ಘಟನೆ ಒಂದು
`ಇತ್ತೀಚೆಗೆ ಒಬ್ಬ ಔಷಧ ಸಂಸ್ಥೆಯ ಮಾರಾಟ ಪ್ರತಿನಿಧಿ (ಮೆಡಿಕಲ್ ರೆಪ್ರೆಸೆಂಟೆಟಿವ್) ನನ್ನ ಬಳಿ ಬಂದು ಒಂದು ಲಕ್ಷ ರೂಪಾಯಿ ಬೆಲೆಬಾಳುವ ಸರವೊಂದನ್ನು ಉಡುಗೊರೆಯಾಗಿ ಕೊಡಲು ಮುಂದಾದ. `ಇದೇನು?’ ಎಂದು ಕೇಳಿದೆ. `ಡೈಮಂಡ್ ನೆಕ್‌ಲೇಸ್ ಸರ್’ ಎಂದ. `ಯಾರಿಗೆ?’ ಎಂದು ಕೇಳಿದೆ. `ನಿಮ್ಮ ಪತ್ನಿಗೆ’ ಎಂದ. ನನ್ನ ಸಿಟ್ಟನ್ನು ಹತ್ತಿಕ್ಕಿಕೊಂಡು`ನನ್ನ ಹೆಂಡತಿಯ ಕುತ್ತಿಗೆಗೆ ಸರ ಹಾಕಲು ನಿನಗೆಷ್ಟು ಧೈರ್ಯ ?’ ಎಂದು ಕೇಳಿದೆ. `ಅಲ್ಲ ಸರ್… ಅದು …. ಅದು…. ನೀವೇ ನಿಮ್ಮ ಹೆಂಡತಿಯ ಕುತ್ತಿಗೆಗೆ ಸರ ಹಾಕ್ತೀರಿ ಸರ್’ ಎಂದ. ಆ ಸರವನ್ನು ಅವನಿಗೇ ವಾಪಸ್ ಕೊಡುತ್ತ `ಹಾಗಿದ್ದಮೇಲೆ, ಆ ಸರವನ್ನು ನಾನು ಸಂಪಾದಿಸಿದ ಹಣದಲ್ಲೇ ಖರೀದಿಸ್ತೇನೆ. ಇಷ್ಟಕ್ಕೂ ಅವಳು ಸರಕ್ಕಾಗಿ ಆಶೆ ಪಡಬೇಕಲ್ಲ’ ಎಂದೆ.’
ಘಟನೆ ಎರಡು
`ಒಂದು ಕಾರ್ಪೋರೇಟ್ ಆಸ್ಪತ್ರೆಯಲ್ಲಿ ಒಬ್ಬ ರೋಗಿ ಸತ್ತರು. ಈ ಸಹಜ ಹೃದಯಾಘಾತದ ಪ್ರಕರಣದ ಚಿಕಿತ್ಸೆಗೆ ೧೬ ಲಕ್ಷ ರೂ.ಗಳ ಬಿಲ್ ಮಾಡಲಾಗಿತ್ತು. ಸತ್ತ ರೋಗಿಯ ಬಂಧುಗಳ ಬಳಿ ಅಷ್ಟು ಹಣ ಇರಲಿಲ್ಲ. ಆಸ್ಪತ್ರೆಯು ರೋಗಿಯ ಹೆಣವನ್ನು ಬಚ್ಚಿಟ್ಟಿತು! ಕೊನೆಗೆ ಪೊಲೀಸ್ ಅಧಿಕಾರಿಯೊಬ್ಬರು ಆಸ್ಪತ್ರೆಯ ಮೇಲೆ ದಾಳಿ ನಡೆಸಬೇಕಾಯ್ತು.’
