ಎದ್ದಕೂಡ್ಲೇ ಟ್ವೆಲು ಬಿ ತಪ್ಪಿಹೋಯ್ತಲ್ಲಾ ಅನ್ನೋ ದುಗುಡ. ಇನ್ನು ಕಾಂಪ್ಲೆಕ್ಸಿಗೆ ಹೋಗಿಯೇ ಬಸ್ಸು ಹಿಡೀಬೇಕು. ರಂಗನಾಥ್ ಏನು ತಿಳ್ಕೋತಾರೋ ಏನೋ ಈ ಹುಡುಗ ಬರೋವಾಗ್ಲೇ ಲೇಟು…   ಇನ್ನು ಕೆಲಸ ಕೊಡೋದಾದ್ರೂ ಹ್ಯಾಗೆ ಮಾರಾಯ ಅಂತ ರಾಗ ಎಳೀತಾರಾ.. ಟಕ್‌ಟಕ್. ಪೇಪರ್ ಬರೋದೂ ಇಷ್ಟು ತಡ ಆಗಿಬಿಡ್ತಾ.. ಏಳ್ತಿದ್ದ ಹಾಗೇ ಹೊರಗಡೆ ಗಡಿಯಾರ ಇನ್ನೂ ಐದು ಐವತ್ತೈದು ತೋರಿಸ್ತಿರೋದು ನೋಡಿ ಸಮಾಧಾನ. ಅಲಾರಾಂ ಗಡಿಯಾರ ಭಾಳ ಮುಂದೆ ಹೋಗ್ತಿದೆ. ಅಡ್‌ಜಸ್ಟ್‌ಮೆಂಟ್ ಸರಿಯಾಗಿಲ್ಲ. ಶರ್ಮಾ ಏನು ಜನರಪ್ಪಾ ಇವರು,ಎಲ್ಲಾ ಕ್ರಾಂತಿ ಆಗ್ಬೇಕು ಅನ್ನೋರು ನಾವು… ಯಾಕೆ ತಲೆ ಕೆಡಿಸಿಕೋಬೇಕು. ರಾತ್ರೀನೇ ನೀರು  ಯಥೇಚ್ಚ ಬಂದಿದ್ದು ನೆನಪಾಗಿ ಪರ್‍ವಾಗಿಲ್ಲಾ ಸ್ನಾನ ಮಾಡಿಯೇ ಟ್ವೆಲುಬಿ ನನ್ಮಗಂದು ಹಿಡಿಬಹ್ದು ಅಂದ್ಕೊಳ್ತಿದ್ದ ಹಾಗೇ ಶರ್ಮಾನ ಗೊಣಗಾಟ.  `ಎಕ್ಸ್‌ಪ್ರೆಸ್ ಈ ಕಡೆ ಒಗಿ ಮಾರಾಯ’ ಉಚ್ಚೆ ಹೊಯ್ಯಕ್ಕಿಂತ  ಮೊದ್ಲು ಎಕ್ಸ್‌ಪ್ರೆಸ್ ಶೌರಿ ಸಂಪಾದಕೀಯ ಓದ್ಬೇಕು ಈ ಮನುಷ್ಯರಿಗೆ. ಡೆಟಾಲ್ ಸೋಪು ಬೇಗ ಕರಗುತ್ತೆ ಅಂತ ಗೊತ್ತಾಗಿದ್ರೆ ತಗಳ್ತನೇ ಇರ್‍ಲಿಲ್ಲ. ಆದ್ರೂ ಒಂಥರ ಸ್ಮೆಲ್ ಚೆನ್ನಾಗಿರುತ್ತೆ. ಬಚ್ಚಲಲ್ಲಿ ನಾಲ್ಕು ಜಿರಲೆಗಳು ಅಂಗಾತ. ಬೇಗಾನ್ ಬೇಟ್ ಹಾಕಿದ್ದು ಸಾರ್ಥಕ. ನಾಲ್ಕು ದಿನಕ್ಕೆ ಮೂವತ್ತಾರು ಬಲಿ. `ಥರ್‍ಟಿ ಸಿಕ್ಸ್ ಎಕ್ಸ್‌ಟ್ರಿಮಿಸ್ಟ್ಸ್ ಕಿಲ್ಲಡ್ ಅಟ್ ಬಚ್ಚಲುಮನೆ.’ ಬೇಗ ಬಾರೋ, ತಡಿಯಕ್ಕಾಗಲ್ಲ ಅಂತ ಶರ್ಮಾ ಕಿರುಚ್ತಿದ್ದಾನೆ.

