೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿ ಎಸ್‌ ಯೆಡಿಯೂರಪ್ಪನವರ ಜೊತೆಗೆ ಪ್ರವಾಸ ಮಾಡುತ್ತಿದ್ದೆ. ನನಗೆ ಅರುಣ್‌ ಜೇಟ್ಲಿ ಕೊಟ್ಟ ಕೆಲಸವೇ ಅದು. ಅವರೊಂದಿಗೆ ಸದಾ ಇರುವುದು! ಯೆಡಿಯೂರಪ್ಪನವರೂ ನನ್ನನ್ನು ಯಾವಾಗಲೂ ಪ್ರೀತಿಯಿಂದ ಕಂಡು, ಎಲ್ಲೆಡೆಗೂ ಎಡಬಿಡದೆ ಕರೆದೊಯ್ದದ್ದು ಈಗ ಹಳೆ ನೆನಪು. ಹೆಲಿಕಾಪ್ಟರ್‌ನಲ್ಲಿ ಇರೋದೇ ಆರು ಸೀಟು. ಅದರಲ್ಲಿ ಯೆಡಿಯೂರಪ್ಪನವರೊಂದಿಗೆ ನಾನು ಖಾಯಂ! ಉಳಿದಂತೆ ಆಯಾ ಪ್ರದೇಶಗಳ ರಾಜಕಾರಣಿಗಳು ಹತ್ತಿ ಇಳಿಯುತ್ತಿದ್ದರು. ಅವರೆಲ್ಲರ ಒಡನಾಟ, ಸಹವಾಸ ನನಗೆ ಚಿತ್ರವಿಚಿತ್ರ ಅನುಭವ ನೀಡಿದ್ದು ನಿಜ. ಇವತ್ತು ನಾನು ಹೇಳಲೇಬೇಕಾಗಿರೋದು ಅಂಥ ಒಂದು ದಿನ ನನ್ನನ್ನು ಸ್ನೇಹಿತನನ್ನಾಗಿ ಕಂಡು ನನ್ನೊಂದಿಗೆ ಒಂದೆರಡು ತಾಸು ಹರಟಿದ ಗೋಪಿನಾಥ್‌ ಮುಂಧೆ. ಇವತ್ತು ಅವರ ನಿಧನದಿಂದ ನನಗೆ ಅತೀವ ಬೇಸರವಾಗಿದೆ. ಒಂದೇ ವಾರದ ಹಿಂದೆ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದನ್ನು ಕಂಡು `ಅಬ್ಬ, ಇಂಥ ಖಾತೆ ಇವರಿಗೆ ಸಿಕ್ಕಿದ್ದೇ ಒಳ್ಳೇದಾಯ್ತು’ ಎಂದು ಖುಷಿಪಟ್ಟಿದ್ದೆ. ಇವತ್ತು ಅವರಿಲ್ಲ.

ಅಂದು ನಾವು ವಾಡಿಯಲ್ಲಿದ್ದೆವು. ಅಲ್ಲಿಂದ ಗುಲಬರ್ಗಾ ಹೋಗಬೇಕಿತ್ತು. ಆದರೆ ಅವತ್ತಿನ ಪಾಳಿಯಲ್ಲಿದ್ದ ಹೆಲಿಕಾಪ್ಟರ್‌ನ ಪೈಲಟ್‌  ಕೊಂಚ ಕಿರಿಕ್‌ ಪಾರ್ಟಿ. ಮೊದಲೇ ಫ್ಯುಯೆಲ್‌ ಟ್ಯಾಂಕ್‌ ಭರ್ತಿ ಮಾಡಿ ಕೂತಿದ್ದ. ಇದರಲ್ಲಿ ನಾಲ್ಕು ಜನರಿಗೆ ಮಾತ್ರ ಅವಕಾಶ ಎಂದು ನಿಯಮಾವಳಿ ಬಿಚ್ಚಿದಾಗ ಅಲ್ಲಿದ್ದ ಎಲ್ಲ ನಾಯಕರೂ ದಿಗಿಲುಬಿದ್ದರು. ಈ ವಿಷಯ ಯೆಡಿಯೂರಪ್ಪನವರ ಕಿವಿಗೆ ಬೀಳುವ ಮುನ್ನವೇ ಪರಿಹರಿಸೋಣ ಎಂಬ ನಮ್ಮ ಪ್ರಯತ್ನ ಯಶ ಕಾಣಲಿಲ್ಲ. ತಿಂಡಿ ತಿಂದು ತಯಾರಾದ ಯೆಡಿಯೂರಪ್ಪನವರು ಮುಂಧೆಯವರ ಜೊತೆಗೆ ಹೆಲಿಪ್ಯಾಡಿಗೆ ಬಂದೇಬಿಟ್ಟರು.

