ಕರ್ನಾಟಕದ ವಿದ್ಯುತ್ ಸಮಸ್ಯೆಯ ಬಗ್ಗೆ ಭಾರೀ ಚರ್ಚೆ, ವಾದ ವಿವಾದ ನಡೆದಿದೆ. ಈಗ ರಾಜ್ಯವು ಹೆಚ್ಚುವರಿ ವಿದ್ಯುತ್ತನ್ನು ಖರೀದಿಸಿದೆ. ಇಂಥ ಅಗತ್ಯ ಇತ್ತೆ? ಹೋದ ಸಲ ಕಲ್ಲಿದ್ದಲು ಖರೀದಿಸಿದ ಬಗ್ಗೆ ಸದನದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ಬೇಕಿತ್ತೆ? ಹೋಗಲಿ, ನಮಗೆ ಕಲ್ಲಿದ್ದಲಿನಿಂದಲೇ ವಿದ್ಯುತ್ ಬೇಕೆ? ನಿಜಕ್ಕೂ ನಮ್ಮ ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆಯೆ? ನಿಜವಾದ ಪರಿಹಾರ ಏನು?
ಈ ಎಲ್ಲ ಸಂಗತಿಗಳ ಬಗ್ಗೆ ‘ಬೆಳಕು ಚೆಲ್ಲುವ’ ಪುಸ್ತಕವೊಂದನ್ನು ಮಿತ್ರಮಾಧ್ಯಮವು ಪ್ರಕಟಿಸಿದೆ. ವಿದ್ಯುತ್ ವಿಶ್ಲೇಷಕ ಶ್ರೀ ಶಂಕರ್ ಶರ್ಮರವರ ಲೇಖನ, ಮಾಹಿತಿಗಳನ್ನು ಬಹುವಾಗಿ ಆಧರಿಸಿದ ಈ ಪುಸ್ತಕವನ್ನು ತಾವೆಲ್ಲರೂ ಡೌನ್‌ಲೋಡ್ ಮಾಡಿಕೊಂಡು ಓದಿ ಅಭಿಪ್ರಾಯ ರೂಪಿಸಿಕೊಳ್ಳಲು ನನ್ನ ವಿನಂತಿ. ಈ ಪುಸ್ತಕದ ಮುನ್ನುಡಿಯಲ್ಲಿ ಬರೆದ ಮಾತುಗಳು ಹೀಗಿವೆ:
ಕರುಣಾಳು ಬಾ ಬೆಳಕೆ…
ಪ್ರಿಯರೆ
ನಾಡಿನ ಹಿರಿಯ ವಿದ್ಯುತ್ ವಿಶ್ಲೇಷಕ ಶ್ರೀ ಶಂಕರ್ ಶರ್ಮರವರ ಲೇಖನಗಳನ್ನು ಆಧರಿಸಿದ ಈ ಪುಸ್ತಕದಲ್ಲಿ ಕರ್ನಾಟಕದ ವಿದ್ಯುತ್ ಸಮಸ್ಯೆಯನ್ನು ನಿರ್ದಿಷ್ಟವಾಗಿ ಚರ್ಚಿಸಲಾಗಿದೆ. ಹಾಗೆಯೇ ವಿದ್ಯುತ್ ಉತ್ಪಾದನೆಯ ವಿವಿಧ ಮೂಲಗಳನ್ನು ತುಲನೆ ಮಾಡಲಾಗಿದೆ.
ಕರ್ನಾಟಕದಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಭಾರೀ ಸಂಖ್ಯೆಯಲ್ಲಿ ಸ್ಥಾಪನೆ ಮಾಡುವ ಆತಂಕಕಾರಿ ಪ್ರಸ್ತಾಪಗಳು ಸರ್ಕಾರದ ಮುಂದಿರುವ ಈ ಹೊತ್ತಿನಲ್ಲಿ ರಾಜ್ಯಕ್ಕೆ ಇರುವ ವಿದ್ಯುತ್ ಆಕರದ ಪರ್ಯಾಯಗಳನ್ನು ಇಲ್ಲಿ ವಿವರಿಸಲಾಗಿದೆ. ರಾಜ್ಯ ಸರ್ಕಾರದ ಇಂದಿನ ವಿದ್ಯುತ್ ಯೋಜನೆಗಳೆಲ್ಲವೂ ರಾಷ್ಟ್ರೀಯ ಸ್ವಯಂಸೇವಕ ಸಂಘವು ೨೦೦೯ರಲ್ಲಿ ಪರಿಸರ ಕುರಿತಂತೆ ಕೈಗೊಂಡ ನಿರ್ಣಯದ ಆಶಯಗಳನ್ನು ಉಲ್ಲಂಘಿಸಿರುವುದು ಸರ್ವವಿದಿತ. ಈ ಕುರಿತ ಪುಟ್ಟ ವಿಶ್ಲೇಷಣೆಯೂ ಇದರಲ್ಲಿದೆ.
