ಹಾಲಿವುಡ್ ಸಿನೆಮಾ ನೋಡುವ ಹವ್ಯಾಸ ಬೆಳೆದರೆ ಬಿಡುವುದು ಕಷ್ಟ. ಒಂಥರ ಅಡಿಕ್ಟ್ ಆಗಿಬಿಡುತ್ತೇವೆ. ನಾನಂತೂ ಏಳನೇ ಕ್ಲಾಸಿನಿಂದ ಇವುಗಳನ್ನು ನೋಡುತ್ತ ಮರುಳಾದವ. ಆಗ ದಾವಣಗೆರೆಯಲ್ಲಿದ್ದೆ. ಪುಷ್ಪಾಂಜಲಿ ಥಿಯೇಟರಿನಲ್ಲಿ ಯಾವಾಗ್ಲೂ ಇಂಗ್ಲಿಷ್ ಸಿನೆಮಾದ ಮಾರ್ನಿಂಗ್ ಶೋ ಇರ್ತಾ ಇತ್ತು. ಅಲ್ಲಿ ಸಾಮಾನ್ಯ ಪ್ರತೀ ವಾರಾನೂ ಸಿನೆಮಾ ನೋಡುತ್ತಿದ್ದೆ. ಬ್ರೂಸ್ ಲೀ ಯಿಂದ ಹಿಡಿದು ಜಾಕೀ ಚಾನ್‌ನ ದಿ ಯಂಗ್ ಮಾಸ್ಟರ್‌ವರೆಗೆ ಎಷ್ಟೋ ಸಿನೆಮಾ. ಆಗ ನನಗೆ ಹಾಲಿವುಡ್ ಸಿನೆಮಾ ತಾರೆಯರ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ.

ಬೆಂಗಳೂರಿಗೆ ಬಂದಮೇಲೆ, ಕಾಟನ್‌ಪೇಟೆಯ ವಿಜಯಲಕ್ಷ್ಮಿ ಥಿಯೇಟರಿನಲ್ಲಿ ಸೆಕೆಂಡ್ ಹ್ಯಾಂಡ್ ಸಿನೆಮಾಗಳನ್ನೂ, ಎಂ ಜಿ ರಸ್ತೆ / ಬ್ರಿಗೇಡ್ ರೋಡ್ / ರೆಸಿಡೆನ್ಸಿ ರಸ್ತೆಯಲ್ಲಿದ್ದ ಬ್ಲೂಮೂನ್, ಬ್ಲೂ ಡೈಮಂಡ್, ರೆಕ್ಸ್, ಪ್ಲಾಝಾ, ಗೆಲಾಕ್ಸಿ, ಸಿಂಫೋನಿ, ಲಿಡೋಗಳಲ್ಲಿ ಫಸ್ಟ್ ಹ್ಯಾಂಡ್ ಹಾಲಿವುಡ್ ಸಿನೆಮಾಗಳನ್ನೂ ನೋಡತೊಡಗಿದೆ. ಇಂಥ ಥಿಯೇಟರಿನಲ್ಲಿ ಇಂಥ ಸೀಟಿನಲ್ಲೇ ಕೂತುಕೊಳ್ಳಬೇಕು ಎಂಬ ಹಠ ತೊಟ್ಟಿದ್ದೂ ಇದೆ. ಆ ದಿನಗಳಲ್ಲಿ (1986-90) ನಾನು ನೋಡದ ಸಿನೆಮಾ ಇಲ್ಲ ಅನ್ನುವಷ್ಟು ಹಾಲಿವುಡ್‌ಗೆ ಅಡಿಕ್ಟ್ ಆದೆ. ಈಗ ತುಂಬಾ ಸೆಲೆಕ್ಟಿವ್ ಆಗಿದ್ದೇನೆ. ಆದರೆ ಆ ಆಕರ್ಷಣೆ ಬಿಟ್ಟಿಲ್ಲ; ಬಿಡುವುದೂ ಇಲ್ಲ.

