ಬೆಂಗಳೂರಿನ ವಿದ್ಯಾನಿಯೊಬ್ಬಳು ತನ್ನ ಗೆಳೆಯನ ಫೇಸ್‌ಬುಕ್‌  ಕಂಡ ವಿದಾಯದ ಹೇಳಿಕೆಯನ್ನು ನೋಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲ ಸಮಾಜಪ್ರಿಯ ಮನಸ್ಸುಗಳನ್ನು ಕದಡಿದೆ. ಜಗತ್ತಿನಲ್ಲೆಡೆ ಪ್ರಸಿದ್ಧವಾದ ಸೋಶಿಯಲ್ ನೆಟ್ವರ್ಕ್ ನಾಡಿನ ಒಂದು ಜೀವಕ್ಕೇ ಎರವಾಯಿತಲ್ಲ! ಈ ಘಟನೆ ನಡೆದ ದಿನವೇ ಇರಬೇಕು… ಹುಡುಕಾಟದ ಜಾಲತಾಣವಾಗಿ ಇಡೀ ಜಗತ್ತನ್ನೆಲ್ಲ ಕುಣಿಸುತ್ತಿರುವ ಗೂಗಲ್ ಜಾಲತಾಣದ ಪುಟದಲ್ಲಿ ನಿಮ್ಮನ್ನು ಗುರುತಿಸುವ ಒಂದು ದೊಡ್ಡ ಬಾಣ ಕಾಣಿಸಿಕೊಂಡಿದೆ. ಇದೇನು ಕಾಕತಾಳೀಯ ಎಂದು ನಿಮಗನ್ನಿಸಬಹುದು…… ಅದೇ ದಿನವೇ ಫೇಸ್‌ಬುಕ್‌ ಕೂಡಾ ತನ್ನ ಸೇವೆಗಳನ್ನು ಸುಧಾರಿಸಿ ಪ್ರಕಟಣೆ ಹೊರಡಿಸಿದೆ.

ಅರೆ, ಅಂತರಜಾಲದ ಸಾಮಾಜಿಕ ಜಾಲತಾಣಗಳಿಗೆ ಒಂದು ಹೊಸ ದಿಕ್ಕು ದೊರೆತಿದೆಯೆ? ಅದೇನಾದರೂ ನಿಮ್ಮ ಬದುಕನ್ನು ಬದಲಿಸುತ್ತದೆಯೆ? – ಪ್ರಶ್ನೆ ಸಹಜವೇ. 

ನೀವೀಗ ಇಂಟರ್ನೆಟ್ ಸಂಪರ್ಕ ಹೊಂದಿದ್ದರೆ ಸುಮ್ಮನೆ ಗೂಗಲ್ ಪುಟಕ್ಕೆ ಬನ್ನಿ. ಇಷ್ಟು ದಿನ ಬಿಳಿಯಾಗಿ ಸಪಾಟಾಗಿದ್ದ ಈ ಟದಲ್ಲೀಗ ದೊಡ್ಡ ನೀಲಿ ಬಾಣವೊಂದು ನಿಮ್ಮ ನೋಟವನ್ನು ಎಡಮೂಲೆಗೆ ಒಯ್ಯುತ್ತದೆ. ಅಲ್ಲಿರುವುದು `+ಯು’ (`ಮತ್ತು ನೀವು’ ಎನ್ನಬಹುದೆ?) ಎಂಬ ಒಂದು ಪದ. ಅದನ್ನು ಕ್ಲಿಕ್ ಮಾಡಿ ಒಳಹೋದರೆ ನಿಮ್ಮ ದಿಕ್ಕು, ದೆಸೆ, ಚಿಂತನೆ, ಬರವಣಿಗೆ, ಗೆಳೆತನ, – ಎಲ್ಲವನ್ನೂ ಬದಲಿಸುವ ಹೊಸ ಲೋಕವೊಂದು ತೆರೆದುಕೊಳ್ಳುತ್ತದೆ.

ಅದೇ ಗೂಗಲ್+ ಎಂಬ ಹೊಸ ಅಂತರಜಾಲ ಸಾಮಾಜಿಕ ವೇದಿಕೆ. ಹದಿನಾರೇ ದಿನಗಳಲ್ಲಿ ಒಂದು ಕೋಟಿ ಜನ ಈ ದಿಕ್ಕಿನತ್ತ ಸಾಗಿದ್ದಾರೆ. ಇಂಥದ್ದೇ ಸಾಮಾಜಿಕ ಕೂಟವಾದ ಟ್ವಿಟರ್ಗೆ ಕೋಟಿ ಸದಸ್ಯರ ಗಡಿ ದಾಟಲು 780 ದಿನಗಳು ಬೇಕಾದವು; ಫೇಸ್‌ಬುಕ್‌ಗೆ? 852 ದಿನಗಳು.

`ಸೋಶಿಯಲ್ ನೆಟ್ವರ್ಕ್’ ಎಂಬ ಯುವಜನಾಂಗದ ಇಂಟರ್ನೆಟ್ ವ್ಯಸನದ ಆಕರ್ಷಣೆಗೆ ಗೂಗಲ್ ಎಂಬ ಹದಿಮೂರು ವರ್ಷ ವಯಸ್ಸಿನ ಜಾಲತಾಣವೂ ತುತ್ತಾಗಿರುವ ಈ ಕಥೆ ಈಗಿನ್ನೂ ಮೊದಲ ಅಧ್ಯಾಯವನ್ನಷ್ಟೇ ದಾಟಿದೆ. ಆದರೆ ಇದೊಂದೇ ಅಧ್ಯಾಯದಲ್ಲಿ ಏನೆಲ್ಲ ಚರ್ಚೆಗಳು ನಡೆದಿವೆ, ಎಷ್ಟೆಲ್ಲ ವೈವಿಧ್ಯದ ಸಂಗತಿಗಳು ಮೂಡಿವೆ, ಯಾವುದೆಲ್ಲ ಸಂಶೋಧನೆಗಳು ಆರಂಭವಾಗಿವೆ…… ನಮ್ಮ ಮಕ್ಕಳಿಗಾಗಿಯಾದರೂ ಇವನ್ನೆಲ್ಲ ತಿಳಿದುಕೊಳ್ಳಬೇಕಿದೆ.

