ಈ ಪೀಳಿಗೆಯ ಹಿರಿಯರು ಮುಂದಿನ ಪೀಳಿಗೆಯ ಯುವ ಸಮುದಾಯಕ್ಕೆ ಒಳ್ಳೆಯ ಸಂಗತಿಗಳ ಬಗ್ಗೆ ಉಪದೇಶ, ಮಾರ್ಗದರ್ಶನ ನೀಡಬೇಕಾಗಿರುವುದು ಸಹಜವಾದ ನಡವಳಿಕೆ. ಆದರೆ ಈ ಹೊತ್ತು ನಮಗೆ ಹದಿಹರೆಯದವರೇ ಈ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಉದಾಹರಣೆಗಳು ಕಾಣತೊಡಗಿವೆ. ಮತಾಂಧತೆ, ಹಿಂಸಾಚಾರ, ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಮಲಾಲಾ ಯೂಸುಫ್‌ಜಾಯ್ ಇಲ್ಲಿ ಒಂದು ಉದಾಹರಣೆ ಮಾತ್ರ. ಇಂಥ ಹಲವು ಚೇತನಗಳು ತಮ್ಮ ಬಾಲ್ಯದಲ್ಲೇ ಕಡು ಸವಾಲುಗಳನ್ನು ಎದುರಿಸಿ ಗೆದ್ದು ನಿಂತಿರುವ ಕಥೆಗಳಿವೆ. ಆಫ್ರಿಕಾದ ಕುಗ್ರಾಮದಲ್ಲಿದ್ದ ವಿಲಿಯಂ ಕಾಂಕ್ವಾಂಬಾ ಎಂಬ ಯುವಕ (ಜನನ ೧೯೮೭) ಹೇಗೆ ತನ್ನ ಮನೆಯ ಹಿತ್ತಲಿನಲ್ಲೇ ವಿದ್ಯುತ್ ಉತ್ಪಾದಿಸುವ ಗಾಳಿಯಂತ್ರವನ್ನು ನಿರ್ಮಿಸಿದ ಎಂಬ ಕಥೆ ಈಗ ಜನಜನಿತ. ಇಂಥ ಧೀಮಂತ ಹೃದಯದ ಆತ್ಮಕಥನವನ್ನು ಕರುಣಾ ಬಿ ಎಸ್ ಕನ್ನಡಕ್ಕೆ ತಂದು ಒಳ್ಳೆಯ ಕೆಲಸ ಮಾಡಿದ್ದಾರೆ.

ಇತಿಹಾಸ, ಪರಂಪರೆ, ಗ್ರಾಮೀಣ ಬದುಕು, ಸಮಸ್ಯೆಗಳ ಕಗ್ಗತ್ತಲು, – ಹೀಗೆ ಭಾರತಕ್ಕೂ ಆಫ್ರಿಕಾದ ಮಾಲಾವಿ ದೇಶಕ್ಕೂ ಹಲವು ಸಾಮ್ಯಗಳಿವೆ. ಆದ್ದರಿಂದ ಛಂದ ಪುಸ್ತಕವು ಈ ಕೃತಿಯನ್ನು ಕನ್ನಡಕ್ಕೆ ತಂದಿರುವುದು ಅತ್ಯಂತ ಸಮಯೋಚಿತವಾಗಿದೆ.

