ಸಂಗೀತ, ಸಿನೆಮಾದಲ್ಲೇ ಮುಳುಗಿಹೋಗಿದ್ದ ದಿನ. ಒಂದು ಎಸ್ ಎಂ ಎಸ್ ಬಂತು. ಸಚಿವ ವಿ ಎಸ್ ಆಚಾರ್ಯರವರು ಮೈಸೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸ್ತಾ ಇದಾರೆ.  ಕಾರ್ಯಕ್ರಮವನ್ನು ಸಂಘಟಿಸಿದವರು ಬೇರಾರೂ ಅಲ್ಲ, ನಾನು ಮತ್ತು ನನ್ನ ಗೆಳೆಯರು ಹೋರಾಡುತ್ತಿದ್ದ ಭ್ರಷ್ಟ ಪ್ರಕರಣದಲ್ಲಿ ಕ್ರಿಮಿನಲ್ ಚಾರ್ಜ್‌ಶೀಟ್‌ಗೆ ಒಳಗಾಗಿ ೫೦ ಸಾವಿರ ರೂ.ಗಳ ಜಾಮೀನು ಕೊಟ್ಟು ಬಿಡುಗಡೆಯಾದವರು!
ಈ ಕಾರ್ಯಕ್ರಮಕ್ಕೆ ಆಗ ಗೃಹಸಚಿವರಾಗಿದ್ದ ಆಚಾರ್ಯರು ಹೋಗಕೂಡದು ಎಂದು ನಮಗೆ ಅನ್ನಿಸಿತು. ಭಾನುವಾರದ ಮಧ್ಯಾಹ್ನ ಆಚಾರ್ಯರಿಗೆ ತೊಂದರೆ ಕೊಡುವುದೆ? ಸರಿ, ಅವರ ಬ್ಲಾಗ್‌ಗೆ ಹೋಗಿ ಈಮೈಲ್ ಹುಡುಕಿದೆ. ಕಾರ್ಯಕ್ರಮ ನಡೆಸುವವರು ಇಂತಿಂಥವರು, ದಯಮಾಡಿ ಹೋಗಬೇಡಿ, ಬೇಕಾದರೆ ವಿವರ ಕೊಡ್ತೇನೆ ಎಂದು ಮೈಲ್ ಹಾಕಿ ಮಲಗಿದೆ.
ಹದಿನೈದೇ ನಿಮಿಷದಲ್ಲಿ ಅವರಿಂದ ಫೋನ್ ಬಂತು. `ನಾನು ಆಚಾರ್ಯ ಮಾತಾಡೋದು, ಈ ಬಗ್ಗೆ ಸ್ವಲ್ಪ ವಿವರ ಬರೆದು ಮೈಲ್ ಮಾಡ್ತೀರ?’ ಎಂದು ಕೇಳಿದ್ದರು! ನನ್ನ ನಿದ್ದೆಯೆಲ್ಲ ಹಾರಿಹೋಯ್ತು.  ಹೇಗೂ ಎಲ್ಲ ದಾಖಲೆಗಳೂ ಇದ್ದವಲ್ಲ ಎಂದು ಮತ್ತೆ ಕೂತು ಮೈಲ್ ಮಾಡಿದೆ. ಒಂದೇ ಗಂಟೆಯಲ್ಲಿ ಮತ್ತೆ ಅವರದ್ದೇ ಫೋನು.
`ನೀವು ಹೇಳೋದು ಗೊತ್ತಾಯ್ತು. ನಾನು ಆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ.ಮೈಸೂರಿನಿಂದ ಬರುವಾಗ ಅಲ್ಲಿಗೆ ಹೋಗಬೇಕಿತ್ತು. ಅದರಿಂದ ತಪ್ಪಿಸಿಕೊಳ್ತೇನೆ. ಒಳ್ಳೇ ಸಮಾಚಾರ ತಿಳಿಸಿದ್ರಿ. ಇದರಲ್ಲಿ ಮನೋಹರ ಮಸ್ಕಿ ಪಾತ್ರ ಇರೋದು ಗೊತ್ತಿರ್‍ಲಿಲ್ಲ’ ಎಂದರು.