ಅದೇ ಜಾಲತಾಣ; ಈಗ ಹರಟೆಯ ಕಟ್ಟೆ

`ಸೋಶಿಯಲ್ ನೆಟ್ವರ್ಕ್’ ಅರ್ಥಾತ್ ಸಾಮಾಜಿಕ ಜಾಲತಾಣ ಎಂದರೇನು? – ಈ ಪ್ರಶ್ನೆಗೆ ಮೊದಲು ಸರಳ ವಿವರಣೆ ಹುಡುಕದಿದ್ದರೆ ಗೂಗಲ್+ನ ಮಹತ್ವವೇ ನಮಗೆ ಗೊತ್ತಾಗುವುದಿಲ್ಲ. ವಿಶ್ವವ್ಯಾಪಿ ಜಾಲದಲ್ಲಿ ಮೊದಲು ಮಾಹಿತಿ ಜಾಲತಾಣಗಳಷ್ಟೆ ಇದ್ದವು ತಾನೆ? ಆಮೇಲೆ ಈಮೈಲ್ (ಮಿಂಚಂಚೆ) ನೀಡುವ ಜಾಲತಾಣಗಳು ಬಂದವು. ಅದಕ್ಕಿಂತ ಮುನ್ನ ಒಂದೇ ಜಾಲತಾಣದಲ್ಲಿ ಯಾವುದೇ ನೋದಾಯಿತ ಸದಸ್ಯರೂ ಯಾವುದಾದರೂ ವಿಷಯದ ಬಗ್ಗೆ ಚರ್ಚೆ ನಡೆಸಬಹುದಾದ ಗ್ರೂಪ್ (ಗುಂಪು)ಗಳೂ ಇದ್ದವು; ಈಗಲೂ ಇವೆ! ಅದಾದ ಮೇಲೆ ಬಂದಿದ್ದೇ ಬ್ಲಾಗುಗಳು ಎಂಬ ವೈಯಕ್ತಿಕ ಅಭಿವ್ಯಕ್ತಿಯ ಜಾಲತಾಣಗಳ ಕ್ರಾಂತಿ. ಇಂದು ಎಲ್ಲರೂ ಬ್ಲಾಗ್‌ಸ್ಪಾಟ್, ವರ್ಡ್‌ಪ್ರೆಸ್‌ ಎಂದು ಆಡಿಕೊಳ್ಳುತ್ತಿಲ್ಲವೆ…. ಅದೆಲ್ಲ ಬ್ಲಾಗುಗಳು.

ಬ್ಲಾಗುಗಳು ಅಂತರಜಾಲದ ಲೋಕದಲ್ಲಿ ಜನಪ್ರಿಯವಾಗುತ್ತಿದ್ದಂತೆ ಮೂಡಿದ್ದೇ ಸಾಮಾಜಿಕ ಜಾಲತಾಣಗಳು. ಇವೂ ಒಂದು ಲೆಕ್ಕದಲ್ಲಿ ಬ್ಲಾಗುಗಳೇ. ಪ್ರತೀ ವ್ಯಕ್ತಿಯೂ ಈ ತಾಣಗಳಲ್ಲಿ ನೋಂದಾವಣೆ ಮಾಡಿಕೊಂಡಾಗ ತನ್ನದೇ ಒಂದು ಟ ಪಡೆಯುತ್ತಾನೆ/ಳೆ. ತನ್ನಂತೆ ಪುಟ ಹೊಂದಿದ ಇತರರ ಜೊತೆಗೆ ಗೆಳೆತನಕ್ಕೆ ಕೈ ಚಾಚುತ್ತಾನೆ/ಳೆ. ಹೀಗೆ ಗೆಳೆಯರಾದವರೆಲ್ಲ ಕ್ಷಣಕ್ಷಣಕ್ಕೂ ಏನೆಲ್ಲ ಬರೆದುಕೊಂಡರು, ಚರ್ಚಿಸಿದರು, ಚಿತ್ರಗಳನ್ನು ಹಂಚಿಕೊಂಡರು, ಆಹ್ವಾನಗಳನ್ನು ಕೊಟ್ಟರು, ಅಭಿಪ್ರಾಯಗಳನ್ನು ಬರೆದರು – ಇವೆಲ್ಲವೂ ಅದೇ ಪಟದಲ್ಲಿ ಪ್ರಕಟವಾಗುತ್ತ ಹೋಗುತ್ತದೆ…. ಗೆಳೆಯರ ಜಗಳವೂ, ಸಮಾಜದ ಆಗುಹೋಗುಗಳ ವಾಗ್ವಾದವೂ, – ಎಲ್ಲವೂ ಇಲ್ಲಿ ಸುಮಾರಾಗಿ ಜಗಜ್ಜಾಹೀರು. ಕಳೆದ ಕೆಲವು ವರ್ಷಗಳಿಂದ ಯುವಸಮುದಾಯದ ಚಟವಾಗಿ ಪರಿಣಮಿಸಿದ ಫೇಸ್ಬುಕ್, ಆರ್ಕುಟ್‌ನಂಥ ಜಾಲತಾಣಗಳು ಬದುಕನ್ನು ಕೂಡಿಸಿವೆಯೋ, ಕಳೆದಿವೆಯೋ, – ಸಾಮಾಜಿಕ ಜಾಲತಾಣ ಎಂಬ ಹೆಸರನ್ನಂತೂ ಅಂಟಿಸಿಕೊಂಡಿವೆ.

ಹೀಗೆ ಅಂತರಜಾಲದ ಬಳಕೆದಾರರು ತಮ್ಮದೇ ಹರಟೆ ಕಟ್ಟೆ, ಜಗಲಿ, ನಡುಮನೆ, ಬಯಲು ರಂಗಮಂದಿರದಲ್ಲಿ ಒಟ್ಟೊಟ್ಟಿಗೆ ಅಭಿವ್ಯಕ್ತಿ ದಾಖಲಿಸುವ ಸಾಮಾಜಿಕ ಟಗಳನ್ನು ನೀಡುವ ಸೇವೆಯನ್ನೇ ಗೂಗಲ್+ ನೀಡಹೊರಟಿದೆ. ಆದರೆ ಈಗಿರುವ ಫೇಸ್ಬುಕ್, ಆರ್ಕುಟ್ನಂಥ ಜಾಲತಾಣಗಳಿಗೂ, ಗೂಗಲ್+ಗೂ ಹಲವಾರು ತಾತ್ವಿಕ ವಿಭಿನ್ನತೆಗಳಿವೆ. ಸಮಾಜದಲ್ಲಿ ಹೊಣೆಗಾರಿಕೆಯ ಸಂಟನೆ ಮಾಡಬೇಕೆನ್ನುವವರು ಗೂಗಲ್+ ಹೆಚ್ಚು ಒಳಿತು ಎನ್ನುವಷ್ಟರ ಮಟ್ಟಿಗೆ ಗೂಗಲ್+ನ ಸೇವೆಗಳು ರೂಗೊಂಡಿವೆ.

