ಬರೆದೇ ಬದುಕಲು ಆಗಲ್ಲ ಕಣೋ…ಭ್ರಮೆಯಲ್ಲಿರಬೇಡ.
ಹಾಗಂತ ಸವಿತಾ (ಈಗ ಸವಿತಾ ನಾಗಭೂಷಣ) ನನಗೆ ಬುದ್ಧಿ ಹೇಳಿ, ಊಟ ಹಾಕಿ ಕಳಿಸಿ ಸುಮಾರು ೩೩ ವರ್ಷಗಳೇ ಕಳೆದಿವೆ. ಈಗ ಫೇಸ್‌ಬುಕ್‌ನಲ್ಲಿ ಸವಿತಾ – ನನ್ನ ಫ್ರೆಂಡ್‌ಶಿಪ್ ಕುರಿತು ಸವಿತಾ ಕಾಮೆಂಟ್ ನೋಡಿದಾಗ, ಹಳೆಯ ನೆನಪುಗಳು ಹಾಗೇ ಮೆದುವಾಗಿ ಹಾದುಹೋದವು.
೧೯೮೩-೮೪ರ ಆ ದಿನಗಳಲ್ಲಿ ನಾನು ನಿಜಕ್ಕೂ ಭ್ರಮೆಯ ಪದರಗಳಲ್ಲೇ ಮುಳುಗಿಹೋಗಿದ್ದೆ. ದಿನಾ ಬೆಳಗಾದರೆ ಸಾಕು ಯಾವ ಮಿತ್ರ/ಮಿತ್ರೆಗೆ ಕಾಗದ ಬರೆಯಬೇಕು, ಯಾರಿಂದ ಕಾಗದ ಬಂತು ಎಂಬ ಲೆಕ್ಕ ಹಾಕಿಕೊಂಡು ಕೂರುತ್ತಿದ್ದೆ. ದಿನವೂ ಗಂಟೆಗಟ್ಟಳೆ ಕಾಗದ ಬರೆಯುತ್ತಿದ್ದೆ. ಈಗಲೂ ಆ ಹಳೆಯ ಪತ್ರಗಳ ಗಂಟು ಅಟ್ಟದಲ್ಲಿ ಆರಾಮಾಗಿ ಕೂತಿದೆ. ಅಂಚೆಯವನು ಎಷ್ಟು ಗಂಟೆ ಎಷ್ಟು ನಿಮಿಷಕ್ಕೆ ಈ ತಿರುವಿಗೆ ಬರುತ್ತಾನೆ ಎಂದು ಹೊಂಚು ಹಾಕಿ ಕಾಯುತ್ತಿದ್ದೆ. ಮುಖ್ಯವಾಗಿ ದಾವಣಗೆರೆಯಲ್ಲಿ ಕಳೆದ ದಿನಗಳು ಕರಾಳವೋ, ನಿರಾಳವೋ, ಈಗಲೂ ಗೊತ್ತಾಗುತ್ತಿಲ್ಲ. ಊಟವೇ ಇರದಿದ್ದರೂ ಇನ್‌ಲ್ಯಾಂಡ್ ಲೆಟರ್ ಖರೀದಿಗೆ ಹಿಂದೆ ಮುಂದೆ ನೋಡುತ್ತಿರಲಿಲ್ಲ.
ಅಂಥ ದಿನಗಳಲ್ಲೇ ನಾನು `ತುಷಾರ’ ಪತ್ರಿಕೆಯ ಚಿತ್ರ ಕವನ ಸ್ಪರ್ಧೆಗೆ ನನ್ನ ಕವನಗಳನ್ನು ಕಳಿಸಿದ್ದೆ. ಮೂರು ತಿಂಗಳುಗಳಲ್ಲಿ ಎರಡು ಸಲ ನನ್ನ ಕವನ ಪ್ರಕಟವಾಗಿ ನನ್ನ ತಲೆ ನನ್ನ ಭುಜದ ಮೇಲೆ ಇರಲಿಲ್ಲ! ಆ ಎರಡು ಕವನಗಳ ನಡುವಣ ಸಂಚಿಕೆಯಲ್ಲಿ ಗೆದ್ದಿದ್ದು ಸವಿತಾ ಬರೆದ ಕವನ.