ಘಟನೆ ಮೂರು
ನನಗೆ ತುಂಬಾ ಚೆನ್ನಾಗಿ ಪರಿಚಯವಿದ್ದ ಕುಟುಂಬವೊಂದಿದೆ. ಆ ಕುಟುಂಬದಲ್ಲಿ ಪತಿಗೆ ೪೦ ವರ್ಷ. ಅವರಿಗೆ ಅಪರೂಪದ ರಕ್ತದ ಕ್ಯಾನ್ಸರ್ ಆಗಿತ್ತು. ಅದರಲ್ಲಿ ರೋಗಿಗಳು ಉಳಿಯುವುದೇ ಕಷ್ಟ. ಆದರೆ ಆ ಕಾರ್ಪೋರೇಟ್ ಆಸ್ಪತ್ರೆಯ ಕ್ಯಾನ್ಸರ್ ವೈದ್ಯರು ೪ ಲಕ್ಷ ರೂ.ಗಳ ಚಿಕಿತ್ಸೆ ಮಾಡಿದರೆ ರೋಗಿಯು ಉಳಿಯುವ ಸಾಧ್ಯತೆ ಶೇಕಡಾ ೫೦ರಷ್ಟಿದೆ ಎಂದು ರೋಗಿಯ ಸಂಬಂಧಿಕರನ್ನು ನಂಬಿಸಿದರು. ಪತ್ನಿಗೆ ಇದ್ದ ಕೆಲಸದಲ್ಲಿ ತಿಂಗಳಿಗೆ ೮-೯ ಸಾವಿರ ಸಂಬಳ ಬರುತ್ತಿತ್ತು. ಆಕೆ ಚಿಕಿತ್ಸೆಯ ಖರ್ಚಿಗಾಗಿ ತನ್ನ ಎರಡು ಕೋಣೆಯ ಮನೆಯನ್ನೇ ಮಾರಲು ಮುಂದಾದರು. ಇದನ್ನು ಕೇಳಿದ ನನಗೆ ತಡೆಯಲಾಗಲಿಲ್ಲ. ಅವರ ಮನೆಗೆ ಹೋಗಿ ಇಬ್ಬರನ್ನೂ ಭೇಟಿಯಾದೆ.ರೋಗದ ವಿಷಯವನ್ನು ಆಕೆಗೆ ಮತ್ತು ಅವರ ಸಂಬಂಧಿಕರಿಗೆ ತಿಳಿಸಿದೆ. ಹೀಗಾಗಿ ಅವರ ಆಸ್ತಿ ಉಳಿದುಕೊಂಡಿತು. ಅದಿಲ್ಲವಾದರೆ ಪತಿ ಸತ್ತ ಮೇಲೆ ಆಕೆ ಮತ್ತು ಮಕ್ಕಳು ಬೀದಿ ಪಾಲಾಗುತ್ತಿದ್ದರು.’
ಘಟನೆ ನಾಲ್ಕು
`ನಾನು ಒಂದು ಆಸ್ಪತ್ರೆಯ ಜೊತೆಗೆ ಸಂಬಂಧ ಹೊಂದಿದ್ದೆ. ಅದರ ಆಡಳಿತ ವರ್ಗವು ನನಗೆ ನೇರವಾಗಿ ಮಾತನಾಡಿ ನಾನೇನಾದರೂ ಅದೇ ಆಸ್ಪತ್ರೆಯ ಜೊತೆಗೆ ಸಂಬಂಧ ಉಳಿಸಿಕೊಳ್ಳಬೇಕು ಎಂದರೆ ತಿಂಗಳಿಗೆ ಕನಿಷ್ಠ ಇಷ್ಟು ಸಂಖ್ಯೆಯ ರೋಗಿಗಳನ್ನು ಸೇರಿಸಲೇಬೇಕು ಎಂದು ತಿಳಿಸಿತು. ನಾನು ಆ ಆಸ್ಪತ್ರೆಗೆ ರೋಗಿಗಳನ್ನು ಶಿಫಾರಸು ಮಾಡುವುದನ್ನೇ ನಿಲ್ಲಿಸಿದೆ. ಹಾಗೆ ಬೇರೆ ಆಸ್ಪತ್ರೆಗೆ ರೋಗಿಯನ್ನು ಸೇರಿಸಬೇಕು ಎಂದಾದರೆ ನಾನು ರೋಗಿಗೆ ವಿವಿಧ ಆಸ್ಪತ್ರೆಗಳ ಆಯ್ಕೆಯನ್ನು ಮುಂದಿಡುತ್ತೇನೆ.’