ಗೂಗಲ್+: ಸೇವೆಯ ಸರಣಿಯಲ್ಲಿ ಸದಾ ಮುಂದೆ

ಗೂಗಲ್+ ಸೇವೆಯ ವ್ಯಾಖ್ಯೆ ಸರಳವಾಗಿ ಹೀಗಿದೆ: ಗೂಗಲ್ ಜಾಲತಾಣದಲ್ಲಿ ಸದಸ್ಯರೆಲ್ಲರೂ ಇಲ್ಲಿ ಪರಸ್ಪರ ಸಮ್ಮತಿಯಿಂದ ವಿಚಾರ ವಿನಿಮಯ ಮಾಡಿಕೊಳ್ಳಬಹುದು. ಹೌದು! ಗೂಗಲ್+ ಸೇವೆ ಪಡೆಯಲು ನೀವು `ಗೂಗಲ್ನಲ್ಲೇ’ ನಿಮ್ಮದೊಂದು ಖಾತೆಯನ್ನು ನೋಂದಾಯಿಸಿಕೊಳ್ಳಬೇಕು. ನೀವು ಜಿಮೈಲ್, ಯುಟ್ಯೂಬ್, ಆರ್ಕುಟ್, – ಹೀಗೆ ಗೂಗಲ್ನ ಬೇರಾವುದೇ ಸೇವೆಯನ್ನು ಪಡೆಯಲು ಸದಸ್ಯರಾಗಿದ್ದರೆ, ಅದೇ ಹೆಸರು, ರಹಸ್ಯಪದವೇ ಇಲ್ಲೂ ಸಾಕು.

ಫೇಸ್ಬುಕ್ಗೂ, ಗೂಗಲ್+ಗೂ ಪ್ರಮುಖ ವ್ಯತ್ಯಾಸ ಗೊತ್ತಾಯಿತು ತಾನೆ? ಫೇಸ್ಬುಕ್ ಖಾತೆ ತೆರೆಯಲು ನೀವು ಯಾವುದೇ ಈ ಮೈಲ್ ಖಾತೆ ಬಳಸಬಹುದು. ಆದರೆ ಗೂಗಲ್+ಗೆ ನೀವು ಗೂಗಲ್ ಖಾತೆಯನ್ನೇ ಹೊಂದಿರಬೇಕು. ಇದು ಒಳ್ಳೆಯದೇ. ಯಾಕೆಂದರೆ ನಿಮಗೆ ಗೂಗಲ್+ ಸೇವೆಯ ಜೊತೆಗೆ ಜಗತ್ತಿನಲ್ಲೇ ಅತಿ ಸರಳ, ಬಹು ಅನುಕೂಲದ, ಏಳು ಗೈಗಾಬೈಟ್ಗಳ ಬೃಹತ್ ಗಾತ್ರದ ಜಿಮೈಲ್ ಖಾತೆ ಸಿಗುತ್ತದೆ! ಜೊತೆಗೇ ಪಿಕಾಸದಂತ ಫೋಟೋ ಆಲ್ಬಮ್ಗಳ ಖಾತೆ ನಿಮ್ಮದಾಗುತ್ತದೆ. ಯೂಟ್ಯೂಬ್ನಲ್ಲೂ ನೀವು ವಿಡಿಯೋಗಳನ್ನು ಏರಿಸಬಹುದು…

ಸರಿ, ಗೂಗಲ್+ ಖಾತೆ ತೆರೆದಿರಿ ಅಂದುಕೊಳ್ಳಿ. ಆಮೇಲೆ? ನೀವು ಹೊಸದಾಗಿ ನೋಂದಾವಣೆ ಮಾಡಿಕೊಂಡರೆ ಗೂಗಲ್ ಸಂಸ್ಥೆಯು ಇದುವರೆಗೆ ಗಣಕಯಂತ್ರಗಳ ಮೂಲಕ ಹುಡುಕಿಟ್ಟುಕೊಂಡ ಪ್ರಪಂಚದ ಪ್ರಖ್ಯಾತರ ಹೆಸರುಗಳನ್ನು ಶಿಫಾರಸು ಮಾಡುತ್ತದೆ. ನೀವು ಜಿಮೈಲಿನಲ್ಲಿ ಖಾತೆ ಹೊಂದಿದ್ದರೆ, ನಿಮ್ಮ ಸ್ನೇಹಿತರನ್ನೆಲ್ಲ ಪಟ್ಟಿ ಮಾಡಿ ಕೊಡುತ್ತದೆ. ಈ ವೃತ್ತಗಳು ಗೂಗಲ್+ನ ಅತ್ಯಂತ ಮಹತ್ವದ, ವಿಶಿಷ್ಟ ಸೇವೆ. ನಿಮ್ಮ ಸ್ನೇಹಿತರನ್ನು ಒಂದು ಅಥವಾ ಅದಕ್ಕಿಂತ ಹೆಚ್ಚು ವೃತ್ತಗಳಲ್ಲಿ ಸೇರಿಸುವ ಅವಕಾಶ ಇಲ್ಲಿದೆ. ಉದಾಹರಣೆಗೆ ನೀವು ಕವಿಯಾಗಿದ್ದರೆ, ನಿಮ್ಮ ಕವಿಮಿತ್ರರನ್ನೆಲ್ಲ, ಅಥವಾ ನಿಮ್ಮ ಅಭಿಮಾನಿಗಳನ್ನೆಲ್ಲ ಕಾವ್ಯದ ವೃತ್ತದಲ್ಲಿ ಸೇರಿಸಿ. ವಸ್ತುಶಃ ಈ ವ್ಯಕ್ತಿಗಳ ಅಂಚೆ ಗಾತ್ರದ ಚಿತ್ರಗಳನ್ನು ಮೌಸ್ ಮೂಲಕ ಎಳೆತಂದು ವೃತ್ತದೊಳಕ್ಕೆ ಬಿಡಬಹುದು! ನೆನಪಿಡಿ: ಈ ವೃತ್ತವನ್ನೂ, ಅಥವಾ ನಿಮಗೆ ಬೇಕಾದ ಇನ್ನಾವುದೇ ಹೆಸರಿನ ವೃತ್ತವನ್ನೂ ನೀವೇ ಹೊಸದಾಗಿ ರಚಿಸಬಹುದು.