ಹೀಗೆ ಈ ಮೈಲ್ ಮೂಲಕ ಬಂದ ದೂರೊಂದನ್ನು ತಕ್ಷಣವೇ ನೋಡುವ, ತಮ್ಮ ಬಗ್ಗೆ ಬಂದಿದ್ದನ್ನೆಲ್ಲ ಬ್ಲಾಗ್ ಮಾಡುವ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದ ಡಾ. ಆಚಾರ್ಯರು ಈಗ ತೀರಿಕೊಂಡಿದ್ದಾರೆ. `ಟೆಕ್‌ಸಾವಿ’ ಎಂದು ಬೊಗಳೆ ಬಿಟ್ಟುಕೊಂಡು, ಕಂಡಕಂಡಲ್ಲೆಲ್ಲ ಈಮೈಲ್ ಐಡಿಯನ್ನು ಉಸುರುವ ನಾಯಕರೂ ಇರುವ ಈ ದಿನಗಳಲ್ಲಿ ಏನೂ ಸುದ್ದಿ ಮಾಡದೆ ಈ ವ್ಯವಸ್ಥೆಗಳನ್ನು ಮೈಗೂಡಿಸಿಕೊಂಡಿದ್ದ ಆಚಾರ್ಯರನ್ನು ನೆನಪಿಸಿಕೊಂಡರೆ, ಇಂಥವರೊಂದಿಗೂ ಒಂದಷ್ಟು ಕ್ಷಣ ಕಳೆದೆನಲ್ಲ ಎಂದು ಸಮಾಧಾನವಾಗುತ್ತದೆ.
. . .
ಸದಾನಂದಗೌಡರು ಮುಖ್ಯಮಂತ್ರಿಯಾದ ದಿನ ನಾನು ಡಾ. ಆಚಾರ್ಯರೊಂದಿಗೆ ಅರ್ಧ ಗಂಟೆ ಕಳೆಯುವ ಅವಕಾಶ ಸಿಕ್ಕಿತ್ತು. ಮನೆಯಲ್ಲೇ ಯಾವುದೋ ಪೂಜೆ ಮಾಡಿಸಿದ್ದ ಅವರು ಎಂದಿನಂತೆ ಶುಚೀರ್ಭೂತರಾಗಿ ಮಿಂಚುತ್ತಿದ್ದರು. `ಸರ್, ನೀವು ಪಕ್ಷದಲ್ಲಿ ಹಿರಿಯರು. ಗುಂಪಿಲ್ಲದವರು.ನಿಮಗೆ ಮುಖ್ಯಮಂತ್ರಿ ಆಗಬೇಕು ಅಂತ ಅನ್ನಿಸ್ಲಿಲ್ವ?’ ಎಂದು ಕೇಳಿಯೇಬಿಟ್ಟೆ.
`ಬೇಳೂರು, ನೀವು ಹೇಳೋದು ಸರಿ ಇರಬಹುದು. ನಾನೇ ಹಿರಿಯನೂ ಆಗಿರಬಹುದು. ಆದರೆ ನನ್ನ ಆರೋಗ್ಯ ಸರಿಯಿಲ್ಲ. ಮುಖ್ಯಮಂತ್ರಿ ಹುದ್ದೆಗೆ ಕೇವಲ ಹಿರಿತನವೊಂದೇ ಸಾಕಾಗಲ್ಲ. ದೈಹಿಕವಾಗಿ ಸಮರ್ಥವಾಗಿರಬೇಕು. ಆದ್ದರಿಂದಲೇ ನಾನು ಅದರ ಗೋಜಿಗೆ ಹೋಗಿಲ್ಲ. ಹೇಗೂ ಯುವ ವಯಸ್ಸಿನವರು ಆಗ್ತಾ ಇದಾರಲ್ಲ, ಅದಕ್ಕಿಂತ ಸಂತೋಷ ಏನಿದೆ?’ ಎಂದರು. ಅವರು ರಾಜಕೀಯ ಕಾರಣ ನೀಡಬಹುದೆಂಬ ನನ್ನ ನಿರೀಕ್ಷೆ ತಪ್ಪಾಗಿತ್ತು.
