ರಾಮಾನುಜನ್‌ ಸೂತ್ರಗಳಲ್ಲಿ ಈ ಸುಳಿವು ಇದೆ ಎನ್ನುತ್ತಾರೆ ಈ ಕಾಲದ ಭೌತವಿಜ್ಞಾನಿ ಮಿಶಿವೋ ಕಾಕು.

೨೦೧೨ರ ಅಕ್ಟೋಬರ್‌ ೧. ಪೆನ್ಸಿಲ್ವೇನಿಯಾ ಪ್ರಾಂತದ ಸ್ಕ್ರಾಂಟನ್‌ ಕಲ್ಚರಲ್‌ ಸೆಂಟರಿನಲ್ಲಿ ಕಿಕ್ಕಿರಿದ ಸಭಿಕರೆದುರು ಭೌತ ವಿಜ್ಞಾನಿ ಮಿಶಿವೋ ಕಾಕು ಅವರಿಂದ  ಭವಿಷ್ಯದ ಜಗತ್ತಿನ ಬಗ್ಗೆ  ಅಪರೂಪದ ಭಾಷಣ. ಪ್ರಶ್ನೋತ್ತರದ ಹೊತ್ತಿಗೆ ಸಹಜವಾಗೇ ಪ್ರಶ್ನೆಯೊಂದು ತೂರಿ ಬಂತು.

`ಎಲ್ಲ ಸರಿ,  ಆದ್ರೆ ಈಗ ಬೆಳಕಿನ ವೇಗವನ್ನೂ ೭೩೦ ಕಿಮೀ ಮೀರಿ ನ್ಯೂಟ್ರಿನೋ ಕಣವೊಂದು ಸೆನ್‌ನಿಂದ ಇಟೆಲಿಗೆ ಹಾರಿದೆಯಂತೆ.. ನೀವು ಏನು ಹೇಳ್ತೀರಿ?’ 

ಮಿಶಿವೋ ಕಾಕುಗೆ ಉತ್ತರ ಕೊಡೋದೇನೂ ಕಷ್ಟವಲ್ಲ. ಜೀವನವಿಡೀ ಐನ್‌ಸ್ಟೈನ್‌ ಸಿದ್ಧಾಂತವನ್ನು ಅರೆದು ಕುಡಿದ, ಭೌತಶಾಸ್ತ್ರದ ಭವಿಷ್ಯದ ಬಗ್ಗೆಯೇ ಹಲವು ರೋಚಕ ಪುಸ್ತಕಗಳನ್ನು ಬರೆದ, ಬ್ರಹ್ಮಾಂಡದ ಸೃಷ್ಟಿಗೆ ಕಾರಣವಾದ ಕಣಗಳ ಮೇಲೆ ಸ್ಟ್ರಿಂಗ್‌ ಸಿದ್ಧಾಂತ ಎಂಬ ಹೊಸ ವ್ಯಾಖ್ಯೆಯನ್ನೇ ರೂಪಿಸಿ ವಿಶ್ವದ ಮಹಾನ್‌ ಭೌತಸಿದ್ಧಾಂತಿ ಎಂದೇ ಖ್ಯಾತರಾದ ಕಾಕುಗೆ ಈ ಪ್ರಶ್ನೆ ನಿರೀಕ್ಷಿತವೇ. ಉತ್ತರ ಕೊಡುವ ಮುನ್ನ ಐನ್‌ಸ್ಟೈನ್‌ರಂತೆ  ಕಂಡಾಪಟ್ಟೆ ಕೆದರದೆ  ನೀಳವಾಗಿ ಇಳಿಬಿದ್ದ ಬಿಳಗೂದಲಿನ ಗೊಂಚಲನ್ನು ಸರಿಪಡಿಸಿಕೊಂಡರೋ ಇಲ್ಲವೇ, ವರದಿಯಾಗಿಲ್ಲ.

`ತಣ್ಣಗೆ ಬೆವರುತ್ತಿದ್ದೇವೆ ಮಾರಾಯ್ರೆ….. ಅಕಸ್ಮಾತ್‌ ಈ ಸುದ್ದಿ ನಿಜವೇ ಆದರೆ ನನ್ನ ಜೀವಿತಾವಧಿಯ ಸಂಶೋಧನೆಯೆಲ್ಲ ವ್ಯರ್ಥ’ ಎಂದು ಕಾಕು ನೇರವಾಗಿ ಉತ್ತರಿಸಿದರು. ಮಿಶಿವೋ ಕಾಕು ಅಂಥ ತಳಮಟ್ಟದ ಸ್ವಭಾವದ, ಉನ್ನತ ಮಟ್ಟದ ಭೌತ ಚಿಂತನೆಯ ವಿಜ್ಞಾನಿ.

