ಡಾಕ್ಯುಮೆಂಟರಿಗಳೆಂದರೆ ಒಂಥರ ಗೊಂದಲ ಹುಟ್ಟಿಸುತ್ತವೆ. ನೋಡಬೇಕೋ ಬೇಡವೋ ಎಂದು ನಿರ್ಧರಿಸುವಷ್ಟರಲ್ಲಿ ಆಸಕ್ತಿಯೇ ಹೊರಟು ಹೋಗಿರುತ್ತೆ. `ನಾಸ್ಟಾಲ್ಜಿಯಾ ಫಾರ್‌ ದ ಲೈಟ್‌’ ಎಂಬ ಡಾಕ್ಯುಮೆಂಟರಿಯನ್ನು ನೋಡುವ ಮೊದಲು ಆಗಿದ್ದೇ ಇದು! ಆದರೆ ನೋಡಿದ ಮೇಲೆ ಎಲ್ಲ ಗೊಂದಲಗಳೂ ಪರಿಹಾರವಾಗಿ ಇನ್ನುಮುಂದೆ ಫಿಕ್ಷನ್‌ ನೋಡೋದೇ ಬೇಡ ಅನ್ನೋ ಭಾವವೂ ಮೂಡಿಬಿಟ್ಟಿತ್ತು. ಕಾವ್ಯಾತ್ಮಕ, ಭಾವನಾತ್ಮಕ ಗುಣವುಳ್ಳವರು ಒಂದು ರಾತ್ರಿ ಏಕಾಂತದಲ್ಲಿ ಈ ಸಿನೆಮಾವನ್ನು ನೋಡಬೇಕು. ಆಮೇಲೆ ಖಂಡಿತ ನೀವು ಒಂದೆರಡು ದಿನ ಮಾತಾಡಲೂ ಹಿಂಜರಿಯುತ್ತೀರಿ. ನಾನೂ ಅದೇ ಬಗೆಯ ಮೌನಯುಗವನ್ನು ಅನುಭವಿಸಿ ಈಗಷ್ಟೇ ಬರೆಯುವ ಶಕ್ತಿ ಪಡೆದೆ.

ಚಿಲಿ ದೇಶದಲ್ಲಿರೋ ಅಟಕಾಮಾ ಮರುಭೂಮಿಯಲ್ಲಿ ಖಗೋಳ ವೀಕ್ಷಣಾಲಯಗಳಿವೆ. ಏಕೆಂದರೆ ಇಡೀ ಭೂಮಿಯಲ್ಲಿ ನಕ್ಷತ್ರಗಳನ್ನು ವೀಕ್ಷಿಸಲು ಅತ್ಯಂತ ಯೋಗ್ಯವಾದ ಸ್ಥಳ ಅದಂತೆ. ೪೧ ಸಾವಿರ ಚದರ ಮೈಲಿಗಳ ಪ್ರದೇಶದ ಈ ಮರುಭೂಮಿಯು (ಕರ್ನಾಟಕದ ಅರ್ಧದಷ್ಟು  ಪ್ರದೇಶಅಥವಾ ಪೋರ್ಚುಗಲ್‌ ದೇಶದಷ್ಟು ವಿಸ್ತಾರ) ಚಿಲಿ ದೇಶವಷ್ಟೇ ಅಲ್ಲ, ಪೆರು, ಬೊಲಿವಿಯ ಮತ್ತು ಅರ್ಜೆಂಟೈನಾವನ್ನೂ ಆಕ್ರಮಿಸಿದೆ. ಭೂಮಿಯಲ್ಲಿ ೩೦ ಲಕ್ಷ ವರ್ಷಗಳ ಕಾಲ ನಿರಂತರವಾಗಿ ಒಣಹವೆಯನ್ನು ಹೊಂದಿರುವ ಏಕೈಕ ಪ್ರದೇಶ ಇದು. ಇಲ್ಲಿನ ಕೆಲ ಪ್ರದೇಶವು ಮಂಗಳ ಗ್ರಹದ ನೆಲವನ್ನೇ ಹೋಲುವುದರಿಂದ `ಸ್ಪೇಸ್‌ ಒಡಿಸ್ಸಿ: ವೋಯೇಜ್‌ ಟು ದ ಪ್ಲಾನೆಟ್ಸ್‌’ ಟಿವಿ ಧಾರಾವಾಹಿಯ ದೃಶ್ಯಗಳನ್ನು ಇಲ್ಲೇ ಚಿತ್ರೀಕರಿಸಲಾಗಿದೆ.

