ಕೆಲವು ವರ್ಷಗಳ ಹಿಂದೆ ಬ್ಲಾಗಿಂಗ್ ಯುಗದ ಒಂದು ದಿನ ಕನ್ನಡ ಬ್ಲಾಗರ್‌ಗಳ ಸಭೆಯೊಂದು ಬೆಂಗಳೂರಿನಲ್ಲಿ ನಡೆಯಿತು. ಆ ಸಭೆಯಲ್ಲಿ ನಾನು `ವರ್ಡ್‌ಪ್ರೆಸ್, ಬ್ಲಾಗ್‌ಸ್ಪಾಟ್ ಎಂಬ ಉಚಿತ ಬ್ಲಾಗಿಂಗ್ ಎಂಬುದೂ ಒಂದು ಮಾರಾಟ ತಂತ್ರ. ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಲೊಳಲೊಟ್ಟೆ. ನಾವು ನಮ್ಮ ಸ್ವಂತ ವೆಬ್‌ಸೈಟ್ ಹೊಂದಿದ್ದರೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂಬ ಸಮಾಧಾನ ಸಿಗುತ್ತದೆ’ ಎಂದಿದ್ದೆ. ಈಗ, ಫೇಸ್‌ಬುಕ್ ಮತ್ತು ಟ್ವಿಟರ್ ಎಂಬ ಯುಗದಲ್ಲಿ ಬ್ಲಾಗಿಂಗ್‌ಗಿಂತಲೂ ನಿಕೃಷ್ಟವಾದ, ಬಂಡವಾಳಶಾಹಿ ಸಮಾಜತಾಣಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮಹಾನ್ ವೇದಿಕೆಗಳು ಎಂದು ಭಾವಿಸಿಬಿಟ್ಟಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಯಾರು, ಯಾವುದೇ ವೇದಿಕೆ ಬಳಸಿ, ಎಲ್ಲಾದರೂ, ಏನು ಬೇಕಾದರೂ ಹೇಳಬಹುದು ಎಂಬ ಸ್ವೇಚ್ಛಾಚಾರ ಮತ್ತು ಅನಾಚಾರದವರೆಗೆ ಬಂದು ನಿಂತಿದ್ದೇವೆ. ಸರ್ಕಾರದ ಹುದ್ದೆಯಲ್ಲಿ ಇರುವವರು ತಮ್ಮದೇ ಪೊಲೀಸ್ ವ್ಯವಸ್ಥೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಅನುಮಾನ ವ್ಯಕ್ತಪಡಿಸುವ ಮಟ್ಟಕ್ಕೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಬೆಳೆದಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆಗಳು ಎಂದು ನಾವು ಭಾವಿಸುವ ಬಹುತೇಕ ಪತ್ರಿಕೆಗಳು, ಜಾಲತಾಣಗಳು, ಟಿವಿ ಚಾನೆಲ್‌ಗಳು- ಎಲ್ಲವೂ ಖಾಸಗಿ ಒಡೆತನಕ್ಕೆ ಸೇರಿವೆ. ಅಲ್ಲಿಯೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮಗೆ ಒದಗಿಸಲು ಬಂಡವಾಳಶಾಹಿಗಳ ಜಾಹೀರಾತುಗಳ ಬೆಂಬಲ ಪಡೆಯಲಾಗುತ್ತದೆ. ಹೀಗೆ ಖಾಸಗಿ ಮಣೆಯ ಮೇಲೆ ಕೂತುಗೊಂಡ ನಾವು ಗಟ್ಟಿಯಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆ ಮಾಡುತ್ತಿದ್ದೇವೆ!

ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳನ್ನು ಗಮನಿಸಿ. ವಿಪರೀತ ಸುದ್ದಿಗೆ ಕಾರಣವಾಗಿರುವ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯವು ಸರ್ಕಾರದ ನಿಧಿಯಲ್ಲೂ, ಇತ್ತೀಚೆಗೆ ಕಾಶ್ಮೀರದಲ್ಲಿ ಜನಮತಗಣನೆ ನಡೆಸಬೇಕೆಂದು ಹಲವು ವಿದ್ಯಾರ್ಥಿಗಳು ಬೇಡಿಕೆಯಿಟ್ಟ ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯವು ಬಂಡವಾಳಶಾಹಿ ಕಂಪೆನಿಗಳ ನಿಧಿಯಲ್ಲೂ ಕಾರ್ಯ ನಿರ್ವಹಿಸುತ್ತಿವೆ. ಅಶೋಕ ವಿವಿಯ ಹಲವು ಸ್ಥಾಪಕರ ಕಂಪೆನಿಗಳು ಪರಿಸರ ಮತ್ತಿತರ ವಿಷಯಗಳಲ್ಲಿ ವಿವಾದಕ್ಕೆ ಸಿಲುಕಿದ್ದನ್ನೂ ನೀವು ಹುಡುಕಿ ತೆಗೆಯಬಹುದು. ದೇಶದ ೭೫೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಹೀಗೆ ಸರ್ಕಾರದ ಅಥವಾ ಖಾಸಗಿ ನಿಧಿಯಲ್ಲೇ ನಡೆಯುತ್ತಿವೆ. ಸಹಕಾರಿ ಸಿದ್ಧಾಂತದಲ್ಲಿ, ಜನ ಸಮುದಾಯದ ಸಾಮೂಹಿಕ ನೇತೃತ್ವದಲ್ಲಿ ನಡೆಯುತ್ತಿರುವ ಮುಖ್ಯವಾಹಿನಿ ಮಾಧ್ಯಮಗಳನ್ನು, ವಿಶ್ವವಿದ್ಯಾಲಯಗಳನ್ನು ನಾನಂತೂ ಕಂಡಿಲ್ಲ.

ಇದು ಒಡೆತನದ ವಿಷಯವಾದರೆ, `ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹೆಸರಿನಲ್ಲಿ ನಡೆಯುತ್ತಿರುವ ಘಟನೆಗಳ ಅಸಲಿಯತ್ತೇ ಬೇರೆ. ಹಿಂಸೆಯ ಮೂಲಕ ಹಕ್ಕುಗಳಿಗಾಗಿ ಹೋರಾಟ ನಡೆಸುವ ವ್ಯಕ್ತಿ-ಗುಂಪುಗಳ ಪರವಾಗಿಯೇ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆ ನಡೆಯುತ್ತಿರುತ್ತದೆ. ಇದನ್ನು ಸಾಮಾನ್ಯವಾಗಿ ಮಾನವ ಹಕ್ಕುಗಳು ಎಂದು ಕರೆಯುತ್ತಾರೆ. ವಿದ್ಯಾರ್ಥಿ ಸಮುದಾಯವು ಕಲಿಕೆಯ ಹಂತದಲ್ಲಿ ಸಾಮಾಜಿಕ ಸ್ಪಂದನೆಯನ್ನು ಬೆಳೆಸಿಕೊಳ್ಳಬೇಕು, ಸಮಾಜದ ಹಲವು ನೋವುಗಳನ್ನು ಅರಿಯಬೇಕು – ನಿಜ. ಆದರೆ ಸಮಕಾಲೀನ ಆಗುಹೋಗುಗಳನ್ನು ಕೇವಲ ರಾಜಕೀಯ ಚರ್ಚೆ, ದೇಶದ ಗಡಿ ಮತ್ತು ಸಾರ್ವಭೌಮತ್ವ, ಮಹಿಳೆ, ಲಿಂಗಭೇದ, ಜಾತಿ ತಾರತಮ್ಯ, ಎಡ-ಬಲ ಸಿದ್ಧಾಂತದ ರಾಜಕೀಯ – ಈ ಕೆಲವು ವಿಷಯಗಳಿಗಷ್ಟೇ ಸೀಮಿತಗೊಳಿಸಿರುವುದು ಮಾತ್ರ ವಿಚಿತ್ರ. ತಮಗೆ ಬೇಕಾದ ವಿಷಯಗಳನ್ನು ಮಾತ್ರವೇ ಅಭಿವ್ಯಕ್ತಿಯ ಸರಕಾಗಿ ಮಾಡಿಕೊಳ್ಳುವ ವಿಚಾರದಲ್ಲಾಳಿಗಳನ್ನು ನಾನು ಖಂಡಿಸುತ್ತೇನೆ.

