ಚೀನಾದಲ್ಲಿ ಏಳು ಕೋಟಿ ಜನರ ಸಾವಿಗೆ ಕಾರಣನಾದ ಮಾವೋ ಈಗಲೂ ನೇಪಾಳದ ಜೀವ ಹಿಂಡುತ್ತಿದ್ದಾನೆ.

ದೇವರು – ದಿಂಡಿರ ಬಗ್ಗೆ ಯಾವುದೇ ನಂಬುಗೆಯನ್ನೂ ಇಟ್ಟುಕೊಳ್ಳದ ಮಾವೋವಾದಿಗಳು ಈಗ ಕಾಠ್ಮಂಡುವಿನ ಪಶುಪತಿನಾಥ ದೇಗುಲಕ್ಕೆ ನೇಪಾಳೀ ಅರ್ಚಕರೇ ಬೇಕೆಂದು ಹಟ ಹಿಡಿದಿದ್ದಾರೆ. ಕರ್ನಾಟಕದಿಂದ ಹೋಗಿದ್ದ ಇಬ್ಬರು ಅರ್ಚಕರನ್ನು ಥಳಿಸಿದ್ದಾರೆ. ಅವರ ಬಟ್ಟೆ ಬಿಚ್ಚಿ ಜನಿವಾರ ಹರಿದಿದ್ದಾರೆ. ಮಾವೋವಾದಿ ಯುವಜನತೆ ಇದೇ ಕಾರಣ ಹಿಡಿದು ಬೀದಿಗಿಳಿದಿದೆ.

೧೯೯೬ರಿಂದ ೨೦೦೬ರವರೆಗಿನ ಹತ್ತು ವರ್ಷಗಳಲ್ಲಿ ೧೩೦೦೦ಕ್ಕೂ ಹೆಚ್ಚು ಜನರ ನರಮೇಧಕ್ಕೆ ಕಾರಣವಾದ ನೇಪಾಳದ ಮಾವೋವಾದಿ ಹೋರಾಟ ಈಗ ಭಾರತದ ನೆಪ ಹಿಡಿದು ಮತ್ತೆ ಹಿಂಸೆಗೆ ತಿರುಗುತ್ತಿದೆ.

ಹಿಮಾಲಯದ ಮಂಜಿನಲ್ಲಿ ಮತ್ತೆ ರಕ್ತ ಹರಿಯುವುದೆ? ಮಾವೋವಾದಿಗಳ ಅಬ್ಬರದ ಹೇಳಿಕೆಗಳನ್ನು ನೋಡಿದರೆ, ಹಲವು ದಿಕ್ಕುಗಳಿಂದ ಬರುತ್ತಿರುವ ಸುದ್ದಿಗಳನ್ನು ಕೇಳಿದರೆ, ಮತ್ತೆ ನೇಪಾಳ ಹೊತ್ತುರಿಯಲಿದೆ ಎಂದೇ ಅನ್ನಿಸುತ್ತದೆ.

