ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ (ಸ್ಥಾಪನೆ: ಕ್ರಿಶ ೧೯೧೫) ಪ್ರಕಟಿಸಲು ಉದ್ದೇಶಿಸಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೇ ಸಂಪುಟವೇ ಮೊಟ್ಟಮೊದಲನೆಯದಾಗಿ ಬಿಡುಗಡೆಯಾಗಿದೆ. ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ `ವಿಜ್ಞಾನ ತಂತ್ರಜ್ಞಾನ’ ಸಂಪುಟವು ಅತ್ಯಂತ ಹೊಣೆಗಾರಿಕೆಯಿಂದ ಪ್ರಕಟಿಸಿದ ಸಂಪಾದಿತ ಕೃತಿಯಾಗಿದೆ. ವಿಜ್ಞಾನ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ನಡೆದ ಸಾಹಿತ್ಯಕ ಪ್ರಯತ್ನಗಳ ಸಮಗ್ರ ಚಿತ್ರಣವನ್ನು ಅಚ್ಚುಕಟ್ಟಾಗಿ ಮತ್ತು ಕೊನೇಕ್ಷಣದ ಬೆಳವಣಿಗೆಗಳನ್ನೂ ಸೇರಿಸಿ ಪ್ರಕಟಿಸಿರುವುದು ಅಭಿನಂದನೀಯ. ಸ್ವತಃ ವಿಜ್ಞಾನ ಲೇಖಕರಾಗಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ, ವಿವಿಧ ಸಂಪಾದಿತ ಕೃತಿಗಳಲ್ಲಿ ಹೊಣೆಗಾರಿಕೆ ಹೊತ್ತುಕೊಂಡು ಸಂಪೂರ್ಣಗೊಳಿಸಿರುವ ಹಿರಿಯರಾದ ಟಿ ಆರ್ ಅನಂತರಾಮು ಈ ಸಂಪುಟದಲ್ಲೂ ತಮ್ಮ ವೃತ್ತಿಪರತೆ ತೋರಿದ್ದಾರೆ. ಕನ್ನಡದ ವಿಜ್ಞಾನ ಲೇಖಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಸಂಪುಟವನ್ನು ಮುದ್ರಿಸಿಕೊಟ್ಟ ಅವರು ಕೃತಿಯ ಮೂಲಕವೇ ವೈಜ್ಞಾನಿಕ ಮನೋಭಾವ ಪ್ರದರ್ಶಿಸಿದ್ದಾರೆ!

ವಿಜ್ಞಾನ ತಂತ್ರಜ್ಞಾನ  ಸಂಪುಟ ೪ / ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಕನ್ನಡ ಸಾಹಿತ್ಯ ಪರಿಷತ್ತು ಸಂಪಾದಕರು: ಟಿ.ಆರ್. ಅನಂತರಾಮು ಪ್ರಧಾನ ಸಂಪಾದಕರು: ಪುಂಡಲೀಕ ಹಾಲಂಬಿ ಪುಟಗಳು ೭೧೪ ಬೆಲೆ ರೂ. ೬೦೦.೦೦

ಕರ್ನಾಟಕದ ವಿಜ್ಞಾನ ಬರವಣಿಗೆಯೂ ಸರಿಸುಮಾರು ಕಸಾಪದಷ್ಟೇ ಹಳತು. ೧೯ನೇ ಶತಮಾನದಲ್ಲಿ ಚಿಗುರೊಡೆದು ೨೦ನೇ ಶತಮಾನದ ಆರಂಭದಲ್ಲಿ ಯೌವ್ವನಾವಸ್ಥೆಗೆ ಬಂದ ವಿಜ್ಞಾನ ಸಾಹಿತ್ಯವು ಈಗ ಪ್ರೌಢತೆಯ ಹೆಜ್ಜೆಗಳನ್ನು ಇಡುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ವಿಜ್ಞಾನ ತಂತ್ರಜ್ಞಾನ ಸಂಸ್ಥೆಗಳನ್ನು ಹೊಂದಿರುವ ಕನ್ನಡ ನಾಡಿನಲ್ಲಿ ವಿಜ್ಞಾನ ಸಾಹಿತ್ಯ ವಿಪುಲವಾಗಿದೆ; ಹಲವು ರಂಗಗಳನ್ನು ವ್ಯಾಪಿಸಿದೆ; ವೈಜ್ಞಾನಿಕ ಪರಿಭಾಷೆಯನ್ನು ರೂಪಿಸಿದೆ; ನಿಘಂಟು, ವಿಶ್ವಕೋಶಗಳು ಪ್ರಕಟವಾಗಿವೆ; ವಿಜ್ಞಾನ ಆಧಾರಿತ ಹೋರಾಟಗಳು ನಡೆದಿವೆ.