ರಂಗನಾಥ್ ಎದ್ದಿರಲಿಲ್ಲ. ಅವರ ಮಗಳು `ಕೂತ್ಕೊಳ್ಳಿ’ ಅಂತ ರಾಗವಾಗಿ ಹೇಳಿದ್ದೇ, ಸೋಪಾದಲ್ಲಿ ಮೂರ್‍ನಾಲ್ಕು ಪೇಪರುಗಳು, ಸುಧಾ, ತರಂಗ, ನಗೆಮುಗಿಲು, ಅರಾಸೇ ಭಾರೀ ಸ್ಟ್ಯಾಂಡರ್ಡ್ ನಗೆಗಾರ. ಅವರನ್ನೇ ನೋಡಿದ್ರೂ ನಗು ಬರುತ್ತೆ.ನಿದ್ದೆ ಅಮಲು ಹೊತ್ತು ರಂಗನಾಥ್ ನಿಂತಿದ್ದಾರೆ – ಕೂತ್ಕೋ ಅಂತಂದು ಸೀದಾ ಒಳಗೆ. ಪ್ರದೇಶ ಸಮಾಚಾರದ ಚೌಕಟ್ಟಾದ ಪದಗಳ ಪ್ರಸಾರ, ಈ ವರ್ಷ ಹಾಗೆ, ಹೀಗೆ ಅಂಕಿ ಅಂಶಗಳು. ಈ ಹುಡುಗಿಗೆ ಎಷ್ಟು ವರ್ಷ ಇರಬಹುದು? ಪಿಯುಸಿ ಅಂತೂ ಮುಗಿಸಿರಬಹುದು. ಹೆಸರು ಚೆನ್ನಾಗೇ ಇಟ್ಟಿದಾರೆ. `ಅನೂ’ರಾಧ. ಮೊದಲ್ನೇ ದಿನವೇ ಪರಿಚಯ ಮಾಡಿದ್ದರು ಇವಳೇ ನನ್ನ ಮುದ್ದಿನ ಮಗಳು ಅನೂ, ಅನುರಾಧ. ಮುಖದಲ್ಲಿ ಯಾವಾಗಲೂ ಕುತೂಹಲ. ಈ ಮನುಷ್ಯ ನನ್ನಪ್ಪಂಗೆ ಯಾಕೆ ಗಂಟು ಬಿದ್ದ ಅಂತಿರಬಹ್ದು. ತಂಬಿಕೊಂಡ ಎದೆ.

