ಈಗಾಗ್ಲೇ ಕನ್ನಡ ಮಾಧ್ಯಮಗಳಲ್ಲಿ ಕೊರೋನಾವೈರಸ್, ಸಿಡುಬು, ಸ್ಪಾನಿಶ್ ಫ್ಲೂ, ಬ್ಲಾಕ್ ಡೆತ್ – ಇತ್ಯಾದಿ ಮಹಾಪಿಡುಗುಗಳ ಬಗ್ಗೆ ಲೇಖನಗಳನ್ನು ಓದಿರುತ್ತೀರಿ. ಇನ್ನೂ ಪೋಲಿಯೋ ಸರದಿ ಬಂದಿಲ್ವಲ್ಲ ಅಂತ ಕಾಯ್ತಾ ಇದ್ದೆ. ಮೊನ್ನೆ ಯಾತಕ್ಕೋ ನಾನೂ ಪೋಲಿಯೋ ವೈರಸ್ ಸೋಂಕಿನಿಂದ ಬದುಕಿ ಉಳಿದವನು ಎಂಬ ಬಾಲ್ಯದ ನೆನಪಾಗಿ ನಾನೇ ಯಾಕೆ ಪೋಲಿಯೋ ಕತೇನ ನಿಮಗೆ ಹೇಳ್ಬಾರ್ದು ಅಂತ ಯೋಚಿಸಿ ಇಷ್ಟು ಬರೀಲಿಕ್ಕೆ ಹೊರಟೆ! ಈಗ್ಲೂ ವಿಶ್ವದಾದ್ಯಂತ ಪೋಲಿಯೋ ಪೀಡೆಗೆ ತುತ್ತಾಗಿ ಜೀವನ ತಳ್ತಾ ಇರೋ 20 ಲಕ್ಷ ಜನ ಇದಾರೆ ಅಂದಮೇಲೆ ಪೋಲಿಯೋ ಘನತೆ ಏನು ಅಂತ ಅರ್ಥ ಆಯ್ತ?!
ಪೋಲಿಯೋ ರೋಗ (ಪೋಲಿಯೋಮೈಲಿಟಿಸ್) – ವೈರಸ್ ಬಗ್ಗೆ ವಿಕಿಪೀಡಿಯಾದಲ್ಲಿ ಏನಿದೆ ಅನ್ನೋದು ನಿಮಗೆ ಗೊತ್ತೇ ಇರುತ್ತೆ. ಆದ್ರೂ ಕಾಫಿ ಪೇಸ್ಟ್ ಮಾಡದೆ ಮುಂದೆ ಹೋಗಕ್ಕಾಗುತ್ತ?
ಪೋಲಿಯೋವೈರಸ್ ಸೋಂಕಿಗೆ ಒಳಗಾದ ಇನ್ನೂರರಲ್ಲಿ ಒಬ್ಬರಿಗೆ ನಡೆದಾಗಲು ಆಗದಂತೆ ಕಾಲು ಊನವಾಗುತ್ತದೆ; ಮಾಂಸಖಂಡಗಳು ದುರ್ಬಲವಾಗುತ್ತವೆ. ಇದು ಕೆಲವೇ ಗಂಟೆಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ (10 ದಿನಗಳ ಅಂದಾಜು) ಆಗುತ್ತೆ. ಕಾಲಲ್ಲದೆ ತಲೆ, ಕುತ್ತಿಗೆ – ಮುಂತಾದ ಅಂಗಗಳೂ ದುರ್ಬಲವಾಗುವ ಸಾಧ್ಯತೆ ಇದೆ. ಮಾಂಸಖಂಡಗಳು ದುರ್ಬಲವಾದ ಮಕ್ಕಳಲ್ಲಿ ಶೇಕಡಾ 2 ರಿಂದ 5 ರಷ್ಟು ಮತ್ತು ಶೇಕಡಾ 15 ರಿಂದ 30 ರಷ್ಟು ವಯಸ್ಕರು ಸತ್ತೇ ಹೋಗ್ತಾರೆ ಅಂದ್ರೆ ನೀವು ಶಾಕ್ ಆಗ್ತೀರ. ನೀವು ಬೆಚ್ಚಬೀಳೋ ವಿಷ್ಯ ಅಂದ್ರೆ ಪೋಲಿಯೋದಿಂದ ಗುಣಮುಖ ಆದಮೇಲೂ, ಹಲವು ದಶಕಗಳ ನಂತರವೂ, ಮಾಂಸಖಂಡಗಳು ದುರ್ಬಲವಾಗುವ ಪ್ರಕ್ರಿಯೆ ಮತ್ತೆ ಶುರು ಆಗುತ್ತೆ!
