ದಿ ಗಾರ್ಡಿಯನ್‌ ಪತ್ರಿಕೆಯು ಹವಾಗುಣ ಬದಲಾವಣೆ ಕುರಿತಂತೆ ಮುಂದಿನ ದಿನಗಳಲ್ಲಿ ಗರಿಷ್ಠ ಪ್ರಮಾಣದ ಸುದ್ದಿಗಳನ್ನು ಕೊಡಲಿದೆ ಎಂದು ಪ್ರಕಟಿಸಿದೆ. ಪತ್ರಿಕೆಯ ಸಂಪಾದಕ ಅಲೆನ್‌ ರಸ್‌ಬ್ರಿಡ್ಜರ್‌ ನಿನ್ನೆ (೬ ಮಾರ್ಚ್‌ ೨೦೧೫) ಒಂದು ದೀರ್ಘ ಲೇಖನ ಬರೆದು ಈ ನಿರ್ಧಾರದ ಹಿಂದಿರುವ ಕಾರಣಗಳನ್ನು ವಿವರಿಸಿದ್ದಾರೆ. ಇನ್ನುಮೇಲೆ ಯಾವಾಗಲೂ ಪೆಟ್ರೋಲ್‌ ಡೀಸೆಲ್‌ ಬಗ್ಗೆಯೇ ಚರ್ಚೆ ನಡೆಯುತ್ತಿರುತ್ತದೆ (ನನ್ನ ಕವನ ಪೆಟ್ರೋಲ್‌ ಡೀಸೆಲ್‌ ಎಷ್ಟು ದಿನ? ಓದಿ) ಎಂದು ನಾನು ಅಂದುಕೊಳ್ಳುತ್ತಿರುವ ಈ ದಿನಗಳಲ್ಲಿ ಅಲೆನ್‌ ನನ್ನ ಚಿಂತನೆಗೆ ಕಾರ್ಯರೂಪ ಕೊಟ್ಟಿದ್ದಾರೆ. ಬಹುಶಃ ಜಾಗತಿಕ ಖ್ಯಾತಿಯ ಮುಖ್ಯವಾಹಿನಿ ಪತ್ರಿಕೆಯೊಂದು ಹವಾಗುಣ ಬದಲಾವಣೆಯ ಅಪಾಯಗಳ ಬಗ್ಗೆ ಪೂರ್ಣ ಪ್ರಮಾಣದ ಗಂಭೀರ ಅಭಿಯಾನ ಆರಂಭಿಸಿದ್ದು ಇದೇ ಮೊದಲು. ಈ ಪತ್ರಿಕೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪತ್ರಿಕೆಯ ವಿಶೇಷ ಪುಟ ಇಲ್ಲಿದೆ

