ಕೊಳಕು ಡಜನ್ ವಿಷಗಳು ನಿಮಗೆ ಗೊತ್ತಿರಲೇಬೇಕು. ಇವುಗಳನ್ನು ಪಿ ಓ ಪಿ (ಪರ್ಸಿಸ್ಟೆಂಟ್ ಆರ್ಗಾನಿಕ್ ಪೊಲ್ಯುಟಂಟ್ಸ್) ಎನ್ನುತ್ತಾರೆ. ಅಂದ್ರೆ ಕನ್ನಡದಲ್ಲಿ ಇವನ್ನು ಪ್ರಕೃತಿಯಲ್ಲಿ ಖಾಯಂ ಆಗಿ ಉಳಿದುಬಿಡುವ, ಮಾಲಿನ್ಯಕಾರಕ ಇಂಗಾಲ ಆಧಾರದ ಸಂಯುಕ್ತಗಳು. ಡರ್ಟಿ ಡಜನ್ ಎಂದೇ ಕುಖ್ಯಾತವಾದ ಈ ರಾಸಾಯನಿಕಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ. ಆಲ್ಟ್ರಿನ್, ಕ್ಲೋಡೇನ್, ಡಿಡಿಟಿ, ಡೀಲ್ಡ್ರಿನ್, ಎಂಡ್ರಿನ್, ಹೆಪ್ಟಾಕ್ಲೋರ್, ಹೆಕ್ಸಾಕ್ಲೋರೋಬೆಂಝೀನ್, ಮೈರೆಕ್ಸ್, ಟಾಕ್ಸಾಫೀನ್, ಪಿಸಿಬಿಗಳು, ಡಯಾಕ್ಸಿನ್‌ಗಳು ಮತ್ತು ಫ್ಯುರಾನ್‌ಗಳು. ಈ ಪಟ್ಟಿಯ ಬಗ್ಗೆ ಆನ್ನೆ ಪ್ಲಾಟ್ ಮ್ಯಾಕ್‌ಗಿನ್ ಬರೆದ `ವೈ ಪಾಯ್ಸನ್ ಅವರ್‌ಸೆಲ್ವ್ಸ್?’ ಎಂಬ ಪುಸ್ತಕವನ್ನು ನಾನು ಮತ್ತು ಶರತ್‌ಚಂದ್ರ ಅನುವಾದಿಸಿ, ಅದು `ನಾವೇಕೆ ವಿಷಯಮಯವಾಗಬೇಕು? – ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು’ ಎಂಬ ಶೀರ್ಷಿಕೆಯಲ್ಲಿ ನಾಗರಿಕ ಸೇವಾ ಟ್ರಸ್ಟ್‌ನಿಂದ ೨೦೦೧ರಲ್ಲಿ ಪ್ರಕಟವಾಗಿದೆ.

ಈಗ ಈ ಡರ್ಟಿ ಡಜನ್ ವಿಷಯಗಳ ಪಟ್ಟಿಗೆ ಇನ್ನೂ ಒಂಬತ್ತು ವಿಷಗಳು ಸೇರಿಕೊಂಡಿವೆ ಅನ್ನೋದೇ ಈಗ ಇಲ್ಲಿ ನಿಮಗೆ ತಿಳಿಸ್ತಾ ಇರೋ ಸುದ್ದಿ.

ಈ ವಿಷಗಳ ರಾಸಾಯನಿಕ ಹೆಸರುಗಳು ಹೀಗಿವೆ:

೧) ಆಲ್ಫಾ ಸೈಕ್ಲೋಕ್ಲೋರೋಸೈಕ್ಲೋಹೆಕ್ಸೇನ್

೨) ಬೀಟಾ ಸೈಕ್ಲೋಕ್ಲೋರೋಸೈಕ್ಲೋಹೆಕ್ಸೇನ್

೩) ಕ್ಲೋರ್‌ಡೆಕೋನ್

೪) ಹೆಕ್ಸಾಕ್ಲೋರೋಬೈಫಿನೈಲ್

೫) ಹೆಕ್ಸಾಬ್ರೋಮೋಡೈಫಿನೈಲ್ ಈಥರ್ ಮತ್ತು ಹೆಪ್ಟಾಬ್ರೋಮೋಡೈಫಿನೈಲ್ (ವಾಣಿಜ್ಯಕ ಆಕ್ಟಾಬ್ರೋಮೋಡೈಫಿನೈಲ್ ಈಥರ್)

