ಸರಕಾರಿ ಸ್ವಾಮ್ಯದ ಗೇರು ಅಭಿವೃದ್ಧಿ ನಿಗಮ ಸಾವಿರಾರು ಹೆಕ್ಟೇರು ಭೂಮಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಎಂಡೋಸಲ್ಫಾನ್‌ ಸುರಿದ ೧೦ ಸಾವಿರಕ್ಕೂ ಅಧಿಕ ಮಕ್ಕಳು ರೋಗಗ್ರಸ್ತರಾಗಿದ್ದಾರೆ. ಆದುದರಿಂದ ಸರಕಾರದಿಂದ ಸೂಕ್ತ ಪರಿಹಾರ ಪಡೆಯುವುದು ಅವರ ಹಕ್ಕು, ಅದು ಭಿಕ್ಷೆಯಲ್ಲವೆಂದು ಸರಕಾರಿ ಅಧಿಕಾರಿಗಳು ತಿಳಿದುಕೊಳ್ಳಬೇಕಾಗಿದೆ.

ಉಡುಪಿಯ ವೈಕುಂಠ ಬಾಳಿಗಾ ಲಾ ಕಾಲೇಜಿನಲ್ಲಿ ಏರ್ಪಡಿಸಿದ ಕುಂದಾಪುರದ ಹಳ್ಳಿಗಳು ಕಂಡ “ಎಂಡೋ ದುರಂತ” ವಿಚಾರ ಸಂಕೀರ್ಣದಲ್ಲಿ ಅಧಿಕಾರಿಗಳ ನಡೆ ಹಾಗೂ ನಿಲುವುಗಳನ್ನು ಪ್ರಶ್ನಿಸಲಾಯಿತು. ಎಂಡೋಪೀಡಿತರಾಗಿ ಮರಣ ಹೊಂದಿದವರ ಮಕ್ಕಳ ಹೆತ್ತವರಿಗೆ ಪರಿಹಾರ ನೀಡುವ ಕುರಿತು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಶಿವಶೈಲಂ ಅವರು ತಳೆದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಲಾಯಿತು.

ಉಚ್ಚ ನ್ಯಾಯಾಲಯ ಘೋಷಿಸಿರುವ ಮಾಸಾಶನ, ಉಚಿತ ಚಿಕಿತ್ಸೆಯ ಕಾರ್ಡು ಇತ್ಯಾದಿಗಳು ತಮಗೆ ತಲುಪಿಲ್ಲವೆಂದು ೨೦೦ಕ್ಕೂ ಅಧಿಕ ಎಂಡೋ ಸಂತ್ರಸ್ತರು ಹೈಕೋರ್ಟು ಪ್ರತಿನಿಧಿ ವೈಶಾಲಿ ಹೆಗ್ಡೆಯವರಿಗೆ ನೀಡಿದ್ದ ದೂರುಗಳ ಸತ್ಯಾಸತ್ಯತೆಯನ್ನು ತಿಳಿಯಲು ಕುಂದಾಪುರ ತಾಲೂಕಿನ ೨೭ ಹಳ್ಳಿಗಳಿಗೆ ಎಂಡೋ ಕಾರ್ಯಕರ್ತರು ನೀಡಿದ್ದ ಭೇಟಿಯ ಹಿನ್ನೆಲೆಯಲ್ಲಿ ಈ ವಿಚಾರ ಸಂಕೀರಣವನ್ನು ಏರ್ಪಡಿಸಲಾಗಿತ್ತು.

