೧೯೯೭ರ ದಿನಗಳಲ್ಲಿ ನೀವು ಇಂಗ್ಲಿಶ್ ಸಿನೆಮಾ ನೋಡಬೇಕಂದ್ರೆ ಯಾವುದೋ ಸಿಡಿ ಲೈಬ್ರರಿಗೆ ಮೆಂಬರ್ ಆಗಬೇಕಿತ್ತು. ಅಂಥ ಒಂದು ದಿನ ನಾನು ಮಲ್ಲೇಶ್ವರದ ಸಿಡಿ ಲೈಬ್ರರಿಯಿಂದ ತಂದ ಸಿನೆಮಾ ‘ದಿ ಕ್ಯೂಬ್.’ ನೋಡಿದಾಗ ಇದೇನು ವಿಚಿತ್ರ ಎನ್ನಿಸಿತು. ಈ ಸಿನೆಮಾ ಮಾಡಿದ್ದು ಕೆನಡಾದ ಮಂದಿ. ಹಾಲಿವುಡ್‌ನವರು ಇದರಲ್ಲಿಲ್ಲ. ಆದರೂ ಹಾಲಿವುಡ್‌ನ ಮಿಸ್ಟರಿ ಸಿನೆಮಾಗಳನ್ನು ಮೀರಿಸುವ ಸೈನ್ಸ್ ಫಿಕ್ಷನ್ ಸಿನೆಮಾ ಆಗಿ ದಿ ಕ್ಯೂಬ್ ಪ್ರಸಿದ್ಧವಾಯಿತು. ಆಮೇಲೆ ‘ಹೈಪರ್‌ಕ್ಯೂಬ್’ ಎಂಬ ಸಿಖ್ವೆಲ್ ಬಂತು. (ಸಿಖ್ವೆಲ್: ಒಂದು ಸಿನೆಮಾದ ಮುಂದಿನ ಭಾಗದ ಕಥೆ). ಅದಾದ ಮೇಲೆ ‘ಕ್ಯೂಬ್ ಝೀರೋ’ ಎಂಬ ಶೀರ್ಷಿಕೆಯ ಪ್ರಿಖ್ವೆಲ್ ಬಂತು. (ಪ್ರಿಖ್ವೆಲ್: ಒಂದು ಸಿನೆಮಾದ ಕಥೆಯ ಹಿಂದಿನ ಕಾಲಘಟ್ಟದ ಕಥೆ).
ಬ್ರಾಡ್‌ಬ್ಯಾಂಡ್ ಬಂದು ಸಿನೆಮಾಗಳನ್ನು ಕದ್ದು ನೋಡುವ ಕಲೆ ಕರಗತವಾದ ಕೂಡಲೇ ನಾನು ಮೊದಲು ‘ದಿ ಕ್ಯೂಬ್’ ಸಿನೆಮಾವನ್ನು ಹುಡುಕಿದೆ. ಆಗಲೇ ನನಗೆ ಕ್ಯೂಬ್ ಸರಣಿಯಲ್ಲಿ ಒಟ್ಟು ಮೂರು ಸಿನೆಮಾಗಳು ತಯಾರಾಗಿರೋದು ತಿಳಿಯಿತು. ಕೊನೆಗೂ ಮೂರೂ ಸಿನೆಮಾಗಳನ್ನು ನನ್ನ ಡಿಜಿಟಲ್ ಲೈಬ್ರರಿಗೆ ಸೇರಿಸಿಕೊಂಡಿದ್ದೇನೆ. ಹಲವು ಮಿತ್ರರಿಗೆ ಶಿಫಾರಸು ಮಾಡಿದ್ದೇನೆ.