ಪ್ಯಾಟ್ರೀಸಿಯೋ ಗುಜ್‌ಮನ್‌ ನಿರ್ದೇಶನದ ಈ ಚಿತ್ರದ ಕಥೆ ಸರಳ ಮತ್ತು ಸಂಕೀರ್ಣ. ಅಟಕಾಮಾ ಮರುಭೂಮಿಯ ಖಗೋಳ ವೀಕ್ಷಣಾಲಯಗಳಲ್ಲಿ ಲಕ್ಷ ಲಕ್ಷ ಬೆಳಕಿನ ವರ್ಷಗಳ ದೂರದಲ್ಲಿರೋ ಆಕಾಶಕಾಯಗಳನ್ನು ವೀಕ್ಷಿಸುವ ಕೆಲಸವು ವರ್ಷದ ಎಲ್ಲಾ ದಿನಗಳಲ್ಲೂ ನಡೆದಿದ್ದರೆ, ಅಲ್ಲೇ ಹಲವು ತಾಯಂದಿರು, ಚಿಲಿಯ ವಿವಿಧ ನರಮೇಧಗಳಲ್ಲಿ ಸತ್ತು ಸಮಾಧಿಯಾದ ತಮ್ಮ ಮಕ್ಕಳು, ಸಂಬಂಧಿಕರ ದೇಹದ ಅವಶೇಷಗಳನ್ನು ವಸ್ತುಶಃ ನೆಲ ಬಗೆದು ಹುಡುಕುವ ಕಾಯಕದಲ್ಲಿ ನಡೆಯುತ್ತಿದೆ. ಮತ್ತೂ ಒಂದೆಡೆ, ಈ ಮರುಭೂಮಿಯು ಭೂಮಿಯಲ್ಲಿ  ಇತಿಹಾಸ ಸಂಶೋಧನೆಯೂ ನಡೆದಿದೆ. ಎಲ್ಲರೂ ಹೊತ್ತಿನ ಪರಿವೆ ಇಲ್ಲದೆ ತಂತಮ್ಮ ಹುಡುಕಾಟದ ಕೆಲಸಗಳಲ್ಲಿ ತೊಡಗಿದ್ದಾರೆ. ಈ ಮೂರೂ ಹುಡುಕಾಟಗಳನ್ನು  ಮಿಳಿತಗೊಳಿಸಿ ಹೇಳಿದ ಪರಿಯನ್ನು  ನೋಡುತ್ತ ನಾವು ಮೈಮರೆಯುವುದು ಸಹಜ.  ೯೦ ನಿಮಿಷಗಳ ಕಾಲ ನೀವು ಮರುಭೂಮಿಯಲ್ಲಿ ಹುಡುಕುತ್ತಲೇ ಇರುತ್ತೀರಿ!