`ನಿಮ್ಮ ಪುಸ್ತಕ ಚೆನ್ನಾಗಿದೆ’ ಎಂದು ಯಕಃಶ್ಚಿತ್‌ ಬ್ಲಾಗರ್‌ ಆದ ನಾನು ಮಿಶಿವೋ ಕಾಕುಗೆ  ಅವರಿಗೊಂದು ಮಿಂಚಂಚೆ ಕಳಿಸಿದ್ದೆ;   ಅರವತ್ತೇ ಸೆಕೆಂಡುಗಳಲ್ಲಿ ವಂದನೆ ತಿಳಿಸಿದ್ದರು!

ಶ್ರೀನಿವಾಸ ರಾಮಾನುಜನ್‌ (ಚಿತ್ರಕೃಪೆ: ವಿಕಿಪೀಡಿಯ)

ಇಂಥ ನೇರ ನಡೆಯ ಮಿಶಿವೋ ಕಾಕು ತಮ್ಮ ಸಂಶೋಧನೆಗಳ ಹಾದಿಯಲ್ಲಿ ರಾಮಾನುಜನ್ ಕಂಡಿದ್ದ ಸತ್ಯವೊಂದು ಹೇಗೆ ಅತ್ಯಂತ ಪ್ರಮುಖ ಅಂಶವಾಗಿ ನೆರವಾಯಿತು ಎಂದು `ಹೈಪರ್‌ಸ್ಪೇಸ್‌’ ಪುಸ್ತಕದಲ್ಲಿ (Hyperspace: A Scientific Odyssey Through Parallel Universes, Time Warps, and the 10th Dimension) ಬರೆದಿದ್ದಾರೆ ಎನ್ನುವುದು ನಾನು ಹೇಳಹೊರಟಿರೋ ಖುಷಿಯ ಸುದ್ದಿ!  ರಾಮಾನುಜನ್‌ ಬಗ್ಗೆ ಅವರು ಬರೆದಿದ್ದನ್ನ ಅಲ್ಪ ಸ್ವಲ್ಪ ಉಲ್ಲೇಖ ಮಾಡಬಹುದು ಎಂದು ಮಿಶಿವೋ ಕಾಕು ಅವರ ಸಾಹಿತ್ಯ ಪ್ರತಿನಿಧಿಯ ಅನುಮತಿಯನ್ನು ಪಡೆದೇ ಈ ಸುದ್ದಿಯನ್ನು ಕನ್ನಡದಲ್ಲಿ ಬಿತ್ತರಿಸುತ್ತಿದ್ದೇನೆ.  ವಿಶೇಷವೆಂದರೆ, ಮಿಶಿವೋ ಕಾಕುರವರು ರಾಮಾನುಜನ್‌ಗೆ ಸಾಷ್ಟಾಂಗ ನಮಸ್ಕಾರ ಹಾಕಿದ ರೀತಿಯಲ್ಲಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಅಕಸ್ಮಾತ್ತಾಗಿ ಅವರ ಪುಸ್ತಕಗಳನ್ನು ಕದ್ದು ಓದುತ್ತಿದ್ದ ನಾನು   ಕಾಕುರವರ  ಪ್ರಾಂಜಲ ಮನಸ್ಸಿಗೆ ಮನಸೋತೆ. ತಮ್ಮನ್ನು ಕಾಡುತ್ತಿದ್ದ ಬ್ರಹ್ಮಾಂಡದ ಆಯಾಮಗಳ ಗೋಜಲಿಗೆ ಉತ್ತರ ಹುಡುಕುತ್ತಿದ್ದಾಗ ರಾಮಾನುಜನ್‌ ತಮ್ಮ  (ಕಾಕುರವರ) ಸಿದ್ಧಾಂತವನ್ನು ಬೆಂಬಲಿಸುವ ಸಮೀಕರಣವೊಂದನ್ನು ಬರೆದಿದ್ದು ಎಂದು ಗೊತ್ತಾದಾಗ ಕಾಕು ಬೆರಗಾದರು. ಯಾವ ಹಿಂಜರಿಕೆಯೂ ಇಲ್ಲದೆ ರಾಮಾನುಜನ್‌ ಒಳನೋಟಕ್ಕೆ ವಂದನೆ ಸಲ್ಲಿಸಿದರು.