ಇನ್ನೂ ತಲುಪದ ಮಾಶಾಸನ, ಸ್ಮಾರ್ಟ್ ಕಾರ್ಡ್

ಹತ್ತು ದಿನಗಳ ಹಿಂದೆ ವೈಶಾಲಿ ಹೆಗ್ಡೆಯವರು ಕುಂದಾಪುರಕ್ಕೆ ಭೇಟಿ ನೀಡಿದಾಗ ಆಗಸ್ಟ್ ೪ರೊಳಗೆ ಎಲ್ಲಾ ಸಂತ್ರಸ್ತರ ಖಾತೆಗಳಿಗೆ ಹಿಂದಿನ ಬಾಕಿ ಸಹಿತ ೬ ತಿಂಗಳು ಮಾಶಾಸನವನ್ನು ಜಮಾ ಮಾಡಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ನೀಡಿದ್ದು ಇನ್ನೂ ಕಾರ್ಯಗತವಾಗಿಲ್ಲ. ಪ್ರತಿ ತಿಂಗಳ ೧೦ರೊಳಗೆ ಮಾಶಾಸನ ನೀಡಲಾಗುವುದು ಎಂದು ಆರೋಗ್ಯ ಅಧಿಕಾರಿಗಳು ಜೂನ್ ತಿಂಗಳಲ್ಲಿ ಹೈಕೋರ್ಟಿಗೆ ಲಿಖಿತದಲ್ಲೂ ನೀಡಿದ್ದರು. ಎಂಡೋ ಕಾರ್ಯಕರ್ತರು ವಿಚಾರಿಸಿದ ೩೦೦ಕ್ಕೂ ಅಧಿಕ ಸಂತ್ರಸ್ತರಲ್ಲಿ ಹೆಚ್ಚಿನವರಿಗೆ -ಬ್ರವರಿ ತಿಂಗಳ ಮಾಶಾಸನ ಬಂದಿದ್ದರೆ ಕೆಲವರಿಗೆ ೨ ತಿಂಗಳ ಮಾಶಾಸನ ಸಿಕ್ಕಿದೆ. -ಬ್ರವರಿ ತಿಂಗಳಿಂದ ಜುಲೈ ತಿಂಗಳವರೆಗಿನ ಮಾಶಾಸನ ಪಡೆದವರಾರೂ ಕಾರ್ಯಕರ್ತರಿಗೆ ಸಿಗಲಿಲ್ಲ!
ಎಂಡೋ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡುವುದಕ್ಕಾಗಿ ಆರೋಗ್ಯ ಇಲಾಖೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅದಕ್ಕಾಗಿ ರೂಪಿಸಿರುವ ಸ್ಮಾರ್ಟ್‌ಕಾರ್ಡ್ ತಮಗೆ ಇನ್ನೂ ಸಿಕ್ಕಿಲ್ಲವೆಂದು ಹಲವಾರು ಸಂತ್ರಸ್ತರು ದೂರಿದ್ದಾರೆ.

ಅಂಗವಿಕಲತೆ ಪ್ರಮಾಣ

ಉಚ್ಚನ್ಯಾಯಾಲಯದ ಆದೇಶದ ಪ್ರಕಾರ ೨೫ ಶೇಕಾಡಾಕ್ಕಿಂತ ಕೆಳಗಿನ ಅಂಗವಿಕಲತೆಯುಳ್ಳವರಿಗೆ ಮಾಶಾಸನವಿಲ್ಲ. ೨೫ರಿಂದ ೬೦ ಶೇಕಡಾ ಅಂಗವಿಕಲತೆಯುಳ್ಳವರಿಗೆ ತಿಂಗಳಿಗೆ ೧,೫೦೦ ರೂ ಮಾಶಾಸನ. ೬೦ ಶೇಕಡಾಗಿಂತ ಅಧಿಕ ಅಂಗವಿಕಲರಿಗೆ ೩,೦೦೦ ರೂ. ಮಾಶಾಸನ ಸಿಗಬೇಕಾಗಿದೆ. ಹಾಗಾದರೆ ೬೦ ಶೇಕಡಾ ಅಂಗವಿಕಲರು ಯಾವ ಗುಂಪಿಗೆ ಸೇರುತ್ತಾರೆ? ಆರೋಗ್ಯ ಇಲಾಖೆಯ ಪ್ರಕಾರ ಅವರೆಲ್ಲರು ಕೆಲಸ ಮಾಡಲು ಅಸಾಧ್ಯವಿರುವಷ್ಟು ಅಂಗವಿಕಲರು. ಆದುದರಿಂದ ಅವರೆಲ್ಲರನ್ನು ೩,೦೦೦ ರೂ. ಮಾಶಾಸನದ ಗುಂಪಿಗೆ ಸೇರಿಸಿದ್ದಾರೆ. ಆದರೆ ರೆವೆನ್ಯೂ ಇಲಾಖೆ ಪ್ರಕಾರ ಅವರೆಲ್ಲ ೧,೫೦೦ ರೂ. ಮಾಶಾಸನಕ್ಕೆ ಮಾತ್ರ ಅರ್ಹರು! “ಈ ಹಿಂದೆ ನಿಮಗೆ ೩,೦೦೦ ರೂ. ಮಾಶಾಸನ ಎಂದು ತಪ್ಪಾಗಿ ತಿಳಿಸಲಾಗಿತ್ತು. ಇನ್ನು ಮುಂದೆ ನಿಮಗೆ ಸಿಗುವುದು ೧,೫೦೦ ರೂಪಾಯಿ” ಎಂಬ ಶರಾ ನೀಡಿದ ದಾಖಲೆಯೂ ಇದೆ.