ವಿಶ್ವವಿದ್ಯಾಲಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯೊದಗಿದೆ ಎಂಬ ಆರೋಪವೂ ವಿಚಿತ್ರವಾಗಿದೆ. ಯಾವುದೇ ಅಭಿವ್ಯಕ್ತಿ ಸ್ವಾತಂತ್ರ್ಯದ ನೀತಿಯಲ್ಲಿ ಇನ್ನೊಂದು ಕೋನದ ಅಭಿಪ್ರಾಯವನ್ನೂ ಶಾಂತವಾಗಿ ಸ್ವೀಕರಿಸಬೇಕು. ಅಲ್ಲಿ ಬಹುಮತದ ಪ್ರಶ್ನೆ ಬರುವುದಿಲ್ಲ. ಆದರೆ ಈಗ ನಡೆಯುತ್ತಿರುವುದೇನು? ಜೆಎನ್‌ಯುನಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದಾಕ್ಷಣ ಅದು ಸತ್ಯವಾಗಬೇಕೆಂದಿಲ್ಲ; ಅಥವಾ ಚಿಕ್ಕ ಪ್ರಮಾಣದ ಪ್ರತಿಭಟನೆಯು ನಗಣ್ಯವಾಗಬೇಕಿಲ್ಲ. ‘ಫ್ರೀ ಬೇಸಿಕ್ಸ್’ ಎಂಬ ಅಂತರಜಾಲ ತಾರತಮ್ಯ ನೀತಿಯನ್ನು ಭಾರತದಲ್ಲಿ ತರಲು ಹೆಣಗಿದ ಫೇಸ್‌ಬುಕ್ ತನ್ನ ಬಳಕೆದಾರರನ್ನೇ ವಂಚಿಸಿ ಲಕ್ಷಗಟ್ಟಳೆ ಅರ್ಜಿಗಳನ್ನು ಟ್ರಾಯ್‌ಗೆ ಸಲ್ಲಿಸಿದ್ದರೂ, ಅವುಗಳನ್ನು ಬಹುಮತದ ಮೇಲೆ ಸ್ವೀಕರಿಸಲಿಲ್ಲ; ಚಿಕ್ಕ ಸಂಖ್ಯೆಯಲ್ಲಿದ್ದರೂ ಸರಿಯಾದ ವಾದವನ್ನು ಮಂಡಿಸಿದ್ದರಿಂದಲೇ ಫ್ರೀ ಬೇಸಿಕ್ಸ್ ಯೋಜನೆ ರದ್ದಾಯಿತು. ಟಿಯಾನನ್‌ಮನ್ ಚೌಕದಲ್ಲಿ ಟ್ಯಾಂಕರ್‌ಗಳ ಮುಂದೆ ಒಬ್ಬನೇ ನಿಂತು ಪ್ರತಿಭಟಿಸಿದ ವ್ಯಕ್ತಿಯನ್ನೂ ನೆನಪಿಸಿಕೊಳ್ಳಿ. ಎಡಪಂಥೀಯರು ಹೆಚ್ಚಾಗಿದ್ದಾರೆಂದ ಮಾತ್ರಕ್ಕೆ ಜೆಎನ್‌ಯುನಲ್ಲಿ ಇರುವ ಬಲಪಂಥೀಯ ವಿದ್ಯಾರ್ಥಿಗಳು ಸೋಲುಣ್ಣುತ್ತಿದ್ದಾರೆ ಎಂಬ ಹೇಳಿಕೆಯೇ (ಅಥವಾ ಇದನ್ನು ತಿರುವುಮುರುವಾಗಿಸಿದರೂ) ತರ್ಕಹೀನ.