ಘಟನೆ ಐದು
೨೦೦೯ರಲ್ಲಿ ಗಣೇಶ್ ಕೇಳ್ಕರ್ ಎಂಬುವವರು ಗಂಭೀರ ಕಾಯಿಲೆಯೊಂದರ ಚಿಕಿತ್ಸೆಗಾಗಿ ತಮ್ಮ ಮೊಮ್ಮಗನನ್ನು ಪುಣೆಯ ಖ್ಯಾತ ಆಸ್ಪತ್ರೆಗೆ ಸೇರಿಸಿದ್ದರು. ಆ ಆಸ್ಪತ್ರೆಯು ಸೂಚಿಸಿದ ೧೫ ಇಂಜೆಕ್ಷನ್‌ಗಳ ಮೊತ್ತವು ಒಂದೂವರೆ ಲಕ್ಷ ರೂ. ಆಗಿತ್ತು. ಅವರ ಸಂಬಂಧಿ ವೈದ್ಯರೊಬ್ಬರು ಅದೇ ಇಂಜೆಕ್ಷನ್‌ಗಳನ್ನು ಶೇಕಡಾ ೬೦ರ ಬೆಲೆಯಲ್ಲಿ ಬೇರೆ ಕಡೆ ಒದಗಿಸಬಹುದು ಎಂದು ಸೂಚಿಸಿದರು. ಆದರೆ ಆಸ್ಪತ್ರೆ ಒಪ್ಪಲಿಲ್ಲ. ಆಸ್ಪತ್ರೆಯ ಔಷಧದ ಅಂಗಡಿಯನ್ನು ಬಿಟ್ಟು ಬೇರೆ ಕಡೆ ಔಷಧ ಖರೀದಿಸುವುದಾದರೆ ರೋಗಿಯನ್ನೇ ಹೊರಗೆ ಕಳಿಸಲಾಗುವುದು ಎಂದು ತಿಳಿಸಿತು. ಶೇಕಡಾ ೮ರ ಸೋಡಿಯ ಹೊರತಾಗಿಯೂ ಕೇಳ್ಕರ್ ೫೦ ಸಾವಿರ ರೂ. ಹೆಚ್ಚುವರಿ ಖರ್ಚು ಮಾಡಬೇಕಾಗಿ ಬಂತು. ಮಗುವನ್ನು ಮನೆಗೆ ಕರೆದುಕೊಂಡು ಬಂದಮೇಲೆ ಅವರು ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡಿದರು. ೨೦೧೨ರಲ್ಲಿ ಅವರಿಗೆ ೫೦ ಸಾವಿರ ರೂ. ಕೋಡಬೇಕು, ಆಸ್ಪತ್ರೆಯು ಅನೈತಿಕ ವ್ಯವಹಾರ ಮಾಡಿದೆ ಎಂಬ ತೀರ್ಪು ಬಂತು. ಆಸ್ಪತ್ರೆ ಈಗಲೂ ಅದನ್ನು ಒಪ್ಪಿಲ್ಲ. ದಾವೆ ಇನ್ನೂ ನಡೆದೇ ಇದೆ.
ಘಟನೆ ಆರು
`ಮುಂಬಯಿಯ ಒಂದು ದೊಡ್ಡ ಆಸ್ಪತ್ರೆಯಲ್ಲಿ ನನ್ನ ರೆಸಿಡೆನ್ಸಿ ಕಾಲಾವಧಿಯಲ್ಲಿ ನಡೆದ ಘಟನೆ ಇನ್ನೂ ನೆನಪಿನಲ್ಲಿದೆ. ನಮ್ಮ ಸರ್ಜನ್ ಸದಾ ತಾನೆಷ್ಟು ಬೇಗ ಶಸ್ತ್ರಚಿಕಿತ್ಸೆ ಮಾಡುವೆ ಎಂದು ಕೊಚ್ಚಿಕೊಳ್ಳುತ್ತಿದ್ದರು. ಒಂದು ದಿನ ರೋಗಿಯೊಬ್ಬರ ಮೂತ್ರಪಿಂಡದ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ಕೈಗೊಂಡ ಅವರು `ಕತ್ತರಿಸುವುದರಿಂದ ಹಿಡಿದು ಎಲ್ಲ ಮುಗಿದ ಮೇಲೆ ಹೊಲಿಗೆ ಹಾಕುವವರೆಗೆ ಹತ್ತೇ ನಿಮಿಷಗಳಲ್ಲಿ ಆಪರೇಶನ್ ಮುಗಿಸುವೆ’ ಎಂದು ಘೋಷಿಸಿಬಿಟ್ಟರು. ಆದರೆ ಆ ದಿನ ಅದೃಷ್ಟ ಅವರ ಕಡೆಗೆ ಇರಲಿಲ್ಲ. ಶಸ್ತ್ರಚಿಕಿತ್ಸೆಯನ್ನು ಸರಸರನೆ ಮಾಡುವ ತರಾತುರಿಯಲ್ಲಿ ಅವರು ಮೂತ್ರಪಿಂಡದ ಪ್ರಮುಖ ರಕ್ತನಾಳವನ್ನೇ ಕತ್ತರಿಸಿದ್ದರು. ಈ ತಪ್ಪಿನಿಂದಾಗಿ ಅವರು ರೋಗಿಯ ಇಡೀ ಮೂತ್ರಪಿಂಡವನ್ನೇ ಕತ್ತಿರಿಸಿ ತೆಗೆಯಬೇಕಾಯಿತು. ಆಮೇಲೆ ಅವರು ಹೊರಗೆ ಬಂದು ರೋಗಿಯ ಸಂಬಂಧಿಕರಿಗೆ ಇಡೀ ಮೂತ್ರಪಿಂಡವು ಕಲ್ಲಿನಿಂದಾಗಿ ಹಾಳಾಗಿ ಹೋಗಿತ್ತೆಂದೂ, ಆದರೂ ಹೇಗೋ ಮಾಡಿ ರೋಗಿಯನ್ನು ಬದುಕಿಸಿದ್ದೇನೆ ಎಂದೂ ನಂಬಿಸಿದರು. ಬಂಧುಗಳು ಅವರನ್ನು ಬಹುವಾಗಿ ವಂದಿಸಿದರು! ರೋಗಿಯ ಮೂತ್ರಪಿಂಡವೂ ನಾಪತ್ತೆ; ಮಾಹಿತಿಯೂ ನಾಪತ್ತೆ!’