ಕ್ಯೂಬ್ ಸಿನೆಮಾ ಸರಣಿಯ ಎಲ್ಲ ಕಥೆಗಳ ಸಾಮಾನ್ಯ ಹಂದರ ಹೀಗಿರುತ್ತದೆ: (ನಾನು ಮುಂದೆ ವಿವರಿಸೋದೆಲ್ಲ ‘ದಿ ಕ್ಯೂಬ್’ ಸಿನೆಮಾದ್ದು) ಒಂದಷ್ಟು ಜನರು ವಿಶ್ವದ ನಾನಾ ಮೂಲೆಗಳಲ್ಲಿರೋ ಸೆರೆಮನೆಗಳಿಂದ ಅದ್ಯಾವುದೋ ರೀತಿಯಲ್ಲಿ ಅಪಹರಣಗೊಳ್ಳುತ್ತಾರೆ. ಅವರಿಗೆ ಮತ್ತೆ ಅರಿವು ಮೂಡಿದಾಗ ಆರೂ ಗೋಡೆಗಳು ಒಂದೇ ಥರ ಕಾಣಿಸುವ ಡಬ್ಬಿಯಲ್ಲಿ ಇರುತ್ತಾರೆ. ಈ ಡಬ್ಬಿಯೇ ಕ್ಯೂಬ್. ಎಲ್ಲ ಗೋಡೆಗಳ ಗಾತ್ರ, ಆಕಾರ, ವಿನ್ಯಾಸ ಒಂದೇ ಥರ. ಆರೂ ದಿಕ್ಕುಗಳಲ್ಲಿ ತಿರುಗುಣಿಗಳಿರುವ ಬಾಗಿಲುಗಳಿವೆ. ಯಾವ ಬಾಗಿಲನ್ನಾದರೂ ತೆರೆದು ನೋಡಿದರೆ ಅಲ್ಲಿ ಇನ್ನೊಂದು ಇದೇ ಥರದ ಕ್ಯೂಬ್ ಅನಾವರಣಗೊಳ್ಳುತ್ತದೆ. ಅಂದರೆ ಊಹಿಸಿ: ಆರೂ ಬಾಗಿಲುಗಳಲ್ಲಿ ತಲಾ ಒಂದೊಂದು ಕ್ಯೂಬ್ ಇದೆ. ಈ ಆರೂ ಕ್ಯೂಬ್‌ಗಳ ಇನ್ನೈದು ಬಾಗಿಲುಗಳಲ್ಲಿ ಮತ್ತೆ ಐದು ಕ್ಯೂಬ್‌ಗಳಿರುತ್ತವೆ! ಕೊನೆಯೇ ಇಲ್ಲದ ಕ್ಯೂಬ್‌ಗಳ ಶ್ರೇಣಿ!
ಅರೆ ಇದೇನು ವಿಚಿತ್ರ, ನಾನೇಕೆ ಇಲ್ಲಿ ಬಂದೆ ಎಂದು ಈ ಖೈದಿಗಳು ತಪ್ಪಿಸಿಕೊಳ್ಳುವುದಕ್ಕಾಗಿ ಆರೂ ಬಾಗಿಲುಗಳಲ್ಲಿ ಯಾವುದೋ ಒಂದನ್ನು ತೆರೆಯುತ್ತಾರೆ; ಇನ್ನೊಂದು ಕ್ಯೂಬ್‌ನ ಒಳಗೆ ಹೋಗುತ್ತಾರೆ. ಅಪಾಯ! ಈ ಆರೂ ಬಾಗಿಲುಗಳಲ್ಲಿ ಒಂದು ಮಾತ್ರ ಸರಿ. ಇನ್ನೈದೂ ಬಾಗಿಲುಗಳೂ ಜೀವಕಂಟಕ. ಒಂದಲ್ಲ ಒಂದು ಥರದಲ್ಲಿ ಚಿತ್ರವಿಚಿತ್ರ ವಿಧಾನಗಳ ಮೂಲಕ ಮನುಷ್ಯ ಸತ್ತೇಹೋಗುತ್ತಾನೆ. ‘ಮಾರ್ಟಲ್ ಕಾಂಬಾಟ್’ ಎಂಬ ವಿಡಿಯೋ ಗೇಮ್‌ನಲ್ಲಿ (ಇದು ಸಿನೆಮಾವೂ ಹೌದು) ಸೋತ ಕಟ್ಟಾಳು ಚಿತ್ರವಿಚಿತ್ರವಾಗಿ ಸತ್ತುಹೋಗುವ ಬಗೆ ಗೊತ್ತೆ? ಬಹುಶಃ ‘ದಿ ಕ್ಯೂಬ್’ ಇಂಥ ಸಾವುಗಳನ್ನು ಚಿತ್ರೀಕರಿಸಿದ ಮೊದಲ ಸಿನೆಮಾ.
