ಆಫ್ರಿಕಾ ಖಂಡವನ್ನು ಈಗ ಕತ್ತಲಿನ ಖಂಡ ಎಂದು ಕರೆಯುವುದೇ ತಪ್ಪು. ಎಂತೆಂಥ ಲೇಖಕರು, ಕಥೆಗಾರರು ಅಲ್ಲೀಗ ಮೂಡಿದ್ದಾರೆ. ಹೆಚ್ಚಾಗಿ ಪಾಶ್ಚಾತ್ಯ ಇಂಗ್ಲಿಶ್ ಸಾಹಿತ್ಯವನ್ನೇ ಓದುವ ನಾವು ಪೂರ್ವದೇಶಗಳ, ಆಫ್ರಿಕಾದ ಸಾಹಿತ್ಯವನ್ನು ಓದುವುದು ಅಪರೂಪವೇ. ನಾನಂತೂ ಆಫ್ರಿಕಾದ ಸಾಹಿತ್ಯವನ್ನು ಓದಿಯೇ ಇಲ್ಲ . ಅಚಾನಕವಾಗಿ ಪುಸ್ತಕದ ಅಂಗಡಿಯಲ್ಲಿ ಒಳ್ಳೆಯ ಕವರ್‌ಪೇಜ್ ಇದೆಯಲ್ಲ ಎಂದು ಅದೀಚೆಯ ಕಥಾ ಸಂಕಲನ ಖರೀದಿಸಿದೆ. ಕತೆಗಳನ್ನು ಓದಿದ ಮೇಲೆ ಕವರ್‍ಪೇಜ್ ಅಲ್ಲ, ಇಡೀ ಪುಸ್ತಕವೇ ಎಷ್ಟು ಚೆನ್ನಾಗಿದೆ ಎಂಬ ಭಾವ ತುಂಬಿಕೊಂಡಿತು. ಒಂದು ತಿಂಗಳಿಡೀ ಅದೀಚೆ ಪ್ರಭಾವದಲ್ಲೇ ಇದ್ದೆ!
`ದಿ ಥಿಂಗ್ ಅರೌಂಡ್ ಯುವರ್ ನೆಕ್’ ಎಂಬ ಈ ಕಥಾ ಸಂಕಲನದಲ್ಲಿ ಇರುವುದು ಕೇವಲ ಹನ್ನೆರಡು ಕತೆಗಳು. ಎಲ್ಲ ಕತೆಗಳಿಗೂ ನೈಜೀರಿಯಾದ ಸಂಸ್ಕೃತಿಯೇ ಆಧಾರ. ಈ ಕತೆಗಳಿಗೂ ಭಾರತದ ಸನ್ನಿವೇಶಗಳಿಗೂ ತುಂಬಾ ಸಾಮ್ಯಗಳಿವೆ ಎಂದು ನನಗೆ ಪದೇ ಪದೇ ಅನ್ನಿಸಿತು. ಕುಟುಂಬ ವ್ಯವಸ್ಥೆ, ಸಂಪ್ರದಾಯ, ಸಂಬಂಧಗಳು, ಭಾವನೆಗಳು, ಸಾಂಸ್ಕೃತಿಕ ದಾಳಿ, ನಾಗರಿಕತೆ ತಂದ ಬದಲಾವಣೆಗಳು – ಹೀಗೆ ಅದೀಚೆ ಹೇಳುವುದೆಲ್ಲ ಭಾರತಕ್ಕೂ ಪಕ್ಕಾ ಅನ್ವಯವಾಗುತ್ತವೆ. `ಜಂಪಿಂಗ್ ಮಂಕಿ ಹಿಲ್’ ಎಂಬುದೊಂದು ಸಾಹಿತ್ಯ ಮತ್ತು ಸಂಕೇತಗಳ ಹಂದರದ ಕತೆಯಾಗಿ ಕೊಂಚ ಸಂಕೀರ್ಣ ಎನ್ನಿಸಿತು. ಉಳಿದಂತೆ ಎಲ್ಲ ಕತೆಗಳೂ ನನಗೆ ಒಂದು ಸಂಸ್ಕೃತಿಯನ್ನೇ ಅಲ್ಪಸ್ವಲ್ಪವಾದರೂ ಅರಿತ ಭಾವವನ್ನು ಕೊಟ್ಟವು.