ಘಟನೆ ಏಳು, ಎಂಟು, ಒಂಬತ್ತು – ಹೀಗೆ ನೂರಾರು ಘಟನೆಗಳನ್ನು ರೋಗಿಗಳಲ್ಲ, ವೈದ್ಯರೇ ವಿವರಿಸಿದರೆ ನಿಮಗೆ ಹೇಗಾಗುತ್ತದೆ? ಡಾ|| ಅರುಣ ಗಾಡ್ರೆ ಮತ್ತು ಡಾ|| ಅಭಯ್ ಶುಕ್ಲಾ ಬರೆದಿರುವ `ಡಿಸೆಂಟಿಂಗ್ ಡಯಾಗ್ನಸಿಸ್’ (೨೦೧೬, ವಿಂಟೇಜ್, ಪೆಂಗ್ವಿನ್ ಬುಕ್ಸ್) ಪುಸ್ತಕದಲ್ಲಿ ನಿಮಗೆ ಹತ್ತಲ್ಲ, ನೂರು ಬಗೆಯ ದೃಶ್ಯಗಳನ್ನು, ಹೃದಯ ಕಲಕುವ ಘಟನೆಗಳನ್ನು ಸ್ವತಃ ಅನುಭವೀ ವೈದ್ಯರೇ ಹೇಳುತ್ತಾರೆ. ವೈದ್ಯಕೀಯ ರಂಗವನ್ನು ವ್ಯಾಪಿಸಿರುವ ಅಪಾರ ಪ್ರಮಾಣದ ಭ್ರಷ್ಟಾಚಾರವನ್ನು ಈ ಪುಸ್ತಕವು ಬಯಲಿಗೆಳೆಯುತ್ತದೆ. ದೇಶದ ೭೮ ನೈತಿಕ ವರ್ತನೆಯ ವೈದ್ಯರನ್ನು ಸಂದರ್ಶಿಸಿ, ಇಡೀ ವೈದ್ಯಕೀಯ ರಂಗದ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ವಿಮರ್ಶಿಸಿದ ಈ ಪುಸ್ತಕವು ವೈದ್ಯಕೀಯ ರಂಗದ ಈ ಭೀಕರ ರೋಗಕ್ಕೆ ಪರಿಹಾರಗಳನ್ನೂ ನೀಡಿದೆ. ಅಭ್ಯುದಯ ಪತ್ರಿಕಾಕಾಯಕದ ಜವಾಬ್ದಾರಿಯನ್ನು ಇಬ್ಬರು ವೈದ್ಯರು ಹೊತ್ತುಕೊಂಡು ಈ ಮಹತ್ವದ, ಸಾಮಾಜಿಕ ಹೊಣೆಗಾರಿಕೆಯ ಪುಸ್ತಕವನ್ನು ಹೊರತಂದಿರುವುದು ಅತ್ಯಂತ ಸಕಾಲಿಕ, ಶ್ಲಾಘನೀಯ.