ಒಂದು ಕ್ಯೂಬ್‌ನಲ್ಲಿ ಅಡ್ಡ ಉದ್ದ ಕೊಯ್ದು ಹಾಕುವ ತಂತಿಗಳು ಒಂದು ಪಾತ್ರವನ್ನು ಅಡ್ಡ ಉದ್ದ ಕೊಯ್ದು ಹಾಕುತ್ತವೆ; ಇನ್ನೊಂದರಲ್ಲಿ ಮಳೆನೀರಿನಂತೆ ಮುದ ತಂದ ದ್ರವ ಆಸಿಡ್ ಆಗಿ… ಗೊತ್ತಾಯ್ತಲ್ಲ…. ಅವನ ಮಾಂಸ ಮಜ್ಜನಗಳೆಲ್ಲ ಕರಗಿ…….
ಕೊನೆಗೊಮ್ಮೆ ಇಂಥ ಹಲವು ಖೈದಿಗಳು ಒಂದೇ ಕ್ಯೂಬ್‌ಗೆ ಬಂದು ಬೀಳುತ್ತಾರೆ. ಎಲ್ಲರಿಗೂ ಎಲ್ಲರೂ ಅಪರಿಚಿತರು. ಒಬ್ಬೊಬ್ಬರದೂ ಒಂದೊಂದು ಥರದ ವರ್ತನೆಯ ವ್ಯಕ್ತಿತ್ವ. ಎಲ್ಲರೂ ಒಟ್ಟಾಗಿ ತಪ್ಪಿಸಿಕೊಳ್ಳುವುದಕ್ಕೆ ಶುರು ಮಾಡುತ್ತಾರೆ; ಯಾವ ಬಾಗಿಲು ಸುರಕ್ಷಿತ ಎಂಬ ಲೆಕ್ಕಾಚಾರಕ್ಕೆ ತಮ್ಮೆಲ್ಲ ಗಣಿತ, ವಿಜ್ಞಾನ, ತರ್ಕದ ಪ್ರತಿಭೆಯನ್ನು ಬಳಸಿ ಒಂದೊಂದೇ ಕ್ಯೂಬ್ ದಾಟುತ್ತ ಹೋಗುತ್ತಾರೆ. ಈ ಪ್ರಯತ್ನದಲ್ಲಿ ಒಂದೊಂದೇ ಪಾತ್ರಗಳು ಜೀವ ಕಳೆದುಕೊಳ್ಳುತ್ತವೆ. ಒಂದು ಹಂತದಲ್ಲಿ ಸಿಕ್ಕಾಪಟ್ಟೆ ಅಡ್ಡಾಡಿದ ಮೇಲೆ ಮತ್ತೆ ಅವರೆಲ್ಲ ಹಿಂದೆ ಆರಂಭಿಸಿದ ಕ್ಯೂಬ್‌ಗೇ ಬಂದು ಸೇರಿದಾಗ ಕಕ್ಕಾಬಿಕ್ಕಿಯಾಗುತ್ತಾರೆ. ನಿಜ, ಈ ಕ್ಯೂಬ್‌ಗಳು ಆಗಾಗ ಸರಿದಾಡುತ್ತವೆ. ನೀವು ಬಾಗಿಲನ್ನು ಹುಡುಕುವ ಜೊತೆಗೆ ಕ್ಯೂಬ್‌ಗಳು ಸರಿದಾಡುವ ಲೆಕ್ಕವನ್ನೂ ಗಮನಿಸಬೇಕು. ಲಿಫ್ಟ್ ಶಬ್ದ ಪಕ್ಕದಲ್ಲೇ ಕೇಳಿಸುತ್ತದೆ; ಯಾವುದೋ ಕ್ಯೂಬ್ ಇನ್ನಾವುದೋ ಜಾಗಕ್ಕೆ ಜಾರುತ್ತಿದೆ; ಮೇಲೋ, ಕೆಳಗೋ, ಎಡಕ್ಕೋ, ಬಲಕ್ಕೋ… ಗೊತ್ತಿಲ್ಲ. ದಿಕ್ಕಿಲ್ಲ; ಸಮಯವಿಲ್ಲ; ರಾತ್ರಿ ಹಗಲಿಲ್ಲ…. ಸೈನ್ಸ್ ಫಿಕ್ಷನ್ ಇಷ್ಟಪಡುವವರು ಇದೆಲ್ಲ ನೋಡುತ್ತ ಕುರ್ಚಿಯ ತುದಿಗೆ ಬಂದು ಕೂರುವುದು ನಿಶ್ಚಿತ.