ನೀವು ಹೀಗೆ ಗೆಳೆಯರನ್ನೆಲ್ಲ ಒಂದೊಂದೇ ವೃತ್ತದಲ್ಲಿ ಸೇರಿಸುತ್ತಿದ್ದಂತೆ, ಅತ್ತ ನಿಮ್ಮ ಸ್ನೇಹಿತರೂ ನಿಮ್ಮನ್ನು ಯಾವ್ಯಾವುದೋ ವೃತ್ತದಲ್ಲಿ ಸೇರಿಸುತ್ತಾ ಇರುತ್ತಾರೆ! ಜಗತ್ತಿನ ಯಾವ್ಯಾವುದೋ ಮೂಲೆಯಲ್ಲಿರುವ ಯಾವ್ಯಾವುದೋ ವೃತ್ತದಲ್ಲಿ ನಿಮ್ಮ ಹೆಸರು ಸೇರಿಕೊಳ್ಳಬಹುದು.

ಆಮೇಲೆ? ಇಲ್ಲಿಂದ ನಿಮ್ಮ ಗೂಗಲ್+ ಹೆಜ್ಜೆ ಆರಂಭ.

ಗೂಗಲ್+ನ ಪುಟಕ್ಕೇ `+ನೀವು’ ಎಂಬ ಹೆಸರಿಡಲಾಗಿದೆ. ಈ ಪುಟದಲ್ಲಿ ನೀವು ಇಷ್ಟ ಬಂದಿದ್ದನ್ನು ಬರೆದು ಹಂಚಿಕೊಳ್ಳಬಹುದು. ಒಂದು ನಿರ್ದಿಷ್ಟ ವೃತ್ತದ ಸದಸ್ಯರಿಗೆ, ಅಥವಾ ಒಂದಕ್ಕಿಂತ ಹೆಚ್ಚು ವೃತ್ತಗಳ ಸದಸ್ಯರಿಗೆ ಯಾವುದೋ ವಿಷಯವನ್ನು ಹೇಳಿಕೊಳ್ಳಲು ಅವಕಾಶ. ಅಥವಾ ಎಲ್ಲರಿಗೂ ಹೇಳಬೇಕೆಂದರೆ, ಪಬ್ಲಿಕ್ ಎಂದು ಸಾರ್ವಜನಿಕವಾಗಿ ಡಂಗುರ ಸಾರುವುದೂ ಸಾಧ್ಯ. ಕುಟುಂಬದ ಸದಸ್ಯರ ಹುಟ್ಟುಹಬ್ಬದ ಶುಭಾಶಯಗಳನ್ನು ಕುಟುಂಬದ ಸದಸ್ಯರು ಮಾತ್ರ ಇರುವ ವೃತ್ತದಲ್ಲಿ ಹೇಳಿ. ವರದಕ್ಷಿಣೆ ಸಾವಿನ ವಿರುದ್ಧದ ಆಕ್ರೋಶವನ್ನು ಸಾರ್ವಜನಿಕವಾಗಿ ಘೋಷಿಸಿ.

ನೀವು ಯಾವ ವಿಷಯವನ್ನು ಎಷ್ಟು ಹಿತಮಿತವಾಗಿ ಹೇಳಬೇಕು ಎಂದು ಮೊದಲೇ ನಿರ್ಧರಿಸುವ ಈ ಅವಕಾಶ ಗೂಗಲ್+ನ ನತೆ ಹೆಚ್ಚಿಸಿದೆ. ಈ ಅನುಕೂಲವನ್ನು ಕೊಡಲು ಈಗ ಫೇಸ್ಬುಕ್ ತಿಣುಕುತ್ತಿದೆ.

ಅದಿರಲಿ, ನೀವು ಆಸಕ್ತಿ ಹೊಂದಿರುವ ವಿಷಯಗಳನ್ನು ಸದಾ ಟ್ರಾಕ್ ಮಾಡುತ್ತ, ನಿಗಾವಹಿಸಿ ನೋಡಲು ಇಲ್ಲಿರುವ `ಸ್ಪಾರ್ಕ್’ ಅಥವಾ ಕಿಡಿಯ ಸೇವೆ ಬಳಸಿ. ಫುಕುಶಿಮಾ ಅಣುದುರಂತವೋ, ಭೌತಶಾಸ್ತ್ರದ ಸಂಗತಿಗಳೋ, ಮುಂಬಯಿ ಶೇರು ಮಾರುಕಟ್ಟೆಯ ವರ್ತಮಾನವೋ, ನೀವೇ ಆಯ್ದುಕೊಂಡ ವಿಷಯಗಳನ್ನು ಇಲ್ಲಿ ಪಟ್ಟಿ ಮಾಡಿ. ನೀವು ಈ ಪುಟಕ್ಕೆ ಬಂದಾಗಲೆಲ್ಲ ಈ ವಿಷಯಗಳ ಮೇಲಿನ ತಾಜಾ ವರ್ತಮಾನ ನಿಮಗೆ ದೊರಕುತ್ತದೆ. ಇದು ಈ ಹಿಂದೆಯೇ ಇದ್ದ `ಗೂಗಲ್ ಅಲರ್ಟ್’ ಸೇವೆಯ ಇನ್ನೊಂದು ರೂಪ.

ನಿಮ್ಮಲ್ಲಿ ವೆಬ್‌ಕ್ಯಾಮೆರಾ ಇದ್ದರೆ `ಹ್ಯಾಂಗ್ಔಟ್’ ಅನ್ನೋ ವಿಶಿಷ್ಟ ಸೇವೆಯನ್ನು ಬಳಸಿ, ನಿಮ್ಮ ಸ್ನೇಹಿತರೊಂದಿಗೆ, ಒಟ್ಟೊಟ್ಟಾಗಿ ಹರಟಬಹುದು. ಅಂದರೆ ಒಬ್ಬರಲ್ಲ, ಇಬ್ಬರಲ್ಲ, ಹಲವರ ಜೊತೆಗೆ ಏಕಕಾಲದಲ್ಲಿ ಚರ್ಚೆ ನಡೆಸಿ, ಕಚೇರಿಯ ವಿಡಿಯೋ ಮೀಟಿಂಗ್ ಮಾಡಿ!