ಪರಿಸರ ರಕ್ಷಣೆ, ಹವಾಮಾನ ವೈಪರೀತ್ಯ, ಸಾವಯವ ಕೃಷಿ, ಪ್ಲಾಸ್ಟಿಕ್ ಬಳಕೆ ವಿರೋಧ, ಕಲ್ಲಿದ್ದಲು ಸ್ಥಾವರಗಳ ಅಪಾಯ, ಶಿಕ್ಷಣದ ದುರವಸ್ಥೆ, ಭಾರತೀಯ ಭಾಷೆಗಳ ಸಂರಕ್ಷಣೆ, ದೇಸಿ ಪರಂಪರೆಯ ರಕ್ಷಣೆ, – ಇದಾವುದರ ಬಗ್ಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರು ಚರ್ಚಿಸುವುದೇ ಇಲ್ಲ. ಮುಕ್ತ ಅಭಿಪ್ರಾಯದ ವಿಷಯಗಳನ್ನು ತೀರಾ ರಾಜಕೀಯಕರಣಗೊಳಿಸಿದ್ದರಿಂದಲೇ ಧಕ್ಕೆಯ ಮಾತೂ ಕೇಳಿಬರುತ್ತಿದೆ; ಸಂತುಲಿತ, ಸರ್ವಸ್ಪರ್ಶೀ ಚರ್ಚೆಗಳನ್ನು ಹುಟ್ಟುಹಾಕುವ ಸದ್ವರ್ತನೆಯೇ ಮಾಯವಾಗಿದೆ; ವ್ಯಕ್ತಿ ಆಧಾರಿತ ಕುತರ್ಕಗಳೇ ನಡೆಯುತ್ತಿವೆ. ಮೂರು ಸಲ ತಲಾಖ್ ಹೇಳಿ ಮಹಿಳೆಯರನ್ನು ಕಷ್ಟದ ಸಂಕೋಲೆಗೆ ತಳ್ಳುವ ವ್ಯವಸ್ಥೆಯ ಬಗ್ಗೆ, ಹಿಂದುಗಳಲ್ಲಿ ನಡೆಯುತ್ತಿರುವ ಸ್ತ್ರೀಭ್ರೂಣ ಹತ್ಯೆಗಳ ಬಗ್ಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಸರ್ಕಾರದ ಮುಖ್ಯಸ್ಥ – ಪ್ರಧಾನಮಂತ್ರಿ- ಮಾತನಾಡುತ್ತಿದ್ದಾರೆಯೇ ಹೊರತು, `ಪರವಾನಗಿ ಇಲ್ಲದ ಎಕೆ೪೭ ಬಂದೂಕು ಹಿಡಿದೇ ಸಂಚರಿಸುತ್ತಿದ್ದ ಬುರ್ರಾನ್ ವಾನಿಯ ಹತ್ಯೆಯು ಕಾನೂನೇತರ ಕುಕೃತ್ಯ’ ಎಂದು ಆರೋಪಿಸುತ್ತಿರುವ ಪ್ರಗತಿಗಾಮಿ, ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರು ಈ ಬಗ್ಗೆ ಬಾಯಿ ಬಿಡುತ್ತಿಲ್ಲ! ಮಹಿಳೆಯರ ಹಕ್ಕಿನ ಬಗ್ಗೆ ಮಾತನಾಡುವ ಯುವಸಮುದಾಯವು ತಲಾಖ್‌ನಂತಹ, ಭ್ರೂಣಹತ್ಯೆಯಂತಹ ಘೋರ ಅನಾಚಾರಗಳ ವಿರುದ್ಧ ಬೃಹತ್ ಧರಣಿ – ಪ್ರತಿಭಟನೆ ನಡೆಸಿದೆಯೆ? ಜೆಎನ್‌ಯುವಿನಲ್ಲಿ ಎಂದಾದರೂ ಮುಸ್ಲಿಂ ಮಹಿಳೆಯರ ಯಾತನಾಮಯ ಬದುಕಿನ ಬಗ್ಗೆ ನಿರ್ಣಯಕ್ಕೆ ಒತ್ತಾಯಿಸಿ ಪಿಕೆಟಿಂಗ್ ನಡೆದಿದೆಯೆ? ಬಂಡವಾಳಶಾಹಿ, ಪರಿಸರ ನಾಶಕ ಕಂಪೆನಿಗಳ ವಿರುದ್ಧ ಅಶೋಕ ವಿಶ್ವವಿದ್ಯಾಲಯದಲ್ಲಿ ಎಂದಾದರೂ ರ್‍ಯಾಲಿ ನಡೆದಿದೆಯೆ? ಸಮಾಜದ ಎಲ್ಲ ಸಮಸ್ಯೆಗಳನ್ನೂ ಸಿದ್ಧಾಂತಗಳ ಮತ್ತು ಕೆಲವೇ ವ್ಯಕ್ತಿಗಳ ಅಭಿಮತದ ಮೂಲಕವೇ ನಿರ್ಣಯಿಸುವ ಕ್ರಮವು ಪ್ರಜಾತಂತ್ರವಿರೋಧಿಯಾಗಿದೆ. ಅಶೋಕ ವಿಶ್ವವಿದ್ಯಾಲಯದ ಘಟನೆಯ ಪರಿಣಾಮವಾಗಿ ಇಬ್ಬರು ಅಧಿಕಾರಿಗಳು ರಾಜೀನಾಮೆ ಕೊಟ್ಟ ಬಗ್ಗೆ ಬಾಯಿಬಿಡಲೂ ವಿವಿಯ ಸ್ವಯಂಘೋಷಿತ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪಾಠ ಹೇಳುವ ಎಲ್ಲಾ ಲಿಬರಲ್ ಪ್ರಾಧ್ಯಾಪಕರು ಹಿಂಜರಿದಿದ್ದಾರೆ ಎಂಬುದು ಇನ್ನೂ ತಮಾಶೆಯಾಗಿದೆ. ತಾವೇ ಬೆಳೆಸಿದ ವಿದ್ಯಾರ್ಥಿಗಳ ಪರವಾಗಿ ಮಾತಾಡಲೂ ಇವರ ಧ್ವನಿ ಉಡುಗಿಹೋಗಿದೆ; ಅದನ್ನು ಒಳ್ಳೆಯ ಸಂಬಳದ ಉದ್ಯೋಗ ಒಪ್ಪಂದದಲ್ಲಿ ಅಡವಿಟ್ಟಿದ್ದಾರೆ.

ಇನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಆಧಾರಿತ ಚರ್ಚೆ, ಸಭೆ, ರ್‍ಯಾಲಿ, ಪ್ರತಿಭಟನೆ ಹೇಗಿರಬೇಕು ಎಂಬ ಯಾವುದೇ ಸಂಹಿತೆಯನ್ನೂ ಭಾರತದಲ್ಲಿ ಹುಡುಕುವುದು ಕಷ್ಟ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಳಕೆಗೂ ಒಂದು ಸಂಹಿತೆ ಇರಬಹುದು ಎಂಬ ಸಾಮಾನ್ಯ ಅಂಶವೂ ನಮಗೆ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಿಕಾಗೋ ವಿಶ್ವವಿದ್ಯಾಲಯವು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೊಂದಿರುವ ನೀತಿಸಂಹಿತೆಯನ್ನೇ ಗಮನಿಸಿ:`ಚರ್ಚೆಯ ಸ್ವಾತಂತ್ರ್ಯ ಎಂದರೆ ಯಾರು ಏನು ಬೇಕಾದರೂ ಹೇಳಬಹುದು ಎಂದಲ್ಲ. ಕಾನೂನನ್ನು ವಿರೋಧಿಸುವ, ನಿರ್ದಿಷ್ಟ ವ್ಯಕ್ತಿಯ ಚಾರಿತ್ರ್ಯ ಹನನ ಮಾಡುವ, ಬೆದರಿಕೆಯ ಅಥವಾ ಶೋಷಣೆ ಮಾಡುವ, ಗೌಪ್ಯತೆ ಮತ್ತು ಖಾಸಗಿತನವನ್ನು ಆಕ್ರಮಣ ಮಾಡುವ ಅಥವಾ ವಿಶ್ವವಿದ್ಯಾಲಯದ ಕಾರ್ಯಕ್ಕೆ ಧಕ್ಕೆ ಒದಗುವ ಅಭಿವ್ಯಕ್ತಿಯನ್ನು ವಿಶ್ವವಿದ್ಯಾಲಯವು ನಿರ್ಬಂಧಿಸುತ್ತದೆ. ಅಂಥ ಯಾವುದೇ ಸಭೆಯಲ್ಲಿ ಇತರರ ಅಭಿಪ್ರಾಯಗಳಿಗೂ ಯಾವುದೇ ತಡೆ ಒಡ್ಡಬಾರದು.’ ಜೆಎನ್‌ಯುನಲ್ಲಿ ನಡೆದ ಕನ್ನಯ್ಯಾ ಕುಮಾರ್ ಪರ ಸಭೆಗಳು ಮತ್ತು ಪ್ರತಿಭಟನೆಗಳು ಎಂದಾದರೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂರಕ್ಷಿಸಿದ್ದು ನನಗೆ ಕಾಣಲಿಲ್ಲ. `ನಮ್ಮ ವಿಚಾರದವರು ಮಾತ್ರವೇ ನಮ್ಮ ಸಭೆಗಳಲ್ಲಿ ಇರಬೇಕು’ ಎಂಬ ಮಾನಸಿಕತೆಯೇ ರೋಗಿಷ್ಠ; ಅಭಿವ್ಯಕ್ತಿ ಸ್ವಾತಂತ್ರ್ಯದ ಮೊದಲ ಸೂತ್ರವೇ ಇಲ್ಲಿ ಹರಿದುಹೋಗಿದೆ! ಯಾವುದೇ ವಿಶ್ವವಿದ್ಯಾಲಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಸಂಹಿತೆ ಇಲ್ಲವಾದರೆ, ಅದಕ್ಕೆ ಕಾರಣರಾರು? ಮುಖ್ಯವಾಗಿ ಇದು ಆರು ದಶಕಗಳ ಕಾಲ ನಮ್ಮನ್ನು ಆಳಿದವರು ಕೊಟ್ಟ ಮರೆಯಲಾಗದ ಬಳವಳಿ. ಅದರಲ್ಲೂ ತುರ್ತುಪರಿಸ್ಥಿತಿಯ ಕರಾಳ ಯುಗದಲ್ಲಿ ಎರಡು ವರ್ಷ ಕಣ್ಣು, ಮೂಗು, ಬಾಯಿ ಕಟ್ಟಿಸಿಕೊಂಡು, ಎಡ-ಬಲದ ಕುಂಡೆ ಎಂಬ ತಾರತಮ್ಯವಿಲ್ಲದೆ ಲಾಠಿ ಏಟು ತಿಂದವರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.

ಅಭಿವ್ಯಕ್ತಿ ಸ್ವಾತಂತ್ರ್ಯವು ಕೇವಲ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಇರಬೇಕಾದ ಸರಕು ಎಂಬ ಮೂರ್ಖ ಪರಿಕಲ್ಪನೆಯೂ ಇದೆ. ಇಂದು ಇಷ್ಟೆಲ್ಲ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳು ಮುಂದೆ ಯಾವ್ಯಾವುದೋ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದು; ಆಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಮೊಟಕು ಮಾಡುವ ಚಿಕ್ಕ ಅಕ್ಷರಗಳ ಹಲವು ಕಲಮುಗಳಿಗೆ ಕಣ್ಣುಮುಚ್ಚಿ ಸಹಿ ಹಾಕಿರುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅರಿವು ಮೂಡಿದ ಮೇಲೆ ಆ ವಿದ್ಯಾರ್ಥಿಯು ಹೆಚ್ಚಿನ ಸಮಚಿತ್ತತೆ ಸಾಧಿಸಿ ತನ್ನ ಜೀವನದಲ್ಲೂ ಅದನ್ನು ಅಳವಡಿಸಿಕೊಳ್ಳಬೇಕು; ಬದುಕಿನುದ್ದಕ್ಕೂ ತಾನು ನಂಬಿದ ಆದರ್ಶಗಳಿಗಾಗಿ ಬಾಳಬೇಕು. ಪಕ್ಷಗಳು ಯಾವುದೇ ಇರಲಿ, ಇಡೀ ದೇಶದಲ್ಲಿ ಅತ್ಯಾಚಾರ, ಶೋಷಣೆ ನಡೆಯುತ್ತಲೇ ಇವೆ. ಅದಕ್ಕೆ ಸಮಾಜದಲ್ಲಿರುವ ದುಷ್ಟ/ ಅಜ್ಞಾನಿ ಜನರೇ ಕಾರಣ. ರಾಜಕೀಯ ಹೇಳಿಕೆಗಳಿಗೆ ವಿರೋಧ ಬಂತು, ಯಾರೋ ದೂರು ಕೊಟ್ಟರು, ಇನ್ನಾರೋ ನಿರ್ಬಂಧಿಸಿದರು ಎಂದಾಕ್ಷಣ `ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ’ ಎಂದು ಬೊಬ್ಬಿರಿಯುವುದು ಜಾಣಗುರುಡು, ರಾಜಕೀಯ ಪ್ರೇರಿತ ಮತ್ತು ಹೊಣೆಗೇಡಿತನ.

– ಬೇಳೂರು ಸುದರ್ಶನ

(29 ನವೆಂಬರ್‍ 2016 : ಪ್ರಜಾವಾಣಿಯಲ್ಲಿ ಬಂದ ಲೇಖನ)

Share.
Leave A Reply Cancel Reply
Exit mobile version