ಕೊಡಗು ಪ್ರತ್ಯೇಕ ರಾಜ್ಯವಾಗಬೇಕು, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ವಾದಗಳೆಲ್ಲ ಇನ್ನಮುಂದೆ ಅರ್ಥ ಕಳೆದುಕೊಳ್ಳಲಿವೆ! ಏಕೆಂದರೆ ಕೊಡಗು ಮತ್ತು ಕಾಸಗರೋಡು ಜಿಲ್ಲೆಗಳು ಮೂಲತಃ ಆಫ್ರಿಕಾ ಖಂಡದ ಮಡಗಾಸ್ಕರ್‌ಗೆ ಸೇರಿವೆ!! 
ಹಾಗಂತ ಸಾಬೀತು ಮಾಡಿದ್ದು ಯಾವುದೇ ರಾಜಕಾರಣಿಗಳಲ್ಲ, ವಿಜ್ಞಾನಿಗಳು.  ನಾನೀಗ ಬರೆಯಹೊರಟಿದ್ದೂ ವಿಜ್ಞಾನದ ವಿಸ್ಮಯವನ್ನೇ; ಆದ್ದರಿಂದ ಮೊದಲ ಸಾಲುಗಳಲ್ಲಿನ ರಾಜಕೀಯದ ವಾಸನೆಯಿಂದ ಹೊರಬನ್ನಿ.

೩೧೦ ಕೋಟಿ ವರ್ಷಗಳ ಹಿಂದೆ (ಭೂಮಿಯ ವಯಸ್ಸು ೪೫೪ ಕೋಟಿ ವರ್ಷ ಎಂಬ ಅಂದಾಜಿದೆ) ಮಡಗಾಸ್ಕರ್‌ನಿಂದ ಛಿದ್ರಗೊಂಡ ಭೂಮಿಯ ಒಂದು ತುಂಡು ತೇಲಿ ಬಂದು ಈಗ ಭಾರತವಾಗಿರುವ ಭೂಪ್ರದೇಶದ ಸಂದಿಯೊಳಗೆ ತೂರಿಕೊಂಡಿದೆ ಎಂದು ನಾಲ್ವರು ವಿಜ್ಞಾನಿಗಳ ತಂಡವು ತನ್ನ ಸಂಶೋಧನೆಯ ಮೂಲಕ  ಪ್ರತಿಪಾದಿಸಿದೆ. ಈ ಸುದ್ದಿಯನ್ನು `ದಿ ಹಿಂದೂ’ ಪತ್ರಿಕೆಯಲ್ಲಿ ಓದಿದ ನಾನು `ಮಿತ್ರಮಾಧ್ಯಮ’ದ ಓದುಗರಿಗಾಗಿ ಹೆಚ್ಚಿನ ಮಾಹಿತಿ ನೀಡಲು ಆ ವಿಜ್ಞಾನಿಗಳನ್ನೇ ಸಂಪರ್ಕಿಸಿದಾಗ ಅವರು ತತ್‌ಕ್ಷಣವೇ ಹೆಚ್ಚು ಮಾಹಿತಿ ನೀಡಿ ಸಹಕರಿಸಿದರು.
ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿ (ಈ ರಾಜ್ಯಗಳ ಗಡಿಯನ್ನು ನಾವು ಮಾಡಿದ್ದೇ ಹೊರತು ಅದಾಗಿ ಆಗಿದ್ದಲ್ಲ!!) ಬಂದು ಸೇರಿಕೊಂಡ ಈ ನೆಲದ ತುಂಡನ್ನು   `ಕೂರ್ಗ್‌ ಬ್ಲಾಕ್‌’ ಎಂದು ಕರೆಯುತ್ತಾರೆ. ಹೀಗೆ ತೇಲಿ ಬಂದು ದೊಡ್ಡ ಖಂಡಕ್ಕೆ ಸೇರುವ ತುಂಡನ್ನು `ಮೈಕ್ರೋಕಾಂಟಿನೆಂಟ್‌’   ಎನ್ನುತ್ತಾರೆ.
ಈಗ ಚೀನಾದ ಚೀನಾ ಯೂನಿವರ್ಸಿಟಿ ಆಫ್‌ ಜಿಯೋಸೈನ್ಸಸ್‌ನಲ್ಲಿ ಸಂಶೋಧನೆ ನಡೆಸಿರುವ ಭಾರತದ ವಿಜ್ಞಾನಿ ಪ್ರೊ|| ಎಂ. ಸಂತೋಷ್‌, ಕೇರಳ ವಿವಿಯ ಭೂವಿಜ್ಞಾನ ವಿಭಾಗದ ಡಾ|| ಇ.ಶಾಜಿ, ಜಪಾನಿನ ಸುಕುಬಾ ವಿವಿಯ ಪ್ರೊ|| ಟಿ. ಸುನೋಗೆ ಮತ್ತು ಭಾರತದ ನ್ಯಾಶನಲ್‌ ಜೊಯೋಫಿಸಿಕಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಎಂ. ಸತ್ಯನಾರಾಯಣ – ಇವರೇ ಈ `ಕೂರ್ಗ್‌  ಬ್ಲಾಕ್‌’ನ್ನು ಶೋಧಿಸಿದ ಸಂಶೋಧಕರು.  ಅವರ ಈ ಸಂಶೋಧನಾ ಪ್ರಬಂಧವು `ಗೊಂಡ್ವಾನಾ ರಿಸರ್ಚ್‌’ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಇತ್ತೀಚೆಗಷ್ಟೆ ಪ್ರಕಟವಾಗಿದೆ.