ಕಡು ಹಸಿರು ಶಾಲು ಹೊದ್ದು ರಂಗನಾಥ್ ಬಂದಿದ್ದೇ `ಹೋಗೋಣ ಬಾ’ ಎಂದು ಹೊರಗೆ ಬಂದಾಗ ಚಳಿಗಾಲ. ಬನಿಯನ್ ಹಾಕದಿದ್ದಕ್ಕೆ ಬಗಲೆಲ್ಲಾ ತಣ್ಣತಣ್ಣಗೆ. `ಒಂದು ಮಾತು ಮಾತ್ರ ಫಾಲೋ ಮಾಡ್ಬೇಕು. ಈ ಕೆಲಸಕ್ಕಿಂತ ಹೆಚ್ಚಿನ ಕೆಲಸ ಸಿಗ್ತು ಅಂತಾದ್ರೆ ಮಾತ್ರ ಇದನ್ನು ಬಿಡಬೇಕು. ಇಲ್ಲಾಂದ್ರೆ ನನ್ನ ಸ್ನೇಹ ಹಾಳಾಗುತ್ತೆ’  `ಆಗ್ಲಿ ಸಾರ್, ನಾನಂತೂ ಈ ಕೆಲಸ ಬಿಡ್ಲೇ ಬೇಕು. ಹಾಗಂತ ಡಿಸೈಡ್ ಮಾಡಿದೀನಿ. ನೀವು ಹೇಳೋ ಕೆಲಸಕ್ಕೆ ಸೇರೋದಂತೂ ಗ್ಯಾರಂಟಿ.’ ಸಾಯ್ಲಿ ಈ ಸಮಾಚಾರ. ಕೆಲಸ ಮುಖ್ಯ. ಕಾರ್ಮಿಕನಾಗಿ ಈ ದೇಶದ ಕೂಲಿಕಾರನಾಗಿ ಬದುಕಲಿಕ್ಕೆ ಏನೂ ಓದ್ದೇ ಇರೋರೇ ಬೇಕು. ಪಿಯುಸಿ ಓದಿ ಕ್ಲಾಸಿಗೆ ಹೋಗದೇ ಬೆಂಗಳೂರಿಗೆ ಓಡಿ ಬಂದದ್ದಾದ್ರೂ ಯಾಕೆ? ನಾನೇನು ಕೆಲಸ ಬಿಟ್ಬಿಡ್ತೇನಾ? `ಸಂಬಳ ಮಾತ್ರ ಚೆನ್ನಾಗಿ ಕೊಡ್ತಾರೆ. ಆದಷ್ಟೂ ಉಳಿಸ್ಕೋತಾ ಬಂದ್ರೆ ನಿಂಗೇ ಒಳ್ಳೇದು’ ಅವರ ಮುಖ ನೋಡ್ತಾ ತಲೆ ಅಲ್ಲಾಡಿಸೋದೇ ಸರಿಯಾದ ಮಾರ್ಗ. ಐದು ನಿಮಿಷ ಈ ತಿರುವುಗಳು ಅಡ್ಡಂಬಡ್ಡ ರಸ್ತೆಗಳು. ಒಂದು ಮನ. ಲಕ್ಷ್ಮೀ ಅಂತ ನೀಟಾಗಿ ಕೊರೆದ ಕಾಂಪೌಂಡಿನ ಕಲ್ಲು. ರಂಗನಾಥ್ ಬೆಲ್ ಮಾಡಿದ್ರೆ ಯಾರೋ ಹೆಂಗಸು `ಬಂದೇ’ ಅಂದಳು. ಅಂಥ ವಯಸ್ಸಾದವಳಲ್ಲ. ಮೂರ್‍ನಾಲ್ಕು ವರ್ಷ ದೊಡ್ಡವಳು’  ಬನ್ನಿ, ಅವರು ಸ್ನಾನ ಮಾಡ್ತಿದ್ದಾರೆ. ಈ ಅತಿಥಿಗಳು ಬರೋ ವಿಚಾರ ಅವಳಿಗೆ ಗೊತ್ತಿದೆ. ರಂಗನಾಥ್ ಭಾರೀ ಸಿಸ್ಟಮ್ಯಾಟಿಕ್. ಹಾಲ್‌ನಲ್ಲಿ ಎರಡು ಮೇಜು ನಾಲ್ಕಾರು ಕುರ್ಚಿಗಳು. ಅಲ್ಲೂ ಇಂಡಿಯನ್ ಎಕ್ಸ್‌ಪ್ರೆಸ್. ಫೇರ್‌ಫ್ಯಾಕ್ಸ್-ಬೋಫೋರ್ಸ್‌ನಿಂದ ಎಕ್ಸ್‌ಪ್ರೆಸ್ ಭಯಂಕರ ಲಾಭ ತೆಗೀತಿದೆ. ಶಾಲನ್ನು ಸರಿಯಾಗಿ ಹೊದ್ದುಕೊಳ್ತಿದ್ದಾರೆ ರಂಗನಾಥ್ ಅನ್ನೋವಾಗ ಅವಳ ಕೈಯಲ್ಲಿ ಹಬೆಯಾಡ್ತಾ ಇರೋ ಕಾಫಿಯ ಕಪ್ಪುಗಳು.