ನಮಗೆಲ್ಲ ಗೊತ್ತೇ ಇದೆ,  ಶ್ರೀನಿವಾಸ ರಾಮಾನುಜನ್‌, ಈ ಮನುಕುಲ ಕಂಡ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರು. ಹಾಗಂತ ಅವರ ಆಪ್ತ ಮಿತ್ರ, ಮತ್ತೊಬ್ಬ ಮೇರು ಗಣಿತಜ್ಞ  ಹಾರ್ಡಿಯೇ ಹೇಳಿದ್ದಾರೆ. ಆ ಕಾಲದಲ್ಲಿದ್ದ ಇನ್ನೊಬ್ಬ ಗಣಿತಜ್ಞರಿಗೆ (ಡೇವಿಡ್‌ ಹಿಲ್ಬರ್ಟ್‌) ೧೦೦ಕ್ಕೆ ೮೦ ಅಂಕ ಕೊಟ್ಟ ಹಾರ್ಡಿ ತಮಗೆ ಕೊಟ್ಟುಕೊಂಡಿದ್ದು ೨೫ ಅಂಕಗಳನ್ನು. ಆದರೆ ರಾಮಾನುಜನ್‌ಗೆ ನೀಡಿದ್ದು ಪೂರಾ ೧೦೦ ಅಂಕಗಳನ್ನು! ಇಂಥ ರಾಮಾನುಜನ್‌ ಅಲ್ಪ ವಯಸ್ಸಿನಲ್ಲೇ ಕಾಯಿಲೆಗೆ ತುತ್ತಾಗಿ ನಿಧನರಾಗಿದ್ದು, ಅವರ ಗಣಿತದ ಸೂತ್ರಗಳೆಲ್ಲ ಈಗಲೂ ಹಲವು ವಿಜ್ಞಾನಿಗಳ ಮತ್ತು ಗಣಿತಜ್ಞರ ತಲೆ ತಿನ್ನುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.

೨೦ನೇ ಶತಮಾನದ ಆರಂಭದ ಗಣಿತಜ್ಞನಿಗೂ, ೨೧ನೇ ಶತಮಾನದಲ್ಲಿ ಬ್ರಹ್ಮಾಂಡದ ಹೊಸ ಸಿದ್ಧಾಂತದ ಒಕ್ಕಣೆ ಬರೆಯುತ್ತಿದ್ದ ಮಿಶಿವೋ ಕಾಕುರಿಗೂ ಸಂಬಂಧ ಕಲ್ಪಿಸಿದ್ದು `ಸ್ಟ್ರಿಂಗ್‌ ಥಿಯರಿ’ ಎಂಬ ಹೊಸ ಸಿದ್ಧಾಂತ. ಈ ಸಿದ್ಧಾಂತದ ಮೇಲೆ ‘ಸೂಪರ್‌ ಸ್ಟ್ರಿಂಗ್‌ ಥಿಯರಿ’ ಮತ್ತು `ಎಂ (M) ಸಿದ್ಧಾಂತ’ವೂ ಬೆಳೆದಿವೆ. ನಮ್ಮಂಥ ಸಾಮಾನ್ಯರಿಗೆ ಎಳ್ಳಷ್ಟೂ ಅರ್ಥವಾಗದ ಈ ಸಿದ್ಧಾಂತಗಳನ್ನು ಇಲ್ಲಿ ವಿವರಿಸಲಾರೆ.

ಸರಳವಾಗಿ ಹೇಳಲು ಯತ್ನಿಸುವುದಾದರೆ:

ಮಿಶಿವೋ ಕಾಕು

ಈ ಬ್ರಹ್ಮಾಂಡ ಹುಟ್ಟು ಮತ್ತು ಕೊನೆಯನ್ನು ವಿವರಿಸುವುದಕ್ಕೆ ಹಲವು ಸಿದ್ಧಾಂತಗಳು ಬೇಕು. ವಿಜ್ಞಾನಿಗಳ ರೇಡಿಯೋ ದೂರರ್ಶಕಗಳ  ಕಣ್ಣು ನಿರುಕಿಸಿದಷ್ಟೂ ಉದ್ದುದ್ದ ಬೆಳೆಯುತ್ತ ಹೋಗುವ ಬ್ರಹ್ಮಾಂಡದ ವಿವರಣೆಗೆ, ನಮ್ಮೆದುರೇ ಇರುವ ಅಣು – ಪರಮಾಣುಗಳ ಒಳಗೊಳಗೇ ಹುಡುಕುವುದೂ ಮುಖ್ಯ. ನಿಸರ್ಗದಲ್ಲಿ ಇರುವ ಬೆಳಕು, ರೇಡಿಯೋ, ಆಯಸ್ಕಾಂತಗಳನ್ನು ಒಳಗೊಂಡ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ಫೋರ್ಸ್‌ ಮತ್ತು ದುರ್ಬಲ  – ಪ್ರಬಲ  ಪರಮಾಣು ಶಕ್ತಿ – ಇವು ಪ್ರಕೃತಿಯಲ್ಲಿ ಕಾಣುವ ನಾಲ್ಕು ಪ್ರಮುಖ ಶಕ್ತಿಗಳು. ಇದನ್ನೆಲ್ಲ ಕ್ಯಾಂಟಂ ಮೆಕಾನಿಕ್ಸ್‌ ಎಂಬ ಸಿದ್ಧಾಂತವು ವಿವರಿಸುತ್ತದೆ. ಆದರೆ ಗುರುತ್ವದ ಬಗ್ಗೆ ಐನ್‌ಸ್ಟೈನ್‌  ತಮ್ಮ ಸಾಮಾನ್ಯ ಸಾಪೇಕ್ಷ ಸಿದ್ಧಾಂತದಲ್ಲಿ ವಿವರಣೆ ನೀಡಿದ್ದಾರೆ. ಇವೆರಡೂ  ಪರಸ್ಪರ ಬೆರೆಯಲಾರವು. ಹಾಗಂತ ಎರಡೂ ಸಿದ್ಧಾಂತಗಳು ಹಲವು ಸತ್ಯಗಳನ್ನು ಸಾಬೀತುಪಡಿಸಿವೆ.

ಈ ಎರಡೂ ಸಿದ್ಧಾಂತಗಳನ್ನು ಒಳಗೊಂಡ ಇನ್ನೊಂದು ದೊಡ್ಡ ಸಿದ್ಧಾಂತವನ್ನು ಸಾಧಿಸಬಹುದು ಎಂಬುದು ಈಗಿನ ವಿಜ್ಞಾನಿಗಳ ಬಹುದೊಡ್ಡ ಸಂಶಯ. ಈ ಎರಡೂ ಸಿದ್ಧಾಂತಗಳನ್ನು ಒಳಗೊಂಡ ಮತ್ತು ಸಂಕೀರ್ಣ ಲೆಕ್ಕಾಚಾರಗಳಲ್ಲಿ ಸರಿಯಾಗೇ ಕಾಣುವ ಸಿದ್ಧಾಂತ ಎಂದರೆ, `ಸೂಪರ್‌ ಸ್ಟ್ರಿಂಗ್‌ ಸಿದ್ಧಾಂತ’ (ಇದರ ಮುಂದುವರಿದ ಭಾಗವೇ ಎಂ ಸಿದ್ಧಾಂತ ಎಂದು ಸರಳವಾಗಿ ಅಂದುಕೊಳ್ಳೋಣ).  ಮಹಾಸ್ಫೋಟದ ಮೂಲಕ ಈ ಬ್ರಹ್ಮಾಂಡವು ಹುಟ್ಟಿದೆ ಎಂದಾದರೆ, ಎರಡೂ ಸಿದ್ಧಾಂತಗಳ ಏಕೀಕೃತ ವಿವರಣೆ ಇರಲೇಬೇಕು ಎಂಬುದು ವಿಜ್ಞಾನಿಗಳ ವಾದ.  ನಾನು ಕೊಡುತ್ತಿರುವ ವಿವರಣೆಯ ಮೊದಲ ಭಾಗ ಇದು.

ಈ ಅವಕಾಶದಲ್ಲಿ ಉದ್ದ, ಅಗಲ, ಆಳದ  ಆಯಾಮಗಳ ಜೊತೆಗೇ ಕಾಲ (ಸಮಯ)ವನ್ನೂ ಜೋಡಿಸದೇ ಇದ್ದರೆ ವಿಜ್ಞಾನವೇ ನೆಟ್ಟಗಿರೋದಿಲ್ಲ ಎಂದು ಐನ್‌ಸ್ಟೈನ್ ಸಾಧಿಸಿದರು. ಆದರೆ ಈಗಿನ ತರ್ಕಗಳ ಪ್ರಕಾರ ಈ ಬ್ರಹ್ಮಾಂಡ ಎಂಬುದು ಒಂದೇ ಅಲ್ಲ, ಬಹುಬ್ರಹ್ಮಾಂಡದ ಲೋಕವಿದು ಎಂಬ ವಾದಕ್ಕೆ ಬೆಲೆ ಬಂದಿದೆ. ಕೆಲವು ಇದನ್ನು ಪರ್ಯಾಯ  / ಸಮಾನಾಂತರ ಬ್ರಹ್ಮಾಂಡ ಎಂದೂ ಕರೆದಿದ್ದಾರೆ. ಹೀಗೆ ಬ್ರಹ್ಮಾಂಡದ ಬಗ್ಗೆ ಇರುವ ಕಲ್ಪನೆಗಳೂ ಸುಮಾರಾಗಿ ನಮ್ಮ ಭಾರತೀಯ ಪುರಾಣಗಳ ಹತ್ತಿರ ಹತ್ತಿರ ಬರುತ್ತಿವೆ!  ಇದು ನಾನು ಕೊಡಬಯಸಿದ ವಿವರಣೆಯ ಎರಡನೇ ಭಾಗ.