ಕೂರ್ಗ್‌ ಬ್ಲಾಕಿನಲ್ಲಿ ಸಿಕ್ಕಿದ ಕಲ್ಲುಗಳ ಮೇಲೆ ಹಲವು ಬಗೆಯ ಪರೀಕ್ಷೆಗಳನ್ನು ನಡೆಸಿದ ಮೇಲೆ ಈ ಸಂಶೋಧಕರು ಇದು ಮಡಗಾಸ್ಕರ್‌ನಿಂದ ಬಂದ ತುಂಡು ಎಂದು ನಿರ್ಧರಿಸಿದರು. ಈ ಬ್ಲಾಕಿನ ಬುಡದಲ್ಲಿ ೩೮೦ ಕೋಟಿ ವರ್ಷಗಳ ಹಿಂದಿನ ಮಣ್ಣೂ ಇದೆಯಂತೆ. ಕೂರ್ಗ್‌ ಬ್ಲಾಕ್‌ನ ಶೋಧದ ಪರಿಣಾಮವಾಗಿ ಖಂಡಗಳ ಬೆಳವಣಿಗೆಯ ಮಾದರಿಗಳೇ ಬದಲಾಗಲಿವೆ ಎಂದು ಈ ವಿಜ್ಞಾನಿಗಳು ಹೇಳುತ್ತಾರೆ.
ಸುಮಾರು ೩ ಸಾವಿರ ಚದರ ಕಿಮೀ ಪ್ರದೇಶವನ್ನು ಹೊಂದಿದ ಈ ಕೂರ್ಗ್‌ ಬ್ಲಾಕ್‌  ಮೊದಲು `ಉರ್‌’ ಎಂದು ಕರೆಯುವ ಅತಿ ಪ್ರಾಚೀನ ಸೂಪರ್‌ ಕಾಂಟಿನೆಂಟ್‌ನ ಭಾಗವಾಗಿದ್ದಿರಬಹುದು ಎಂಬುದು ವಿಜ್ಞಾನಿಗಳ ಅಂದಾಜು. ಈ ಸೂಪರ್‌ಕಾಂಟಿನೆಂಟ್‌ನಲ್ಲೇ ಮಡಗಾಸ್ಕರ್‌ ಇತ್ತು. (ಮಡಗಾಸ್ಕರ್‌ ಈಗ ಒಂದು ದ್ವೀಪ ಎಂಬುದನ್ನು ಗಮನಿಸಿರಿ).
ಕೂರ್ಗ್‌ ಬ್ಲಾಕ್‌ನಲ್ಲಿ ಇಡೀ ಕಾಸರಗೋಡು ಜಿಲ್ಲೆ ಮತ್ತು ಕೊಡಗಿನ ಕೆಲವು ಪ್ರದೇಶಗಳು ಇವೆ.
ಮುಂದಿನ ದಿನಗಳಲ್ಲಿ ಜೀವ ವೈವಿಧ್ಯ, ವಂಶವಾಹಿಗಳ ಸಂಕರ ಮುಂತಾದ ವಿಜ್ಞಾನದ ಕವಲುಗಳಲ್ಲಿನ ಸಂಶೋಧನೆಗಳಿಗೆ ಈ ಮಹತ್ವದ ಸಂಶೋಧನೆಯು ದಾರಿ ಮಾಡಬಹುದು ಎಂಬುದು ನನ್ನ ಅಂದಾಜು.
ಭಾರತದಲ್ಲಿ ಇಂಥ ಭೂ ವಿಜ್ಞಾನದ ಸಂಶೋಧನೆಗಳು ನಡೆದರೂ ಹೆಚ್ಚು ಪ್ರಚಾರ ಸಿಗುವುದಿಲ್ಲ. ವಿಜ್ಞಾನಿಗಳನ್ನು ಕೇಳಿ ಸುದ್ದಿ ಬರೆಯುವ ಕಾಳಜಿಯನ್ನು ನಮ್ಮ ಪತ್ರಕರ್ತರು ಬೆಳೆಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ  `ದಿ ಹಿಂದೂ’ ಪತ್ರಿಕೆಯು ಪ್ರಕಟಿಸಿದ ಸುದ್ದಿ ಮಹತ್ವ ಪಡೆದಿದೆ.
 

Share.
Leave A Reply Cancel Reply
Exit mobile version