ಈ ಸಲವಾದರೂ ನನ್ನ ಪತ್ನಿ ವಿಮಲಾ ಜನ್ಮದಿನದಂದು (ಜನವರಿ 14) ಒಂದು ಖಾಸಗಿ ಕಾಲಂ ಬರೆಯಬೇಕೆಂದು ಹೊರಟೆ. ಅದೀಗ ಕೊಂಚ ತಡವಾಗಿ ಪ್ರಕಟವಾಗುತ್ತಿದೆ. ಈ ಬ್ಲಾಗ್ ಬರೆಯಲು ಕಾರಣಗಳೂ ಇವೆ. ಬ್ಲಾಗ್ ಮತ್ತು ಫೇಸ್‌ಬುಕ್ ಗಳಲ್ಲಿ ಬರೆದು ಕೆಲವರಿಗಾದರೂ ನಮ್ಮೊಳಗಿನ ವಿಷಯಗಳನ್ನು ಹೇಳಿಕೊಂಡ ಸಮಾಧಾನ ಇರುತ್ತದೆ. ಅಲ್ಲದೆ ಇದು ನನ್ನ ಹೊಣೆಗಾರಿಕೆಯೂ ಆಗಿದೆ.
ನನ್ನ ಹೆಂಡತಿ ವಿಮಲಾ ಜನ್ಮತಃ ಕಿವಿ ಕೇಳಿಸದ ಮತ್ತು ಆ ಕಾರಣಕ್ಕಾಗಿಯೇ ಮಾತನಾಡಲಾಗದವಳು (deaf and mute by birth). ಅವಳ ಬಗ್ಗೆ ನಾನು `ಸುಧಾ’ ವಾರಪತ್ರಿಕೆಯಲ್ಲಿ ಬರೆದಿದ್ದ ಒಂದು ಲೇಖನ ಇಲ್ಲಿದೆ.ಅವೆಲ್ಲವೂ ಮದುವೆಗೆ ಮುನ್ನಿನ ಅಂಶಗಳು. ಆಮೇಲೇನಾಯ್ತು ಎಂಬುದು ನನಗೇ ಹೆಚ್ಚು ಗೊತ್ತು! ಲೇಖನದಲ್ಲಿ `ಆಕೆಗೊಬ್ಬ ಜೀವನ ಸಂಗಾತಿ ಬೇಕು’ ಎಂದು ಬರೆದಿದ್ದೆ. ಆ ಲೇಖನ ಬರೆದು ಸುಧಾಗೆ ಕಳಿಸಿದ ಮೇಲೆ ನಾನು ಪೂರ್ವಾಂಚಲದ ರಾಜ್ಯ ಮಣಿಪುರಕ್ಕೆ ಅಂತರ ರಾಜ್ಯ ವಿದ್ಯಾರ್ಥಿ ಜೀವನಾನುಭವ (ಸೀಲ್) ಕಾರ್ಯಕ್ರಮದಡಿ, ವಿದ್ಯಾರ್ಥಿ ಪರಿಷತ್ತಿನಿಂದ ಹೋಗಿ ಬಂದೆ. 1990ರ ಜನವರಿ 21 ರಂದು ಲೇಖನ ಪ್ರಕಟವಾಯ್ತು. (ಈ ಲೇಖನ ಬರೆದಿದ್ದಕ್ಕೆ ಸುಧಾ ಪತ್ರಿಕೆಯು ಕಳಿಸಿದ್ದ ಸಂಭಾವನೆಯ 80 ರೂ.ಗಳ ಚೆಕ್ಕನ್ನು ನಾನು ನಗದೀಕರಿಸಿಲ್ಲ ಎಂಬುದು ಮೊನ್ನೆ ಗೊತ್ತಾಯಿತು!) 1991 ರ ಜನವರಿ 22 ರಂದು ನಾವು ಮದುವೆಯಾದೆವು. ಮದುವೆಗೆ ನನ್ನ ಕಡೆಯಿಂದ ಕೆಲವೇ ಕೆಲವು ಕುಟುಂಬ ಸದಸ್ಯರು, ಮಿತ್ರ – ಮಿತ್ರೆಯರು ಬಂದಿದ್ದರು. ವಿಮಲಾ ಕಡೆಯಿಂದ ಆಕೆಯ ಎಲ್ಲ ಸಂಬಂಧಿಕರೂ ಬಂದಿದ್ದರು; ಅದಾದ ಮೇಲೆ ಈವರೆಗೂ ಹಾಗೆ ಎಲ್ಲ ಸಂಬಂಧಿಕರೂ ಸೇರಿಯೇ ಇಲ್ಲ ಎಂದು ಈಗಲೂ ಹೇಳುತ್ತಿರುತ್ತಾರೆ! ಮದುವೆಯು ವಿಮಲಾ ಮನೆಯಲ್ಲೇ ನಡೆಯಿತು. ಸಂಜೆ ಒಂದು ಹಿಂದುಸ್ತಾನಿ ಸಂಗೀತ ಕಾರ್ಯಕ್ರಮವೂ ಇತ್ತು.
