23  ಅಕ್ಟೋಬರ್‌ 2018

ಇವರಿಗೆ

ಮಾನ್ಯ ಮುಖ್ಯಮಂತ್ರಿಯವರು ಮತ್ತು ಸಂಪುಟದ ಎಲ್ಲ ಸಚಿವರು  

ಕರ್ನಾಟಕ ಸರ್ಕಾರ

ಬೆಂಗಳೂರು

ಮಾನ್ಯರೇ

ವಿಷಯ: ಕೊಡಗು ಮತ್ತು ಮಲೆನಾಡಿನ ಪ್ರದೇಶಗಳ ನೆರೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ದೂರಗಾಮಿ, ಸುಸ್ಥಿರ ಕ್ರಿಯಾಯೋಜನೆ ರೂಪಿಸಲು ನಾಡಿನ ನಾಗರಿಕರ ಮನವಿ.

2018 ರ ಆಗಸ್ಟ್‌ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ (ಮತ್ತು ನೆರೆಯ ಕೇರಳದಲ್ಲಿ) ಉಂಟಾದ ಪ್ರಕೃತಿ ವಿಕೋಪವು ಸಾವಿರಾರು ಕೋಟಿ ರೂ.ಗಳ ಮೌಲ್ಯದ ಆಸ್ತಿ ಹಾನಿಯನ್ನು ಉಂಟುಮಾಡಿದೆ. ಜನವಸತಿ, ರಸ್ತೆ, ಮುಂತಾದ ಮೂಲಸೌಕರ್ಯಗಳಲ್ಲಿ ಆದ ನಷ್ಟವನ್ನು ರೂಪಾಯಿ ಲೆಕ್ಕದಲ್ಲಿ ಅಂದಾಜು ಮಾಡಬಹುದಾದರೂ, ಸಾವಿರಾರು ವರ್ಷಗಳಿಂದ ಕೊಡಗಿನ, ಕರ್ನಾಟಕದ ಜೀವಸೆಲೆಯಾಗಿದ್ದ ದಟ್ಟ ಅರಣ್ಯ ಪ್ರದೇಶದ ನಷ್ಟವನ್ನು ಅಳೆಯಲೂ ಸಾಧ್ಯವಿಲ್ಲ. ಜೀವವೈವಿಧ್ಯದಿಂಧ ತುಂಬಿದ್ದ, ದಕ್ಷಿಣ ಕರ್ನಾಟಕ, ತಮಿಳುನಾಡಿಗೇ ನೀರುಣಿಸುತ್ತಿರುವ ಕಾವೇರಿ ನದಿಯ ಉಗಮಸ್ಥಾನವಾದ ಕೊಡಗು ಈಗ ಭಾರೀ ಪ್ರಮಾಣದ  ಪರಿಸರ ನಾಶಕ್ಕೆ ತುತ್ತಾಗಿದೆ. ಸುಮಾರು 1500 ಫುಟ್‌ಬಾಲ್‌ ಕ್ರೀಡಾಂಗಣದಷ್ಟು (1060 ಹೆಕ್ಟೇರ್‌ಗಳಷ್ಟು) ಪ್ರದೇಶವು ಭೂಕುಸಿತಕ್ಕೆ ತುತ್ತಾಗಿದೆ ಎಂದು ಉಪಗ್ರಹ ವರದಿಗಳು ತಿಳಿಸಿವೆ.  ಈ ಐತಿಹಾಸಿಕ ಪರಿಸರ ದುರಂತಕ್ಕೆ ಮಾನವ ನಿರ್ಮಿತ ಕಾರಣಗಳೂ ಮುಖ್ಯ ಕಾರಣವಾಗಿವೆ.

“ಕೊಡಗಿನಲ್ಲಿ  ನಾಲ್ಕು  ದಶಕಗಳ ಹಿಂದೆ ಒಟ್ಟು ಭೂಪ್ರದೇಶದ ಶೇಕಡಾ 50 ರಷ್ಟು ದಟ್ಟ ಹಸಿರು ಕಾಡಿತ್ತು. ಆದರೆ ಅದು ಈಗ ಶೇಕಡಾ 17-18ರ ಪ್ರಮಾಣಕ್ಕೆ ಕುಸಿದಿದೆ. ರೈಲ್ವೆ, ರಸ್ತೆಗಳು, ವಿದ್ಯುಚ್ಚಕ್ತಿ ಕಂಬಗಳು, – ಹೀಗೆ ಹಲವು ಕಾರಣಗಳಿಗಾಗಿ ಹಸಿರು ಕಡಿಮಯಾಗುತ್ತ ಬಂತು. ನಾಲ್ಕು ದಶಕಗಳಿಂದ ನಡೆಯುತ್ತಿದ್ದ ಧಕ್ಕೆಯು ಈಗ ಪರಿಣಾಮ ತೋರುತ್ತಿದೆ” ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಪ್ರೊ. ಟಿ ವಿ ರಾಮಚಂದ್ರ ಹೇಳುತ್ತಾರೆ. ಗುಡ್ಡ ಪ್ರದೇಶಗಳಲ್ಲಿ ಕಾಡಿನ ಪ್ರಮಾಣವು ಶೇಕಡಾ 66 ರಷ್ಟಿರಬೇಕು; ಇತರೆ ಪ್ರದೇಶಗಳಲ್ಲಿ ಇರು ಶೇಕಡಾ 33 ರಷ್ಟಾದರೂ ಇರಬೇಕಿದೆ.

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿನ ಇತ್ತೀಚೆಗಿನ ಮತ್ತು ಪ್ರಸ್ತಾವಿತ ಯೋಜನೆಗಳು ಮತ್ತು ಅವುಗಳ ಪರಿಣಾಮವಾಗಿ ಕಡಿಯಲಿರುವ ಮರಗಳ ಸಂಖ್ಯೆ ಕುರಿತ ಒಂದು ಅಂದಾಜು ಕೋಷ್ಟಕ  (ಮೂಲ: ವಿವಿಧ ಮಾಧ್ಯಮ ವರದಿಗಳು