ಹುಟ್ಟಿದ್ದು ಯಾವಾಗ?

ವೈದ್ಯಕೀಯ ಶಿಬಿರಗಳಿಗೆ ಸಂತ್ರಸ್ತರು ಬಂದಾಗ ಅಥವಾ ರೆವೆನ್ಯೂ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಅಧಿಕಾರಿಗಳು ಕೇಳುವ ಮೊದಲ ಪ್ರಶ್ನೆ – “ನೀವು ಹುಟ್ಟಿದ್ದು ಯಾವಾಗ?” ಅರಣ್ಯ ಇಲಾಖೆಯವರು ೧೯೮೦ರಿಂದ ಎಂಡೋ ಸಲ್ಫಾನ್‌ ಸಿಂಪಡಿಸಲು ಆರಂಭಿಸಿರುವುದರಿಂದ ಅದರ ಅನಂತರ ಹುಟ್ಟಿದವರು ಮಾತ್ರ ಪರಿಹಾರ ಪಡೆಯಲು ಯೋಗ್ಯರು ಎಂಬುದು ಅವರ ನಿಲುವು. ವಾಸ್ತವ ಸಂಗತಿ ಏನೆಂದರೆ, ಈ ನಿಲುವು ಅನ್ವಯಿಸುವುದು ಹುಟ್ಟಿದಾರಭ್ಯ ಇರುವ ಅಂಗವಿಕಲತೆ, ಪಿಟ್ಸ್ ಮುಂತಾದ ನರಮಂಡಲದ ರೋಗಗಳಿಗೆ ಮಾತ್ರ.

ಎಂಡೋಸಲ್ಫಾನ್‌ ಸೇವಿಸಿದ ಹಿರಿಯರಿಗೆ ಸ್ಕ್ವಿಜೋಪಿನಿಯಾ ಮುಂತಾದ ಮನೋವೈಕಲ್ಯ, ಕುರುಡು, ಚರ್ಮರೋಗ, ಕ್ಯಾನ್ಸರ್, ಹಾರ್ಮೋನ್ ಏರಿಳಿತದ ರೋಗಗಳು ಬರಲು ಸಾಧ್ಯವಿದೆ ಎಂದು ರೆವೆನ್ಯೂ ಅಧಿಕಾರಿಗಳಿಗೆ ತಿಳಿದಿಲ್ಲವೇಕೆ?
ಇಡೂರು ಗ್ರಾಮದ ನಾಗರಾಜ ಶೆಟ್ಟರನ್ನು ವೈದ್ಯಕೀಯ ಶಿಬಿರವೊಂದರಲ್ಲಿ ಪರೀಕ್ಷಿಸಿದ ವೈದ್ಯರು ಅವರಿಗೆ ೮೦ ಶೇಕಡಾ ಅಂಗವಿಕಲತೆ ಎಂದು ಸರ್ಟಿಫಿಕೇಟ್ ನೀಡಿದ್ದರು. ತಹಶೀಲ್ದಾರರೂ ಮುನ್ನೂರು ರೂ.ಗಳ ಮಾಶಾಸನವನ್ನು ಮಂಜೂರು ಮಾಡಿದರು. ಆದರೆ ಮಾಶಾಸನ ಬಂದೇ ಇಲ್ಲ. ಇದೀಗ ಅವರಿಗೆ ಮಾಶಾಸನ ರದ್ದು ಮಾಡಿದ ಸುದ್ದಿ ಬಂದಿದೆ. ಏಕೆಂದರೆ, ಅವರು ಹುಟ್ಟಿದ್ದು ೧೯೭೯ರಲ್ಲಿ !

