ವೆಂಕಟೇಶ್‌ಕುಮಾರ್ ಹಿಂದುಸ್ತಾನಿ ಗಾಯನವನ್ನು ಕೇಳುತ್ತ ಕೇಳುತ್ತ ನೀವೂ ಮೈ ಮರೆಯುತ್ತೀರಿ. ಮಾಧುರ್ಯ, ಭಾವ, ಲಯ, ಎಲ್ಲವನ್ನೂ ಹದವಾಗಿ ಮಿಳಿತಗೊಳಿಸಿ ಮಂದ್ರದಿಂದ ತಾರಕಕ್ಕೆ ಏರುಹಾದಿಯಲ್ಲಿ ಸಲೀಸಾಗಿ ಜಾರಿ ಹಾಗೇ ಗೊತ್ತಾಗದಂತೆ ಮೆಲುವಾಗಿ ಇಳಿದು ನಿಮ್ಮನ್ನು ಮುದಗೊಳಿಸುತ್ತ ಹೋಗುತ್ತಾರೆ. ಅವರ ಮಾಲ್‌ಕೌಂಸ್ ಕೇಳುತ್ತಲೇ ನನ್ನ ಪ್ರವಾಸದಲ್ಲಿ ಸಂಗ್ರಹಿಸಿದ ಪುಸ್ತಕಗಳ ಬಗ್ಗೆ ಕಿರುಟಿಪ್ಪಣಿಯನ್ನು ಬರೆಯುತ್ತಿದ್ದೇನೆ. ಸುಂದರ ವದನ ಕೇ ಎಂದು ವೆಂಕಟೇಶ್ ಕುಮಾರ್ ಹಾಡುತ್ತಿದ್ದಂತೆ ನನಗೆ ಕೊಡಚಾದ್ರಿಯ ರುದ್ರರಮಣೀಯ ದೃಶ್ಯಗಳು, ಕುದುರೆಮುಖದ ಹಾದಿಯಲ್ಲಿ ಕಂಡ ಸಾಲು ಸಾಲು ಗಿರಿಶ್ರೇಣಿಗಳು ನೆನಪಾಗುತ್ತಿವೆ.
ದೈತೋಟದಲ್ಲಿ ಜಯಚಿಕ್ಕಿ ಕೊಟ್ಟ ಪುಸ್ತಕಗಳು ನಿಜಕ್ಕೂ ನನ್ನ ಮನಸ್ಸಿಗೆ ಹಿಡಿಸಿವೆ. ದೇಹಕ್ಕೆ ಹಿಡಿಸಬೇಕಷ್ಟೆ! ಯಾಕೆಂದರೆ ಅವರ ಪುಸ್ತಕಗಳೆಲ್ಲ ದೇಹದ ಆರೋಗ್ಯದ ಬಗ್ಗೆಯೇ ಇವೆ. ಮೊದಲನೆಯದು ಡಾ. ಸಾವಿತ್ರಿ ದೈತೋಟ ಬರೆದ `ಅನುಭೂತ ಯೋಗ ಸಂಗ್ರಹ : ಸುಲಭ ಚಿಕಿತ್ಸೆ’ ಎಂಬ ಸಾಮಾನ್ಯ ರೋಗ ರುಜಿನಗಳಿಗೆ ಸುಲಭದಲ್ಲಿ ಸಿಗುವ ಮೂಲಿಕೆ ಚಿಕಿತ್ಸೆಗಳನ್ನು ವಿವರಿಸುವ ೮೮ ಪುಟಗಳ ಪುಸ್ತಕ. ಎರಡನೆಯದು : `ಅನ್ನ – ಆರೋಗ್ಯ – ಔಷಧ’ ಎಂಬ ಜಯಲಕ್ಷ್ಮೀ ಮತ್ತು ವೆಂಕಟ್ರಾಮ ದೈತೋಟ ಬರೆದ ಊಟ ಮಾಡುವುದು ಹೇಗೆ ಎಂಬ ವಿವರಗಳನ್ನು ಒಳಗೊಂಡ ೮೦ ಪುಟಗಳ ಪುಸ್ತಕ. ಈ ಜಯಲಕ್ಷ್ಮಿಯೇ ನನ್ನ ಜಯ ಚಿಕ್ಕಿ.
