ಎಸ್. ಎಲ್. ಭೈರಪ್ಪ ಅವರು ಮಹಿಳಾ ವಿರೋಧಿ ಎಂಬುದು ಅವರ `ಕವಲು’ ಕೃತಿ ಓದಿದ ಮೇಲೆ ನನಗೆ ತಿಳಿಯಿತು. ಆಂಗ್ಲ ಲೇಖಕ ಹೆರಾಲ್ಡ್ ರೊಬಿನ್ಸ್ ಅವರಂತೆ ಪೊರ್ನೋಗ್ರಫಿ ಬರೆದು ಹಣ ಸಂಪಾದಿಸುವುದು ಭೈರಪ್ಪನವರ ಗುರಿ.
ಎಲ್ಲ ಮಹಿಳೆಯರೂ ಅತ್ಯಂತ ಪರಿಶುದ್ಧರು ಎಂದು ನಾನು ತಿಳಿದುಕೊಂಡಿಲ್ಲ. ಕೆಟ್ಟ ಸ್ವಭಾವದ ಮಹಿಳೆಯರೂ ಇಲ್ಲವೆಂದಲ್ಲ. ಆದರೆ, ಮಹಿಳೆಯರೆಲ್ಲರೂ ವೇಶ್ಯೆಯರಂತೆ ವರ್ತಿಸುತ್ತಾರೆ ಎಂಬಂತೆ ಭೈರಪ್ಪ ಕಾದಂಬರಿ ರಚಿಸಿದ್ದಾರೆ. ಇದು ಅವರ ಅಧಃಪತನವನ್ನು ಸೂಚಿಸುತ್ತದೆ .
‘ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆ’ ಎಂಬಂತೆ ಪುರುಷನ ಪತನ- ದೌರ್ಬಲ್ಯಕ್ಕೆ ಮಹಿಳೆಯೇ ಕಾರಣ ಎನ್ನುವುದನ್ನು ಭೈರಪ್ಪ ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಇಂದಿನ ಎಚ್ಚೆತ್ತ ಮಹಿಳೆ ಪುರುಷನಿಗೆ ಪಾಠ ಕಲಿಸಲು ಸಜ್ಜಾಗಿದ್ದಾಳೆ ಎಂಬುದು ಪಾಪ ಭೈರಪ್ಪನವರ ಅರಿವಿಗೆ ಬಂದೇ ಇಲ್ಲ.
ಅಮೆರಿಕದಲ್ಲಿ ಕೆಲವು ವರ್ಷ ಬದುಕಿದವನಿಗೂ ಅಲ್ಲಿನ ಕೌಟುಂಬಿಕ ಬದುಕು ಮತ್ತು ಅಲ್ಲಿ ಸಮಾಜದ ಕುರಿತ ಸಮನಾದ ತಿಳಿವಳಿಕೆಯೇ ಇರುವುದಿಲ್ಲ. ಅವನ ಸಂಪರ್ಕಕ್ಕೆ ಬಂದ ಇಬ್ಬರು ಮಹಿಳೆಯರೂ ಮಹಾ ವಂಚಕರು. ಈತ ಹಸುವಿನಂಥ ಸಾಧು ಮನುಷ್ಯ.
ಗಂಡಸೆರಲ್ಲರೂ ಒಳ್ಳೆಯವರು, ಮಹಿಳೆಯರು ವಂಚಕರು. ಹಣಕ್ಕಾಗಿ ಏನು ಮಾಡಲೂ ಹೇಸದವರು. ಗಂಡಸನ್ನು ಜೈಲಿಗೆ ದೂಡಲು ಸಿದ್ಧರಾದವರು ಕುತಂತ್ರಿಗಳು ಎಂದು ಭೈರಪ್ಪ ತಮ್ಮ ಕೃತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಆದರೆ, ದಿನನಿತ್ಯವೂ ಮಕ್ಕಳಿಗೆ ವಿಷ ನೀಡಿ ಅಥವಾ ಬಾವಿಗೋ, ನದಿಗೋ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ನೂರಾರು ತಾಯಂದಿರು ಭೈರಪ್ಪರ ಕಣ್ಣಿಗೆ ಬಿದ್ದಿಲ್ಲ. ತನ್ನ ಕಂದಮ್ಮಗಳನ್ನು ಕೈಯಾರೆ ಕೊಲೆ ಮಾಡಬೇಕಾದರೆ ಆಕೆ ಬದುಕಿನಲ್ಲಿ ತನ್ನ ಗಂಡನಿಂದಲೋ ಅಥವಾ ಸಮಾಜದಿಂದಲೋ ಎಂತಹ ನೋವು ಅನುಭವಿಸಿರಬಹುದು ಎಂಬುದನ್ನು ಭೈರಪ್ಪ ಅವರು ಒಂದು ಕ್ಷಣ ಯೋಚಿಸಿದ್ದರೆ ಇಂತಹ ಕೃತಿ ಹೊರ ಬರುತ್ತಿರಲಿಲ್ಲ.