೬) ಲಿಂಡೇನ್

೭) ಪೆಂಟಾಕ್ಲೋರೋಬೆಂಝೀನ್

೮) ಪರ್‌ಫ್ಲೋರೋ ಆಕ್ಟೇನ್ ಸಲ್‌ಫೋನಿಕ್ ಆಸಿಡ್, ಅದರ ಲವಣಗಳು ಮತ್ತು ಪರ್‌ಫ್ಲೋರೋ ಆಕ್ಟೇನ್ ಸಲ್ಫೋನೈಲ್ ಫ್ಲೋರೈಡ್

೯) ಟೆಟ್ರಾಬ್ರೋಮೋಡೈಫಿನೈಲ್ ಈಥರ್ ಮತ್ತು ಪೆಂಟಾಬ್ರೋಮೋಡೈಫಿನೆಲ್ ಆಥರ್ (ವಾಣಿಜ್ಯಕ ಪೆಂಟಾಬ್ರೋಮೋಡೈಫಿನೈಲ್‌ಈಥರ್)

ಇವುಗಳಲ್ಲಿ ಏಳನೇದನ್ನು ನಿರ್ಬಂಧಿತ ನಿಯಮಗಳಡಿ ಉತ್ಪಾದಿಸಬಹುದು. ಎಂಟನೇದನ್ನು ಸದುದ್ದೇಶಕ್ಕಾಗಿ ಸದ್ಯಕ್ಕೆ ಬಳಸಬಹುದು.

ಏನಿವು ಪಿಓಪಿಗಳು? ಅದೇನಂಥ ಅಪಾಯ ಇದೆ?

ಈ ಪುಟ್ಟ ವಿಡಿಯೋ ನೀಡಿದರೆ ನಿಮಗೆ ಪಿಓಪಿಯ ಕಥೆ ಗೊತ್ತಾಗುತ್ತೆ:

[youtube=http://www.youtube.com/watch?v=vJoyx_PDAS0&w=375&h=258]

 

P : ಪಿ ಅಂದ್ರೆ ಪರ್ಸಿಸ್ಟೆಂಟ್: ಖಾಯಮ್ಮಾಗಿರೋ ವಿಷ:

ಸಾಮಾನ್ಯ ನಿಸರ್ಗದತ್ತ ಸನ್ನಿವೇಶಗಳಲ್ಲಿ ಪಿಓಪಿಗಳು ಒಡೆದುಹೋಗೋದೇ ಇಲ್ಲ. ತಮ್ಮ ಸ್ಥಿರತೆಯಿಂದಾಗಿ ಇವು ಬಿಡುಗಡೆಯಾದ ದಶಕಗಳ ಕಾಲ ಈ ಪರಿಸರದಲ್ಲೇ ಇರುತ್ತವೆ. ಈ ಕಾಲಾವಧಿಯಲ್ಲಿ ಅವು ತುಂಬಾ ದೂರ ಚಲಿಸಬಹುದು. ಅದರಲ್ಲೂ ಕೆಲವು ಪಿಓಪಿಗಳು ಈ ಬಗೆಯ ಚಲನಶೀಲತೆಯನ್ನು ಜನ್ಮತಃ ಹೊಂದಿವೆ. ಆದ್ದರಿಂದ ಇವು ಭಾರೀ ದೂರ ಕ್ರಮಿಸುವ ಸಾಧ್ಯತೆ ಸಹಜವೇ.  ಉಷ್ಣವಲಯದ ತಾಪಮಾನಕ್ಕೆ ಕೆಲವು ಪಿಓಪಿಗಳು ಆವಿಯಾಗುತ್ತವೆ. ಕೆಲವು ತಣ್ಣಗಿನ ಮೇಲ್‌ಭೂಮಿಯಲ್ಲಿ ಸಾಂದ್ರಗೊಳ್ಳುತ್ತವೆ. ಆದ್ದರಿಂದ್ಲೇ ಅವು ಧ್ರುವಪ್ರದೇಶದ ಸುತ್ತಮುತ್ತ ಸಾಂದ್ರಗೊಂಡಿರೋದನ್ನು ಕಾಣಬಹುದು. ಪಿಓಪಿಗಳನ್ನು ವಸ್ತುಶಃ ವಿಶ್ವದ ಎಲ್ಲಾ ಭಾಗಗಳಲ್ಲಿಯೂ ಕಾಣಬಹುದು. ಭಗವಂತ ಹೇಗೆ ಅಣುರೇಣು ತೃಣಕಾಷ್ಠದಲ್ಲಿ ಇದಾನೋ, ಅಲ್ಲೆಲ್ಲ ಪಿಓಪಿಗಳು ಸೇರಿಕೊಂಡಿವೆ ಎಂಬ ಬಣ್ಣನೆ ವಾಸ್ತವವಾದದ್ದು!