ಮದುವೆಯಾದಾಗ ನಾನು ಶಿರಸಿಯಲ್ಲಿ ಪ್ರಸ್ತಾವಿತ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಮಗ ಹುಟ್ಟುವುದಕ್ಕೂ, ಪತ್ರಿಕೆ ಆರಂಭವಾಗುವುದಕ್ಕೂ ಆಲ್ ಮೋಸ್ಟ್ ಹೊಂದಿಕೆಯಾಗಿತ್ತು. ಮಗ ಹುಟ್ಟಿದ್ದನ್ನು ನೋಡಿದ ಮರುದಿನ ಮುಂಜಾನೆಯೇ ಶಿರಸಿಗೆ ಹೊರಟ ನಾನು ಎಂದಿನಂತೆ ಅಪಸ್ಮಾರಕ್ಕೆ ಒಳಗಾಗಿ ತಾವರಕೇರಿ ಬಸ್ ನಿಲ್ದಾಣದಲ್ಲಿ ತಲೆತಿರುಗಿ ಬಿದ್ದೆ. ಅದೃಷ್ಟವಶಾತ್ ಕುಷ್ಟಗಿಯಲ್ಲಿದ್ದ ನನ್ನ ಮಿತ್ರ ವೇಣುಗೋಪಾಲನ ಮನೆಗೆ ಹೋಗಿ ಅವನಿಲ್ಲದಿದ್ದರೂ ಅವನ ಅಪ್ಪ – ಅಮ್ಮಂದಿರ ಆರೈಕೆ ಪಡೆದೆ. ತಲೆಗೆ ಭಾರೀ ಪೆಟ್ಟಾಗಿದ್ದರಿಂದ ವೈದ್ಯರು ಎರಡು ದಿನ ನಿಗಾದಲ್ಲಿ ಇಟ್ಟೇ ನನ್ನನ್ನು ಬಿಟ್ಟರು. ಅದಾಗಿ ಶಿರಸಿಯಲ್ಲಿ ಒಂದು ವರ್ಷ ನಿರಂತರ ಹಗಲು ರಾತ್ರಿ ಪಾಳಿ ಮಾಡಿದೆ. ಒಂದು ವರ್ಷದಲ್ಲಿ ನನ್ನ ಸಂಬಳ 375 ರೂ.ಗಳಿಂದ 700 ರೂ.ಗೆ ಜಿಗಿದಿತ್ತು. ಈ ದಿನಗಳಲ್ಲಿ ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತ, ಒರಳಿನಲ್ಲಿ ಬೀಸುತ್ತ ನನ್ನ ಮಲೆನಾಡಿನ ರುಚಿಯನ್ನು ಅರ್ಥ ಮಾಡಿಕೊಳ್ಳದೆ ಬೈಸಿಕೊಳ್ಳುತ್ತ ಮಗನನ್ನು ನೋಡಿಕೊಳ್ಳುತ್ತ ಆಕೆ ಹೇಗೆ ಕಾಲ ಕಳೆದಿರಬಹುದು ಎಂದು ಊಹಿಸಿಕೊಂಡರೆ ನನಗೆ ಕಣ್ಣು ಮಂಜಾಗುತ್ತದೆ.
ಅದಾಗಿ ಮಂಗಳೂರಿನ ಹೊಸದಿಗಂತ ಪತ್ರಿಕೆಗೆ ಬಂದ ಮೇಲೂ, ನನ್ನ ರಾತ್ರಿ ಪಾಳಿ ಕೆಲಸ ನಿಲ್ಲಲಿಲ್ಲ. ಆಗಲೂ ನನ್ನ ಸಂಬಳ ಅಷ್ಟಕ್ಕಷ್ಟೆ. ಮಗನನ್ನು ನೋಡಿಕೊಂಡು, ತನ್ನ ಪಾಲಿಗೆ ಬಂದಿದ್ದನ್ನೇ ತೃಪ್ತಿಯಿಂದ ಮತ್ತು ಸಂತೋಷದಿಂದ ಅನುಭವಿಸಿದ ಆಕೆಯ ಸಹನೆಯನ್ನು ಏನೆಂದು ಹೇಳಲಿ? ಎರಡು ವರ್ಷ ಸತತವಾಗಿ ಕದ್ರಿ ಪಾರ್ಕ್ ಬಿಟ್ಟರೆ ಬೇರೆ ಮನರಂಜನೆಯೇ ಇರಲಿಲ್ಲ; ಒಂದೈದು ಸಲ ಐಡಿಯಲ್‌ಗೆ ಹೋಗಿ ಐಸ್‌ಕ್ರೀಮ್ ತಿಂದಿರಬಹುದು! ಸದ್ಯ, ಎಲ್‌ಪಿಜಿ ಸಂಪರ್ಕ ಹೇಗೋ ಸಿಕ್ಕಿ ಕೊಂಚ ಅನುಕೂಲ ಆಯ್ತು.
ಆಮೇಲೆ (ಜನವರಿ 1994) ಹೊಸದಿಗಂತದಲ್ಲೇ ಬೆಂಗಳೂರು; ಅಲ್ಲೂ ರಾತ್ರಿ ಪಾಳಿ. ಆಕೆಗೆ ಮೊದಲ ಸಲ ಬೆಂಗಳೂರಿನ ಪರಿಚಯ. ಆಗಲೇ ಥಳುಕು ಬೆಳೆಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲಿ ಓಡಾಡಲು ಒಂದು ಬಜಾಜ್ ಚೇತಕ್‌ನ್ನು ಮಿತ್ರರಿಂದ ಸಾಲ ಪಡೆದು ಖರೀದಿಸಿದೆ. 2006 ರ ವರೆಗೂ ನನ್ನ ವರಮಾನ 14 ಸಾವಿರ ರೂ. ದಾಟಿರಲಿಲ್ಲ. ಮನೆ ಬಾಡಿಗೆ ಮಾತ್ರ 6500 ಆಗಿತ್ತು. ಅವೆಲ್ಲ ದಿನಗಳಲ್ಲೂ ವಿಮಲಾ ನನ್ನ – ಮಗನ ಆರೈಕೆಯಲ್ಲಿ ಎನಿತೂ ಕುಂದು ಮಾಡಿಲ್ಲ. ಆಗೆಲ್ಲ ನಾನು ಅಡುಗೆ ಮನೆಗೂ ಹೆಚ್ಚು ಪ್ರವೇಶಿಸುತ್ತಿರಲಿಲ್ಲ ಎಂಬುದನ್ನು ನೆನೆಸಿಕೊಂಡರೆ ಎಂಥ ಪ್ರಮಾದ ಮಾಡಿದೆನಲ್ಲ ಅನ್ನಿಸುತ್ತದೆ.