ಭಾರತದ ವಿಸ್ತರಣಾವಾದ ನಮ್ಮಿಬ್ಬರಿಗೂ ಸಮಾನ ಶತ್ರು. ನಿಮ್ಮ ದೇಶದಲ್ಲಿ ಮುಂದುವರೆಯಲಿರುವ ಕ್ರಾಂತಿಯು ಭಾರತದಲ್ಲಿನ ಕ್ರಾಂತಿಯ ಮೇಲೆ ನೇರ ಪರಿಣಾಮ ಉಂಟುಮಾಡಲಿದೆ. ನೀವು ಹಿಂದಿನ ಅನುಭವಗಳಿಂದ ಕಲಿತು ಮುಂದೆ ದೊಡ್ಡ ಹೆಜ್ಜೆ ಇಡುತ್ತೀರಿ ಎಂಬ ವಿಶ್ವಾಸ ನಮಗಿದೆ ಎಂದು ಭಾರತದ ಸಿಪಿಐ (ಮಾವೋವಾದ) ಕೇಂದ್ರಸಮಿತಿಯು ನೇಪಾಳದ ಮಾವೋವಾದಿಗಳಿಗೆ ಕಳೆದ ಜುಲೈ ೨೦ರಂದು ಬಹಿರಂಗ ಪತ್ರ ಬರೆದಿದೆ. ಇತ್ತೀಚೆಗಷ್ಟೇ ಮಾವೋವಾದಿಗಳ ಪ್ರತಿನಿಧಿಯಾಗಿ ನೇಪಾಳದ ಪ್ರಧಾನಮಂತ್ರಿಯಾಗಿದ್ದ ಪ್ರಚಂಡ (ಪುಷ್ಪ ಕಮಲ ದಹಾಲ್)ರ ಎಲ್ಲ ನೀತಿ, ತತ್ವ, ಕಾರ್ಯಸೂಚಿಗಳನ್ನೂ ‘ಜನರ ಕ್ರಾಂತಿಶಕ್ತಿಯನ್ನು ಕೈಬಿಡುವ’ ಯತ್ನಗಳೆಂದು ಈ ಬಹಿರಂಗ ಪತ್ರ ಕಟುವಾಗಿ ಖಂಡಿಸಿದೆ. ಪ್ರಚಂಡ ತನ್ನ ಭಾರತ ಭೇಟಿಯಲ್ಲಿ ಎಲ್ಲ ಬೂರ್ಜ್ವಾ ಪಾರ್ಟಿಗಳ ನೇತಾರರನ್ನು ಭೇಟಿ ಮಾಡಿದರು ಎಂದು ಹೀಗಳೆದಿದೆ. ಸಾವಿರಾರು ಕ್ರಾಂತಿಕಾರಿಗಳ ಬಲಿದಾನವನ್ನು ಮರೆಯಬೇಡಿ ಎಂದು ವಿನಂತಿಸಿಕೊಂಡಿದೆ. ಚೀನಾದಲ್ಲಿ ನಡೆದ ಸಾಂಸ್ಕೃತಿಕ ಕ್ರಾಂತಿಯ ಘೋಷಣೆಗಳನ್ನು ಈಗಲಾದರೂ ಪಾಲಿಸೋಣ ಎಂದು ಕರೆ ನೀಡಿದೆ.

ಪಶ್ಚಿಮ ಬಂಗಾಳದ ಲಾಲ್‌ಗಢದಲ್ಲಿ ನಡೆದಿದ್ದೇನು ಎಂದು ನೆನಪಿಸಿಕೊಳ್ಳಿ. ಇತ್ತೀಚೆಗೆ ಕೇರಳದಿಂದ ಹಿಡಿದು ಬಿಹಾರದವರೆಗೆ ನಕ್ಸಲರು ಹೊಸ ನಕ್ಸಲ್‌ಜಾಲವನ್ನೇ ಹೆಣೆಯಲು ಆರಂಭಿಸಿದ್ದಾರೆ ಎಂಬ ಸುದ್ದಿಯನ್ನೂ ನೆನಪಿಸಿಕೊಳ್ಳಿ. ಆಂದ್ರದ ನಲ್ಲಮಲ ಅರಣ್ಯಪ್ರದೇಶದಲ್ಲಿ ನಕ್ಸಲರು ಬೀಡು ಬಿಟ್ಟಿದ್ದಾರೆ ಎಂಬ ಆತಂಕದ ವರದಿಗಳನ್ನು ನೆನಪಿಸಿಕೊಳ್ಳಿ.

ಪಶುಪತಿನಾಥನಿಗೂ, ಭಾರತಕ್ಕೂ ಇರುವ ನಂಟು ಅರ್ಚಕರಿಗೆ ಸೀಮಿತವಾಗಿಲ್ಲ; ಭಾರತ- ನೇಪಾಳದ ನಡುವೆ ಇಂಥ ಮಾವೋವಾದಿಗಳ ಕೂಟಸಂಚು ನಡೆಯುತ್ತಲೇ ಇದೆ. ಸೈದ್ಧಾಂತಿಕ ವಾದ ವಿವಾದಗಳ ನಡುವೆಯೇ ಕ್ರಾಂತಿಯ ಮುಂದಿನ ಹೆಜ್ಜೆಗಳ ಕುರಿತು ಮಾಹಿತಿ ಹಂಚಿಕೆಯಾಗುತ್ತಲೇ ಇದೆ.