ಈ ಆತ್ಮಕಥೆಯನ್ನು ಬ್ರಿಯಾನ್ ವೀಲರ್ ಎಂಬುವವರು ಕಾಂಕ್ವಾಂಬಾ ಜೊತೆಗೆ ಒಂದು ವರ್ಷ ವಾಸಮಾಡಿ ಬರೆದಿದ್ದಾರೆ. ಹಾಗೆ ನೋಡಿದರೆ ಇದು ಸಹಾಯ ಪಡೆದು ರಚಿಸಿದ ಆತ್ಮಕಥೆ. ಕಾಂಕ್ವಾಂಬಾರ ಭಾವನೆಗಳನ್ನು ಅವನದೇ ಭಾವನೆಗಳಾಗಿ ಕಂಡು ಬರೆಯುವುದು ಕಷ್ಟದ ಕೆಲಸ. ಅದರಲ್ಲೂ ಕಾಂಕ್ವಾಂಬಾಗೆ ಇಂಗ್ಲಿಶ್ ಭಾಷೆಯೇ ಬಾರದು. ೨೦೦೭ರಲ್ಲಿ ಟಾಂಜೇನಿಯಾದ ಅರುಶಾದಲ್ಲಿ ನಡೆದ ಟೆಡ್ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಗೋ ಇಂಗ್ಲಿಶ್ ಬೆರೆಸಿ ಮಾತನಾಡಿದ ಕಾಂಕ್ವಾಂಬಾ ಕೊನೆಗೆ `I ಖಿಡಿಥಿ, ಚಿಟಿಜ I mಚಿಜe iಣ” ಎಂದಿದ್ದೇ ಅತ್ಯಂತ ಜನಪ್ರಿಯವಾದ ಘೋಷಣೆಯಾದ ಕಥೆಯನ್ನೂ ಈ ಪುಸ್ತಕದಲ್ಲಿ ಓದಿದರೆ ಎಂಥವರಿಗಾದರೂ ಎದೆತುಂಬಿ ಬರುತ್ತದೆ. ಹಾಳಾಗಿದ್ದ ಬೈಸಿಕಲ್‌ನ್ನು, ಡೈನಮೋವನ್ನು, ಹೂತುಹೋಗಿದ್ದ ಚಪ್ಪಲಿಯ ರಬ್ಬರ್ ತುಂಡನ್ನು ಮತ್ತು ಗುಜರಿ ವಸ್ತುಗಳನ್ನು ಬಳಸಿ ಕಾಂಕ್ವಾಂಬಾ ರೂಪಿಸಿದ ಗಾಳಿಯಂತ್ರ ಕಗ್ಗತ್ತಲ ಖಂಡಕ್ಕೇ ಬೆಳಕು ಹಾಯಿಸಿದಂತಿದೆ. ಇಂಥದ್ದೊಂದು ಅತ್ಯಪರೂಪದ ಆತ್ಮಕಥನವನ್ನು ಕನ್ನಡದಲ್ಲಿ ಓದಲು ಸಾಧ್ಯವಾಗಿರುವುದಕ್ಕೆ ಸಂತಸವಾಗುತ್ತದೆ.

ಅಂತರಜಾಲ (ಇಂಟರ್‌ನೆಟ್) ಬಿಡಿ, ವಿದ್ಯುತ್ತೇ ಇರದ ಹಳ್ಳಿಯಲ್ಲಿ ಹೇಗೋ ಬೆಳೆದ ಕಾಂಕ್ವಾಂಬಾನ ಕಥೆಯನ್ನು ಓದುತ್ತಿದ್ದರೆ `ಎಂಥ ಬದುಕು ಇದು..’ ಎಂಬ ಉದ್ಗಾರ ಮೂಡುವುದು ಸಹಜ. ಭೀಕರ ಬರಗಾಲ, ಏಯ್ಡ್ಸ್ ಕಾಯಿಲೆಗಳ ಬೀಡಿನಲ್ಲಿ ಕಾಂಕ್ವಾಂಬಾ ಹಸಿವನ್ನೇ ತಿಂದು ಬದುಕಿದವರು. ಮನೆ, ಹಳ್ಳಿಯ ಸಂಕಷ್ಟದ ಸ್ಥಿತಿಯಲ್ಲೂ ಗಾಳಿಯಂತ್ರ ಮಾಡಲೇಬೇಕೆಂದು ಹಟ ತೊಟ್ಟ ಕಾಂಕ್ವಾಂಬಾ ಕೊನೆಗೂ ಯಶ ಪಡೆದು ಗಾಳಿಯಂತ್ರದಿಂದ ದೀಪ ಹೊತ್ತಿಸುತ್ತಾರೆ. ಜನ ಅಚ್ಚರಿಯಿಂದ ಕೇಳುವ ಪ್ರಶ್ನೆಗಳಿಗೆ ಬಲ್ಬನ್ನು ಕೈಯಲ್ಲಿ ಹಿಡಿದೇ ಉತ್ತರಿಸುತ್ತಾರೆ! ಅರ್ಧ ಗಂಟೆ ನಗುತ್ತಾರೆ!