ಮಾಡಲು ಬೇರೆ ಕೆಲಸ ಇಲ್ಲವೆಂದರೆ ನೀವು ಆಟವನ್ನೂ ಆಡಬಹುದೆಂದು ಗೂಗಲ್+ ಈಗಷ್ಟೆ ಕಂ್ಯಟರಿನಲ್ಲೇ ಆಡುವ ಆಟಗಳನ್ನು ಜೋಡಿಸಿದೆ. ನಿಮಗೆ ತುಂಬಾ ಬೋರ್ ಆಗಿದ್ದರೆ, ಅಥವಾ ಆಟವಾಡುವುದೇ ನಿಮ್ಮ ಜೀವನದ ಮಹತ್ವದ ಕೆಲಸವಾಗಿದ್ದರೆ, ಆಡೂ, ಆಟ ಆಡು ಎನ್ನಬಹುದಷ್ಟೆ!

ಇನ್ನು `ಗೂಗಲ್ ಚಾಟ್’ ಗೊತ್ತಿದ್ದವರು ಇಲ್ಲೂ ಅದೇ ಹರಟೆಯನ್ನು ಮುಂದುವರೆಸಿ. ಅಥವಾ ಹಡಲ್ ಅನ್ನೋ ಸೇವೆ ಬಳಸಿ ಮೂರ್ನಾಲ್ಕು ಜನ ಸೇರಿ ದೇಶದ ಸಮಸ್ಯೆಗಳಿಗೆ ಉತ್ತರ ಹುಡುಕಿ.

ಅದೆಲ್ಲ ಸರಿ, ಇಲ್ಲಿ ಫೇಸ್ಬುಕ್ಗಿಂತ ಇದು ಎಷ್ಟು ಅನುಕೂಲಕರ ಎಂದು ಫೇಸ್ಬುಕ್ ಪ್ರೇಮಿಗಳು ಕೇಳುತ್ತಾರೆ. ಅವರಿಗಾಗಿ ಇಷ್ಟು ಹೇಳಬಹುದು: ಯಾವಾಗಲೂ ಫೇಸ್ಬುಕ್ ತಾಣದಲ್ಲೇ ಕೂತು ಯಾರಿಗಾಗಿಯೋ ಕಾಯೋದಕ್ಕಿಂತ ಜಿಮೈಲಿನಲ್ಲಿ ಕಚೇರಿ ಕೆಲಸ ಮಾಡುತ್ತಲೋ, ಬೇರಾವುದೋ ಚಟುವಟಿಕೆಯಲ್ಲಿ ಮೈಮರೆಯುತ್ತಲೋ ಗೂಗಲ್+ನಲ್ಲಿ ಭಾಗವಹಿಸುವುದರಿಂದ ನಿಮ್ಮ ಉತ್ಪಾದಕತೆ ಹೆಚ್ಚುತ್ತದೆ. ಫೇಸ್ಬುಕ್ ಏನಿದ್ದರೂ ಈ ಮೈಲ್ ಸೇವೆಯನ್ನು ಕೊಟ್ಟಿಲ್ಲ. ಯೂಟ್ಯೂಬ್ನಂಥ ವಿಡಿಯೋ ಸೌಲಭ್ಯವೂ ಅದರಲ್ಲಿಲ್ಲ. ಒಂದೇ ವೇದಿಕೆಯಲ್ಲಿ ಎಲ್ಲ ಬಗೆಯ, ವೈವಿಧ್ಯಮಯ ಸೇವೆ ಪಡೆಯಲು ಗೂಗಲ್+ ಅತ್ಯುತ್ತಮ ತಾಣ.

ಎಲ್ಲಕ್ಕಿಂತ ಹೆಚ್ಚಾಗಿ ಕಂಡ ಕಂಡವರನ್ನು ನಾವು ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಫೇಸ್‌ಬುಕ್‌ನಲ್ಲಿದೆ. ಎಷ್ಟೋ ಜನಪ್ರಿಯ ವ್ಯಕ್ತಿಗಳು ಅಪರಿಚಿತರನ್ನು, ಅನಾಮಿಕ ವ್ಯಕ್ತಿಗಳನ್ನು ತಮ್ಮ ಫ್ಯಾನ್‌ಗಳೆಂದು ಸೇರಿಸಿಕೊಂಡಿದ್ದಾರೆ. ಗೂಗಲ್+ನಲ್ಲಿ ಬಹುತೇಕ ಹೀಗಾಗದು. ನಾವು ಯಾರ್ಯಾರನ್ನು ಹತ್ತಿರ ಸೇರಿಸಿಕೊಳ್ಳಬೇಕು ಎಂಬುದನ್ನು ಸಾಕಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಆದರೆ ನಮ್ಮನ್ನು ಹಲವರು, ಅಥವಾ ಯಾರ್ಯಾರೋ ತಮ್ಮ ಗೂಗಲ್+ ವೃತ್ತಗಳಲ್ಲಿ ಸೇರಿಸಿಕೊಳ್ಳುತ್ತಾರೆ… ಅದನ್ನು ತಡೆಯುವುದು ಆಗದು. ಅಂಥವರ ಸಂದೇಶವನ್ನು ನೀವು ಯಾವಾಗಲೂ ನಿರ್ಲಕ್ಷಿಸಬಹುದು ಬಿಡಿ..

ಈಗಂತೂ ಗೂಗಲ್‌ನ ಜಿಮೈಲ್ ಖಾತೆ ಹೊಂದಲು ನೀವು ಮೊಬೈಲ್ ಸಂಖ್ಯೆಯನ್ನೂ ನೀಡಬೇಕಿದೆ.  ಆದ್ದರಿಂದ ಖೊಟ್ಟಿ ವ್ಯಕ್ತಿಗಳ ಹಾವಳಿ ಸಾಕಷ್ಟು ನಿಯಂತ್ರಣದಲ್ಲಿದೆ. ಖೊಟ್ಟಿ / ಬೇನಾಮಿ ಖಾತೆಗಳವರು ನಿಮ್ಮ ಸ್ನೇಹಿತರ ಪಟ್ಟಿಗೆ ಬರಲೇ ಹೆದರುವ ಸ್ಥಿತಿ ಇದೆ. ಫೇಸ್‌ಬುಕ್‌ನಲ್ಲಿ ಇದಕ್ಕೆಲ್ಲ ನಿಯಂತ್ರಣವಿಲ್ಲ.