ಅದಾಗಿ ನಾನು ಆಗ ಶಿವಮೊಗ್ಗ ಅಂಚೆ ಕಚೇರಿಯಲ್ಲಿದ್ದ ಸವಿತಾಗೆ ಕಾಗದ ಬರೆದು ಮಿತ್ರತ್ವ ಬಯಸಿದೆ. ಕೂಡಲೇ ಪತ್ರವೂ ಬಂತು. ಬಹುಶಃ ಎರಡನೇ ಪತ್ರದಲ್ಲೇ ಇರಬೇಕು, ನಾಗಭೂಷಣ ಅನ್ನುವವರ ಜೊತೆಗೆ ವಿವಾಹ ನಿಕ್ಕಿಯಾಗಿದೆ ಎಂದು ಸವಿತಾ ತಿಳಿಸಿದ್ದಳು. ಆ ನಾಗಭೂಷಣ ಮತ್ತಾರೂ ಆಗಿರದೆ, ಏಳನೇ ಕ್ಲಾಸಿನಿಂದ ನನ್ನನ್ನು ಪರವಶಗೊಳಿಸಿದ ಕಂಠ! `ಆಕಾಶವಾಣಿ, ವಾರ್ತೆಗಳು, ಓದುತ್ತಿರುವವರು ಡಿ ಎಸ್ ನಾಗಭೂಷಣ’ ಎಂದು ದಿಲ್ಲಿಯಿಂದ ಪಟಪಟನೆ ಓದುತ್ತಿದ್ದ ನಾಗಭೂಷಣರ ಬಗ್ಗೆ ನನಗೆ ವಿಪರೀತ ಅಭಿಮಾನವಿತ್ತು. (ಆ ಕಾಲದಲ್ಲಿ ವಾರ್ತೆ ಓದುತ್ತಿದ್ದ ಎಲ್ಲರ ಶೈಲಿಯನ್ನೂ – ಚೌಕಟ್ಟಾಗಿ ಓದುವ ರಂಗರಾವ್, ವಿಚಿತ್ರ ಶೈಲಿಯಲ್ಲಿ ಓದುತ್ತಿದ್ದ ಮಧ್ವರಾಜ್, ಎಲ್ಲರನ್ನೂ ನಾನು ಮಿಮಿಕ್ರಿ ಮಾಡುತ್ತಿದ್ದೆ ಅನ್ನಿ).
ಅದಾಗಿ ನಾನು ನನ್ನದೇ ತೊಳಲಾಟಗಳಿಗೆ ಸಿಕ್ಕಿಕೊಂಡ ದಿನಗಳಲ್ಲಿ ೧೯೮೪ರ ಅಕ್ಟೋಬರ್ ತಿಂಗಳಿನ ದಿನಗಳೂ ಇದ್ದವು. ನನ್ನ ಕವನ ಬರೆಯುವ ಹುಚ್ಚು ನೋಡಿ ಭದ್ರಾವತಿ ಆಕಾಶವಾಣಿಯಿಂದ ನನಗೆ ರಾಜ್ಯೋತ್ಸವ ಕಾವ್ಯವಾಚನ ಮಾಡುವುದಕ್ಕೆ ಕರೆ ಬರಲು ಸವಿತಾ ಮಾಡಿದ ಶಿಫಾರಸೇ ಕಾರಣ ಎಂದು ಗೊತ್ತಾಗಿತ್ತು. ಸುಕನ್ಯಾ ಕಳಸ, ಕಣಜನಹಳ್ಳಿ ನಾಗರಾಜ್ ಮುಂತಾದವರ ಜೊತೆಗೆ ನನ್ನದೂ ಒಂದು ಕವನ! ದುರದೃಷ್ಟವಶಾತ್ ಇಂದಿರಾ ಗಾಂಧಿಯವರ ಹತ್ಯೆಯಾಗಿ ನವೆಂಬರ್ ೧ರಂದು ಆ ಕವನಗೋಷ್ಠಿ ಪ್ರಸಾರವಾಗಲೇ ಇಲ್ಲ. ಆಮೇಲೆ ಆಯ್ತು ಅನ್ನಿ. ಕರಕರ ಗಲಾಟೆಯ ನಡುವೆಯೇ ಟ್ರಾನ್ಸಿಸ್ಟರ್ ಹಚ್ಚಿ ಆ ಕವನವನ್ನು ಕೇಳಿದ್ದೇ ಒಂದು ಸಾಹಸ.