ಕನ್ನಡದ ಮುಖ್ಯವಾಹಿನಿ ಪತ್ರಿಕೆಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಕೂಡಾ ಹೀಗೆ ಹವಾಗುಣ ಬದಲಾವಣೆ ಕುರಿತು ಹೆಚ್ಚಿನ ಪ್ರಚಾರ ಸಿಗಬೇಕು, ಜನಜಾಗೃತಿ ಆಗಬೇಕು ಎಂದು ಪರಿಸರ ಕಾಳಜಿಗಾಗಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ನಾವು ಆಶಿಸಿದ್ದೇವೆ. ೨೦೧೦ರ ಮಾರ್ಚ್‌ ೧೦ರಂದು ಕನ್ನಡದ ಐದು ಮುಖ್ಯವಾಹಿನಿ ಪತ್ರಿಕೆಗಳು ರಾಜ್ಯದ ಇಂಧನ ನೀತಿಯ ಗುಣಾತ್ಮಕ ಅವಲೋಕನ ಮತ್ತು ಎದುರಿಸಬೇಕಾದ ಸವಾಲುಗಳಿಗೆ ಸೂಕ್ತವಾದ ಖಾಯಂ ಪರಿಹಾರ ಕುರಿತು ಬರೆದಿದ್ದ ಬಹಿರಂಗ ಪತ್ರವನ್ನು ಏಕಕಾಲಿಕವಾಗಿ ಪ್ರಕಟಿಸಿ ತಮ್ಮ ಹೊಣೆಗಾರಿಕೆಯನ್ನು ತೋರಿದ್ದವು. ಆದರೆ ಇಂಥ ಜೀವನಾವಶ್ಯಕ ಸುದ್ದಿಗಳು ಲೇಖನಗಳನ್ನು ಸದಾಕಾಲವೂ ಪ್ರಕಟಿಸುವದರಲ್ಲಿ ಪತ್ರಿಕೆಗಳು ಹಿಂದೆ ಬಿದ್ದಿರುವುದು ಕಾಣುತ್ತದೆ. ಪ್ರತಿದಿನವೂ ಹವಾಗುಣ ಬದಲಾವಣೆ ಕುರಿತು ಚದುರಿದ ಚಿತ್ರಗಳನ್ನು ಅಲ್ಲಲ್ಲಿ ಓದುತ್ತೇವೆ. ಇವೆಲ್ಲವನ್ನೂ ಒಂದೆಡೆ ಸೇರಿಸಿ ದಿನವೂ ಒಂದು ಪುಟವನ್ನು ಕೊಟ್ಟರೆ ಸಾಕು. ಅದಿರಲಿ, ಆನ್‌ಲೈನ್‌ ವೇದಿಕೆಗಳಲ್ಲಿ ಪುಟಗಳ ಮಿತಿಯಿಲ್ಲದೆ ಎಷ್ಟು ಬೇಕಾದರೂ ಮಾಹಿತಿಗಳನ್ನು ಕೊಡಬಹುದು. ದಿನನಿತ್ಯದ ಸುದ್ದಿಗಳಿರಲಿ, ದಿ ಗಾರ್ಡಿಯನ್‌ ಪತ್ರಿಕೆಯು ಡಾಟಾ ಜರ್ನಲಿಸಂನಲ್ಲೂ ಕೆಲವು ವರ್ಷಗಳ ಹಿಂದೆಯೇ ಪ್ರತ್ಯೇಕ ಪೋರ್ಟಲ್‌ ಮಾಡಿತ್ತು. ಆದರೆ ಭಾರತದಲ್ಲಿ ಯಾವ ಇಂಗ್ಲಿಶ್‌/ ಭಾಷಾ ಪತ್ರಿಕೆಯೂ ಈ ಸಾಹಸ ಮಾಡಿದಂತೆ ಕಾಣುವುದಿಲ್ಲ. ಇನ್ನು ಪರಿಸರ ಕಾಳಜಿಯ ಪೋರ್ಟಲ್‌ ಕೇಳಿದರೆ ಮಾಡುತ್ತವೆಯೇ ಎಂಬ ಅನುಮಾನ ಸಹಜ!

ಹವಾಗುಣದ ವೈಪರೀತ್ಯದಲ್ಲಿ ಡೀಸೆಲ್‌, ಪೆಟ್ರೋಲಿನದ್ದು ಪ್ರಮುಖ ಪಾಲು. ಆದ್ದರಿಂದಲೇ ಅಲೆನ್‌ ತಮ್ಮ ಲೇಖನದಲ್ಲಿ ಪತ್ರಿಕೆಯ ಕಾರ್ಯಸೂಚಿಯನ್ನು ಖಚಿತವಾಗಿ ಬರೆದಿದ್ದಾರೆ:

It is now very much on the radar of the financial director rather than the social responsibility department. If most of these reserves are unburnable, they are asking, then what does that say about the true value of carbon-dependent companies? It is a question of fiduciary responsibility as much as a moral imperative.

We will look at who is getting the subsidies and who is doing the lobbying. We will name the worst polluters and find out who still funds them. We will urge enlightened trusts, investment specialists, universities, pension funds and businesses to take their money away from the companies posing the biggest risk to us. And, because people are rightly bound to ask, we will report on how the Guardian Media Group itself is getting to grips with the issues.

ಹವಾಗುಣ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆ ಮತ್ತು ಕರ್ನಾಟಕದ ಯೋಜನೆಗಳು ಸಿದ್ಧವಾಗಿವೆ. ಈ ಮಧ್ಯೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದಾದ್ಯಂತ ಹವಾಗುಣ ಬದಲಾವಣೆ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಡೀಕರಿಸಿದ ಪೂರಕ ಸಲಹೆಗಳನ್ನು ಕೊಡುವುದು ಮಂಡಳಿಯ ಉದ್ದೇಶ ಎಂದು ಅದು ಪ್ರಕಟಿಸಿದ ಪುಸ್ತಕದಲ್ಲಿ ತಿಳಿಸಲಾಗಿದೆ. ಹಾಗೆ ನೋಡಿದರೆ ಕ.ರಾ.ಮಾ.ನಿ. ಮಂಡಳಿಯೇ ಸಾರ್ವಜನಿಕ ಚರ್ಚೆ ಮಾಡುತ್ತಿರುವ ದೇಶದ ಅಪರೂಪದ ಸರ್ಕಾರಿ ಸಂಸ್ಥೆಯಾಗಿದೆ!