ನಿಮಗೆ ಸುಮಾರಾಗಿ ಟಾಮ್ ಹಾಂಕ್ಸ್‌ನ ಕಾಸ್ಟವೇ ಸಿನೆಮಾ ಗೊತ್ತು. ಆದರೆ ರಾಬಿನ್‌ಸನ್ ಕ್ರೂಸೋನ ಜೀವನ ಆಧರಿಸಿದ ಒಂದು ಈಸ್ಟಮನ್ ಸಿನೆಮಾ ಹಿಂದೆಯೇ ಬಂದಿತ್ತು. ಅದು ಟಾಮ್ ಹಾಂಕ್ಸ್ ಥರ ಬೋರ್ ಹೊಡೆಸಿರಲಿಲ್ಲ.
ನಾನು ನಿರುದ್ಯೋಗಿಯಾಗಿ ಬೆಂಗಳೂರಿಗೆ ಬಂದ ವರ್ಷ ನೋಡಿದ ಮೊದಲ ಸಿನೆಮಾ ದಿ ಬ್ಲೂ ಥಂಡರ್. ಈಗಲೂ ಈ ಸಿನೆಮಾ ನನ್ನ ಫೇವರೆಟ್. ಆ ದಿನಗಳಲ್ಲಿ ರಿಚರ್ಡ್ ಬರ್ಟನ್ ನಟಿಸಿದ ವೇರ್ ಈಗಲ್ಸ್ ಡೇರ್ ಅನ್ನೋ ಕೋಲ್ಡ್ ವಾರ್ ಮೂವೀ ಬಂದಿತ್ತು. ಬಾಲಿವುಡ್ ಸಿನೆಮಾ ಥರ ಉದ್ದ, ಚಿತ್ರದ ತುಂಬಾ ನೀಲಿಗತ್ತಲು; ಆದರೂ ಇದನ್ನು ನೀವು ನೋಡಬೇಕು. ರಿಚರ್ಡ್ ಬರ್ಟನ್ ಆಗಲೇ ತನ್ನ ಸಿನೆಮಾಪರ್ವದ ಮುಕ್ತಾಯದ ಹಂತದಲ್ಲಿದ್ದ.

ಮಹಾಮಹಾನಟರು ಪಾತ್ರ ವಹಿಸಿದ್ದ ದಿ ಗನ್ಸ್ ಆಫ್ ನೆವರೋನ್ ಎಂಬ ದ್ವಿತೀಯ ಮಹಾಯುದ್ಧದ ಕಾಲದ ಸಿನೆಮಾ ಈಗಲೂ ಕಣ್ಣಿಗೆ ಕಟ್ಟುವಂತೆ ನೆನಪಿದೆ. ಈ ಸಿನೆಮಾವನ್ನ ನೀವು ಡಯಲಾಗ್‌ಗಾಗಿ, ಚಿತ್ರೀಕರಣಕ್ಕಾಗಿ, ಪ್ರಬುದ್ಧ ನಟನೆಗಾಗಿ ನೋಡಬಹುದು. ಶಿಂಡ್ಲರ್ಸ್ ಲಿಸ್ಟ್ ನೆನಪಿಗೆ ತರುವ ಇನ್ನೊಂದು ಸಿನೆಮಾ. ವ್ಯಾನ್ ರ‍್ಯಾನ್ಸ್ ಎಕ್ಸ್‌ಪ್ರೆಸ್- ಯೆಹೂದಿಗಳಿದ್ದ ಒಂದು ರೈಲನ್ನೇ ನಾಝಿಗಳ ಹಿಡಿತದಿಂದ ತಪ್ಪಿಸುವ ನಾಯಕನ ಸಾಹಸವನ್ನು ಮರೆಯಲಾಗದು.

ದಿ ಗನ್ ಆಫ್ ನೆವರೋನ್ ಚಿತ್ರದ ದೃಶ್ಯ

 

ದೇಶಭಕ್ತಿಯ ಸಿನೆಮಾಗಳ ಬಗ್ಗೆ ಒಲವಿದ್ದರೆ, ಓಮರ್ ಮುಖ್ತರ್ – ದಿ ಲಯನ್ ಆಫ್ ದಿ ಡಸರ್ಟ್. ಆಂಥೋನಿ ಖ್ವಿನ್‌ನ ಅದ್ಭುತ ನಟನೆಯ ಈ ಸಿನೆಮಾವನ್ನು ಇತ್ತೀಚೆಗೆ ಡೌನ್‌ಲೋಡ್ ಮಾಡಿ ಮತ್ತೆ ಮತ್ತೆ ನೋಡಿದೆ. ಎಂದೂ ಮಾಸದ ಸಿನೆಮಾ. ಆಲ್ಜೀರಿಯಾದ ಸ್ವಾತಂತ್ರ್ಯ ಹೋರಾಟದ ನೈಜ ಕಥೆಯ ಈ ಸಿನೆಮಾವನ್ನು ನೋಡಿ ; ಆಮೇಲೆ ಲಗಾನ್ ಜೊತೆ ಹೋಲಿಸಿ. ಅಪ್ಪಟ ಸ್ವಾತಂತ್ರ್ಯ ಹೋರಾಟದ ದೃಶ್ಯಗಳೂ ಎಂಥ ಗಟ್ಟಿ ಮನರಂಜನೆ ಒದಗಿಸುತ್ತವೆ ಎಂಬುದಕ್ಕೆ ಓಮರ್ ಮುಖ್ತರ್ ಒಂದು ನಿದರ್ಶನ.