ಅದಾದ ಮೇಲೆ ನಾನು ಸವಿತಾಗೆ ಎಷ್ಟೋ ಕಾಗದಗಳನ್ನು ಬರೆದೆ. ಅವಳೂ ಸಾಧ್ಯವಾದ ಮಟ್ಟಿಗೆ ಉತ್ತರಿಸುವ ತಾಪತ್ರಯವನ್ನು ನಿಭಾಯಿಸಿದಳು. ಅವಳ ಪ್ರತೀ ಪತ್ರದಲ್ಲೂ ‘ವಾಸ್ತವದ ಬಗ್ಗೆ ಗಮನ ಕೊಡು ಮಾರಾಯ’ ಎಂಬ ಉಪದೇಶ ಇದ್ದೇ ಇರುತ್ತಿತ್ತು. ಸವಿತಾ ನಾಗಭೂಷಣಳಾದ ಮೇಲೆ ನಾನು ಒಂದೆರಡು ಸಲ ಭದ್ರಾವತಿಗೆ ಹೋಗಿ ಅವರ ಮನೆಯಲ್ಲೇ ಉಳಿದಿದ್ದೂ ಇದೆ. ಆಗಲೂ ನಾಗಭೂಷಣ ಸುಮ್ಮನೆ ನಮ್ಮನ್ನು ನಮ್ಮ ಪಾಡಿಗೆ ಮಾತನಾಡಲು ಬಿಡುತ್ತಿದ್ದರು. ಅಲ್ಲೂ ಸವಿತಾ ಕಾಫಿ ಕೊಡುವಾಗ, ಊಟ ಹಾಕುವಾಗ ಹೇಳುತ್ತಿದ್ದದ್ದು ಒಂದೇ: `ಕವನವನ್ನೇ ಬರಕೊಂಡು ಬದುಕೋಕೆ ಆಗಲ್ಲ ಕಣೋ. ಸ್ವಲ್ಪ ಈ ವಿದ್ಯಾರ್ಥಿ ಸಂಘಟನೆ, ಚಳವಳಿ ಇವನ್ನೆಲ್ಲ ತಲೆಗೆ ಹಚ್ಚಿಕೊಳ್ಳಬೇಡ. ಇಂಜಿನಿಯರಿಂಗ್ ಮುಗಿಸು. ಕೆಲಸ ಹಿಡಿ. ಈ ಥರ ಆದರ್ಶ ಮತ್ತು ಭಾವುಕ ಕನಸುಗಳಲ್ಲೇ ಬದುಕೋದು ಸರಿಯಲ್ಲ.’