ಜಯ ಚಿಕ್ಕಿ ಎಂದರೆ ನನ್ನ ಅಜ್ಜಿಯ ತಂಗಿಯ ಮಗಳು. ಅವಳು ೧೯೭೦ರಲ್ಲಿ ವೆಂಕಟ್ರಾಮ ದೈತೋಟರನ್ನು ಮದುವೆಯಾದಾಗ ನಾನು ಐದು ವರ್ಷದ ಮಾಣಿ. ಆಗ ನಾನು ದೈತೋಟಕ್ಕೆ ಹೋಗಿದ್ದು, ಅಲ್ಲಿ ಮಂಜಟ್ಟಿ ಮಣಿಯನ್ನು ಆರಿಸಿಕೊಂಡು ಬಂದಿದ್ದು, ದಾರಿಯಲ್ಲಿ ಒಂದು ಹೊಳೆಯನ್ನು ದಾಟಿದ್ದು – ಎಲ್ಲವೂ ನೆನಪಿವೆ. ವೆಂಕಟ್ರಾಮ ದೈತೋಟ ಎಂದರೆ ನಾಡಿನ ಟಾಪ್ ರೇಟೆಡ್ ಆಯುರ್ವೇದ ಪರಿಣತರು; ಸಸ್ಯಜ್ಞಾನಿ. `ಅಡಿಕೆ ಪತ್ರಿಕೆ’ಯಲ್ಲಿ ಅವರು ಬರೆಯುತ್ತಿರುವ `ಮನೆಮದ್ದು’ ಕನ್ನಡದ ಅತಿ ಜನಪ್ರಿಯ ಅಂಕಣಗಳಲ್ಲೊಂದು.
ಈ ಪುಸ್ತಕದಲ್ಲಿ ದೈತೋಟ ವೈದ್ಯಪರಂಪರೆಯ ಕಿರುಪರಿಚಯವೂ ಇದೆ; ಹಾಗಂತ ಜಯಚಿಕ್ಕಿ ಮತ್ತು ವೆಂಕಟ್ರಾಮ ದೈತೋಟರು ತಮ್ಮ ಪರಿಚಯವನ್ನು ಇಲ್ಲಿ ಹೇಳಿಕೊಂಡಿಲ್ಲ.
ಜಯಚಿಕ್ಕಿ ಕೊಟ್ಟ ಇನ್ನೊಂದು ಪುಸ್ತಕ `ಪಾಣಾಜೆ ಪಂಡಿತರ ಅಜ್ಜಿಮದ್ದು’. ದೇಹದ ವಿವಿಧ ಅಂಗಗಳ ಆರೋಗ್ಯ ರಕ್ಷಣೆಯ ಕಿವಿಮಾತುಗಳು ಈ ಪುಸ್ತಕದಲ್ಲಿವೆ. ಹೆಸರೇ ಹೇಳುವಂತೆ ಇವೆಲ್ಲವೂ ಪಾಣಾಜೆಯ ಪಂಡಿತರ ಅನುಭವ ದ್ರವ್ಯವನ್ನು ಆಧರಿಸಿವೆ. ಜಯಚಿಕ್ಕಿ ನನಗೆ ಪಾಣಾಜೆ ವೈದ್ಯ ಶಂಕರನಾರಾಯಣಭಟ್ಟ ಬರೆದ `ಮಧುದೀಪಿಕಾ’ ಎಂಬ ಜೇನು ಆಧಾರಿಕ ಚಿಕಿತ್ಸೆಯ ವಿವರಗಳಿರುವ ಪುಸ್ತಕವನ್ನು ಕೊಟ್ಟಿದ್ದಾರೆ. ಈ ಪುಸ್ತಕದ ಮೊದಲ ಆವೃತ್ತಿ ಪ್ರಕಟವಾಗಿದ್ದೇ ೧೯೪೮ರಲ್ಲಿ.
