ಫೆಬ್ರುವರಿ ೧೫ರಿಂದ ೧೭ರ ವರೆಗೆ ಹೊಸದಿಲ್ಲಿಯ ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ `ಸಂಸ್ಕೃತ ಮತ್ತು ಇತರೆ ಭಾರತೀಯ ಭಾಷೆಗಳು- ತಂತ್ರಜ್ಞಾನ’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕನ್ನಡ ಭಾಷಾ ಮಾಹಿತಿ ತಂತ್ರಜ್ಞಾನ ಸಾಧನಗಳ ಬಗ್ಗೆ ಮುಖ್ಯ ಲೇಖಕನಾಗಿ ಒಂದು ಶ್ವೇತಪತ್ರವನ್ನು ಮಂಡಿಸಿದ ಖುಷಿ ನನ್ನದಾಗಿದೆ.

ಯಾವುದೇ ಪದವಿ ಇಲ್ಲದೆ ಹೀಗೆ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ  ಆಹ್ವಾನಿತನಾಗಿದ್ದು, ದೇಶ ವಿದೇಶಗಳ ಖ್ಯಾತ ಭಾಷಾ ಸಂಶೋಧಕರು, ಅಧಿಕಾರಿಗಳೊಂದಿಗೆ ನೇರ ಸಂವಾದ ನಡೆಸಿದ್ದು, ಮೂರೂ ದಿನಗಳ ಕಾಲ ಸಕ್ರಿಯವಾಗಿ ಭಾಗವಹಿಸಿದ್ದು ನನ್ನ ಜೀವನದ ಮುಖ್ಯ ಘಟನೆ ಎಂದು ಹೇಳಲು ನನಗೆ ತುಂಬಾ ಸಂತೋಷವಿದೆ. ಈ ಮರೆಯಲಾಗದ ಘಟನೆಗೆ ಕಾರಣರಾದ, ನನ್ನ ಅಲ್ಪ ತಿಳಿವಳಿಕೆಯನ್ನು ಗುರುತಿಸಿ ಆಹ್ವಾನಿಸಿದ ವಿವಿಯಲ್ಲಿ ಕಂಪ್ಯುಟೇಶನಲ್‌ ಲಿಂಗ್ವಿಸ್ಟಿಕ್ಸ್‌ನಲ್ಲಿ ಪ್ರಾಧ್ಯಾಪಕರಾದ ಮತ್ತು ಸ್ಕೂಲ್‌ ಆಫ್‌ ಸಂಸ್ಕೃತ ಎಂಡ್‌ ಇಂಡಿಕ್‌ ಸ್ಟಡೀಸ್‌ನ ಪ್ರೊ|| ಗಿರೀಶ್‌ ನಾಥ್‌ ಝಾ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು.

ಜೀವನದಲ್ಲಿ ಇಂತಹ ಸಣ್ಣಪುಟ್ಟ ಸಂತೋಷಗಳೇ ನಮ್ಮನ್ನು ನೆಮ್ಮದಿಯ ದಡಕ್ಕೆ ತಂದು ನಿಲ್ಲಿಸುತ್ತವೆ. ಹತ್ತು ವರ್ಷಗಳ ಹಿಂದೆ ಯುಜಿಸಿ ಕಾರ್ಯಾಗಾರದಲ್ಲಿ ಸಮೂಹ ಸಂವಹನ ವಿಭಾಗ ಮುಖ್ಯಸ್ಥರಿಗೆ ನವಮಾಧ್ಯಮದ ಬಗ್ಗೆ ಗೋಷ್ಠಿ ತೆಗೆದುಕೊಂಡಿದ್ದು, ಹಂಪಿಯ ಕನ್ನಡ ವಿವಿಯ ದೂರಶಿಕ್ಷಣ ವಿಭಾಗದ ಮಾಹಿತಿ ತಂತ್ರಜ್ಞಾನ ಕೋರ್ಸಿನ ಅಧ್ಯಯನ ಮಂಡಳಿ ಅಧ್ಯಕ್ಷನಾಗಿ ನಾಲ್ಕು ಪುಸ್ತಕಗಳನ್ನು ಬರೆದಿದ್ದು, – ಇವೂ ನನ್ನ ಅಧಿಕೃತ ವಿದ್ಯಾರ್ಹತೆಯನ್ನು ಮೀರಿ ಬಂದ ಅವಕಾಶಗಳು. ಕರ್ನಾಟಕ ಸರ್ಕಾರವು ಸದ್ಯದಲ್ಲೇ ಅನಾವರಣಗೊಳಿಸಲಿರುವ ರಾಜ್ಯ ಸರ್ಕಾರದ ಜಾಲತಾಣಗಳ ಏಕೀಕೃತ ನಿರ್ವಹಣೆ ಮತ್ತು ಕನ್ನಡ ಜಾರಿಗೆ ನನ್ನ ವರದಿಯೇ ಆಧಾರವಾಗಿರುವುದು ಕೂಡ ನನ್ನ ಇನ್ನೊಂದು ಉತ್ತಮ ಕೆಲಸ ಎಂದು ಭಾವಿಸಿದ್ದೇನೆ.