. . .
ನಾನು ಕಣಜ ಜಾಲತಾಣಕ್ಕೆ ಸೇರಿದ ಆರಂಭದ ದಿನಗಳವು. ವಿಶ್ವವಿದ್ಯಾಲಯಗಳ ಜ್ಞಾನಭಂಡಾರವನ್ನು ಕಣಜಕ್ಕೆ ಸೇರಿಸಬೇಕು ಎಂಬ ಕನಸಿನೊಂದಿಗೆ ಆಗ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಆಚಾರ್ಯರ ಬಳಿ ಹೋದೆ. ಅಧಿಕೃತ ಪತ್ರವನ್ನೂ ಕೊಟ್ಟೆ.
`ಅದೆಲ್ಲ ಸರಿ, ಕಣಜಕ್ಕೂ ವಿಕಿಪೀಡಿಯಾಗೂ ವ್ಯತ್ಯಾಸ ಇದೆಯೆ? ಮತ್ತೊಂದು ಯೋಜನೆ ಮಾಡಿ ಹಣ ಖರ್ಚು ಮಾಡಬೇಕೆ?’ ಡಾ. ಆಚಾರ್ಯರ ಪ್ರಶ್ನೆಗೆ ಉತ್ತರವಾಗಿ ನಾನು ವಿಕಿಪೀಡಿಯಾ ಮತ್ತು ಕಣಜದ ನಡುವೆ ಇರುವ ಪ್ರಮುಖ ವ್ಯತ್ಯಾಸಗಳನ್ನು ತಿಳಿಸಿದೆ. ಹತ್ತು ನಿಮಿಷಗಳ ಚರ್ಚೆಯ ನಂತರ ಅವರೆಂದರು: `ಸರಿ, ಕಣಜದ ಕೆಲಸ ಒಳ್ಳೆಯದೇ. ನಮ್ಮ ರಾಜ್ಯದ ಎಲ್ಲ ಹಳೆಯ ವಿಶ್ವವಿದ್ಯಾಲಯಗಳ ಪ್ರಕಟಣೆಗಳು ಬೇಕಲ್ಲವೆ? ಹಾಗೇ ಪತ್ರ ಬರೆಯುತ್ತೇನೆ’. ಕೆಲವೇ ದಿನಗಳಲ್ಲಿ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಬರೆದ ಪತ್ರದ ಪ್ರತಿ ತಲುಪಿತು.
. . .
ಚುನಾವಣೆಯಲ್ಲಿ ಗೆದ್ದ ಕೆಲವೇ ದಿನಗಳಲ್ಲಿ ಹಾವೇರಿ ಗೋಲಿಬಾರ್ ಘಟನೆ ನಡೆಯಿತು. ಆಗ ಮುಖ್ಯಮಂತ್ರಿಯಾಗಿದ್ದ ಯೆಡ್ಯೂರಪ್ಪನವರು ಮಾನಸಿಕವಾಗಿ ಆಘಾತಗೊಂಡಿದ್ದರು. ರಾತ್ರಿಯಿಡೀ ತಮ್ಮ ಆಪ್ತಮಿತ್ರರೊಂದಿಗೆ ಡಾಲರ್‍ಸ್ ಕಾಲನಿ ಮನೆ ಸುತ್ತ ತಿರುಗಿದರು. ಚಡಪಡಿಸಿದರು. ಮರುದಿನ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಿತ್ತು. ಜಕ್ಕೂರಿನಲ್ಲಿ ಅವರೊಂದಿಗೆ ಎರಡು ತಾಸು ಕಳೆದವರು ಡಾ. ಆಚಾರ್ಯರು. ತಮ್ಮೆಲ್ಲ ಅನುಭವದ ಮಾತುಗಳನ್ನು ಹಂಚಿಕೊಂಡರು ಎಂಬುದು ದೂರದಿಂದ ಅವರಿಬ್ಬರನ್ನೂ ನೋಡಿದಾಗಲೇ ಅನ್ನಿಸುತ್ತಿತ್ತು.