ನಮ್ಮ ಪಟ್ಟಿಯಲ್ಲಿ ನಿಮ್ಮ ಹಳ್ಳಿ ಇಲ್ಲ

ಅರಣ್ಯ ಇಲಾಖೆಯವರು ಆರೋಗ್ಯ ಇಲಾಖೆಗೆ ಕೊಟ್ಟ ಪಟ್ಟಿಯಲ್ಲಿ ೫೪ ಗ್ರಾಮಗಳಲಿಲ ಮಾತ್ರ ಎರಡು ಸಲ್ಫಾನ್‌ ಸಿಂಪಡಿಸಿದ್ದೇವೆ ಎಂದು ಹೇಳಿದ್ದಾರೆ. ಆದುದರಿಂದ ಆ ೫೪ ಗ್ರಾಮದ ನಿವಾಸಿಗಳಿಗೆ ಮಾತ್ರ ನಾವು ಸಂತ್ರಸ್ತರು ಎಂದು ಪರಿಗಣಿಸುತ್ತೇವೆ ಎಂದು ಆರೋಗ್ಯ ಇಲಾಖೆ ಹಾಗೂ ರೆವೆನ್ಯೂ ಇಲಾಖೆಯ ವಾದ. ಪ್ರತಿಷ್ಠಾನದ ಕಾರ್ಯಕರ್ತರು ಭೇಟಿ ನೀಡಿದ ಖಂಬದಕೋಣೆ, ಗುಲ್ವಾಡಿ, ನಾವುಂದ, ಜಪ್ತಿ, ಶೇಡಿಮನೆ, ಹೆಮ್ಮಾಡಿ, ಕಟ್‌ಬೆಲ್ತೂರು, ಕಿರಿಮಂಜೇಶ್ವರ, ಮಡಾಮಕ್ಕಿ ಮುಂತಾದ ಗ್ರಾಮಗಳಲ್ಲಿ ಸಾಕಷ್ಟು, ಸಂಖ್ಯೆಯಲ್ಲಿ ಎಂಡೋ ಪೀಡಿತರಿರುವುದನು ಗಮನಿಸಿದರು. ಆದರೆ ಆರೋಗ್ಯ ಇಲಾಖೆಯ ವೈದ್ಯಕೀಯ ಶಿಬಿರಗಳು ನಡೆದಾಗ “ನಿಮ್ಮ ಗ್ರಾಮದವರನ್ನು ಸೇರಿಸಲು ನಮಗೆ ಮೇಲಿನಿಂದ ಆದೇಶ ಬಂದಿಲ್ಲ”ವೆಂದು ಇವರೆಲ್ಲರನ್ನೂ ಸಂತ್ರಸ್ತರ ಪಟ್ಟಿಯಿಂದ ಹೊರಗಿಡಲಾಗಿದೆ. ಈ ಎಲ್ಲಾ ಗ್ರಾಮಗಳ ಸಂತ್ರಸ್ತರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಿದಲ್ಲಿ ಸಂತ್ರಸ್ತರ ಸಂಖ್ಯೆ ಇಮ್ಮಡಿಯಾಗಬಹುದು.

