ಕ್ರೈಸ್ತ ಮತಪ್ರಚಾರ, ಸಾಮ್ರಾಜ್ಯಶಾಹಿ ಆಳ್ವಿಕೆ, ಗುಲಾಮಗಿರಿ, ಸಂಪತ್ತಿನ ಲೂಟಿ, ನರಮೇಧ – ಇವೆಲ್ಲವೂ ೧೫ನೇ ಶತಮಾನದಿಂದ ಇಂದಿನವರೆಗೂ ಏಶ್ಯಾ, ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ ಖಂಡಗಳನ್ನು ವ್ಯಾಪಿಸಿವೆ. ಇಂದು ಮಾನವಹಕ್ಕುಗಳ ಬಗ್ಗೆ ವಿಪರೀತ ಮಾತಾಡುತ್ತಿರುವ, ಶಾಂತಿಮಂತ್ರವನ್ನು ಬೋಧಿಸುತ್ತಿರುವ ಐರೋಪ್ಯ ದೇಶಗಳೇ ಈ ಎಲ್ಲ ಅಪಚಾರಗಳಿಗೆ ಹೊಣೆಯಾಗಿವೆ ಎಂಬುದನ್ನು ಮರೆಯಲಾದೀತೆ? ಕಳೆದ ವಾರ ಓಮರ್ ಮುಖ್ತರ್ ಬಗ್ಗೆ ಬರೆದಾಗ ಇಟಲಿಯ ನರಮೇಧವನ್ನು ತಿಳಿದುಕೊಂಡೆವು. ಈ ಸಲ ‘ದಿ ಮಿಶನ್’ ಎಂಬ ಇನ್ನೊಂದು ಸಿನೆಮಾದ ಮೂಲಕ ದಕ್ಷಿಣ ಅಮೆರಿಕಾದಲ್ಲಿ ನಡೆದಿದ್ದ ಭೀಕರ ನರಮೇಧಗಳ, ವಿಲಕ್ಷಣ ಸಂಘರ್ಷಗಳ ಇತಿಹಾಸವನ್ನು ತಿಳಿದುಕೊಳ್ಳೋಣ!

೧೬ನೇ ಶತಮಾನದ ಆರಂಭದಿಂದಲೂ ದಕ್ಷಿಣ ಅಮೆರಿಕಾದಲ್ಲಿ, ಅದರಲ್ಲೂ ಪೆರುಗ್ವೆ ಮತ್ತು ಅರ್ಜೆಂಟೈನಾ ದೇಶಗಳಲ್ಲಿ ಕ್ರೈಸ್ತ ಮಿಶನರಿಗಳು ಕೆಲಸ ಮಾಡುತ್ತಿದ್ದಾರೆ. ಇಲ್ಲಿರುವ ವಿಶಿಷ್ಟ ‘ಗ್ವುರಾನ್’ ಸಮುದಾಯವನ್ನು ಮಿಶನರಿಗಳು ಒಲಿಸಿಕೊಂಡು ಹಲವು ಚರ್ಚುಗಳನ್ನು ಸ್ಥಾಪಿಸಿದರು. ಕ್ರಮೇಣ ಸ್ಪೇನ್ ಹಾಗೂ ಪೋರ್ಚುಗೀಸ್ ದೇಶಗಳ ಆಳ್ವಿಕೆ ಇಲ್ಲೆಲ್ಲ ಆರಂಭವಾಯಿತು. ಗುಲಾಮಗಿರಿಯನ್ನು ಅಧಿಕೃತ ಹಕ್ಕೆಂದು ಪೋರ್ಚುಗೀಸ್ ಪ್ರಕಟಿಸಿದ್ದರೆ, ಗುಲಾಮಗಿರಿಯ ಚಟುವಟಿಕೆಗಳನ್ನು ಸ್ಪೇನ್ ತೆಪ್ಪಗೆ ಒಪ್ಪಿಕೊಂಡ ಕಾಲವದು.

ನಿಧಾನವಾಗಿ ಈ ಗ್ವುರಾನ್ ಸಮುದಾಯದ ಚರ್ಚ್ ಚಟುವಟಿಕೆಗಳನ್ನು ನಿಲ್ಲಿಸಬೇಕೆಂಬ ಒತ್ತಡ ಈ ಎರಡೂ ವಸಾಹತುಶಾಹಿ ದೇಶಗಳಿಂದ ಬಂತು. ಈ ಜಂಟಿ ಬೇಡಿಕೆಯ ಹಿನ್ನೆಲೆಯಲ್ಲಿ ಇಲ್ಲಿರುವ ಎಲ್ಲ ಚರ್ಚುಗಳಿಗೆ ಭೇಟಿ ಕೊಡಲು ಆಗಿನ ಪೋಪ್ ತನ್ನ ಪ್ರತಿನಿಧಿಯೊಬ್ಬನನ್ನು ಕಳಿಸಿಕೊಡುತ್ತಾನೆ. ಈ ಪ್ರತಿನಿಧಿಯೇ ಕಾರ್ಡಿನಲ್ ಅಲ್ಟಾಮಿರಾನೋ. ಇವನು ಪೋಪ್‌ಗೆ ಬರೆಯುವ ಪತ್ರದ ಒಕ್ಕಣೆಯೇ ‘ದಿ ಮಿಶನ್’ ಸಿನೆಮಾದ ನಿರೂಪಣೆ.