ಆಗ ನಾನು ಅವಳ ಮಾತೇಕೆ, ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಮುಂದಿನ ಘಟನೆಗಳು ಹೇಗು ಹೇಗೋ ನಡೆದವು. ಮತ್ತೆ ನನ್ನ ಸವಿತಾ ನಡುವೆ ಸಂವಾದ ಏರ್ಪಟ್ಟಿದ್ದು : ೧೯೮೬ರಲ್ಲಿ. ಸಾಹಿತ್ಯ ಅಕಾಡೆಮಿಯ ೧೯೮೫ರ ಉತ್ತಮ ಕವನಗಳನ್ನು ಸಂಕಲಿಸುವ ಕೆಲಸ ಸವಿತಾಗೆ ಬಂದಿತ್ತು. ಆಕೆ ಆರಿಸಿದ್ದು ನನ್ನ `ಭ್ರಮೆ’ ಎಂಬ ಕವನವನ್ನು! (http://mitramaadhyama.co.in/archives/438). ಭ್ರಮೆ ಕವನದಿಂದಲಾದರೂ ಇವನ ಭ್ರಮೆ ಕಳಚಲಿ ಎಂಬ ಆಸೆ ಇದ್ದೀತೇನೋ!
================================
ಭ್ರಮೆ | ೧೧-೯-೮೫ | ದಾವಣಗೆರೆ
ಬೆಳಗಿನ ಜಾವ ಹುಟ್ಟಿದ ಕವನ
ಬಿಸಿಲು ಕಾಯಿಸುವ ಮುನ್ನ
ಸಂಜೆಯಾಯಿತು.
ಹಕ್ಕಿಗಳು ಗೂಡುಕಟ್ಟಿದವು
ಹುಡುಗಿಯರು ಬೆಚ್ಚಗೆ ಮುಚ್ಚಿಕೊಂಡರು ಆಸೆಗಳನ್ನ
ಅಂಗೈಗನಸುಗಳಿಗೆ ಹುಡುಗರು ಎದೆ ಚಾಚಿದರು
ಮಲಗಿದ ಮೇಲೆ
ನೆನಪು ಮೆತ್ತೆಗಳಲ್ಲಿ
ಮುದುಕ-ಮುದುಕಿಯರೂ ಯೌವನಿಗರಾದರು.
ನಾನು ಮಾತ್ರ
ಕವನಕ್ಕೆ ಪುಟಕೊಡುವ ಕೆಚ್ಚಿನಿಂದ ಉರಿಯುತ್ತಿದ್ದೆ
ರಾತ್ರಿಗಳಲ್ಲಿ ಉಪಮೆಗಳನ್ನರಸುವ
ರಾಜಕುಮಾರನಾಗಿದ್ದೆ
ಹಗಲುಗಳನ್ನು ರಾತ್ರಿಯಲ್ಲಿ ಕೆತ್ತುವ
ಶಿಲ್ಪಿಯಾಗಿದ್ದೆ
ಹಠಾತ್ತನೆ ಬಡಿದ ಮಿಂಚಿಗೆ
ನಾನೂ,
ನನ್ನ ಕವನವೂ –
ಸತ್ತು ಹೋದೆವು.
ಮರುದಿನ ಮತ್ತೆ ಬೆಳಗಾಯಿತೇ
ಹಕ್ಕಿಗಳು, ಹುಡುಗಿಯರು,
……………………….
ಸೂರ್ಯನನ್ನು ಕಂಡರೇ?
ಆಸೆಗಳು ದಕ್ಕಿದವೇ?
ಕನಸುಗಳು ಸಿಕ್ಕಿದವೇ?
ಗೊತ್ತಿಲ್ಲ ನನಗೆ,
ನನ್ನ ಕವನಕ್ಕೆ.