ಇತ್ತೀಚೆಗೆ ಸಂಪೂರ್ಣವಾದ ಯೋಜನೆಗಳು ಕಡಿದ / ಕಡಿಯಲಿರುವ ಮರಗಳ ಸಂಖ್ಯೆ
1.       2015 ರಲ್ಲಿ ಸಂಪೂರ್ಣವಾದ ಮೈಸೂರು ಕೋಯಿಕ್ಕೋಡ್‌ 400 ಕೆವಿ ಹೈ ಟೆನ್‌ಶನ್‌ ಪವರ್‌ಲೈನ್‌ https://bangaloremirror.indiatimes.com/bangalore/cover-story/Power-Grid-Corporation-of-India-nought-axe-green-activists-Central-Power-Research-Institute-Indian-Institute-of-Science-Dasara-elephant/heroesshow/43742645.cms  54,000
ಈಗ ನಡೆಯುತ್ತಿರುವ ಯೋಜನೆಗಳು
2.       ಹಾಸನ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೆಂಗಳೂರು ಮಂಗಳೂರು ಔದ್ಯಮಿಕ ಕಾರಿಡಾರ್‌ ನಿರ್ಮಾಣ ( https://www.thehindu.com/news/national/karnataka/over-3000-trees-being-felled-to-widen-nh-75/article17620764.ece ) 13,500
3.       ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ನೇತ್ರಾವತಿ ನದಿತಿರುವು ಯೋಜನೆ(https://thewire.in/environment/yettinahole-karnataka-bengaluru-chikkaballapur) 20,000
4.       ರಾ.ಹೆ. 169 ರಲ್ಲಿ (ಈ ಹಿಂದೆ ರಾ.ಹೆ. 13 ಆಗಿತ್ತು) ಶಿವಮೊಗ್ಗದಿಂದ ಮಂಗಳೂರು ರಸ್ತೆ ಅಗಲೀಕರಣ ( https://bangaloremirror.indiatimes.com/news/state/cut-it-out-say-villagers-to-koppa-tree-chopping/articleshow/58580252.cms) 500
5.       ತುಂಗಾ ಏತ ನೀರಾವರಿ ಯೋಜನೆ (ಚಿಕ್ಕಮಗಳೂರು ಜಿಲ್ಲೆ) (https://www.thehindu.com/todays-paper/tp-national/tp-karnataka/Villagers-up-in-arms-over-tree-cutting/article17119587.ece) 24,000
6.       ರಾಷ್ಟ್ರೀಯ ಹೆದ್ದಾರಿ 4 ಎ ಅಗಲೀಕರಣ (ಬೆಳಗಾವಿಯಿಂದ ಪಂಜಿಮ್‌ ವರೆಗೆ) (https://www.thehindu.com/news/national/karnataka/38000-trees-to-be-axed-for-a-smooth-ride-between-Belagavi-and-Panaji/article14024504.ece) 38,000
ಪ್ರಸ್ತಾವಿತ ಯೋಜನೆಗಳು 
7.       ತಿನಾಯ್ ಘಾಟಿಯಿಂದ  ಕಾಸಲ್ ರಾಕ್ ವರೆಗೆ   ಜೋಡಿ ರೈಲು ಮಾರ್ಗಕ್ಕೆ .೧೭ ಹೆಕ್ಟೇರು ಅರಣ್ಯ ನಾಶ(http://www.newindianexpress.com/states/karnataka/2016/aug/09/Dandeli-wildlife-in-danger-as-SWR-proposes-construction-of-double-line-1507278.html) 532
8.       ಕೈಗಾ ಪರಮಾಣು ವಿದ್ಯುತ್‌ ಸ್ಥಾವರದ ಸಾಮರ್ಥ್ಯವೃದ್ಧಿ ಹಿನ್ನೆಲೆಯಲ್ಲಿ ಅಳವಡಿಸುವ ವಿದ್ಯುತ್‌ ಸಾಗಾಣಿಕೆ  ತಂತಿಸಾಲುಗಳು (https://bangaloremirror.indiatimes.com/news/state/karnataka-is-kaiga-going-the-koodankulam-way/articleshow/59075366.cms) 1,00,000
9.       ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ (https://www.thehindu.com/news/national/karnataka/hubballiankola-railway-project-clears-first-environmental-hurdle/article19259475.ece) 2,00,000
10.   ಶಿರಸಿ- ಕುಮಟಾ ರಸ್ತೆ ಅಗಲೀಕರಣ(https://kannada.asianetnews.com/news/sirsi-kumta-state-highway-will-close-for-developing-work-18-months-pezx6h) 60,000
11.   ಶರಾವತಿ ವನ್ಯಜೀವಿ  ಅಭಯಾರಣ್ಯದಲ್ಲಿ 2000 ಮೆ.ವಾ. ಪಂಪಡ್‌ ಸ್ಟೋರೇಜ್‌ ಹೈಡ್ರೋ ಪವರ್ ಪ್ಲಾಂಟ್‌   (http://www.newindianexpress.com/states/karnataka/2017/nov/30/activists-up-in-arms-as-sharavathi-power-project-gets-green-clearance-1714473.html) 150 ಹೆಕ್ಟೇರು  ದಟ್ಟ ಕಾಡು
12.   ಜೋಗ ಜಲಪಾತದಲ್ಲಿ ಸರ್ವಋತು ವೀಕ್ಷಣೆ(https://timesofindia.indiatimes.com/city/bengaluru/govt-seeks-moef-nod-to-make-jog-falls-all-season-spectacle/articleshow/58740928.cms) 5000 + ಕುಟುಂಬಗಳ ಒಕ್ಕಲೆಬ್ಬಿಸುವಿಕೆ
13.   ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರೆತ್ತುವ ಯೋಜನೆ (http://www.newindianexpress.com/states/karnataka/2018/jul/06/sharavathi-waters-protests-begins-in-bangalore-environmentalists-join-1839088.html) 1,00,000
14.   ತಾಳಗುಪ್ಪ – ಹೊನ್ನಾವರ ರೈಲ್ವೆ ಮಾರ್ಗ(https://www.thehindu.com/todays-paper/tp-national/tp-karnataka/talaguppahonnavar-rail-link-demanded/article4934535.ece) 2,00,000
15.   ಶರಾವತಿ ಮತ್ತು ಕೊಲ್ಲೂರು ವನ್ಯಜೀವಿ ಅಭಯಾರಣ್ಯ ಹಾದುಹೋಗುವ ಸಾಗರ – ಸಿಗಂದೂರು-ನಿಟ್ಟೂರು-ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ  1,00,000
16.   ಶಿವಮೊಗ್ಗ ಹೊನ್ನಾವರ ರಸ್ತೆಯನ್ನು 4 ಪಥಗಳ ಮಾರ್ಗವಾಗಿ ಪರಿವರ್ತಿಸುವುದು  2,00,000
17.   ಶಿಕಾರಿಪುರ – ಹೊಸನಗರ-ನಗರ-ನಿಟ್ಟೂರು – ಬೈಂದೂರು ಮಾರ್ಗವಾಗಿ ಸಾಗುವ ರಾ.ಹೆ. 766 ಸಿ 2 ಇದರ 2/4 ಪಥದ ರಸ್ತೆ (http://forestsclearance.nic.in/viewreport.aspx?pid=FP/KA/ROAD/22256/2016) 2,00,000
18.   ಆಗುಂಬೆ ಮತ್ತು ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಹಾದುಹೋಗುವ ತೀರ್ಥಹಳ್ಳಿ ಮಲ್ಪೆ 4 ಪಥಗಳ ರಾಷ್ಟ್ರೀಯ ಹೆದ್ದಾರಿ. (http://www.mangalorean.com/udupi-malpe-manipal-thirthahalli-national-highway-dpr-yet-to-be-approved/) 1,00,000
19.   ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಿಶಿಲ ಬೈರಾಪುರ ನಡುವಣ ಹೊಸ 4 ಪಥದ ಮಾರ್ಗ (https://www.deccanchronicle.com/nation/current-affairs/271216/forest-departments-no-to-shishila-byrapura-road.html)(http://forestsclearance.nic.in/viewreport.aspx?pid=FP/KA/ROAD/32747/2018) 35,000
20.   ಸೋಮವಾರಪೇಟೆಯಿಂದ ಮಾನಂತವಾಡಿ ರಾಷ್ಟ್ರೀಯ ಹೆದ್ದಾರಿ ಮತ್ತು ಮೈಸೂರಿನಿಂದ ತಲಚೇರಿ ಕೇರಳ ರೈಲುಮಾರ್ಗ (https://www.thenewsminute.com/article/development-or-destruction-kodagu-groups-protest-infrastructure-projects-district-63047) 3,00,000
21.   ಮೈಸೂರು – ವಿರಾಜಪೇಟೆ – ಕಣ್ಣೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ  ಸೇರುವವರೆಗೆ ಅಗಲೀಕರಣ(https://www.thehindu.com/todays-paper/tp-national/tp-kerala/kannur-mysuru-corridor-to-be-made-nh/article19368042.ece) 30,000
22.   ಮೈಸೂರು – ಕುಶಾಲನಗರ – ಮಡಿಕೇರಿ – ಮಂಗಳೂರು ರೈಲು ಮಾರ್ಗ 45,000
23.   ಮಡಿಕೇರಿ – ಕಡಮಕಲ್ಲು – ಸುಬ್ರಹ್ಮಣ್ಯ ರಸ್ತೆhttps://starofmysore.com/despite-objections-state-govt-pushing-for-madikeri-kadamakallu-subramanya-road-works/ 28,000
ಒಟ್ಟು ಕಡಿದ ಮತ್ತು ಕಡಿಯಲಾಗುವ ಮರಗಳ ಸಂಖ್ಯೆ 21,69, 500 ಕ್ಕೂ ಹೆಚ್ಚು