ವಿಷಯ ಗೊತ್ತಾಯ್ತು. ಅವರ ಎಂದಿನಂತೆ `ಕಿಡಿ’ಯೂರಪ್ಪ ಆಗತೊಡಗಿದರು. ಆದರೂ ಸಿಡಿಯಲಿಲ್ಲ. `ಎಲ್ಲಿ ನಮ್ಮ ಕಾರು? ನಡೀರಿ. ಕಾರಲ್ಲೇ ಹೋಗೋಣ. ಇವನೊಂದಿಗೆ ಚರ್ಚೆ ಮಾಡಿ ನಮ್ಮ ವೇಳಾಪಟ್ಟಿ ಹಾಳುಮಾಡಿಕೊಳ್ಳೋದು ಬೇಡ’ ಎಂದರು. ಗೋಪಿನಾಥ್‌ ಮುಂಧೆ ಕೂಡಾ ಸಮ್ಮತಿಸಿದರು. ಎಲ್ಲರೂ ಅಲ್ಲಿದ್ದ ಕಾರುಗಳನ್ನೇ ಹೊಂದಿಸಿಕೊಂಡು ಹೊರಟೆವು. ಮುಂಧೆಯವರು ಹಿಂದೊಮ್ಮೆ ಭೀಕರ ಅಪಘಾತಕ್ಕೆ ಒಳಗಾಗಿ ಬೆನ್ನುಮೂಳೆಯಿಂದ ಹಿಡಿದು ಹಲವು ಮೂಳೆಗಳನ್ನು ಕಳೆದುಕೊಂಡವರು. ಅವರದು ವಸ್ತುಶಃ ನೇರ ನಡೆ. ಅವರಿಗೆ ತಲೆತಗ್ಗಿಸಲೇ ಬರುವುದಿಲ್ಲ! ಅದು ಅವರ ಸ್ವಭಾವವೂ ಆಗಿರಲಿಲ್ಲ ಬಿಡಿ. ಆದರೆ ಕಾರಿನಲ್ಲಿ ಆ ಕಚಡಾ ರಸ್ತೆಯಲ್ಲಿ ಪ್ರಯಾಣ ಮಾಡುವುದೆಂದರೆ ಮುಂಧೆಯವರಿಗೆ ಕಟುಶಿಕ್ಷೆಯಂತೂ ಆಗಿತ್ತು. ಅವರು ನಗುತ್ತಲೇ ಕಾರು ಹತ್ತಿದರು.

ಅದಾಗಿ ಮತ್ತೆ ನಾವು ಬೀದರದಲ್ಲಿ ಭೇಟಿಯಾದೆವು. ಅಲ್ಲಿ ರಾತ್ರಿ ಬಂದು ಉಳಿದಿದ್ದ ಮುಂಧೆಯವರಿಗೆ ಶುಭೋದಯ ಹೇಳಲು ಹೋದೆ. `ಏನು ನೀನೊಬ್ನೇ ತಿಂಡಿ ತಿಂತೀಯಾ? ನಂಗೆ ಕಂಪನಿ ಕೊಡಲ್ವ?’ ಎಂದು ಛೇಡಿಸಿ ಕೂರಿಸಿದರು. ಅಲ್ಲೇ ಬಂದ ಚಾ-ನಾಶ್ಟಾ ತಿನ್ನುತ್ತ ನಾವು ಚುನಾವಣಾ ಪ್ರಚಾರದ ಬಗ್ಗೆ ಹರಟಿದೆವು.

ಮಾತು ಸಹಜವಾಗಿಯೇ ಟಿವಿ ಚಾನೆಲ್‌ಗಳ ಬೈಟ್‌ ಬಗ್ಗೆ ಹರಿಯಿತು. `ನಿಮ್ಮ ರಾಜ್ಯದ ಹಲವು ನಾಯಕರು ನಿಮಿಷಗಟ್ಟಳೆ ಬೈಟ್‌ ಕೊಡ್ತಾರೆ. ಅದು ತೀರಾ ತಪ್ಪು. ದಿನಕ್ಕೆ ಹೆಚ್ಚೆಂದರೆ ಇಪ್ಪತ್ತು ಸೆಕೆಂಡ್‌ ಬೈಟ್‌ ಕೊಡಬೇಕು. ಇಡೀ ದಿನ ಪ್ರಚಾರ ಸಿಗುತ್ತೆ. ಹೆಚ್ಚು ನಿಮಿಷ ಮಾತಾಡಿದಷ್ಟೂ ಪ್ರಚಾರ ಕಡಿಮೆ. ನೀನು ಈ ವಿಷಯವನ್ನು ಪಕ್ಷಕ್ಕೆ ತಿಳಿಸು’ ಎಂದು ಮುಂಧೆ ಸೂಚಿಸಿದರು. `ನಾನೊಬ್ಬ ಕಾರ್ಯಕರ್ತ. ನನಗೆ ನಾಯಕರಿಗೇ, ಪಕ್ಷಕ್ಕೇ ತಿಳಿಹೇಳುವ ಅಧಿಕಾರ ಇಲ್ಲ.  ಆದ್ರೂ ಈ ವಿಷಯವನ್ನು ನನ್ನ ಆಪ್ತರ ಗಮನಕ್ಕೆ ತರುತ್ತೇನೆ’ ಎಂದೆ.