ಹೊಸ ಇತಿಹಾಸ

 

ಈವರೆಗೆ ನಡೆದ ಇತಿಹಾಸದ ಬಗ್ಗೆ ಪುಟ್ಟದಾಗಿ ಹೇಳುವುದಾದರೆ : ನೇಪಾಳ ಹೇಳಿ ಕೇಳಿ ಹಿಂದು ಕಿಂಗ್‌ಡಮ್ ಎಂದೇ ಪ್ರಸಿದ್ಧ. ಅತ್ತ ಚೀನಾ, ಇತ್ತ ಭಾರತ – ಹೀಗೆ ಭೂಬೀಗಕ್ಕೆ ತುತ್ತಾದ (ಲ್ಯಾಂಡ್‌ಲಾಕ್) ನೇಪಾಳದಲ್ಲಿ ಇದ್ದ ದೊರೆಗಳ ಆಡಳಿತ (ಮೊನಾರ್ಕಿ) ರದ್ದಾಗಿದೆ. ಈಗ ಪ್ರಜಾತಂತ್ರವೇ ನೇಪಾಳದ ಆಡಳಿತದ ಜೀವಾಳ. ಕಳೆದ ವರ್ಷ ನಡೆದ ಮಹಾಚುನಾವಣೆಯಲ್ಲಿ ಮಾವೋವಾವಿಗಳು ಶಸ್ತ್ರ ತ್ಯಜಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು; ನೇಪಾಳದ ಸಂಕೀರ್ಣ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಂತಿಮವಾಗಿ ಕಾನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿಯ ೬೦೧ ಸೀಟುಗಳಲ್ಲಿ ೨೧೮ ಸೀಟುಗಳನ್ನು ಗೆದ್ದಿದ್ದರು. ಆದ್ದರಿಂದಲೇ ಪ್ರಚಂಡ ಪ್ರಧಾನಮಂತ್ರಿಯಾಗಿದ್ದರು.

ಕಳೆದ ಮೇ ತಿಂಗಳಿನಲ್ಲಿ ನೇಪಾಳದ ಸೇನಾ ಮುಖ್ಯಸ್ಥರನ್ನು ಪ್ರಚಂಡ ಏಕಪಕ್ಷೀಯವಾಗಿ ವಜಾ ಮಾಡಿದರು. ನೇಪಾಳದ ಸೇನೆಯಲ್ಲಿ ಮಾವೋವಾದ ಹೋರಾಟದಲ್ಲಿದ್ದ ಯುವಕರನ್ನು ನೇಮಕ ಮಾಡಿಕೊಳ್ಳಲು ಒಪ್ಪಲಿಲ್ಲ ಎಂಬುದೇ ಇದಕ್ಕೆ ಕೊಟ್ಟ ಕಾರಣ. ಈ ಘಟನೆಯೇ ಅವರ ಪದಚ್ಯುತಿಗೂ ಕಾರಣವಾಯಿತು. ಈಗ ಅಲ್ಲಿ ಮಾಧವ ಕುಮಾರ್ ಪ್ರಧಾನಿ.

ಆದರೆ ಮಾವೋವಾದಿಗಳೇಕೆ ಹಠಾತ್ತನೆ ಬೀದಿಗಿಳಿದು ರಂಪ ಮಾಡಿಲ್ಲ? ೧೯ ಸಾವಿರ ಮಾವೋವಾದಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ವಾಪಸು ಮಾಡಿದ್ದಾರೆ; ಅವನ್ನೆಲ್ಲ ವಿಶ್ವಸಂಸ್ಥೆ ನಿಗಾ ಇರುವ ಕ್ಯಾಂಟನ್‌ಮೆಂಟ್‌ಗಳಲ್ಲಿ ಭದ್ರವಾಗಿ ಇಡಲಾಗಿದೆ. ಮತ್ತೆ ಬಂದೂಕು ಹಿಡಿಯಬೇಕೆಂದರೆ ಸಂಘಟನೆ ಕಟ್ಟಬೇಕು. ಕಾಡಿನಲ್ಲಿ ಅಲೆದು ಸುಸ್ತಾದ ಯುವಕರನ್ನು  – ಯುವತಿಯರನ್ನು ಮತ್ತೆ ಮನವೊಲಿಸಿ ಕರೆತರಬೇಕು. ಪಡೆ ಕಟ್ಟಬೇಕು. ಮತ್ತೆ ಕಾಡು ಮೇಡು ಅಲೆಯುತ್ತ ಊರೂರು ಆಕ್ರಮಿಸಿಕೊಳ್ಳುತ್ತ, ಶಸ್ತ್ರಾಸ್ತ್ರ ಕೋಠಿಗಳನ್ನು ಕೊಳ್ಳೆ ಹೊಡೆಯುತ್ತ.॒.
ರಕ್ತಪಾತ ನಡೆಸಬೇಕು.॒….