ನನಗೆ ಇಡೀ ಪುಸ್ತಕದಲ್ಲಿ ತುಂಬಾ ಖುಷಿ ಕೊಟ್ಟ ಕತೆಯೆಂದರೆ `ದಿ ಹೆಡ್‌ಸ್ಟ್ರಾಂಗ್ ಹಿಸ್ಟೋರಿಯನ್.’ ಈ ಕತೆಯನ್ನು ಓದುತ್ತ ನನಗೆ ಪರಂಪರೆಯ ಕೊಂಡಿಗಳೆಲ್ಲ ಹೇಗೆ ಕಳಚಿಹೋಗುತ್ತವೆ, ಬದಲಾವಣೆ ಎನ್ನುವುದು ಹೇಗೆ ಬಿರುಗಾಳಿಯಂತೆ ಒಂದು ಸಂಸ್ಕೃತಿಯನ್ನು ಆವರಿಸುತ್ತದೆ ಎಂದು ಸರಳವಾಗಿ ಹೇಳುವ ಈ ಕತೆಯಲ್ಲಿ ಕೊನೆಗೆ ಅಭ್ಯುದಯದ ಹೊಸ ದಿಕ್ಕೂ ಕಾಣುತ್ತದೆ. `ದಿ ಶಿವರಿಂಗ್’ ಕತೆಯಂತೂ ಸೂಕ್ಷ್ಮ ಸಂವೇದನೆಗಳನ್ನು ಕಟ್ಟಿಕೊಡುತ್ತದೆ. ವೃದ್ಧರ ಸನ್ನಿವೇಶಗಳನ್ನು ಒಂದು ಕನಸಿನಂತೆ ಬಿಚ್ಚಿಡುವ `ಘೋಸ್ಟ್ಸ್’ , ನೈಜೀರಿಯಾದಲ್ಲಿ ನಡೆದ ವಿಮಾನ ಪತನವು ಅಮೆರಿಕಾದ ಯುವತಿಗೆ ತಂದ ತಳಮಳದಿಂದ ಆರಂಭವಾಗುವ `ದಿ ಶಿವರಿಂಗ್’, – ನನಗೆ ಇಷ್ಟವಾದ ಇನ್ನಿತರೆ ಕತೆಗಳು. ಉಳಿದ ಕತೆಗಳೂ ತುಂಬಾನೇ ಚೆನ್ನಾಗಿ ಓದಿಸಿಕೊಂಡು ಹೋಗುತ್ತವೆ.
ಅದೀಚೆಯವರ ಶೈಲಿಯ ಹೆಚ್ಚುಗಾರಿಕೆ ಎಂದರೆ ನವಿರಾದ ಭಾವಗಳನ್ನು ಹಾಗೆಯೇ ತಟ್ಟುವಂತೆ ವಿವರಿಸಲು ಕಡಿಮೆ ಪದಗಳನ್ನು ಬಳಸುವುದು; ಬೇಕಾದಾಗ ಸಂಭಾಷಣೆಗಳ ಮೂಲಕ ಘಟನೆಯು ನಿಧಾನವಾಗಿ ಹರಿದರೆ, ಕೆಲವೊಮ್ಮೆ ಕಾಲಪ್ರವಾಹದಲ್ಲಿ ಕೊಚ್ಚಿಹೋದ ಘಟನೆಗಳೆಲ್ಲವೂ ಒಂದೇ ಪ್ಯಾರಾದಲ್ಲಿ ಬರುತ್ತವೆ. ಇದೆಲ್ಲವನ್ನೂ ಸಮಪ್ರಮಾಣದಲ್ಲಿ ಬೆರೆಸಿ ಹದವರಿತು ನೀಡುವ ಕಲೆ ಅದೀಚೆಯವರಿಗೆ ಸಿದ್ಧಿಸಿದೆ.
ಅದೀಚೆಯ ಮೊದಲ ಪುಸ್ತಕ `ಪರ್ಪಲ್ ಹೈಬಿಸ್ಕಸ್ ‘ ಎಂಬ ಕಾದಂಬರಿ. ಅವರು ಬರೆದ `ಹಾಫ್ ಆಫ್ ಯೆಲ್ಲೋ ಸನ್’ಗೆ ಹಲವು ಬಹುಮಾನಗಳು ಬಂದಿವೆ. ಈ ಕಾದಂಬರಿಯೀಗ ಮೂವತ್ತು ಭಾಷೆಗಳಿಗೆ ಅನುವಾದಗೊಂಡಿದೆ. ಇತ್ತೀಚೆಗಷ್ಟೆ ಅದೀಚೆಯವರು ಕಾಮನ್‌ವೆಲ್ತ್ ವೇದಿಕೆಯಲ್ಲಿ ತನ್ನ ಬರವಣಿಗೆ ಕುರಿತು ಒಂದು ಸುದೀರ್ಘ ಭಾಷಣವನ್ನು ನೀಡಿದರು.
[youtube http://www.youtube.com/watch?v=vmsYJDP8g2U?rel=0]