ಮೇಲೆ ಹೇಳಿದ ಕೋಷ್ಟಕದ ಪ್ರಕಾರ ಇನ್ನು ಐದು ಅಥವಾ ಹತ್ತು ವರ್ಷಗಳ ಅವಧಿಯಲ್ಲಿ ಇಷ್ಟೊಂದು ಬಲಿತ ಮರಗಳು ಪಶ್ಚಿಮಘಟ್ಟದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಿಗೆ ಬಲಿಯಾಗುತ್ತವೆ ಎಂದರೆ, ಈ ಕೃತ್ಯವು ಮಾನವೀಯತೆಗೆ ಬಗೆಯುವ ಅಪಚಾರವೆಂದು ಭಾವಿಸಬೇಕಾಗುತ್ತದೆ. ಇವುಗಳು ನೀಡುವ ನೈಸರ್ಗಿಕ ಸೇವೆಯನ್ನು ಹಣದ ರೂಪದಲ್ಲಿ ಲೆಕ್ಕಾಚಾರ ಹಾಕಿದರೂ ಅಭಿವೃದ್ಧಿಯ ಯೋಜನೆಗಳಿಂದ ಆಗುವ ಲಾಭಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ಇರುತ್ತದೆ. ಆದ್ದರಿಂದ ಮೇಲೆ ಕಾಣಿಸಿದ ಯಾವ ಯೋಜನೆಗಳನ್ನು ಜಾರಿಯಾಗದಂತೆ ನೋಡಿಕೊಳ್ಳುವುದು ಪ್ರಸಕ್ತ ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಇಲ್ಲೊಂದು ಉದಾಹರಣೆಯನ್ನು ನೋಡೋಣ. ತಮಿಳುನಾಡು ರಾಜ್ಯ ಹವಾಗುಣ ಬದಲಾವಣೆ ನಿರ್ವಹಣೆ ಸಮಿತಿಯ ಅಧಿಕೃತ ಸಮೀಕ್ಷೆಯ ಪ್ರಕಾರ, ಬೇರಾವುದೇ ಕ್ಷೇತ್ರದ ಪ್ರಗತಿಗೆ ಹೋಲಿಸಿದರೆ ಕೃಷಿ ಕ್ಷೇತ್ರದ ಪ್ರಗತಿಯ ಮೂಲಕ ಆಗುವ ಪ್ರತ್ಯಕ್ಷ ಅನುಕೂಲ ಈ ರೀತಿ ಇದೆ. ಕೃಷಿ ಕ್ಷೇತ್ರದಲ್ಲಿನ ಶೆ.೧ರಷ್ಟು ಅಭಿವೃದ್ದಿಯಿಂದಾಗುವ ಬಡತನ ನಿರ್ಮೂಲನೆ ಪ್ರಮಾಣ ಮೂರು ಪಟ್ಟು ಹೆಚ್ಚು ಇರುತ್ತದೆ. ನಿರಂತರವಾಗಿ ಕೃಷಿ ಕ್ಷೇತ್ರವನ್ನು ಸುಸ್ಥಿರವಾಗಿ ಅಭಿವೃದ್ದಿ ಮಾಡುವುದು ಯಾವುದೇ ರಾಜ್ಯದ ದೀರ್ಘಕಾಲಿನ ಕಾರ್ಯಸೂಚಿಯಾದರೆ, ಬಡತನವನ್ನೇ ಮೂಲೋತ್ಪಾಟನೆ ಮಾಡಲು ಸಾಧ್ಯವಿದೆ.