ನನ್ನ ಕೆಲವು ಆಂತರಿಕ ಕಾರಣಗಳಿಗೆ (ಅವುಗಳಲ್ಲಿ ನನ್ನ ಲೋಪಗಳೂ, ಇತರರ ಕೊರತೆಗಳೂ ಎಲ್ಲವೂ ಸೇರಿವೆ ಅನ್ನಿ)  ಇಂಜನಿಯರಿಂಗ್  ಪದವಿ ಓದನ್ನು ಅರ್ಧಕ್ಕೇ ಬಿಟ್ಟೆ. ಕೊನೆಗೆ ದೂರಶಿಕ್ಷಣದ ಮೂಲಕ ಗಣಿತದಲ್ಲಿ ಬಿಎಸ್ಸಿ ಮಾಡಲು ಹೋಗಿ ಶುಲ್ಕವಿಲ್ಲದೆ ಮೂರನೇ ವರ್ಷದ ಪರೀಕ್ಷೆಗೆ ಕೂರಲು ಆಗಲಿಲ್ಲ. ಹೇಗಾದರೂ ಮಾಡಿ ಪದವಿ ಮಾಡಬೇಕೆಂಬ ನನ್ನ ಹಂಬಲ ಎಂದೂ ಪೂರೈಸಲಿಲ್ಲ. ಐದು ವರ್ಷಗಳ ಹಿಂದೆ ಡಾಟಾ ಜರ್ನಲಿಸಂ ಡಿಪ್ಲೋಮಾ ಮಾಡಿದ್ದು, ಇಂಟರ್‌ನ್ಯಾಶನಲ್‌ ಕೌನ್ಸಿಲ್ ಫಾರ್‌ ಜರ್ನಲಿಸ್ಟ್ಸ್ (ಐಸಿಎಫ್‌ಜೆ) ಸಂಸ್ಥೆಗಾಗಿ ಮೂರು ಭಾಷೆಗಳಲ್ಲಿ ಡಿಜಿಟಲ್‌ ಜರ್ನಲಿಸಂ ಕೋರ್ಸಿನ ಆನ್‌ಲೈನ್‌ ಕೋರ್ಸುಗಳನ್ನು ಸಿದ್ಧಪಡಿಸಿದ್ದು – ಇವೂ ನನ್ನ ಇತ್ತೀಚೆಗಿನ ಕಲಿಕೆಯ ಘಟನೆಗಳಾಗಿವೆ.

ದಿಲ್ಲಿಯಲ್ಲಿ ಮಂಡಿಸಿದ ಶ್ವೇತಪತ್ರವು ಇತರೆ ಭಾಷೆಗಳವರರು ಮಂಡಿಸಿದ ಪತ್ರಗಳಿಗಿಂತ ಹೆಚ್ಚು ವ್ಯವಸ್ಥಿತವಾಗಿತ್ತು ಎಂದು ಅದನ್ನು ಓದಿದ ಕೆಲವರು ತಿಳಿಸಿದ್ದಾರೆ. ಹಾಗಂತ ಅದರಲ್ಲಿ ಲೋಪಗಳು ಇದ್ದರೂ ಇರಬಹುದು. ಅದನ್ನು ಮುಂದೆ ಖಂಡಿತ ತಿದ್ದಿಕೊಳ್ಳುತ್ತೇನೆ. ಅದರ ಕನ್ನಡ ಆವೃತ್ತಿಯನ್ನೂ ನಾವು ಸಿದ್ಧಪಡಿಸಿದ್ದೇವೆ (ಉಳಿದ ಭಾಷೆಗಳು ರೂಪಿಸಿದ್ದು ಕಾಣಲಿಲ್ಲ). ೨೧ ಭಾರತೀಯ ಭಾಷೆಗಳ ಈ ಶ್ವೇತಪತ್ರಗಳ ಇಂಗ್ಲಿಶ್‌ ಮತ್ತು ಭಾಷಾ ಆವೃತ್ತಿಗಳ ಸಂಕಲನವನ್ನು ವಿಖ್ಯಾತ ಸಂಶೋಧನಾ ಪ್ರಕಟಣಾ ಸಂಸ್ಥೆ ಸ್ಪ್ರಿಂಗರ್‌ ಪ್ರಕಟಿಸಲಿದೆ ಎಂಬುದು ನನಗೆ ಖುಷಿಕೊಟ್ಟ ಇನ್ನೊಂದು ಸಂಗತಿ. ಬಹುಶಃ ನಾನು ಹೀಗೆ ಬರೆದ ಮೊದಲ ಮತ್ತು ಕೊನೆಯ ಪ್ರಬಂಧವೂ ಇದಾಗಿರಬಹುದು!!