ನಾನು ದಿ ಕ್ಯೂಬ್ ಸರಣಿಯ ಸಿನೆಮಾಗಳನ್ನು ಹಲವಾರು ಸಲ ನೋಡಿದ್ದೇನೆ. ಹಾಗೆ ನೋಡಿದರೆ ‘ದಿ ಕ್ಯೂಬ್’ ತುಂಬಾ ಖುಷಿ ಕೊಟ್ಟ ಚಿತ್ರ. ಚಿತ್ರದ ಕೊನೆಯಲ್ಲಿ ಉಳಿದ ವ್ಯಕ್ತಿ ಎಲ್ಲಿಗೆ ಹೋಗುತ್ತಾನೆ ಎಂದು ನೋಡುವುದೇ ಒಂದು ಮಜಾ.
‘ಹೈಪರ್‌ಕ್ಯೂಬ್’ನಲ್ಲಿ ಆಧುನಿಕ ಕ್ಯೂಬ್‌ಗಳನ್ನು ಕಾಣಬಹುದು. ಇಲ್ಲಿ ಅವಕಾಶದಂತೆ (ಅವಕಾಶ ಅಂದ್ರೆ ಸ್ಪೇಸ್) ಕಾಲವೂ ಬದಲಾಗುತ್ತೆ! ಯಾವುದೋ ಕ್ಯೂಬ್‌ನ ಒಳಹೊಕ್ಕರೆ ಕಾಲವೇ ನಿಂತುಹೋಗುತ್ತದೆ; ಒಂದೆಡೆ ಕಾಲ ಚಕಚಕನೆ ಸಾಗುತ್ತದೆ; ಇನ್ನೊಂದೆಡೆ ನಿಧಾನ. ಕಾಲ ಬದಲಾವಣೆಯ ಈ ಆಯಾಮವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ ಸಿನೆಮಾದಲ್ಲಿ ಕುತೂಹಲ ಉಳಿದುಕೊಂಡಿದೆ.
‘ಕ್ಯೂಬ್ ಝೀರೋ’ ಎಂಬ ಪ್ರಿಖ್ವೆಲ್‌ನಲ್ಲಿ ಕ್ಯೂಬ್‌ನ್ನು ನಿಯಂತ್ರಣ ಮಾಡುತ್ತಿರುವವರೂ ಕಾಣುತ್ತಾರೆ. ಆದರೆ ಅವರೆಲ್ಲ ಯಾರು, ಯಾಕೆ ಅವರು ಈ ಕ್ಯೂಬ್‌ಗಳನ್ನು ರಚಿಸಿದರು…. ಸಿನೆಮಾ ನೋಡಿ. ಅರ್ಥವಾದರೆ ತಿಳಿಸಿ.