================================
ಹಾಗಾಗಲಿಲ್ಲ. ನಾನು ಕವನ ಬರೆಯವುದನ್ನು ಆಲ್‌ಮೋಸ್ಟ್ ಬಿಟ್ಟೆ ಅನ್ನುವುದಕ್ಕಿಂತ ವಾಸ್ತವ ಜಗತ್ತು ಕೊಟ್ಟ ತಪರಾಕಿಗಳು ನನ್ನನ್ನು ಕವನ ಬರೆಯುವ ಚಟದಿಂದ ಬೇರ್ಪಡಿಸಿ ನಾನು ವಾಸ್ತವದ ಕೂಪಕ್ಕೆ ದೂಡಲ್ಪಟ್ಟೆ! ಲೇಖನ ಬರೆಯುವುದು ಹೇಗೆ ಎಂದು ಕಲಿಯಬೇಕಾಗಿ ಬಂತು. ಅದರಿಂದಲೇ ಪತ್ರಕರ್ತನಾಗುವ ಬದುಕಿನ ಹೊಸ ಆಯ್ಕೆ ಮೂಡಿ ಶಿರಸಿಗೆ ಹೋಗಿ ಪತ್ರಕರ್ತನಾಗಿದ್ದು, ಅಲ್ಲಿ ಬೇ`ಸತ್ತು’ ಮಂಗಳೂರಿಗೆ ಹೋಗಿದ್ದು, ಅಲ್ಲಿಂದ ಬೆಂಗಳೂರಿಗೆ ಬಂದಿದ್ದು – ಎಲ್ಲವನ್ನೂ ಹೇಳುವಷ್ಟು ವ್ಯವಧಾನ ಈಗ ಇಲ್ಲ. ಈ ನಡುವೆ ಬದುಕಿನಲ್ಲಾದರೂ ಆದರ್ಶ ಮೆರೆಯಬೇಕೆಂದು ಹಂಬಲಿಸಿ ಮದುವೆಯ ತೀರ್ಮಾನ ಮಾಡಿದ್ದು ಈಗ ೨೬ ವರ್ಷಗಳ ಇತಿಹಾಸ! ಎರಡು ಡಿಗ್ರಿಗಳನ್ನು ಸೇರಿಸಿದರೆ ಒಂದು ಡಿಗ್ರಿ ಆಗುವುದಿಲ್ಲ ಎಂಬ ಸೂತ್ರವನ್ನು ನಾನು ಇಂಜಿನಿಯರಿಂಗ್ ಪದವಿ ಶಿಕ್ಷಣವನ್ನು ಅರ್ಧ ಮಾಡಿದ ಎಷ್ಟೋ ವರ್ಷಗಳ ನಂತರ ಗಣಿತದ ಬಿಎಸ್ಸಿ ಅರ್ಧ ಮಾಡುವ ಹೊತ್ತಿಗೆ ಕಂಡು ಹಿಡಿದೆ!
ಆಮೇಲೂ ಒಮ್ಮೆ ಸವಿತಾ ಹತ್ರ ಮಾತಾಡಿದ್ದಿದೆ. ಅದಾಗಿ ಎಷ್ಟೋ ದಿನಗಳ ತರುವಾಯ ಫೇಸ್‌ಬುಕ್‌ನಲ್ಲಿ ಸವಿತಾ ನಾಗಭೂಷಣ ಕಂಡಮೇಲೆ ಫ್ರೆಂಡ್ ಆಗಿದ್ದು, ಅವಳ ಹಿಮಾಲಯ ಪ್ರವಾಸಕಥನವನ್ನು (ಕೇಂದ್ರ ಸರ್ಕಾರದ ಪ್ರಾಜೆಕ್ಟಿನ ಉದ್ಘಾಟನೆಯ ಅತೀ ಒತ್ತಡದಲ್ಲೂ) ಬಿಟ್ಟೂ ಬಿಡದೆ ಓದಿದ್ದು, ಎಲ್ಲವೂ ಹೊಸ ಇತಿಹಾಸ.