ಈ ಎರಡೂ ಪ್ಯಾರಾಗಳನ್ನು ಓದಿಕೊಂಡ ನೀವು ಈಗ ಮಿಶಿವೋ ಕಾಕು ಹೇಳಿದ್ದೇನು ಎಂದು ತಿಳಿದುಕೊಂಡರೆ (ನನಗೇ ಅಷ್ಟೇನೂ ಅರ್ಥವಾಗಿಲ್ಲ; ನಿಮಗೆ ಅರ್ಥವಾಗುವ ಹಾಗೆ ಬರೆಯಲು ಹೊರಟಿದ್ದೇನೆ!) ಈ ಲೇಖನದ ಓದು ಸಲೀಸು!!!

‘ನೋಡಿ, ಈ ಬ್ರಹ್ಮಾಂಡವನ್ನು ವಿವರಿಸಲು ಕೇವಲ ನಾಲ್ಕು ಆಯಾಮಗಳು  ಸಾಕು ಎಂದು ನಾವು ಇದುವರೆಗೆ ನಂಬಿದ್ದೇವೆ.  ಹೀಗೆ ಮಾಡಿದಾಗ  ಬೆಳಕನ್ನು  ‘ಕಂಪನಗಳು’ ಎಂದು ಕರೆಯಬಹುದು. ಹೀಗೆ ಐದನೇ ಆಯಾಮವನ್ನು ಜೋಡಿಸಿದರೆ ಬೆಳಕು ಮತ್ತು ಗುರುತ್ವವನ್ನು ಏಕೀಕರಿಸುವ ಸೂತ್ರಗಳನ್ನು ನಾವು ಹೆಣೆಯಬಹುದು. ಐದಕ್ಕೂ ಹೆಚ್ಚು ಆಯಾಮಗಳಿದ್ದರೆ  ನಮ್ಮ ಕಣ್ಣಿಗೆ ಕಾಣುವ  ಎಲ್ಲಾ ನಾಲ್ಕೂ ಶಕ್ತಿಗಳನ್ನು ಒಂದೇ ಗಣಿತದ ಕೊಡೆಯ ಕೆಳಗೆ ತರಬಹುದು’ – ಇದು ಮಿಶಿವೋ ಕಾಕು ವಾದದ ಮೂಲ ತತ್ವ. ಇದನ್ನೇ ಹಿಂಬಾಲಿಸಿ ಹೋದ ಕಾಕುರವರು ಹಲವು ಹೊಳಹುಗಳನ್ನು ಕಂಡರು.

೧೯ನೇ ಶತಮಾನದಲ್ಲಿ ಬ್ರಿಟಿಶ್‌ ವಿಜ್ಞಾನಿ ಮೈಕೇಲ್‌ ಫ್ಯಾರಡೇಯವರು ‘ಫೀಲ್ಡ್ಸ್‌’ ಎಂಬ ಒಂದು ವಿವರಣೆಯನ್ನು ನೀಡಿದರು. ಈ ಫೀಲ್ಡ್‌ ಸಮೀಕರಣಗಳು ಎಲ್ಲ ಶಕ್ತಿಗಳನ್ನು ಒಳಗೊಳ್ಳುವಂತೆ ಮಾಡಲು  ಹತ್ತಾರು ದಶಕಗಳ ಕಾಲ ವಿಜ್ಞಾನಿಗಳು ತಿಣುಕುತ್ತಿದ್ದಾರೆ. ೧೮೬೦ರಲ್ಲಿ ಸ್ಕಾಟಿಶ್‌ ವಿಜ್ಞಾನಿ ಜೇಮ್ಸ್‌ ಕ್ಲಾರ್ಕ್‌ ಮ್ಯಾಕ್ಸ್‌ವೆಲ್‌ ವಿದ್ಯುಚ್ಚಕ್ತಿ ಮತ್ತು ಆಯಸ್ಕಾಂತೀಯತೆಯನ್ನು ಫೀಲ್ಡ್‌ ಸಮೀಕರಣದಲ್ಲಿ ತರಲು ಯಶಸ್ವಿಯಾದರು. ಐನ್‌ಸ್ಟೈನ್ ಇದಕ್ಕೆ ಗುರುತ್ವವನ್ನು ಸೇರಿಸಿದರು. ಪರಮಾಣುಗಳಿಗಿಂತಲೂ ಚಿಕ್ಕದಾದ ಕಣಗಳ ಕುರಿತ ಸಮೀಕರಣವನ್ನು ೭೦ರ ದಶಕದಲ್ಲಿ ಬರೆಯಲಾಯಿತು.