ಮಾನವ ನಿರ್ಮಿತ ಚಟುವಟಿಕೆಗಳಿಂದಾಗಿ ಜಗತ್ತಿನಲ್ಲಿ ಹವಾಗುಣ ಬದಲಾವಣೆಯಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನ ಏರುತ್ತಿದೆ. ಇದರಿಂದಾಗಿ ಕರ್ನಾಟಕ ರಾಜ್ಯವೂ ಗಂಭೀರ ಸನ್ನಿವೇಶವನ್ನು ಎದುರಿಸುತ್ತಿದೆ. ರಾಜ್ಯದ ಶೇ.೭೭ರಷ್ಟು ಪ್ರದೇಶವು ಒಣ ಅಥವಾ ಅರೆ ಒಣ ಪ್ರದೇಶವಾಗಿದೆ. ಶೇ.೫೪ರಷ್ಟು ಪ್ರದೇಶವು ಸದಾ ಬರಗಾಲಕ್ಕೆ ತುತ್ತಾಗುತ್ತಿದೆ. ಬರಪೀಡಿತ ರಾಜ್ಯಗಳಲ್ಲಿ ದೇಶದ ಎರಡನೇ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿರುವುದು ಆತಂಕದ ಸಂಗತಿಯಾಗಿದೆ. ರಾಜ್ಯದ ಅರಣ್ಯ ಪ್ರದೇಶವು ಶೇ.೨೦ಕ್ಕಿಂತ ಕಡಿಮೆ ಇರುವುದು ಬರಗಾಲಕ್ಕೆ ಮೂಲ ಕಾರಣವಾಗಿದೆ. ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ನಮ್ಮ ರಾಜ್ಯವು ಶೇ.೩೩ರಷ್ಟು ಪ್ರದೇಶದಲ್ಲಿ ಕಾಡನ್ನು ಹೊಂದಿರಬೇಕಾಗಿತ್ತು. ಕರ್ನಾಟಕವು ನಗರೀಕರಣಗೊಂಡ ರಾಜ್ಯದ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಕೊಡಗು ಜಿಲ್ಲೆಯಲ್ಲದೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಿಸಿರುವ  ಸೇರಿದಂತೆ ಪಶ್ಚಿಮ ಘಟ್ಟಗಳು ವಿಶ್ವದ ಅತಿಮುಖ್ಯ ಜೈವಿಕ ತಾಣಗಳಾಗಿವೆ. ಹಲವು ಜಲಮೂಲಗಳಿಗೆ, ಭಾರತದ ಬಹುಭಾಗಕ್ಕೆ ಮಳೆಯಾಗಲು ಈ ಪಶ್ಚಿಮ ಘಟ್ಟಗಳೇ ಕಾರಣ. ಇಂಥ ಅತಿಸೂಕ್ಷ್ಮ ಜೀವವೈವಿಧ್ಯ ತಾಣವನ್ನು ಉಳಿಸಿಕೊಳ್ಳುವುದರ ಜೊತೆಗೇ ಈ ಪ್ರದೇಶದಲ್ಲಿ ವಾಸಿಸುವ ಜನತೆಯ ಆಶೋತ್ತರಗಳನ್ನೂ ವಾಸ್ತವದ ನೆಲೆಯಲ್ಲಿ ಪೂರೈಸಬೇಕಿದೆ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸಿ ಒಂದು ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಬೇಕೆಂದು ತಮ್ಮನ್ನು ಆಗ್ರಹಿಸುತ್ತಿದ್ದೇವೆ.

ಪರಿಹಾರ ಮತ್ತು ಪುನರ್ವಸತಿ

  • ಕೊಡಗಿನಲ್ಲಿ ನೆರೆ, ಭೂಕುಸಿತದಿಂದ ಸಂತ್ರಸ್ತರಾದ ಜನರಿಗೆ ಮುಖ್ಯವಾಗಿ ಹಣಕಾಸಿನ ನೆರವು ಬೇಕಾಗಿದೆ. ಇದಲ್ಲದೆ ಅವರ ದಿನನಿತ್ಯದ ಕೆಲಸಗಳಿಗೆ ವಸ್ತುಗಳು (ಪಾತ್ರೆಗಳು ಇತ್ಯಾದಿ) ಬೇಕಾಗಿವೆ. ಅವುಗಳನ್ನು ಕೂಡಲೇ ಎಲ್ಲರಿಗೂ ವಿತರಿಸಬೇಕು.
  • ಹೀಗೆ ಸಂತ್ರಸ್ತರಾದ ಕುಟುಂಬಗಳು ತಮ್ಮ ಆಸ್ತಿಗಳನ್ನು (ಕಾನೂನಿನ ಅಡಿಯಲ್ಲಿ) ಉಳಿಸಿಕೊಳ್ಳುವಂತೆ ವ್ಯವಸ್ಥೆ ಮಾಡಬೇಕು. ಯಾವುದೇ ಸಂದರ್ಭದಲ್ಲೂ ಬೇರೆ ಖಾಸಗಿ ವ್ಯಕ್ತಿ / ಕಂಪನಿಗಳಿಗೆ ಈ ಆಸ್ತಿಗಳನ್ನು ಮಾರದಂತೆ ನೋಡಿಕೊಳ್ಳಬೇಕು. ಭೂಕುಸಿತಕ್ಕೆ ಒಳಗಾದ ಪ್ರದೇಶಗಳಲ್ಲಿ ಮತ್ತೆ ವಾಸ ಮಾಡಬಯಸದ ನಿವಾಸಿಗಳಿಗೆ, ಸರ್ಕಾರವು ಆ ಪ್ರದೇಶಕ್ಕೆ ಹತ್ತಿರದಲ್ಲೇ ಬೇರೆ ಖಾಸಗಿ ಜಮೀನುಗಳನ್ನು ಖರೀದಿಸಿ ಕಡಿಮೆ ಖರ್ಚಿನ ಮನೆಗಳನ್ನು ಕಟ್ಟಿಸಿಕೊಡಬೇಕು. ಮಾನವೀಯ ನೆಲೆಯ ಅಂಶಗಳನ್ನು ಭವಿಷ್ಯತ್ತಿನ ಭೂಮಿಯ ರಕ್ಷಣೆಯ ಹಿನ್ನೆಲೆಯಲ್ಲಿ ಸೂಕ್ತವಾಗಿ ಕೈಗೊಳ್ಳಬೇಕು.
  • ಕೊಡಗಿನಲ್ಲಿ ಅತಿವೃಷ್ಟಿಯಿಂದ ದುರ್ಬಲವಾದ ಭೂಪ್ರದೇಶವನ್ನು ಮತ್ತೆ ಕೃಷಿಗೆ ತಯಾರು ಮಾಡಲು ದೀರ್ಘಕಾಲೀನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಸೇನೆಯನ್ನು ಕೋರಿ, ಜೆಸಿಬಿಗಳನ್ನು ತರಿಸಿ, ಭೂಕುಸಿತ, ಸವಕಳಿಗೆ ಒಳಗಾದ ಪ್ರದೇಶವನ್ನು ಕೃಷಿಬಳಕೆಗೆ ಯೋಗ್ಯವಾಗುವಂತೆ ಮಾಡಬೇಕು.     
  • ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಸರ್ಕಾರ ಮತ್ತು ಕಾರ್ಪೋರೇಟ್‌ ಸಂಸ್ಥೆಗಳು ಕೊಡಗಿನಲ್ಲಿ ಪರಿಸರ ಸ್ನೇಹಿ ಉದ್ಯಮಗಳನ್ನು ಸ್ಥಾಪಿಸಬೇಕು.