ಅದಕ್ಕೆ ಸಮಯ ಕಾಯಬೇಕು.

ಆದರೆ ಸಂಘಟನೆಗೆ ದಕ್ಕಿದ್ದ ಬೆಂಬಲ ಉಳಿಸಿಕೊಳ್ಳಬೇಕು. ಅದಕ್ಕೇ ಪಶುಪತಿನಾಥ ದೇಗುಲ ವಿವಾದದಲ್ಲೂ ಮೂಗು  ತೂರಿಸಿದ್ದು. ಭಾರತದ ಮಾವೋವಾದಿ ಉಗ್ರರ ಬೆಂಬಲ ಇಲ್ಲದಿದ್ದರೆ ಈ ಧಾರ್ಮಿಕ ವಿಷಯವೊಂದು ಹೀಗೆ ಬೆಳೆಯುತ್ತಿರಲಿಲ್ಲ.

ಪಶುಪತಿನಾಥ ದೇಗುಲದ ಜೊತೆಗೇ ಲುಂಬಿನಿ ಅಭಿವೃದ್ಧಿ ಟ್ರಸ್ಟ್‌ನಲ್ಲೂ ವಿವಾದ ಹೊತ್ತಿಕೊಂಡಿದೆ. ಮಾವೋವಾದಿ ಸರ್ಕಾರ ನೇಮಿಸಿದ ಉಪಾಧ್ಯಕ್ಷ ಮತ್ತು ಸದಸ್ಯ ಕಾರ್ಯದರ್ಶಿಯರನ್ನು ಹೊಸ ಪ್ರಧಾನಿ ವಜಾ ಮಾಡಿದ್ದರು; ಅವರಿಬ್ಬರೂ ಈಗ ಸರ್ವೋಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇತರೆ ಬೌದ್ಧಾಲಯಗಳಲ್ಲೂ ಇದೇ ಬಗೆಯ ವಿವಾದಗಳು ತಲೆಯೆತ್ತಿವೆ. ಕಳೆದ ೧೯ ವರ್ಷಗಳಲ್ಲಿ ೧೮ ಸರ್ಕಾರಗಳನ್ನು ಕಂಡ ನೇಪಾಳ ಈಗ ಮತ್ತೊಮ್ಮೆ ಅರಾಜಕತೆಯತ್ತೆ ಹೊರಳುತ್ತಿದೆ.

ಅತಂತ್ರ ಮಾವೋವಾದಿಗಳು

ಹಾಗಂತ ಮಾವೋವಾದಿಗಳೇನೂ ಒಗ್ಗಟ್ಟಾಗಿಲ್ಲ. ಪ್ರಚಂಡ ಮತ್ತು ಇನ್ನೊಬ್ಬ ಕಮ್ಯುನಿಸ್ಟ್ ನಾಯಕ ಡಾ. ಬಾಬುರಾಮ್ ಭಟ್ಟಾರಾಯ್ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಒಮ್ಮೆಯಂತೂ ಭಟ್ಟಾರಾಯ್‌ರನ್ನು ಪ್ರಚಂಡ ಬಣ ಬಂಧಿಸಿಟ್ಟಿತ್ತು. ಈಗ ಪ್ರಚಂಡ ವಿರುದ್ಧವೇ ಒಂದು ಬಣ ಸಕ್ರಿಯವಾಗಿದೆ. ಮುಖ್ಯ ಮಾವೋವಾದಿ ಸಂಘಟನೆ ‘ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಲ್ (ಮಾವೋಯಿಸ್ಟ್) – ಸಿ ಪಿ ಎನ್ ಎಂ ಸೇರಿದಂತೆ ನೇಪಾಳದಲ್ಲೇ ಎಂಟು ಮಾವೋ ಬಣಗಳಿವೆ.