ಈ ಸಿನೆಮಾಗಳ ಕಥೆಗಳಲ್ಲಿ ಒಂದು ಫಿಲಾಸಫಿಕಲ್ ಫ್ಯಾಕ್ಟರ್ ಕೂಡಾ ಇದೆ ಎಂಬುದೇ ನನ್ನ ಆಸಕ್ತಿಗೆ ಇನ್ನೊಂದು ಕಾರಣ. ಕ್ಯೂಬ್ ಚಿತ್ರವನ್ನು ನೀವು ಫಿಲಾಸಾಫಿಕಲ್ ದೃಷ್ಟಿಯಿಂದ ನೋಡಿದರೆ, ನಮ್ಮೆಲ್ಲರ ಜೀವನವೂ ಕ್ಯೂಬ್ ಥರಾನೇ ಇದೆಯಲ್ಲವೆ ಅನ್ನಿಸುತ್ತದೆ. ಯಾರ್‍ಯಾರೋ ನಮ್ಮ ಬದುಕಿನಲ್ಲಿ ಸಿಗುತ್ತಾರೆ; ಕೆಲವರು ಒಳ್ಳೆಯವರು; ಕೆಲವರು ಕೆಟ್ಟವರು. ಕೆಲವರ ಜೊತೆಗೆ ನಾವು ಸಾಗಬಯಸುತ್ತೇವೆ. ಕೆಲವರು ನಮಗೆ ಮೋಸ ಮಾಡುತ್ತಾರೆ. ಬದುಕಿನ ಮುಂದಿನ ಕ್ಷಣ ನಮಗೆಂದೂ ಗೊತ್ತಿಲ್ಲ; ಯಾವ ಬಾಗಿಲಲ್ಲಿ ಯಾವ ಅದೃಷ್ಟ ಇದೆ? ನಮಗೆ ಗೊತ್ತಿಲ್ಲ. ಕೆಲವರು ಕ್ಯೂಬ್ ಮಾದರಿಯಲ್ಲೇ ಹಠಾತ್ತಾಗಿ, ಫ್ರೀಕ್ ಆಗಿ ಸತ್ತುಹೋಗುತ್ತಾರೆ. ಕೆಲವರು ನಮ್ಮನ್ನು ಬಿಟ್ಟು ತಮ್ಮದೇ ದಾರಿ ಹುಡುಕಿಕೊಳ್ಳುತ್ತಾರೆ. ನಾವು ಹುಟ್ಟಿದ್ದೇಕೆ, ಎಲ್ಲಿಂದ ನಮಗೆ ಈ ‘ಜೀವ’ ಬಂತು? ಗೊತ್ತಿಲ್ಲ. ಈ ಜೀವದ ಗೊತ್ತು ಗುರಿಯೇನು, ಅದರ ಗಮ್ಯತಾಣ ಯಾವುದು? ಯಾವ ಅವಕಾಶಗಳು ಎಲ್ಲಿ ಸರಿದುಹೋಗುತ್ತಿವೆ…. – ಹೀಗೆ ನೀವು ಕ್ಯೂಬನ್ನು ನಿಮ್ಮ ಬದುಕಿನ ಫ್ರೇಮ್ ಎಂದು ಹೋಲಿಸಿಕೊಂಡರೆ, ಸಿನೆಮಾ ಇನ್ನೂ ಸಂಕೀರ್ಣವಾಗುತ್ತ ಹೋಗುತ್ತೆ.
ಎಲ್ಲ ಸರಿ, ಸಿನೆಮಾ ಎಲ್ಲಿ ಸಿಗುತ್ತೆ ಎಂದು ನೀವು ಪ್ರಶ್ನೆ ಮಾಡಿದರೆ ನಾನೇನು ಹೇಳಿ? ಎಲ್ಲರಿಗೂ ಸಿಡಿ ಕೊಡುವುದಕ್ಕೆ ನನಗಾಗದು. ಇಲ್ಲಿ ನಿಮಗೆ ಈ ಸಿನೆಮಾವನ್ನು ಕದಿಯಬಹುದಾದ ಬಿಟ್ ಟೊರೆಂಟ್ ಲಿಂಕ್ ಕೊಟ್ಟಿದ್ದೇನೆ. ನೀವೇ ಪ್ರಯತ್ನಿಸಿ. ಬಿಟ್ ಟೊರೆಂಟ್ ಅಂದ್ರೆ ಏನು, ಇದರಿಂದ ಸಿನೆಮಾ ಕದಿಯುವುದು ಹೇಗೆ ಎಂದು ಗೊತ್ತಿಲ್ಲದಿದ್ದರೆ ನನ್ನ ಕದಿಯೋಣು ಬಾರಾ ಲೇಖನ ಸರಣಿಯನ್ನು ಓದಿ.
ಬಿಟ್ ಟೊರೆಂಟ್ ಲಿಂಕ್ : http://www.mininova.org/get/490379
ನನ್ನ ಲೇಖನ: http://mitramaadhyama.co.in/?p=403