ವೈದ್ಯಕೀಯ ರಂಗದ, ಅದರಲ್ಲೂ ಖಾಸಗಿ ಮತ್ತು ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ನಡೆಯುವ ಹೀನ ಕೃತ್ಯಗಳನ್ನು ಘಟನೆಗಳ ಮೂಲಕವೇ ವಿವರಿಸುವ `ರೋಗನಿದಾನ’ ಎಂಬ ಮೊದಲ ಭಾಗ, ವೈದ್ಯರು ಹೇಗಿರಬೇಕು, ರೋಗಿಯ ಹಕ್ಕುಗಳೇನು, ಒಳ್ಳೆಯ ವೈದ್ಯರನ್ನು ಹುಡುಕುವುದು ಹೇಗೆ, ಖಾಸಗಿ ವೈದ್ಯರಂಗವನ್ನು ನಿಯಂತ್ರಿಸುವುದು ಹೇಗೆ, ಪರಿಹಾರಗಳೇನು ಎಂದು ವಿವರಿಸುವ `ಚಿಕಿತ್ಸೆಯ ಉಪಕ್ರಮ’ ಎಂಬ ಎರಡನೆಯ ಭಾಗ – ಹೀಗೆ ಪುಸ್ತಕವು ಅತೀ ಸರಳವಾಗಿ ಓದಿಸಿಕೊಳ್ಳುತ್ತದೆ. ಮೊದಲ ಭಾಗದಲ್ಲಿ ನಮ್ಮನ್ನು ಆತಂಕದ ಅಂಚಿಗೆ ತರುವ ಪುಸ್ತಕವು ಎರಡನೇ ಭಾಗದಲ್ಲಿ ಉತ್ತರಗಳನ್ನು ಹುಡುಕುತ್ತ ಸಮಾಧಾನಪಡಿಸುತ್ತದೆ. ಪುಸ್ತಕವನ್ನು ಓದಿದ ಮೇಲೆ ಯಾವ ಪ್ರಾಮಾಣಿಕ ನಾಗರಿಕರೂ ಆರೋಗ್ಯರಂಗ ಸುಧಾರಿಸಲು ಏನಾದರೂ ಮಾಡಲೇಬೇಕು ಎಂಬ ಯೋಚನೆ ಮಾಡದೇ ಇರಲಾರರು. ಸಾಮಾನ್ಯರೂ ಅರ್ಥ ಮಾಡಿಕೊಳ್ಳಬಹುದಾದ ಸರಳ ನಿರೂಪಣೆ, ಹಲವಾರು ಉಲ್ಲೇಖಿತ ಮತ್ತು ಅನಾಮಿಕ ವೈದ್ಯರ ಸ್ವಂತ ಅನುಭವಗಳ ಸರಣಿ, ವಿಶ್ವದ ಹಲವು ದೇಶಗಳಲ್ಲಿ ಇರುವ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆಯ ವಿವರ – ಇವುಗಳಿಂದಾಗಿ ಈ ಪುಸ್ತಕವು ಅತ್ಯಂತ ಘೋರ ಸತ್ಯವನ್ನು ಹೇಳಿದ ಮೇಲೂ ರಚನಾತ್ಮಕ ಪುಸ್ತಕವಾಗಿ ಹೊರಹೊಮ್ಮುತ್ತದೆ.
ಈ ಪುಸ್ತಕದಿಂದ ನಾಗರಿಕರು ತಿಳಿಯುವಂತಹ ವಿಷಯಗಳು ಬೇಕಾದಷ್ಟಿವೆ. ಒಳ್ಳೆಯ ವೈದ್ಯರನ್ನು ಹೇಗೆ ಹುಡುಕಬೇಕು/ ಗುರುತಿಸಬೇಕು ಎಂದು ಈ ಪುಸ್ತಕವು ಖಚಿತವಾಗಿ ನಿರೂಪಿಸುತ್ತದೆ.
- ರೋಗಿಯು ಕೇಳುವ ಯಾವುದೇ ಪ್ರಶ್ನೆಯನ್ನೂ ಅವರು ತಡೆಯುವುದಿಲ್ಲ.
- ಸಾಕಷ್ಟು ಮಾಹಿತಿ ಕೊಡುತ್ತಾರೆ; ಕಾಯಿಲೆಯ ಗುಣಲಕ್ಷಣಗಳೇನು, ಚಿಕಿತ್ಸೆಯ ವಿಧಾನಗಳಾವುವು, ಅನುಕೂಲದ ಅಥವಾ ಅನನುಕೂಲದ ಸಂಗತಿಗಳಾವುವು ಎಂಬುದನ್ನು ತಿಳಿಸಿಕೊಡುತ್ತಾರೆ.
- ಯಾವುದೇ ಮುಖ್ಯ ಆರೋಗ್ಯ ತಪಾಸಣೆ, ಪರೀಕ್ಷೆ ಬೇಕಾಗಿದ್ದರೆ ಅದರ ಅಗತ್ಯವನ್ನು ಹಾಗೂ ಅದರಲ್ಲಿರಬಹುದಾದ ಕ್ರಮಗಳನ್ನು ವಿವರಿಸುತ್ತಾರೆ.