ಆದರೆ ಇದೆಲ್ಲ ಎಂಡೋಸಲ್ಫಾನ್‌ ಕ್ರಿಮಿನಾಶಕಕ್ಕೆ ಹೇಗೆ ಗೊತ್ತಾಗಬೇಕು. ಹೆಲಿಕಾಪ್ಟರ್‌ನಲ್ಲಿ ಸಿಂಪಡಿಸಿದ ಎಂಡೋಸಲ್ಫಾನ್‌ ಇತರ ಹಳ್ಳಿಗಳಿಗೂ ತಲುಪಿ ನರಕವನ್ನೇ ಸೃಷ್ಟಿಸಿದೆ.

ಪುತ್ತೂರು ತಾಲೂಕಿನ ನೆಟ್ಟಣಿಗೆ, ವಿಟ್ಲ ಮುಂತಾದ ಗ್ರಾಮಗಳಲ್ಲಿ ಎಂಡೋ ಸಲ್ಫಾನ್‌ ಸಿಂಪಡಿಸಿಯೇ ಇಲ್ಲ. ಆದರೆ ನೆಟ್ಟಣಿಗೆಯಲ್ಲಿ ೧೧೩ ಮಕ್ಕಳು ಎಂಡೋ ಸಂತ್ರಸ್ತರು ಎಂದು ಗುರುತಿಸಲ್ಪಟ್ಟಿದ್ದಾರೆ. ವಿಟ್ಲದಲ್ಲಿ ೭೦ ಮಂದಿ ಸಂತ್ರಸ್ತರಿದ್ದಾರೆ. ಇವೆರಡೂ ಊರಿಗೆ ದೂರದ ಕೇರಳದ ಗೇರು ತೋಟಗಳಲ್ಲಿ ಸಿಂಪಡಿಸಿದ ಕೀಟನಾಶಕ ೧೬ ಕಿ.ಮೀ. ದೂರದ ಹಳ್ಳಿಗಳಿಗೂ ಬಂದಿದೆ ಎಂದರೆ ನೀವು ನಂಬುವಿರಾ? ಇಲ್ಲಿಯ ಪ್ರಶ್ನೆಯೇನೆಂದರೆ ಅವರಿಗೆ ಪರಿಹಾರ ನೀಡುವವರಾರು? ಕೇರಳ ಸರಕಾರವೇ? ಅಥವಾ ಕರ್ನಾಟಕ ಸರಕಾರವೇ?

ಕೆರ್ಗಾಲಿನ ರಾಮ ಮೊಗವೀರರ ಮಗ ಪ್ರಶಾಂತ ೧೮ ವರ್ಷದ ಯುವಕ. ಹುಟ್ಟಿದಂದಿನಿಂದ ಆತ ಹಾಸಿಗೆ ಬಿಟ್ಟು ಎದ್ದದ್ದೇ ಇಲ್ಲ. ಕೆರ್ಗಾಲಿನಲ್ಲಿ ಗೇರುತೋಪು ಇಲ್ಲವೆಂಬ ಕಾರಣಕ್ಕಾಗಿ ವೈದ್ಯಕೀಯ ಶಿಬಿರಕ್ಕೆ ಆತನಿಗೆ ಪ್ರವೇಶವನ್ನೇ ಕೊಟ್ಟಿಲ್ಲ.
ಜಪ್ತಿ ವಾಸುದೇವ ಮಧ್ಯಸ್ತರ ೧೪ ವರ್ಷದ ಮಗಳು ಆಶಾ ೮೦ ಶೇಕಡಾ ಅಂಗವಿಕಲತೆ ಎಂದು ವೈದ್ಯರು ಈ ಹಿಂದೆಯೇ ದೃಢಪತ್ರಿಕೆ ನೀಡಿದ್ದಾರೆ. ಜಪ್ತಿ ಗ್ರಾಮದ ಹೆಸರು ಅರಣ್ಯ ಇಲಾಖೆಯ ಪಟ್ಟಿಯಲ್ಲಿಲ್ಲವೆಂಬ ಕಾರಣಕ್ಕಾಗಿ ಆಕೆಗೆ ಮಾಶಾಸನವಿಲ್ಲ. ಚಿಕಿತ್ಸೆಯೂ ಇಲ್ಲ.