ಕೊಡಗು (ಮುಖ್ಯವಾಗಿ ಮಡಿಕೇರಿ) ಮತ್ತು ಮಲೆನಾಡಿನ ಪ್ರಮುಖ ನಗರಗಳ ವಿಸ್ತರಣೆಗೆ ನಿರ್ಬಂಧ

  • ಖಾಸಗಿ ಮನೆ, ಕಾರ್ಮಿಕ ವಸತಿ ಮುಂತಾದ ಅಗತ್ಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಗೆಯ ವಾಣಿಜ್ಯ ಭೂ ಪರಿವರ್ತನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮಡಿಕೇರಿ ನಗರವನ್ನು 2030 ರ ಹೊತ್ತಿಗೆ ಮೂರು ಪಟ್ಟು ವಿಸ್ತರಿಸುವ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಕೈಬಿಡಬೇಕು. ಈಗ ಸರ್ಕಾರವು ಎಲ್ಲಾ ಬಗೆಯ ಭೂ ಪರಿವರ್ತನೆಯನ್ನು ನಿಷೇಧಿಸಿರುವುದು ಒಳ್ಳೆಯ ಕ್ರಮವಾಗಿದೆ. ಮಲೆನಾಡಿನ ಜಿಲ್ಲೆಗಳ ಕಟ್ಟಡ ನಿರ್ಮಾಣ ನೀತಿಯನ್ನು ತಮಿಳುನಾಡು ಜಿಲ್ಲಾ ಮುನಿಸಿಪಾಲಿಟೀಸ್‌ (ಹಿಲ್‌ ಸ್ಟೇಶನ್ಸ್‌) ನಿರ್ಮಾಣ ನಿಯಮಗಳು 1993  ಇದರಂತೆ ರೂಪಿಸಬೇಕು.

ಅಕ್ರಮ ಮರಳು ಗಣಿಗೆ ತಡೆ

  • ಕೊಡಗಿನ ಕೆಲವೆಡೆ ನದಿಗಳ ಪಾತ್ರದಲ್ಲಿ ಭಾರೀ ಕುಸಿತವಾಗಿದೆ. ಇದಕ್ಕೆ ಆಳವಾದ ಮರಳು ಗಣಿಗಾರಿಕೆಯೇ ಕಾರಣ. ಕೊಡಗಿನಲ್ಲಿ ಮತ್ತು ಮಲೆನಾಡಿನ ಇತರೆ ಜಿಲ್ಲೆಗಳ ನದೀತಟದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ಕಟ್ಟುನಿಟ್ಟಿನ ಕ್ರಮಗಳಿಂದ ಸಂಪೂರ್ಣವಾಗಿ ನಿಲ್ಲಿಸಬೇಕು.

ಕಾಡುಕೊಯ್ತದ ಯೋಜನೆಗಳಿಗೆ ನಿರ್ಬಂಧ

  • ಕೊಡಗಿನ ಮೂಲಕ ಹಾದು ಹೋಗುವ ಎರಡು ರೈಲು ಯೋಜನೆಗಳು ಮತ್ತು ನಾಲ್ಕು ಬಹು ಪಥಗಳ ರಾಷ್ಟ್ರೀಯ ಹೆದ್ದಾರಿಗಳನ್ನು ಯೋಜಿಸಲಾಗಿದೆ. ಇವೆಲ್ಲವೂ ಕಾಡನ್ನು ಮತ್ತು ಗುಡ್ಡಗಳನ್ನು ಕೊಯ್ದು ಮಾಡುವ ಯೋಜನೆಗಳು. ಇವನ್ನು ಕೊಡಗಿನ ಜನರ ಹಿತದ ದೃಷ್ಟಿಯಿಂದ ರದ್ದುಗೊಳಿಸಬೇಕು.

ಪ್ರವಾಸೋದ್ಯಮಕ್ಕೆ ಕಡಿವಾಣ

  • ಕೊಡಗು ಮತ್ತು ಮಲೆನಾಡಿನ ಜಿಲ್ಲೆಗಳು ಕ್ರಮೇಣವಾಗಿ ಪ್ರವಾಸೋದ್ಯಮ ಆಧಾರಿತ ಅಭಿವೃದ್ಧಿ ಸಾಧಿಸಲು ಯತ್ನಿಸುತ್ತಿವೆ. ಆದರೆ ಅನಿರ್ಬಂಧಿತ ಪ್ರವಾಸೋದ್ಯಮದಿಂದ ಪ್ರಕೃತಿಗೆ ಅಪಾಯ ಕಾದಿದೆ. ಈ ಹಿನ್ನೆಲೆಯಲ್ಲಿ ಗಿರ್‌ ಅಭಯಾರಣ್ಯ ಮತ್ತು ಗಂಗೋತ್ರಿ ಗ್ಲೇಸಿಯರ್‌ನಲ್ಲಿ ಮಾಡಿದಂತೆ ನಿಗದಿತ ದಿನವಹಿ ಸಂಖ್ಯೆಯ, ಶುಲ್ಕ ಸಹಿತದ ಪ್ರವಾಸಿ ಪಾಸ್‌ ರೂಪಿಸಬೇಕು.

ಪಾರಿಸರಿಕ ಸೇವೆಗಳಿಗೆ ಪಾವತಿ ವ್ಯವಸ್ಥೆ (ಪಿಇಎಸ್)

  • ಜಲಮೂಲಗಳನ್ನು ಸಂರಕ್ಷಿಸುವ ಮಲೆನಾಡು ಪ್ರದೇಶಗಳ ಮೇಲ್‌ಭಾಗದ ಜನರಿಗೆ ಕೆಳಭಾಗದಲ್ಲಿರುವ ಉದ್ಯಮಗಳು, ಸರ್ಕಾರ – ಎಲ್ಲ್ರೂ ಉತ್ತೇಜಕಗಳನ್ನು ನೀಡುವ  ಪಾರಿಸರಿಕ ಸೇವೆಗಳಿಗೆ ಪಾವತಿ ವ್ಯವಸ್ಥೆ (ಪಿಇಎಸ್‌)ಯನ್ನು ಜಾರಿಗೊಳಿಸಬೇಕು. ಇದರಿಂದ ಮೂಲನಿವಾಸಿಗರು ತಮ್ಮ ಭೂಮಿಯನ್ನು ತಾವೇ ಇಟ್ಟುಕೊಳ್ಳುವಂತಾಗುತ್ತದೆ. ಇಂಥದ್ದೊಂದು ವ್ಯವಸ್ಥೆಯನ್ನು ಪೊನ್ನಂಪೇಟೆಯ ಅರಣ್ಯ ಕಾಲೇಜು ಸಿದ್ಧಪಡಿಸಿದ್ದು ಅದನ್ನು ಆಧಾರವಾಗಿ ಇಟ್ಟುಕೊಳ್ಳಬಹುದಾಗಿದೆ.

ಅಣೆಕಟ್ಟುಗಳಿಗೆ ಸಂಪೂರ್ಣ ನಿಷೇಧ

  • ಒಂದುವೇಳೆ ಬರಪೊಳೆ ಅಣೆಕಟ್ಟು ಕಟ್ಟಿದ್ದರೆ ದಕ್ಷಿಣ ಕೊಡಗಿನಲ್ಲಿ ಭಾರೀ ಅನಾಹುತ ಉಂಟಾಗುತ್ತಿತ್ತು. ಕೊಡಗು ಮತ್ತು ಮಲೆನಾಡಿನ ಇತರೆ ಜಿಲ್ಲೆಗಳಲ್ಲಿ ಇನ್ನು ಬೇರಾವ ಅಣೆಕಟ್ಟುಗಳನ್ನೂ ನಿರ್ಮಿಸದಂತೆ ನಿರ್ಧಾರ ಕೈಗೊಳ್ಳಬೇಕು.