ಪೋಲಿಯೋ ಪೀಡೆ ಈಗ ವಿಶ್ವದ ಮೂರು ದೇಶಗಳನ್ನು – ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಆಲ್ಜೀರ್ಸ್ – ಹೊರತುಪಡಿಸಿ ಬೇರೆಲ್ರ್ಲೂ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಪಾಕಿಸ್ತಾನದಲ್ಲಿ ಪೋಲಿಯೋ ಲಸಿಕೆ ಹಾಕಲು ಮುಂದಾದ ಏಳು ದಾದಿಯರನ್ನು ತಾಲಿಬಾನ್ ಹತ್ಯೆ ಮಾಡಿದ್ದೂ ಈಗ ಕರಾಳ ಇತಿಹಾಸ.
ಸಂಕ್ಷಿಪ್ತವಾಗಿ ಹೇಳೋದಾದ್ರೆ ಪೋಲಿಯೋ ವೈರಸ್ ಎಂಜಲು, ಮಲದ ಅಂಶ ಅಥವಾ ಆಹಾರದ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತೆ. ಈಗ ಲಸಿಕೆ ಇದ್ದೇ ಇದೆ. ಆದ್ರೆ ಒಮ್ಮೆ ಪೋಲಿಯೋ ಸೋಂಕು ಬಂದ್ರೆ.. ಮತ್ತೆ ಶಾಕ್ ಆಗ್ತೀರ: ಚಿಕಿತ್ಸೆ ಇಲ್ಲ! ಅದೂ ಅಲ್ದೆ ಬೇಸಗೆಯಲ್ಲಿ ಇದು ಬಹುಬೇಗ ಹರಡುತ್ತೆ.
ಸಾವಿರಾರು ವರ್ಷಗಳಿಂದಲೂ ಪೋಲಿಯೋ ಇತ್ತು ಅನ್ನೋದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಕ್ರಿಸ್ತಪೂರ್ವ 14 ನೇ ಶತಮಾನದ ಈಜಿಪ್ಟ್ ಕೆತ್ತನೆಯಲ್ಲೇ ಊಣಗೊಂಡ ಕಾಲಿನ ವ್ಯಕ್ತಿಯ ಚಿತ್ರ ಇದೆ. ಈ ರೋಗದ ಲಕ್ಷಣಗಳನ್ನು ಖಚಿತವಾಗಿ ಪಟ್ಟಿ ಮಾಡಿದ್ದು 1789 ರಲ್ಲಿ; ಈ ವೈರಸ್‌ನ್ನು ಮೊದಲು ಹುಡುಕಿ ತೆಗೆದಿದ್ದು 1908 ರಲ್ಲಿ. ಲಸಿಕೆ ಬಂದಿದ್ದು 1950 ರಲ್ಲಿ. ಅಂದ್ರೆ ವೈರಸ್‌ನ್ನು ಪ್ರತ್ಯೇಕಿಸಿದ 42 ವರ್ಷಗಳ ನಂತರ ಲಸಿಕೆ ಬಂತು. ಆದ್ದರಿಂದ ಕೊರೋನಾವೈರಸ್‌ಗೆ ತಿಂಗಳೊಪ್ಪತ್ತರಲ್ಲೇ ಲಸಿಕೆ ಕಂಡುಹಿಡಿದರೆ ಅದು ನಿಜಕ್ಕೂ ದೊಡ್ಡ ಯಶಸ್ಸು.