ಚಿಲಿಯ ಸರ್ವಾಧಿಕಾರಿ ಪಿನೋಚೆಟ್೧೭ ವರ್ಷಗಳ ಕಾಲ ನಿರಂತರವಾಗಿ ನಡೆಸಿದ ಹತ್ಯಾಕಾಂಡಗಳಿಗೆ ಸಾಕ್ಷಿಯಾಗಿ, ಅವನ ಯಾತನಾಶಿಬಿರದಲ್ಲಿ ಇದ್ದು ಜೀವಂತ ಹೊರಬಂದ ಮಿಗುಯೆಲ್‌ ಲಾನರ್‌ ಕೂಡಾ ಈ ಚಿತ್ರದಲ್ಲಿ ಭಾಗವಹಿಸಿದ್ದಾರೆ. ಯಾತನಾಶಿಬಿರದಲ್ಲಿ ಕಳೆದ ದಿನಗಳು, ಅನುಭವಿಸಿದ ಶಿಕ್ಷೆ, ಜನರು ಸತ್ತ ಬಗೆ – ಎಲ್ಲವನ್ನೂ ಆತ ವಿವರಿಸುವಾಗ ನೀವು ಹಿಟ್ಲರನನ್ನು, ಪಾಲ್‌ಪೋಟ್‌ನನ್ನು, ಕಿಮ್‌ ಇಲ್‌ ಜಂಗ್‌ನನ್ನು, ಚೀನಾದ ಲಾಗೋಯ್‌ಗಳನ್ನು ನೆನಪಿಸಿಕೊಳ್ಳಲೇಬೇಕು. ೨೦ನೇ ಶತಮಾನದ ಪ್ರಮುಖ ನರಮೇಧ ಪಾತಕಿಗಳಿವರು. ಶಿಬಿರದ ದೃಶ್ಯಗಳನ್ನು ಚಿತ್ರಗಳಲ್ಲಿ ಮೂಡಿಸಿದ ಮಿಗುಯೆಲ್‌, ಸೈನಿಕರು ಬಂದಾಗ ಅವನ್ನೆಲ್ಲ ಶೌಚಾಲಯದಲ್ಲಿ ಅಡಗಿಸಿದ್ದೂ ಇದೆ.

೨೮ ವರ್ಷಗಳಿಂದ ತಾಯಂದಿರು ಹುಡುಕಾಟ ನಡೆಸುತ್ತ, ಕೊನೆಕೊನೆಗೆ ಅವರ ಸಂಖ್ಯೆ ಕಡಿಮೆಯಾಯಿತು. ಆದರೆ  ಕೆಲವರ ಶೋಧ ಮುಗಿದೇ ಇಲ್ಲ. ನರಮೇಧ ಎಲ್ಲಿ ನಡೆಯಿತು ಎಂಬ ಸ್ಥಳದ ವಿವರಗಳನ್ನೂ ಸರ್ಕಾರ ಇದುವರೆಗೆ ಕೊಟ್ಟಿಲ್ಲ. ಅಂದಮೇಲೆ ಆ ವಿಶಾಲ ಮರುಭೂಮಿಯಲ್ಲಿ ಈ ತಾಯಂದಿರು ತಮ್ಮ ಕುಟುಂಬದ ಸದಸ್ಯರ, ಉಳಿದಿರಬಹುದಾದ ಮೂಳೆಗಳನ್ನು ಹುಡುಕುವುದಾದರೂ ಹೇಗೆ? ಕಂಡ ಕಂಡ ಕಡೆ ಈ ತಾಯಂದಿರು ಪ್ರೇತಗಳ ಹಾಗೆ ಓಡಾಡುತ್ತ, ಕೋಲಿನಲ್ಲಿ ಕೆದಕುತ್ತ, ಅಗೆಯುತ್ತ ದಿನಕಳೆಯುತ್ತಿರುವ ಈ ಮಾತೆಯರನ್ನು ಗುಜ್‌ಮನ್‌  ಸಂದರ್ಶಿಸಿದ್ದಾರೆ.

ಈ ಸಾಕ್ಷ್ಯಚಿತ್ರದ ನಿರೂಪಣೆಯ ಧ್ವನಿಯೂ ಗುಜ್‌ಮನ್ದೇ. ಒಮ್ಮೊಮ್ಮೆ ಈ ನಿರೂಪಣೆಯು `ಸೊಲಾರಿಸ್‌’ ಸಿನೆಮಾದ ನಿರೂಪಣೆ ಮತ್ತು ಸಂಭಾಷಣೆಗಳನ್ನು ನೆನಪಿಗೆ ತರುತ್ತದೆ.