ಇಂಥ ವೈವಿಧ್ಯಮಯ ಹಿನ್ನೆಲೆಯನ್ನು ಶಿಸ್ತಿನಿಂದ ದಾಖಲಿಸುವುದು ಸವಾಲಿನ ಕೆಲಸ. ಆದರೆ ಟಿ ಆರ್ ಅನಂತರಾಮು ವಿಜ್ಞಾನ ಲೇಖಕರ ಪಡೆಯನ್ನೇ ಕಟ್ಟಿಕೊಂಡು ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ವಿಜ್ಞಾನ ಸಾಹಿತ್ಯ, ತಾಂತ್ರಿಕ ಸಾಹಿತ್ಯ, ಮಾಹಿತಿ ತಂತ್ರಜ್ಞಾನ – ಹೀಗೆ ಮೂರು ಕವಲುಗಳಲ್ಲಿ ವಿಷಯವಸ್ತುಗಳನ್ನು ಹರವಿಕೊಂಡ ಅವರು ವಿಜ್ಞಾನ ಸಾಹಿತ್ಯ ವಿಭಾಗದಲ್ಲಿ ಕನ್ನಡ ವಿಜ್ಞಾನ ಸಾಹಿತ್ಯದ ಎಲ್ಲ ಆಯಾಮಗಳನ್ನು ಒಂದೊಂದಾಗಿ ಪರಿಚಯಿಸಿದ್ದಾರೆ. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ – ಆರಂಭದ ಹೆಜ್ಜೆಗಳು – ಈ ಅಧ್ಯಾಯದಲ್ಲಿ ಆಡ್ಯನಡ್ಕ ಕೃಷ್ಣಭಟ್ ತಮ್ಮ ಅಪಾರ ಅನುಭವದ ಹಿನ್ನೆಲೆಯಲ್ಲಿ ವಿಜ್ಞಾನ ಸಾಹಿತ್ಯದ ಇತಿಹಾಸವನ್ನು ಆಮೂಲಾಗ್ರವಾಗಿ ತಿಳಿಸಿಕೊಟ್ಟಿದ್ದಾರೆ. ಅನಂತರದ ಅಧ್ಯಾಯ ‘ಜ್ಞಾನಗಂಗೋತ್ರಿಯಿಂದ ನ್ಯಾನೋ ಸಂಗತಿಯವರೆಗೆ’ಯಲ್ಲಿ ಬಿ ಎಸ್ ಸೋಮಶೇಖರ್ ವಸ್ತುನಿಷ್ಠ ವಿಮರ್ಶೆಯ ಒರೆಗಲ್ಲಿನಲ್ಲೇ ಕನ್ನಡ ವಿಜ್ಞಾನ ಸಾಹಿತ್ಯದ ಲೇಖಕರನ್ನು, ಕೃತಿಗಳನ್ನು, ಸಂಸ್ಥೆಗಳನ್ನು ಪರಿಚಯಿಸಿರುವುದು ಇಡೀ ಸಂಪುಟದ ಉನ್ನತ ಶ್ರೇಣಿಯ ಭಾಗ ಎನ್ನಬಹುದು. ಸ್ವತಃ ವಿಜ್ಞಾನಿಯಾದ ಬಿ ಎಸ್ ಸೋಮಶೇಖರ್ ವಿಜ್ಞಾನ ಸಾಹಿತ್ಯ ರಚನೆಯ ವೈಫಲ್ಯಗಳನ್ನೂ ಉಲ್ಲೇಖಿಸಿದ್ದಾರೆ. ಸೌಮ್ಯ ಟೀಕೆಯ ಮೂಲಕವೇ ಸಂಪುಟಕ್ಕೆ ಮೊನಚು ತಂದಿದ್ದಾರೆ. ವಿಜ್ಞಾನದ ಅಂಕಣಗಳು, ಅನುವಾದ ಸಾಹಿತ್ಯ, ಪರಿಸರ ವಿಜ್ಞಾನ, ಕೃಷಿ ವಿಜ್ಞಾನ, ವಿಜ್ಞಾನ ಪತ್ರಿಕೆಗಳು, ವಿಜ್ಞಾನಿಗಳ ಜೀವನಚರಿತ್ರೆ, (ಭಾರತ – ಭಾರತಿ ಪುಸ್ತಕ ಸಂಪದವೂ ಸೇರಿದೆ) ವೈದ್ಯವಿಜ್ಞಾನ, ನಿಘಂಟು, ವಿಶ್ವಕೋಶಗಳು, ಜನಾಂದೋಲನ, ಕಲಾಮಾಧ್ಯಮದಲ್ಲಿ ವಿಜ್ಞಾನ, ವಿಜ್ಞಾನ ಪ್ರಸಾರ – ಹೀಗೆ ವಿಜ್ಞಾನ ಸಾಹಿತ್ಯರಂಗದ ಎಲ್ಲ ಅಂಶಗಳನ್ನು ವಿವಿಧ ಲೇಖಕರು ಬರೆದಿದ್ದಾರೆ.

ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಕೆಲವು ಪುಟಗಳು ಮಾಹಿತಿಗಿಂತ ಹೆಚ್ಚಾಗಿ ಮಾರ್ಗದರ್ಶಿ ಕೈಪಿಡಿಯಂತೆ ಕಾಣಿಸಿದ್ದು ಒಂದು ಬಗೆಯ ಹಾದಿ ಬದಲಿಸಿದ ಶೈಲಿಯಾಗಿ ಕಾಣುತ್ತದೆ. ಕನ್ನಡವನ್ನು ವಿವಿಧ ಅಪ್ಲಿಕೇಶನ್ ತಂತ್ರಾಂಶಗಳನ್ನು ಬಳಸುವ ಕುರಿತ ಅಧ್ಯಾಯವು ಕೊಂಚ ಪುನರಾವರ್ತಿತ ಅಂಶಗಳನ್ನು ಒಳಗೊಂಡಂತೆ ಭಾಸವಾದರೂ, ಉಪಯುಕ್ತ ಅಂಶಗಳನ್ನು ಒಳಗೊಂಡಿದೆ. ವಿದ್ಯುನ್ಮಾನ ಮಾಧ್ಯಮದಲ್ಲಿ, ಅದರಲ್ಲೂ ಮುಖ್ಯವಾಗಿ ಟಿವಿ ಚಾನೆಲ್‌ಗಳಲ್ಲಿ ಕನ್ನಡ ವಿಜ್ಞಾನ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಮಾಹಿತಿ ಸಿಕ್ಕಿದಂತೆ/ಇದ್ದಂತೆ ಕಾಣುವುದಿಲ್ಲ. ಟೆಕ್ನಾಲಜಿ ಮೀಡಿಯಾ ಗ್ರೂಪ್ ಸಂಸ್ಥೆಯು ಉದಯ ಟಿವಿಯಲ್ಲಿ ನಡೆಸಿಕೊಟ್ಟ `ಈ ಕ್ಷಣ’ ಎಂಬ ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮ ಹೀಗೆ ಉಲ್ಲೇಖಿಸಬಹುದಾಗಿದ್ದ ಒಂದು ಉತ್ತಮ ಯತ್ನವಾಗಿತ್ತು. ಹಾಗೆಯೇ ೧೯ನೇ ಶತಮಾನದಲ್ಲಿ ಬಂದ ಕನ್ನಡ ಪಂಚಾಂಗಗಳು ವಿಜ್ಞಾನ ಇತಿಹಾಸದಲ್ಲಿ (ಅವುಗಳಲ್ಲಿ ಇದ್ದ ಗ್ರಹಣ ಕಾಲ ಕುರಿತ ವೈಜ್ಞಾನಿಕ ಲೆಕ್ಕಗಳಿಂದಾಗಿ) ಉಲ್ಲೇಖವಾಗಬಹುದಿತ್ತು. ಇವು ಕೇವಲ ಉದಾಹರಣೆಗಳಷ್ಟೆ; ಇಂಥ ಹಲವು ಮಾಹಿತಿಗಳು ಇಲ್ಲದಿರುವುದು ಖಂಡಿತ ಸಂಪುಟದ ಲೋಪವೇನೂ ಅಲ್ಲ! ಏಕೆಂದರೆ ಅದೇ ವೇಳೆ ಎಷ್ಟೋ ಲೇಖಕರ ಚಿಕ್ಕಪುಟ್ಟ ಕೃತಿಗಳನ್ನೂ ಈ ಸಂಪುಟವು ಶ್ರದ್ಧೆಯಿಂದ ನೆನಪಿಸಿಕೊಂಡಿರುವುದನ್ನೂ ಮರೆಯಲಾಗದು. ವಿವಿಧ ಅಧ್ಯಾಯಗಳ ನಡುವೆ ಅವಕ್ಕೆ ಸಂಬಂಧಿಸಿದ ಛಾಯಾಚಿತ್ರಗಳೂ ಇವೆ; ಇದರಿಂದಾಗಿ ಸಂಪುಟದ ಅಂದ ಹೆಚ್ಚಿದೆ. ಈ ಸಂಪುಟದಲ್ಲಿ ವಿಜ್ಞಾನ ಪಠ್ಯಪುಸ್ತಕಗಳ ಉಲ್ಲೇಖವನ್ನು ಉದ್ದೇಶಪೂರ್ವಕವಾಗಿಯೇ ಮಾಡಿಲ್ಲ ಎಂದು ಸಂಪಾದಕರು ತಿಳಿಸಿದ್ದಾರೆ.

