`ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ – ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಕರ್ನಾಟಕ ಸರ್ಕಾರವು ಈಗಲಾದರೂ ಕೈಗೊಳ್ಳಬೇಕಾದ ತುರ್ತು ಕೆಲಸಗಳಿವೆ. ಜಾಗತಿಕ ಮಟ್ಟದಲ್ಲೇ ತಂತ್ರಜ್ಞರ ನೆರವನ್ನು ಪಡೆಯುವ ಅವಕಾಶ ಇರುವ ಈ ಕಾಲಮಾನದಲ್ಲೂ ಕೆಲವೇ ವ್ಯಕ್ತಿಗಳ ಸಲಹೆ ಸೂಚನೆಗಳೇ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಎಂದು ಸರ್ಕಾರವು ನಂಬಿರುವುದು ವಿಷಾದನೀಯ.

ಕರ್ನಾಟಕ ಸರ್ಕಾರವು ಅಂತಿಮ ಆವೃತ್ತಿ ಎಂದು ಇತ್ತೀಚೆಗೆ ಬಿಡುಗಡೆ ಮಾಡಿದ ಆಂಡ್ರಾಯ್ಡ್‌ ಕನ್ನಡ ಕೀಲಿಮಣೆ ಸಹಿತ ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು ರೂಪಿಸಿದ ಎಲ್ಲ ತಂತ್ರಾಂಶಗಳೂ ಕಳಪೆಯಾಗಿವೆ. ಈ ಬಗ್ಗೆ ಈಮೈಲ್‌ಗಳ ಮೂಲಕ ಪ್ರತಿಕ್ರಿಯೆ ಕೇಳುವುದಷ್ಟೇ ಅಲ್ಲ, ರಾಜ್ಯದೆಲ್ಲೆಡೆ ಬಳಕೆದಾರರನ್ನು ಸೇರಿಸಿ ಚರ್ಚಿಸಬೇಕಿತ್ತು. ಆದರೆ ಕಾಟಾಚಾರದ ಪ್ರಕ್ರಿಯೆ ಮೂಲಕ ತಂತ್ರಾಂಶವನ್ನು ದೃಢೀಕರಿಸಿರುವುದು ಖಂಡನೀಯ. ಉದಾಹರಣೆಗೆ ಈ ತಂತ್ರಾಂಶಗಳ ಲೋಪಗಳ ಬಗ್ಗೆ ಮಾಹಿತಿ ಪಡೆಯುವ ಹಕ್ಕು ಪತ್ರದ ಮೂಲಕ ವಿಚಾರಿಸಿದಾಗ ದೊರೆತ ಕಡತದಲ್ಲಿ ನಾನು ಸಲ್ಲಿಸಿದ ಸವಿವರವಾದ ದೂರೇ ಇಲ್ಲ!

ಸರ್ಕಾರವು ಬಿಡುಗಡೆ ಇತರೆ ಮೂರೂ ತಂತ್ರಾಂಶಗಳು ಸಂಪೂರ್ಣವಾಗಿ ದೋಷಪೂರಿತವೂ, ನಿಷ್ಪ್ರಯೋಜಕವೂ, ನಿಗದಿತ ನಿಧಿಗೆ ಅನರ್ಹವೂ, ಕಾಲಬಾಹಿರವೂ ಆಗಿರುತ್ತವೆ. ಈ ಕುರಿತು ನಾನು ಕಳೆದ ವರ್ಷವೇ ಬರೆದ ಪತ್ರ (http://bit.ly/ZhMbkP)ದಲ್ಲಿ ವಿವರಣೆ ನೀಡಿದ್ದೆನಲ್ಲದೆ ಸರ್ಕಾರಕ್ಕೆ ನೆರವು ಕೊಡಲು ಮುಂದೆ ಬಂದ ತಜ್ಞರ, ಸಂಸ್ಥೆಗಳ ಮತ್ತು ತಂತ್ರಾಂಶ ತಯಾರಕರ ಪಟ್ಟಿಯನ್ನೂ ನೀಡಿದ್ದೆ. ಸರ್ಕಾರವು ಈವರೆಗೆ ಈ ಪತ್ರಕ್ಕೆ ಪ್ರತಿಕ್ರಿಯಿಸಿಲ್ಲ.