ಕ್ಲಾಸಿಕ್ ಮೂವೀಗಳನ್ನು ನೋಡುವುದಿದ್ದರೆ, ದಿ ಟೆನ್ ಕಮ್ಯಾಂಡ್‌ಮೆಂಟ್ಸ್, ಬೆನ್‌ಹರ್, ಮತ್ತು ಗಾನ್ ವಿತ್ ದಿ ವಿಂಡ್ ನೋಡಲೇಬೇಕು. ಈ ಮೂರಕ್ಕೂ ಎರಡು ಸಲ ಇಂಟರ್‌ವಲ್ ಇತ್ತು. ನಾನು ಇವೆಲ್ಲವುಗಳನ್ನೂ ಪ್ಲಾಝಾ ಥಿಯೇಟರಿನಲ್ಲಿ ನೋಡಿದ ಅದೃಷ್ಟವಂತ ! ಈಗ ಈ ಥಿಯೇಟರ್ ಮುಚ್ಚಿದೆ. ಈ ಥಿಯೇಟರಿನ ಕಿರಿದಾದ ಕುರ್ಚಿಯಲ್ಲಿ ಕೂತು ಸಿನೆಮಾ ನೋಡುವ ಅನುಭವವೇ ಬೇರೆ. ಎಂಬತ್ತರ ದಶಕದ ಯಾವ ರೋಮಾನ್ಸ್ ಪ್ರಿಯರೂ ಪ್ಲಾಝಾವನ್ನು ತಪ್ಪಿಸಿಲ್ಲ ಅಂತ ಕಾಣ್ಸುತ್ತೆ!

ಮನುಷ್ಯನನ್ನು ಸದಾ ಶೋಷಿಸುವ ಮತೀಯ ರಾಜಕಾರಣದ ಕರಾಳ ದೃಶ್ಯಗಳನ್ನು ಇದ್ದಹಾಗೇ ಬಿಂಬಿಸಿದ ಸಿನೆಮಾ ದಿ ಮಿಶನ್. ನಾನು ಈ ಸಿನೆಮಾವನ್ನು ಮರೆಯಲಾರೆ. ಇದರಲ್ಲಿನ ಜಲಪಾತದ ದೃಶ್ಯವನ್ನು ಎಷ್ಟು ಊಹಿಸಿಕೊಂಡರೂ, ನೋಡಿಯೇ ಅನುಭವಿಸಬೇಕು! ಮತಾಂತರ ಮಾಡಲು ಹೋದ ಮಿಶನರಿಯೊಬ್ಬ ಆದಿವಾಸಿಗಳ ಜೊತೆಗೂಡಿ ಚರ್ಚಿನ ವಿರುದ್ಧ ಸೆಣೆಸುವ ಈ ಸಿನೆಮಾ ನನ್ನೊಳಗೆ ಈಗಲೂ ಭಾವತರಂಗಗಳನ್ನು ಏಳಿಸುತ್ತದೆ.

ಜಾಕೀ ಚಾನ್‌ನ ಮೊದಲ ಹಾಲಿವುಡ್ ಸಿನೆಮಾ ದಿ ಯಂಗ್ ಮಾಸ್ಟರ್ ಒಂದು ಮಾಸ್ಟರ್‌ಪೀಸ್. ಅಂಥ ಸಿನೆಮಾ ಮತ್ತೆ ಬರಲೇ ಇಲ್ಲ. ಜಾಕೀ ಚಾನನ ಯುವಮನಸ್ಸು, ಸದೃಢ ದೇಹ, ಸಾಮರ್ಥ್ಯ, ಮುಗ್ಧತೆ- ಎಲ್ಲವೂ ಇದರಲ್ಲಿ ಕಾಣುತ್ತೆ. ತುಂಬಾ ಇಷ್ಟವಾದ ಕುಂಗ್‌ಫು ಮೂವೀ. 36ತ್ ಚೇಂಬರ್ ಆಫ್ ಶಾವೋಲಿನ್ ಸಹಾ ನಾನು ಆಗ ನೋಡಿದ ಒಳ್ಳೆಯ ಕುಂಗ್‌ಫು ಸಿನೆಮಾ. 1980ರ ದಶಕದ ಈ ಸಿನೆಮಾಗಳು ನನಗೆ ತುಂಬಾ ಖುಷಿ ಕೊಟ್ಟಿವೆ. ನೀವೂ ಈ ಸಿನೆಮಾಗಳನ್ನು ಸಂಗ್ರಹಿಸಿ ನೋಡಿ.

Share.

1 Comment

  1. ಈ ಎಲ್ಲ ಮೂವೀ ಗಳನ್ನು ನೋಟ್ ಮಾಡಿ ಕೊಂಡಿದ್ದೇನೆ. ತುಂಬಾ ಥ್ಯಾಂಕ್ಸ್ ಈ ಮಾಹಿತಿಗೆ. ಹಾಗೆ ಯಾವ ಸೀತೆ ನಿಂದ ಡೌನ್‌ಲೋಡ್ ಮಾಡಿ ದರೆ ಸಬ್‌ಟೈಟಲ್ಸ್ ಸಿಗಬಹುದು ಎಂದು ತಿಳಿಸಬಹುದೇ?

Leave A Reply Cancel Reply
Exit mobile version