ಪಿಓಪಿಗಳು ಉಷ್ಣವಲಯದ ಮರದ ತೊಗಟೆಗಳಲ್ಲಿವೆ. ಉತ್ತರ ಶಾಂತಿಸಾಗರದ ತಿಮಿಂಗಿಲಗಳ ಮೇದಸ್ಸಿನಲ್ಲಿವೆ. ನಮ್ಮ ಮೇಲಣ ವಾಯುಮಂಡಲದಲ್ಲಿವೆ. ಕೊಬ್ಬು ಕರಗೋದಿಲ್ಲ ಅಂತ ನೀವು ಹೇಳಬಹುದು; ಆದ್ರೆ ಈ ಪಿಓಪಿಗಳು ಕೊಬ್ಬಿನಲ್ಲಿ ಕರಗುತ್ತವೆ. ಅವುಗಳು ಜೀವಿಗಳ ಅಂಗಾಂಶಗಳಲ್ಲಿ ಆರಾಮಾಗಿ ಸೇರಿಕೊಳ್ಳುತ್ತವೆ. ಇದನ್ನು ಬಯೋ ಅಕ್ಯುಮುಲೇಶನ್ ಎಂದು ಕರೆಯುತ್ತಾರೆ. ಇದನ್ನು ಸಾಂದ್ರೀಕರಣದ ಪಾರಿಸರಿಕ ಪ್ರಕ್ರಿಯೆ  ಎಂದೂ ಕರೆಯುತ್ತಾರೆ. ಆಹಾರ ಸರಪಣಿಯಲ್ಲಿ ಮೇಲೆ ಹೋದಂತೆ ಈ ಆಕ್ರಮಣಕಾರಿ ರಾಸಾಯನಿಕಗಳು ಹೆಚ್ಚು ಹೆಚ್ಚು ಸಾಂದ್ರವಾಗುತ್ತಾ ಹೋಗುತ್ತವೆ.

ಸೀಗಡಿಗಳನ್ನು ತಿನ್ನುವ ಮೀನುಗಳ ಮೂಲಕ ಪಿಸಿಬಿ (ಪಾಲಿಕ್ಲೋರಿನೇಟೆಡ್ ಬೈಫಿನೈಲ್ಸ್) ಎಂಬ ವಿಷ ನಿಮ್ಮ ಹೊಟ್ಟೆಸೇರಿಕೊಂಡರೆ, ಕೆಂಪು ಮಾಂಸ, ಐಸ್ ಕ್ರೀಮ್ ತಿನ್ನುವುದರಿಂದ ಡಯಾಕ್ಸಿನ್ ಸದ್ದಿಲ್ಲದೆ ನಿಮ್ಮ ಜಠರದೊಳಕ್ಕೆ ಇಳಿದು ಶರೀರವಾಸಿಯಾಗುತ್ತದೆ.