ರಾಬರ್ಟ್ ಡಿ ನೀರೋ, ಜೆರೆಮಿ ಐರನ್ಸ್, ಲಿಯಾಮ್ ನೀಸನ್ – ಈ ಹಾಲಿವುಡ್ ಘಟಾನುಘಟಿಗಳು ನಟಿಸಿರುವ ‘ದಿ ಮಿಶನ್’ ಸಿನೆಮಾ ೧೯೮೬ರಲ್ಲಿ ಬಂತು. ಅತ್ಯುತ್ತಮ ಸಿನೆಮಾಟೋಗ್ರಫಿಗಾಗಿ ಆಸ್ಕರ್ ಬಾಚಿಕೊಂಡ ಈ ಸಿನೆಮಾದ ಸಂಗೀತ, ಚಿತ್ರಕಥೆ, ನಟನೆ, ಇತಿಹಾಸದ ಕರಾಳ ಛಾಯೆ, – ಎಲ್ಲವೂ ವೀಕ್ಷಕರನ್ನು ಬಹುಕಾಲ ಕಾಡುತ್ತವೆ ಎಂಬುದೇ ನನ್ನ ಪ್ರಾಮಾಣಿಕ ಅನಿಸಿಕೆ.

 

ಸದಾ ಗ್ವುರಾನಿಯರನ್ನು ಬಂಧಿಸಿ ಮಾರಿ ಬದುಕುತ್ತಿದ್ದ ಖಳ ರೋಡ್ರಿಗೋ ಮೆಂಡೋಜಾ ತನ್ನ ಪ್ರೇಯಸಿಯ ಮನ ಕದ್ದ ತನ್ನ ತಮ್ಮನನ್ನೇ ಕ್ಷುಲ್ಲಕ ಜಗಳಕ್ಕೆ ಎಳೆದು ಕೊಂದವನು. ಮರಣದಂಡನೆಯೇ ಶಿಕ್ಷೆಯಾಗಿರುವಾಗ ಬದುಕಿ ಮಾಡುವುದೇನಿದೆ ಎಂದು ಭಾವಿಸಿದವ. ಆದರೆ ಫಾದರ್ ಗೇಬ್ರಿಯೆಲ್‌ಗೆ ಹಾಗನಿಸುವುದಿಲ್ಲ. ಗೇಬ್ರಿಯೆಲ್‌ನದು ಅಸಾಮಾನ್ಯ ಫ್ರಭೆಯ ವ್ಯಕ್ತಿತ್ವ. ಗ್ವುರಾನಿಯರು ಒಬ್ಬ ಅನಾಮಿಕ ಮಿಶನರಿಯನ್ನು ಕೊಂದು ಶಿಲುಬೆಗೆ ಜಡಿದು ಇಕ್ವಾಜು ಜಲಪಾತಕ್ಕೆ ಎಸೆದಿದ್ದರೂ, ಜಲಪಾತವನ್ನು ಏರಿ, ತನ್ನ ಸಂಗೀತದ ಮೂಲಕ ಗ್ವುರಾನಿಯರ ಮನ ಗೆದ್ದು ಕ್ರೈಸ್ತ ಮತಪ್ರಚಾರವನ್ನು ಯಶಸ್ವಿಯಾಗಿ ಮಾಡಿದ ಸಾಧಕ. ಸಿನೆಮಾದ ಮೊದಲ ದೃಶ್ಯಗಳಲ್ಲಿ ನೀವು ನೋಡುವುದು ಅವನನ್ನೇ. ಅವನೇ ಹೀರೋ ಎಂದೂ ಭಾಸವಾಗುತ್ತಿರುವಂತೆ ಹಠಾತ್ತಾಗಿ ಕೋವಿ ಹಿಡಿದ ಮೆಂಡೋಜಾ ಪ್ರತ್ಯಕ್ಷವಾಗುತ್ತಾನೆ.