ಸವಿತಾಳನ್ನು ಏಕವಚನದಲ್ಲಿ ಕರೆಯಬಹುದೇ ಎಂಬ ಗಲಿಬಿಲಿಯೂ ನನ್ನ ಬೆರಳುಗಳನ್ನು ಆವರಿಸಿದ ಈ ಹೊತ್ತು… ಆಕೆಗೆ ಎಷ್ಟೋ ಪ್ರಶಸ್ತಿಗಳು ಸಂದಿವೆ. ಕನ್ನಡ ಕಾವ್ಯ ಜಗತ್ತಿನಲ್ಲಿ ಸವಿತಾ ನಾಗಭೂಷಣ ಒಂದು ದೊಡ್ಡ ಹೆಸರು. ಪುಟ್ಟ ಪುಟ್ಟ ಸಾಲುಗಳಲ್ಲಿ ಅತೀವ ಆರ್ದ್ರತೆಯ, ತಾತ್ವಿಕ ಹೊಳಹುಗಳ ಕವನಗಳು ನಿಮ್ಮನ್ನು ಹೂವಿನ ಹಾಗೆ ತಟ್ಟಿದರೂ ಮನದಲ್ಲಿ ಘಟ್ಟಿ ಘನವಾಗಿಬಿಡುತ್ತವೆ. ಸವಿತಾ ಕೈಬರಹ ಅಷ್ಟೇ ಸ್ಫುಟ.
ಸಿದ್ಧಾಂತಗಳ ಜಗಳದಲ್ಲಿ ಏನಾದರೂ ಆಗಿಬಿಡಬಹುದಾಗಿದ್ದ ನಮ್ಮ ಸ್ನೇಹವು ಈವರೆಗೂ ಅದೇ ಅಪ್ಪಟ ಮಿತ್ರತ್ವದ ಹದದಲ್ಲೇ ಇದೆ ಎಂಬ ನಂಬಿಕೆಯೇ ನನ್ನನ್ನು ಎಷ್ಟೋ ಸಲ ಆತಂಕದ ಮಡುವಿನಿಂದ ಸಮಾಧಾನದ ದಡಕ್ಕೆ ತಳ್ಳುತ್ತದೆ. ಹೆಚ್ಚೇನೂ ಮಾತಿಲ್ಲದ, ಕತೆಯಿಲ್ಲದ, – ಹಾಗೆ ನೋಡಿದರೆ ಈ ವರ್ಷಗಳಲ್ಲಿ ಏನೊಂದೂ ಸಂವಾದವಿಲ್ಲದ ಈ ಸ್ನೇಹದ ತಂತು ಮುಂದೆಯೂ ನನ್ನನ್ನು ಉಳಿಸಬಹುದೇನೋ.
ನೀವು ಬದುಕಿನಲ್ಲಿ ಒಂದೋ ವಾಸ್ತವವನ್ನು, ಅಥವಾ ಭ್ರಮೆಗಳನ್ನು ಧ್ಯಾನಿಸುತ್ತಿರುತ್ತೀರಿ! ಇಂಥ ಬದುಕಿನಲ್ಲಿ ಸವಿತಾ ನಾಗಭೂಷಣರಂತಹ ವ್ಯಕ್ತಿಗಳು ಕೂಡಾ ಕಾಳಜಿ ವಹಿಸಿ ನಮ್ಮನ್ನು ಬಡಿದೆಬ್ಬಿಸುವ ಕಾಯಕದಲ್ಲಿ ತೊಡಗಿರುತ್ತಾರೆ. ಆಗ ಎಚ್ಚರಾಗಬೇಕಾದ ಹೊಣೆಗಾರಿಕೆ ನಮ್ಮದೇ. ಹುಚ್ಚು ದಿನಗಳ ಆ ಕಾಲದಲ್ಲಿ ನನ್ನ ಭಾವನೆಗಳಿಗೆ ಗಾಸಿ ಮಾಡದಂತೆ ಎಚ್ಚರ ವಹಿಸಿದ ಸವಿತಾಗೆ ಎಷ್ಟು ವಂದಿಸಿದರೂ ಕಡಿಮೆಯೇ.