ನಕ್ಷತ್ರಗಳನ್ನು ವೀಕ್ಷಿಸುತ್ತಲೇ ಕಾಲ ಕಳೆಯುವ ವಿಜ್ಞಾನಿ ಗಾಸ್ಪರ್‌ ಗಲಾಜ್‌ `ನಾವು ಹುಟ್ಟಿದ್ದು ಹೇಗೆ, ನಮ್ಮ ಮೂಲ ಏನು, ಈ ಬ್ರಹ್ಮಾಂಡ ಹೇಗೆ ಅಸ್ತಿತ್ವಕ್ಕೆ ಬಂತು ಎಂಬೆಲ್ಲ ಸಂಗತಿಗಳನ್ನು ತಿಳಿಯೋದಕ್ಕೇ ಈ ವೀಕ್ಷಣೆಯಲ್ಲಿ ತೊಡಗಿದ್ದೇವೆ’ ಎಂದು ವಿವರಿಸಿದರೆ, ಈ ಬೃಹತ್‌ ದೂರದರ್ಶಕಗಳನ್ನು ಆಕಾಶ ನೋಡುವ ಬದಲು ಭೂಮಿಯ ಒಳಗೆ ಹೂತುಹೋಗಿರುವ ಮಕ್ಕಳನ್ನು ಹುಡುಕಲು ಬಳಸಬಹುದಲ್ಲ ಎಂದು ತಾಯಂದಿರು ಪ್ರಶ್ನಿಸುತ್ತಾರೆ. ಖಗೋಳ ವಿಜ್ಞಾನದ ಸಾಧನೆಗಳೂ, ಭೀಕರ ಬಡತನದ ದೃಶ್ಯಗಳೂ ಒಂದಕ್ಕೊಂದು ಬೆಸೆದುಕೊಂಡಿರುವ ಭಾರತಕ್ಕೂ ಈ ಸಂಭಾಷಣೆಗಳು ಏನನ್ನೋ ತಿಳಿಹೇಳಿದಂತೆ ನನಗನ್ನಿಸಿತು. `ಅಟಕಾಮಾ ಮರುಭೂಮಿಯು ಗತಕಾಲದ ದೊಡ್ಡ ಸಂಗ್ರಹಾಗಾರ’ ಎಂದು ಗುಜ್‌ಮನ್‌ ಒಂದು ಸಂದರ್ಶನದಲ್ಲಿ ಹೇಳುತ್ತಾರೆ. ಅಲ್ಲಿ ಹೂತುಹೋದ ಧೂಮಕೇತುಗಳಿವೆ; ಪ್ರಾಗೈತಿಹಾಸಿಕ ಕಾಲದ ಅಸಂಖ್ಯಾತ ಬಸವನ ಹುಳುಗಳಿವೆ; ಆರು ಬಗೆಯ ಪ್ರಾಚೀನ ಸಂಸ್ಕೃತಿಗಳ ಮಮ್ಮಿಗಳಿವೆ – ಅವರ ಸಂಕೇತಗಳನ್ನು ಇನ್ನೂ ಬಿಡಿಸಲಾಗಿಲ್ಲ. ಅದೊಂದು ಮಂಗಳ ಗ್ರಹದಂಥ ಭೂಮಿ. ಕೆಂಪು ಮಣ್ಣಿನ ಮೇಲೆ ಉಪ್ಪಿನ ಪದರವಿದೆ. ನೀವು ಹೆಜ್ಜೆ ಇಡುತ್ತಿದ್ದಂತೆ ವಿಶಿಷ್ಟ  ಸದ್ದಾಗುತ್ತದೆ.

ಇಂಥ ಭೂಮಿಯಲ್ಲಿ ಹುಡುಕಾಟ ನಡೆಸಿರುವ ವನಿತೆಯರಲ್ಲಿ ಧೈರ್ಯ, ನೈತಿಕತೆ ಮತ್ತು ದೃಢನಿಷ್ಠೆ ಇದೆ. ಸಾವಿರಾರು ದೇಹಗಳನ್ನು ಹೂತ ಪಿನೋಚೆಟ್‌ ಈ ಮಹಿಳೆಯರು ದೇಹಗಳನ್ನು ಹುಡುಕುತ್ತಾರೆ ಎಂದು ಗೊತ್ತಾಗುತ್ತಲೇ ಹೂತ ದೇಹಗಳನ್ನೂ ಹೊರತೆಗೆದು ಇನ್ನೊಂದೆಡೆ, ಮತ್ತೊಂದೆಡೆ ಹೂಳುತ್ತಾನೆ ಎಂದು ಗುಜ್‌ಮನ್‌ ಸಂದರ್ಶನಲ್ಲಿ ಕನ್ನಡಕವನ್ನು ಅತ್ತಿತ್ತ ಜರುಗಿಸುವಾಗ ನಮ್ಮ ಕಣ್ಣು ಹನಿಗೂಡದೆ ಇರದೆ?