ಮಗನ ಶಿಕ್ಷಣಕ್ಕಾಗಿ ಹೆಚ್ಚು ದುಡಿಯಬೇಕು ಎಂಬ ನಿರ್ಧಾರ ಮಾಡಿ ತೋರಣಗಲ್ಲಿನ ಜಿಂದಾಲ್ ಉಕ್ಕಿನ ಕಾರ್ಖಾನೆಗೆ ಬಂದಮೇಲೆ ವರಮಾನ ಹೆಚ್ಚಾಯಿತಾದರೂ ಅಂಥ ಆರಾಮು ಸಿಗಲಿಲ್ಲ. ಏಕೆಂದರೆ ಅಲ್ಲಿ ಕೆಲಸ ಬಿಡಬೇಕಾಗಿ ಬಂತು; ಮತ್ತೆ ಅನಿರ್ದಿಷ್ಟ ಅವಕಾಶಗಳ ಹಿಂದೆ ಹೋಗುತ್ತ ಬೆಂಗಳೂರಿಗೆ ಬಂದೆ. ಆಗಲೂ ವಿಮಲಾ ಎಂದೂ ತನ್ನ ಕೆಲಸಗಳನ್ನು ಬಿಡಲಿಲ್ಲ.
ಖಚಿತವಾಗಿ ಹೇಳುವುದಾದರೆ ತನ್ನ ಮದುವೆಯ ನಂತರ ಆಕೆಗೆ ಜ್ವರ ಬಂದಿದ್ದೇ ಎರಡು ಸಲ. ಅದರಲ್ಲೂ ಆಕೆ ಮನೆಗೆಲಸ ಬಿಡಲಿಲ್ಲ. ಆಸ್ಪತ್ರೆಗಂತೂ ಸೇರಿಯೇ ಇಲ್ಲ.
ಮದುವೆಯಾಗಿ 28 ವರ್ಷಗಳಾಗುತ್ತ ಬಂದಿವೆ. 25 ನೆಯ ವರ್ಷದ ಸಂಭ್ರಮವನ್ನೂ ನಾವೇನೂ ಆಚರಿಸಲಿಲ್ಲ. ಇಷ್ಟು ದಿನ ಸಂಸಾರ ನಡೆಸಿದೆವಲ್ಲ ಎಂಬ ಸಮಾಧಾನವೇ ನಮಗೆ ಸಾಕಷ್ಟಾಗಿತ್ತು! 28 ಕೆಲಸಗಳನ್ನು ಸೇರಿ ಬಿಟ್ಟ ಮೇಲೆ ಅವಳಿಗೆ ಬದುಕಿನ ಭದ್ರತೆಯ ಬಗ್ಗೆ ಹೊಸ ನೋಟ ಬಂದಿರಬಹುದು ಅಂದುಕೊಳ್ಳುತ್ತೇನೆ. ಇಷ್ಟೆಲ್ಲ ಕೆಲಸಗಳ ನಡುವೆ ಆಕೆ ನಗುನಗುತ್ತಲೇ ನಮ್ಮೆಲ್ಲರನ್ನೂ ನೋಡಿಕೊಂಡಿದ್ದಾಳೆ. ಎಲ್ಲರೂ ಚೆನ್ನಾಗಿರಬೇಕು ಎಂದು ಬಯಸಿದ್ದಾಳೆ. ಲೇಖನದಲ್ಲಿ ಬರೆದಂತೆ ಆಕೆ ವೈಯಕ್ತಿಕವಾಗಿ ಮತ್ತಷ್ಟು ಸಾಧಿಸಲಾಗಿಲ್ಲ; ಏನೋ, ಒಂದು ಕೆಲಸ ಮಾಡಿಕೊಂಡು ನಮ್ಮಷ್ಟಕ್ಕೆ ನಾವಿದೀವಲ್ಲ, ಸಾಕು ಎಂಬುದೇ ಅವಳ ಅಭಿಪ್ರಾಯವಾಗಿದೆ.
ಮುಖ್ಯತಃ ಎಲ್ಲರ ಮನೆಗಳಲ್ಲೂ ಆಗುವಂತಹ ಸಂಬಂಧಗಳ ಏರುಪೇರಿನ ಸಂದರ್ಭಗಳಲ್ಲಿ ಅವಳು ನನಗೆ ಹಲವು ಸಲ ನೀಡಿದ ಸಲಹೆಗಳು ತುಂಬ ಉಪಯುಕ್ತವಾಗಿವೆ. ಅವಳ ದೆಸೆಯಿಂದಲೇ ನಾನು ಹಲವು ಕಡೆ ರಾಜಿ ಮಾಡಿಕೊಂಡಿದ್ದೇನೆ, ನಿಜ. ಆದರೆ ಅದರಿಂದ ಸಂಬಂಧಗಳು ಇನ್ನೂ ಕೆಡುವುದು ಕಡಿಮೆಯಾಗಿದೆ. ಇದಕ್ಕೆಲ್ಲ ನಾನು ವಿಮಲಾಗೇ ವಂದನೆ ಹೇಳಬೇಕು.
ನಾವು ಮೊದಲ 25 ವರ್ಷಗಳಲ್ಲಿ ವಿರಾಮವಾಗಿ ಪ್ರವಾಸಕ್ಕೆಂದು ಪ್ರವಾಸ ಮಾಡಿದ್ದೇ ಕಡಿಮೆ. ಆದರೆ ಕಳೆದ ಐದು ವರ್ಷಗಳಲ್ಲಿ ಆಗಾಗ್ಗೆ ಹಿಮಾಚಲ ಪ್ರದೇಶ, ಹರ್ಯಾನಾ. ದಿಲ್ಲಿ, ಉತ್ತರ ಪ್ರದೇಶ, ಪೂರ್ವಾಂಚಲ, ಪ. ಬಂಗಾಳ, ಒಡಿಶಾ, ಕೇರಳ ರಾಜ್ಯಗಳಲ್ಲಿ ಚಿಕ್ಕಪುಟ್ಟ ಪ್ರವಾಸ ಮಾಡಿದೆವು. ಬಿಟ್ಟರೆ ಕರ್ನಾಟಕದಲ್ಲಿ ಸಹಜ ಪ್ರವಾಸ. 2009 ರಲ್ಲಿ ನನ್ನ ಹಳೆ ಕಾರಿನಲ್ಲಿ ಪಶ್ಚಿಮ ಘಟ್ಟದಲ್ಲಿ ನಾನು ಓದಿದ ಶಾಲೆಗಳ (ಅವೆಲ್ಲವೂ ಪುಣ್ಯಕ್ಷೇತ್ರಗಳಲ್ಲೇ ಇದ್ದವು!)