 

O: ಓ ಎಂದರೆ ಆರ್ಗಾನಿಕ್

ಹೌದು. ಇವು ಆರ್ಗಾನಿಕ್ ಅಂದರೆ ಇಂಗಾಲ ಆಧಾರದ ಸಂಯುಕ್ತಗಳು. ಪ್ರೋಟೀನುಗಳು ಮತ್ತು ಕಾರ್ಬೋಹೈಡ್ರೇಟ್‌ಗಳೂ ಇಂಥ ಆರ್ಗಾನಿಕ್ಗಳೇ. ಇವುಗಳಲ್ಲಿ ಇಂಗಾಲವಲ್ಲದೆ ಆಮ್ಲಜನಕ ಮತ್ತು ಜಲಜನಕಗಳು ಇರುತ್ತವೆ. ಆದರೆ ಪಿಓಪಿಗಳಲ್ಲಿ ಈ ರಾಸಾಯನಿಕಗಳ ಜೊತೆಗೆ ಕ್ಲೋರಿನ್ ಕೂಡಾ ಸೇರಿಕೊಂಡಿರುತ್ತದೆ. ಹಾಗಂತ ಕೃತಕವಾಗಿ ತಯಾರಿಸಿದ ಎಲ್ಲ ರಾಸಾಯನಿಕಗಳೂ ಸಾವಯವ ಆಗಿರೋದಿಲ್ಲ ಅನ್ನೋದನ್ನೂ ನೆನಪಿಡಬೇಕು. ಉದಾಹರಣೆಗೆ ಗಂಧಕಾಮ್ಲ. ಆಫ್‌ಕೋಸ್ ಗಂಧಕಾಮ್ಲವು ನೈಸರ್ಗಿಕವಾಗಿಯೂ ಸಿಗುತ್ತದೆ.

ಈವರೆಗೆ ಮನುಷ್ಯನಿಗೆ ಒಂದು ಲಕ್ಷಕ್ಕೂ ಹೆಚ್ಚು ನಿರಯವ (ಇನಾರ್ಗಾನಿಕ್) ರಾಸಾಯನಿಕಗಳ ಪರಿಚಯವಿದೆ. ಆದರೆ ಸಾವಯವ ರಾಸಾಯನಿಕಗಳ ಸಂಖ್ಯೆ ಲಕ್ಷಗಟ್ಟಳೆ ಇದೆ.

 

P: ಪಿ ಅಂದ್ರೆ ಪೊಲ್ಯುಟೆಂಟ್

ಈ ಮೂರನೇ ಪಿ ಅಂದ್ರೆ ಪೊಲ್ಯುಟೆಂಟ್ ಅಂತ. ಅಂದ್ರೆ ಇವು ಮಾಲಿನ್ಯಕಾರಕಗಳು. ಪಿಓಪಿಗಳು ಹೇಗೆ ವಿಷಕಾರಿ ಎಂಬ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಪಿಓಪಿಗಳು ನಮ್ಮ ದೇಹದ ನಿರ್ನಾಳ ಗ್ರಂಥಿಯ ವ್ಯವಸ್ಥೆಯನ್ನೇ ಹಾಳುಗೆಡುಹಬಹುದು. ಕೆಲವು ಗರ್ಭಕೋಶವನ್ನೇ ಪ್ರವೇಶಿಸುತ್ತವೆ. ಟಿಸಿಡಿಡಿ ಎಂಬ ಡಯಾಕ್ಸಿನ್‌ಗೆ ಸಂತಾನೋತ್ಪತ್ತಿಯನ್ನೇ ನಾಶಮಾಡುವ ಸಾಮರ್ಥ್ಯ ಇದೆ. ಅಲ್ಲದೆ ಈ ಪಿಓಪಿಗಳು ನಿಡುಗಾಲೀನ ವಿಷಕಾರಿಗಳು. ಅಂದರೆ? ಅಂದರೆ ಇವುಗಳ ದುಷ್ಪರಿಣಾಮ ತಕ್ಷಣಕ್ಕೆ ಅರಿವಾಗುವುದಿಲ್ಲ. ಕ್ರಮೇಣ ವಿಷ ಹರಡಿ ದೇಹವನ್ನು ಶಿಥಿಲಗೊಳಿಸುತ್ತದೆ.