ನಾವು ಸಾಕ್ಷ್ಯಚಿತ್ರಗಳನ್ನು ಮಾಡುವಾಗ ವಿಜ್ಞಾನದ ಚಿತ್ರಗಳು, ಮಹಿಳಾ ಸಮಸ್ಯೆಗಳ ಚಿತ್ರಗಳು – ಹೀಗೆ ವಿಭಾಗಿಸುತ್ತೇವೆ; ಆದರೆ ಇಂಥ ಸಮಸ್ಯೆಗಳನ್ನು ಪ್ರತ್ಯೇಕವಾಗಿ ನೋಡಲು ಬರೋದೇ ಇಲ್ಲ ಎನ್ನುವುದು ಗುಜ್‌ಮನ್‌ ವಾದ. ಖಗೋಳ ಶಾಸ್ತ್ರವೂ ರಾಜಕೀಯವೇ. ಇನ್ನು ೨೦ ವರ್ಷಗಳಲ್ಲಿ ವಿಜ್ಞಾನಿಗಳು ಹುಡುಕುವ ಡಾರ್ಕ್‌ ಮ್ಯಾಟರ್‌ನ ಆಧಾರದಲ್ಲಿ ನಮ್ಮ ಸಮಾಜದ ನಂಬಿಕೆಗಳೇ ಬದಲಾಗಬಹುದು.  `ಚಿಲಿ ದೇಶವು ಕ್ಯೂಬಾದ ಹಾಗೆ ಸಮುದ್ರದ ನಡುವೆ ಇರದಿದ್ದರೂ ಒಂದು ದೊಡ್ಡ ದ್ವೀಪವೇ. ಚಿಲಿಯನ್ನು ಹಾದು ಹೋಗುವ ಪ್ರಮೇಯವೇ ವಿವಿಧ ದೇಶಗಳಿಗೆ ಒದಗಿಲ್ಲ. ಅತ್ತ ಆಂಡಿ ಪರ್ವತಶ್ರೇಣಿಯೂ ಚಿಲಿಯ ಗಡಿಯಲ್ಲಿ ದೊಡ್ಡ ಗೋಡೆಯಂತೆ ಎದುರಾಗಿದೆ ( ಭಾರತಕ್ಕೆ ಹಿಮಾಲಯ ಇದ್ದಂತೆ).

ಚಿಲಿಯಲ್ಲಿ ರಕ್ತರಹಿತ ಕ್ರಾಂತಿ ನಡೆಸಿ ಅಧಿಕಾರಕ್ಕೆ ಬಂದು ಚಿಲಿಯನ್ನು ಸುಧಾರಣೆಯ ಯುಗಕ್ಕೆ ಒಯ್ಯುತ್ತಿದ್ದ ಸಾಲ್ವಡೋರ್‌ ಅಲೆಂಡೆ ಮತ್ತು ಅವರ ತಂಡವನ್ನು ಪಿನೋಚೆಟ್‌ ಕ್ರಾಂತಿಯ ನೆಪದಲ್ಲಿ ಕೊಂದು ಹಾಕಿದ. ಇದೇ ಕ್ರಾಂತಿಯ ನೆಪದಲ್ಲಿ ಆತ ಚಿಲಿಯ ಸಾಂಸ್ಥಿಕ ಪರಂಪರೆಯನ್ನೂ ನುಚ್ಚುನೂರು ಮಾಡಿದ ಎಂದು ಗುಜ್‌ಮನ್‌ ವಿವರಿಸುತ್ತಾರೆ.  ಆತ ಮತದಾರರ ಪಟ್ಟಿಯನ್ನೇ ಸುಟ್ಟು ಹಾಕಿದ. ಚಿಲಿಯ ಇತಿಹಾಸಕಾರರೂ   ದೇಶದಲ್ಲಿ ಎಂಥ ಅನಾಹುತವೂ ನಡೆದಿಲ್ಲ ಎಂದು ಸತ್ಯವನ್ನೆಲ್ಲ ಬಚ್ಚಿಟ್ಟರು… ಹೀಗೆ ಗುಜ್‌ಮನ್‌ ಚಿಲಿಯ ದುರಂತವನ್ನು ಬಿಚ್ಚಿಡುತ್ತಾರೆ.