ಗೂಗಲ್+ನ ಯಶಸ್ಸಿನ ಹಿನ್ನೆಲೆಯಲ್ಲಿ ವಿಫಲತೆಯ ಅಧ್ಯಾಯಗಳೂ ಇವೆ. ಈ ಹಿಂದೆ ವೇವ್ ಮತ್ತು ಬಜ್ ಎಂಬ ಸಾಮಾಜಿಕ / ಸಾರ್ವಜನಿಕ ಚಟುವಟಿಕೆಯ ಸಾಧನಗಳನ್ನು ಗೂಗಲ್ ಬಿಡುಗಡೆ ಮಾಡಿತ್ತು; ಅವೆರಡೂ ಯದ್ವಾತದ್ವಾ ಕಳಪೆ ಸೇವೆಯಿಂದಾಗಿ ಸೋತವು. ಆದರೆ ಗೂಗಲ್ನದೇ ಆದ ಯೂಟ್ಯೂಬ್ ಮತ್ತು ಆರ್ಕುಟ್ಗಳು ಈಗಲೂ ಜನಪ್ರಿಯ. ಆರ್ಕುಟ್ ಅಂತೂ ಫೇಸ್‌ಬುಕ್‌ನ ಅಪರಾವತಾರ; ಸಾಮಾಜಿಕ ಅಪಾಯಗಳಿಗೂ ದಾರಿಮಾಡಿಕೊಟ್ಟ ಸೋಶಿಯಲ್ ನೆಟ್ವರ್ಕ್.

ಈಗ ಫೇಸ್ಬುಕ್ನಂತೆ ಗೂಗಲ್ನಲ್ಲೂ ಕ್ರೀಡೆಗಳು ಇಣುಕಿವೆ. ಮುಂದಿನ ದಿನಗಳಲ್ಲಿ ಈ ಕ್ರೀಡೆಗಳೇ ಪ್ರಬಲವಾದ ಆಕರ್ಷಣೆ ಆಗಬಹುದು  ಎಂದು ಟೆಕ್ಕಿಗಳು ಊಹಿಸಿದ್ದಾರೆ. ಇದಕ್ಕೆ ಉತ್ತರವಾಗಿ ಫೇಸ್ಬುಕ್ ತನ್ನ ಜಾಲತಾಣದಲ್ಲಿ ಸಂಗೀತ, ಸಿನೆಮಾ – ಎಲ್ಲ ಮನರಂಜನೆಯನ್ನೂ ಒದಗಿಸುವುದಾಗಿ ಈ ಲೇಖನ ಬರೆಯುವ ಹೊತ್ತಿಗೆ ಘೋಷಿಸಿದೆ.

ಮುಂದಿನ ದಿನಗಳನ್ನು ಊಹಿಸುವುದು ತುಂಬ ಕಷ್ಟವೇನಲ್ಲ; ದೂರವಾಣಿ ಸಾಧನಗಳಾದ ಮೊಬೈಲ್ ಯಂತ್ರಗಳು ಕಿರುಕಂಪ್ಯೂಟರುಗಳಾಗುತ್ತವೆ; ಕಂಪ್ಯೂಟರುಗಳು ಚಿಕ್ಕದಾಗುತ್ತ ಪಿಸಿ ಟ್ಯಾಬ್ಲೆಟ್ಗಳಾಗಿವೆ ಸಂಗೀತ, ಸಿನೆಮಾ ಎಲ್ಲವೂ ಈ ಸಾಧನಗಳಲ್ಲಿ ಅದಾಗಲೇ ಸಿಗುತ್ತಿವೆ. ಬೇಕಾಗಿರೋದು ಈ ಬದುಕಿನ ಖುಷಿಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಒಂದು ವೇದಿಕೆ. `ಮೀಡಿಯಾ ಕಾನ್ವರ್ಜೆನ್ಸ್’  ಅರ್ಥಾತ್ ಮಾಧ್ಯಮ ಸಂಯೋಗದ ಹೊಸ ಯುಗವಿದು. ಬಹುಮಾಧ್ಯಮಗಳು, ಬಹುಸೇವೆಗಳು ಒಂದೆಡೆ ದೊರಕಬೇಕೆಂದು ಬಯಸುವ ತರಾತುರಿಯ ಬದುಕಿದು. ಗೂಗಲ್+ ಇದಕ್ಕೆಂದೇ ಹೇಳಿ ಮಾಡಿದಂತಿರುವ ಸಾಧನ! ಆಂಡ್ರಾಯ್ಡ್ ಆಪರೇಟಿಂಗ್ ತಂತ್ರಾಂಶದ ಮೂಲಕ ಮೊಬೈಲ್ ಮತ್ತು ಪಿ ಟ್ಯಾಬ್ಲೆಟ್ಗಳನ್ನು ಆಕ್ರಮಿಸಿ, ಮೊಟೋರೋಲಾ ಸಂಸ್ಥೆಯ ಮೊಬೈಲ್ ತಯಾರಿಕಾ ಘಟಕವನ್ನೇ ಖರೀದಿಸಿರುವ ಗೂಗಲ್ ಇಂಟರ್ನೆಟ್ ರಂಗದ ದೈತ್ಯ ಪಾತ್ರಧಾರಿಯಾಗುತ್ತ ಮುನ್ನಡೆದಿದೆ.