ಮೈಯೊರಸಿಕೊಳ್ತಾ ಹೊರಬಂದ ಕುಳ್ಳಗಿನ, ಬೋಳುತಲೆಯ ವ್ಯಕ್ತಿಯೇ ಭಾವೀ ಬಾಸ್ ಇರಬೇಕು. ಹಲ್ಲೋ ರಂಗನಾಥ್. ಅಲ್ಲ ಈ  ದೊಡ್ಡ ಮನುಷ್ಯರೆಲ್ಲ ಹಲ್ಲೋ ಹಲ್ಲೋ ಅಂದ್ಕೊಳ್ತಾ ದೇಶ ಕೆಡಗ್ತಾರಲ್ಲ. ಅವಳೇನಾದ್ರೂ ಕಾಫಿ ತರದಿದ್ರೆ ವಾತಾವರಣ ಬಿಸಿಯಾಗ್ತಿರಲಿಲ್ಲ. ಸ್ಟ್ರಾಂಗ್ ಆಗಿರೋ ಈ ಡಿಕಾಕ್ಷನ್‌ಗಿಂತ ಬೇರೆ ಡೋಸ್ ಬೇಡಾ ಅನ್ಸುತ್ತೆ. `ಇವ್ನು ಸುಹಾಸ ಅಂತ. ಸೆಕೆಂಡ್ ಪಿಯುಸಿ ಆಗಿದೆ. ಹೀ ವಿಶಸ್ ತೊ ವರ್ಕ್ ವಿತ್ ಯು. ಅವತ್ತೇ ಹೇಳಿದ್ನಲ್ಲ.. ತುಂಬ ಬ್ರಿಲಿಯಂಟ್ ಇದಾನೆ.ನನ್ನಂತೆ ಕಾವ್ಯ ಬರೆಯೋ ಹುಚ್ಚು. ಪ್ಲೀಸ್ ಅಕಾಮಡೇಟ್ ಹಿಮ್’. ಪರ್ವಾಗಿಲ್ಲ ಚೆನ್ನಾಗಿ ವಕೀಲಿ ಮಾಡ್ತಿದಾರೆ. ಹೀಗೇ ಬಹಳ ಹುಡುಗ್ರಿಗೆ ಕೆಲಸ ಕೊಡಿಸಿರಬಹುದು. ಓ ಎಂಟೂವರೆ ಆಗೋಯ್ತಲ್ಲಪ್ಪಾ, ಇವ್ರು ಈಗ್ಲೇ ಕೆಲಸಕ್ಕೆ ಬಾ ಅಂದ್ರೆ ಸ್ವಲ್ಪ ಕಷ್ಟಾನೇ…

ದೊಡ್ಡಬಳ್ಳಾಪುರದ ಆಸ್ಪಿರಿನ್ ಕಾರ್ಖಾನೆ. ಎಲ್ಲಾ ಆದಮೇಲೆ ಹೊರಬರೋ ಕೊಳೆನೀರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದ ಮಟ್ಟಕ್ಕೆ ತರಬೇಕು. ಕೆಲಸದ ಹೆಸರೇ ಮಜವಾಗಿದೆ. ಎಪ್ಲುಯೆಂಟ್ ಟ್ರೀಟ್‌ಮೆಂಟ್ ಪ್ಲಾಂಟ್ ಆಪರೇಟರ್. ಜನುಮನದಲ್ಲೇ ನೋಡಿರದ ಕೆಲಸ. ಕೇಸರಿ ಬಣ್ಣದ ದೀಪಗಳು. ರಾತ್ರಿ ಉರಿಯೋ ಸೊಗಸನ್ನು ಕಾಣಲು ಪುರುಸೊತ್ತಿಲ್ಲ. ಪಂಪಿನ ಫುಟ್‌ವಾಲ್ವ್ ಯಾವತ್ತೂ ಕೆಡ್ತಿರುತ್ತೆ. ಮೂಲಯಂತ್ರ ಇರೋ ದೊಡ್ಡ ಟ್ಯಾಂಕು ಕೆಟ್ಟು ತಾತ್ಕಾಲಿಕ ವ್ಯವಸ್ಥೆಗಾಗಿ ಹೊಸ ಬಾವಿ ಥರದ ಗುಂಡಿ ತೋಡಿದಾರೆ. ಕೊಳೆ ನೀರು ಮೊದಲು ಇಲ್ಲಿ ಶೇಖರವಾಗುತ್ತೆ. ಅದಕ್ಕೆ ಸುಣ್ಣ ಬೆರಸಿ ತಿರುಗಿಸಬೇಕು. ಆಮೇಲೆ ಅದನ್ನು ಚೆಲ್ಲಬೇಕು.