ಬ್ರಹ್ಮಾಂಡದ ಶೋಧ, ಬದುಕುಳಿಯದ ಮಕ್ಕಳ ಮೂಳೆಗಳ ಶೋಧದ ಕೊನೆಗೆ ಈ ಇಬ್ಬರೂ ಶೋಧಕರನ್ನು ಖಗೋಳ ವೀಕ್ಷಣಾಲಯದಲ್ಲಿ ಒಗ್ಗೂಡಿಸಿದ ದೃಶ್ಯವನ್ನು ತೋರಿಸುವ ಗುಜ್‌ಮನ್‌, ನಮ್ಮ ಹುಡುಕಾಟದ, ನಮ್ಮ ಗತಕಾಲದ ಸ್ಮರಣೆಯ ಭಾವತೀವ್ರತೆಯ ಮಜಲುಗಳನ್ನು ಏಕೀಕರಿಸುತ್ತಾರೆ.  ಮನುಕುಲದ ಬಗೆಗೆ ಅತೀವ ಪ್ರೀತಿ ಮತ್ತು ಕಾಳಜಿ ಇರುವವರು ಮಾತ್ರವೇ ಇಂಥ ಡಾಕ್ಯುಮೆಂಟರಿಗಳನ್ನು ಮಾಡುತ್ತಾರೆ ಎಂದು ನನಗೆ ಆ ಕ್ಷಣ ಅನ್ನಿಸಿತು.

ಈ ಡಾಕ್ಯುಮೆಂಟರಿಯ ಚಿತ್ರೀಕರಣದ ಸಂದರ್ಭದಲ್ಲಿ ಗುಜ್‌ಮನ್‌ ಉದ್ದೇಶಪೂರ್ವಕವಾಗಿ ಪಾತ್ರಗಳನ್ನು ಮಾತಾಡಿಸಿಲ್ಲ. ಅವರೊಂದಿಗೆ ದಿನಗಟ್ಟಳೆ ಮಾತಾಡಿ, ತನಗೆ ಬೇಕಾದ್ದನ್ನು ಮಾತ್ರ ಆರಿಸಿಕೊಂಡಿದ್ದಾರೆ. ಅವರ ಈ ಸೂತ್ರದಿಂದಾಗಿ ಚಿತ್ರದಲ್ಲಿ ಸಹಜತೆ ಮನೆ ಮಾಡಿದೆ. ಮಿಗೆಲ್‌ ಮಿರಾಂಡ ಮತ್ತು ಮಿಗೆಲ್‌ ತೋಬಾರ್‌ ಕೊಟ್ಟ ಎದೆ ಇರಿಯುವ ಸಂಗೀತದೊಂದಿಗೆ ಮೂಡುವ ದೃಶ್ಯಗಳಲ್ಲಿ ನಾನಂತೂ ಕಳೆದೇ ಹೋದೆ.