- ಯಾವುದೇ ವಿವೇಚನಾಯುತ, ನೈತಿಕ ವೈದ್ಯರು ಹೆದರಿಕೆ ಅಥವಾ ಆತಂಕವನ್ನು ಹುಟ್ಟಿಸುವುದಿಲ್ಲ; ಬದಲಿಗೆ ಸಕಾಲಿಕ ಮತ್ತು ಸಂತುಲಿತ ಮಾಹಿತಿಯನ್ನು ನೀಡುತ್ತಾರೆ.
- ತನಗೆ ಗುಣಪಡಿಸಲಾಗದ ರೋಗವಾಗಿದ್ದರೆ ಆ ಬಗ್ಗೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ.
- ರೋಗಿ ಹೇಳಿದ ಎಂದ ಮಾತ್ರಕ್ಕೆ ಇಂಥ ಯಾವುದೇ ನೈತಿಕ ವೈದ್ಯರು ಹೆಚ್ಚುವರಿ ತಪಾಸಣೆ, ಕ್ರಮಗಳನ್ನು ಅನುಸರಿಸುವುದಿಲ್ಲ.
- ಒಳ್ಳೆಯ ವೈದ್ಯರು ನಿರಂತರವಾಗಿ ತಾಪತ್ರಯಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ತಮ್ಮನ್ನು ಉಳಿಸಿಕೊಳ್ಳುವುದಕ್ಕೆ ಮಾತ್ರವೇ ಆಸಕ್ತಿ ವಹಿಸುವ ವೈದ್ಯರುಗಳು ರೋಗಿಗಳನ್ನು ಉಳಿಸಲಾರರು.
ಬದಲಾಗುತ್ತಿರುವ ವೈದ್ಯಕೀಯ ಜ್ಞಾನ ಮತ್ತು ಸಮಾಜಕ್ಕೆ ಸಂಬಂಧಿಸಿದಂತೆ ವೈದ್ಯರೂ ಬದಲಾಗಬೇಕಾಗುತ್ತದೆ. ಇಂಥವರು ಬದಲಾಗುತ್ತಿರುವ ವೈದ್ಯಕೀಯ ರಂಗ, ಚಿಕಿತ್ಸಾ ವಿಧಾನ ಮತ್ತು ಔಷಧಗಳ ಬಗ್ಗೆ ಮಾಹಿತಿ ಹೊಂದಿರಬೇಕಾಗುತ್ತದೆ; ರೋಗಿಗಳ ಬದಲಾಗುತ್ತಿರುವ ಅಪೇಕ್ಷೆಗಳನ್ನೂ ನಿರ್ವಹಿಸಬೇಕಾಗುತ್ತದೆ.
ಭಾರತದಲ್ಲಿ ಖಾಸಗಿ ಮತ್ತು ಕಾರ್ಪೋರೇಟ್ ಆಸ್ಪತ್ರೆಗಳ ದುರಾಚಾರವನ್ನು ತಡೆಯಲು ಇರುವ ಮಾರ್ಗವೇಣು ಎಂಬ ಖಚಿತ ಮತ್ತು ಕಾರ್ಯಸಾಧ್ಯ ಪರಿಕಲ್ಪನೆಯನ್ನು ವಿವರಿಸಿರುವುದೇ ಈ ಪುಸ್ತಕದ ಬಹುಮುಖ್ಯ ಭಾಗವಾಗಿದೆ. `ಸಾರ್ವತ್ರಿಕ ಸ್ವಾಸ್ಥ್ಯ ಗಮನ’ (ಯೂನಿವರ್ಸಲ್ ಹೆಲ್ತ್ ಕೇರ್, `ಸಾಸ್ವಾಗ’) ಎಂಬ ಹೆಸರಿನ ಈ ಪರಿಕಲ್ಪನೆಯನ್ನು ಕೇವಲ ಸಿರಿವಂತ ದೇಶಗಳಲ್ಲ, ಥೈಲ್ಯಾಂಡ್, ಶ್ರೀಲಂಕಾದಂತಹ ದೇಶಗಳಲ್ಲೂ ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಗುಣಮಟ್ಟದ ಸೇವೆ , ಅಗತ್ಯವಿರುವ ಜನರಿಗೆ ಮಾತ್ರವೇ ಅವರ ಆಯ್ಕೆಗೆ ತಕ್ಕಂತೆ ಸೇವೆ, ಆದಾಯದ, ಸಾಮಾಜಿಕ ಸ್ಥಾನಮಾನದ ಪರಿಗಣನೆ ಇಲ್ಲದೆಯೇ ಎಲ್ಲರಿಗೂ ಒಂದೇ ಬಗೆಯ ಸೇವೆ, ಯಾರು ಎಲ್ಲೇ ಇದ್ದರೂ, ಬೇರೆಲ್ಲೇ ಹೋಗಿದ್ದರೂ ಅಲ್ಲೇ ಅವರಿಗೆ ಆರೋಗ್ಯ ಸೇವೆ ನೀಡಿಕೆ – ಇವು ಸಾಸ್ವಾಗದ ಮೂಲಭೂತ ಅಂಶಗಳು.
