ಇಂದು (ಫೆಬ್ರುವರಿ ೭, ಶನಿವಾರ) ನಯನ ಸಭಾಂಗಣದಲ್ಲಿ ನಡೆದ ಕನ್ನಡ ಓಸಿಆರ್ ಪ್ರಾತ್ಯಕ್ಷಿಕೆ ಸಭೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಕನ್ನಡ ಐಟಿ ತಜ್ಞರು ಮತ್ತು ಕಾರ್ಯಕರ್ತರು ಭಾಗವಹಿಸಿ ಸಭೆಯನ್ನು ಯಶಗೊಳಿಸಿದ್ದಾರೆ. ಅವರಿಗೆಲ್ಲ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಸಭೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಓಸಿಆರ್‌ನ್ನು ಪ್ರೊ. ಎ ಜಿ ರಾಮಕೃಷ್ಣನ್, ಕಲೈಡೋ ಸಾಫ್ಟ್‌ವೇರ್‌ನ ಓಸಿಆರ್‌ನ್ನು ಶ್ರೀ ಪ್ರಕಾಶ್, ಟಾಕ್ಯಾನ್ ಸಂಸ್ಥೆಯ ತಂತ್ರಾಂಶವನ್ನು ಶ್ರೀ ರಾಮಪ್ರಕಾಶ್ ಮತ್ತು ಶ್ರೀರಂಗ ಸಂಸ್ಥೆಯ ತಂತ್ರಾಂಶವನ್ನು ಡಾ|| ಸಿ ಎಸ್ ಯೋಗಾನಂದರವರು ಪ್ರದರ್ಶಿಸಿದರು. ಇವುಗಳೆಲ್ಲವೂ ಸಾಕಷ್ಟು ಉತ್ತಮವಾಗಿ ಕೆಲಸ ಮಾಡುತ್ತಿರುವುದನ್ನು ಸಭಿಕರು ಗಮನಿಸಿದರು.
ವಿಶೇಷವಾಗಿ ಹೇಳುವುದಾದರೆ (ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ)
- ಟಾಕ್ಯಾನ್‌ನ ತಂತ್ರಾಂಶವು ಚಿತ್ರಪಟವನ್ನು ಓದಲು ಕೊಂಚ ತಡಮಾಡಿದರೂ, ಅದರ ಫಲಿತಾಂಶವು ಅತ್ಯುತ್ತಮವಾಗಿತ್ತು. ಆದರೆ ಇದನ್ನು ಡಿಟಿಪಿ ಮಾಡಿದ ಪುಸ್ತಕಗಳಿಗೆಂದೇ ವಿಶೇಷವಾಗಿ ರೂಪಿಸಿದ್ದು.
- ಶ್ರೀರಂಗದ ತಂತ್ರಾಂಶದಲ್ಲಿ ಭಾಷಾ ಮಾದರಿಗಳನ್ನು (ಪಠ್ಯವನ್ನು ತಿದ್ದಲು ಭಾಷೆಯ ವ್ಯಾಕರಣ, ವಾಕ್ಯರಚನೆ ಇತ್ಯಾದಿಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಳ್ಳುವುದು) ಬಳಸಲು ಯೋಜಿಸಿರುವುದರಿಂದ ಹೆಚ್ಚಿನ ಮಟ್ಟಿಗೆ ಭಾರತೀಯ ಭಾಷೆಗಳಿಗೆ ಅನ್ವಯವಾಗಬಹುದು
- ಭಾರತೀಯ ವಿಜ್ಞಾನ ಸಂಸ್ಥೆಯ ತಂತ್ರಾಂಶದಲ್ಲಿ ಕಾಲಂಗಳನ್ನು ಗುರುತಿಸುವ ಕೆಲಸವನ್ನು ಸ್ವತಃ ಮಾಡಬೇಕಾದ ಸ್ಥಿತಿಯಿದೆ. ಆದರೆ ಈ ತಂತ್ರಾಂಶವು ಕ್ಷಣಮಾತ್ರದಲ್ಲಿ ಓಸಿಆರ್ ಕೆಲಸವನ್ನು ಮಾಡುವುದು ಒಳ್ಳೆಯ ವಿಷಯ.
- ಕಲೈಡೋ ತಂತ್ರಾಂಶವೂ ಸಾಕಷ್ಟು ಒಳ್ಳೆಯ ಅಂಶಗಳನ್ನು ಹೊಂದಿದೆ.