`ಖಗೋಳಶಾಸ್ತ್ರವೂ ನನಗೆ ಕೆಲವೊಮ್ಮೆ ಸಮಾಧಾನ ಕೊಡುತ್ತದೆ. ನಾನು ಒಬ್ಬಳೇ ಇದ್ದಾಗ ನೋವು ತುಂಬಾ ಕಾಡುತ್ತದೆ. ನೋವನ್ನು ತಡೆಯಲು ಆಗುವುದೇ ಇಲ್ಲ. ಆಗ – ಇದೆಲ್ಲವೂ ಜೀವನಚಕ್ರದ ಭಾಗ. ನಕ್ಷತ್ರಗಳು ಹುಟ್ಟಿ ಸಾಯುವಂತೆ ನಾವೂ ಹುಟ್ಟಿ ಸಾಯುತ್ತೇವೆ, ಅಷ್ಟೆ – ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ’ ಎಂದು ಈಗ ವಿಜ್ಞಾನಿಯಾಗಿರುವ ವ್ಯಾಲೆಂಟಿನಾ ರಾಡ್ರಿಗಸ್‌ ಹೇಳುತ್ತಾಳೆ. ಅವಳ ತಂದೆ ತಾಯಂದಿರೂ ಪಿನೋಚೆಟ್‌ ನರಮೇಧಕ್ಕೆ ಬಲಿಯಾದವರೇ.

ನಕ್ಷತ್ರಗಳನ್ನು ನೋಡುವಾಗ ನಮ್ಮಲ್ಲಿ ಮೂಡುವ ನೀರವತೆ, ಮೌನದ ಭಾವಕ್ಕೂ, ಭೂಮಿಯೊಳಗೆ ಕಳೆದುಹೋದ ಜೀವಗಳನ್ನು ಹುಡುಕುವಾಗ ಆ ತಾಯಂದಿರ ಕಣ್ಣುಗಳಲ್ಲಿ ಕಾಣುವ ಮೌನಕ್ಕೂ ಪರಸ್ಪರ ಸಂಬಂಧ ಕಲ್ಪಿಸಬಹುದು, ಕಲ್ಪಿಸಲೇಬೇಕು ಎಂದು ಗುಜ್‌ಮನ್‌ ತೀರ್ಮಾನಿಸಿದ್ದರಿಂದಲೇ ನಮಗೆ ಇಂಥ ಶ್ರೇಷ್ಠ ಡಾಕ್ಯುಮೆಂಟರಿ ಸಿಕ್ಕಿದೆ. ಕೋಟಿಕೋಟಿ ವರ್ಷಗಳ ಹಿಂದಿನ ಬೆಳಕಿನ ಕಿರಣದಷ್ಟೇ ನಮ್ಮನ್ನು ಅಗಲಿದ ಜೀವಗಳ ಉಸಿರೂ ನೆನಪಿರಬೇಕು ಎಂಬ ಅತ್ಯಂತ ಗಾಢ ಸಂದೇಶವನ್ನು ನೀಡಿದ ಗುಜ್‌ಮನ್‌ಗೆ ಅಭಿನಂದನೆಗಳು. ಸಾಂಸ್ಕೃತಿಕ ವಿಸ್ಮರಣೆಯನ್ನು ಗುಜ್‌ಮನ್‌ ಕಟುವಾಗಿ ವಿರೋಧಿಸುತ್ತಾರೆ ಎಂಬುದು ಭಾರತದ ಸಮಕಾಲೀನ ಆಗುಹೋಗುಗಳ ಬಗ್ಗೆಯೂ ಏನನ್ನೋ ತಿಳಿಸಿದಂತೆ ಅನ್ನಿಸುವುದಿಲ್ಲವೆ?

ತೊಂಬತ್ತೇ ನಿಮಿಷಗಳಲ್ಲಿ ಮಹಾನ್‌ ಕಾದಂಬರಿಯಂತೆ ನಮ್ಮನ್ನು ಅಗಾಧವಾಗಿ ಆವರಿಸುವ ಈ ಸಾಕ್ಷ್ಯಚಿತ್ರದ ಬಗ್ಗೆ ಹುಡುಕಿ ತೆಗೆದ ಒಂದು ಸವಿವರ ವಿಮರ್ಶೆಯನ್ನೂ  ಕೊಟ್ಟಿದ್ದೇನೆ, ಓದಿ. ಹಾಗೆಯೇ ಇದರ ಬಗ್ಗೆ ಬಂದ ಇತರೆ ವಿಮರ್ಶೆಗಳ ಸಂಗ್ರಹವನ್ನೂ ಇಲ್ಲಿ ಓದಿ.  

Share.
Leave A Reply Cancel Reply
Exit mobile version