ಫ್ಯಾಕ್ಟರಿಯ ಹಿಂಭಾಗದಲ್ಲಿ ಅದರದ್ದೇ ದೊಡ್ಡ ಕರೆ. ವಿಷ ತುಂಬಿದ ಕೆರೆ, ವಿಷ ತುಂಬಿದ ನೆನಪಿನ ಹಾಗೆ. ಕೃಷ್ಣಯ್ಯ. ಅವನ ಎದೆಯೂ ಹಾಗೆ ವಿಷದ ಕಡಲಾಗಿದ್ರೂ ಹುಡುಗಿಯರು ಹ್ಯಾಗೆ ಅವನ ಮೇಲೆ ಬಿದ್ದರು, ಎಲ್ಲಾ ಬಿಚ್ಚಿಕೊಂಡು ಈಜಿದರು, ಕೊನೆಗೆ ಸುಸ್ತಾಗಿ ಅಳಲಿಕ್ಕೆ ಶುರುಮಾಡಿದರು… ಅಂದಿನ ಅವನ್ ಹೆಂಡ್ತೀನ ರೇಪ್ ಮಾಡಬೇಕು. ಅವನಿಗೆ ಖುದ್ದಾಗಿ ಹೇಳಿ ನಗಬೇಕು. ಕೊಳೆನೀರೆಲ್ಲ ಗುಂಡಿಯನ್ನು ತುಂಬಿ ಉಕ್ಕಿ ಹರಿಯದಂತೆ ಇನ್ನೊಂದು ಕೊಳವೆಗೆ ಜೋಡಿಸಿ ಬೈಪಾಸ್ ಮಾಡಿ ವಿಷದ ಕೆರೆಗೆ ಚೆಲ್ಲಬೇಕು. ಎರಡೂ ಕೊಳವೆ ಕೂಡಿಸುವಾಗ ಎದುರಿಗೆ ಕೂತಾಗ ಮೂಗಿನೊಳಗೆ, ಕಣ್ಣಿನೊಳಗೆ, ಬಾಯಿಯೊಳಗೆ ಫಿನೋಲ್‌ನಿಂದ ಹಿಡಿದು ಯಾವಾವುದೋ ರಾಸಾಯನಿಕಗಳನ್ನು ಚಾ ಮಾಡಿಕೊಂಡು ಕುಡಿದ ಹಾಗೆ.

ಕೆಲಸ. ಯಾಕೆ ಮಾಡಬೇಕಂತ ಗೊತ್ತಾಗದ ಹಾಗೆ ಮಾಡಿಸಿಕೊಳ್ಳೋ ಕೆಲಸ. ನಾರಾಯಣ ಮದುವೆಯಾದವ. ರಾಮನಾಥನೂ. ಅವರೆಲ್ಲ ದಿನಗೂಲಿಗಳಾಗಿ ಬರೋ ದನಗಳು. ಹೇಳಿದ್ದನ್ನು ಮಾಡೋ ಕುನ್ನಿಗಳು. ಹೇಯ್ ಅಂತ ಅವರನ್ನು ಅಲ್ಲಿಗೆ, ಇಲ್ಲಿಗೆ ಓಡಿಸಿ ದುಡಿಸಿಕೊಳ್ಳೋದೇ ಮಜಾ. ಕಾವ್ಯ ಅಂತೇನಾದ್ರೂ ಬರೆಯಲಿಕ್ಕೆ ಹೊರಟರೆ ರಾತ್ರಿಯ ಚಳಿ ಹುಮ್ಮಸ್ಸು ಕೊಡಲ್ಲ. ಬೆಳಗಿನ ಜಾವದ ಮಂಜು ಅನಾಥವಾಗಿ ಸುರಿಯೋವಾಗ ಅವರ ಜೊತೆಗಾರನಾಗಿ ವಾಕಿಂಗ್ ಮಾಡುವ ಅನುಭವ. ತೂಕಡಿಕೆಗೆ ಅವಕಾಶ ಇಲ್ಲ. ಮಳೆ ಬಂದರೆ ಗೋಣಿ ಹೊದ್ದು ಕೂತುಬಿಡುವುದು. ನಾರಾಯಣ ತಯಾರಿಸಿದ ಶೆಡ್ಡಿನಲ್ಲಿ ಇಬ್ಬರು ಆರಾಮಾಗಿ ಕುಕ್ಕರಗಾಲು ಹಾಕಿ ಕೂರಬಹುದು.