ಕವಲು ಕೃತಿ ಪ್ರಕಟವಾದ ಒಂದೆರೆಡು ತಿಂಗಳೊಳಗೆ ನಾಲ್ಕೈದು ಮುದ್ರಣಗಳು ಕಂಡಿವೆ ಎಂದು ಪ್ರಕಾಶಕರು ಜಾಹಿರಾತು ನೀಡುತ್ತಿದ್ದಾರೆ. ಇದರ ಅರ್ಥವೇನು? ನಮ್ಮ ಓದುಗರ ಅಭಿರುಚಿ ಆ ರೀತಿಯಲ್ಲಿ ಬದಲಾಗಿದೆಯೇ? ಕನ್ನಡಿಗರಿಗೆ ಅಂಥ ಮೂರನೇ ದರ್ಜೆಯ ಕೃತಿ ಇಷ್ಟವೆಂದೇ ಭೈರಪ್ಪ ಅವರಂಥ ಲೇಖಕರೊಬ್ಬರು ಅಂಥ ಮೂರನೇ ದರ್ಜೆಯ ಕೃತಿಯೊಂದನ್ನು ರಚಿಸುತ್ತಾರೆ ಎಂದರೆ ನಂಬುವುದಕ್ಕೆ ಆಗುತ್ತಿಲ್ಲ. ಮಹಿಳೆಯರ ಕುರಿತ ಕೃತಿಗಳನ್ನು ಓದಿದಾಗ ಶಿವರಾಮ ಕಾರಂತರು, ನಿರಂಜನರು, ಪೂರ್ಣಚಂದ್ರ ತೇಜಸ್ವಿ, ಲಂಕೇಶ್‌ರಂಥ ಪುರುಷ ಲೇಖಕರು ನೆನಪಾಗುತ್ತಾರೆ. ಅವರೆಂದೂ ಮಹಿಳೆಯರನ್ನು ಕಾಲಡಿಗೆ ಹಾಕಿ ತುಳಿದಿಲ್ಲ. ಆನಂದ ಅವರ `ನಾನು ಕೊಂದ ಹುಡುಗಿ’ ಎಂಬ ಕೃತಿ ಇಂದಿಗೂ ಒಂದು ಮೈಲುಗಲ್ಲಾಗಿಯೇ ಉಳಿದಿದೆ. ಎಲ್ಲ ಪುರುಷ ಲೇಖಕರೂ ಪೂರ್ವಾಗ್ರಹ ಪೀಡಿತರಲ್ಲ. ಇದನ್ನು ಭೈರಪ್ಪ ಅರಿತು ಕೊಳ್ಳಬೇಕು.
ಮಹಿಳೆಯರು ಸಮಾನತೆ ಮತ್ತು ಸಮಾನ ಆವಕಾಶಗಳಿಗಾಗಿ ಹೋರಾಡುತ್ತಾ ಎಲ್ಲ ಕ್ಷೇತ್ರಗಳಲ್ಲೂ ತಮಗೆ ಸ್ಪರ್ಧೆ ನೀಡುತ್ತಾ ತಮಗೆ ಸಮಾನರಾಗಿ ಎದ್ದು ನಿಂತಾಗ ಪುರುಷರ ಅಸಹನೆ ಮೇರೆ ಮೀರುತ್ತದೆ. ಅಂತಹ ಅಸಹನೆಯ ದ್ಯೋತಕವೇ ಕವಲು ಎಂಬ ಕಾದಂಬರಿ.
ಮಹಿಳಾ ವಿರೋಧಿಯಾಗಿರುವ ಕವಲು ಕಾದಂಬರಿಗಳನ್ನು ಓದುವುದು ಬೇಡ. ಓದಿನ ಸಮೀಪ ತರುವಂಥ ಕೃತಿಗಳು ಹೆಚ್ಚಾಗಿ ರಚನೆಯಾಗಬೇಕು. ಯುವಜನರು ಇಂದಿನ ಪರಿಸ್ಥಿತಿ ಕುರಿತು ಚಿಂತನೆ ನಡೆಸಬೇಕು.