ನಿನ್ನೆ (೭ ಆಗಸ್ಟ್ ೨೦೧೯) ವಿಚಾರ ಸಂಕಿರಣವೊಂದರಲ್ಲಿ ಮಾತನಾಡಲು ಮಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಗ್ರಂಥಗಳ ಡಿಜಿಟಲೀಕರಣದ ಬಗ್ಗೆ ಇದ್ದ ನನ್ನ ಗೋಷ್ಠಿ ಮುಗಿದ ಮೇಲೆ ಅಲ್ಲಿನ ಹಳೆಯ ಪತ್ರಿಕೆಗಳ ಸಂಗ್ರಹಾಗಾರಕ್ಕೆ ಹೋಗಿದ್ದೆ. ನೂರಾರು ವರ್ಷಗಳ ಹಿಂದಿನ ದಿನಪತ್ರಿಕೆಗಳು ಮತ್ತು ಅಪರೂಪದ ಪುಸ್ತಕಗಳನ್ನು ನೋಡಿದೆ. ಮೆಲುವಾಗಿ ಮುಟ್ಟಿ ನಮ್ಮ ಪರಂಪರೆಗೆ ಮನದಲ್ಲೇ ನಮಸ್ಕರಿಸಿದೆ.
ಈ ಪುಸ್ತಕಗಳ ಜೊತೆಗೇ ಒಂದು ದಪ್ಪನೆಯ ಕನ್ನಡ- ಇಂಗ್ಲಿಶ್ ನಿಘಂಟೂ ಇತ್ತು. ಅದರ ಕೆಲವು ಪುಟಗಳ ಛಾಯಾಗ್ರಹಣ ಮಾಡಿಕೊಂಡು ಬಂದಿದೆ. ಅತಿದೊಡ್ಡ ಕನ್ನಡ – ಇಂಗ್ಲಿಶ್ ನಿಘಂಟು ರೂಪಿಸಿರುವ ಶ್ರೀ ವಿ ಕೃಷ್ಣ ಅವರಿಗೆ ಈ ಪುಟಗಳನ್ನು ಕಳಿಸಿದೆ. ಅದು ರೆವರೆಂಡ್ ವಿಲಿಯಂ ರೀವ್ (೧೭೯೪-೧೮೫೦) ಸಂಪಾದಿಸಿದ ಕನ್ನಡ-ಇಂಗ್ಲಿಶ್ ನಿಘಂಟು ಎಂದು ಮಾಹಿತಿ ಕೊಟ್ಟರು.
ಈ ಗ್ರಂಥದ ೧೮೫೮ನೆಯ ಪರಿಷ್ಕೃತ ಆವೃತ್ತಿ ಗೂಗಲ್‌ಬುಕ್ಸ್‌ನಲ್ಲಿ ಸಿಗುತ್ತಿದೆ.
https://bit.ly/2M8Aklu
ಆದರೆ ಈ ಪುಸ್ತಕದಲ್ಲಿ ಕಂಡ ಕನ್ನಡದ ಅಕ್ಷರಗಳು ಕೈಬರಹದ್ದಾಗಿದ್ದರೆ, ಗೂಗಲ್‌ನಲ್ಲಿ ಇದ್ದಿದ್ದು ಮೊದಲ ಪೀಳಿಗೆಯ ಕನ್ನಡ ಫಾಂಟ್‌ನ ಮೊಳೆಗಳಿಂದ ಮೂಡಿದ್ದವು. ಗೂಗಲ್ ಬುಕ್ಸ್‌ನಲ್ಲಿ ಇರುವ ಪುಸ್ತಕದಲ್ಲೂ ಪರಿಷ್ಕೃತ ಎಂದು ತಿಳಿಸಲಾಗಿದೆ.
ಇನ್ನಷ್ಟು ಹುಡುಕಿದ ಮೇಲೆ ನಾನು ನಿನ್ನೆ ಕಂಡ ಕೃತಿಯು ೧೮೩೨ರಲ್ಲಿ ಪ್ರಕಟವಾದ ನಿಘಂಟುವಿನ ಮೊದಲ ಆವೃತ್ತಿ ಎಂದು ತಿಳಿಯಿತು. ಜರ್ಮನಿ ಟುಬಿಂಜೆನ್ ವಿಶ್ವವಿದ್ಯಾಲಯವು ಈ ಗ್ರಂಥವೂ ಸೇರಿದಂತೆ ವಿಲಿಯಂ ರೀವ್ ಅವರ ಮೂರು ಕೃತಿಗಳನ್ನು (ಇನ್ನೆರಡು: ೧೮೨೪ರ ಇಂಗ್ಲಿಶ್ – ಕನ್ನಡ ನಿಘಂಟು ಮತ್ತು ೧೮೫೮ರ ಆವೃತ್ತಿಯ ಕನ್ನಡ-ಇಂಗ್ಲಿಶ್ ನಿಘಂಟು) ಪ್ರಕಟಿಸಿದ್ದು ಕಂಡಿತು! (ಇಲ್ಲಿ ಕನ್ನಡದ ೨೧೧ ಕೃತಿಗಳಿವೆ)
http://idb.ub.uni-tuebingen.de/opendigi/CiXIV33_qt
ಕನ್ನಡದ ಕೃತಿಗಳೂ ಸೇರಿದಂತೆ ಎಲ್ಲ ಕೃತಿಗಳಿಗೆ ಇಲ್ಲಿಗೆ ಭೇಟಿ ನೀಡಿ:
https://www.gundert-portal.de/?page=kannada https://www.gundert-portal.de/?page=kannada
ಅಂತೂ ಇಂಥದ್ದೊಂದು ಪುಸ್ತಕವನ್ನು ಕೈಯಾರೆ ಮುಟ್ಟಿದ, ಅತ್ಯಪರೂಪದ ಪುಸ್ತಕವೆಂದು ನಾನೇ ಸ್ವತಃ ಹುಡುಕಿಕೊಂಡ ಮೊದಲ ಅನುಭವ ಆಯಿತು.
ಇಂತಹ ಅಪರೂಪದ ಕೃತಿಯನ್ನು ಮತ್ತು ಇದರೊಂದಿಗೇ ಇರುವ ನೂರಾರು ಮ್ಯಾಗಜಿನ್‌ಗಳನ್ನು ಡಿಜಿಟಲೀಕರಿಸಿ, ಅವುಗಳನ್ನು ವಿವಿಯ ಜಾಲತಾಣದಲ್ಲೇ ಸಿಗುವಂತೆ ಮಾಡಿದರೆ ಅವನ್ನು ಸಂಗ್ರಹಿಸಿದ ಡಾ|| ಶ್ರೀನಿವಾಸ ಹಾವನೂರರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ.
ವಿಲಿಯಂ ರೀವ್ಸ್ ೧೮೩೫ರವರೆಗೆ ಭಾರತದಲ್ಲಿ ಇದ್ದರು. ಆಮೇಲೆ ಅವರು ಇಂಗ್ಲೆಂಡಿಗೆ ಹೋದಾಗ ದೃಷ್ಟಿ ಕಳೆದುಕೊಂಡು ತಮ್ಮ ಕಡೆಯ ದಿನಗಳನ್ನು ಕಳೆದರು.
(ಈ ಪುಸ್ತಕಗಳ ದರ್ಶನ ಮಾಡಿಸಿದ ಪ್ರೊ|| ಧನಂಜಯ ಅವರಿಗೆ ನನ್ನ ವಂದನೆಗಳು)