ಅದೆಲ್ಲ ಸರಿ, ಹೀಗೆ ಆಯಾಮಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ನಿಸರ್ಗದ ಗೂಢತೆಗಳ ವಿವರಣೆಗಳು ಸುಲಭ  ಎಂದು ಗೊತ್ತಾಗಿದ್ದಾದರೂ ಹೇಗೆ?

ಇದನ್ನು ತಿಳಿಯಬೇಕಾದರೆ ನೀವು ಮತ್ತೆ ೧೯ನೇ ಶತಮಾನಕ್ಕೆ ಹೋಗಬೇಕು. ಆಗಿನ ಸುಪ್ರಸಿದ್ಧ ಗಣಿತಜ್ಞ ಜಾಜ್‌ ಬರ್ನಾರ್ಡ್‌ ರೀಮನ್‌ ಈ ಅರಿವಿಗೆ ಕಾರಣರಾದವರು. ತನ್ನ ಗುರು ಕಾರ್ಲ್‌ ಫ್ರೆಡೆರಿಕ್‌ ಗಾಸ್‌ ಸೂಚನೆಯ ಮೇಲೆ ದಿನಗಟ್ಟಳೆ ತಲೆ ಕೆಡಿಸಿಕೊಂಡು (ನಿಜ, ಆ ಕಾಲದಲ್ಲಿ ರೀಮನ್‌ರ ದೇಹದ ನರವ್ಯೂಹವೇ ಕುಸಿಯುವಂತಿತ್ತು) ಸಂಶೋಧನೆ ನಡೆಸಿದ ರೀಮನ್‌ ಕೊನೆಗೆ ನ್ಯೂಟನ್‌ಗಿಂದ ವಿಭಿನ್ನವಾದ ಚಿಂತನೆಯನ್ನೇ ಹುಟ್ಟುಹಾಕಿದರು. ಎಷ್ಟೇ ಸಂಕೀರ್ಣ ಸಮತಲಗಳನ್ನೂ ಹೀಗೆ ಹೊಸ ಅಂಶಗಳನ್ನು ಸೇರಿಸುವ ಮೂಲಕ ವಿವರಿಸಬಹುದು ಎಂದು ರೀಮನ್‌ ಕಂಡುಕೊಂಡರು. ನಾಲ್ಕು ಆಯಾಮಗಳ ಅವಕಾಶದಲ್ಲಿ ಪ್ರತಿಯೊಂದರ ಗುಣವನ್ನೂ ವಿವರಿಸಲು ೧೦ ಸಂಖ್ಯೆಗಳ ಒಂದು ಜೊತೆ (ಸೆಟ್‌) ಬೇಕು ಎಂಬುದನ್ನೂ ರೀಮನ್‌ ಹುಡುಕಿಕೊಂಡರು. ಇದನ್ನು ‘ಮೆಟ್ರಿಕ್‌ ಟೆನ್ಸಾರ್‍’ ಎನ್ನುತ್ತಾರೆ.