ಇನ್ನು ಕುಲಾಂತರಿ ತಳಿಗಳ ಬಗ್ಗೆ ಆರೇಳು ಪುಟಗಳ ಲೇಖನ, ಕಂಪ್ಯೂಟರ್ ಪುಸ್ತಕವೊಂದರ ಬಗ್ಗೆ ಎರಡು ಪುಟಗಳ ಬರೆಹ ಮತ್ತು ಪಿಎಚ್‌ಡಿ ಪ್ರಬಂಧದ ಬಗ್ಗೆ ಒಂದು ಪುಟ – ಇವು ಇಡೀ ಸಂಪುಟದಲ್ಲಿ ಕಂಡುಬಂದ ಅನ್ಯ ಸಂಗತಿಗಳು. ಒಂದೆರಡು ವಾಕ್ಯಗಳಲ್ಲಿ ಉಲ್ಲೇಖಿಸುವ ಸಂಗತಿಗಳು ಹೀಗೆ ನುಸುಳಿದ್ದು ಅಚ್ಚರಿ ತಂದ ವಿಷಯ.

ಕೃಷಿ ಪತ್ರಿಕೋದ್ಯಮದಲ್ಲಿ ನಾಡಿನಲ್ಲೇ ಹೊಸ ಚಳವಳಿಯಾಗಿರುವ `ಅಡಿಕೆ ಪತ್ರಿಕೆ’ಯ ಕುರಿತು ಕೇವಲ ಪತ್ರಿಕೆಯಾಗಿ ನೋಡದೆ ಇಲ್ಲಿನ ಕೃಷಿ ವಿಜ್ಞಾನ ಲೇಖನಗಳು ಮತ್ತು ವಸ್ತುನಿಷ್ಠ ಕೃಷಿ ವಿಜ್ಞಾನ ಪತ್ರಿಕೋದ್ಯಮದ ಬಗ್ಗೆ ಹೆಚ್ಚು ಬೆಳಕು ಚೆಲ್ಲಬಹುದಿತ್ತು. ಈ ಪತ್ರಿಕೆಯು ಕರ್ನಾಟಕದಲ್ಲಿ ಬದುಕಲು ಬೇಕಾದ ವಿಜ್ಞಾನ ಸಾಹಿತ್ಯವನ್ನು ಅತ್ಯಂತ ವೃತ್ತಿಪರವಾಗಿ ಮತ್ತು ಕನ್ನಡಿಗರಿಂದಲೇ ರೂಪಿಸುತ್ತಿರುವುದನ್ನು ಮರೆಯಲಾಗದು.

ಕನ್ನಡದ ಬ್ಲಾಗುಗಳು, ವಿಕಿಪೀಡಿಯ, ಕಣಜ ಜ್ಞಾನಕೋಶ, ಸಾಮಾಜಿಕ ಜಾಲತಾಣಗಳು, ಅಂತರಜಾಲ ಪತ್ರಿಕೆಗಳು – ಈ ಅಧ್ಯಾಯಗಳೂ ವಸ್ತುನಿಷ್ಠವಾಗಿ ಮೂಡಿಬಂದಿವೆ. ಇಡೀ ಪುಸ್ತಕದಲ್ಲಿ ಎದ್ದು ಕಾಣುವುದು ಸೌಮ್ಯ ಮತ್ತು ವಿಧಾಯಕ ಟೀಕೆ; ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ ಚಳವಳಿಯನ್ನು ಬೆಳೆಸಬೇಕೆಂಬ ಅಪ್ಪಟ ಕಾಳಜಿ. ಸಾಮಾಜಿಕ ಜಾಲತಾಣಗಳು ಕನ್ನಡಿಗರನ್ನು ಒಗ್ಗೂಡಿಸುತ್ತಿವೆಯೋ, ಒಡೆಯುತ್ತಿವೆಯೋ ಎಂಬ ಪ್ರಶ್ನೆಯನ್ನು ಕೇಳಿರುವುದು ಈ ನಿಟ್ಟಿನಲ್ಲಿ ಉಲ್ಲೇಖಿಸಬಹುದಾದ ಒಂದು ವಾಕ್ಯ. ಸಂಪುಟದುದ್ದಕ್ಕೂ ಇಂಥ ಸಹೃದಯ ಕಾಳಜಿ ವ್ಯಕ್ತವಾಗಿದೆ.