ಪೋಲಿಯೋವೈರಸ್‌ಗಳಲ್ಲಿ ಮೂರು ವಿಧ. ಅದ್ರಲ್ಲೂ ಸ್ಪೈನಲ್ ಪೋಲಿಯೋನೇ ಹೆಚ್ಚು ಅಪಾಯಕಾರಿ ಮತ್ತು ವ್ಯಾಪಕ. ಅದು ಸೀದಾ ಬೆನ್ನುಹುರಿಯ ಬುಡದಲ್ಲೇ ಕೂತು ಕಾಲುಗಳನ್ನು ನಿಷ್ಕ್ರಿಯಗೊಳಿಸುತ್ತೆ; ಒಂದು ರೀತಿಯಲ್ಲಿ ಪಾರ್ಶ್ವವಾಯು ಹೊಡೆದ ಹಾಗೆ. ಬುಲ್‌ಬರ್ ಪೋಲಿಯೋವೈರಸ್ ಬಂದ್ರೆ ವಿಶೇಷವಾಗಿ ಉಸಿರಾಟದ ತೊಂದರೆ. ಯಾವುದೇ ಪೋಲಿಯೋವೈರಸ್ ದಾಳಿ ಮಾಡಿದ್ರೂ, ಅವು ಉಸಿರಾಟದ ನಾಳಗಳನ್ನೇ ನಿಷ್ಕ್ರಿಯಗೊಳಿಸುವ ಸಾಧ್ಯತೆಯೂ ಹೆಚ್ಚು. ಆದ್ದರಿಂದ ಪೋಲಿಯೋ ರೋಗಿಗಳಿಗೆ ಬಲವಂತವಾಗಿ ಆದ್ರೆ ಹೆಚ್ಚು ಯಾತನೆ ಕೊಡದೆ ಉಸಿರಾಟ ಮಾಡ್ಸೋ ಐರನ್ ಲಂಗ್‌ಗಳನ್ನು ಆಗ ಸಂಶೋಧಿಸಿ ಬಳಸಲಾಗಿತ್ತು. ಕೊಳವೆಯಾಕಾರದ ಈ ಐರನ್ ಲಂಗ್‌ಗಳು ಕೆಲವೊಮ್ಮೆ ಶವಪೆಟ್ಟಿಗೆ ಥರಾನೇ ಕಾಣುತ್ತಿದ್ದವು.
ಮಕ್ಕಳ ಕಾಲುಗಳು ನಿಷ್ಕ್ರಿಯವಾಗದೇ ಇರಲಿ ಅಂತ ಅವುಗಳನ್ನು ನೇರಗೊಳಿಸಿ ಕಟ್ಟುತ್ತಿದ್ದ ಉದಾಹರಣೆಯೂ ಇದೆ. ಆದ್ರೆ ಇದರಿಂದ ಅನಾಹುತಗಳೇ ಹೆಚ್ಚಾಗಿದ್ದವು.
ಅಮೆರಿಕಾದ ಅಧ್ಯಕ್ಷ ರೂಸ್‌ವೆಲ್ಟ್ ಕೂಡಾ ಪೋಲಿಯೋ ಪೀಡಿತ. ಆದರೆ ಪೋಲಿಯೋ ವಿರುದ್ಧದ ಅಭಿಯಾನದಲ್ಲಿ ಆತ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಲಿಲ್ಲ ಎಂಬ ದೂರು ಇದೆ.
ಎಲ್ಲ ಸರಿ, ಶೀರ್ಷಿಕೆಯಲ್ಲಿ ಹೇಳಿದ್ದೀರಲ್ಲ – ಪೋಲಿಯೋಗೂ, ಬೆಳಂಬಾರಕ್ಕೂ ಏನು ಕನೆಕ್ಷನ್ ಸ್ವಾಮಿ ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಇರಬಹುದು. ಮುಂದೆ ಓದಿ.