ಶಾಲೆಗಳಿಗೆ ಮಕ್ಕಳೇ ಬರುವುದಿಲ್ಲ ಎಂದು ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಕಾಂಕ್ವಾಂಬಾ ಮಾಡಿದ್ದೇನೂ ದೊಡ್ಡದಲ್ಲ ಎಂದು ಅನ್ನಿಸಿಲೂಬಹುದು. ಅಷ್ಟರಮಟ್ಟಿಗೆ ನಮಗೂ ಮಾಲಾವಿಗೂ ವ್ಯತ್ಯಾಸವಿದೆ. ಜಾಗತಿಕ ಬದುಕಿನ ಭರಾಟೆಗಳ ನಡುವೆ ಕಾಂಕ್ವಾಂಬಾ ಮಾಡಿದ್ದು ಒಂದು ಚಿಕ್ಕ ಪ್ರಯೋಗ ಎಂದೂ ಬದಿಗೆ ಸರಿಸಬಹುದಿತ್ತೇನೋ. ಆದರೆ ಕಾಂಕ್ವಾಂಬಾ ಎಲ್ಲರಿಗಿಂತ ವಿಭಿನ್ನರಾಗುವುದು ಅವರ ಹಟಕ್ಕಾಗಿ, ಅವರ ಸತತ ಯತ್ನದ ಗಾಥೆಗಳಿಗಾಗಿ. ಕಾಂಕ್ವಾಂಬಾರ ಕಥೆ ಓದಿದರೆ ಇಂಥ ಎಷ್ಟೋ ಪ್ರಯೋಗಗಳು ಜಗತ್ತಿನ ಬೇರೆಡೆಯೂ ನಡೆದಿರಬಹುದೇನೋ ಎಂದು ಅನುಮಾನ ಬರುತ್ತದೆ. ಏಕೆಂದರೆ ವಿಶ್ವದಾದ್ಯಂತ ಕಡುಬಡತನದ ಬದುಕನ್ನು ಎದುರಿಸುತ್ತ ಖುಷಿಯಾಗಿರುವ ಕುಟುಂಬಗಳ ಸಂಖ್ಯೆಗೆ ಮಿತಿಯೇ ಇಲ್ಲ.

ಕಾಂಕ್ವಾಂಬಾ ಪುಸ್ತಕದ ಕೆಲವು ಸಾಲುಗಳನ್ನು ಗಮನಿಸಿ:

  • “ಶಾಲೆಯಲ್ಲಿ ನಾಳೆ ೧೨೦೦ ಕ್ವಾಚಾ ಫೀಸ್ ತರಲು ಹೇಳಿದ್ದಾರೆ. ನಾವು ಕೊಡಲೇಬೇಕು. ಫಿರಿ ಸರ್ ತುಂಬಾ ಗಂಭೀರವಾಗಿ ಈ ಮಾತು ಹೇಳಿದರು ಅಪ್ಪಾ ನನ್ನ ತಂದೆ ಹಿಂದೊಮ್ಮೆ ಉಗ್ರಾಣದಲ್ಲಿ ಧಾನ್ಯದ ಚೀಲಗಳು ಏನೋ ಹೇಳಲಿ ಎಂದು ನೋಡಿದ ರೀತಿಯಲ್ಲಿಯೇ, ತಮ್ಮ ಕಾಲ ಕೆಳಗಿದ್ದ ಕೆಸರನ್ನು ನೋಡಿದರು. ಆ ಬಳಿಕ ನಾನು ನಾನು ಯಾವ ನೋಟಕ್ಕೆ ಅಂಜುತ್ತಿದ್ದೆನೋ, ಹಾಗೆಯೇ ನನ್ನತ್ತ ನೋಡಿದರು.
  • ಮಗನೇ…. ನಿನಗೆ ನಮ್ಮ ಕಷ್ಟಗಳು ಗೊತ್ತೇ ಇದೆ. ನನ್ನ ಬಳಿ ಏನೂ ಇಲ್ಲ.”… ಆದರೆ ನನಗೆ ಫಿರಿ ಸರ್ ಹೇಳಿದ ಮಾತುಗಳೇ ಗುಯ್‌ಗುಡುತ್ತಿದ್ದವು. “ಶುಲ್ಕ ಪಾವತಿಸದಿದ್ದರೆ ಶಾಲೆಗೆ ಬರಬೇಡಿ…”
  • ಜನವರಿ ತಿಂಗಳ ಕೊನೆಗೆ ಎಲ್ಲೆಡೆ ಗಾಗಾ ದಾಸ್ತಾನು ಕೂಡ ಮುಗಿದುಹೋಯಿತು. ಸೀಮ ಮಾಡಲು ಗಾಗಾ ಹಿಟ್ಟನ್ನೇ ಆಶ್ರಯಿಸಿದ್ದ ಜನರು ಈಗ ಕುಂಬಳಕಾಯಿ ಎಲೆಯತ್ತ ಮುಖ ಮಾಡಿದರು. .. ರಾತ್ರೋರಾತ್ರಿ ಜನರ ದೇಹದ ಆಕಾರವೇ ಬದಲಾಗಿ ವಿಚಿತ್ರವಾಗಿ ಕಾಣತೊಡಗಿದರು. ಜನರು ಮಣ್ಣಿನಲ್ಲಿ, ಪ್ರಾಣಿಗಳಂತೆ ಆಹಾರಕ್ಕಾಗಿ ತಡಕಾಡುವುದು ಸಾಮಾನ್ಯ ದೃಶ್ಯವಾಯಿತು. ನೂರಾರು ಮೈಲಿ ದೂರದಲ್ಲಿ ಮನೆ, ಮಠ, ಕುಟುಂಬವನ್ನು ತೊರೆದು ಎಲ್ಲೋ ಸಾವನ್ನಪ್ಪುತ್ತಿದ್ದರು.
  • “ಒಬ್ಬನು ಊಟಕ್ಕಾಗಿ ಸುಮಾರು ದಿವಸ ಒದ್ದಾಡಿದನಂತೆ. ಒಂದು ದಿನ ಮರದ ಕೆಳಗೆ ಮಲಗಲು ಹೋದವನು ಏಳಲೇ ಇಲ್ಲ.”; “ಆಯ್ಯೋ ನನ್ನ ಹತ್ತಿರ ಸೀಮ ಬೇಕು ಅಂತ ಒಬ್ಬನು ಕೇಳಿಕೊಂಡು ಬಂದಿದ್ದ. ಅವನಿಗೆ ಸೀಮ ಮಾಡಿ ಕೊಡುವ ಹೊತ್ತಿಗೆ ಅವನ ಜೀವವೇ ಹೋಗಿತ್ತು.”; ಒಬ್ಬ ಮಹಿಳೆಯ ಸ್ಥಿತಿಯಂತೂ ಶೋಚನೀಯ. ದಾರಿಯಲ್ಲಿ ಬರುತ್ತಿರುವಾಗ ಕೆಸರಿನಲ್ಲಿ ಹುದುಗಿದ್ದ ಹೆಣಗಳ ಮೇಲೆ ಕಾಲಿಟ್ಟಿದ್ದೂ ಆಕೆಗೆ ಅರಿವಾಗಿರಲಿಲ್ಲ. ಅವರು ಹಿಡಿದಿದ್ದ ಗುದ್ದಲಿಯನ್ನು ಎಡವಿ ಬಿದ್ದಾಗಲೇ ಆಕೆಗೆ ತಿಳಿದಿದ್ದು! ; ಇನ್ನು ಕೆಲವರು ತಮ್ಮ ದೇಹದಲ್ಲಿ ಸೇರಿದ್ದ ನೀರನ್ನು ತೆಗೆಯಲು ಒಂದೆರಡು ಕಡೆ ಚುಚ್ಚಿಕೊಂಡರು. ಕ್ರಮೇಣ ಆ ಗಾಯಗಳು ಸೋಂಕಾಗಿ ಮರಣ ಹೊಂದಿದರು.