ವಿಜ್ಞಾನ ತಂತ್ರಜ್ಞಾನ ಸಂಪುಟವೇ ಮೊದಲನೆಯದಾಗಿ ಪ್ರಕಟವಾಗಿ ಇನ್ನುಳಿದ ಸಂಪುಟಗಳ ಸಂಪಾದಕರಿಗೆ ಮಾದರಿಯಾಗಿದೆ ಎನ್ನಲಡ್ಡಿಯಿಲ್ಲ. ಹೀಗೆಯೇ ಉಳಿದೆಲ್ಲ ಸಂಪುಟಗಳೂ ಶೀಘ್ರವಾಗಿ ಹೊರಬಂದರೆ ಖಂಡಿತವಾಗಿಯೂ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯು ವಿಶಿಷ್ಟ ಕೊಡುಗೆಯಾಗಲಿದೆ. ಹಲವು ವಿಶ್ವವಿದ್ಯಾಲಯಗಳು ಇಂಥ ವಿಷಯದ ಪುನರಾವರ್ತಿತ ಸಂಪುಟಗಳನ್ನು ತರುವುದರ ಬದಲು ಈ ಸಂಪುಟಗಳಿಗೆ ಬೆಂಬಲ ಸೂಚಿಸಬೇಕು. ಇಂಥದ್ದೇ ಯೋಜನೆಗಳನ್ನು ಅವು ಹಮ್ಮಿಕೊಂಡಿದ್ದರೆ ಕೂಡಲೇ ನಿಲ್ಲಿಸಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ತಮ್ಮ ನಿಧಿಯ, ಮಾನವ ಸಂಪನ್ಮೂಲದ ಬೆಂಬಲ ನೀಡಬೇಕು. ಮುಖ್ಯವಾಗಿ ಈ ಸಂಪುಟಗಳು ಆದಷ್ಟು ಬೇಗ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ, ಕನ್ನಡನಾಡಿನ ವಿದ್ಯಾರ್ಥಿಗಳಿಗೆ ತಲುಪಬೇಕು. ಕಣಜ, ವಿಕಿಪೀಡಿಯದಲ್ಲಿ, ಕಸಾಪದ ಜಾಲತಾಣದಲ್ಲಿ ಇವುಗಳನ್ನು ಪಠ್ಯರೂಪದಲ್ಲಿ, ಈ-ಪುಸ್ತಕದ ರೂಪದಲ್ಲಿ ಮುಕ್ತಬಳಕೆಗಾಗಿ ಪ್ರಕಟಿಸಬೇಕು. ಆಗ ಇದನ್ನು ಹುಡುಕಿ ಬಳಸುವ, ವಿವಿಧ ಉಲ್ಲೇಖಗಳಲ್ಲಿ ಸೇರಿಸುವ ಅವಕಾಶ ಸಿಗುತ್ತದೆ. ಗ್ರಂಥಾಲಯ, ಶಾಲಾ ಕಾಲೇಜುಗಳಿಗಾಗಿ ೧೭ ಸಂಪುಟಗಳನ್ನು ಖರೀದಿಸಲು ಮತ್ತೆ ಸರ್ಕಾರವೇ ಖರ್ಚು ಮಾಡುವ ಪ್ರಸಂಗ ಬರಬಾರದು. ೨೧ನೇ ಶತಮಾನದ ಒಂದೂವರೆ ದಶಕ ಕಳೆದ ಮೇಲಾದರೂ ನಾವು ಮುಕ್ತ ಮಾಹಿತಿಯ ಮೂಲಕ ಕನ್ನಡದ ಕೆಲಸ ಮುಂದುವರೆಸಲು ಮುಂದಾಗಬೇಕು.

ಸದಾ ನಿಧಿ ಕೊರತೆಗಾಗಿ, ಅಧ್ಯಕ್ಷಗಿರಿ ಚುನಾವಣೆಗಾಗಿ ಮತ್ತು ಅವ್ಯವಸ್ಥಿತ ಸಮ್ಮೇಳನಗಳಿಗಾಗಿ ಸುದ್ದಿಯಾಗುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು ಈ ಯೋಜನೆಯ ಮೂಲಕ ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಂಡಿದೆ.

Share.
Leave A Reply Cancel Reply
Exit mobile version