ಅಂಕೋಲಾದಿಂದ ಏಳು ಕಿಮೀ ದೂರದಲ್ಲಿ ಇರೋ ಬೆಳಂಬಾರದಲ್ಲಿ ಈಗಲೂ ಒಂದು ನಾಟಿ ವೈದ್ಯರ ಮನೆ ಇದೆ. ಅಲ್ಲಿ ಈಗ ಶ್ರೀ ಹನುಮಂತ ಬೊಮ್ಮ ಗೌಡ ಎಂಬ ಹಾಲಕ್ಕಿ ಸಮುದಾಯದ ನಾಟಿ ವೈದ್ಯರು ಮುಖ್ಯವಾಗಿ ಪಾರ್ಶ್ವವಾಯು ಮತ್ತು ನರ ಸಂಬಂಧಿತ, ನಡೆದಾಟ ಸಮಸ್ಯೆ ಇರುವ ರೋಗಗಳಗೆ ಚಿಕಿತ್ಸೆ ನೀಡುತ್ತಾರೆ. ಕುಡಿಯಲು ಸಸ್ಯದ ಪುಡಿ ಮತ್ತು ಹಚ್ಚಿಕೊಳ್ಳಲು ಸಸ್ಯ ರಸ ಯುಕ್ತ ಎಣ್ಣೆ ಬಳಸಬೇಕು.
ಹನುಮಂತ ಅವರ ತಂದೆ ಶ್ರೀ ವೈದ್ಯ ಬೊಮ್ಮು ಶಿವು ಗೌಡ ಅವರೇ ನನ್ನ ಬದುಕಿಗೆ ನಡೆ ಕೊಟ್ಟವರು.(ಅವರ ತಂದೆ ಶ್ರೀ ಶಿವು ಬೊಮ್ಮು ಗೌಡ) ನನ್ನ ಮೂರನೆಯ ವಯಸ್ಸಿನಲ್ಲೇ ಪೋಲಿಯೋ ವೈರಸ್ ದಾಳಿಯಾದಾಗ ನನ್ನ ತಂದೆ – ತಾಯಿ ಸೀದಾ ಬೆಳಂಬಾರಕ್ಕೆ ಹೋಗಿ ಔಷಧಗಳನ್ನು ತಂದು ನನ್ನ ಎಡಗಾಲಿಗೆ ನಿರಂತರ 40 ದಿನಗಳ ಕಾಲ ಹಚ್ಚಿದ್ದರಿಂದ ನನ್ನ ಕಾಲು ಶೇಕಡಾ 95 ಪಾಲು ಬಲಗಾಲಿನಂತೆಯೇ ಮರಳಿ ಬಂತು. ಯಾವುದೇ ಊರುಗೋಲಿಲ್ಲದೆ ಸ್ವತಂತ್ರವಾಗಿ ನಡೆಯುವಂತಾಯಿತು. ಐವತ್ತು ವರ್ಷಗಳ ನಂತರ, 2018 ರಲ್ಲಿ ನಾನು ಮಿತ್ರ ಶ್ರೀ ವಿಠಲದಾಸ ಕಾಮತರೊಂದಿಗೆ ಬೆಳಂಬಾರಕ್ಕೆ ಹೋಗಿ ಶಿವು ಬೊಮ್ಮ ಗೌಡರ ಪ್ರತಿಮೆಗೆ ನಮಿಸಿ, ಹನುಮಂತ ಅವರನ್ನು ಮಾತಾಡಿಸಿ ಬಂದೆ.
ಪೂರಾ ನಿಷ್ಕ್ರಿಯವಾಗಿದ್ದ ನನ್ನ ಎಡಗಾಲಿಗೆ 50 ವರ್ಷಗಳ ಆಯುಸ್ಸು ಕೊಟ್ಟ ಆ ಮಹಾಮಹಿಮ ವೈದ್ಯರನ್ನು ಸದಾ ಸ್ಮರಿಸುವೆ. ಮುಂದಿನ ಹಲವಾರು ವರ್ಷಗಳ ಕಾಲವೂ ಅವರ ಅಂದಿನ ಚಿಕಿತ್ಸೆಯೇ ಬಲ ಕೊಡಲಿದೆ ಎಂಬ ನಂಬಿಕೆ ನನ್ನದು. ಪೋಸ್ಟ್ – ಪೋಲಿಯೋ ಸಿಂಡ್ರೋಮ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ; ಬಂದರೆ ನೋಡುವ!