ರಮೇಶ ಬೆಂಗಳೂರಿಗೆ ಬಂದಾಗ ಪುರುಸೋತ್ತಿರಲಿಲ್ಲ. ಜಿಕೆವಿಕೆಗೆ ಹೋಗುವ, ದರಿದ್ರ ಮಧುಸೂದನನ್ನು ಕಾಣುವಾ. ರಾತ್ರಿ ಶಿಫ್ಟ್ ತಾನೇ ಎಂಬ ಸಮಾಧಾನ. ಯಾಕೆ ಈ ಗೆಳೆಯರ ಉಸಾಬರಿ… ಹ್ಯಾಗಿದ್ದಾಳೆ ಪ್ರಿಯತಮೆ… ಚಳಿಯಲ್ಲಿ ಮುದುಡಿರಬಹುದೆ? ಕಂಬಳಿ ಹೊದ್ದು ವಾರ್ತೆ ಕೇಳ್ತಿರಬಹುದೆ? ದೊಡ್ಡಮ್ಮನಿಗಾದ್ರೂ ಒಂದು ಕಾಗದ ಹಾಕಿ ಎಲ್ಲ ಪ್ರವರ ಹೇಳಿ ಬಿಡಬೇಕು. ಈ ಶಿಫ್ಟ್ ಕೆಲಸ… ಈ ಧೂಳು. ಮಧುಗೆ ಒಂದೇ ಸಮಾಧಾನ. ಅವನ ಹಾಸ್ಟೆಲಿನ ದಾರಿಯಲ್ಲೇ ದೊಡ್ಡಬಳ್ಳಾಪುರಕ್ಕೆ ಹೋಗೋದು. ಒಂದು ದಿನ ರಾತ್ರಿ ಹನ್ನೊಂದುವರೆಗೆ ಬಾಗಿಲು ತೆಗೆದ. ಬೆಳಿಗ್ಗೆಯ ಬಿಸಿ ಬಿಸಿ ಸ್ನಾನ. ವಾರಕ್ಕೊಂದು ಸಲವಾದ್ರೂ ಇಲ್ಲಿ ಬತ್ತಲಾಗಿ ಬಿಸಿ ಬಿಸಿ ನೀರು ಹೊಯ್ದುಕೊಂಡು ಹಗೂರಾದ್ರೆ ಎಷ್ಟು ಸಮಾಧಾನ. ಕಾಡ್ರಾಪ್ಯಾಂಟೇನು… ಧೂಳು ಕೊಡವಿ ಇಸ್ತ್ರಿ ಹಾಕಿದರಾಯ್ತು.