ತಮ್ಮನನ್ನು ಕೊಂದು ಸೆರೆಮನೆಯಲ್ಲಿದ್ದ ಮೆಂಡೋಜಾನನ್ನು ಫಾದರ್ ಗೇಬ್ರಿಯೆಲ್ ಭೇಟಿಯಾಗಿ ‘ನಿನಗೆ ಬದುಕಲೊಂದು ದಾರಿಯಿದೆ’ ಎಂದು ಮತ್ತೆ ಅವನನ್ನು ಗ್ವುರಾನಿಯರ ನೆಲೆಗೆ ಕರೆತರುತ್ತಾನೆ. ತಮ್ಮ ಬಂಧುಗಳನ್ನು ಮಾರಾಟ ಮಾಡುತ್ತಿದ್ದ ಮೆಂಡೋಜಾನನ್ನು ಗ್ವುರಾನಿಯರು ಕ್ಷಮಿಸುತ್ತಾರೆ; ದಯಾಭಿಕ್ಷೆ ನೀಡುತ್ತಾರೆ. ಅಲ್ಲಿಂದ ಸಿನೆಮಾ ಮತ್ತೊಂದು ಆಯಾಮಕ್ಕೆ ತಿರುಗಿಕೊಳ್ಳುತ್ತದೆ.

ಈ ಎಲ್ಲ ಮಿಶನ್‌ಗಳನ್ನೂ ನಿಲ್ಲಿಸಬೇಕು ಎಂದು ಕಾರ್ಡಿನಲ್ ಅಲ್ಟಾಮಿರಾನೋ ಸೂಚಿಸುತ್ತಾನೆ. ಆದರೆ ಮೆಂಡೋಜಾ ಒಪ್ಪುವುದಿಲ್ಲ. ಪರಿಣಾಮವಾಗಿ ಸ್ಪೇನ್, ಪೋರ್ಚುಗಲ್ ದೇಶಗಳ ಜಂಟಿ ಸೇನಾ ಕಾರ್ಯಾಚರಣೆಯನ್ನು ಎದುರಿಸಬೇಕಾಗುತ್ತದೆ. ಕ್ರೈಸ್ತ ಸನ್ಯಾಸಿಯಾಗಿದ್ದರೂ ಮೆಂಡೋಜಾ ಖಡ್ಗ ಹಿರಿಯುತ್ತಾನೆ. ಮರದಿಂದಲೇ ಫಿರಂಗಿ ತಯಾರಿಸುತ್ತಾನೆ. ಗ್ವುರಾನಿಯರ ಜೊತೆ ಒಂದಾಗಿ ಸಮರ ಸಾರುತ್ತಾನೆ. ಕೊನೆಗೆ ವೀರಮರಣ ಸಾಧಿಸುತ್ತಾನೆ. ಶಾಂತಿಯ ಸಂದೇಶ ಬೀರುತ್ತಲೇ ಫಾದರ್ ಗೇಬ್ರಿಯೆಲ್ ಕೂಡಾ ಗುಂಡಿಗೆ ಬಲಿಯಾಗುತ್ತಾನೆ. ಆ ಕ್ಷಣಕ್ಕಂತೂ ವಸಾಹತುಶಾಹಿ ಗೆಲ್ಲುತ್ತದೆ.

ಮೋಹಕ್ಕೆ ವಶವಾಗಿ ತನ್ನೆಲ್ಲ ಶಸ್ತ್ರ – ಸಾಧನಗಳನ್ನು ಜಲಪಾತದ ಮೇಲಕ್ಕೆ ತರುವುದಕ್ಕೆ ಮೆಂಡೋಜಾ ಪಡುವ ಹರಸಾಹಸ, ಆಮೇಲೆ ಗ್ವುರಾನಿಯನೊಬ್ಬ ಅವನು ಹೊತ್ತು ತಂದಿದ್ದನ್ನು ಕ್ಷಣಮಾತ್ರದಲ್ಲಿ ಜಲಪಾತಕ್ಕೆ ಎಸೆಯುವ ಕ್ಷಣ – ಅದಕ್ಕೆ ಮೆಂಡೋಜಾ ಸ್ಪಂದಿಸುವ ರೀತಿ…… ಅಳು ಕ್ರಮೇಣ ನಗುವಾಗಿ, ಪ್ರೀತಿಯ ಸೆಲೆಯಾಗಿ, ಎಲ್ಲರ ಸಹಬಾಳ್ವೆಯ ದೃಶ್ಯವೊಂದು ಮೂಡುವ ಸನ್ನಿವೇಶ ಇಡೀ ಸಿನೆಮಾಗೆ ಒಂದು ಬಗೆಯ ಕಾವ್ಯಾತ್ಮಕತೆಯನ್ನು ಕಟ್ಟಿಕೊಟ್ಟಿದೆ.