. . .
ಪಕ್ಷದ ಕಾರ್ಯಕರ್ತ ಡಾ. ಆಚಾರ್ಯರನ್ನು ಕೂಡಾ ನಾನು ನೋಡಿದ್ದೇನೆ. ಪ್ರಣಾಳಿಕೆ, ಆರ್ಥಿಕ ನೀತಿ ಎಂದಕೂಡಲೇ ಅವರ ಬಿಟ್ಟು ಬೇರೆ ಹೆಸರೇ ಹೊಳೆಯುತ್ತಿರಲಿಲ್ಲ. (ಈಗ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ!). ೨೦೦೮ರ ಚುನಾವಣೆ ಸಂದರ್ಭದಲ್ಲಿ ನನ್ನ ಜೊತೆಗೂ ಕೂತು ಎರಡು ತಾಸು ಪ್ರಣಾಳಿಕೆ ಬಗ್ಗೆ ಚರ್ಚಿಸಿದ ಅವರ ಹೃದಯವಂತಿಕೆ ಮರೆಯುವಂತಿಲ್ಲ. ಕೆಲವೊಮ್ಮೆ ಅವರು ನಮಗೆ ಬೇರೆ ಕೆಲಸ ಇದೆಯೇ ಎಂದು ಗಮನಿಸದೇ ತಮ್ಮ ಮಾತನ್ನೇ ಆಡಿಕೊಂಡಿದ್ದೂ ಇದೆ. ಇದು ನಮಗೆಲ್ಲ ಕೊಂಚ ಕಿರಿಕಿರಿಯಾದರೂ ಸಹಿಸಿಕೊಂಡೆವು. ಅವರೆಂದೂ ನೀತಿಗೆಟ್ಟ ರಾಜಕಾರಣಿಗಳಂತೆ ವರ್ತಿಸಲಿಲ್ಲವಲ್ಲ, ಅದೇ ನಮಗಿದ್ದ ಸಮಾಧಾನ.
. . .
ನಾನು ಅವರಿಗೆ ಎಷ್ಟೋ ಸಲ ಫೋನ್ ಮಾಡುತ್ತಿದ್ದೆ. ಪ್ರತೀ ಸಂದರ್ಭದಲ್ಲೂ ಅವರೇ ಮೊಬೈಲ್ ಎತ್ತಿ `ಆಚಾರ್ಯ’ ಎಂದು ಸ್ವಘೋಷಣೆ ಮಾಡಿಕೊಳ್ಳುತ್ತಿದ್ದರು. ಇದನ್ನೇನು, ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಒಬ್ಬ ಹಿರಿಯ ಸಚಿವ, ತನ್ನ ಮೊಬೈಲಿಗೆ ಬಂದ ಅಪರಿಚಿತ ಕರೆಯನ್ನೂ ತಾನೇ ಸ್ವೀಕರಿಸುವ ಸ್ವಭಾವವೊಂದು ಅಪರೂಪವೇ ಎಂದು ಭಾವಿಸಿದ್ದೇನೆ.  ಮಿಸ್ ಆದ ಕರೆಯನ್ನೂ ಅವರು ಬಾಕಿ ಉಳಿಸಿಕೊಳ್ಳುತ್ತಿರಲಿಲ್ಲ.
. . .
ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ.
ಹೀಗೇಕೆ ಎಂದು ನಮಗೆಲ್ಲ ಗೊತ್ತು.
 

Share.
Leave A Reply Cancel Reply
Exit mobile version