ಈ ಹಿನ್ನೆಲೆಯಲ್ಲಿ ಮತ್ತು ಕನ್ನಡ ಸಮುದಾಯಕ್ಕಾಗಿ ಆಗಬೇಕಿರುವ ಹಲವು ಕಾರ್ಯಗಳನ್ನು ನಾನು ಸಮೂಹಮಾಹಿತಿ ಮೂಲಕ ಈ ರೀತಿಯಗಿ ಪಟ್ಟಿ ಮಾಡುತ್ತಿದ್ದೇನೆ:

  1. ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಅಳವಡಿಕೆ ಕುರಿತು ದುಂಡುಮೇಜಿನ ಸಭೆ: ಕನ್ನಡ ತಂತ್ರಾಂಶಗಳ ಅಗತ್ಯ, ಈಗಿನ ಸ್ಥಿತಿಯ ಬಗ್ಗೆ ಸರ್ಕಾರವು ಕೂಡಲೇ ಒಂದು ದುಂಡುಮೇಜಿನ ಸಭೆ ಕರೆಯಬೇಕು. ಈ ಸಭೆಗೆ ಆಸಕ್ತಿ ಸಾರ್ವಜನಿಕರಲ್ಲದೆ ಕನ್ನಡಿಗ ಯುವ ತಂತ್ರಜ್ಞರ ಸಮೂಹವನ್ನು, ಕನ್ನಡ ತಂತ್ರಾಂಶ ತಯಾರಕರನ್ನು, ಕನ್ನಡವನ್ನು ತಂತ್ರಜ್ಞಾನದಲ್ಲಿ ಅಳವಡಿಸಲು ಶ್ರಮಿಸಿದ ಹಿರಿಯರನ್ನು ಮತ್ತು ಕನ್ನಡಿಗ ಐಟಿ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಸಭೆಯಲ್ಲಿ ಈವರೆಗೆ ನಡೆದ ತಂತ್ರಾಂಶ ಅಭಿವೃದ್ಧಿ ಕೆಲಸವನ್ನು ಮುಂದಿಟ್ಟು ವಿವರವಾದ ವಿಶ್ಲೇಷಣೆಗೆ ಒಳಪಡಿಸಬೇಕು. ಇದನ್ನು ಒಂದು ಕಾರ್ಯಾಗಾರದ ಮಾದರಿಯಲ್ಲಿ ದಿನವಿಡೀ / ಎರಡು ದಿನ ನಡೆಸಿ ವ್ಯಾಪಕ ಚರ್ಚೆ ನಡೆಸಬೇಕು. ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿದ ಅಗತ್ಯ ತಂತ್ರಾಂಶಗಳ ಪಟ್ಟಿಯ ಪರಿಷ್ಕರಣೆ, ವಿಶ್ಲೇಷಣೆಯೂ ಆಗಬೇಕು. ಈ ಸಭೆಯ ಅಧ್ಯಕ್ಷತೆಯನ್ನು ಕನ್ನಡ ಕಂಪ್ಯೂಟಿಂಗ್‌ನ ಹರಿಕಾರ ಡಾ|| ಕೆ ಪಿ ರಾವ್‌ರವರೇ ವಹಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಬೇಕು.
  2. ತಂತ್ರಾಂಶ ತಯಾರಿಕೆಯ ನೀತಿ ಪ್ರಕಟಣೆ: ಮೇಲೆ ತಿಳಿಸಿದಂತೆ ನಡೆಸುವ ಸಭೆಯಲ್ಲಿ ಆಸಕ್ತರನ್ನು ಒಗ್ಗೂಡಿಸಿ, ಸರ್ಕಾರವು ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ತಂತ್ರಾಂಶ ತಯಾರಿಕಾ ನೀತಿ ಪತ್ರವನ್ನು ರೂಪಿಸಿ ಪ್ರಕಟಿಸಬೇಕು. ಇದರಲ್ಲಿ ಟೆಂಡರ್‌ ಕರೆದು ಕಾಲಬಾಹಿರ ತಂತ್ರಾಂಶ ರೂಪಿಸುವ ಪ್ರಕ್ರಿಯೆಯ ಬದಲಿಗೆ ಯುವ ತಂತ್ರಜ್ಞ ಸಮುದಾಯವನ್ನು ಒಳಗೊಳ್ಳುವ ಸಮೂಹಭಾಗಿತ್ವ (ಕ್ರೌಡ್‌ಸೋರ್ಸಿಂಗ್‌), ಹೊರೆಯಾಗದ ಮತ್ತು ಯಾವುದೇ ತಂತ್ರಜ್ಞರೂ ನಿರಂತರವಾಗಿ ಅಭಿವೃದ್ಧಿಪಡಿಸಬಹುದಾದ ಮುಕ್ತ ತಂತ್ರಾಂಶ (ಓಪನ್‌ಸೋರ್ಸ್), – ಇವೇ ತಳಹದಿಯಾಗಬೇಕು.