ಅರಣ್ಯ ರಕ್ಷಣೆ ಬಲವರ್ಧನೆ

  • ಶಿಥಿಲಗೊಂಡ ಕಾಡನ್ನು ಉತ್ತಮಗೊಳಿಸಲು ಈಗಿರುವ ವ್ಯವಸ್ಥೆಯಲ್ಲೇ ನಿವೃತ್ತ ಮತ್ತು ಸದೃಢವಾಗಿರುವ ಸೈನಿಕರು ಮತ್ತು ಅಧಿಕಾರಿಗಳನ್ನು ಸೇರಿಸಿ ಅರಣ್ಯ ರಕ್ಷಣೆಯ ವ್ಯವಸ್ಥೆಯನ್ನು ಬಲಪಡಿಸಬೇಕು.   .  ಅದಲ್ಲದೆ, ಪರಿಹಾರ ಕಾರ್ಯಗಳಿಗೆ ಈ ಸಮಿತಿಯ ಸದಸ್ಯರು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸೂಕ್ತ ಸಲಕರಣೆಗಳನ್ನು ( ದೋಣಿಗಳು, ತರಬೇತಾದ ನಾಯಿಗಳು, ಟೆಂಟುಗಳು ಇತ್ಯಾದಿ) ಒದಗಿಸಬೇಕು. ರೈಲುಮಾರ್ಗ, ರಸ್ತೆಗಳನ್ನು ನಿರ್ಮಿಸಲು 10 ಸಾವಿರ ಕೋಟಿಗಳನ್ನು ಕೂಡಲೇ ಬಿಡುಗಡೆ ಮಾಡಲು ಸಿದ್ಧವಿರುವ ಸರ್ಕಾರಗಳು ಈ ಸಮಿತಿಗೆ ಬೇಕಾದ 48 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಅಸಾಧ್ಯವೇನಲ್ಲ.

ಇಡೀ ರಾಜ್ಯಕ್ಕಾಗಿ ಕ್ರಿಯಾ ಯೋಜನೆ

ಮಾನವರೂಪಿತ ಕೃತ್ಯಗಳಿಂದ ಜಗತ್ತಿನಲ್ಲಿ  ಹವಾಗುಣ ವೈಪರೀತ್ಯವಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಗಂಭೀರ ಸನ್ನಿವೇಶವನ್ನು ಗಮನಿಸಬೇಕಿದೆ. ರಾಜ್ಯದ ಶೇಕಡಾ 77 ರಷ್ಟು ಪ್ರದೇಶವು ಒಣ ಅಥವಾ ಅರೆ ಒಣ ಪ್ರದೇಶವಾಗಿದೆ. ಶೇಕಡಾ 54ರಷ್ಟು  ಪ್ರದೇಶವು ಸದಾ ಬರಗಾಲಕ್ಕೆ ತುತ್ತಾಗುತ್ತಿದೆ. ಬರಗಾಲ ಸಾಧ್ಯತೆಯಲ್ಲಿ  ಕರ್ನಾಟಕವು ದೇಶದಲ್ಲೇ ಎರಡನೆಯ ದೊಡ್ಡ ರಾಜ್ಯವಾಗಿದೆ (ಮೊದಲನೆಯದು ರಾಜಸ್ಥಾನ).  ರಾಜ್ಯದ ಕಾಡು ಪ್ರದೇಶದ ಪ್ರಮಾಣವು ಒಟ್ಟು ಪ್ರದೇಶಕ್ಕಿಂತ ಶೇಕಡಾ 20ಕ್ಕಿಂತ ಕಡಿಮೆ ಇರುವುದು ಅತ್ಯಂತ  ಆತಂಕಕಾರಿ ಸ್ಥಿತಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ನಮ್ಮ ರಾಜ್ಯವು ಶೇಕಡಾ 33 ರಷ್ಟು ಪ್ರದೇಶದಲ್ಲಿ ಕಾಡನ್ನು ಹೊಂದಿರಬೇಕಿದೆ.  ಕರ್ನಾಟಕವು ನಗರೀಕರಣಗೊಂಡ ರಾಜ್ಯಗಳಲ್ಲಿ ದೇಶದಲ್ಲೇ ಐದನೆಯ ಸ್ಥಾನವನ್ನು ಪಡೆದಿದೆ.  

ನಗರವಲ್ಲ, ನಾಡು ಕೇಂದ್ರಿತ ಚಿಂತನೆಯ ಕ್ರಮಗಳು

ಈಗಂತೂ ಕೇವಲ ಬೆಂಗಳೂರು ಮಹಾನಗರಕ್ಕಾಗಿಯೇ ಇಡೀ ರಾಜ್ಯದ ನೈಸರ್ಗಿಕ ಸಂಪನ್ಮೂಲಗಳಿವೆ ಎಂದು ಸರ್ಕಾರಗಳು ಭಾವಿದಂತಿದೆ. ಅಭ್ಯುದಯವೆಂದರೆ ಕೇವಲ ಜಿಡಿಪಿ ಆಧಾರಿತ ನಗರೀಕರಣವಲ್ಲ; ನಾಡಿನ ಸಂಪನ್ಮೂಲಗಳು ನಾಡಿನ ಎಲ್ಲ ಜನತೆಗೆ ಸೇರಿವೆ; ಆದ್ದರಿಂದ ಬೆಂಗಳೂರು ಕೇಂದ್ರಿತ ಚಿಂತನೆಯಿಂದ ಹೊರಬಂದು ಇಡೀ ನಾಡಿಗೆ ಒಳಿತಾಗುವ ಪರಿಸರ ಸ್ನೇಹಿ, ಸಮಷ್ಟಿಹಿತದ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಬೆಂಗಳೂರಿಗೆಂದೇ ಯೋಜಿತವಾದ ಬೃಹತ್‌ ಯೋಜನೆಗಳನ್ನು ಕೈಬಿಡಬೇಕು.  