ಈ ಸಭೆಯಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ|| ಚಿದಾನಂದಗೌಡ, ಹಿರಿಯ ಸದಸ್ಯ ಮತ್ತು ಜ್ಞಾನಪೀಠ ಪುರಸ್ಕೃತ ಡಾ|| ಚಂದ್ರಶೇಖರ ಕಂಬಾರ, ಕಥೆಗಾರ ವಸುಧೇಂದ್ರ, ಕನ್ನಡ ಟಿಟಿಎಸ್ ರೂಪಿಸಿದ ಶ್ರೀ ಟಿ ಎಸ್ ಶ್ರೀಧರ, ಇಲಾಖೆಯ ನಿರ್ದೇಶಕ ಶ್ರೀ ದಯಾನಂದ, ಜಂಟಿ ನಿರ್ದೇಶಕ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಮುಕ್ತ ತಂತ್ರಾಂಶ ಚಳವಳಿಯ ಹಲವು ಕಾರ್ಯಕರ್ತರು, ಮೊಬೈಲ್ ಸಾಧನಗಳಿಗೆ ಕನ್ನಡವನ್ನು ಅಳವಡಿಸಿದ ಯುವ ತಂತ್ರಜ್ಞರು, ಹೀಗೆ ಹಲವು ರಂಗಗಳಿಂದ ಬಂದವರು ಭಾಗವಹಿಸಿದ್ದರು.
ನಂತರದ ಸಂವಾದದಲ್ಲಿ ಹಲವು ಸಭಿಕರು ಮಾತನಾಡಿ ಭಾರತೀಯ ವಿಜ್ಞಾನ ಸಂಸ್ಥೆಯ ತಂತ್ರಾಂಶವನ್ನು ಮುಕ್ತ ತಂತ್ರಾಂಶವಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಐಐಎಸ್‌ಸಿಯ ತಂತ್ರಾಂಶಕ್ಕೆ ಕೇಂದ್ರ ಸರ್ಕಾರದಿಂದ ನಿಧಿ ಒದಗಿರುವುದರಿಂದ ಅದನ್ನು ಜನಸಾಮಾನ್ಯರಿಗೆ ಒದಗಿಸಬೇಕು ಎಂದು ಸಭೆಯ ನಿರ್ವಹಣೆಯನ್ನೂ ಮಾಡಿದ ನಾನು (ಬೇಳೂರು ಸುದರ್ಶನ) ಒತ್ತಾಯಿಸಿದೆ. ಕನ್ನಡ ಓಸಿಆರ್ ಸಿದ್ಧವಾಗಿ ಬಿಡುಗಡೆಯಾಗಿರುವ ಬಗ್ಗೆ ಕೇಂದ್ರ ಸರ್ಕಾರದ ಹಲವು ವರದಿಗಳು ಹೇಳಿದ್ದರೂ ಅದನ್ನು ಸಾರ್ವಜನಿಕರಿಗೆ ದೊರಕಿಸಿಲ್ಲ ಎಂದು ದಾಖಲೆಗಳ ಸಹಿತ ವಿವರಿಸಿದೆ. ಆದರೆ ಪ್ರೊ. ರಾಮಕೃಷ್ಣನ್ ಇದನ್ನು ಒಪ್ಪಲಿಲ್ಲ. ಅವರ ಮತ್ತು ಅವರ ತಂಡದ ಶ್ರೀ ಶಿವಕುಮಾರ್ ಖಾಸಗಿ ಸಂಸ್ಥೆಯ ಮೂಲಕ ಅದನ್ನು ಬಿಡುಗಡೆ ಮಾಡುವುದಾಗಿಯೂ, ಅಂಧರು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಉಚಿತವಾಗಿ ಕೊಡುವುದಾಗಿಯೂ ತಿಳಿಸಿದರು. ಇದನ್ನು ಮುಕ್ತವಾಗಿರಿಸಿದರೆ ದೊಡ್ಡ ಸಂಸ್ಥೆಗಳು ದುರುಪಯೋಗಪಡಿಸಿಕೊಳ್ಳಬಹುದು ಎಂದು ರಾಮಕೃಷ್ಣನ್ ಆತಂಕ ವ್ಯಕ್ತಪಡಿಸಿದರು.