ಅಂಗವಿಕಲತೆ ಅಳೆಯುವುದು ಹೇಗೆ?

ಕಾಲ್ತೋಡು ಗ್ರಾಮದ ಕೋಡುಗದ್ದೆಯ ನಿವಾಸಿ ರತ್ನಾಕರ ಶೆಟ್ಟರ ೪ ವರ್ಷದ ಶ್ರೀಶಾಗೆ ಹುಟ್ಟಿದಾರಭ್ಯ ಮಂದ ದೃಷ್ಟಿ. ದೃಷ್ಟಿ ಸರಿಯಾಗಬಹುದೆಂಬ ಆಶೆಯಲ್ಲಿ ಶೆಟ್ಟರು ತಮಿಳುನಾಡಿನ ಚೆನ್ನೆ ಗೂಹೋಗಿಬಂದರು. ಸಿಕ್ಕ ಸಿಕ್ಕ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಮಗುವಿನ ದೃಷ್ಟಿ ಸುಧಾರಿಸಲಿಲ್ಲ. ಇದೀಗ ಅವಳಿಗೆ ಸಂಪೂರ್ಣ ಕುರುಡು. ಆದರೆ ಆರೋಗ್ಯ ಇಲಾಖೆಯ ವೈದ್ಯರು ನೀಡಿದ ದೃಢ ಪತ್ರದಲ್ಲಿ ಆಕೆಯ ಅಂಗವಿಕಲತೆ ೩೫% ಮಾತ್ರ!

ಬೈಂದೂರಿನ ಡ್ರೈವರ್ ದಿ| ಲಕ್ಷ್ಮೀನಾರಾಯಣರ ೨೨ ವರ್ಷದ ಪುತ್ರಿ ಆಶಾ ಇದುವರೆಗೆ ನಡೆದಿಲ್ಲ. ಹಾಸಿಗೆ ಬಿಟ್ಟು ಏಳಲೇ ಇಲ್ಲ. ಅಪಸ್ಮಾರ ಇದೆ. ತಿಂಗಳಿಗೆ ೨ ಸಾವಿರ ರೂಪಾಯಿಗಳ ಮಾತ್ರೆ ತಿನ್ನುತ್ತಾಳೆ. ಈ ಹಿಂದೆ ವೈದ್ಯರು ನೀಡಿದ ದೃಢ ಪತ್ರದಲ್ಲಿ ಆಕೆಯ ಅಂಗವಿಕಲತೆ ೮೦% ಎಂದು ಇದೆ. ಆದರೆ ಇತ್ತೀಚೆಗೆ ನಡೆದ ವೈದ್ಯಕೀಯ ಶಿಬಿರದಲ್ಲಿ ಆಕೆಯ ಅಂಗವಿಕಲತೆಯನ್ನು ೫೫ ಶೇಕಡಾ ಎಂದು ನಮೂದಿಸಿ ಆಕೆಯ ಮಾಶಾಸನವನ್ನು ಅರ್ಧಕ್ಕೆ ಇಳಿಸಿದ್ದಾರೆ!

ನಡೆಯಲಾರದ ಬಿಜೂರಿನ ನಾಗರತ್ನಾಳಿಗೆ ವೈದ್ಯರು ೫೦ ಶೇಕಡಾ ಅಂಗವಿಕಲತೆ ಎಂದು ನಿರ್ಧರಿಸಿದುದು ಹೇಗೆ ಎಂದು ಅವರೇ ವಿವರಿಸಬೇಕು.

ನಿರ್ಧಾರ ತಿಳಿಸುವುದಿಲ್ಲವೇಕೆ?

