ನಾನು ಕಳೆದ ತಿಂಗಳು ಮೂರು ಸಲ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಎರಡು ಬ್ಯಾಂಕುಗಳ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಂದರ್ಶಕನಾಗಿ ಹೋಗಿದ್ದೆ. ಒಟ್ಟು ೨೦ ಹುದ್ದೆಗಳಿಗೆ ಹಾಜರಾದ ಅಭ್ಯರ್ಥಿಗಳ ಸಂಖ್ಯೆ ಒಂದು ಸಾವಿರ ದಾಟಿತ್ತು. ಅವರಲ್ಲಿ ಸ್ನಾತಕೋತ್ತರ ಪದವಿ ಮಾಡಿದವರು ಇದ್ದರು. ಅಚ್ಚರಿಯೆಂದರೆ ತಾವರಗೇರಾದಂಥ ಊರಿನಲ್ಲಿ ಮೂವರು ಇಂಜಿನಿಯರ್‍ ಪದವೀಧರರೂ ಸಂದರ್ಶನಕ್ಕೆ ಹಾಜರಾಗಿದ್ದು!

ನಾನು ಸಂದರ್ಶಿಸಿದವರೆಲ್ಲ ಕೊನೆಯ ಹಂತದ ಆಯ್ಕೆ ಪ್ರಕ್ರಿಯೆಗೆ ಶಾರ್ಟ್‌‌ಲಿಸ್ಟ್‌ ಆದವರು. ಅವರೆಲ್ಲರಿಂದ ಒಂದೊಂದು ಪ್ಯಾರಾ ಕನ್ನಡ ಮತ್ತು ಇಂಗ್ಲಿಶ್‌ ಬರವಣಿಗೆಯನ್ನು ಮಾಡಿಸಲಾಗಿತ್ತು. ಸಂದರ್ಶನಕ್ಕಿಂತ ಮೊದಲು ಈ ಬರವಣಿಗೆಯನ್ನು ನಾವು ಗಮನಿಸಿದೆವು. ಕನ್ನಡವಂತೂ ಕುಲಗೆಟ್ಟುಹೋಗಿತ್ತು; ಇಂಗ್ಲಿಶ್‌ ವಿಷಯ ಕೇಳಬೇಕೆ? ಹಾಡುಹಗಲೇ ಇಂಗ್ಲಿಶಿನ ಬರ್ಬರ ಹತ್ಯೆಯಾಗಿತ್ತು. ಒಂದಿಬ್ಬರು ಮಾತ್ರ ಕನ್ನಡ ವಾಕ್ಯಗಳನ್ನು ತಪ್ಪಿಲ್ಲದೆ ಬರೆದಿದ್ದರು. ಕನ್ನಡದಲ್ಲಿ ಚೆನ್ನಾಗಿ ಬರೆದವರಲ್ಲಿ ಮುಸ್ಲಿಮ್‌ ಯುವಕರೇ ಹೆಚ್ಚಾಗಿದ್ದರು ಎಂಬುದು ವಿಶೇಷ. ಶೇ. ೮೦-೯೦ರಷ್ಟು ಅಂಕ ಪಡೆದವರ ಅಕ್ಷರಗಳೇ ಬೆಚ್ಚಿಬೀಳಿಸುವಾಗ, ಇನ್ನುಳಿದವರ ಸ್ಥಿತಿ ಹೇಗಿರಬಹುದು?

ಈ ಪ್ರದೇಶವು ಗಣಿದಣಿಗಳ ಕ್ಷಿಪ್ರಕ್ರಾಂತಿಗೆ ಹೆಸರಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಅಭಿವೃದ್ಧಿ ಎಂದರೆ ದುಬಾರಿ ಕಾರು ಖರೀದಿಸುವುದು, ಖಾಸಗಿ ಹೊಟೆಲ್‌ಗಳನ್ನು ಸ್ಥಾಪಿಸುವುದು – ಎಂಬ ಪ್ರತೀತಿ ಕೆಲವೇ ವರ್ಷಗಳ ಹಿಂದೆ ಇಲ್ಲಿತ್ತು. ಆದರೆ ಅದೇ ಹತ್ತು ವರ್ಷಗಳಲ್ಲಿ ಶಿಕ್ಷಣದ ಮಟ್ಟ ಕುಸಿದಿದೆ ಮತ್ತು ನಿರುದ್ಯೋಗದ ಭೂತ ವಕ್ಕರಿಸಿದೆ ಎಂದು ಗೊತ್ತಾಗಲು ಈ ಪುಟ್ಟ ಸಂದರ್ಶನ ಮಾಲಿಕೆಯೇ ಸಾಕಲ್ಲವೆ?

ಸಂದರ್ಶನದಲ್ಲಿ ಮಾತನಾಡಿದ ಈ ಯುವಕ ಯುವತಿಯರು ತುಂಬಾ ಸೃಜನಶೀಲ ವ್ಯಕ್ತಿತ್ವ ಉಳ್ಳವರೇ ಆಗಿದ್ದರು ಎಂಬುದು ನನ್ನ ಅರಿವಿಗೆ ಬಂತು. ಹಲವರು ತಮ್ಮದೇ ಆದ ಖಚಿತ ಜೀವನದೃಷ್ಟಿಯನ್ನೂ ಹೊಂದಿದ್ದರು. ಆದರೆ ಅವರ ಸರ್ಟಿಫಿಕೇಟಿಗೂ, ಸ್ವತಃ ಕಲಿತಿದ್ದಕ್ಕೂ ಸಂಬಂಧ ಇಲ್ಲದಿರುವುದು ಅವರಿಗೇ ಗೊತ್ತಾಯಿತು. ಕೆಲವರಿಗೆ ಸಿಬಸ್‌ನಲ್ಲಿದ್ದ ಅಧ್ಯಾಯಗಳನ್ನೇ ನೆನಪಿಸಬೇಕಾಯಿತು.

ಇದು ಆ ಯುವ ಜೀವಗಳ ತಪ್ಪಲ್ಲ ಎಂಬುದು ನನ್ನ ಅಭಿಪ್ರಾಯ. ಅವರಿಗೆ ಕಲಿಸಬೇಕಾಗಿದ್ದ ಶಿಕ್ಷಕರ ಹೊಣೆಗೇಡಿತನವೇ ಇದಕ್ಕೆಲ್ಲ ಕಾರಣ. ಬೇರೇನೂ ಹೊಳೆಯುತ್ತಿಲ್ಲ.  ನಮ್ಮ ಶಿಕ್ಷಣ ವ್ಯವಸ್ಥೆ ಕುಸಿಯಲು ಶಿಕ್ಷಕರ ಗುಣಮಟ್ಟ ಕುಸಿದಿರುವುದೇ ಮುಖ್ಯ ಕಾರಣ. ನಿಮಗೆ ಶಿಕ್ಷಕರು ಸುದ್ದಿಯಾಗುತ್ತಿರುವುದು ಸಂಬಳದ ಬೇಡಿಕೆ ಇಟ್ಟ ಮುಷ್ಕರಗಳಿಂದಲೇ ಹೊರತು ಶಿಕ್ಷಣದ ಗುಣಮಟ್ಟ ಕುರಿತ ಬೇಡಿಕೆಗಳಿಂದಲ್ಲ.

ಇದಾದ ಮೇಲೆ ನಾನು ಮೊನ್ನೆಯಷ್ಟೇ ಬೆಂಗಳೂರಿನ ಕಾಲೇಜೊಂದರಲ್ಲಿ ಭಾಷಣ ಸ್ಪರ್ಧೆಯ ತೀರ್ಪುಗಾರನಾಗಿ ಹೋಗಿದ್ದೆ. ಹೆಚ್ಚಿನವರು ಇಂಗ್ಲಿಶಿನಲ್ಲೇ ಭಾಷಣ ಮಾಡಿದರು;  ಹೆಚ್ಚುಕಡಿಮೆ ಅವರ ಸ್ಪೋಕನ್‌ ಇಂಗ್ಲಿಶ್‌ ಚೆನ್ನಾಗೇ ಇತ್ತು.  ಆದರೆ ಒಳ್ಳೆಯ ಕನ್ನಡದಲ್ಲಿ ಮಾತನಾಡಿದವರು ಕಡಿಮೆ. ಇದ್ದರು ಎಂಬುದೇ ಖುಷಿಯ ಸಂಗತಿ.

ಇಂಥ ಏರುಪೇರುಗಳನ್ನು ಗಮನಿಸಿದಾಗ ತುಂಬಾ ಬೇಸರವಾಗುತ್ತದೆ. ಫೇಸ್‌ಬುಕ್‌ನಲ್ಲಿ, ಸಮಾಜತಾಣಗಳಲ್ಲಿ ನಾವು ಏನೋ ಕ್ರಾಂತಿ ಆಗಿದೆ ಎಂದು ಹಲವು ಹೊಸ ಸಂಗತಿಗಳ ಬಗ್ಗೆ ಚರ್ಚಿಸುತ್ತ, ಅಭಿವ್ಯಕ್ತಿ ಸ್ವಾತಂತ್ರ್‍ಯದ ಬಗ್ಗೆ ಭಯಂಕರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಇರುವುದೆಲ್ಲ ಎಷ್ಟು ಹುಸಿ ಅನ್ನಿಸುತ್ತಿದೆ. ಶಿಕ್ಷಣದ ದುರವಸ್ಥೆಯೇ ನಮ್ಮ ಬಹುದೊಡ್ಡ ಸಮಸ್ಯೆ ಎಂದು ತೀವ್ರವಾಗಿ ಅನ್ನಿಸುತ್ತಿದೆ.

ನಾನು ಪದವೀಧರನೂ ಅಲ್ಲ; ಹೀಗಾಗಿ ಶಿಕ್ಷಣ ತಜ್ಞನಾಗಲಾರೆ. ಆದರೆ ನಮ್ಮ ಕಲಿಕೆಯ ವಿಧಾನ, ಇಂದಿನ ಸ್ಥಿತಿ ತುಂಬಾ ಘೋರವಾಗಿದೆ ಎಂದು ಹೇಳಬಲ್ಲೆ.

ಇದು ನನ್ನನ್ನು ಇಂದು ತುಂಬಾ ಕಾಡಿದ ವಿಷಯ.

Share.
Leave A Reply Cancel Reply
Exit mobile version