ವಿಮಲಾ ಮಾತನಾಡುವುದು ಆಕೆಯೇ ಮನೆಯಲ್ಲಿ ಬೆಳೆಸಿಕೊಂಡು ಕನ್ನಡ ಆಧಾರಿತ ಸಂಜ್ಞೆ – ತುಟಿ ಚಲನೆಗಳ ಆಧಾರಿತ ಭಾಷೆ. ಈ ಭಾಷೆಯನ್ನು ಆಕೆಯೇ ನಮಗೆಲ್ಲ ಕಲಿಸಿದ್ದು. ಮಗನಿಗಂತೂ ಅದು ಮಾತೃಭಾಷೆಯೇ ಆಯಿತು ಅನ್ನಿ! (ಮಗನಿಗೆ ಎರಡನೇ ವಯಸ್ಸಿನಲ್ಲಿ ಮನೆಯಲ್ಲಿ ಕನ್ನಡ, ಇಂಗ್ಲಿಶ್ ವರ್ಣಮಾಲೆ ಕಲಿಸಿದ್ದು ಆಕೆಯೇ). ಅದನ್ನೇ ನಾವು ಕಲಿತು ಆದಷ್ಟೂ ಸಂವಹನ ಮಾಡುತ್ತ ಬಂದಿದ್ದೇವೆ. ಈ ಸಂವಹನದಲ್ಲಿ ಏನಾದರೂ ತಪ್ಪಾಗಿದ್ದರೆ ಅದು ನಮ್ಮದೇ ಆಗಿರುತ್ತದೆ.
ವಿಮಲಾಳನ್ನು ಮದುವೆಯಾಗಿ ನಾನು ಆದರ್ಶ ಮೆರೆದಿರುವೆ ಎಂದು ಕೆಲವರು ಹೇಳುತ್ತಿರುತ್ತಾರೆ. ಹಾಗೇನೂ ಇಲ್ಲ. ಆದರ್ಶ ಎಂದರೆ ಒಬ್ಬರೇ / ಅಪರೂಪಕ್ಕೆ ಪಾಲಿಸುವ ಸಹಜ ನಡೆ ಎಂಬ ಅರ್ಥ ಈಗ ಸಮಾಜದಲ್ಲಿದೆ! ಇನ್ನಾರೂ ಮಾಡದೇ ಇರುವಂತಹ ಸಹಜ ಕೆಲಸವನ್ನು ಮಾಡಿದರೆ ಅದೇ ಆದರ್ಶ ಎಂದು ಹೆಸರಾಗುತ್ತದೆ. ಶ್ರವಣ ಸವಾಲಿನವರು, ಅಂಧತ್ವ ಇರುವವರು, ಕೈ ಕಾಲು ಸಮಸ್ಯೆ ಇದ್ದವರು – ಹೀಗೆ ಹಲವು ಬಗೆಯ ವಿಶಿಷ್ಟ ಚೇತನದ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಅವರೊಂದಿಗೆ ಅಂಗಾಂಗಗಳು ಸರಿ ಇರುವ ವ್ಯಕ್ತಿಯು ಮದುವೆಯಾಗಿರಬಹುದು. ಸರಿ ಇರಬೇಕಾಗಿದ್ದು ದೇಹ ಮಾತ್ರವಲ್ಲ, ಮನಸ್ಸು ಕೂಡ. ಏನೋ ಉಪಕಾರ ಮಾಡಿದೆವೆಂಬ ಹಮ್ಮಿಗಿಂತ ಬದುಕುವ ದಾರಿಯನ್ನು ಗಮನಿಸುವುದು ಮುಖ್ಯ. ವಿಷಾದವೆಂದರೆ ಆದರ್ಶಗಳನ್ನು ಶೋಪೀಸ್ ಮಾಡಿ ಗೌರವಿಸುವ ಪ್ರವೃತ್ತಿಯೇ ಹೆಚ್ಚಾಗಿದೆ. ಸಮಾಜತಾಣಗಳಲ್ಲಿ ಶೇರ್ ಮಾಡಿದರೆ ನಮ್ಮ ಕೆಲಸ ಮುಗಿಯಿತು ಎಂಬಂತಾಗಿದೆ.
ಇನ್ನೊಂದು ಸಾಮಾನ್ಯ ಹೇಳಿಕೆ ಎಂದರೆ ‘ಅವಳಿಗೆ ಬಾಳು ಕೊಟ್ಟ’ ಎಂಬುದು! ಇದಕ್ಕಿಂತ ತಮಾಶೆಯ ಸಂಗತಿ ಇನ್ನೊಂದಿಲ್ಲ. ವಾಸ್ತವದಲ್ಲಿ ಅಂಥವರೇ ಬಾಳು ಕೊಡುವವರು. ಅದು ನನ್ನ ವಿಷಯದಲ್ಲೂ ನಿಜ.