ಈ ವಾದವೇ ಮುಂದುವರೆದು ೨೬ ಆಯಾಮಗಳ ಸ್ಟ್ರಿಂಗ್‌ ಥಿಯರಿವರೆಗೆ ಬಂದು ನಿಂತಿದೆ.  ಸಾಪೇಕ್ಷ ಸಿದ್ಧಾಂತದ ಪ್ರಕಾರ ಸಿದ್ಧಾಂತಗಳನ್ನು ಮಂಡಿಸುವ ಭೌತ ವಿಜ್ಞಾನಿಗಳು ಬ್ರಹ್ಮಾಂಡದ ಕಂಪನಗಳ ಲೆಕ್ಕ ಹಾಕುವಾಗ ೨೪ಕ್ಕೆ ಇನ್ನೂ ಎರಡು ಆಯಾಮಗಳನ್ನು ಸೇರಿಸುತ್ತಾರಂತೆ. ಅಂದರೆ ಕಾಲ-ಅವಕಾಶದಲ್ಲಿ ಒಟ್ಟು ೨೬ ಆಯಾಮಗಳಿವೆ ಎಂದಾಯಿತು. ಈ ಲೆಕ್ಕಾಚಾರಕ್ಕೆ ರಾಮಾನುಜನ್‌ ಬರೆದಿಟ್ಟ ಮಾಡ್ಯುಲಾರ್‌ ಫಂಕ್ಷನ್‌ ಎಂಬ ಗಣಿತದ ಸೂತ್ರಗಳೇ ಆಧಾರ.  ರಾಮಾನುಜನ್‌ರ ಗಣಿತದ ಸೂತ್ರಗಳಲ್ಲಿ ಒಂದರಲ್ಲಿ ಸಂಖ್ಯೆ `೨೪’ರ ಘಾತವು ಕಾಣುತ್ತದೆ. ಈಗಿನ ಸ್ಟ್ರಿಂಗ್‌ ಥಿಯರಿಯಲ್ಲೂ ೨೪ ಸಂಖ್ಯೆಯು ತುಂಬಾ ಮುಖ್ಯವಾಗಿದೆ. ರಾಮಾನುಜನ್‌ ಸೂತ್ರದಲ್ಲಿ ಈ ೨೪ ಹೇಗೆ ಬಂತು ಎಂಬುದನ್ನು ಈವರೆಗೂ ಖಚಿತವಾಗಿ ಪತ್ತೆ ಹಚ್ಚಲಾಗಿಲ್ಲ. ಆದ್ದರಿಂದಲೇ ಇದನ್ನು ರಾಮಾನುಜನ್‌ ಕಂಡುಹಿಡಿದ ಗಣಿತದ ಆವಿಷ್ಕಾರ ಎಂದೇ ವಿಜ್ಞಾನಿಗಳು ಗುರುತಿಸುತ್ತಾರೆ.

“ಶ್ರೀನಿವಾಸ ರಾಮಾನುಜನ್‌ ವಿಜ್ಞಾನದ ಇತಿಹಾಸದಲ್ಲೇ ಮನುಕುಲ ಕಂಡ ಅತ್ಯಂತ ವಿಚಿತ್ರ ಮನುಷ್ಯ. ಅವರನ್ನು ಸ್ಫೋಟಗೊಳ್ಳುತ್ತಿರುವ ಸೂಪರ್‌ನೋವಾಗೆ ಹೋಲಿಸಬಹುದು; ಏಕೆಂದರೆ ಅವರು ಗಣಿತದ ಬಹುಮುಖ್ಯ ಅಂಶಗಳ ಮೇಲೆ ಬೆಳಕು ಚೆಲ್ಲಿದರು. ೩೩ನೆಯ ವಯಸ್ಸಿಗೇ ಕಾಯಿಲೆಗೆ ತುತ್ತಾದರು. ಏಕಾಂಗಿಯಾಗಿ ಸಂಶೋಧನೆ ಮಾಡಿದ ಅವರು ಪಾಶ್ಚಾತ್ಯ ಗಣಿತಜ್ಞರೆಲ್ಲರೂ ಒಂದು ನೂರು ವರ್ಷಗಳಲ್ಲಿ ಕಂಡುಹಿಡಿದ ಗಣಿತದ ಸೂತ್ರಗಳನ್ನೆಲ್ಲ ಸ್ವತಃ ತಾವೇ ಹುಡುಕಿ ಬರೆದರು. ದುರಂತವೆಂದರೆ ಇಂಥ ಗೊತ್ತಿರುವ ಗಣಿತವನ್ನು ಮತ್ತೆ ಆವಿಷ್ಕರಿಸುವುದರಲ್ಲೇ ಅವರ ಬದುಕು ಕಳೆದುಹೋಯಿತು” ಎಂದು ಮಿಶಿವೋ ಕಾಕು ಹೇಳುತ್ತಾರೆ.

ಹೈಪರ್‌ಸ್ಪೇಸ್‌ ಪುಸ್ತಕದಲ್ಲಿ ರಾಮಾನುಜನ್‌ ಬಗ್ಗೆ ಮಿಶಿವೋ ಕಾಕು ಬರೆದಿದ್ದು ಹೀಗಿದೆ: ಬಹುಶಃ ನಾನು ಈ ಭಾರತೀಯ ಮೇಧಾವಿಯನ್ನು ಅರಿತುಕೊಂಡರೆ, ನಾನು ಈಗಿನ ಜಗತ್ತಿನಲ್ಲಿ ಏಕೆ ಬದುಕಿದ್ದೇವೆ ಎಂದು ಅರ್ಥ ಮಾಡಿಕೊಳ್ಳಬಹುದು’ – ಮಿಶಿವೋ ಕಾಕುವಿನಂಥ ಶ್ರೇಷ್ಠ ಭೌತವಿಜ್ಞಾನಿಯು ಪ್ರಾಂಜಲ ಮನಸ್ಸಿನಿಂದ ರಾಮಾನುಜನ್‌ ಬಗ್ಗೆ ಪುಟಗಟ್ಟಲೆ ಬರೆದು ಸ್ಮರಿಸಿಕೊಂಡಿದ್ದಾರೆ ಎಂದರೆ ರಾಮಾನುಜನ್‌ ಎಂಥ ಕಾಲಾತೀತ ಮಾನವ ಎಂದು ಊಹಿಸಬಹುದು.