`ಟಿವಿ ಮೀಡಿಯಾನ ಸರಿಯಾಗಿ ಬಳಸಬೇಕು ಕಣಯ್ಯಾ. ಅವರೇ ನಮ್ಮ ಕಂಟ್ರೋಲ್‌ನಲ್ಲಿ ಇರಬೇಕು. ನಾವು ಅವರ ಕಂಟ್ರೋಲ್‌ಗೆ ಹೋಗಬಾರದು. ನಾವು ಇಪ್ಪತ್ತೇ ಸೆಕೆಂಡ್‌ ಬೈಟ್‌ ಕೊಟ್ರೆ ಅವರಿಗೆ ಬೇರೆ ವಿಧಿಯೇ ಇಲ್ಲ. ಅದನ್ನೇ ಪೂರಾ ಪ್ರಸಾರ ಮಾಡಬೇಕು’ ಎಂದು ಕಣ್ಣು ಮಿಟುಕಿಸಿದರು ಮುಂಧೆ.  ಆಮೇಲೆ ಅಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಆಗಾಗ ದೂರ ನಿಂತಿದ್ದ ನನ್ನನ್ನು ನೋಡ್ತಾ ಹುಬ್ಬೇರಿಸಿದರು!

`ನನ್ನ ದೇಹ ನನಗೆ ಹೆಚ್ಚು ಪ್ರಚಾರಕ್ಕೆ ಬಿಡ್ತಾ ಇಲ್ಲ.ಅದಕ್ಕೇ ನಾನು ಸ್ವಲ್ಪ ಹಿಂದೆ ಬಿದ್ದಿದೇನೆ. ಆಕ್ಸಿಡೆಂಟ್‌ ಆಗಿ ನನ್ನ ದೇಹದೊಳಗೆ ಹಲವು ಸ್ಟೀಲ್‌ ರಾಡ್‌ ಹಾಕಿದಾರೆ. ಇಲ್ದೇ ಹೋಗಿದ್ರೆ ನಾನು ಇನ್ನೂ ತುಂಬಾ ಸಕ್ರಿಯನಾಗಿ ಇರ್‍ತಿದ್ದೆ. ನೇರವಾಗಿ ನಡೆಯಬೇಕು; ನೇರವಾಗಿಯೇ ಮಲಗಬೇಕು. ಕಷ್ಟ ಆಗುತ್ತೆ. ಆದರೆ ಇಷ್ಟರಮಟ್ಟಿಗೆ ಇದೀನಲ್ಲ’ ಎಂದು ತಮ್ಮ ಖಾಸಗಿ ಸಂಗತಿಯನ್ನು ಅವರೇ ವಿವರಿಸಿದಾಗ ನಾನು ಅವರ ಫ್ಯಾನ್‌ ಆಗಿಬಿಟ್ಟೆ!

ನಾನು ರಾಜಕಾರಣಿಗಳನ್ನು ನನಗಾಗಿ ಎಂದೂ ಹಿಂಬಾಲಿಸಿಲ್ಲ. ಆದರೆ ನನ್ನ ಸಮಯಾವಕಾಶ ನೋಡಿಕೊಂಡು, ನನಗೆ ಇಷ್ಟವಾದ ರಾಜಕೀಯದ ಕೆಲಸ ಮಾಡಿಕೊಂಡಿದ್ದೇನೆ. ಯೆಡಿಯೂರಪ್ಪನವರೊಂದಿಗೆ ಚುನಾವಣಾ ಕಾಲವಿಡೀ ಇರುವ ಅವಕಾಶ ಸಿಕ್ಕಿದಾಗ ಬೇಡ ಎನ್ನಲಾಗಲಿಲ್ಲ. ಅದು ನನ್ನ ಬದುಕಿನ ಮುಖ್ಯ ಅನುಭವಕಾಂಡಗಳಲ್ಲಿ ಒಂದು. ಇಂಥ ಅನುಭವದ ಸಂದರ್ಭದಲ್ಲಿ ದೇಶದ ಪ್ರಮುಖ ರಾಜಕಾರಣಿಯೊಬ್ಬ ನನ್ನನ್ನು ಕರೆದು ಕೂರಿಸಿ ಮಾತಾಡಿದ್ದು ಅಗಾಧ ಪರಿಣಾಮ ಬೀರುತ್ತದೆ.