ನಾನು ಹೀಗೆ ಮದುವೆಯಾಗಲು ಇನ್ನೂ ಒಂದು ಕಾರಣ ಇತ್ತು (ಈಗಿಲ್ಲ): ನಾನೇನಾದರೂ ಗ್ರಾಮೀಣ ಬದುಕಿಗೇ ಆತುಕೊಂಡರೆ, ಹೆಚ್ಚು ವರಮಾನ ಇಲ್ಲದಿದ್ದರೆ ಬೇರೆ ಸಾಮಾಜಿಕ ಚಟುವಟಿಕೆಗಳನ್ನು ಮಾಡಲಾಗದೇ ಇದ್ದರೆ, ಇದೇ ನನ್ನ ಜೀವಿತಾವಧಿಯ ಒಂದು ಸಾಮಾಜಿಕ ಸಮತೆಯ ಕಾರ್ಯ ಎಂದು ಭಾವಿಸಿಕೊಂಡಿದ್ದೆ. ಆದರೆ ಇಂಥದ್ದೆಲ್ಲ ವಿಶೇಷವಲ್ಲವೆಂದೂ, ಇದು ಸಹಜ ಬದುಕಿನ ಭಾಗವೆಂದೂ, ಇವನ್ನು ಮೀರಿಯೇ ನಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದೂ ನನಗೆ ಆಮೇಲೆ ಖಚಿತವಾಗಿದೆ. ಇಷ್ಟಾಗಿಯೂ ಈ ಬಗೆಯ ಬದುಕು ದಿನಾಲೂ ಒಂದಲ್ಲ, ಒಂದು ಸವಾಲು ಒಡ್ಡುತ್ತದೆ ಎಂಬುದು ನಿಜ. ಎಲ್ಲವೂ ಉಳಿದವರಂತೆಯೇ ಇದೆ ಎಂದು ಖಂಡಿತ ಹೇಳಲಾರೆ. ನಮ್ಮ ಸಂಸಾರವೂ ಉಳಿದವರಂತೆಯೇ ಸಣ್ಣ ಪುಟ್ಟ ಸಂವಾದ, ಚರ್ಚೆಗಳಿಂದ ತುಂಬಿರುತ್ತದೆ. ನಿಜ ಹೇಳಬೇಕೆಂದರೆ ನಾನೇ ಮೌನಿ; ಅವಳೇ ಮಾತುಗಾತಿ.
ಕೆಲವೊಮ್ಮೆ ಅವಳ ಶ್ರವಣ ಸವಾಲಿನ ಬಗ್ಗೆ ಪರಿಚಿತರಿಗೆ ಹೇಳಬೇಕೋ ಬೇಡವೋ ಎಂಬ ಗೊಂದಲಕ್ಕೆ ಬಿದ್ದಿದ್ದೇನೆ. ಹಲವು ಸ್ನೇಹಿತರಿಗೆ ಮದುವೆ ಆಹ್ವಾನ ಕಳಿಸಿದ್ದರೂ ಅವರಿಗೆ ಈ ವಿಷಯ ಗೊತ್ತಾಗದ್ದೇ ವರ್ಷಗಳ ನಂತರ. ಸಂದರ್ಭ ಬಂದಾಗ ಈ ವಿಷಯವನ್ನು ಮೊದಲೇ ಹೇಳಿದ್ದೂ ಇದೆ. ಇನ್ನೂ ಹಲವರಿಗೆ ಈ ವಿಷಯ ಗೊತ್ತಿಲ್ಲ. ಅದನ್ನು ಗೊತ್ತು ಮಾಡಿಸಿ ಸಾಧಿಸಬೇಕಾದ್ದೇನೂ ಇಲ್ಲ !
ನನ್ನ ವೃತ್ತಿಬದುಕಿನ ಜೊತೆಗೇ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ಅದಕ್ಕೆ ವಿಮಲಾ ನನಗೆ ಕೊಟ್ಟ ಬೆಂಬಲವೇ ಕಾರಣ. ನನ್ನ ಕವನ ಸಂಕಲನವನ್ನು ಆಕೆಯೇ ಬಿಡುಗಡೆ ಮಾಡಿದ್ದು! ನನ್ನ ಆಗಾಗಿನ (ಬೇರೆ ಬೇರೆ ಕೆಲಸಗಳ ನಡುವೆ ವಿರಾಮ ಕಡಿಮೆ; ಆದರೆ ಕೆಲಸ ಬದಲಿಸಿದ ಸಂದರ್ಭದಲ್ಲಿ ಉದ್ವೇಗ – ಆತಂಕ ಇದ್ದೇ ಇರುತ್ತೆ ನೋಡಿ!) ನಿರುದ್ಯೋಗದ ಕ್ಷಣಗಳಲ್ಲಿ ಆಕೆಗೆ ಎಷ್ಟೆಲ್ಲ ಬೇಸರ ಆಗಿರಬಹುದು ಎಂದು ನಾನು ಊಹಿಸಲೇ ಇಲ್ಲ. ಎಷ್ಟೆಂದರೂ ಆಕೆ ಸಾಂಪ್ರದಾಯಿಕ ಬದುಕು ಹೀಗೆ ಸರಳ ರೇಖೆಯಲ್ಲಿ ಸಾಗುತ್ತಿರುತ್ತದೆ ಎಂದೇ ನಂಬಿದವಳು ಎಂಬುದು ನನ್ನ ಅನಿಸಿಕೆ (ಅವಳ ನಿಜ ಭಾವಗಳನ್ನು ಸಂಪೂರ್ಣ ನಾನು ಹೇಗೆ ಇಲ್ಲಿ ಹೊಮ್ಮಿಸಲಿ? ಸಾಧ್ಯವೇ ಇಲ್ಲ). ಆದರೆ ನಮ್ಮದೋ ಸಿಕ್ಕುಸಿಕ್ಕು ರೇಖೆ. ನಡೆದಿದ್ದೇ ದಾರಿ. ಎರಡು ಬಿಂದುಗಳ ನಡುವೆ ಒಂದು ಸರಳ ರೇಖೆ ಇರಲೇಬೇಕು ತಾನೆ? ಅಷ್ಟು ಮಾತ್ರವೇ ಸರಳ, ನೇರ.