ಈಗ ಗೊತ್ತಾಯ್ತಲ್ಲ, ಪಿಓಪಿಗಳು ಎಂಥ ಮಾರಕ…. ಎಷ್ಟೆಲ್ಲ ಅನಾಹುತಗಳಿಗೆ ಕಾರಣವಾಗಬಹುದು ಎಂದು. ಅದಕ್ಕೇ ಸ್ಟಾಕ್‌ಹೋಮ್ ಕನ್‌ವೆನ್‌ಶನ್ ಎಂಬ ಸಮಾವೇಶವನ್ನು ಈ ಪಿಓಪಿಗಳ ನಿವಾರಣೆಗೆಂದೇ ಸ್ಥಾಪಿಸಲಾಗಿದೆ. ಇದರಲ್ಲಿ ಪಿಓಪಿಗಳ ಕುರಿತಾಗಿಯೇ ಇಂದು ಪರಾಮರ್ಶನಾ ಸಮಿತಿ ಇದೆ. ಈ ಸಮಿತಿಯ ಸಭೆ ಇತ್ತೀಚೆಗೆ, ಅಕ್ಟೋಬರ್ ೧೧ರಿಂದ ೧೫ರವರೆಗೆ ನಡೆಯಿತು. ಈ ಸಮಾವೇಶದಲ್ಲಿ ಭಾರತದ ಕಂಟಕಪ್ರಾಯ ವಿಷ ಎಂಡೋಸಲ್ಫಾನ್‌ನ್ನು ನಿಷೇಧಿಸುವ ಕರೆ ನೀಡಿದರೆ, ಭಾರತವೇ ಈ ಸಭೆಯಲ್ಲಿ `ಎಂಡೋಸಲ್ಫಾನ್ ನಿಷೇಧ ಮಾಡಲಾಗದು’ ಎಂದು ತಿಳಿಸಿತು. ಅದರೆ ಕಥೆ ಇನ್ನೂ ಘೋರ. ಈಗಾಗಲೇ ಎಂಡೋಸಲ್ಫಾನ್ ಅಪಾಯದ ಬಗ್ಗೆ ಮಿತ್ರಮಾಧ್ಯಮದಲ್ಲಿ ಬಂದ ಲೇಖನವನ್ನು ನೀವು ಓದಿದರೆ ಎಂಡೋಸಲ್ಫಾನ್‌ನ ರಕ್ಕಸರೂಪ ನಿಮಗೆ ಗೊತ್ತಾದೀತು. ಅಂದಹಾಗೆ ಎಂಡೋಸಲ್ಫಾನ್‌ನಲ್ಲಿ ಪಿಓಪಿಗಳಲ್ಲಿ ಇರುವ `ಹೆಕ್ಸಾಕ್ಲೋರೋ’ ರಾಸಾಯನಿಕದ ಘಟಕವಿದೆ. ಆದ್ದರಿಂದಲೇ ಇದೂ ಪಿಓಪಿ. (ಪಿಓಪಿ ಪಟ್ಟಿಯಲ್ಲಿ ಇರುವ ೧೨ ಪ್ಲಸ್ ೯ ವಿಷಗಳ ಯಾವುದೇ ಅಂಶವಿದ್ದರೂ ರಾಸಾಯನಿಕವು ಪಿಓಪಿ ಎಂದೇ ಪರಿಗಣಿತ).