ಸನ್ನಿವೇಶದಲ್ಲಿ ರಾಜ್ಯಸರ್ಕಾರವು ಅಂಶಗಳತ್ತ ಹೆಚ್ಚು ಗಮನ ನೀಡಬೇಕಿದೆ:

  • ರಾಜ್ಯದ ಕಾಡಿನ ಒಟ್ಟಾರೆ ಪ್ರಮಾಣವನ್ನು ಶೇಕಡಾ 33ಕ್ಕೆ ಮತ್ತು ಗುಡ್ಡಗಾಡು ಪ್ರದೇಶಗಳ ಕಾಡಿನ ಪ್ರಮಾಣವನ್ನು ಶೇಕಡಾ 66ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕಾಡನ್ನು ಇತರೆ ಉದ್ದೇಶಗಳಿಗೆ ಬಳಸುವುದಕ್ಕಾಗಿ ಪರಿವರ್ತನೆ ಮಾಡುವುದಕ್ಕೆ ಸಂಪೂರ್ಣ ನಿಷೇಧ ಹಾಕಬೇಕು. ಇದಕ್ಕಾಗಿ ಎಲ್ಲ ಸರ್ಕಾರಿ ಇಲಾಖೆಗಳು, ವಿಶೇಷವಾಗಿ ಅರಣ್ಯ ಇಲಾಖೆಯು ಶ್ರಮಿಸಬೇಕು. ಕಾಡು ಬೆಳೆಸಲು ಸ್ಥಳೀಯ ತಳಿಗಳನ್ನೇ ಬಳಸಬೇಕು; ಅದರಲ್ಲೂ ಶೇಕಡಾ 50 ರಷ್ಟು ಮರಗಳು ಹಣ್ಣು, ಹೂವಿನ ವೈವಿಧ್ಯಮಯ ಮರಗಳಾಗಿರಬೇಕು. ಪ್ರತಿವರ್ಷ ಶೇಕಡಾ 5 ರಷ್ಟು ಕಾಡನ್ನು ಹೆಚ್ಚಿಸುವ ಗುರಿ ಹೊಂದಬೇಕು. 
  • ಮರಗಳನ್ನು ಬೆಳೆಯಲು ಜನರಿಗೆ ಉತ್ತೇಜಕಗಳನ್ನು ನೀಡಬೇಕು. ಬಂಜರು, ರೆವೆನ್ಯೂ ಪ್ರದೇಶ, ಸರ್ಕಾರಿ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕು.
  • ಪರಿಸರ ರಕ್ಷಣೆಗಾಗಿ ನದೀ ಅಚ್ಚುಕಟ್ಟು ವಲಯ, ಕೃಷಿ ವಲಯ ಮತ್ತು ನಗರ ವಲಯ ಎಂಬ ಮೂರು ವಲಯಗಳನ್ನು ಗುರುತಿಸಬೇಕು; ನದಿ ಅಚ್ಚುಕಟ್ಟು ವಲಯದಲ್ಲಿ ಯಾವುದೇ ಸಾಲು ಕೊಯ್ತದ (ರಸ್ತೆ, ರೈಲು, ವಿದ್ಯುತ್ ಜಾಲ ಇತ್ಯಾದಿ) ಯೋಜನೆಗಳನ್ನು ಹೊಸದಾಗಿ ರೂಪಿಸಬಾರದು. ಕೃಷಿ ವಲಯದಲ್ಲಿ ಸ್ಥಳೀಯರ ಮತ್ತು ಗೃಹ ಮಟ್ಟದ ವ್ಯವಹಾರಗಳಿಗೆ ಹೊರತಾಗಿ ಬೇರೆ ಭೂ ಪ್ರಿವರ್ತನೆಗೆ ಅವಕಾಶ ನೀಡಬಾರದು; ಇಲ್ಲಿ ತೇವಾಂಶದ ಪ್ರದೇಶಗಳನ್ನು ವಿಶೇಷ ಒತ್ತುಕೊಟ್ಟು ಸಂರಕ್ಷಿಸಬೇಕು. ಅಂತರ್ಜಲವನ್ನು ಭಾರೀ ಪ್ರಮಾಣದಲ್ಲಿ ಬಳಸುವ ವಸತಿ ಸಮುಚ್ಚಯ, ರೆಸಾರ್ಟ್‌ಗಳನ್ನು ಇಲ್ಲಿ ಸ್ಥಾಪಿಸಬಾರದು. ನಗರ ವಲಯದಲ್ಲಿ ಸ್ಥಳೀಯ ಜನತೆಯ ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಅಭಿವೃದ್ಧಿ ಮಾಡಬೇಕು; ಬಾಹ್ಯ ಪ್ರದೇಶಗಳಿಂದ ಭಾರೀ ಸಂಖ್ಯೆಯ ವಲಸಿಗರಿಗೆ ಮನೆ ಕಟ್ಟುವುದನ್ನು ತಡೆಯಬೇಕು.
  • ಪಶ್ಚಿಮ ಘಟ್ಟದಲ್ಲಿ ಭೂಪರಿವರ್ತನೆಗೆ ಕಾರಣವಾಗುವ, ಜನರ ವಲಸೆಗೆ ಕಾರಣವಾಗುವ ಯಾವುದೇ ಬೃಹತ್‌ ಉದ್ಯಮಗಳನ್ನು ಬಿಡಬಾರದು. ಬದಲಿಗೆ, ಸ್ಥಳೀಯ ಜನತೆಗೆ ತೃಪ್ತಿದಾಯಕ ವರಮಾನ ನೀಡುವ, ಪರಿಸರ ಸ್ನೇಹಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಬೇಕು.    
  • ಪರಿಸರ ಸಂಬಂಧಿತ ಯಾವುದೇ ಯೋಜನೆ, ಉಪಕ್ರಮಗಳನ್ನು ಜಾರಿ ಮಾಡುವ ಮುನ್ನ ಆಯಾ ಗ್ರಾಮ ಪಂಚಾಯತ್‌ಗಳೊಂದಿಗೆ ಕೂಲಂಕಷವಾಗಿ ಚರ್ಚಿಸಿ, ಕಾಡಿನ ಹಕ್ಕುಗಳನ್ನು ಮಾನ್ಯ ಮಾಡಿ, ಈಗಿರುವ ಪಾರಿಸರಿಕ ಸನ್ನಿವೇಶಗಳನ್ನು ಗಮನಿಸಿಯೇ ತೀರ್ಮಾನ ಕೈಗೊಳ್ಳಬೇಕು.  
  • ರಾಜ್ಯದೆಲ್ಲೆಡೆ ಮರಗಳನ್ನು ಕಡಿಯುವ ಯೋಜನೆಗಳನ್ನು ಕೈಬಿಟ್ಟು ಕಡಿಮೆ ಹಾನಿ ಮಾಡುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು.
  • ಈಗಿರುವ ದೇವರ ಕಾಡುಗಳನ್ನು, ಪವಿತ್ರ ವನಗಳನ್ನು ಸಂರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕು.
  • ರಾಜ್ಯದ ಎಲ್ಲ ಜಲಮೂಲಗಳನ್ನು ರಕ್ಷಿಸಲು ಮತ್ತು ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದ ಕಚೇರಿಗಳಲ್ಲಿ, ಉದ್ಯಮ ಆವರಣಗಳಲ್ಲಿ ಮಳೆನೀರು ಸಂಗ್ರಹ ಮತ್ತು ಅಂತರ್ಜಲ ಮರುಪೂರಣವನ್ನು ಕಡ್ಡಾಯ ಮಾಡಬೇಕು. ರೆಸಾರ್ಟ್‌, ಹೋಟೆಲ್‌, ಬೃಹತ್‌ ಉದ್ಯಮಗಳ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವುದನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು;
  • ಉದ್ಯಮಗಳ ವಿಷಪೂರಿತ ರಾಸಾಯನಿಕಗಳು ನದಿಗಳಿಗೆ ಸೇರುವುದನ್ನು ತಪ್ಪಿಸಬೇಕು. ಅಣೆಕಟ್ಟು, ಕೆರೆಗಳಲ್ಲಿ ಸೇರಿಕೊಂಡ ಹೂಳನ್ನು ತೆಗೆಯಲು ಸಮಗ್ರ ಕಾರ್ಯಕ್ರಮ ರೂಪಿಸಬೇಕು. ತೆರೆದ ಬಾವಿಗಳನ್ನು ಪುನಶ್ಚೇತನಗೊಳಿಸಬೇಕು.
  • ನದೀತಟಗಳನ್ನು, ಅಚ್ಚುಕಟ್ಟು ಪ್ರದೇಶಗಳನ್ನು ಬೇರೆ ಯಾವುದೇ ಉದ್ದೇಶಗಳಿಗೆ ಬಳಕೆ ಮಾಡಬಾರದು. ವಸತಿ ಮತ್ತು ಉದ್ಯಮ ಪ್ರದೇಶಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಔದ್ಯಮಿಕ ತ್ಯಾಜ್ಯಗಳನ್ನು ಸೂಕ್ತವಾಗಿ ನಿರ್ವಹಿಸಬೇಕು. ಈಗಿರುವ ವ್ಯವಸ್ಥೆಯನ್ನು ಬಲಪಡಿಸಬೇಕು.
  • ನಗರೀಕರಣವನ್ನು ತಡೆಗಟ್ಟಿ ಒಟ್ಟಾರೆ ನಗರ ಜನಸಂಖ್ಯಾ ಪ್ರಮಾಣವನ್ನು ಶೇಕಡಾ 30ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು.
  • ಇಂಗಾಲಾಮ್ಲವನ್ನು ಹೆಚ್ಚು ಕಕ್ಕುವ ಶ್ರೀಮಂತ ದೇಶಗಳು ಹಿಂದುಳಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಅರಣ್ಯವನ್ನು ಬೆಳೆಸಲು ಆರ್ಥಿಕ ಸಹಾಯವನ್ನು ಮಾಡಬೇಕು ಎನ್ನುವುದು ಮುಖ್ಯ ತೀರ್ಮಾನವಾಗಿದ್ದು, ಇದಕ್ಕಾಗಿ ರೆಡ್+ : ಅರಣ್ಯ ನಾಶ ಹಾಗೂ ಅವನತಿಯಿಂದಾಗುವ ಮಾಲಿನ್ಯವನ್ನು ಇಳಿಸುವ ಅಥವಾ ಕಡಿಮೆ ಮಾಡುವ ಯೋಜನೆ, [Reducing Emissions from Deforestation and Forest Degradation (REDD)] ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯನ್ನು ಖುಷ್ಕಿ ಜಮೀನಿನಲ್ಲಿ ಕಾಡು ಬೆಳೆಸುವ ರೈತರಿಗೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸಬೇಕು.