ಒಂದು ದಿನದ ಸ್ನೇಹಯಾನದಲ್ಲಿ ಎಷ್ಟೋ ಸಂಗತಿಗಳನ್ನು ಕಲಿಸಿಕೊಟ್ಟ ಗೋಪಿನಾಥ್‌ ಇವತ್ತು ಹಠಾತ್ತನೆ ಕಣ್ಮರೆಯಾಗಿದ್ದಾರೆ. ಮೊದಲಿನ ಅಪಘಾತದ ತೀವ್ರತೆ ಇವತ್ತಿನ ಅಪಘಾತದಲ್ಲಿ ಇರಲಿಲ್ಲ ಎಂದು ಆರಂಭದ ವರದಿಗಳು ಹೇಳುತ್ತಿವೆ. ಬಹುಶಃ ಹಿಂದಿನ ಅಪಘಾತದ ನೆನಪಾಗಿ ಗೋಪಿನಾಥ್‌ಗೆ ಹೃದಯಾಘಾತವಾಯ್ತೆ? ಮನಸ್ಸಿಗೆ ಏನೇನೋ ಅನ್ನಿಸುತ್ತಿದೆ.

ದಮನಕ್ಕೆ ಒಳಗಾದ ಸಮುದಾಯದಿಂದ ಮೇಲೆದ್ದು ಬಂದು ದೈಹಿಕ ಅಡೆತಡೆಗಳ ನಡುವೆಯೂ ದೇಶದ ನಾಯಕನಾಗಿದ್ದ ಗೋಪಿನಾಥ್‌ ಮುಂಧೆಯವರಿಗೆ ನನ್ನ ಶ್ರದ್ಧಾಂಜಲಿಗಳು. 

Share.

2 Comments

  1. ಒಬ್ಬ ಧೀಮಂತನಿಂದ ಬಹಳ ನಿರೀಕ್ಷೆಗಳಿದ್ದುವು, ವಿಧಿ ತಡೆಯಿತು. ಅವರ ಪರಿಚಯ ಹತ್ತಿರದಿಂದ ನಮಗೆ ಮಾಡಿಸಿದ್ದೀರಿ.

  2. ರಾಜಕಾರಣವೆಂದರೆ ಕೊಳಕು ಎನ್ನುವಂತಹ ಕ್ಷೇತ್ರದಲ್ಲಿ ಗೋಪಿನಾಥ ಮುಂಡೆಯವರು ಕೊಳಕಿನ ನಡುವಣ ಕಮಲದಂತಿದ್ದರು!
    ಅವರನ್ನು ನಾನು ಪ್ರತ್ಯಕ್ಷ ಕಂಡಿಲ್ಲ. ಆದರೆ, ಮಹಾರಾಷ್ಟ್ರದ ಭಾಜಪದ ಸುದ್ದಿ ಎಂದರೆ, ಅಲ್ಲಿ ಮುಂಡೆಯವರು ಇರಲೇಬೇಕು.
    ಪ್ರಾಯಶಃ ಪ್ರಮೋದ್ ಮಹಾಜನ್ ನಂತರ, ಮಹಾರಾಷ್ಟ್ರ ಭಾಜಪದ ಜನಪ್ರಿಯ ನಾಯಕರೆಂದರೆ ಗೋಪಿನಾಥ ಮುಂಡೆಯವರೇ ಇರಬೇಕು.

    ಅವರ ಹೆಸರಿನ ಕುರಿತಾಗಿ ಸಣ್ಣ ಸಂದೇಹ. ನೀವು ಅವರ ಹೆಸರನ್ನು ‘ಮುಂಧೆ’ ಎಂದು ಬರೆದಿರುವಿರಿ. ಆದರೆ, ಅವರ ಹೆಸರು ‘ಮುಂಡೆ’ ಅಲ್ಲವೇ? ನಾನು ಹಿಂದಿಯಲ್ಲೂ ಓದಿ ನೋಡಿದೆ. ಅದು “गोपीनाथ मुंडे” ಎಂದೇ ಇದೆ.
    ಮುಂಡೆ ಎಂದರೆ ಕನ್ನಡದಲ್ಲಿ ಒಳ್ಳೆಯ ಅರ್ಥವಿಲ್ಲವೆನ್ನುವ ಕಾರಣಕ್ಕಾಗಿ ಮುಂಧೆ ಎಂದು ಬರೆಯುತ್ತಿರುವಿರಾ?
    ಅಥವಾ ಮುಂಧೆ ಎನ್ನುವುದೇ ಸರಿಯಾದ ಉಚ್ಚಾರಣೆಯೇ?

Leave A Reply Cancel Reply
Exit mobile version