ಮಾವೋವಾದಿಗಳು ಶಸ್ತ್ರ ಹಿಡಿಯುವಷ್ಟೇ ಲೇಖನಿ ಹಿಡಿಯುವುದರಲ್ಲೂ ಪರಿಣತರು. ಅವರ ಲೇಖನಗಳಲ್ಲಿ ಹಲವು ಸಿದ್ಧಾಂತಗಳ ವಿಶ್ಲೇಷಣೆ, ತರ್ಕ, ಪ್ರತಿತರ್ಕಗಳಿರುತ್ತವೆ. ಅವನ್ನೆಲ್ಲ ಅರ್ಥ ಮಾಡಿಕೊಳ್ಳಲು ನೀವು ವಾರಗಟ್ಟಳೆ ಕಮ್ಯುನಿಸ್ಟ್ ಮಾಹಿತಿಗಳನ್ನು ಓದಬೇಕು. ಇಷ್ಟೆಲ್ಲ ಸಂಕೀರ್ಣವಾಗಿದ್ದರೂ, ಈ ಮಾವೋವಾದಿಗಳ ಒಂದು ಕ್ರಿಯೆ ಮಾತ್ರ ಸಮಾನವಾಗಿದೆ: ಜೀವಹರಣ. ತಮಗಾಗದ ಯಾರೇ ಇದ್ದರೂ ಅವರನ್ನು ಸಾಯಿಸುವುದೇ ಪರಿಹಾರ ಎಂಬ ನೀತಿ. ಈ ನೀತಿಯಲ್ಲಿ ಮಾತ್ರ ಬದಲಾವಣೆಯೇ ಇಲ್ಲ. ವರ್ಗಸಂಘರ್ಷದ ಹೆಸರಿನಲ್ಲಿ ಹಿಂದುಳಿದ ಜಾತಿಗೆ ಸೇರಿದ ಪೇದೆಗಳನ್ನೂ ಸಾಲುಸಾಲು ಗುಂಡಿಟ್ಟು ಕೊಲ್ಲುವುದರಲ್ಲಿ  ಮಾವೋವಾದಿಗಳಿಗೆ ಹಿಂಜರಿಕೆಯಿಲ್ಲ.

ವಯಸ್ಕರು ಮಾತ್ರ ಬಂದೂಕು ಹಿಡಿಯಬಹುದು ಎಂಬುದೊಂದು ಸಾಮಾನ್ಯ ನೀತಿಯಿದೆ. ಆದರೆ ಮಾವೋವಾದಿಗಳು ಹದಿಹರೆಯದ ಬಾಲಕು – ಬಾಲಕಿಯರ ಕೈಯಲ್ಲೂ ಬಂದೂಕು ಹಿಡಿಸಿದ್ದಾರೆ. ರಿಟರ್ನ್‌ಡ್: ಚೈಲ್ಡ್ ಸೋಲ್ಜರ್ಸ್ ಆಫ್ ನೇಪಾಲ್ಸ್ ಮಾವೋಯಿಸ್ಟ್ ಆರ್ಮಿ ಎಂಬ ಸಾಕ್ಷ್ಯಚಿತ್ರದಲ್ಲಿ ಇಂಥ ಬಾಲಕರ ಹೃದಯವಿದ್ರಾವಕ ಚಿತ್ರಣವಿದೆ. ಕ್ರಾಂತಿಯಿಂದ ಹಿಂದಿರುಗಿದ ಈ ಮಕ್ಕಳು ಮನೆಯಲ್ಲೂ ತಿರಸ್ಕೃತರು !

ಶ್ರೀಲಂಕಾದ ಎಲ್ ಟಿ ಟಿ ಇಯನ್ನೂ ಬೆಂಬಲಿಸಿದ ಮಾವೋವಾದಿಗಳು ಪೆರುದೇಶದ ಶೈನಿಂಗ್ ಪಾಥ್ ಎಂಬ ಪಾತಕಿ ಮಾವೋವಾದಿಗಳಿಂದಲೂ ಪ್ರೇರಿತರು.

ಆಗಸ್ಟ್ ಕೊನೆಯ ವಾರದಲ್ಲಿ ಇಬ್ಬರು ಮಾವೋವಾದಿ ಕಾರ್ಯಕರ್ತರ ಹತ್ಯೆಯಾಗಿದೆ. ಇದೂ ಮಾವೋವಾದಿಗಳನ್ನು ರೇಗಿಸಿದೆ.