ಎಲ್ಲ ಸಲಹೆಗಳನ್ನು ಕ್ರಿಯಾಯೋಜನೆ ಮೂಲಕ ಜಾರಿಗೊಳಿಸಲು ಸರ್ಕಾರವು ಒಂದು ಸಮುದಾಯ ಭಾಗಿತ್ವದ, ತಜ್ಞರನ್ನು ಒಳಗೊಂಡ ಕಾರ್ಯಪಡೆಯನ್ನು ಸ್ಥಾಪಿಸಿ, ಕಾಲಮಿತಿಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕಿದೆ. ಇದಕ್ಕಾಗಿ2014 ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಹವಾಗುಣ ವೈಪರೀತ್ಯ ನಿರ್ವಹಣೆ ಕುರಿತ ರಾಜ್ಯ ಕ್ರಿಯಾ ಯೋಜನೆಯ ಜನ ಸಂಪರ್ಕ ಆಧಾರಿತ ವರದಿಯನ್ನು ಪರಿಗಣಿಸಲು ಮತ್ತು ಆಂಗೀಕೃತ ಶಿಫಾರಸುಗಳನ್ನು ಕೂಡಲೇ ಜಾರಿ ಮಾಡಲು ಕೋರುತ್ತೇವೆ.

ಕೊಡಗಿನಲ್ಲಿ ನಡೆದ ದುರಂತವನ್ನು ಒಂದು ಪ್ರತ್ಯೇಕ ವಿದ್ಯಮಾನ ಎಂದು ಪರಿಗಣಿಸದೆ, ಜಾಗತಿಕವಾಗಿ ನಡೆಯುತ್ತಿರುವ ಮರಗಳ ನಾಶದ, ಪರಿಸರ ಶಿಥಿಲತೆಯ ಸಂಕೇತ ಎಂದು ಗಂಭೀರವಾಗಿ ತಿಳಿಯಬೇಕಿದೆ. ಕೊಡಗಿನ ದುರಂತವು ಇಡೀ ದೇಶಕ್ಕೇ ಅಪಾಯದ ಕರೆಗಂಟೆ ಎಂದೇ ನಾವು ತಿಳಿದಿದ್ದೇವೆ. ಇನ್ನಾದರೂ ಕ್ಷಿಪ್ರ ಮತ್ತು ಸುಸ್ಥಿರ ಕ್ರಮಗಳನ್ನು ಕೈಗೊಂಡು ಮುಂದಿನ ತೀವ್ರ ಸ್ತರದ ದುರಂತಗಳನ್ನು ತಪ್ಪಿಸಬೇಕು; ಕರ್ನಾಟಕವು ಇಡೀ ದೇಶಕ್ಕೇ ಪರಿಸರ ಸಂರಕ್ಷಣೆ, ಹವಾಗುಣ ವೈಪರೀತ್ಯ ನಿರ್ವಹಣೆಯಲ್ಲಿ ಮಾದರಿಯಾಗುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾವು ನಿಮ್ಮಲ್ಲಿ ವಿನಂತಿಸುತ್ತೇವೆ.

ತಮ್ಮ ವಿಶ್ವಾಸಿಗಳು

ಬೇಳೂರು ಸುದರ್ಶನ, ರಾಮನಾಥ ಮಯ್ಯ

(ಟ್ರಸ್ಟೀಗಳು, ಮಿತ್ರಮಾಧ್ಯಮ ಟ್ರಸ್ಟ್‌ )

Share.
Leave A Reply Cancel Reply
Exit mobile version