ಭಾಗವಹಿಸಿದ ಶ್ರೀ ಎಂ ಎನ್ ಎಸ್ ರಾವ್, ಶ್ರೀ ಓಂಶಿವಪ್ರಕಾಶ್ ಮತ್ತು ಶ್ರೀ ಅನಿವರ್ ರವರು ಟೆಸೆರಾಕ್ಟ್ ಮುಕ್ತ ತಂತ್ರಾಂಶವನ್ನು ಸಮುದಾಯದ ಮೂಲಕ ಸರಿಪಡಿಸಿ ಬಳಸಿಕೊಳ್ಳುವ ಸಾಧ್ಯತೆ ತುಂಬಾ ಸೂಕ್ತ ಎಂದು ಪ್ರತಿಪಾದಿಸಿದರು. ಸಭೆಯಲ್ಲಿ ಮಾತನಾಡಿದ ರ್ಶರೀ ಸುನಿಲ್ ಜಯಪ್ರಕಾಶ್‌ರವರು ಎಪಿಐಗಳನ್ನು ಒದಗಿಸುವಂತೆ ಮತ್ತು ಲಾಂಗ್ವೇಜ್ ಮಾಡೆಲ್ ಕುರಿತು ಸಭೆ ನಡೆಸುವಂತೆ ಸಲಹೆ ನೀಡಿದರು. ಶ್ರೀ ದಿನೇಶ್ ಕೂಡಾ ಸರ್ಕಾರಿ ನಿಧಿಯಲ್ಲಿ ತಯಾರಾದ ತಂತ್ರಾಂಶಗಳು ಮುಕ್ತವಾಗಿ ಬಿಡುಗಡೆ ಆಗಬೇಕು ಎಂದು ಒತ್ತಾಯಿಸಿದರು. ಸೈಬರ್‌ಸ್ಕೇಪ್‌ನ ಶ್ರೀ ಆನಂದ್ ಅವರು ತಂತ್ರಾಂಶಗಳನ್ನು ಕೊಡುವುದಾದರೆ ಖಚಿತವಾಗಿ ತಿಳಿಸಿ ಎಂದು ತಯಾರಕರಿಗೆ ವಿನಂತಿ ಮಾಡಿದರು.
ಒಟ್ಟಿನಲ್ಲಿ ಈ ಸಭೆಯ ಫಲಿತಾಂಶಗಳನ್ನು ನಾನು ಹೀಗೆ ಗುರುತಿಸುತ್ತೇನೆ: (ಇದು ಸಭೆಯ ಸಂಪೂರ್ಣ ವರದಿ ಅಲ್ಲ, ಕೇವಲ ನನ್ನ ಅನಿಸಿಕೆಗಳಾಗಿರುತ್ತವೆ)
- ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯು ಹೀಗೆ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಇನ್ನಷ್ಟು ಉತ್ತಮ ಮತ್ತು ಕಾರ್ಯಸಾಧುವಾದ ಸಲಹೆಗಳು ಮೂಡಿಬರುತ್ತವೆ. ಆದ್ದರಿಂದ ಸಮಿತಿಯಲ್ಲ, ಸಮುದಾಯ ಎಂಬ ಮಾನಸಿಕತೆಗೆ ನಾವು ಸಾಗಬೇಕಿದೆ.
- ಡಾ|| ಚಿದಾನಂದಗೌಡರು ಈ ಹಿಂದಿನ ಓಸಿಆರ್ ಟೆಂಡರ್ ರದ್ದಾಗಿದೆ ಎಂದು ಸಭೆಯಲ್ಲಿ ಪ್ರಕಟಿಸಿದ್ದು ಒಳ್ಳೆಯ ಬೆಳವಣಿಗೆ. ಇದರಿಂದಾಗಿ ಈಗಾಗಲೇ ಕನ್ನಡದಲ್ಲಿ ತಯಾರಾದ ತಂತ್ರಾಂಶವನ್ನೇ ಮತ್ತೆ ತಯಾರಿಸುವ ಕೆಲಸ ನಿಂತಂತಾಗಿದೆ. ಪ್ರಾತ್ಯಕ್ಷಿಕೆಯಲ್ಲೇ ಕಂಡಂತೆ ನಾಲ್ಕು ತಂತ್ರಾಂಶಗಳು ಬಳಕೆಗೆ ಸಿದ್ಧವಾಗಿವೆ.