ಪರವೇಶ್ವರ ಹೆಗಡೆಗೆ ಆಶ್ವರ್ಯ. ಯಾವಾಗ ಬರ್‍ತೀಯ ಹೋಗ್ತೀಯ? ನಿನ್ನ ರೂಮಿನಲ್ಲಿ ಉಳಿಯಲ್ವಲ್ಲ ಏನ್ಸಮಾಚಾರ? ಸಂಬಳ ಎಷ್ಟು? ಉತ್ತರ ಸರಳ. ಶಿಫ್ಟ್ ಇದ್ದಾಗೆಲ್ಲಾ ಹೋಗೋದು. ಬಸ್‌ಚಾರ್ಜಿಗೆ ದುಡ್ಡಿದ್ದಾಗೆಲ್ಲಾ ವಾಪಾಸು ಬರೋದು. ಇಲ್ಲವಾದ್ರೆ ಫ್ಯಾಕ್ಟರಿ ಎದುರಿನ ಭಟ್ಟರ ಕ್ಯಾಂಟೀನಿನಲ್ಲಿ ಉದ್ರಿ ಚಪಾತಿ ಸಾಗು. ತರಕಾರಿ ಮಣೆ ಪಕ್ಕ ಹಾಯಾದ ನಿದ್ದೆ. ಸಂಬಳ ಏಳುನೂರು. ರೂಮಿನಲ್ಲಿ ಉಳದ್ರೆ ಬಸ್ ಸಿಗಲ್ವಲ್ಲ. ವಿಜಯನಗರಕ್ಕೆ ಹೋಗಿ ಬಂದು ಮಾಡದಕ್ಕೆ ಖರ್ಚು. ಮೂರು ತಿಂಗಳ ನಂತರ ಕೆಲಸ ಖಾಯಂ, ಕವನ, ಕಥೆ, ಸ್ನೇಹ, ಮೋಹ ಎಲ್ಲಾನೂ ಬಿಟಿಎಸ್ ಕೆಳಗೆ ಕೂತರೆ ಎಷ್ಟು ಸುಖ. ಕದಂಬದಲ್ಲಿ ಒಂದು ಡ್ರಾಟ್ ಬೀರು ಹಾಕಿದರೆ ಎಷ್ಟು ಸುಖ. ವಿಜಯಲಕ್ಷ್ಮೀಯಲ್ಲಿ ೪.೮೦ಕ್ಕೆ ಬಾಲ್ಕನಿಗೆ ಹತ್ತಿ ಸಿನೆಮಾ ನೋಡುವುದೆಂದರೆ ಎಷ್ಟು ಸುಖ. ಹಿಂದಿನ ಸಾಲಿನಲ್ಲಿ ಹುಡುಗಿಯನ್ನು ಗೋಳುಹುಯ್ದುಕೊಳ್ಳುವ ಇಬ್ಬರು ಹುಡುಗರು ಮಾಡುವ ಶಬ್ದ ಕೇಳಿದರೆ…ತಥ್ ಬರೀ ದರಿದ್ರ ಮನುಷ್ಯ. ಮಲಬಾಋ ಲಾಡ್ಜಿನಲ್ಲಿ ಬೇರೆಯವರ ಹಣ ಮುಗಿಸುವವ, ಗೆಲಾಕ್ಸಿಗೆ ಹೋಗಲು ಇನ್ನೊಬ್ಬರ ಸ್ಕೂಟರು ಕಾಯುವವ, ಇಂದಿರನಗರದ ಚಿಕ್ಕಮ್ಮನ ಮನೆಗೆ ಹೋದರೆ ಊಟ ಮುಗಿಸಿಯೇ ಬರುವವ.

ಸನ್ನಿಮಿಲ್ಲಿಗೆ ವರ್ಗಾವಣೆಯಾದಾಗ ಯಾಕೋ ಬೇಸರವೂ ಇಲ್ಲ, ಸಂತೋಷವೂ ಇಲ್ಲ. ಇನ್ನೂ ಹತ್ರ. ಈ ಹೆಗಡೆ ರೂಮಿನಿಂದ ಐದು ನಿಮಿಷದ ಕಾಲ್ನಡಿಗೆ. ಕೆಲಸವೂ ಸುಲಭ. ಪಂಪ್ ಹೌಸಿದೆ. ಊಟಕ್ಕೆ ಇಪ್ಪತ್ತು ಪೈಸ ಟೋಕನ್ ಇದೆ. ಹಲ್ಲು ಕತ್ತರಿಸಿಕೊಂಡು  ಹೋಗುವ ಆ ದಢೂತಿ ಕಾರ್ಮಿಕ –  ಹುಲ್ಲಿನ ಕಾಮುಕ? ಹತ್ತಾರು ಟೋಕನುಗಳನ್ನು ಕೈಯಲ್ಲಿ ತುರುಕಿ ಹೋಗ್ತಾನೆ. ಅದನ್ನು ಕ್ಯಾಂಟೀನಿನಲ್ಲಿ ಕೊಡುವಾಗಲೂ ಅವನೇ. ಒಂದು ಟೋಕನ್ ಕೊಟ್ಟರೆ ಊಟದ ಜೊತೆಗೆ ನಾಲ್ಕಾರು ಟೋಕನ್ ಸರಿಸ್ತಾನೆ, ತಳ್ತಾನೆ. ದೊಡ್ಡ ಬುಟ್ಟಿಯಲ್ಲಿ ಊಟ ಬರುತ್ತೆ. ಕಾರ್ಮಿಕರ ಜೊತೆಗೆ ಕೂತುಕೊಂಡರೂ ಕಾರ್ಮಿಕನಾಗದೆ ಇರುವ ದುಃಖ, ಸುಖ.