ಹೀಗೆ ಬದುಕಿನ ಭೀಕರತೆಯನ್ನು ತನ್ನ ಮುಗ್ಧ ಮತ್ತು ನೇರ ಅನುಭವದ ಮೂಸೆಯಲ್ಲಿ ತಿರುವಿ ಕೊಡುವ ಕಾಂಕ್ವಾಂಬಾ ಪುಟದಿಂದ ಪುಟಕ್ಕೆ ಆಪ್ತವಾಗುತ್ತ ಹೋಗುತ್ತಾರೆ.

ಈ ಪುಸ್ತಕವನ್ನು ಮೆಚ್ಚಿಕೊಳ್ಳಲು ಇನ್ನೂ ಒಂದು ಮಹತ್ವದ ಕಾರಣವಿದೆ. ಭಾರತವೂ ಸೇರಿದಂತೆ ಎಲ್ಲ ದೇಶಗಳಲ್ಲೂ ಇಂಧನ ಅಸಮಾನತೆ ತಾಂಡವವಾಡುತ್ತಿದೆ. ಪಾಶ್ಚಾತ್ಯ ನಗರಗಳು, ಮತ್ತು ಆಧುನಿಕತೆ – ನಗರೀಕರಣದ ಪ್ರಭಾವಕ್ಕೆ ಒಳಗಾಗಿರುವ ಪೂರ್ವದ ನಗರಗಳು ಅತಿ ಬೆಳಕಿನಿಂದ ಝಗಮಗಿಸುತ್ತಿವೆ. ಉಪಗ್ರಹಗಳಿಂಧ ತೆಗೆದ ಭೂಮಿಯ ರಾತ್ರಿ ಚಿತ್ರವನ್ನು ನೋಡಿದರೆ ಈ ಅಂಶವು ನಿಚ್ಚಳವಾಗುತ್ತದೆ. ಕೇವಲ ಆಫ್ರಿಕಾ ಮಾತ್ರವಲ್ಲ, ಜಗತ್ತಿನ ಬಹುಭಾಗವು ಕತ್ತಲಿನಿಂದಲೇ ತುಂಬಿದೆ. ವಿದ್ಯುತ್ ಸಂಪರ್ಕ ಇದ್ದರೂ ಸರಬರಾಜು ಇಲ್ಲದ ಸ್ಥಿತಿ ಭಾರತದ ಸಾವಿರಾರು ಹಳ್ಳಿಗಳಲ್ಲಿದೆ! ಪ್ರಕೃತಿಯೊಂದಿಗೇ ಬದುಕಿರುವ ಗ್ರಾಮೀಣ ಜನರಿಗೆ ವಿದ್ಯುತ್ತಿನಲ್ಲಿ ಸಮಪಾಲು ಸಿಗುತ್ತಿಲ್ಲ; ಆದರೆ ಪ್ರಕೃತಿಯನ್ನೇ ಧಿಕ್ಕರಿಸಿ ನಗರಗಳಲ್ಲಿ ಬದುಕುವವರಿಗೆ ವಿದ್ಯುತ್ತಿನಲ್ಲಿ ಅತಿಹೆಚ್ಚು ಪಾಲು. ಇದರಲ್ಲಿ ವಿದ್ಯುತ್ತಿನ ದುಂದುವೆಚ್ಚವಂತೂ ಹೇಳತೀರದು. ಬರಗಾಲದ ಬಗ್ಗೆಯೂ ಸರ್ಕಾರಿ ಸಭೆಗಳು ಹವಾನಿಯಂತ್ರಿತ ಕೊಠಡಿಯಲ್ಲಿಯೇ ನಡೆಯುತ್ತವೆ. ಪರಿಸರ ಸಂರಕ್ಷಣೆಯ ಉಪದೇಶ ಹೇಳುವ ಸಂಸ್ಥೆಗಳಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ಲೋಟಗಳೇ ಕಾಣಿಸುತ್ತವೆ! ಇಂಥ ಅಸಮತೋಲನದ ಸನ್ನಿವೇಶದಲ್ಲಿ ಕಾಂಕ್ವಾಂಬಾ ಕೊಟ್ಟ ಸಂದೇಶಕ್ಕೆ ಹಲವು ಆಯಾಮಗಳಿವೆ.