ಭಾರತದ ಒಟ್ಟಾರೆ ಆಂತರಿಕ ಉತ್ಪನ್ನದ ಶೇಕಡಾ ೪ ರಷ್ಟನ್ನು (ಜಿಡಿಪಿ) ಆರೋಗ್ಯಸೇವೆಗಳಿಗೆ ಮೀಸಲಿಟ್ಟರೆ ಸಾಸ್ವಾಗವನ್ನು ಯಶಸ್ವಿಯಾಗಿ ಜಾರಿಗೆ ತರಬಹುದು ಎಂಬುದು ಲೇಖಕರ ದೃಢ ಅಭಿಮತ. ಇದಕ್ಕಾಗಿ ನೇರ ಮತ್ತು ಪರೋಕ್ಷ ತೆರಿಗೆಗಳ ಮೂಲಕ ನಿಧಿ ಸಂಚಯಿಸಬೇಕು. ಈ ಯೋಜನೆಯ ಇನ್ನೊಂದು ಮುಖ್ಯ ಅಂಗವೆಂದರೆ ಸಾಮಾಜಿಕ ಆರೋಗ್ಯ ವಿಮೆ. ಸಾಸ್ವಾಗದ ಜಾರಿಯ ಮೊದಲ ಹಂತದಲ್ಲಿ ಸಾರ್ವಜನಿಕ ಆಸ್ಪತ್ರೆಗಳನ್ನು ಸುಧಾರಿಸಲೇಬೇಕು ಎಂಬ ಒಂದು ಪ್ರಮುಖ ಅವಶ್ಯಕತೆಯಿದೆ. ಜೊತೆಗೇ ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳ ಜಂಟಿ ವ್ಯವಸ್ಥೆಯನ್ನೂ ಸಾಸ್ವಾಗವು ಬೇಡುತ್ತದೆ.
ಸಾಸ್ವಾಗ ವ್ಯವಸ್ಥೆಯಲ್ಲಿ ವಿಶೇಷ ಚಿಕಿತ್ಸಾ ಸೇವೆಗಳಿಗೆ ಶಿಫಾರಸು ಮಾಡುವ ಕ್ರಮವನ್ನು ನಿಯಂತ್ರಣಕ್ಕೆ ಒಳಪಡಿಸಲಾಗುತ್ತದೆ. ಸಾಸ್ವಾಗದಲ್ಲಿ ಆಲೋಪಥಿಯಲ್ಲದೆ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ಚಿಕಿತ್ಸಾ ವಿಧಾನಗಳನ್ನೂ ಸೇರಿಸಬೇಕು ಎಂಬುದು ಲೇಖಕರ ಸಲಹೆ.
ಈ ವ್ಯವಸ್ಥೆ ಜಾರಿಯಾಗುವ ಬಗ್ಗೆ ಗಮನ ಕೊಡುತ್ತಲೇ ಭಾರತ ಸರ್ಕಾರವು ಖಾಸಗಿ ಆಸ್ಪತ್ರೆಗಳ ಮತ್ತು ಖಾಸಗಿ ವೈದ್ಯಕೀಯ ಸೇವೆಗಳ ಬಗ್ಗೆ ಇನ್ನಷ್ಟು ಸ್ಪಷ್ಟ ಮತ್ತು ಕಠಿಣವಾದ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಲೇಖಕರು ಸಮರ್ಥವಾಗಿ ಪ್ರತಿಪಾದಿಸಿದ್ದಾರೆ.