ಎಷ್ಟು ದಿನ ಹೀಗೆ…. ರಂಗನಾಥ್‌ಗೆ ಹೇಳಿಬಿಡಬೇಕು.. ಮನೆ ಮಾಡಲಿಕ್ಕೆ ಬಂದವ ಹೀಗೆ ಮುಖಕ್ಕೆ ಧೂಳಿನ ಪರದೆ ಹಾಕಿಕೊಂಡು ಗಂಧಕಾಮ್ಲದ ನಲ್ಲಿ ತಿರುಗಿಸುತ್ತಾ ಕೂತಿರೋಕೆ ಸಾಧ್ಯವಿಲ್ಲ. ಸ್ವೆಟರ್ ಹೆಣೆಯೋ ಗೂರ್ಖಾನ ಜತೆಗೆ ಏನೂ ಕೆಲಸವಿಲ್ಲದೆ ಹರಟೋಕೆ ಖಂಡಿತಾ ಆಗಲ್ಲ. ಮಾತಿನ ಅರಮನೆ ಕಟ್ತಾ ಇರೋದೇ ಆಯ್ತಾ? ಬಡ್ಡೀಮಗನೆ, ಎಂಥ ಘಾತಕನಯ್ಯಾ ನೀನು, ಎರಡು ತಿಂಗಳಾಯ್ತು ಸಂಬಳ ಬಂದಿಲ್ಲ. ಮುಂಗಡ ಕೊಟ್ಟಿದ್ದೆಲ್ಲ ಖಾಲಿ. ಶರ್ಮಾ ಗೊಣಗಾಟ ಜಾಸ್ತಿ ಆಗ್ತಿದ್ದಂತೆ, ಹಳೆ ಬಾಕಿ ತೀರಿಸಿಲ್ಲ ಅಂತ.

ತಲೆನೋವು, ಎರಡು ಆಸ್ಪಿರಿನ್, ಸುಖದ ಹದವಾದ ಮಂಪರು. ಬಾಸ್ ಮತ್ತು ಅವನ ಬಾಸ್. ಚೆಕಿಂಗ್ ಡಿಸ್‌ಮಿಸ್ ಮಾಡೋದಂತೂ ಈ ಕುಳ್ಳನಿಗೆ ಆಗೋಲ್ಲ. ಆದ್ರೆ ಸುಮ್ನಿರಕ್ಕಾಗಲ್ಲ.

ಟ್ವೆಲು ಬಿ ತಪ್ಪುತ್ತಲ್ಲಾ ಅಂತ ದುಃಖ ಇರಲ್ಲ. ಎಪ್ಪತ್ತೆಂಟು.

ರಾಜಾಜಿನಗರ, ಎಂಭತ್ತಡಿ ರಸ್ತೆ.

ಬೇಕಾದಷ್ಟು ಬಸ್ಸುಗಳು. ರಶ್ ಕಡಿಮೆ.

ಮಧ್ಯಾಹ್ನ ಒಂದು ಪುಗಸಟ್ಟೆ ಟೀ.

Share.
Leave A Reply Cancel Reply
Exit mobile version