ಹಾಗಂತ ನಾನು ಬರೆಯುವುದನ್ನು ನಿಲ್ಲಿಸಲಿಲ್ಲ. ಈವರೆಗೂ ಏನಾದರೂ ಬರೆದೇ ಬದುಕಿದ್ದೇನೆ. ಬರೆಯುವುದರಲ್ಲಿ ನನ್ನ ತಿಳಿವಳಿಕೆಯ ಮಟ್ಟಿಗೆ ಆತ್ಮವಂಚನೆ ಮಾಡಿಕೊಳ್ಳದಂತೆ ಯತ್ನಿಸಿದ್ದೇನೆ. ಭ್ರಮೆಗಳು ಕೈಕೊಟ್ಟಾಗ ವಾಸ್ತವಕ್ಕೆ ಬರುವ, ವಾಸ್ತವವು ವಂಚಿಸಿದಾಗ ಕತೆ, ಕವನಗಳೆಂಬ ಭ್ರಮಾವೇದಿಕೆಗಳಲ್ಲಿ ವಾಸ್ತವದ ಜಾಲವನ್ನು ಬಿಚ್ಚಿಡುವ ಜೀವನ ಜೋಕಾಲಿ ನನ್ನದು!
೧೮ ವರ್ಷಗಳ ಹಿಂದೆ ನನ್ನ ಅಕ್ಕ, ಇತ್ತೀಚೆಗಷ್ಟೇ ನನ್ನ ಬದುಕಿನ ಬಾನ್ಸುರಿ ಗುರು – ಇಬ್ಬರೂ ತೀರಿಕೊಂಡಿದ್ದಾರೆ. ನನ್ನ ಹಲವು ಕವನಗಳಲ್ಲಿ ಅಕ್ಕ ಬಂದಿದ್ದಾಳೆ. ನನ್ನ ಮೊದಲ ಕವನವನ್ನು ನಾನು ತೋರಿಸಿದ್ದೇ ನನ್ನ ಅಕ್ಕಂಗೆ. ಹಾಡುವುದನ್ನೇ ಕಲಿಯಲಾಗದ ನನಗೆ ಭಾವಾನುಭೂತಿಯನ್ನು ಕೊಳಲಿನ ಮೂಲಕ ದಕ್ಕಿಸಿಕೊಡಲು ಯತ್ನಿಸಿದವರು ನನ್ನ ಗುರುಗಳು. ಅವರಿಬ್ಬರ ಅಗಲಿಕೆ ಕಲಿಸಿದ ಭ್ರಮೆ ಕಳಚುವ ಪಾಠಗಳ ಮುಂದೆ ವೃತ್ತಿ ಬದುಕಿನ ಜಂಜಡಗಳು ಏನೂ ಅಲ್ಲ ಬಿಡಿ.
ಹೀಗೆ….
ಹೂವಿನ ಹಡಗಲಿ, ಹರಪನಹಳ್ಳಿ, ಬಳ್ಳಾರಿ, ಗೆಜ್ಜೇನಹಳ್ಳಿ, ಉಜಿರೆ, ದಾವಣಗೆರೆ, ಹೊನ್ನಾಳಿ, ಸಾಗರ, ಬೆಂಗಳೂರು, ಶಿರಸಿ, ಮಂಗಳೂರು – ಹೀಗೆ ಎಲ್ಲೆಲ್ಲೋ ಕೂತು ಬರೆದ ನೂರಾರು ಹಳೆಯ ಹಾಡುಗಳು; ದಿಲ್ಲಿ-ಶಿರಸಿ-ಬೆಂಗಳೂರು-ಗುವಾಹಟಿ-ಮೈಸೂರುಗಳಿಂದ ಸಂಗ್ರಹಿಸಿದ ಹತ್ತಾರು ಕೊಳಲುಗಳು; ಕಲಿತ ಅರ್ಧಂಬರ್ಧ ರಾಗಗಳು… ನನ್ನ ಭ್ರಮೆಯನ್ನೂ ವಾಸ್ತವವನ್ನೂ ಒಟ್ಟಾಗಿಯೇ ಜೀವಂತವಾಗಿಟ್ಟಿವೆ.
`ಸರಳ ವರಸೆ’ ತುಂಬಾ ಕಷ್ಟ.