ಪದವಿ ಬೇಕು ನಿಜ, ಆದರೆ ಅದಕ್ಕಿಂತ ಮುಖ್ಯ ಪದವೀಧರರಾಗುವುದಕ್ಕೆ ಕಲಿವ ತವಕ ಇರಬೇಕು ಎಂಬುದು ನನ್ನ ಬಲವಾದ  ನಂಬಿಕೆ. ನಾನು ಸೆಕೆಂಡ್‌ ಪಿಯುಸಿ ಓದಿದವ ಎಂಬ ಭಯದಿಂದಲೇ ಸ್ಪರ್ಧಾತ್ಮಕವಾಗಿ ಅರ್ಹವಾಗಿರಲು ಕಲಿಯುವುದನ್ನು ಆರಂಭಿಸಿದೆ. ಅದೂ ನನ್ನ ಬದುಕಿನ ಮೂವತ್ತನಾಲ್ಕನೆಯ ವಯಸ್ಸಿನಿಂದ. ಅಲ್ಲಿಯವರೆಗೆ ನಾನು ತೀರಾ ಅಜ್ಞಾನಿಯಾಗಿದ್ದೆ; ಒಂದು ಕೆಲಸ, ಒಂದು ಸಂಬಳ ಒಂದು ಬದುಕು ಎಂಬ ಯಾಂತ್ರಿಕ ಸೂತ್ರಕ್ಕೇ ಅಂಟಿಕೊಂಡಿದ್ದೆ. ಆದ್ದರಿಂದ ಈ ಇಪ್ಪತ್ತು ವರ್ಷಗಳಲ್ಲೇ ನಾನು ಇಷ್ಟೆಲ್ಲ ಬರೆಯಲು, ಕಲಿಯಲು ಸಾಧ್ಯವಾಯಿತು. ಈ ಮಧ್ಯೆ ಇಂಗ್ಲಿಶಿನಲ್ಲೂ ಸುಮಾರಾಗಿ ಲೇಖನ ಬರೆಯುವುದನ್ನೂ ಕಲಿತೆ. ಹಿಂದುಸ್ತಾನಿ ಬಾನ್ಸುರಿ ಕಲಿಕೆ ಕುಂಠಿತವಾಗಿದೆ ಎಂಬ ಬೇಸರ ಮಾತ್ರ ಇದೆ.

ಇದನ್ನೆಲ್ಲ ನಾನು ಇಲ್ಲಿ ನನ್ನ ಸ್ವಪ್ರಶಂಸೆಗೆ ಬರೆಯುತ್ತಿಲ್ಲ. ಈ ಜಗತ್ತಿನಲ್ಲಿ ಎಷ್ಟೋ ಜನ ಮೇಧಾವಿಗಳು ಹಲವು ಪ್ರತಿಭೆಗಳನ್ನು ಏಕಕಾಲದಲ್ಲಿ ಪ್ರಕಟಿಸಿದವರು. ವಿಜ್ಞಾನಿಗಳು, ಕಲಾಕಾರರು, ಸಾಹಿತಿಗಳು ಎಲ್ಲರೂ ಅಭೂತಪೂರ್ವ ಬದುಕನ್ನು ಸಾಧಿಸಿದವರು. ನನ್ನ ಬದುಕಿನ ಮಿತಿಯಲ್ಲಿ ಇಷ್ಟನ್ನು ಸಾಧಿಸಿದೆ, ನನ್ನಂತಹದೇ ಬದುಕು ಹೊಂದಿರುವವರಿಗೆ ಈ ಬರಹದಿಂದ ಏಕಾದರೂ ಕಲಿವ ಸರಕು ಸಿಗಲಿ ಎಂಬ ಉದ್ದೇಶದಿಂದ ಬರೆದಿರುವೆ.

ಬರಹಗಾರರು ತಮ್ಮ ನಂಬಿಕೆಗೆ ವಿರುದ್ಧವಾಗಿ ಬರೆಯಬಾರದು ಎಂಬುದು ನನ್ನ ನೀತಿ. ನನ್ನ ವೃತ್ತಿಯಲ್ಲೂ ಅದನ್ನು ಪಾಲಿಸಿದ್ದೇನೆ.

೨೦೧೯ರ ವರ್ಷವು ಹೀಗೆ ಉತ್ತಮವಾಗಿ ಆರಂಭವಾಗಿರುವ ಬಗ್ಗೆ ಸಮಾಧಾನವಿದೆ. ಈ ವರ್ಷದ ಕೊನೆಯಲ್ಲಿ  ಇಂತಹ ಇನ್ನಷ್ಟು ಕೆಲಸಗಳನ್ನು ಸಮಾಜಮುಖಿಯಾಗಿ ಮಾಡುವ ಶಕ್ತಿ ಸಿಗಲಿ ಎಂಬುದಷ್ಟೇ ಈ ಕ್ಷಣದ ಬೇಡಿಕೆ.

Share.
Leave A Reply Cancel Reply
Exit mobile version