ಅತ್ಯಂತ ದುರ್ಬಲ ಮನಸ್ಸಿನವನೂ, ಹಲವರು ಹೇಳಿದಂತೆ ಮೂರ್ಖನೂ, ಬೇಜವಾಬ್ದಾರಿಯವನೂ, ಅಪ್ರಬುದ್ಧನೂ ಆದ ನಾನು ಬದುಕಿನಲ್ಲಿ ಹಲವು ತಪ್ಪುಗಳನ್ನು ಮಾಡಿದ್ದೇನೆ; ಲೋಪ ಎಸಗಿದ್ದೇನೆ. ಅವನ್ನೆಲ್ಲ ವಿಮಲಾ ತನ್ನ ಹೊಟ್ಟೆಯಲ್ಲಿ ಹಾಕಿಕೊಂಡು ಅದೇ ಸಹಜ-ಸ್ನಿಗ್ಧ ವರ್ತನೆಯನ್ನು ಮುಂದುವರೆಸಿದ್ದಾಳೆ.
ಇತ್ತೀಚೆಗೆ ನಾನು ಹಾರೂಕಿ ಮುರಾಕಾಮಿ ಅವರ `ದ ಸ್ಟ್ರೇಂಜ್ ಲೈಬ್ರರಿ’ ನೀಳ್ಗಥೆ ಓದುತ್ತಿದ್ದೆ. ಅದರಲ್ಲಿ ಬಾಲಕನೊಬ್ಬ ಸುಮ್ಮನೇ ಗ್ರಂಥಾಲಯಕ್ಕೆ ಹೋಗಿರುತ್ತಾನೆ. ಮುದುಕನೊಬ್ಬನ ಆರ್ಭಟಕ್ಕೆ ಸಿಲುಕಿ, ಹಲವು ಎಡಬಲ ದಿಕ್ಕುಗಳಲ್ಲಿ ನಡೆದು ಒಳಗೆಲ್ಲೋ ಬಂಧಿಯಾಗುತ್ತಾನೆ.ಆ ದಿಕ್ಕೆಟ್ಟ ಹುಡುಗನಿಗೆ ಮಾತು ಬಾರದ ನಿಗೂಢ ಬಾಲಕಿಯೊಬ್ಬಳು ಬಂದು ಊಟ ಕೊಟ್ಟಿದ್ದಲ್ಲದೆ, ಬಿಡುಗಡೆಗೂ ನೆರವಾಗುತ್ತಾಳೆ. ಕಥೆಯನ್ನು ಓದಿದ ಮೇಲೆ ಅರೆ, `ಆ ದಿಕ್ಕೆಟ್ಟ ಹುಡುಗನೇ ನಾನು, ಆ ಬಾಲಕಿಯೇ ವಿಮಲಾ ಇರಬಹುದೇ?’ ಅನ್ನಿಸಿಬಿಟ್ಟಿತು. ಏನೇನೋ ಕಲಿಯಬೇಕೆಂಬ ಹಟಕ್ಕೆ ಬಿದ್ದು ಏನೇನೂ ಆಗದೆ ಇದ್ದರೂ ಹೀಗೆ ಬಿಡುಗಡೆಯ ಭಾವ ಹೊಂದುವುದು ಸಮಾಧಾನದ ಸಂಗತಿಯೇ! (ನಿಗೂಢವಾಗಿ ಬಂದು ಹೋಗುವವರಿಗೂ ಮಾತು ಬಾರದೆ ಇರಬಹುದು ಎಂಬ ಹಾರೂಕಿ ಕಲ್ಪನೆಯೇ ಅದ್ಭುತವಾಗಿದೆ. ನಮ್ಮಲ್ಲಿ ನಿಜ ಕತೆಯಲ್ಲೂ ಇಂತಹ ಪಾತ್ರಗಳು ಇರುವುದು ಅಪರೂಪ).
ಆಕೆಗಾಗಿ ಈ ಕವನವನ್ನು ಕೆಲವು ವರ್ಷಗಳ ಹಿಂದೆ ಬರೆದಿದ್ದೆ (2007) (ಛಾಯಾಗ್ರಹಣದ ಸ್ಥಳ: ಕೊಡಚಾದ್ರಿಯ ನೆತ್ತಿ) :
ವಿಮಲಾಗೆ ಮೊದಲ ಸಲ ಹೀಗೆ ಸಾರ್ವಜನಿಕವಾಗಿ ನನ್ನ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ! ಇದನ್ನು ಪ್ರಚಾರದ ದೃಷ್ಟಿಯಿಂದ ಬರೆದಿದ್ದಲ್ಲ. 28 ವರ್ಷಗಳ ಬದುಕನ್ನೇ ಸಹಜವಾಗಿ ನಡೆಸಿದ ಮೇಲೆ ಈ ವಿಷಯವನ್ನೆಲ್ಲ ವಿವರಿಸಿ ಪ್ರಚಾರ ಪಡೆಯುವ ಹಂಗು ನನಗಿಲ್ಲ. ವಿಮಲಾಗೂ ಇಲ್ಲ! ಈ ಬ್ಲಾಗಿನಲ್ಲಿ ಕೊಟ್ಟ ಮಾಹಿತಿಗಳಿಂದ ಸಮಾಜಕ್ಕೆ ಏನಾದರೂ ಉಪಯೋಗ ಆದರೆ ಒಳ್ಳೆಯದು; ಅಪಕಾರ ಆಗದಿದ್ದರೆ ಸಾಕು! ಅಷ್ಟೇ ಇದರ ಉದ್ದೇಶ.
ನನ್ನ ಈ ಬ್ಲಾಗ್ ಓದಿ ಒಬ್ಬರಾದರೂ ಇಂತಹ ಬದುಕನ್ನು ಆಯ್ಕೆ ಮಾಡಿಕೊಂಡರೆ ಎಂಬ ದೂರದ ಆಸೆ ಮನದಲ್ಲಿದೆ. ಏಕೆಂದರೆ ಈವರೆಗೂ ಎಲ್ಲರೂ ಇದನ್ನು ಆದರ್ಶ ಎಂದೇ ಬಿಂಬಿಸಿ ತಾವು ಮಾತ್ರ ಇದರಿಂದ ದೂರವಾಗಿ ಉಳಿದುಕೊಂಡಿದ್ದಾರೆ! ಬಾಳಸಂಗಾತಿಯ ಆಯ್ಕೆಯು ವೈಯಕ್ತಿಕ; ಮದುವೆಗಳು ನಿಕ್ಕಿಯಾಗುವುದು ಹಲವು ಕಾರಣಗಳಿಗಾಗಿ. ಪ್ರಜ್ಞಾವಂತರು, ಸಾಮಾಜಿಕ ಕಳಕಳಿ ಉಳ್ಳವರು ಎಲ್ಲರೂ ಪ್ರೇಮವಿವಾಹವನ್ನೇ ಆಗಬೇಕು, ಅಂತರ್ಜಾತೀಯ ವಿವಾಹವನ್ನೇ ಮಾಡಿಕೊಳ್ಳಬೇಕು ಎಂದು ನಿಯಮವಿಲ್ಲ! ಅವರೂ ಇಂತಹ ಸಾಮಾಜಿಕ ಅಂಶಗಳಿರುವ ಆಯ್ಕೆಯನ್ನು ಮಾಡಿಕೊಳ್ಳಬಹುದಲ್ಲವೆ?