ಸೇನೆಗೆ ಹೊಸ ಮುಖ್ಯಸ್ಥ

ಈಗಷ್ಟೇ ೯೨ ಸಾವಿರ ಚಿಲ್ಲರೆ ಸೇನಾಬಲದ ನೇಪಾಳದ ಸೇನೆಯ ಮುಖ್ಯಸ್ಥರ ಬದಲಾವಣೆಯಾಗಿದೆ.  ಪ್ರಚಂಡ ವಿರೋಧಿಸಿದ್ದ ರೂಕ್‌ಮಂಗುದ್ ಕಟಾವಾಲ್ ಸ್ಥಾನಕ್ಕೆ ಛಾತ್ರ ಮಾನ್ ಸಿಂಗ್ ಗುರುಂಗ್ ಬಂದಿದ್ದಾರೆ. ಅಲ್ಪಸಂಖ್ಯಾತ ಬುಡಕಟ್ಟಿಗೆ ಸೇರಿದವರೊಬ್ಬರು ನೇಪಾಳದ ಸೇನಾ ಮುಖ್ಯಸ್ಥರಾಗಿರುವುದು ಇದೇ ಮೊದಲಂತೆ. ಕಳೆದ ೨೫೦ ವರ್ಷಗಳಲ್ಲಿ ಈ ಸ್ಥಾನಕ್ಕೆ ನೇಮಕವಾದವರೆಲ್ಲರೂ  ರಾಜಮನೆತನಕ್ಕೆ ನಿಷ್ಠರಾಗಿದ್ದ ಶಾ, ರಾಣಾ ಅಥವಾ ಥಾಪಾ ಸಮುದಾಯಕ್ಕೆ ಸೇರಿದ್ದವರು. ಈಗ ಗುರುಂಗ್ ಮುಂದಿನ ಮೂರು ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತಾರೆ.
ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಾದ ಗುರುಂಗ್ ನೇಮಕವೂ ಭಾರತದ ಸಾಮ್ರಾಜ್ಯವಾದದ ನಿದರ್ಶನ ಎಂದು ಮಾವೋವಾದಿಗಳು ಗೊಣಗಬಹುದು.  ಆದರೆ ಅವರು ಚೀನಾದ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯಿಂದಲೂ ತರಬೇತಿ ಪಡೆದಿದ್ದಾರೆ!
ಪಾಕಿಸ್ತಾನದ ಉಗ್ರರಿಗೆ ನೇಪಾಳವೂ ಒಂದು ಅಡಗುತಾಣ. ಅಲ್ಲೀಗ ದಾವೂದ್ ಇಬ್ರಾಖೋಟಾ ನೋಟುಗಳ ಹಾವಳಿ ಶುರುವಾಗಿದೆ. ಭಾರತದ ಕರೆನ್ಸಿಯನ್ನೇ ನೇಪಾಳದಲ್ಲೂ ಬಳಸುತ್ತಾರೆ. ಆದ್ದರಿಂದ ಖೋಟಾ ನೋಟಿನ ಅಪಾಯ ಭಾರತಕ್ಕೂ ತಟ್ಟುತ್ತಿದೆ. ಖೋಟಾನೋಟುಗಳ ಕಾರಸ್ಥಾನದಲ್ಲಿ ನೇಪಾಳದ ಮಾಜಿ ರಾಜಕುಮಾರ ಪಾರಸ್‌ನ ಪಾತ್ರವೂ ಇದೆಯೆಂದು ಪೊಲೀಸರು ಹೇಳಿದ್ದಾರೆ. ನೇಪಾಳದಲ್ಲಿ ಈ ದಶಕದ ಆರಂಭದಲ್ಲಿ ಮದ್ರಸಾಗಳು ವಿಪರೀತ ಪ್ರಮಾಣದಲ್ಲಿ ಹೆಚ್ಚಿದ್ದವು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿತ್ತು.