ಪ್ರತಿಷ್ಠಾನಕ್ಕೆ ದೂರು ನೀಡಿದ ಅರುವತ್ತಕ್ಕೂ ಹೆಚ್ಚು ಸಂತ್ರಸ್ತರು ಕಳೆದ ಐದಾರು ತಿಂಗಳಿಂದ ಮಾಶಾಸನಕ್ಕೆ ಕಾಯುತ್ತಿದ್ದಾರೆ. ಅವರಿಗೆಲ್ಲ ವೈದ್ಯರು ಪರೀಕ್ಷೆ ಮಾಡಿದ್ದಾರೆ. ಆದರೆ ಮಾಶಾಸನದ ಆದೇಶ ಇನ್ನೂ ಬಂದಿಲ್ಲ. ಒಂದು ವೇಳೆ ಮಾಶಾಸನ ಇಲ್ಲವೆಂದಾದಲ್ಲಿ , ಏಕೆ ಇಲ್ಲ ಎಂಬುದನ್ನಾದರೂ ತಿಳಿಸಲಿ ಎಂದು ಸಂತ್ರಸ್ತರ ಆಗ್ರಹ.

ಮಾಶಾಸನ ಪಡೆಯದೇ ಅಗಲಿದರು

ಶಿರೂರಿನ ನಾಗರಾಜ ಮೆಸ್ತನಿಗೆ ಸದ್ಕೆ ಮಹಮ್ಮದರ ಪುತ್ರ ಜಾಹಿರ್‌ಗೆ ೮೦ ಶೇಕಡಾ ಅಂಗವಿಕಲತೆ ಎಂದು ಈ ಹಿಂದೆಯೇ ವೈದ್ಯರು ಘೋಷಿಸಿದ್ದರು. ಆದರೆ ಅವರಿಗೆ ಮಾಶಾಸನ ಬರಲೇ ಇಲ್ಲ. ಇನ್ನು ಅವರಿಗೆ ಅದರ ಅಗತ್ಯವೂ ಇಲ್ಲ. ಏಕೆಂದರೆ ಇವರಿಬ್ಬರೂ ಈ ಲೋಕ ಬಿಟ್ಟು ತೆರಳಿದ್ದಾರೆ!

ಅಂತೂ ಕುಂದಾಪುರದ ೨೭ ಹಳ್ಳಿಗಳ ೩೦೦ ಕ್ಕೂ ಹೆಚ್ಚಿನ ಮನೆಗಳನ್ನು ಸಂದರ್ಶಿಸಿದ ಎಂಡೋ ಕಾರ್ಯಕರ್ತರಿಗೆ ಎಂಡೋ ದುರಂತದ ಭೀಕರತೆಯ ದರ್ಶನವಾಗಿದೆ. ಈ ದುರಂತಕ್ಕೆ ಬಲಿಯಾದ ಕೊನೆಯ ಮಗುವಿಗೂ ನ್ಯಾಯ ಸಿಗುವ ತನಕ ಸತ್ಯ ಶೋಧನೆಯ ಈ ಅಧ್ಯಯನ ಮುಂದುವರಿಯಲಿದೆ.

ದಿನಾಂಕ: ೧೧-೮-೨೦೧೪

ಡಾ| ರವೀಂದ್ರನಾಥ್ ಶ್ಯಾನುಭಾಗ್
ಉಡುಪಿ

ಅಧ್ಯಕ್ಷರು

ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ (ರಿ)

ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯ, ಉಡುಪಿ – ೫೭೬೧೦೨ಸಲಾನ್ಸಲಾನ್

ಸೂಚನೆ: ಉಡುಪಿಯ ಮಾನವಹಕ್ಕುಗಳ ಪ್ರತಿಷ್ಠಾನದ ಕಾರ್ಯಕರ್ತರು ಸಂಗ್ರಹಿಸಿದ ಈ ಎಲ್ಲಾ ಮಾಹಿತಿಗಳನ್ನು -ಟೋ ಹಾಗೂ ವೀಡಿಯೋ ಸಹಿತ ಪ್ರತಿಷ್ಠಾನದ ವೆಬ್‌ಸೈಟ್ http//hrpfudupi.hpage.com ಇದರಲ್ಲಿ ನೋಡಬಹುದು.

 

 

Share.
Leave A Reply Cancel Reply
Exit mobile version