ಇತಿಹಾಸದಲ್ಲಿ ನಡೆದ ಸತ್ಯಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಈ ಸಿನೆಮಾ ಕಥೆಯನ್ನು ಹೆಣೆಯಲಾಗಿದೆ. ಸಿನೆಮಾದಲ್ಲಿ ಬರುವ ಸಾವೋ ಮಿಗ್ವೆಲ್ ದಾಸ್ ಮಿಸೋಸ್ ಎಂಬ ಚರ್ಚಿನ ಅವಶೇಷಗಳನ್ನು ಈಗ ವಿಶ್ವ ಪರಂಪರೆ ತಾಣ ಎಂದು ಘೋಷಿಸಲಾಗಿದೆ. ಜೆಸ್ಯೂಟ್ ಚರ್ಚುಗಳು ಮತ್ತು ವಸಾಹತುಶಾಹಿಗಳ ಸಂಘರ್ಷ ನಡೆದ ಇತಿಹಾಸವನ್ನು ನೀವು ವಿಕಿಪೀಡಿಯಾದಲ್ಲಿ ಓದಿ ತಿಳಿದುಕೊಳ್ಳಬಹುದು.

ಮಿಶನರಿ ಫೀಲ್ಡಿಂಗ್‌ನ ಪಾತ್ರದಲ್ಲಿ ಲಿಯಾಮ್ ನೀಸನ್ ಮೌನವಾಗಿ ನಟಿಸಿದ ಬಗೆಯನ್ನೂ ನೀವು ನೋಡಿ ಆನಂದಿಸಬಹುದು. ಮಹಾನ್ ನಟನೊಬ್ಬ ಮಾತಾಡದೆಯೂ ಹೇಗೆ ತನ್ನ ಇರುವನ್ನು ಪ್ರಕಟಿಸುತ್ತಾನೆ ನೋಡಿ!

ಈ ಸಿನೆಮಾವನ್ನು ಚಿತ್ರೀಕರಿಸಿದ ಇಕ್ವಾಜು ಜಲಪಾತವು ಪ್ರಕೃತಿಯ ಏಳು ಅಚ್ಚರಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಸಿನೆಮಾ ಮುಗಿಯುವ ಹೊತ್ತಿಗೆ ನೀವು ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಈ ಜಲಪಾತದ ಎಲ್ಲ ಕೋನಗಳನ್ನೂ ನೋಡಿರುತ್ತೀರ, ಜಲಪಾತದ ಮೇಲಿನಿಂದ ಕೆಳಗಿನ ನೆಲ ಹೇಗೆ ಕಾಣುತ್ತದೆ ಎಂಬುದನ್ನೂ ಸೇರಿಸಿಕೊಂಡು!

 

ಮುಂಗಾರು ಮಳೆಯಲ್ಲಿ ಜೋಗ ಜಲಪಾತವನ್ನು ಮನೋಜ್ಞವಾಗಿ ಸೆರೆಹಿಡಿದದ್ದು ನಮ್ಮ ಇತ್ತೀಚೆಗಿನ ನೆನಪು. ಆದರೆ ‘ದಿ ಮಿಶನ್’ ಚಿತ್ರದಲ್ಲಿ ನೀವು ವಿಶ್ವದ ಅತ್ಯಂತ ವಿಶಿಷ್ಟ ಜಲಪಾತವನ್ನು ಅನುಭವಿಸುತ್ತೀರಿ. ಮುಂಗಾರು ಮಳೆಯಲ್ಲಿ ವೈಯಕ್ತಿಕ ಪ್ರೀತಿಯ ವಿಫಲತೆಯನ್ನು ಅನುಭವಿಸುತ್ತೀರಿ. ಇಲ್ಲಿ, ಕ್ರಿಸ್ತನ ಆಶೀರ್ವಾದದ ನಡುವೆಯೂ ಗ್ವುರಾನ್ ಸಮುದಾಯ ಪತನವಾಗುವುದನ್ನು ಅನುಭವಿಸುತ್ತೀರಿ. ಜಲಪಾತವೊಂದು ವಿಭಿನ್ನ ಅನುಭವಗಳಿಗೆ ಸಾಕ್ಷಿಯಾಗುತ್ತದೆ, ನಿರ್ದೇಶಕರ ಕಣ್ಣಿಗೆ ಹೇಗೆಲ್ಲ ಕಾಣಿಸುತ್ತದೆ, ಪ್ರೇಕ್ಷಕರಲ್ಲಿ ಎಂಥ ಭಾವವನ್ನು ಮೂಡಿಸುತ್ತದೆ ಎಂದು ತಿಳಿಯಲು, ಸಿನೆಮಾದ ಎಲ್ಲ ಸಾಧ್ಯತೆಗಳನ್ನು ಅರಿಯಲು ನೀವು ಈ ಎರಡೂ ಸಿನೆಮಾಗಳನ್ನು ನೋಡಿ ಎಂಬುದೇ ನನ್ನ ಸಲಹೆ.

Share.
Leave A Reply Cancel Reply
Exit mobile version