  3. ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ರದ್ದತಿ: ಸರ್ಕಾರವು ಈಗ ಬಿಡುಗಡೆ ಮಾಡಿದ ಕಳಪೆ ತಂತ್ರಾಂಶಗಳನ್ನು ನೋಡಿದಾಗ ಈ ಸಮಿತಿಯು ತನ್ನ ಹೊಣೆಗಾರಿಕೆಯಲ್ಲಿ ವಿಫಲವಾಗಿರುವುದು ಸ್ಪಷ್ಟ. ಆದ್ದರಿಂದ ಈಗಿರುವ ಸಮಿತಿಯನ್ನು ರದ್ದುಪಡಿಸಬೇಕು. ದುಂಡುಮೇಜಿನ ಸಭೆಯ ಶಿಫಾರಸುಗಳ ಆಧಾರದಲ್ಲಿ ಸಮಿತಿ ಬೇಕೆ, ಬೇಡವೆ, ಹೇಗಿರಬೇಕು ಎಂಬ ನಿರ್ಣಯಕ್ಕೆ ಬರಬಹುದು.
  4. `ಕಣಜ’ ಕನ್ನಡ ಅಂತರಜಾಲ ಜ್ಞಾನಕೋಶದ ಸಮರ್ಥ ನಿರ್ವಹಣೆ: ಹಿಂದಿನ ಸರ್ಕಾರವು ಆರಂಭಿಸಿದ್ದ ಕಣಜ (www.kanaja.in) ಅಂತರಜಾಲ ಕನ್ನಡ ಜ್ಞಾನಕೋಶದ ಕೆಲಸವು ನಿಂತೇಹೋಗಿದೆ. ಇಂಥ ಮಹತ್ವದ ಜ್ಞಾನಕೋಶವನ್ನು ಉಳಿಸುವ ಮತ್ತು ಬೆಳೆಸುವ ಕುರಿತು ಈ ಕೋಶದ ಹೊಣೆಗಾರಿಕೆ ವಹಿಸಿಕೊಂಡಿರುವ ಇಂಟರ್‌ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫಾರ್ಮೇಶನ್‌ ಟೆಕ್ನಾಲಜಿ ಸಂಸ್ಥೆಗೆ (ಐಐಐಟಿ-ಬಿ) ಯಾವುದೇ ಆಸಕ್ತಿಯಾಗಲೀ, ಕಾಳಜಿಯಾಗಲೀ ಇಲ್ಲ. ಆದ್ದರಿಂದ ಕಣಜ ಜಾಲತಾಣ ಯೋಜನೆಯನ್ನು ಈ ಸಂಸ್ಥೆಯಿಂದ ಕೂಡಲೇ ವಾಪಸು ಪಡೆದು ಸಾರ್ವಜನಿಕ ಪ್ರಾತಿನಿಧಿತ್ವ ಇರುವ ಸರ್ಕಾರಿ ಟ್ರಸ್ಟ್‌ ರಚಿಸಬೇಕು. ಈ ಬಗ್ಗೆಯೂ ದುಂಡುಮೇಜಿನ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಬಹುದು.
  5. ಪಠ್ಯಪುಸ್ತಕಗಳಲ್ಲಿ ಮಾಹಿತಿ ತಂತ್ರಜ್ಞಾನದ ಮಾಹಿತಿ ಪರಿಷ್ಕರಣೆ: ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನದ ಬಗ್ಗೆ ಇರುವ ಪಾಠಬರಹಗಳು ಅತ್ಯಂತ ಕಾಲಬಾಹಿರವಾಗಿವೆ. ಉದಾಹರಣೆಗೆ, ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಕನ್ನಡದಲ್ಲಿ ಇರುವ ಪಾಠಗಳು ಹತ್ತು ವರ್ಷಗಳಿಗಿಂತ ಹಳೆಯ, ಸತ್ತುಹೋದ ತಾಣಗಳನ್ನು ಉಲ್ಲೇಖಿಸುತ್ತವೆ! ಇಂಥ ಆಭಾಸಗಳನ್ನು ಕೂಡಲೇ ನಿಲ್ಲಿಸಬೇಕು. ನಾಡಿನ ಎಲ್ಲ ಪಾಠಗಳನ್ನೂ ಕನ್ನಡಿಗ ಐಟಿ ಲೇಖಕರ ಸಂಪಾದಕೀಯ ಬಳಗಕ್ಕೆ ವಹಿಸಿ ಸೂಕ್ತವಾಗಿ ಪರಿಷ್ಕರಿಸಿ, ಸಾಮಯಿಕಗೊಳಿಸಬೇಕು. ಕ್ಷಣಕ್ಷಣಕ್ಕೂ ಬದಲಾಗುವ ತಂತ್ರಜ್ಞಾನದ ಬಗ್ಗೆ ದಶಕ ಕಳೆದರೂ ಪಾಠ ಬದಲಾಯಿಸದೇ ಇರುವುದು ಅಕ್ಷಮ್ಯ.
  6. `ಸಮಿತಿಯಲ್ಲ ಸಮುದಾಯ’ ಪರಿಕಲ್ಪನೆಗೆ ಗೌರವ: ಒಟ್ಟಿನಲ್ಲಿ ಸರ್ಕಾರವು ಇನ್ನುಮುಂದೆ ಸರ್ಕಾರಿ ಚಿಂತನೆಯಲ್ಲೇ ಸಮಿತಿ ರಚಿಸುವ ಮತ್ತು ಅದನ್ನು ಖಾಯಂಗೊಳಿಸುವ ಪರಿಪಾಠಕ್ಕೆ ಇತಿಶ್ರೀ ಹಾಡಬೇಕು. ಬದಲಿಗೆ ಸಮುದಾಯದ ತಾಜಾ ತಿಳಿವಳಿಕೆಯ ನಿರಂತರ ಪ್ರವಾಹಕ್ಕೆ ಮೈ ಒಡ್ಡಬೇಕು.