ಚೀನಾದ ಪಾತ್ರ

ಮಾವೋವಾದಿಗಳು ಎಂದಕೂಡಲೇ ಚೀನಾದ ಕುಮ್ಮಕ್ಕು ಇದ್ದೇ ಇರುತ್ತೆ ಎಂಬುದು ಸಹಜ ತರ್ಕ. ತನ್ನ ಪಠ್ಯಪುಸ್ತಕಗಳಲ್ಲಿ ಮಾವೋನನ್ನು ತೆಗೆದುಹಾಕಿರುವ ಚೀನಾ, ಮಾವೋವಾದವನ್ನು ಸಂಪೂರ್ಣ ರದ್ದು ಮಾಡಿಲ್ಲ ಎಂಬುದು ವಾಸ್ತವ. ಮೂರು ದಶಕಗಳ ಕಾಲ ಸಂಚು ನಡೆಸಿ ಟಿಬೆಟನ್ನು ವಶಪಡಿಸಿಕೊಂಡ ಚೀನಾಗೆ ಅರುಣಾಚಲ ಪ್ರದೇಶವೂ ಬೇಕು; ಸಿಕ್ಕಿಂ ಸಿಕ್ಕರೂ ಪರವಾಗಿಲ್ಲ. ಭೂತಾನ್, ನೇಪಾಳ: ಎರಡೂ ದೇಶಗಳಲ್ಲಿ ಹಿಡಿತ ಸಿಕ್ಕರೂ ಸಾಕು. ಒಟ್ಟಾರೆ ಭಾರತದ ಮಗ್ಗುಲಿಗೆ ಬಂದು ಆತುಕೊಳ್ಳುವ ತವಕ ಚೀನಾದ್ದು. ಭೂತಾನದಲ್ಲಿ ಮಾಜಿ ದೊರೆಯ ಒತ್ತಾಸೆಯಿಂದಲೇ ಪ್ರಜಾತಂತ್ರ ಅರಳಿದೆ ಎಂಬ ಬೆಳವಣಿಗೆ ಚೀನಾಗೆ ಕಸಿವಿಸಿ ತಂದಿದೆ. ನೇಪಾಳದಲ್ಲಿ ಮಾವೋವಾದಿಗಳು ಗೆದ್ದು ಸೋತಿರುವುದು ಮುಜುಗರ ತಂದಿದೆ. ಎಷ್ಟೆಂದರೂ ಮಾವೋನ ‘ಐದು ಬೆರಳುಗಳ’ ನೀತಿಯ ಪ್ರಕಾರ ನೇಪಾಳ, ಲಡಾಖ್, ಭೂತಾನ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳು ಚೀನಾಗೆ ಸೇರಲೇಬೇಕು.

ಇನ್‌ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಎಂಡ್ ಅನಲಿಸಿಸ್ ಪ್ರಕಾರ ಟಿಬೆಟಿನಲ್ಲೀಗ ದಂಗೆ ಎದ್ದಿರುವುದರಿಂದ ನೇಪಾಳವೇ ತನ್ನ ಬಫರ್ ವಲಯ ಎಂದು ಚೀನಾ ಭಾವಿಸುತ್ತಿದೆ. ನೇಪಾಳದಲ್ಲಿರುವ ೨೦ ಸಾವಿರ ಟಿಬೆಟನ್ ಸಂತ್ರಸ್ತರು ಚೀನಾ ವಿರುದ್ಧ ದನಿಯೆತ್ತದಂತೆ ನೇಪಾಳ ಸರ್ಕಾರದ ಮೇಲೆ ಒತ್ತಡ ತಂದಾಗಿದೆ. ನೇಪಾಳದ ನದಿಗಳಿಂದ ಇನ್ನೂ ೮೩ ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಚೀನಾ ಎಂದಾದರೂ ಮರೆಯುವುದೆ?

ಕಳೆದ ವರ್ಷವೊಂದರಲ್ಲೇ ಚೀನಾದಿಂದ ೩೮ ನಿಯೋಗಳು ನೇಪಾಳಕ್ಕೆ ಭೇಟಿ ನೀಡಿವೆ. ಸಿ ಪಿ ಎನ್ ಎಂ ಜೊತೆಗೆ ಸಿ ಪಿ ಎನ್ – ಯು ಎಂ ಎಲ್ ಮತ್ತು ಮಧೇಸಿ ಪೀಪಲ್ಸ್ ರೈಟ್ ಫೋರಮ್ ಎಂಬ ಮಾವೋವಾದಿ ಪಕ್ಷಗಳ ಜೊತೆಗೂ ಚೀನಾದ ನಂಟಿದೆ. ೨೦೦೬ರಲ್ಲಿ ಮಾವೋವಾದಿಗಳಿಗೆ ಮಿಲಿಟರಿ ನೆರವನ್ನೂ ಚೀನಾ ಒದಗಿಸಿತ್ತು. ನೇಪಾಳದಲ್ಲಿ ೩೩ ಚೀನಾ ಅಧ್ಯಯನ ಕೇಂದ್ರಗಳು ಸ್ಥಾಪನೆಯಾಗಿವೆ. ನೇಪಾಳದ ಸೇನೆಗೆ ಚೀನಾ ೪೦ ಲಕ್ಷ ಡಾಲರ್ ನೆರವು ನೀಡಿದೆ. ಆರ್ಥಿಕ ಅಭಿವೃದ್ಧಿಗೆ ೨೨೦ ಲಕ್ಷ ಡಾಲರ್; ನೇಪಾಳ – ಚೀನಾ ನಗರಗಳ ನಡುವೆ ಹಲವು ಹೆದ್ದಾರಿಗಳು.॒ ಪಟ್ಟಿ ಅಪೂರ್ಣ.