ಮಿಶೀವೋ ಕಾಕು ಬರೆದ ಪುಟ

ವಿಜ್ಞಾನದ ಈ ಸಂಕೀರ್ಣ ಚರ್ಚೆಗಳ ನಡುವೆ ಶ್ರೀನಿವಾಸ ರಾಮಾನುಜನ್‌ ತನಗೆ ಇವೆಲ್ಲ ಜ್ಞಾನವನ್ನೂ ನೀಡಿದ್ದು ತನ್ನ ಆರಾಧ್ಯದೈವವಾದ ನಮಕ್ಕಲ್‌ನ (ನಾಮಗಿರಿ) ಮಹಾಲಕ್ಷ್ಮಿ ತಾಯಾರ್‌ ಎಂದೇ ಖಚಿತವಾಗಿ ಬರೆದಿದ್ದಾರೆ ಎಂಬ ಇನ್ನೊಂದು ಇತಿಹಾಸವನ್ನು ಮರೆಯುವಂತಿಲ್ಲ. `ನಾನು ನಿದ್ದೆ ಮಾಡುತ್ತಿದ್ದಾಗ ವಿಚಿತ್ರ ಅನುಭವವಾಯ್ತು. ಹರಿಯುತ್ತಿರುವ ರಕ್ತದಿಂದಲೇ ಕೆಂಪು ಪರದೆ ಮೂಡಿತು. ಹಠಾತ್ತನೆ ಒಂದು ಕೈ ಬಂದು ಅದರ ಮೇಲೆ ಎಲ್ಲಿಪ್ಟಿಕ್‌ ಇಂಟೆಗ್ರಲ್‌ಗಳನ್ನು ಬರೆಯಲಾರಂಭಿಸಿತು. ಅವೆಲ್ಲವೂ ನನ್ನ ಮನಸ್ಸಿನಲ್ಲಿ ಭದ್ರವಾಗಿ ಮೂಡಿದವು. ನಾನು ಎಚ್ಚರಗೊಂಡ ಮೇಲೆ ಅದನ್ನೇ ಹಾಳೆಯ ಮೇಲೆ ಬರೆದೆ’ ಎಂದು ರಾಮಾನುಜನ್‌ ಹೇಳಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗೆ:

  • ರಾಮಾನುಜನ್‌ರ ಕಥೆಯಂತೆಯೇ ಇರುವ ಒಂದು ಅತ್ಯುತ್ತಮ ಹಾಲಿವುಡ್‌ ಸಿನೆಮಾ : ಗುಡ್‌ ವಿಲ್‌ ಹಂಟಿಂಗ್‌ ನೋಡಿ (https://en.wikipedia.org/wiki/Good_Will_Hunting). ಖ್ಯಾತ ನಟರಾದ ಮ್ಯಾಟ್‌ ಡಮನ್‌, ಬೆನ್‌ ಅಫ್ಲೆಕ್‌, ರಾಬಿನ್‌ ವಿಲಿಯಮ್ಸ್‌ರಂಥ ಘಟಾನುಘಟಿಗಳು ನಟಿಸಿರುವ ಈ ಸಿನೆಮಾ ತುಂಬಾ ವಿಶಿಷ್ಟವಾಗಿದೆ.
  • ದ ಮ್ಯಾನ್‌ ಹೂ ನ್ಯೂ ಇನ್‌ಫಿನಿಟಿ: ರಾಮಾನುಜನ್‌ ಕುರಿತ ಸಿನೆಮಾ ನೋಡಿ: https://en.wikipedia.org/wiki/The_Man_Who_Knew_Infinity_(film)

ತಮ್ಮ ಬರಹಗಳನ್ನು ಉಲ್ಲೇಖಿಸಲು ಅನುಮತಿ ನೀಡಿದ ಮಿಶಿವೋ ಕಾಕುರವರಿಗೆ ನನ್ನ ಕೃತಜ್ಞತೆಗಳು

Share.
Leave A Reply Cancel Reply
Exit mobile version