ನನ್ನದೊಂದೇ ಮನವಿ: ಎಲ್ಲರೂ ಸಹಜವಾಗಿ ಬದುಕೋಣ.ಆಗ ಇಡೀ ಸಮಾಜವೇ ಆದರ್ಶವನ್ನು ಒಳಗೊಳ್ಳುತ್ತದೆ. ದಯವಿಟ್ಟು ಆದರ್ಶ ಇತ್ಯಾದಿಯನ್ನು ಗಾಜಿನ ಪೆಟ್ಟಿಗೆಯ ಒಳಗೆ ಇಡಲು ಯತ್ನಿಸಬೇಡಿ; ನೀವೂ ಈ ಸಮಾಜದ ಹೊಣೆಯರಿತ ನಾಗರಿಕರೇ. ನೀವೂ ಈ ದೃಷ್ಟಿಕೋನ ಹೊಂದುವುದು ಸಾಧ್ಯ ಇದೆ. ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೂ ಸಾಧ್ಯ. ನಿಮ್ಮ ಸುತ್ತಲಿನ ಬದಲಾವಣೆ ನಿಮ್ಮಿಂದಲೇ ಆಗಲಿ.
ಮಾಹಿತಿಗೆ:
- 2011 ರ ಜನಗಣತಿಯಂತೆ ಭಾರತದಲ್ಲಿ ಇರುವ ವಿಶಿಷ್ಟ ಚೇತನರ ಸಂಖ್ಯೆ (ಎಲ್ಲ ಬಗೆಯ ದೈಹಿಕ ಅಂಗವಿಕಲತೆಯುಳ್ಳವರನ್ನು ಸೇರಿಸಿಕೊಂಡು) 2.68 ಕೋಟಿ. ಇವರಲ್ಲಿ ಶೇಕಡಾ 19 ರಷ್ಟು ಜನರು ಕಿವುಡುತನದ ಸಮಸ್ಯೆ ಹೊಂದಿದ್ದಾರೆ.
- 2001ರಲ್ಲಿ ಒಟ್ಟಾರೆ ಜನಸಂಖ್ಯೆಯ ಶೇಕಡಾ 2.13 ಇದ್ದ ವಿಶಿಷ್ಟ ಚೇತನರ ಪ್ರಮಾಣವು 2011ರಲ್ಲಿ ಶೇಕಡಾ 2.21 ಕ್ಕೆ ಹೆಚ್ಚಾಗಿದೆ!
- ಗ್ರಾಮೀಣ – ನಗರ, ಎಸ್‌ಸಿಎಸ್‌ಟಿ- ಇತರೆ, ಪುರುಷ – ಮಹಿಳೆ – ಹೀಗೆ ಯಾವ ಅಂತರವೂ ಇಲ್ಲದೆ ದೈಹಿಕ ನ್ಯೂನತೆ ಪ್ರಮಾಣವು ಪಸರಿಸಿದೆ.
- ಶೇಕಡಾ 41 ರಷ್ಟು ವಿಶಿಷ್ಟ ಚೇತನರಿಗೆ ವಿವಾಹ ಆಗಿಲ್ಲ. ಸಾಕ್ಷರತೆಯ ಪ್ರಮಾಣವೂ ಗಂಭೀರವಾಗಿಯೇ ಕಡಿಮೆ ಪ್ರಮಾಣದಲ್ಲಿದೆ.
- ರಾಜ್ಯಗಳನ್ನು ಹೋಲಿಸಿದರೆ ಹಲವು ಪ್ರಧಾನಮಂತ್ರಿಗಳನ್ನು ಕೊಟ್ಟ ಖ್ಯಾತಿಗೆ ಪಾತ್ರವಾಗಿರುವ ಉತ್ತರ ಪ್ರದೇಶದಲ್ಲಿ ಅಂಗವೈಕಲ್ಯದ ಪ್ರಮಾಣ ಅತೀ ಹೆಚ್ಚು.
- ಈ ಬಗ್ಗೆ ಹೆಚ್ಚಿನ ಮಾಹಿತಿಗೆ 2016 ರಲ್ಲಿ ಪ್ರಕಟವಾದ ಈ ವರದಿ ಓದಿ: http://mospi.nic.in/sites/default/files/publication_reports/Disabled_persons_in_India_2016.pdf
- ಭಾರತದಲ್ಲಿ ಇರುವ ಕಿವುಡುತನ ಎದುರಿಸುತ್ತಿರುವವರ ಬಗ್ಗೆ ಒಂದು ಬ್ಲಾಗ್ ಇಲ್ಲಿದೆ: https://www.verywellhealth.com/deaf-community-india-1048923
- ಇಂಥ ಕಿವುಡುತನ ಹೊಂದಿದವರನ್ನೂ ಹೇಗೆ ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಬೇಕೆಂದು ಜೊಶುವಾ ಪ್ರಾಜೆಕ್ಟ್ ವರದಿಯು ತಿಳಿಹೇಳುತ್ತದೆ: https://joshuaproject.net/assets/media/profiles/text/t19007_in.pdf. ಮತಾಂತರವೆಂಬುದು ಅವರವರ ಆಯ್ಕೆಯಷ್ಟೇ ಅಲ್ಲ; ಒಂದು ಯೋಜಿತ ಷಡ್ಯಂತ್ರ ಎಂಬುದಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ.