ತುಸು ದೀರ್ಘವಾಗಿರುವ ಈ ಪುಸ್ತಕವನ್ನು ನೀವು ಸಹನೆಯಿಂದ ಪೂರ್ತಿಯಾಗಿ ಓದಲೇಬೇಕು ಎಂಬುದು ನನ್ನ ವಿನಂತಿ. ಬೇಸಗೆಯ ಕೊರತೆ ನೀಗಲು ಬೇರೆಡೆಯಿಂದ ಸಾವಿರ ಮೆಗಾವಾಟ್ ಖರೀದಿ ಮಾಡಿದ ಮಾತ್ರಕ್ಕೆ ರಾಜ್ಯದ ವಿದ್ಯುತ್ ಸಮಸ್ಯೆ ಬಗೆ ಹರಿಯುವುದಿಲ್ಲ; ಬದಲಿಗೆ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತ ಹೋಗುತ್ತದೆ. ಹಣ ವ್ಯರ್ಥವಾಗುತ್ತದೆ. ಸುಸ್ಥಿರ ಪರಿಹಾರವೊಂದೇ ಸಮಸ್ಯೆಗೆ ಇರುವ ಏಕೈಕ ಪರಿಹಾರ. ರಕ್ಕಸ ಪ್ರಮಾಣದಲ್ಲಿ ವಿದ್ಯುತ್ ಬೇಡುವ ಹಲವು ಭಾರೀ ಉದ್ಯಮಗಳ ಪ್ರಸ್ತಾಪವೂ ಬಂದಿರುವುದರಿಂದ ಭವಿಷ್ಯದ ಸವಾಲು ಗಂಭೀರವಾಗಿದೆ.
ರಾಷ್ಟ್ರೀಯ ದೃಷ್ಟಿಕೋನ, ಸಮಷ್ಟಿ ಪ್ರಜ್ಞೆ ಮತ್ತು ಏಕಾತ್ಮ ಮಾನವತಾವಾದದ ಸಿದ್ಧಾಂತಗಳ ಬೇರು ಹೊಂದಿದೆ ಎನ್ನಲಾದ ರಾಜ್ಯಸರ್ಕಾರವು ಈಗ ಮನಸ್ಸು ಮಾಡಿ ಸುಖೀ ಸಮಾಜಕ್ಕಾಗಿ ಮೌಲಿಕ ಮತ್ತು ಕ್ರಾಂತಿಕಾರಕ ನಿರ್ಣಯಗಳನ್ನು ತೆಗೆದುಕೊಳ್ಳುವ ಸಮಯ ಒದಗಿದೆ. ಸಿದ್ಧ ಮಾದರಿಗಳಲ್ಲಿ, ಹಿಂದಿನ ಸರ್ಕಾರಗಳು, ಅಧಿಕಾರಶಾಹಿ ಹಾಕಿಟ್ಟಿರುವ ಮಾರ್ಗದಲ್ಲೇ ಸರ್ಕಾರ ಮುನ್ನಡೆದರೆ ಮುಗ್ಗರಿಸುವುದು ತಪ್ಪಿದ್ದಲ್ಲ. ಸಿದ್ಧಾಂತಗಳ ಮಾತಿರಲಿ, ನಮ್ಮ ಪರಿಸರ, ಕಾಡು, ನೆಲ-ಜಲವನ್ನು ಉಧ್ವಸ್ತಗೊಳಿಸುವ ಬದಲಿಗೆ ಖಚಿತ, ಸುಲಭ ಮತ್ತು ಹಾನಿಕಾರಕವಲ್ಲದ ಪರಿಹಾರಗಳನ್ನು ಕೈಗೊಂಡರೆ ಎಲ್ಲರಿಗೂ ನೆಮ್ಮದಿ ತಾನೆ?
ಈ ಪುಸ್ತಕದ ಹೊರತಾಗಿ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸುವ ಇತರೆ ಪ್ರಯತ್ನಗಳನ್ನೂ ಕೈಗೊಳ್ಳುವ ಯೋಚನೆ ನಡೆದಿದೆ. ಆದರೆ ಇದಕ್ಕೆಲ್ಲ ನಿಮ್ಮಂಥ ಪ್ರಾಜ್ಞರ ಬೆಂಬಲ ಖಂಡಿತ ಬೇಕು.
ಶ್ರೀ ಶಂಕರ್ ಶರ್ಮರವರಿಗೆ ನನ್ನ ಹೃತ್ಪೂರ್ವಕ ವಂದನೆಗಳು.
ಬನ್ನಿ, ಮನಸ್ಸಿನ ಕತ್ತಲನ್ನು, ರಾಜಕೀಯ ದೃಢತೆಯ ಕತ್ತಲನ್ನು, ಅಧಿಕಾರಶಾಹಿಯ ರೂಢಿಗತ ಜಾಡಿನ ಕತ್ತಲನ್ನು ಹೊಡೆದೋಡಿಸೋಣ. ಆಗಲೇ ಸುಸ್ಥಿರ ಬದುಕಿನ ಬೆಳಕಿನ ಕಿರಣ ನಮ್ಮೆದೆಯನ್ನು ಸ್ಪರ್ಶಿಸುತ್ತದೆ.
ನೀವು ಈ ಪುಸ್ತಕವನ್ನು ಓದುತ್ತೀರಿ; ರಾಜ್ಯದ, ದೇಶದ ವಿದ್ಯುತ್ ಸಮಸ್ಯೆಯ ಬಗ್ಗೆ ಒಂದು ಖಚಿತ ನಿಲುವಿಗೆ ಬರುತ್ತೀರಿ ಎಂದು ಆಶಿಸಿದ್ದೇನೆ.
DOWNLOAD LINK: http://beluru.files.wordpress.com/2010/03/mitramaadhyama-kattale-daari-hattira1.pdf