ಹೀಗೆ ಪಿಓಪಿಗಳ ಸಂಖ್ಯೆ ಬೆಳೀತಾ ಇದೆ. ಪ್ರಪಂಚದಲ್ಲಿ ಇಂದು ಒಂದು ಲಕ್ಷಕ್ಕೂ ಹೆಚ್ಚು ಬಗೆಯ ರಾಸಾಯನಿಕಗಳನ್ನು ಕೃತಕವಾಗಿ ತಯಾರಿಸಿ ಬಳಸ್ತಾ ಇದಾರೆ. ಹತ್ತು ವರ್ಷಗಳ ಹಿಂದೆಯೇ ವಾರ್ಷಿಕ ಸರಾಸರಿ ಒಂದು ಸಾವಿರ ಹೊಸ ರಾಸಾಯನಿಕಗಳು ಮಾರುಕಟ್ಟೆಗೆ ಬರ್‍ತಾ ಇದ್ದವು. ಇವುಗಳಲ್ಲಿ ಬಹಳಷ್ಟು ರಾಸಾಯನಿಕಗಳು ದುಷ್ಪರಿಣಾಮ ಉಂಟುಮಾಡುವುದಿಲ್ಲ. ಆದರೆ ಕೆಲವೇ ರಾಸಾಯನಿಕಗಳ ಪ್ರತಿ ಅಣುವೂ ತೀವ್ರ ವಿಷಕಾರಿ. ಅವುಗಳು ಪ್ರಪಂಚದೆಲ್ಲೆಡೆ ಹರಡಿಕೊಂಡರೆ ಅಪಾಯ ನಿಶ್ಚಿತ. ಕಾಗದ ಉತ್ಪಾದನೆ, ಕೀಟನಾಶಕಗಳ ತಯಾರಿಕೆ ಮತ್ತು ಪಿವಿಸಿ ಪೈಪುಗಳ ತಯಾರಿಯಲ್ಲಿ ಈ ರಾಸಾಯನಿಕಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿವೆ (ಪರಿಸರ ರಕ್ಷಣೆಯ ಚಿಂತನೆಯ ಲೇಖನಗಳನ್ನು ಹೊತ್ತ, ರಾಸಾಯನಿಕಗಳ ಅಪಾಯದ ಬಗ್ಗೆ ಮನವರಿಕೆ ಮಆಡಿಕೊಡುವ ಸಾವಿರಾರು ಪುಸ್ತಕಗಳು – ನನ್ನ ಅನುವಾದಿತ ಪುಸ್ತಕವನ್ನೂ ಸೇರಿಸಿಕೊಂಡು – ಮಾಲಿನ್ಯದ ಭಯಂಕರ ರಾಡಿಯನ್ನೇ ಹಬ್ಬಿಸಿರಬಹುದು ಎಂದು ಈಗ ನೀವು ಅಂದಾಜು ಮಾಡಬಹುದು). ಆದ್ದರಿಂದ ಸಮುದ್ರದಲ್ಲಿ ತೈಲ ಸೋರಿದ್ದೇ ಮಾಲಿನ್ಯ, ಸಾಗರದಾಳದ ತೈಲವು ನಿಯಂತ್ರಣಕ್ಕೆ ಬಾರದೇ ಚಿಮ್ಮಿದ್ದೇ ಪಾರಿಸರಿಕ ದುರಂತ, ಮರಗಳನ್ನು ಕಡಿದಿದ್ದು ಕಂಡರೆ ಮಾತ್ರ ಕಾಡಿನ ನಷ್ಟ – ಎಂದೆಲ್ಲ ಭ್ರಮೆ ಬೇಡ. ಪ್ರತಿನಿತ್ಯವೂ ನಾವು ಬಳಸುವ ಎಲ್ಲ ವಸ್ತುಗಳಲ್ಲೂ ವಿಷವಿದೆ. ಊಟದ ಬಟ್ಟಲಲ್ಲೂ ವಿಷವಿದೆ ಎಂದು ವೈದ್ಯರೆಲ್ಲ ಈಗಾಗಲೇ ತೋರಿಸಿದ್ದಾರೆ.

ಈ ಕೀಟನಾಶಕಗಳಿಂದ ಕೀಟಗಳ ಸಂಖ್ಯೆ ಕಡಿಮೆಯಾಯಿತೆ?

ಇಲ್ಲಿ ಎರಡು ಗ್ರಾಫ್‌ಗಳಿವೆ. ಮೊದಲನೇದು ಕೀಟನಾಶಕಗಳ ಉತ್ಪಾದನೆ ವಿವರ. ಎರಡನೇದು ಕೀಟಗಳ ಸಂಖ್ಯೆಯ ಹೆಚ್ಚಳ. ಗ್ರಾಫ್ ನೋಡಿ ನೀವೇ ನಿರ್ಧರಿಸಿ!

ಹೆಚ್ಚುವರಿ ಮಾಹಿತಿಗೆ

 

 

Share.
Exit mobile version