ಚೀನಾ ಪಾಲಿಗೆ ಎಲ್ಲವೂ ಹಂತಹಂತವಾಗಿ ಆಗಬೇಕು. ಅವಸರ ಸಲ್ಲದು. ಆದ್ದರಿಂದ ಮುಂದಿನ ಮೂರ್‍ನಾಲ್ಕು ವರ್ಷಗಳ ಕಾಲ ನೇಪಾಳದಲ್ಲಿ ವ್ಯವಸ್ಥಿತವಾಗೇ ಬುಡಮೇಲು ಕೃತ್ಯಗಳು ನಡೆಯುವ ಅಪಾಯ ತಪ್ಪಿದ್ದಲ್ಲ.

ಮುಂದೆ?

ಮಾವೋವಾದಿಗಳ ಹೋರಾಟದ ಫಲವಾಗೇ ಸ್ಥಾಪನೆಯಾಗಿರುವ ಪ್ರಜಾತಂತ್ರ; ಮುಗಿದ ರಾಜಮನೆತನದ ಆಳ್ವಿಕೆ – ಹೀಗಿದ್ದೂ ನೇಪಾಳ ನರಳುವ ಸಾಧ್ಯತೆಯೇ ಹೆಚ್ಚು. ಮುಂದಿನ ಚುನಾವಣೆಗೆ ಪೂರ್ವತಯಾರಿಯಾಗಿ ಮಾವೋವಾದಿಗಳು ಮತ್ತೆ ತಳಮಟ್ಟದ ಸಂಘಟನೆ ಕಟ್ಟುವುದರಲ್ಲಿ ತೊಡಗಲಿದ್ದಾರೆ. ಭಾರತದ ಮಾವೋವಾದಿಗಳ ಕುಮ್ಮಕ್ಕು ಮತ್ತು ನೇರ ಬೆಂಬಲದಿಂದ ಉತ್ತೇಜಿತರಾಗಿ ಮಾವೋವಾದಿಗಳು ಮತ್ತೆ ಶಸ್ತ್ರ ಹಿಡಿಯಬಹುದು. ನೇಪಾಳದ ಮೇಲೆ ಬಿಗಿಹಿಡಿತ ಹೆಚ್ಚಿಸಲು ಚೀನಾದ ಪ್ರಯತ್ನ ಮುಂದುವರೆಯುತ್ತದೆ. ಕೆಸರಿನಲ್ಲಿ ಮೀನು ಹಿಡಿಯುವಂತೆ ಪಾಕಿಸ್ತಾನದ ಉಗ್ರರು ನೇಪಾಳದಲ್ಲಿ ಮತ್ತಷ್ಟು ಹರಡಬಹುದು.

ಇಲ್ಲಿ ಪಶುಪತಿನಾಥ ಕೇವಲ ನಿಮಿತ್ತ.

 

ಹೆಚ್ಚಿನ ಮಾಹಿತಿಗೆ ಈ ಜಾಲತಾಣಗಳಿಗೆ ಭೇಟಿ ನೀಡಿ:

http:// en.wikipedia.org/wiki/Nepalese_Civil_War (ವಿಕಿಪೀಡಿಯಾದಲ್ಲಿ ನೇಪಾಳದ ಮಾಹಿತಿ)

www.bannedthought.net/India/PeoplesMarch/index.htm (ಮಾವೋವಾದಿ ಸಾಹಿತ್ಯದ ಸಂಗ್ರಹ)

result.nepalelectionportal.org/report.html (ನೇಪಾಳ ಚುನಾವಣಾ ಮಾಹಿತಿ)

http://www.idsa.in (ಭಾರತದ ಸುರಕ್ಷತೆ ಕುರಿತ ವಿಶ್ಲೇಷಣಾ ವರದಿಗಳು)

———————————————————————————

ಉದಯವಾಣಿ ಸಾಪ್ತಾಹಿಕದಲ್ಲಿ ೧೩.೯.೨೦೦೯ರಂದು ಪ್ರಕಟಿತ

ಚಿತ್ರಗಳು: ಗುರುದತ್ ಕಾಮತ್

Share.
Leave A Reply Cancel Reply
Exit mobile version