು ಈ ಹುದ್ದೆಗೆ ನೇಮಿಸಿ ಇಷ್ಟು ಕೆಲಸ ಮಾಡಲು ಅವಕಾಶ ನೀಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ ಎಸ್‌ ಯಡಿಯೂರಪ್ಪನವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನನ್ನ ಈ ಕೆಲಸಗಳಿಗೆ ನೆರವು ನೀಡಿದ ನನ್ನ ಕಚೇರಿ ಸಿಬ್ಬಂದಿಗೆ, ಇ – ಆಡಳಿತ ಇಲಾಖೆಯ ಅಧಿಕಾರಿಗಳಿಗೆ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಶ್ರೀ ಸಿ ಟಿ ರವಿ ಮತ್ತು ಶ್ರೀ ಅರವಿಂದ ಲಿಂಬಾವಳಿ ಅವರಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಮತ್ತು ಕನ್ನಡ ಐಟಿ ಸ್ವಯಂಸೇವಾ ಕಾರ್ಯಕರ್ತರಿಗೆ ನನ್ನ ವಂದನೆಗಳು.

ತಮ್ಮ ವಿಶ್ವಾಸಿ

ಬೇಳೂರು ಸುದರ್ಶನ

ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪನವರ ಸಲಹೆಗಾರ (ಇ – ಆಡಳಿತ) (ನವೆಂಬರ್‌ ೨೦೧೯-ಜುಲೈ ೨೦೨೧)

ನನ್ನ ಖಾಸಗಿ ಇಮೈಲ್‌: belurusudarshana@gmail.com

ಜಾಲತಾಣ: www.ಬೇಳೂರುಸುದರ್ಶನ.ಭಾರತ

……………………………………………………..

ಉತ್ಕೃಷ್ಟತೆ ಎಂದೂ ಆಕಸ್ಮಿಕವಲ್ಲ; ಅದು ಉನ್ನತ ಉದ್ದೇಶ, ಪ್ರಾಮಾಣಿಕ ಯತ್ನ, ಜಾಣ ನಿರ್ದೇಶನ ಮತ್ತು
ಕುಶಲ ಜಾರಿಯ ಒಟ್ಟಾರೆ ಫಲಿತಾಂಶ; ಅದು ಹಲವು ಪರಿಹಾರಗಳ ಪೈಕಿ ಕಂಡುಕೊಂಡ ವಿವೇಚನಾಯುಕ್ತ ಆಯ್ಕೆ.

-‌ ವಿಲಿಯಂ ಏಡೆಲ್ಬರ್ಟ್ ಫಾಸ್ಟರ್

……………………………………………………..

 

 

Share.
Leave A Reply Cancel Reply
Exit mobile version