- ಸಮಾಜದಲ್ಲಿ ಸಮುದಾಯ, ಖಾಸಗಿ ಮತ್ತು ಸರ್ಕಾರಿ ಯತ್ನಗಳು – ಮೂರನ್ನೂ ಪರಿಗಣನೆಗೆ ತೆಗೆದುಕೊಂಡು ಹೋಗಬೇಕು. ಆದಷ್ಟೂ ಸಾರ್ವಜನಿಕ ಹಣವನ್ನು ಸಾರ್ವಜನಿಕರಿಗೆ ತಂತ್ರಾಂಶಗಳ ಮೂಲಕವೇ ಹಿಂದಿರುಗಿಸಬೇಕು.
- ಸೂಕ್ತ ಪ್ರಯತ್ನ ಮಾಡಿದರೆ ಕನ್ನಡಕ್ಕಾಗಿ ತುಡಿಯುವ ತಂತ್ರಜ್ಞ ಮನಸ್ಸುಗಳನ್ನು ಒಂದೆಡೆ ಸೇರಿಸುವುದು, ಸರ್ಕಾರದೊಂದಿಗೂ ಸಂವಹನ ಮಾಡುವುದು ಕಷ್ಟವಾಗಲಾರದು. ಇದನ್ನು ಮುಂದುವರಿಸಿಕೊಂಡು ಹೋಗಬೇಕು.
ಭಾಗವಹಿಸಿದ ಇತರೆ ಸಾರ್ವಜನಿಕರು
- ಡಾ|| ಯು ಬಿ ಪವನಜ (ಸಮಿತಿ ಸದಸ್ಯರು)
- ಶ್ರೀ ನರಸಿಂಹಮೂರ್ತಿ (ಸಮಿತಿ ಸದಸ್ಯರು)
- ಶ್ರೀ ತೇಜೇಶ್
- ಶ್ರೀ ಶ್ರೀಧರ್ (ಜಸ್ಟ್ ಕನ್ನಡ ಕೀಲಿಮಣೆ ತಯಾರಕರು)
- ಶ್ರೀ ಹರಿಪ್ರಸಾದ್ ನಾಡಿಗ್ (ಸಂಪದ)
- ಶ್ರೀ ಸುನಿಲ್ ಜಯಪ್ರಕಾಶ್
- ಶ್ರೀ ವಿಕಾಸ ಹೆಗಡೆ
- ಶ್ರೀಮತಿ ಮಧುಪ್ರಿಯ
- ಶ್ರೀಮತಿ ಅನು
- ಶ್ರೀ ಓಂಶಿವಕ್ರಕಾಶ್ (ವಚನ ಸಂಚಯ, ದಾಸ ಸಂಚಯ)
- ಶ್ರೀಮತಿ ನೇತ್ರಾ ಕುಲಕರ್ಣಿ
- ಶ್ರೀಮತಿ ಶುಭಂ ಶರ್ಮ
- ಶ್ರೀ ಶ್ರೀರಾಮ್
- ಶ್ರೀ ಆನಂದ್ ಎಸ್ ಐ
- ಶ್ರೀ ಕೃಷ್ಣಮೂರ್ತಿ ಬಿ ಎಸ್
- ಶ್ರೀ ಪ್ರಕಾಶ್
- ಶ್ರೀ ಹರೀಶ್
- ಶ್ರೀ ಟಿ ಜಿ ಶ್ರೀನಿಧಿ (ಇಜ್ಞಾನ)
- ಶ್ರೀಮತಿ ಸುಷ್ಮಾ ಮೂಡುಬಿದಿರೆ
- ಶ್ರೀ ಶಿವರಾಮನ್
- ಶ್ರೀ ರಾಧಾಕೃಷ್ಣ
- ಶ್ರೀ ಎದುಕಂದಾಲು
- ಶ್ರೀ ತನ್ವೀರ್
- ಶ್ರೀ ಶ್ರೀನಾಥ
- ಶ್ರೀ ರುದ್ರಮೂರ್ತಿ
- ಶ್ರೀ ಶಶಿಶೇಖರ್
- ಶ್ರೀ ವಿಕ್ರಂ
- ಶ್ರೀ ದಿನೇಶ್
- ಶ್ರೀ ರಾಮನಾಥ ಮಯ್ಯ