- Indian Sign Language Research and Training Centre (ISLRTC) : ಇದು ಈಗಷ್ಟೇ ಭಾರತೀಯ ಸಂಕೇತ ಭಾಷೆಯ ಪದಕೋಶವನ್ನು ರೂಪಿಸಿದ್ದು ಸಾರ್ವಜನಿಕರಿಗೆ ಇನ್ನೂ ತಲುಪಿಲ್ಲ. (http://www.islrtc.nic.in/)
ನೀವು ಕೇಳದಿದ್ದರೂ ನಾನು ಹೇಳಬೇಕಿರುವ ಎರಡು ಸಂಗತಿಗಳು :
1) ಆಗ ವಿಮಲಾಳನ್ನು ಪರಿಚಯಿಸಿದ ವ್ಯಕ್ತಿಯು ಅನಂತರದಲ್ಲಿ ಇನ್ನೂ ಕೆಲವು ಮದುವೆಗಳನ್ನು ಮಾಡಿಸಿ ಒಡೆದಿದ್ದಲ್ಲದೆ, ತನ್ನ ವೈಯಕ್ತಿಕ / ಸಾರ್ವಜನಿಕ ಜೀವನದಲ್ಲಿಯೂ ಅತ್ಯಂತ ಭ್ರಷ್ಟನೂ ಸಮಾಜಕಂಟಕನೂ, ವರ್ಕ್‌ಪ್ಲೇಸ್ ವುಮನೈಸರ್ ಆಗಿಯೂ ಬೆಳೆದಿದ್ದಾನೆ. ಆದ್ದರಿಂದ ಅವನನ್ನು ಕಳೆದ 11 ವರ್ಷಗಳಿಂದ ದೂರ ಇಟ್ಟಿದ್ದೇನೆ. ಇದೆಲ್ಲ ಗೊತ್ತಿದ್ದೂ ಅವನೊಂದಿಗೆ ಈಗಲೂ ಲಲ್ಲೆ ಹೊಡೆಯುತ್ತಿರುವ ಕನ್ನಡದ ಪ್ರಖ್ಯಾತ ವಿಜ್ಞಾನ ಲೇಖಕನನ್ನೂ ಸೇರಿಸಿಕೊಂಡು ಐವರು ಪತ್ರಕರ್ತರನ್ನು 2013 ರಿಂದ ನನ್ನ ಮಿತ್ರರ ಪಟ್ಟಿಯಿಂದ ಕಿತ್ತೊಗೆದಿದ್ದೇನೆ.
2) ನನ್ನ ಮದುವೆಗಿಂತ ಮುಂಚೆ ರಾಷ್ಟ್ರೀಯ ನಾಯಕರೊಬ್ಬರಿಗೆ ಈ ವಿಷಯ ತಿಳಿಸಲು ಹೋಗಿದ್ದೆ. ಅವರು ನನಗೆ ಭಯಂಕರ ಶುಭಾಶಯಗಳನ್ನು ತಿಳಿಸುತ್ತಲೇ, ಈ ಬಗೆಯಲ್ಲಿ ಮದುವೆಯಾಗುವುದು ಒಂದು ರೀತಿಯ ಹುಸಿ ಆದರ್ಶವಾಗಬಹುದು, ನೀನು ಹಣಕ್ಕಾಗಿ ಮಾವನ ಹಿಂದೆ ಬೀಳಬಹುದು ಎಂದು ಕುಹಕದ ಮತ್ತು ನನ್ನ ಮೇಲೆ ಅಪನಂಬಿಕೆಯ ಮಾತುಗಳನ್ನಾಡಿದ್ದರು; ಎಷ್ಟೆಂದರೂ ಅವರು ನೂರಾರು ಜನರಿಗೆ ಸಮಾಜಸೇವೆಯ ಬಗ್ಗೆ ಉಪದೇಶ ಮಾಡಿ ಅನುಭವ ಉಳ್ಳವರೆಂದು ನಾನು ಆಗ ಅವರ ಮಾತನ್ನು ಗೌರವದಿಂದಲೇ ಸ್ವೀಕರಿಸಿದ್ದೆ. ಆದರೆ ಅವರ ಆದರ್ಶದ ಮಾತುಗಳೆಲ್ಲ ವ್ಯಕ್ತಿಗತ ನೆಲೆಯಲ್ಲಿ ಹುಸಿ ಎಂದು ಇತ್ತೀಚೆಗೆ ಮನದಟ್ಟಾಗಿರುವುದರಿಂದ (ಅದರಲ್ಲೂ ಮೇಲೆ ತಿಳಿಸಿದ ವ್ಯಕ್ತಿಯ ಬಗ್ಗೆ ಅವರು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರೂ, ಅವನ ಬಗ್ಗೆ ನನ್ನಿಂದ ತಾಸುಗಟ್ಟಲೆ ವರದಿ ಪಡೆದು ನನ್ನ ಸಮಯವನ್ನು ಹಾಳು ಮಾಡಿದ್ದರಿಂದ ನಾನು ಅವರನ್ನೂ ಈಗ ದೂರ ಇಟ್ಟಿದ್ದೇನೆ. ನನ್ನ ಮಾವನವರ ಬಗ್ಗೆ ನಾನು ಬರೆದ ಬ್ಲಾಗನ್ನು ನೀವು ಯಾವಾಗಲಾದರೂ ಓದಿ ನಿಮ್ಮದೇ ಅಭಿಪ್ರಾಯಗಳಿಗೆ ಬರಬಹುದು.
ಈ ಬ್ಲಾಗನ್ನು ಮುಕ್ತ ಮನಸ್ಸಿನಿಂದ ನೀವು ಓದಿರುವಿರಿ; ಅದಕ್ಕಾಗಿ ನನ್ನ ವಂದನೆಗಳು.