ಸುಮನಾ ಎಂಬ ಅಚ್ಚ ಕೇರಳದ ಪುಟ್ಟ ಹುಡುಗಿಯನ್ನು ನಾನು ನೋಡಿದ್ದು 1977 ರಲ್ಲಿ; ದಾವಣಗೆರೆಗೆ 1977 ರಲ್ಲಿ ಬಂದಾಗ. ಮೊನ್ನೆ, 2017 ರ ಜುಲೈ 9 ರಂದು ಮತ್ತೆ ಅವಳನ್ನು – 34 ವರ್ಷಗಳ ನಂತರ – ಭೇಟಿಯಾಗಬಹುದು ಎಂದು ಊಹಿಸಿರಲೇ ಇಲ್ಲ! ಅವಳನ್ನು ನಾನು ಕಡೆಯ ಬಾರಿ ಭೇಟಿಯಾಗಿದ್ದು 1983 ರಲ್ಲಿ. ಅವಳ ಅಮ್ಮ ಲೀಲಾ/ಲೀಲಕ್ಕ, ಅಪ್ಪ ಶಿವನ್ – ಇವರನ್ನು ಮರೆಯಲಾದೀತೆ? ಅವಳ ಆಗಿನ ತುಂಟ ತಮ್ಮ ಸುನಿಲ್ ಕೂಡಾ ನನಗೆ ಅಚ್ಚುಮೆಚ್ಚಾಗಿದ್ದ. ಮೊನ್ನೆ ಸುಮನಾ (ನಾವೆಲ್ಲ ಅವಳನ್ನು ಸುಮ ಎಂದೇ ಕರೆಯುತ್ತೇವೆ) ಬಂದು `ಸುದರ್ಶನಣ್ಣ’ ಎಂದು ಕರೆದಾಗ ಮನಸ್ಸು ದಾವಣಗೆರೆಯ `ಆ ದಿನಗಳ’ ಕಾಲಕ್ಕೆ ಹೋಗಿದ್ದು ನಿಜ. ಪದವಿ ಶಿಕ್ಷಣ ಪಡೆಯುತ್ತಿರುವ ಅವಳ ಮಗಳೂ ಇದ್ದದ್ದು ನನ್ನ ಸಂತೋಷವನ್ನು ಇನ್ನಷ್ಟು ಹೆಚ್ಚಿಸಿತು.
ಲೀಲಕ್ಕ (ಲೀಲಕ್ಕ, ಶಿವನ್ ಅಣ್ಣ ಇಬ್ಬರೂ ಈಗಿಲ್ಲ) ಆಗಿನ ಕಾಲದಲ್ಲೇ ತುಂಬಾ ಕಟ್ಟುನಿಟ್ಟಿನ ತಾಯಾಗಿದ್ದರು. ಅಶಿಸ್ತನ್ನು ಸಹಿಸುವ ಗುಣ ಅವರದಾಗಿರಲಿಲ್ಲ. ನನಗೂ ಅವರು ಚೆನ್ನಾಗಿ ಗದರಿಸಿಯೇ ಕಿವಿಮಾತು ಹೇಳುತ್ತಿದ್ದರು. 1977 ರಲ್ಲಿ ನಾನು ನನ್ನೆಲ್ಲ ಕುಟುಂಬ ಸದಸ್ಯರೊಂದಿಗೆ ಕೆಟಿಜೆ ನಗರದ ಮೂರನೆಯ ಕ್ರಾಸಿನ ಆ ಮನೆಯಲ್ಲಿದ್ದಾಗ, ಅವರು ನಮ್ಮ ಎದುರುಮನೆಯಲ್ಲಿದ್ದರು ಎಂಬುದೇ ನಮ್ಮ ಸಂಬಂಧದ ಎಳೆ! ಆಗ ನಾನು ಏಳನೆಯ ಕ್ಲಾಸು. ಸುಮ ಎರಡನೆಯ ಕ್ಲಾಸು ಇರಬೇಕು. ಅವಳಿಗೆ ನಾನು ಗಣಿತ ಇತ್ಯಾದಿ ಪಾಠ ಹೇಳಿಕೊಡುತ್ತಿದ್ದೆ. ಆ ದಿನಗಳಲ್ಲಿ ನೆರೆಹೊರೆಯವರು ಎಂಬ ಸ್ನೇಹ ಭಾವ ತುಂಬಾನೇ ಇತ್ತು.
1983 ರಲ್ಲಿ ನಾನು ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕೋರ್ಸಿಗೆ ಸೇರಿದ್ದೆ. ಅಡುಗೆ ಭಟ್ಟನೊಬ್ಬನ ತಲೆಹಿಡುಕತನವನ್ನು ವಿರೋಧಿಸಿ ಹೋರಾಡಿದ್ದಕ್ಕೆ ನಾವು ಕೆಲವರನ್ನು ಹಳೆಪೇಟೆಯ ಸಿ ವಿ ಹಾಸ್ಟೆಲ್‌ನಿಂದ ಹೊರಗೆ ಹಾಕಿದ್ದರು. ಆಗ ಊಟಕ್ಕೇ ಸಮಸ್ಯೆಯಾಯಿತು. ಆಗ ನನ್ನ ಸಹಾಯಕ್ಕೆ ಬಂದ ಆರೆಸೆಸ್ ಕಾರ್ಯಕರ್ತ ಶ್ರೀ ಮುತ್ತಣ್ಣನವರು ನನಗೆ ವಾರಾನ್ನದ ವ್ಯವಸ್ಥೆ ಮಾಡಿಕೊಟ್ಟರು. ನಾನೇ ಆಗ ಹುಡುಕಿಕೊಂಡ ಒಂದು ಮನೆ ಲೀಲಕ್ಕನದಾಗಿತ್ತು. ನನಗೆ ನಾನ್‌ವೆಜ್ ಆಗುವುದಿಲ್ಲ ಎಂದು ಅವರು ಮೀನಿನ ಸಾರಿನಲ್ಲೂ ಮೀನನ್ನು ತೆಗೆದು ಬದಿಗಿರಿಸಿ ಬಡಿಸುತ್ತಿದ್ದರು! ದಾವಣಗೆರೆಯ ಪಿಜೆ ಬಡಾವಣೆಯ ನರ್ಗಿಸ್ – ರಸವಂತಿ ಕೂಲ್ ಡ್ರಿಂಕ್ಸ್, ಜಯದೇವ ಸರ್ಕಲ್ಲಿನ ಅವಲಕ್ಕಿ, ಹಳೆಪೇಟೆಯ ಓಪನ್ ದೋಸೆ, ಪುಷ್ಪಾಂಜಲಿ ಥಿಯೇಟರಿನಲ್ಲಿ ಬರುವ ಹಾಲಿವುಡ್ ಸಿನೆಮಾ – ಇವುಗಳಲ್ಲೇ ಕಾಲ ಕಳೆದ ನಾನು ಇಂಜಿನಿಯರಿಂಗ್ ಮುಗಿಸದೇ ಬೆಂಗಳೂರು ಸೇರಿದ್ದು ಇತಿಹಾಸ ಬಿಡಿ.
ಸುಮ ಈಗ ಬೆಂಗಳೂರಿಗೆ ಬಂದಿದ್ದಾಳೆ; ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗಿ. ಅದೇ ಮುಖದಗಲ ನಗು, ಅದೇ ವಿಶ್ವಾಸದ ಚಹರೆ.
ಅವಳ ಮರುಭೇಟಿಯಿಂದ ನನ್ನ ಬಾಲ್ಯವೂ ಮರುಕಳಿಸಿ ಇಷ್ಟು ಬರೆದೆ!!