ಮೇಲೆ ಉಲ್ಲೇಖಿಸಿದ ಪುಸ್ತಕಗಳು ಈ ಕೆಳಗಿನ ವಿಳಾಸದಲ್ಲಿ ಸಿಗುತ್ತವೆ: ಆಯುರ್ವೇದ ಪ್ರಕಾಶನ, ಅಬ್ಬೆ ಕೊಟ್ಟಗೆ, ದೈತೋಟ, ಪಾಣಾಜೆ, ದಕ್ಷಿಣ ಕನ್ನಡ, ಪಿನ್ ಕೋಡ್: ೫೭೪೨೫೯. ದಊರವಾಣಿ: ೦೮೨೫೧ ೨೮೭೨೨೯ ಈ ಮೈಲ್: abbecottage@yahoo.com
ನಿಮಗೆ `ಅರಿವಿರಲಿ ಆಯುರ್ವೇದ’ ಎಂಬ ಮೂರು ತಿಂಗಳುಗಳ ಅಂಚೆ/ ಆನ್‌ಲೈನ್ ಶಿಕ್ಷಣವನ್ನೂ ಪಡೆಯುವ ಆಸಕ್ತಿ ಇದ್ದರೆ ಮೇಲಿನ ವಿಳಾಸವನ್ನು ಸಂಪರ್ಕಿಸಿ.
ಚಿಕ್ಕಪ್ಪನ ನಿಧನ:
ಕಣ್ಮರೆಯಾದ ಕಾನನದ ಮಲ್ಲಿಗೆ : ಸಸ್ಯಲೋಕ – ದೇಸಿ ಪರಂಪರೆಯ ಮೇರು ವ್ಯಕ್ತಿತ್ವ
……………………………………
ಗಿಡಮೂಲಿಕೆಗಳ ಮೇರು ತಜ್ಞ, ಪಾಣಾಜೆ ಪರಂಪರೆಯ ಹಿರಿಯ ಆಯುರ್ವೇದ ಪಂಡಿತ ಶ್ರೀ ವೆಂಕಟ್ರಾಮ ದೈತೋಟರ ನಿಧನವು (೨೧ ಜುಲೈ ೨೦೧೭) ನಮ್ಮ ಪಾರಂಪರಿಕ ಜ್ಞಾನ ಪರಂಪರೆಗೆ ಆದ ಅಪಾರ ನಷ್ಟ. ಅವರ ನಿಧನದ ಶೋಕವನ್ನು ಭರಿಸುವ ಶಕ್ತಿಯನ್ನು ಅವರ ಪತ್ನಿ ಶ್ರೀಮತಿ ಜಯಲಕ್ಷ್ಮಿಯವರಿಗೆ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
1 Comment
ವೆಂಕಟರಾಮ ದೈತೋಟ ಜಯಲಕ್ಷ್ಮಿ ದೈತೋಟ ಅವರಂತಹ ದೇವತಾ ವ್ಯಕ್ತಿಗಳ ಆಶೀರ್ವಾದಗಳಿಂದ ಮಾರ್ಗದರ್ಷನಗಳಿಂದ ನಾನು ಅವರನ್ನು ಕಾಯಾ ವಾಚಾ ಮನಸಾ ಗುರುಗಳಾಗಿ ಸ್ವೀಕರಿಸಿ ಆಯುರ್ವೇದದ ಉಪಸಕನಾಗಿದ್ದೇನೆ .ಈ ಬರಹ ಶ್ಲಾಘನೀಯ ಕಾರ್ಯ .ಅವರ ಬಗ್ಗೆ ಎಷ್ಟು ಬರೆದರೂ ಸಾಲದು .ಇನ್ನೂ ಇಂತಹ ಬರಹಗಳು ಬರಲಿ .ಧನ್ಯವಾದಂಗಳು