ನಿನ್ನೆ ನ್ಯೂಸ್‌ಮಿನಿಟ್‌ನಲ್ಲಿ ಪ್ರಕಟವಾದ ಕಾಲುದಾರಿ ಅಗಲೀಕರಣದ ವಿರುದ್ಧದ ಸುದ್ದಿಯು ನಮ್ಮ ಮಾನಸಿಕತೆಯು ಬದಲಾಗಲು ಇನ್ನೂ ತುಂಬಾ ಕಾಲ ಬೇಕಿದೆ ಎನ್ನುವುದನ್ನು ಸೂಚಿಸುತ್ತದೆ. ಅಭ್ಯುದಯ ಚಿಂತನೆಯು ನಮ್ಮ ಮನಸ್ಸಿನಾಳಕ್ಕೆ ಇಳಿಯುವುದು ಸುಲಭವಲ್ಲ. ಪ್ರತಿದಿನ ವಾಹನಗಳಲ್ಲಿ ಸಂಚರಿಸುವಾಗ, ಕಾರ್ಯಕ್ರಮಗಳಲ್ಲಿ ಒಂದು ಲೋಟ ನೀರು ಕುಡಿಯಲು ಒಂದು ಕಾಗದದ ಲೋಟವನ್ನೇ ಬಳಸಿ ಎಸೆಯುವಾಗ, ಸಾವಿರಾರು ಕಿಲೋಮೀಟರ್‌ ದೂರದಿಂದ ಹಡಗು, ವಿಮಾನಗಳಲ್ಲಿ ಭಾರೀ ಪ್ರಮಾಣದ ಇಂಧನ ಕಬಳಿಸಿ, ನೀರು ಕುಡಿದು ಪ್ಯಾಕೇಜ್‌ ಆಗಿ ಬಂದ ಪೊಟ್ಟಣ ಸಂಸ್ಕೃತಿಯ ಪ್ರತೀಕವಾದ ವಿದೇಶಿ ಮೂಲದ ಖಾದ್ಯಗಳನ್ನು ಮಾಲ್‌ಗಳಲ್ಲಿ ಕೊಳ್ಳುವಾಗ – ಹೀಗೆ ಪ್ರತಿದಿನ, ಪ್ರತಿಕ್ಷಣ ಹವಾಗುಣ ವೈಪರೀತ್ಯದ ಅಪಾಯ ನಮ್ಮನ್ನು ಆವರಿಸಬೇಕು. ಅದಾಗುವ ಕಾಲ ದೂರವಿಲ್ಲ.

ದಿ ಗಾರ್ಡಿಯನ್‌ ಪತ್ರಿಕೆಯ ಈ ನಿಲುವನ್ನು ಅನುಸರಿಸಿ ನಮ್ಮ ಕನ್ನಡದ ಮುಖ್ಯವಾಹಿನಿ ಪತ್ರಿಕೆಗಳೂ ಪರಿಸರ ಸಂರಕ್ಷಣೆಯ ಕುರಿತು ಹೆಚ್ಚಿನ ಗಮನ ನೀಡಲಿ; ಅದರಲ್ಲೂ ಕಾಗದದಲ್ಲಿ ಹೆಚ್ಚು ಪುಟಗಳನ್ನು ಮುದ್ರಿಸುವ ಬದಲು ಆನ್‌ಲೈನ್‌ನಲ್ಲಿ ಗರಿಷ್ಠ ಸುದ್ದಿ, ಚರ್ಚೆ, ವಿಶ್ಲೇಷಣೆ, ಜನಾಭಿಪ್ರಾಯ, ಪರಿಹಾರಗಳನ್ನು ಪ್ರಕಟಿಸಲಿ ಎಂದು ಆಶಿಸೋಣ.

Share.
Leave A Reply Cancel Reply
Exit mobile version