ಈ ಪುಸ್ತಕದ ಕೊನೆಯಲ್ಲಿ ರೋಗಿಗಳನ್ನು ಗ್ರಾಹಕರೆಂದು ಪರಿಗಣಿಸಿ ಕೊಟ್ಟಿರುವ ವಾಸ್ತವಿಕ ಸಲಹೆಗಳು ಒಂದಲ್ಲ ಒಂದು ಬಗೆಯಲ್ಲಿ ರೋಗಿಗಳಾದ ನಮಗೆ ತುಂಬಾ ಸಮಾಧಾನ ನೀಡುತ್ತವೆ! ಬೆಂಗಳೂರಿನಲ್ಲಿ ಹಾಸ್ಪಿಟಲ್ ಗೈಡ್ ಫೌಂಡೇಶನ್ ಎಂಬ ಸರ್ಕಾರೇತರ ಸಂಸ್ಥೆಯು ಕೆಲಸ ಮಾಡುತ್ತಿದೆ. ಈ ಸಂಸ್ಥೆಗೆ ಯಾರು ಬೇಕಾದರೂ ತನ್ನ ಅನಾರೋಗ್ಯದ ಬಗ್ಗೆ ಗೌಪ್ಯವಾಗಿ ಬರೆದರೆ ಮೂರು ದಿನಗಳ ಒಳಗೆ ನಿಮ್ಮ ಊರಿನಲ್ಲಿ ಇರಬಹುದಾದ ಒಳ್ಳೆಯ, ನೈತಿಕ ವರ್ತನೆಯ ವೈದ್ಯರ ಮಾಹಿತಿ ಸಿಗುತ್ತದೆ. ಈ ವಿಮರ್ಶೆಯನ್ನು ಬರೆಯುವ ಸಮಯದಲ್ಲಿ ನಾನೇ ಸ್ವತಃ ಇಲ್ಲಿಗೆ ನನ್ನದೊಂದು ಆರೋಗ್ಯದ ಸಮಸ್ಯೆಯನ್ನು ಸಲ್ಲಿಸಿದೆ. ಮೂರೇ ದಿನಗಳಲ್ಲಿ ನನಗೆ ಈ ಸಂಘಟನೆಯ ವೈದ್ಯೆಯೊಬ್ಬರಿಂದ ಕರೆ ಬಂತು. ಅದಾಗಿ ಮರುದಿನವೇ ಅವರು ಮೈಸೂರಿನಲ್ಲಿರುವ ಒಳ್ಳೆಯ ವೈದ್ಯರ ಸಂಪರ್ಕ ವಿವರಗಳನ್ನು ಒದಗಿಸಿ ಅವರನ್ನು ಸಂಪರ್ಕಿಸಲು ತಿಳಿಸಿದರು. ಅವರನ್ನು ಸಂಪರ್ಕಿಸಿದಾಗ, ಯಾವುದೇ ಬಗೆಯ ಆತುರವನ್ನೂ ತೋರದೆಯೇ ಅವರು ನನ್ನ ರೋಗ ವಿವರಣೆಯನ್ನು ಅರ್ಧ ತಾಸು ಕೇಳಿದರು! ಬಹುಶಃ ನಾನು ನನ್ನ ಜೀವಮಾನದಲ್ಲಿಯೇ ಇಷ್ಟು ವಿವರಣೆ ನೀಡಲು ಸಾಧ್ಯವಾಗಿರಲಿಲ್ಲ! ಈ ಮಧ್ಯೆ ಸಂಸ್ಥೆಯ ವೈದ್ಯೆಯಿಂದ ಮತ್ತೆ ಮತ್ತೆ ಅನುವರ್ತನಾ ಕರೆಗಳೂ ಬಂದಿದ್ದವು.
ದೇಶದ ಆರೋಗ್ಯ ರಂಗವನ್ನು ಹೇಗೆ ಸುಧಾರಿಸಬೇಕು ಎಂದು ದೇಶವ್ಯಾಪಿ ಸಮೀಕ್ಷೆ ಮಾಡಿ ಬರೆದ ಪುಸ್ತಕದಲ್ಲಿ ರೋಗಿಯೊಬ್ಬರಿಗೆ ವಾಸ್ತವಿಕವಾಗಿ ಸಮಾಧಾನ ನೀಡುವ ಮಾಹಿತಿಯೂ ಇದೆ ಎಂದಮೇಲೆ ಯೋಚಿಸಿ. ಈ ಪುಸ್ತಕದ ಸಾರ್ಥಕತೆಯ ಬಗ್ಗೆ ಅನುಮಾನವೇ ಬೇಡ.[fblike]
- ಬೇಳೂರು ಸುದರ್ಶನ
(ನವೆಂಬರ್ ೨೦೧೬ರ ಉತ್ಥಾನದಲ್ಲಿ ಪ್ರಕಟಿತ)