ಸಂಶೋಧನೆಗೆ, ಆವಿಷ್ಕಾರಕ್ಕೆ ಒಳ್ಳೆಯ ಮನಸ್ಸು ಇದ್ದರೆ ಸಾಕು ಎಂದು ಕಾಂಕ್ವಾಂಬಾ ತೋರಿಸಿಕೊಟ್ಟಿದ್ದಾರೆ. ತುಂಡು ಓದುಗನಾದರೂ, ತರ್ಕಕ್ಕೆ ಬೆಲೆಕೊಟ್ಟರೆ ಸಂಶೋಧನೆ ಅಸಾಧ್ಯವೇನಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ವಿಜ್ಞಾನವನ್ನು ತಿಳಿಯಲು ಆಧುನಿಕ ಪ್ರಯೋಗಾಲಯಗಳೇ ಬೇಕು ಎಂದೇನಿಲ್ಲ; ಕಸದ ಗುಂಡಿಗಳಿಂದಲೂ ಸಾಧ್ಯ ಎಂದು ಕಾಂಕ್ವಾಂಬಾ ಸಾಬೀತು ಮಾಡಿದ್ದಾರೆ. `ಈ ಕತೆಯು ನನ್ನ ಅನೇಕ ಸಹೋದರ ಸಹೋದರಿಯರಿಗೆ ತಲುಪಿ, ಅವರು ತಮ್ಮ ಜೀವನಪಥದಲ್ಲಿ ಯಶಸ್ಸು ಪಡೆಯಲಿ ಎಂಬುದೇ ನನ್ನ ಆಶಯ. ಒಂದು ವೇಳೆ ಅವರು ತಮ್ಮ ಬಡತನ, ಆರ್ಥಿಕ ಪರಿಸ್ಥಿತಿಯಿಂದ ಎದೆಗುಂದಿದರೂ, ಈ ಪ್ರಯಾಣದಲ್ಲಿ ಅವರು ಒಂಟಿಯಲ್ಲವೆಂದು ನಾನು ಹೇಳಬಯಸುತ್ತೇನೆ. ನಾವೆಲ್ಲರೂ ಒಟ್ಟಿಗೆ ಶ್ರಮಿಸಿದರೆ ನಮಗೆ ತೊಡಕಾಗಿರುವ ದುರಾದೃಷ್ಟವೆಂಬ ಭೂತವನ್ನು ಹೊಡೆದೋಡಿಸಬಹುದು. ಭವ್ಯ ಭವಿಷ್ಯಕ್ಕೆ ಬುನಾದಿಯನ್ನು ಹಾಕಬಹುದು. ಸುಂದರ ಬದುಕನ್ನು ರೂಪಿಸಿಕೊಳ್ಳಬಹುದು. ಅದಕ್ಕೆ ನಾನೇ ದೊಡ್ಡ ಉದಾಹರಣೆ!’ ಎಂದು ಕಾಂಕ್ವಾಂಬಾ ಹೇಳುವಾಗ ನಮ್ಮ ಮನಸ್ಸು ತುಂಬಿ ಬರುತ್ತದೆ.

ಈ ಪುಸ್ತಕವು ಪ್ರಿಯವಾಗುವುದು ಭಾವನಾತ್ಮಕ ಕಾರಣಗಳಿಗಷ್ಟೇ ಅಲ್ಲ; ಅತ್ಯಂತ ವಿನೀತ, ನವಿರು ನಿರೂಪಣೆಯಿಂದ; ಸರಳ ಸುಂದರ ಅನುವಾದದಿಂದ.

ಹಸಿವಿನಿಂದ ಸಾಯುವವರ ಅಸಂಖ್ಯ ಕಥೆಗಳನ್ನು ಚೀನಾದಲ್ಲಿ, ಉತ್ತರ ಕೊರಿಯಾದಲ್ಲಿ ಇಂದಿಗೂ ಕಾಣಬಹುದು. ಅವೆಲ್ಲವೂ ಮಾನನಿರ್ಮಿತ ಬರಗಾಲಗಳು. ಆದರೆ ಆಫ್ರಿಕಾದಲ್ಲಿ ನಿಸರ್ಗವೇ ಪದೇ ಪದೇ ಮುನಿಯುತ್ತದೆ. ಆದ್ದರಿಂದ ಕಾಂಕ್ವಾಂಬಾನ ಸಾಧನೆಗೆ ಅದರದ್ದೇ ಆದ ಸ್ಥಾನವಿದೆ.