ಒಂದೇ ಜಾಲತಾಣದಲ್ಲಿ ಇವೆಲ್ಲ ಸೇವೆಗಳ ಜೊತೆಗೇ ಸುದ್ದಿ, ಈಮೈಲ್, ಚಾಟ್, ಕಡತ ವರ್ಗಾವಣೆ – ಎಲ್ಲವೂ ಸದ್ಯಕ್ಕಂತೂ ಹೇರಳವಾಗಿರುವ ಗೂಗಲ್+ ಈಗಿನ ಮಟ್ಟಿಗೆ ಹೆಚ್ಚು ಅನುಕೂಲದ, ಹೆಚ್ಚು ಸುರಕ್ಷತೆಯ ಸೋಶಿಯಲ್ ನೆಟ್ವರ್ಕ್. ನಾನ್-ಇಂಟ್ರೂಸಿವ್ (ನಮ್ಮ ವ್ಯವಹಾರಕ್ಕೆ ನೆರವು ನೀಡಿಯೂ ನಮ್ಮನ್ನು ಜಾಹೀರಾತುಗಳಿಂದ ಕಾಡದ, ಪದೇ ಪದೇ ವಿವಿಧ ಪ್ರಕಟಣೆಗಳಿಂದ ತಲೆ ತಿನ್ನದ ವರ್ತನೆ) ಗುಣವಿರುವ ಗೂಗಲ್+ ನನ್ನ ಅಲ್ಪ ಅನುಭವದ ಮಟ್ಟಿಗೆ ಒಳ್ಳೆಯ ಆಯ್ಕೆ. ತಾಜಾ ಸುದ್ದಿಗಳನ್ನು ಬೀರುವ ಗೂಗಲ್ ನ್ಯೂಸ್, ಭೂಮಿಯ ಅಂಗುಲಂಗುಲವನ್ನೂ ನಕಾಶೆಯಾಗಿಸಿದ ಗೂಗಲ್ ಮ್ಯಾಪ್ಸ್, ಹಣಕಾಸಿನ ಸಲಹೆ ನೀಡುವ ಗೂಗಲ್ ನಾನ್ಸ್, – ವಿವಿಧ ಸೇವೆಗಳ ಸಾಲು ಸಾಲು ಅನುಕೂಲಗಳನ್ನೆಲ್ಲ ಗೂಗಲ್+ನಲ್ಲೂ ಪಡೆಯಬಹುದು. ಇದಕ್ಕಿಂತ ಹೆಚ್ಚಿನ ಬಿಟ್ಟಿ ಅನುಕೂಲಗಳನ್ನು ನಿರೀಕ್ಷಿಸುವುದು ತ್ಪ. ಕೇವಲ ಸರ್ಚ್ ಇಂಜಿನ್ ಸೇವೆಯಿಂದಲೇ ಕಳೆದ ವರ್ಷ 29 ಬಿಲಿಯ ಡಾಲರ್ ವರಮಾನ ಗಳಿಸಿದ ಗೂಗಲ್ ಸಂಸ್ಥೆಗೆ ಈಗ ಉಚಿತ ಸೇವೆ ನೀಡುವುದು ಮಾರುಕಟ್ಟೆ ಸೂತ್ರವಾಗಿದೆ.

(ಗಮನಿಸಿ: ಇಂಟರ್ನೆಟ್ನಲ್ಲಿ ಎಲ್ಲವೂ ನಿಮ್ಮ ಆಯ್ಕೆ ಮತ್ತು ಬಳಕೆಯನ್ನು ಅವಲಂಬಿಸಿದೆ. ಸಮಾಜದ ಒಳ್ಳೆಯ ಸಂಗತಿಗಳನ್ನಷ್ಟೇ ನೀವು ಗಮನಿಸಿ ಅಂತೆಯೇ ಇಂಟರ್ನೆಟ್ ಬಳಸುತ್ತೀರಿ ಎಂಬ ವಿಶ್ವಾಸದಿಂದ ಇಲ್ಲಿ ಸಲಹೆಗಳನ್ನು ನೀಡಲಾಗಿದೆ. ಅಂತಿಮವಾಗಿ ಒಳಿತು – ಕೆಡುಕಿಗೆ ನೀವೇ ಜವಾಬ್ದಾರರು!)

————————-

ಗೂಗಲ್+ ಸೌಲಭ್ಯದ ಸದ್ಬಳಕೆ ಹೇಗೆ?

ಬಹುಶಃ ಫೇಸ್ಬುಕ್ಗಿಂತ ಭಿನ್ನವಾಗಿ ಚಟುವಟಿಕೆ ನಡೆಸಲು ಗೂಗಲ್+ ಅತ್ಯುತ್ತಮ ಅವಕಾಶ ಒದಗಿಸಿದೆ. ಇಲ್ಲಿ ಎಲ್ಲವೂ ಹೆಚ್ಚು ಪರಿಚಿತರ ನಡುವೆಯೇ ನಡೆಯುವ ಸಂವಹನ. ಆದರೆ ಸದ್ಬಳಕೆ – ದುರ್ಬಳಕೆ ಎಲ್ಲವೂ ಬಳಕೆದಾರರ ಮನಸ್ಥಿತಿಯನ್ನು ಅವಲಂಬಿಸಿದೆ. ಉದಾಹರಣೆಗೆ ಗೂಗಲ್+ನಲ್ಲಿ ನೀವು ಯಾವುದೋ ವಿಡಿಯೋವನ್ನು ಹರಿಬಿಡಬಹುದು. ಅದರ ಅಗತ್ಯವೇ ಹಲವರಿಗೆ ಇರುವುದಿಲ್ಲ. ಸುಮ್ಮನೆ ಕಾಲಹರಣ ಮಾಡುವ ಇಂಥ ಹಲವು ಚಟುವಟಿಕೆಗಳಿಂದ ಗಂಭೀರ ಬಳಕೆದಾರ ಸ್ನೇಹಿತರ ಸಂಗವನ್ನು ಕಡಿದುಕೊಳ್ಳುವುದೇ ಹೆಚ್ಚು. ಇಲ್ಲಿರೋ ಕೆಲವು ಕಿವಿಮಾತುಗಳನ್ನು ಗಮನಿಸಿ:

  • ನಿಮ್ಮ ಆಸಕ್ತಿ, ವೃತ್ತಿ, ಕುಟುಂಬ, ಸ್ನೇಹಿತವರ್ಗಕ್ಕೆ ಸಂಬಂಧಿಸಿದಂತೆ ಬಗೆಬಗೆಯ ವೃತ್ತಗಳನ್ನು ಮಾಡಿಕೊಳ್ಳಿ.  ಇವುಗಳಿಗೆ ನಿಮಗೆ ಪರಿಚಯ ಇರುವ ವ್ಯಕ್ತಿಗಳನ್ನಷ್ಟೇ ಸೇರಿಸಿಕೊಳ್ಳಿ. ಅಪರಿಚಿತ ವ್ಯಕ್ತಿಗಳು ನಿಮ್ಮನ್ನು ಆಹ್ವಾನಿಸಬಹುದು. ಆದರೆ ಅವರ ಪರಿಚಯವನ್ನು ಮಾಡಿಕೊಳ್ಳಿ. ಅದಕ್ಕಾಗೇ ಇರುವ ಆ ವ್ಯಕ್ತಿಯ `ಎಬೌಟ್’ ಅಧ್ಯಾಯವನ್ನು ಓದಿ. ಅದರಲ್ಲಿ ಏನೂ ಬರೆದಿರದಿದ್ದರೆ ಸ್ವಲ್ಪ ಕಾಯಿರಿ. ಅಥವಾ ಆ ವ್ಯಕ್ತಿಗೆ ಪರಿಚಯ ಮಾಡಿಕೊಳ್ಳಲು ತಿಳಿಸಿ.
  • ಸುಮ್ಮನೇ ಎಲ್ಲಿಂದಲೋ ಬಂದ ಈ ಮೈಲನ್ನು, ಯಾವುದೋ ಕ್ಷಣಿಕ ಮಜಾ ಕೊಡುವ ವಿಡಿಯೋವನ್ನೋ ಹಂಚಿಕೊಳ್ಳುವುದನ್ನು (ಶೇರ್) ಮಾಡಬೇಡಿ. ಬದಲಿಗೆ ನಿಮ್ಮ ಆ ದಿನದ ಅನಿಸಿಕೆಯನ್ನೇ ಬರೆಯಿರಿ. ಈಗಂತೂ ಯುನಿಕೋಡ್ ಕನ್ನಡದಲ್ಲಿ ಅಚ್ಚುಕಟ್ಟಾಗಿ ನಿಮ್ಮ ಅನಿಸಿಕೆಗಳನ್ನು ಬರೆಯಬಹುದು. ಗೊತ್ತಿರದ ಇಂಗ್ಲೀಷಿನಲ್ಲಿ ಬರೆಯವುದಕ್ಕಿಂತ ಕನ್ನಡದಲ್ಲೇ ವ್ಯಹರಿಸುವುದು ಸೂಕ್ತ.
  • ಯಾವುದೇ ವಿಷಯಗಳನ್ನು ಹಂಚಿಕೊಳ್ಳಬೇಕಾದರೂ ವಿನಯದಿಂದ ವರ್ತಿಸಿ; ಎಲ್ಲೂ ಒರಟು ಪದಗಳ ಬಳಕೆ ಬೇಡ. ನಿಮಗೆ ಇಷ್ಟವಾಗದ ಮಾಹಿತಿಗಳು ಬಂದರೆ ಜಗಳ ಆಡಬೇಕಿಲ್ಲ. ಒಂದೆರಡು ಪೋಸ್ಟ್‌ಗಳು ಬೇಡ ಎಂದಾದರೆ `ಮ್ಯೂಟ್ ದಿಸ್ ಪೋಸ್ಟ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ, ಅಥವಾ `ಬ್ಲಾಕ್ ದಿಸ್ ಪರ್ಸನ್’ ಎಂದೂ ಆರಿಸಿಕೊಂಡರೆ ಮುಂದೆ ಆ ವ್ಯಕ್ತಿಯಿಂದ ಯಾವ ಸಂದೇಶವೂ ನಿಮ್ಮ ಟಕ್ಕೆ ಬರುವುದಿಲ್ಲ!

————————-

ಹಾಗಾದರೆ ಸೋಶಿಯಲ್ ನೆಟ್‌ವರ್ಕ್‌ಗಳು ಒಳ್ಳೆಯವೆ?

  • ಮಕ್ಕಳು ಯಾವಾಗಲೂ ಫೇಸ್ಬುಕ್ ಆರ್ಕುಟ್ ಎಂದುಕೊಂಡಿದ್ದರೆ ಓದುವುದ್ಯಾವಾಗ ಎಂಬ ಪ್ರಶ್ನೆ ಪಾಲಕರದ್ದು. ನಿಜ. ಯಾವುದೇ ಅಭ್ಯಾಸವಾದರೂ ಅತಿಯಾದರೆ ಚಟವಾಗುತ್ತದೆ. ಇಲ್ಲೂ ಹಾಗೇ ಆಗಿರೋದು ವಾಸ್ತವ. ಆದರೆ ಪಾಲಕರು ಕೆಲವು ಸೂತ್ರಗಳನ್ನು ಪಾಲಿಸೋದ್ರಿಂದ ಇವನ್ನೆಲ್ಲ ನಿಯಂತ್ರಿಸಬಹುದು.
  • ಮಕ್ಕಳಿಗೆ ಯಾವುದಾದರೂ ಭೌತಿಕ ಚಟುವಟಿಕೆಯಲ್ಲಿ (ಸಂಗೀತ, ಕ್ರೀಡೆ, ಓದು, ಸಂಶೋಧನೆ, ಸಾಹಸ ಇತ್ಯಾದಿ) ಆಸಕ್ತಿ ಬರುವಂತೆ ಮೊದಲು ನಿರಂತರ ಯತ್ನಿಸಿ. ಆಗ ಇಂಟರ್ನೆಟ್ ಅತಿಬಳಕೆಯನ್ನು ತಡೆಯಬಹುದು.
  • ನೀವೂ ಕಂಪ್ಯೂಟರ್ ಕಲಿತು ಬಳಸಿ. ಇದರಿಂದ ನಿಮಗೆ ಮಕ್ಕಳ ಮೇಲೆ ಇರುವ ಅನುಮಾನಗಳು ಕಡಿಮೆಯಾಗುತ್ತವೆ; ಮಕ್ಕಳು ಏನು ಮಾಡುತ್ತಿದ್ದಾರೆ ಎಂದೂ ಗೊತ್ತಾಗುತ್ತದೆ.
  • ನಿಮ್ಮ ಮನೆಯ ಕಂಪ್ಯೂಟರನ್ನು ಆದಷ್ಟೂ ಮನೆಮಂದಿಯೆಲ್ಲ ಕಾಣುವ ಸ್ಥಳದಲ್ಲಿ ಇಡಿ. ಇದರಿಂದ ಅರ್ಧಕ್ಕರ್ಧ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕಂಪ್ಯೂಟರನ್ನು ಗುಪ್ತವಾಗಿಟ್ಟಷ್ಟೂ ಸಮಸ್ಯೆಗಳು ಹೆಚ್ಚು.

————————-

(ಕರ್ಮವೀರ ವಾರಪತ್ರಿಕೆಯಲ್ಲಿ ಇತ್ತೀಚೆಗೆ – ಅಕ್ಟೋಬರ್‌ ೨೦೧೧ – ಪ್ರಕಟಿತ ಲೇಖನ)

Share.
Leave A Reply Cancel Reply
Exit mobile version