ಅಲ್ಲೇ ಇರುವ ದೇಸಿ ಆಸ್ಪತ್ರೆಯಲ್ಲಿ ಹತ್ತಾರು ಜನರು ಈಗಲೂ ಚಿಕಿತ್ಸೆ, ಥೆರಪಿ ಪಡೆಯುತ್ತಿರುವುದನ್ನು ಕಂಡೆ. ಬಹುಶಃ ಪೋಲಿಯೋ ವಿರುದ್ಧ ಇಷ್ಟು ಯಶ ಪಡೆದ ಚಿಕಿತ್ಸೆ ಬೇರೆ ಇಲ್ಲ. ಗಮನಿಸಿ: ಪೋಲಿಯೋಗೆ ಯಾವುದೇ ಚಿಕಿತ್ಸೆ ಇಲ್ಲ ಎಂದು ಈಗಲೂ ವಿಕಿಪೀಡಿಯ ಹೇಳುತ್ತೆ; ರೋಗ ಬರುವ ಮುನ್ನ ಸೇವಿಸುವ ಲಸಿಕೆಯೊಂದೇ ಪರಿಹಾರ. ನಾನೇ ನಾಟಿ ವೈದ್ಯರ ಚಿಕಿತ್ಸೆಯ ಉದಾಹರಣೆಯಾಗಿದ್ದರಿಂದ ಇಷ್ಟು ಖಚಿತವಾಗಿ ಬೆಳಂಬಾರ ಚಿಕಿತ್ಸೆಯ ಬಗ್ಗೆ ಬರೆದೆ, ಅಷ್ಟೆ. ನಮ್ಮ ದೇಸಿ ಚಿಕಿತ್ಸೆಗಳ ಬಗ್ಗೆ ವೈಜ್ಞಾನಿಕ ದಾಖಲೀಕರಣ ಆಗಬೇಕಿದೆ. ಖಂಡಿತ ನಮ್ಮಲ್ಲಿ ರೋಗ ನಿರೋಧಕತೆಯ ನೂರಾರು ಔಷಧಗಳಿವೆ.
ಈಗಲೂ ಪೋಲಿಯೋ ಪೀಡಿತರಾಗಿ ಚಲನವಲನಗಳ ಸಂಕಷ್ಟ ಎದುರಿಸುತ್ತಿರುವ ಲಕ್ಷಗಟ್ಟಲೆ ಜನರ ಬದುಕು ಸಹನೀಯವಾಗಲಿ ಎಂದು ಆಶಿಸೋಣ ಅಲ್ಲವೆ?
ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದನ್ನು ಖಂಡಿತ ಯಾವುದೇ ಕಾರಣಕ್ಕೂ ತಪ್ಪಿಸಬೇಡಿ!
- ಪೋಲಿಯೋ ಬಗ್ಗೆ ನೀವು ಓದಬಹುದಾದ ಮೂರು ಪುಸ್ತಕಗಳು
- Paralysed with Fear – The Story of Polio (2013, Palgrave Macmillan) : Gareth Williams
- Polio – An American Story (2005, Oxford University Press, USA) : David M. Oshinsky
- Polio (Biographies of Disease) (2009): Daniel J. Wilson
- ನೀವು ಮಾನಸಿಕವಾಗಿ ಕುಂದಿರದೇ ಇದ್ದರೆ ಮತ್ತು ಕೊರೋನಾ ಸಂಕಷ್ಟದ ದಿನಗಳಲ್ಲಿ ಗಂಭೀರ ಸಾಕ್ಷ್ಯಚಿತ್ರವನ್ನು ನೋಡುವ ಸಮಚಿತ್ತತೆ ಇದ್ದರೆ ಈ ಸಾಕ್ಷ್ಯಚಿತ್ರ ನೋಡಿ. (ಸಂಕಷ್ಟದಲ್ಲಿ ನಿಮ್ಮ ಬೇಸರನ್ನು ಹೆಚ್ಚಿಸುವ ಸಾಧ್ಯತೆ ಇದೆ, ದಯವಿಟ್ಟು ಎಚ್ಚರಿಕೆ ವಹಿಸಿ): Paralyzing Fear: Polio in America https://www.youtube.com/watch?v=EFENJm2B3cg.