ಇನ್ನಾದರೂ ಸರ್ಕಾರವು ಕನ್ನಡ ಮತ್ತು ಮಾಹಿತಿ ತಂತ್ರಾಂಶದ, ಕನ್ನಡ ಮತ್ತು ಅಂತರಜಾಲದ ವಿಷಯಗಳಲ್ಲಿ ಕಡಿಮೆ ಸರ್ಕಾರಿ ನಿಯಂತ್ರಣ, ಹೆಚ್ಚು ಆಡಳಿತ ಎಂಬ ನೀತಿಯನ್ನು ಅನುಸರಿಸಬೇಕಿದೆ. ಅದಲ್ಲದೆ ಸಿದ್ಧ, ಪುರಾತನ ಸೂತ್ರಗಳಲ್ಲಿಯೇ ಮುಂದುವರಿದರೆ ಅಪಾಯ ತಪ್ಪಿದ್ದಲ್ಲ.

ಸರ್ಕಾರವು ಈ ಬೇಡಿಕೆಗಳನ್ನು ಗಮನಿಸುವುದೇ ಆದಲ್ಲಿ, ಇಂಥ ಪ್ರಕ್ರಿಯೆಗೆ ಚಾಲನೆ ನೀಡುವ ದುಂಡುಮೇಜಿನ ಸಭೆಯನ್ನು ಪಕ್ಷಪಾತರಹಿತವಾಗಿ ಸಂಘಟಿಸಲು ಸರ್ಕಾರಕ್ಕೆ ನೆರವಾಗಲು ನಾವು ಹಲವು ಕನ್ನಡ ಆಸಕ್ತರು, ತಂತ್ರಜ್ಞರು ಸಿದ್ಧರಿದ್ದೇವೆ.

(ಇದು ಪ್ರಜಾವಾಣಿಯಲ್ಲಿ ೦೬.೧೦.೨೦೧೪ರಂದು ಪ್ರಕಟವಾದ ಪತ್ರ. ಪ್ರಕಟಿತ ಪತ್ರ ಕೆಳಗಿದೆ)

Share.
Leave A Reply Cancel Reply
Exit mobile version