ಕನ್ನಡ ಸಾಹಿತ್ಯಲೋಕದಲ್ಲಿ ಇಂಥ ಸಮಕಾಲೀನ ಆತ್ಮಕಥೆಗಳು, ಸಮಕಾಲೀನ ಸಮಸ್ಯೆಗಳಾದ ಇಂಧನ, ಮಾಲಿನ್ಯ, ಪರಿಸರ ನಾಶ ಕುರಿತ ಪುಸ್ತಕಗಳು ಬರುವುದೇ ಅಪರೂಪವಾಗಿರುವ ಇಂದಿನ ಸನ್ನಿವೇಶದಲ್ಲಿ ಛಂದ ಪುಸ್ತಕವು ಎಂದಿನ ಫಿಕ್ಷನ್ ಸಾಹಿತ್ಯದ ವಲಯದಿಂದ ಹೊರಗೆ ಬಂದು ಇಂಥ ಫಿಕ್ಷನ್‌ಗಿಂತ ರೋಚಕವಾಗಿರುವ ನಾನ್-ಫಿಕ್ಷನ್ ಪ್ರಕಟಿಸಿರುವುದು ಅಭಿನಂದನೀಯ. ಮುಂದೆಯೂ ಛಂದ ಪುಸ್ತಕವು ಇಂಥ ಹಲವು ಪುಸ್ತಕಗಳನ್ನು ಪ್ರಕಟಿಸಲಿ ಎಂದು ನಿರೀಕ್ಷಿಸೋಣ.

ಕೇವಲ ಆಸಕ್ತಿಯೊಂದೇ ಬರವಣಿಗೆಯನ್ನು ಕೆರಳಿಸಿ ಅರಳಿಸಿದ್ದಕ್ಕೇ ಈ ಅನುವಾದವನ್ನು ಮಾಡಿಕೊಟ್ಟ ಕರುಣಾ ಬಿ ಎಸ್ ಕೂಡಾ ಅಭಿನಂದನಾರ್ಹರು. ಅಪಾರ ರಚಿಸಿದ ಮುಖಪುಟವಿದ್ದ ಮೇಲೆ ಕೇಳಬೇಕೆ? ಇಡೀ ಪುಸ್ತಕ ಆರಂಭದಿಂದ ಕೊನೆಯತನಕ ಆಸಕ್ತಿ ಉಳಿಸಿಕೊಳ್ಳುತ್ತದೆ. ಓದಿದ ಮೇಲೆ ಕಾಂಕ್ವಾಂಬಾ ನಮ್ಮ ಮನೆಯ ಹುಡುಗನೇನೋ ಎಂದೆನ್ನಿಸಿಬಿಡುತ್ತದೆ.

ಈ ಪುಸ್ತಕವು `ಭರವಸೆಯ ಗಾಳಿ ಬೆಳಕಿನ ಆತ್ಮಕಥನ’ವಷ್ಟೇ ಅಲ್ಲ; ಕನ್ನಡ ಪ್ರಕಟಣಾರಂಗದಲ್ಲೂ ಭರವಸೆ ಮೂಡಿಸಿದ `ಹಾದಿ ಬದಲಿಸುವ’ ಪ್ರಕಟಣೆ ಎಂಬುದು ಖಚಿತ.

ಕಾಂಕ್ವಾಂಬಾ ಕುರಿತು ಹೆಚ್ಚಿನ ಮಾಹಿತಿಗೆ ಈ ಕೊಂಡಿಗಳಿಗೆ ಬನ್ನಿ:

http://williamkamkwamba.typepad.com/
https://www.ted.com/speakers/william_kamkwamba
http://www.movingwindmills.org/

Share.
Leave A Reply Cancel Reply
Exit mobile version